ಹೆಜ್ಜೆ ಗೆಜ್ಜೆ :
ಈ ಬ್ಲಾಗ್ ನಲ್ಲಿರುವ ವಿಷಯ ಮತ್ತು ಚಿತ್ರಗಳ ಬಳಕೆಗೆ ಅನುಮತಿ ಕಡ್ಡಾಯ.
ಮತ್ತೊಂದು ಕ್ಷಣ ನನ್ನ ಬಗ್ಗೆ ಬದುಕು-ಬರಹ

Wednesday 30 June 2010

ಹಿಂಜರಿತ: ಈ ಗಾಳಿಗೋಪುರ ಕುಸಿದಿದ್ದು ಏಕೆ? ಹೇಗೆ?

 ಕುಸಿಯುತ್ತಿರುವ ಐಷಾರಾಮಿ ವಸ್ತುಗಳು ಮತ್ತು ತೈಲ ಬೆಲೆ, ಜರ್ರನೆ ಇಳಿಯುತ್ತಿರುವ ಹಣದುಬ್ಬರ, ಅಗತ್ಯವಸ್ತುಗಳ ಬೆಲೆಗಳ ಹಿಂದೆಯೇ ಕೇಳಿಸುತ್ತಿರುವ ಹೂಡಿಕೆಗೆ ಇದು ಸಕಾಲ ಎಂಬ ಬೊಬ್ಬೆ, ಉತ್ಪಾದನೆ, ಬೇಡಿಕೆಗಳ ಕುಸಿತ ಎಂಬ ಹತ್ತಾರು ಗೊಂದಲಮಯ ಸನ್ನಿವೇಸದಲ್ಲಿ ಕೊಳ್ಳುವವರ ಆಡೊಂಬಲವಾಗಿರುವ ಜಾಗತಿಕ ಮಾರುಕಟ್ಟೆ ಈಗ ಜನಸಾಮಾನ್ಯರಲ್ಲಿ ಇದು ಹೇಗೆ, ಏಕೆ ಎಂಬ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.   ಹಣಕಾಸು ಹಿಂಜರಿತ ಎಂದರೇನು ಎನ್ನುತ್ತಿದ್ದ  ಜನಸಾಮಾನ್ಯರೂ ಕೂಡ ಷೇರುಪೇಟೆಯ ಮಹಾಕುಸಿತದ ಚಂಡಮಾರುತದಲ್ಲಿ ಥಂಡಾ ಹೊಡೆದಿದ್ದಾರೆ. ಕೇವಲ ಶೇಕಡ ಮೂರ್ನಾಲ್ಕರಷ್ಟು ಜನ ಹಣ ತೊಡಗಿಸುವ ಷೇರುಪೇಟೆ, ಸುಮಾರು ಶೇಕಡ ೨೫ರಿಂದ ೩೦ರಷ್ಟು ಜನ ಬ್ಯಾಂಕುಗಳಲ್ಲಿ ಹೊಂದಿರುವ ಉಳಿತಾಯ ಖಾತೆ ಬಗ್ಗೆ ನಾವೇಕೆ ತಲೆ ಕೆಡಿಸಿಕೊಳ್ಳಬೇಕು? ಇದ್ಯಾವುದರ ರಗಳೆ ಇಲ್ಲದೆ ದೇಶದ ಶೇ. ೭೫ರಷ್ಟು ಜನ ಬದುಕುತ್ತಿಲ್ಲವೆ? ಎಂಬ ತರ್ಕಕ್ಕೆ ಈಗ ಯಾವ ಅರ್ಥವೂ ಉಳಿದಿಲ್ಲ. ಜಾಗತೀಕರಣವೆಂಬ ಜಾಲ ನಮ್ಮೆಲ್ಲರನ್ನೂ ಬೆಸೆದಿರುವ ಪರಿಣಾಮವಿದು. ಆದ್ದರಿಂದಲೇ ಅಮೆರಿಕದಂತಹ ಆರ್ಥಿಕ ದೈತ್ಯ ದೇಶದ ಷೇರು ಮಾರುಕಟ್ಟೆ ಕುಸಿತದಿಂದ ಪ್ರಪಂಚದ ಹಣಕಾಸು ವ್ಯವಸ್ಥೆ ಮುಗ್ಗರಿಸಿದೆ. ಯಾರಿಗೋ ಶೀತವಾದರೆ ಇನ್ನಾರಿಗೋ ನೆಗಡಿ, ಮತ್ಯಾರಿಗೋ ಜ್ವರವೆಂದರೆ ಇದೇ ಇರಬೇಕು. ಇದು ಆರ್ಥಿಕ ಹಿಂಜರಿತದ ಜಾಗತೀಕರಣ.

ಏಕೆ ಹೀಗಾಯ್ತು?: ಮೊನ್ನೆ, ನಿನ್ನೆಯವರೆಗೂ ಆಕಾಶದೆತ್ತರಕ್ಕೇರಿದ್ದ  ತೈಲ ಬೆಲೆ ಈಗ ಹತ್ತಿರ ಹತ್ತಿರ ಅದರ ಕಾಲು ಭಾಗದಷ್ಟಕ್ಕೆ ಕುಸಿದಿರುವುದೇಕೆ? ಬಳ್ಳಾರಿಯಲ್ಲಿ ಚೆಲ್ಲಾಡುತ್ತಿದ್ದ ಸಾವಿರ, ಐದು ನೂರು ರೂಪಾಯಿಗಳ ಚಲಾವಣೆ  ಇದ್ದಕ್ಕಿದ್ದಂತೆ ಅಡಗಿದ್ದೇಕೆ? ಹಣದುಬ್ಬರದ ಅಬ್ಬರ ಇಳಿಯುತ್ತಿರುವುದೇಕೆ? ಎಂಬ ಯಕ್ಷ ಪ್ರಶ್ನೆಗಳಿಗೆ ಜನಸಾಮಾನ್ಯರಿಗಂತೂ ಸುಲಭಕ್ಕೆ ಉತ್ತರ ಹೊಳೆಯುವುದಿಲ್ಲ.  ಷೇರು ಮಾರುಕಟ್ಟೆ ಮತ್ತು ಬ್ಯಾಂಕಿಂಗ್ ವ್ಯವಹಾರಗಳು ಅಂದಾಜು ಮತ್ತು ನಂಬಿಕೆಗಳಿಂದ ನಡೆಯುವಂಥವು. ಆದ್ದರಿಂದಲೇ ಷೇರು ಮಾರುಕಟ್ಟೆ ಮೇಲೆ ಏರುತ್ತಿದ್ದರೆ ಏರುತ್ತಲೇ ಇರುತ್ತದೆ. ಬೀಳಲು ಆರಂಭಿಸಿದರೆ ತಡೆಯಲು ಸಾಧ್ಯವೇ ಇಲ್ಲ. ಆದ್ದರಿಂದಲೇ ಅದನ್ನು ಅಂದಾಜಿನ ಗಾಳಿಗೋಪುರ ಅಥವಾ ನೀರ ಮೇಲಿನ ಗುಳ್ಳೆ ಎನ್ನಲಾಗುತ್ತದೆ. ಬ್ಯಾಂಕಿಂಗ್ ಅಂತೂ ಇನ್ನೂ ಜಟಿಲ ವ್ಯವಸ್ಥೆ. ನಂಬಿಕೆಗಳು ಸಡಿಲಗೊಳ್ಳುತ್ತಿರುವ ಈ ಕಾಲದಲ್ಲಿ ಬದ್ಧತೆ ಮತ್ತು ನಂಬಿಕೆ ಅತ್ಯಗತ್ಯವಾಗಿ ಬ್ಯಾಂಕಿಂಗ್ ಕ್ಷೇತ್ರಗಳ ಸುಗಮ ವ್ಯವಹಾರಕ್ಕೆ ಬೇಕು. ಯಾವುದೇ ಗ್ರಾಹಕನಿಗೆ ಬ್ಯಾಂಕ್ ವ್ಯವಸ್ಥೆ ಬಗ್ಗೆ ನಂಬಿಕೆ ಬರದಿದ್ದರೆ ತನ್ನ ಹಣವನ್ನು ಬ್ಯಾಂಕಿನಲ್ಲಿ ಏಕೆ ಬಿಡುತ್ತಾನೆ?

ತನ್ನಲ್ಲಿ ತೊಡಗಿಸಿರುವ ಅಷ್ಟೂ ಹಣವನ್ನು  ಎಲ್ಲ ಜನ ಏಕಕಾಲದಲ್ಲಿ ವಾಪಸ್ ಕೇಳಲಾರರು ಎಂಬ ನಂಬಿಕೆಯಿಂದ ಮಾತ್ರ ಬ್ಯಾಂಕ್ ನಿತ್ಯದ ಕೆಲಸ ಆರಂಭಿಸುತ್ತದೆ. ಬ್ಯಾಂಕ್ ತನ್ನ ವ್ಯವಹಾರಗಳಿಂದ ಸಂಗ್ರಹಿಸುವ ಎಲ್ಲ ರೀತಿಯ ಠೇವಣಿಯನ್ನು ತನ್ನಲ್ಲೇ ಇಟ್ಟುಕೊಳ್ಳುವುದಿಲ್ಲ. ಅದನ್ನು ಮರುಹೂಡಿಕೆ, ಗೃಹ ಸಾಲ ಮತ್ತು ಇತರ ಸಾಲಗಳ ರೂಪದಲ್ಲಿ ನಿಯೋಜಿಸಿರುತ್ತದೆ. ತನ್ನ ನಿತ್ಯದ ಸರಾಸರಿ ವ್ಯವಹಾರಕ್ಕೆ ಆಗುವಷ್ಟು ಹಣವನ್ನು ಮಾತ್ರ ಆ ಕ್ಷಣಕ್ಕೆ ಬ್ಯಾಂಕ್ ಹೊಂದಿರುತ್ತದೆ. ಷೇರು ಪೇಟೆ ಕೂಡಾ ಇದೇ ರೀತಿ ಕೆಲಸ ಮಾಡುತ್ತದೆ. ಆರ್ಥಿಕ ಹಿಂಜರಿತ ಅಥವಾ ಷೇರು ಮಾರುಕಟ್ಟೆಯ ಏರಿಳಿತಗಳು, ಬ್ಯಾಂಕಿನ ಬಗೆಗೆ ಹಬ್ಬುವ ಸುಳ್ಳು/ನಿಜದ ಸುದ್ದಿಗಳಿಂದಲೇ ಅಷ್ಟೂ ಗ್ರಾಹಕರು ಒಂದೇ ಬಾರಿಗೆ ಹಣ ವಾಪಸ್ ಪಡೆಯಲು ಧಾವಿಸುತ್ತಾರೆ, ತನ್ನ ನಿತ್ಯದ ಸರಾಸರಿ ವ್ಯವಹಾರಕ್ಕೆ ಆಗುವಷ್ಟು ಹಣ ಮುಗಿದ ಮೇಲೆ ಬ್ಯಾಂಕಿನ ಖಜಾನೆ ಖಾಲಿ. ಉಳಿದ ಗ್ರಾಹಕರಿಗೆ ಕೊಡಲು ಹಣ ಹೊಂದಿಸಬೇಕೆಂದರೆ ತಾನು ತೊಡಗಿಸಿರುವ ಹಣವನ್ನು ಹಿಂಪಡೆಯಲೇಬೇಕು. ಅದಕ್ಕಾಗಿ ದೀರ್ಘಕಾಲೀನವಾಗಿ ತೊಡಗಿಸಿರುವ ಗೃಹ, ವಾಹನ ಮುಂತಾದ ಸಾಲ ಒಂದೇ ಬಾರಿಗೆ ಸಿಗುವುದು ಸಾಧ್ಯವಿಲ್ಲ. ಇಂಥದ್ದರಿಂದಲೇ ಹುಟ್ಟಿಕೊಳ್ಳುವ ಅಂತೆ ಕಂತೆಗಳ ಸುದ್ದಿಗಳಿಗೆ ರೆಕ್ಕೆಪುಕ್ಕಗಳು ಸೇರಿಕೊಂಡು ಉಳಿದ ಇನ್ನಷ್ಟು ಗ್ರಾಹಕರು ಹಣ ಹಿಂಪಡೆಯಲು ಧಾವಿಸಿದರೆ ಯಾವ ಎಟಿಎಂನಲ್ಲಿ ಕಾರ್ಡ್ ಹಾಕಿದರೂ ಹಣ ಇಲ್ಲವಾಗುತ್ತದೆ. ಇಂಥ ಸ್ಥಿತಿಯಲ್ಲೇ ಬ್ಯಾಂಕ್ ತನ್ನನ್ನು ದಿವಾಳಿ ಎಂದು ಘೋಷಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕುತ್ತದೆ. ಷೇರುಪೇಟೆ ಕುಸಿತ ಕೂಡಾ ಹೀಗೆಯೇ. ಒಮ್ಮೆಲೆ ಎಲ್ಲರೂ ಷೇರು ಮಾರಾಟಕ್ಕಿಳಿದರೆ ಕೊಳ್ಳುವವರು ಯಾರು? ಬೇಡಿಕೆ ಇಲ್ಲದ ಷೇರುಗಳ ಬೆಲೆ ದಿಡೀರ್ ಇಳಿಯುತ್ತದೆ. ಒಟ್ಟಾರೆ ಷೇರುಪೇಟೆ ಕುಸಿಯುತ್ತದೆ.

ಇಂಥ ಸಂದರ್ಭಗಳಲ್ಲಿ ಸರಕಾರ ಬ್ಯಾಂಕ್ ನೆರವಿಗೆ ಧಾವಿಸಲೇಬೇಕು. ಅಂದರೆ ಪಾರುಗಾಣಿಕೆ (ಬೇಲ್ಔಟ್) ನೀಡಿದರೆ ಅದರಿಂದ ಬ್ಯಾಂಕ್ ಸ್ವಲ್ಪ ಕಾಲ ಚೇತರಿಸಿಕೊಳ್ಳುವ ಶಕ್ತಿ ಪಡೆಯಬಹುದು. ಇದು ತುರ್ತು ನಿಗಾ ಘಟಕದಲ್ಲಿರುವ ರೋಗಿಗೆ ನೀಡುವ ಆಮ್ಲಜನಕದಂತೆ. ರೋಗಿ ಚೇತರಿಸಿಕೊಂಡರೆ ಪರವಾಗಿಲ್ಲ, ಇಲ್ಲದಿದ್ದರೆ ಪರಿಣಾಮ ಭೀಕರ. ಆದ್ದರಿಂದಲೇ ಕ್ರೆಡಿಟ್ ಕಾರ್ಡ್ನ ಅಂತಾರಾಷ್ಟ್ರೀಯ ಪ್ರಮುಖ ಬ್ಯಾಂಕ್ ಆದ ಸಿಟಿ ಬ್ಯಾಂಕ್ ದೀವಾಳಿಯಾಗಿದೆ. ಈ ಬ್ಯಾಂಕಿಗೆ ಸುಮಾರು ೪ ಸಾವಿರದ ಮೂರು ಕೋಟಿ ಡಾಲರ್ ಪಾರುಗಾಣಿಕೆ (ಬೇಲ್ಔಟ್)ಯನ್ನ ಅಮೆರಿಕ ಸರಕಾರ ನೀಡಿದೆ.

ಅಮೆರಿಕದಲ್ಲಿ ಆದದ್ದೇನು?:  ಹೆಸರಾಂತ ಆರ್ಥಿಕ ತಜ್ಞ, ನೊಬೆಲ್ ವಿಜೇತ ಪಾಲ್ ಕ್ರುಗ್ಮನ್ ಪ್ರಕಾರ, ಬುಷ್ ಸರಕಾರ ತನ್ನ ಎಂಟು ವರ್ಷಗಳ ಆಡಳಿತಾವಯಲ್ಲಿ ಖರ್ಚು ಮಾಡಲು ಪ್ರೋತ್ಸಾಹಿಸಿದ್ದೇ ಈ ಅವಘಡಗಳಿಗೆಲ್ಲಾ ಮೂಲ. ಬುಷ್ ಆಡಳಿತಾವಯಲ್ಲಿ ಜನ ಉಳಿತಾಯ ಎಂಬ ಪದವನ್ನೇ ಮರೆಯುವಂತೆ ನೀತಿಗಳನ್ನು ರೂಪಿಸಿದ ಸರಕಾರದ ದೂರದೃಷ್ಟಿಯ ಕೊರತೆಯಿಂದ ಇಡೀ ಜಗತ್ತಿನ ಆರ್ಥಿಕತೆ ಕುಸಿದಿದೆ.  ಬ್ಯಾಂಕ್ ವಹಿವಾಟಿಗೆ ಸಂಬಂಸಿದಂತೆ, ಜಾಗತಿಕ ಆರ್ಥಿಕ ಕುಸಿತಕ್ಕೆ ಮುಖ್ಯ ಕಾರಣಗಳು ಹೀಗಿವೆ. ಬೇಕಾಬಿಟ್ಟಿ  ಹಂಚಿದ ಗೃಹಸಾಲ (ಹೌಸಿಂಗ್ ಲೋನ್), ಪ್ರಧಾನ ಸಾಲ (ಪ್ರೈಮ್ ಲೋನ್), ಅಪ್ರಧಾನ ಸಾಲ (ಸಬ್ ಪ್ರೈಮ್ ಲೋನ್), ಬೇಟೆಗಾರ ಸಾಲ (ಪ್ರಿಡೇಟರಿ ಲೆಂಡಿಂಗ್) 

ಗೃಹಸಾಲ ಮತ್ತು ಪ್ರಧಾನ ಸಾಲ: ಬ್ಯಾಂಕ್ಗಳು ಮುಖ್ಯ ಕಂಪನಿಗಳ ಆಯಕಟ್ಟಿನ ಸ್ಥಾನದಲ್ಲಿ ಕೆಲಸ ಮಾಡುವ ನೌಕರರನ್ನು ಹಿಡಿದು, ಅವರು ಕಾಲಕಾಲಕ್ಕೆ ಹಣ ಮತ್ತು ಬಡ್ಡಿಯ ಕಂತನ್ನು ಸರಿಯಾಗಿ ಕಟ್ಟುತ್ತಾರೆಂದು ಖಾತರಿಯಾದ ನಂತರ ಕೊಡುವ ಸಾಲ ಇದು. ಬ್ಯಾಂಕ್ ಪ್ರಕಾರ ಇದು ರಿಸ್ಕ್ ಕಡಿಮೆ ಇರುವ ಸಾಲ. ಈ ಸಾಲದ ಮುಖ್ಯ ಲಕ್ಷಣ ಎಂದರೆ ಅದು ಕಡಿಮೆ ಬಡ್ಡಿ ದರ ಹೊಂದಿರುತ್ತದೆ. ಉದಾಹರಣೆಗೆ ಅಪಾರ್ಟ್ಮೆಂಟ್, ಕಾರುಗಳಿಗಾಗಿ ಕೊಡುವ ಸಾಲಗಳು. ಇಲ್ಲಿ  ವಾರ್ಷಿಕ ಶೇ. ಏಳೆಂಟು ರೂ. ಬಡ್ಡಿದರದಲ್ಲಿ ಸಾಲ ಸಿಗುತ್ತದೆ. ಈ ರೂಪದ ಸಾಲಕ್ಕೆ ಬ್ಯಾಂಕ್ಗಳು ತಮ್ಮ ಸಂಗ್ರಹದ ಹೆಚ್ಚು ಹಣವನ್ನು ವಿನಿಯೋಗಿಸುತ್ತದೆ. ಇದು ಆ ಬ್ಯಾಂಕ್ಗಳ ನೀತಿಯೂ ಹೌದು. ಆದ್ದರಿಂದಲೇ ಬ್ಯಾಂಕ್ಗಳು ಇಂಥ ಗಿರಾಕಿಗಳನ್ನು ಹುಡುಕಿಕೊಂಡು ಹೋಗಿ ಸಾಲ ಕೊಡುತ್ತವೆ.

ಅಪ್ರಧಾನ ಸಾಲ: ಇದು ಆರ್ಥಿಕವಾಗಿ ಮಧ್ಯಮ ಮತ್ತು ಕೆಳವರ್ಗದವರಿಗೆ ನೀಡುವ ಸಾಲ. ಇಲ್ಲಿ ಈ ಸಾಲಗಾರರು ಕಾಲಕಾಲಕ್ಕೆ ಹಣ ಕಟ್ಟಲಾರರು ಅಥವಾ ಕಟ್ಟುವ ಸಾಮರ್ಥ್ಯವಿಲ್ಲ ಎಂಬ ಸತ್ಯ ಬ್ಯಾಂಕ್ಗಳಿಗೆ ಗೊತ್ತಿರುತ್ತದೆ. ಆದರೂ ಸಾಲ ಕೊಡುತ್ತವೆ. ಗೃಹಸಾಲ ಮತ್ತು ಪ್ರಧಾನ ಸಾಲ ನೀಡಿ ಹೆಚ್ಚಾಗಿರುವ ಹಣವನ್ನು ಬ್ಯಾಂಕ್ಗಳು ಈ ರೀತಿಯ ಸಾಲದ ರೂಪದಲ್ಲಿ ನೀಡುತ್ತವೆ. ಇಲ್ಲಿ ಬಡ್ಡಿದರ ಹೆಚ್ಚು. ವಾರ್ಷಿಕ ಸುಮಾರು ಶೇ. ೧೫ರಿಂದ ೨೫ರವರೆಗೂ ಬಡ್ಡಿ ವಿಸುತ್ತವೆ. (ಒಮ್ಮೊಮ್ಮೆ ಎಲ್ಲ ರೀತಿಯ ಸಾಲಗಳ ಮೇಲಿನ ಬಡ್ಡಿ ದರಗಳು ಆಯಾ ದೇಶಗಳ ಸರಕಾರ ಮತ್ತು ರಿಸರ್ವ್ ಬ್ಯಾಂಕ್ಗಳ ಸಾಲ ನೀತಿಗೊಳಪಟ್ಟಿರುತ್ತವೆ.) ಆದರೆ ಇವೆಲ್ಲ ಬಹುತೇಕ ಖಾಸಗಿ ಬ್ಯಾಂಕುಗಳಾಗಿರುವುದರಿಂದ ಅವುಗಳ ಮೇಲೆ ಸರಕಾರ ಮತ್ತು ರಿಸರ್ವ್ ಬ್ಯಾಂಕ್ಗೆ ಈ ವಿಷಯದಲ್ಲಿ ಅಷ್ಟು  ಹಿಡಿತವಿರುವುದಿಲ್ಲ. ಕಂತು ಕಟ್ಟುವುದು ತಡವಾದರೆ ವಿಳಂಬ ಶುಲ್ಕ, ಅದೂ ಇದೂ, ಸೇವಾ ಶುಲ್ಕ ಅಂತ ನಾಲ್ಕಾರು ಹೆಸರುಗಳಲ್ಲಿ ಕೀಳುವ ಹಣ ವಾರ್ಷಿಕ ಶೇ. ೩೦ ರಿಂದ ೩೫ರಷ್ಟು ಬಡ್ಡಿ ದರದಷ್ಟಾದರೂ ಆಶ್ಚರ್ಯವಿಲ್ಲ. ಗ್ರಾಹಕರು ಈಗಾಗಲೇ ಬ್ಯಾಂಕ್ಗಳ ಷರತ್ತಿಗೆ ಒಪ್ಪಿ ಸಹಿ ಹಾಕಿರುವ ನಿಯಮಗಳ ಅಡಿಯಲ್ಲಿಯೇ ಇದೆಲ್ಲ ವ್ಯವಹಾರಗಳನ್ನು ಬ್ಯಾಂಕ್ಗಳು ನಾಜೂಕಾಗಿ ಮಾಡುತ್ತವೆ.

ಬೇಟೆಗಾರ ಸಾಲ (ಪ್ರಿಡೇಟರಿ ಲೆಂಡಿಂಗ್):  ಕ್ರೆಡಿಟ್ ಕಾರ್ಡ್ಗಳ ಮೂಲಕ ವಿತರಣೆಯಾಗುವ ತಾತ್ಕಾಲಿಕ ಸಾಲ ಮತ್ತು ಬ್ಯಾಂಕ್ಗಳು ಬೆನ್ನಟ್ಟಿ  ಹೋಗಿ ನೀಡುವ ವೈಯಕ್ತಿಕ ಸಾಲಗಳು ಈ ಗುಂಪಿಗೆ ಸೇರುತ್ತವೆ. ಇಲ್ಲಿ ರಿಸ್ಕ್ ಅತ್ಯಂತ ಹೆಚ್ಚು. ಬ್ಯಾಂಕ್ಗಳ ಪಾಲಿಗೆ ಈ ಸಾಲಗಳು ಕಾಮಧೇನು ಹೇಗೋ ಹಾಗೆ ಮಗ್ಗುಲ ಮುಳ್ಳುಗಳೂ ಹೌದು. ಇಲ್ಲಿ ಗ್ರಾಹಕರು ಪೂರ್ವನಿರ್ಧರಿತ ಕಟ್ಟು ಕಟ್ಟಳೆಗಳ ಉಲ್ಲಂಘನೆ ಆಧರಿಸಿ ವಾರ್ಷಿಕ ಶೇ. ೪೦ರಿಂದ ೫೦ರಷ್ಟು ಬಡ್ಡಿದರಕ್ಕೆ ಸಮನಾಗುವ ಹಣವನ್ನು ಸುಲಿದುಕೊಳ್ಳಲಾಗುತ್ತದೆ. ಅದಕ್ಕೇ ಇದನ್ನು  ಬೇಟೆಗಾರ ಸಾಲ (ಪ್ರಿಡೇಟರಿ ಲೆಂಡಿಂಗ್) ಎಂದು ಕರೆಯುತ್ತಾರೆ. ಹುಲಿಯೊಂದು ಜಿಂಕೆಯನ್ನು ಹಿಡಿಯುವ ಚಿತ್ರ ಕಲ್ಪಿಸಿಕೊಳ್ಳಿ. ಈಗಂತೂ ಜಾಗತಿಕ ಮಟ್ಟದಲ್ಲಿ ಖಾಸಗೀಕರಣ ಮತ್ತು ಉದಾರೀಕರಣಗಳು ಬೃಹತ್ ಮಟ್ಟದ ಅಂತರ್ ಸಂಬಂಧವಿರುವ ಸರಪಳಿಯನ್ನು ಅನೇಕ ವಿಷಯಗಳಲ್ಲಿ ಬಂಸಿರುವಂತೆ ಆರ್ಥಿಕ ವಿಷಯದಲ್ಲಿ ಬಿಗಿ ಬಂಧವಿದೆ. ಎಲ್ಲೋ ಒಂದು ಕಡೆ ಒಂದು ಬೆಸುಗೆ ತುಂಡಾದರೆ ಇಡೀ ವ್ಯವಸ್ಥೆಯೇ ಮುಗ್ಗರಿಸುತ್ತದೆ.

ಮೇಲೆ ಹೇಳಿದ ಯಾವುದೇ ಒಂದು ಕಾರಣದಿಂದಲೋ ಇಲ್ಲವೇ ಸರಕಾರದ/ರಿಸರ್ವ್ ಬ್ಯಾಂಕ್ಗಳ  ನೀತಿಯಿಂದಲೋ ಅಥವಾ ವ್ಯಾಪಾರ ಜಗತ್ತಿನ ಬೇಡಿಕೆ ಮತ್ತು ಪೂರೈಕೆಗಳ ವ್ಯತ್ಯಾಸಗಳಿಂದ ಆರ್ಥಿಕ ವ್ಯವಸ್ಥೆಗೆ ಸಣ್ಣ ಪೆಟ್ಟು ಬಿದ್ದರೂ ಕಷ್ಟ. ಮೊದಲೇ ಸಾಲದ ಗಾಳಕ್ಕೆ ಸಿಕ್ಕಿಹಾಕಿಕೊಂಡಿರುವ ಕ್ರೆಡಿಟ್ ಕಾರ್ಡ್ ಗ್ರಾಹಕರು ಮತ್ತು ಆ ದಿನದ ಹೊಟ್ಟೆ ಬಟ್ಟೆಗೆ ಹೆಣಗಾಡುವ ಆರ್ಥಿಕವಾಗಿ ಮಧ್ಯಮ/ಕೆಳವರ್ಗದಲ್ಲಿರುವವರು ಹಣಕಾಸು ಮುಗ್ಗಟ್ಟಿನಿಂದ ತತ್ತರಿಸುತ್ತಾರೆ.  ಹಣಕಾಸು ಹಿಂಜರಿತದ ಪರಿಣಾಮ ಅವರ ಕೆಲಸ ಹೋಗುತ್ತದೆ. ಇಲ್ಲದಿದ್ದರೆ ಬರುತ್ತಿರುವ ಆದಾಯ ಕುಸಿಯುತ್ತದೆ. ಇದರಿಂದ ಅವರಿಗೆ ಕಾಲಕಾಲಕ್ಕೆ ಬ್ಯಾಂಕ್ಗೆ ಹಣ ಕಟ್ಟಲು ಸಾಧ್ಯವಾಗುವುದಿಲ್ಲ. ಸುಸ್ತಿದಾರರಾಗುತ್ತಾರೆ. ಕೊನೆಗೆ ದಿವಾಳಿಯೆಂದೂ ಘೋಷಿಸಿಕೊಳ್ಳಬಹುದು. ಇದರ ನೇರ ಪರಿಣಾಮ ಬ್ಯಾಂಕಿನ ಮೇಲೆ. ಇದರಲ್ಲಿ ಬ್ಯಾಂಕ್ಗಳಗೆ ಹೆಚ್ಚಾಗಿ ಹೊಡೆತ ಬೀಳುವುದು ಕ್ರೆಡಿಟ್ ಕಾರ್ಡ್ಗಳಿಂದ. ಅತ್ತ ಕುಸಿಯುತ್ತಿರುವ ಷೇರುಪೇಟೆ. ಇತ್ತ ಹೆಚ್ಚುವ ದಿವಾಳಿಗಳಿಂದ ಬ್ಯಾಂಕ್ ದಿವಾಳಿ ಹಂತಕ್ಕೆ ಬರುತ್ತದೆ. ಕೊನೆಗೆ ಗೃಹ ಸಾಲದ ಕಂತಿಗೆ ಕಣ್ಣು ಹಾಯಿಸಿದರೆ ಅಲ್ಲಿಯೂ ವಸೂಲಿ ಕಷ್ಟವಾಗಿ ಸಾಲಗಾರರು ಅಡವಿಟ್ಟಿರುವ ಕಟ್ಟಡ/ಇನ್ನಾವುದೇ ವಸ್ತುಗಳನ್ನು ಹರಾಜಿಗಿಟ್ಟರೂ ಬ್ಯಾಂಕ್ ಕೊಟ್ಟಿರುವಷ್ಟು ಸಾಲದ ಮೊತ್ತ ಸಿಗದಿರುವ ಸಾಧ್ಯತೆಗಳೇ ಹೆಚ್ಚು , ಏಕೆಂದರೆ ಇದು ಬೇಡಿಕೆ ಕುಸಿದಿರುವ ಹಿಂಜರಿತದ ಕಾಲ! ಬ್ಯಾಂಕ್ಗಳಲ್ಲೂ ಹಣವಿಲ್ಲದಾದಾಗ ಬ್ಯಾಂಕ್ಗಳ ಸಾಲದಿಂದಲೇ ಪ್ರತಿ ದಿನದ ವ್ಯವಹಾರ ನಡೆಸುವ ದೊಡ್ಡ ದೊಡ್ಡ ಕಂಪನಿಗಳ ಉತ್ಪಾದನೆ ಕುಸಿಯುತ್ತದೆ. ಉದಾಹರಣೆಗೆ ಈಗ ಜಗತ್ತಿನ ಕಾರು ಉತ್ಪಾದನೆಯ ದೊಡ್ಡ  ಕಂಪನಿಗಳಾದ ಜನರಲ್ ಮೋಟಾರ್ಸ್ , ಫೋರ್ಡ್ ಮುಂತಾದವು ಅನುಭವಿಸುತ್ತಿರುವ ಸಂಕಟ. ಇದರಿಂದ ಇಡೀ ಆಟೊಮೊಬೈಲ್ ಉದ್ಯಮ ಕುಸಿಯತೊಡಗುತ್ತದೆ. ಪರಿಣಾಮ, ಈ ಉದ್ಯಮಕ್ಕೆ ಅಗತ್ಯವಾಗಿ ಬೇಕಾದ ಕಬ್ಬಿಣ, ಉಕ್ಕು ಮತ್ತು ತೈಲೋತ್ಪನ್ನಗಳು ಬೇಡಿಕೆ ಕಳೆದುಕೊಳ್ಳುತ್ತವೆ. ಇದರ ಹಿಂದೆಯೇ ಎಲ್ಲ ರಂಗಗಳಲ್ಲಿ ಕೆಲಸ ಮಾಡುವವರು ಕೆಲಸ ಕಳೆದುಕೊಳ್ಳುತ್ತಾರೆ. ದೇಶದ/ಜಾಗತಿಕ ಆರ್ಥಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಆರ್ಥಿಕ ಹಿಂಜರಿತ ಕಾಲ ಎಂಥ ಗಟ್ಟಿಗನನ್ನೂ ಹೇಡಿಯನ್ನಾಗಿ ಪರಿವರ್ತಿಸುತ್ತದೆ. ಪರಿಸ್ಥಿತಿ ಸರಿಯಿರುವಾಗ ಸಾಲ ಮಾಡಿಯಾದರೂ ಏನನ್ನಾದರೂ ಕೊಳ್ಳಬೇಕೆಂದು ಬಯಸುವ ಗ್ರಾಹಕ, ಕುಸಿತದ ಕಾಲದಲ್ಲಿ ತನ್ನ ಜೇಬಿನಲ್ಲೇ ಹಣವಿದ್ದರೂ ಬಿಚ್ಚುವುದಿಲ್ಲ. ಇದರಿಂದ ನಿತ್ಯದ ಎಲ್ಲ ರೀತಿಯ ವ್ಯಾಪಾರಿ ಭಾವುಕತೆ ಕುಸಿಯುತ್ತದೆ. ಇಂಥದೇ ಪರಿಣಾಮವನ್ನು ಈಗ ಜಗತ್ತು ಎದುರಿಸುತ್ತಿದೆ.

ಎಲ್ಲರ ಹಣ, ಬ್ಯಾಂಕ್ ಮತ್ತು ಷೇರುಗಳಲ್ಲಿ ಒಟ್ಟಿಗೇ ಇದ್ದಾಗ ಅದಕ್ಕೆ ಬಲವಿತ್ತು, ಬೆಲೆ ಇತ್ತು. ಅದು ದೇಶದ ಸದೃಢ ಆರ್ಥಿಕತೆಗೆ ಹಾದಿಯಾಗಿತ್ತು. ಅಭಿವೃದ್ಧಿಗೆ ಸಹಕಾರಿಯಾಗಿತ್ತು. ಈಗ ಎಲ್ಲರೂ ಹಣ ವಾಪಸ್ ಪಡೆಯುತ್ತಿದ್ದಾರೆ. ಕೆಲವರ ಬಳಿ ಹಣವಿದೆ. ಖರ್ಚು ಮಾಡಲು ಭವಿಷ್ಯದ ಭಯ. ದೇಶದ ಆರ್ಥಿಕ ಸ್ಥಿತಿ ಶಕ್ತಿಹೀನವಾಗಿದೆ. ಬೇಡಿಕೆ ಕುಸಿದಿರುವುದರಿಂದ ಉತ್ಪಾದನೆಯೂ ಕುಸಿದಿದೆ. ಈಗಾಗಲೇ ಉತ್ಪಾದನೆ ಆಗಿರುವ ಸರಕನ್ನು ಆದಷ್ಟು ಬೇಗ ಮಾರಿಬಿಡಬೇಕೆಂಬ ಧಾವಂತ ಎಲ್ಲ ಉತ್ಪಾದಕರಿಗೆ. ಇಲ್ಲದಿದ್ದರೆ ಬೆಲೆ ಇನ್ನೂ ಕುಸಿಯುವ ಭಯ. ಆದ್ದರಿಂದಲೇ ಎರಡು ತಿಂಗಳ ಹಿಂದೆ ಗಗನ ಮುಟ್ಟಿದ್ದ ಹಣದುಬ್ಬರ ಈಗ ಜರ್ರಂತ ಜಾರುತ್ತಿದೆ. ಅಗತ್ಯ ವಸ್ತುಗಳ ಬೆಲೆಗಳು ಕುಸಿಯುತ್ತಿವೆ. ಇದು ಕೊಳ್ಳುವವರ ಕಾಲ. ಇದೇ ಸಾಮಾನ್ಯನಿಗೆ ಬೇಕಾಗಿರುವ ಅರ್ಥಶಾಸ್ತ್ರ  ಕೂಡ.

೧೭ ಡಿಸೆಂಬರ್ ೨೦೦೮ರ ವಿಜಯಕರ್ನಾಟಕ ಸಂಚಿಕೆಯಲ್ಲಿ ಪ್ರಕಟವಾಗಿದೆ. 

No comments:

Post a Comment