ಹೆಜ್ಜೆ ಗೆಜ್ಜೆ :
ಈ ಬ್ಲಾಗ್ ನಲ್ಲಿರುವ ವಿಷಯ ಮತ್ತು ಚಿತ್ರಗಳ ಬಳಕೆಗೆ ಅನುಮತಿ ಕಡ್ಡಾಯ.
ಮತ್ತೊಂದು ಕ್ಷಣ ನನ್ನ ಬಗ್ಗೆ ಬದುಕು-ಬರಹ

Friday 25 June 2010

ಜಾತಿಗೊಂದು ಮಠ ಮತ್ತು ಪ್ರಜಾಪ್ರಭುತ್ವ

ಕರ್ನಾಟಕದಲ್ಲೀಗ ಬಹು ಚರ್ಚಿತ ವಿಷಯ ಮಠಗಳ ಕುರಿತದ್ದು. ಒಂದು ಜಾತಿಯ ಹೊಸ ಮಠ, ಇನ್ನೊಂದು ಜಾತಿಯ ಶಾಖಾ ಮಠ, ಯಾವುದೋ ಮಠದ ವಿವಾದ, ಇನ್ನೊಂದು ಮಠದ ಉತ್ತರಾಕಾರಿ ವಿವಾದ, ಮತ್ತೊಂದು ಮಠದ ಹೊಸ ಸ್ವಾಮಿಯ ಪಟ್ಟಾಭಿಷೇಕ ಅಥವಾ ಬಂಡಾಯ ಮಠದ ಕುರಿತ ಚರ್ಚೆ ಇತ್ಯಾದಿ ಸುದ್ದಿಯಾಗುತ್ತಲೇ ಇವೆ.

ಹೊಸ ಮಠಗಳ ಸ್ಥಾಪನೆ ವಿಷಯದಲ್ಲಂತೂ ಕ್ರಾಂತಿಯೇ ಆಗುತ್ತಿರುವುದರಿಂದ ರಾಜ್ಯದ ಸಾಮಾಜಿಕ ಭೂಪಟ ಮತ್ತೆ ಬದಲಾಗುತ್ತಿದೆ. ೮೦ರ ದಶಕದಲ್ಲಿ ಮುಗಿಲು ಮುಟ್ಟಿದ್ದ ಹೊಸ ಮಠ ಕಟ್ಟುವ ಮಂತ್ರ ಹಿಂದುಳಿದವರಲ್ಲಿ ಕೆಲ ಪ್ರಬಲ ಜಾತಿಗಳು ಮಠ ಕಟ್ಟಿಕೊಳ್ಳುವಲ್ಲಿ ಪರ್ಯವಸಾನ ಕಂಡಿತ್ತು. ಈಗ ಹಿಂದುಳಿದ ವರ್ಗಗಳ ಸಣ್ಣಸಣ್ಣ ಜಾತಿಗಳು ಮತ್ತು ದೊಡ್ಡ ಜಾತಿಗಳ ಉಪಜಾತಿಗಳು ಮಠ ಕಟ್ಟಿಕೊಳ್ಳುವ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದೆ. ಬುಡಕಟ್ಟು ಜನಾಂಗವಾದ ಯಾದವರು (ಗೊಲ್ಲರು), ಹಿಂದುಳಿದ ವರ್ಗದಲ್ಲಿ ಪ್ರಬಲರಾದ ಈಡಿಗರು ಮತ್ತು ಲಿಂಗಾಯತ ಒಳಪಂಗಡಗಳಲ್ಲಿ ಪ್ರಬಲವಾಗಿರುವ ಪಂಚಮಸಾಲಿಗಳು ಇತ್ತೀಚೆಗೆ ತಮ್ಮ ಮಠ ಕಟ್ಟಿಕೊಂಡಿದ್ದಾರೆ.

ಹೊಸ ಗುರುಪೀಠದ ಸ್ಥಾಪನೆ ಹಾದಿಯಲ್ಲಿ ಕುಂಬಾರರು, ಲಂಬಾಣಿಗರು, ಹೆಳವರು ಮತ್ತು ಭೋವಿಗಳೂ ಇದ್ದಾರೆ. ಇವರಲ್ಲಿ ಕೆಲವರಿಗೆ ಈಗಾಗಲೇ ಸ್ವಾಮಿಗಳಿದ್ದು, ನಿರ್ದಿಷ್ಟ ಸ್ಥಳದಲ್ಲಿ ಗುರುಪೀಠಕ್ಕಾಗಿ ಚಿಂತನೆ ನಡೆಯುತ್ತಿದೆ. ಇನ್ನು ಈಡಿಗರು ಮತ್ತು ಪಂಚಮಸಾಲಿಗಳ ಗುರುಪೀಠ ಹಾಗೂ ಸ್ವಾಮೀಜಿಗಳ ನೇಮಕ ಸಂಬಂಧ ಆಯಾ ಸಮಾಜದಲ್ಲೇ ಆಗಿರುವ ಗೊಂದಲ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಯತ್ನಗಳು ನಡೆದಿವೆ. ಈ ಹಿಂದೆಯೇ ಓಂಕಾರಾಶ್ರಮದ ಶಿವಪುರಿ ಸ್ವಾಮೀಜಿ ಕಾಲದಲ್ಲಿ ಲಂಬಾಣಿಗರ ಒಂದು ಮಠ ಸ್ಥಾಪನೆಯಾಗಿತ್ತಾದರೂ ಇನ್ನೊಂದು ಪೀಠಕ್ಕಾಗಿ ತಯಾರಿ ನಡೆದಿದೆ. ಇದೇ ರೀತಿ ಅನೇಕ ಜಾತಿಗಳ ಇಬ್ಬಿಬ್ಬರು ಸ್ವಾಮೀಜಿಗಳು ಪಟ್ಟವೇರುತ್ತಿದ್ದು, ಗೊಂದಲಗಳು ಹೆಚ್ಚುತ್ತಿವೆ. ಕೆಲ ಜಾತಿ/ಪಂಗಡಗಳಲ್ಲಂತೂ ಇದೇ ವಿಚಾರಕ್ಕೆ ಒಡಕುಂಟಾಗುತ್ತಿದ್ದು, ಮಠ ಹುಟ್ಟು ಹಾಕಲು ಯತ್ನಿಸುತ್ತಿರುವವರ ಔಚಿತ್ಯಗಳನ್ನು ಪ್ರಶ್ನಿಸುತ್ತದೆ.

ಅನೇಕ ಜಾತಿಗಳಿಗೆ ದಿಢೀರ್ ಆಗಿ ಮಠಗಳನ್ನು ಕಟ್ಟಿಕೊಳ್ಳುವ ಅಗತ್ಯ ಏಕೆ ಬಂತು? ಈ ಬಗ್ಗೆ ಕೆದಕಿದರೆ ಗೊಂದಲಕಾರಿ ಉತ್ತರಗಳೇ ಸಿಗುತ್ತಿವೆ. ಕೆಲವರು ಮಠ ಜಾತಿ ಸಂಘಟನೆಗೆ ಎಂದರೆ, ಇನ್ನೂ ಕೆಲವರು ಸಂಸ್ಕಾರಕ್ಕೆ ಅಂತಾರೆ. ಮತ್ತೂ ಕೆಲವರು ಸಮಾಜದ (ಜಾತಿ)ಸಮಗ್ರ ಪ್ರಗತಿಗೆ ಅಂದರೆ, ಇನ್ನೊಂದು ಜಾತಿಯವರು ಜನರಲ್ಲಿ ಮರೆಯಾಗಿರುವ ಧಾರ್ಮಿಕ ಮತ್ತು ಅಧ್ಯಾತ್ಮಿಕ ಪ್ರಜ್ಞೆಗಳನ್ನು ಪುನರುಜ್ಜೀವನಗೊಳಿಸಲು ಎನ್ನುತ್ತಿದ್ದಾರೆ. ಈ ರೀತಿಯ ಉತ್ತರಗಳು ಕೇವಲ ಬೇರೆ ಬೇರೆ ಜಾತಿಗಳವರಿಗೆ ಸೀಮಿತವಾಗಿಲ್ಲ. ಬದಲಾಗಿ ಒಂದೇ ಜಾತಿಯ ಅನೇಕ ಮುಖಂಡರಲ್ಲಿ ಕೇಳಿಬರುತ್ತಿರುವುದು ಯಾರಲ್ಲೂ ಸ್ಪಷ್ಟತೆ ಇಲ್ಲದಿರುವ ಪರಿಸ್ಥಿತಿಯನ್ನು ಎತ್ತಿ ತೋರಿಸುತ್ತದೆ.

ಇದೆಲ್ಲಾ ಏನೇ ಇದ್ದರೂ ಜಾತಿ ಮಠಗಳ ಹಿಂದೆ ಹೊರಟಿರುವವರ ಕಣ್ಣು ಕುಕ್ಕುತ್ತಿರುವುದು ಹೆಮ್ಮರವಾಗಿರುವ ಕೆಲ ಪ್ರಬಲ ಜಾತಿಗಳ ಮಠಗಳೇ ಎಂದು ಹೇಳದೆ ಅನ್ಯಮಾರ್ಗವಿಲ್ಲ. ಇತ್ತೀಚಿನ ಕೆಲ ದಶಕಗಳಲ್ಲಂತೂ ಸಮಾಜದ ಎಲ್ಲ ಸ್ತರಗಳ ಮೇಲೆ ಮಠಗಳ ಪ್ರಭಾವ ಗಣನೀಯವಾಗಿದೆ. ಶೈಕ್ಷಣಿಕವಾಗಿ ಕೆಲ ಮಠಗಳ ಕಾರ್ಯ, ರಾಜಕೀಯ ಪ್ರಭಾವ, ಜನಾಂಗದ ಮೇಲಿನ ಹಿಡಿತ ಮುಂತಾದವು ಇತರರನ್ನು ಸ್ವಾಭಾವಿಕವಾಗಿಯೇ ಪ್ರೇರೇಪಿಸಿದ್ದರೆ ಆಶ್ಚರ್ಯವಿಲ್ಲ. ಆದರೆ ಕೆಲವು ಕಡೆ ಕೆಲ ಮಠಗಳ ಅಭಿವೃದ್ಧಿಯನ್ನು ಜನಾಂಗದ ಅಭಿವೃದ್ಧಿ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ ಅಥವಾ ಬೇರೆಯವರು ಅದನ್ನು ತಪ್ಪಾಗಿ ಗ್ರಹಿಸಿಕೊಳ್ಳುತ್ತಿರಬಹುದು ಅಥವಾ ಕೆಲವರು ಜಾತಿ ಹೆಸರಲ್ಲಿ ಎಂದಿನಂತೆ ಮುಗ್ಧರನ್ನು ದಾರಿ ತಪ್ಪಿಸುತ್ತಿರಬಹುದು ಅಷ್ಟೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಅಡಿಯಲ್ಲಿ ಸಿಗಲಾರದ ಯಾವ ಸೌಲಭ್ಯವನ್ನೂ ಮಠಗಳು ಯಾವ ಜಾತಿಯ ಬಡವನಿಗೂ ಖಂಡಿತ ಕೊಡಲಾರವು. ಹಾಗಾಗಿದ್ದರೆ ಪ್ರಬಲ ಜಾತಿ ಮಠಗಳ ಎಲ್ಲ ಜನ ಉದ್ಧಾರವಾಗಿರಬೇಕಿತ್ತು. ವ್ಯಕ್ತಿಯ ವೈಯಕ್ತಿಕ ಬದಲಾವಣೆಗೆ ಮಠಗಳ ಕಾಣಿಕೆ ಏನೆಂಬುದು ಚರ್ಚೆಯಾಗಬೇಕಷ್ಟೆ.

ಹಿಂದಿನ ಅನೇಕ ಮಠಗಳ ಉದ್ದೇಶ ಕೇವಲ ಧಾರ್ಮಿಕತೆ ಮಾತ್ರವಾಗಿತ್ತು. ಬಹುತೇಕ ಹಳೇ ಮಠಗಳು ಜಾತಿಗೆ ಸೀಮಿತವಾಗಿ ಹುಟ್ಟಿದವುಗಳಲ್ಲ. ಅವುಗಳಿಗೆ ಬೇರೆಯದೇ ಆದ ತಳಹದಿ ಇತ್ತು. ಇವತ್ತು ಆ ಮಠಗಳಲ್ಲಿ ಮೂಲಸ್ವರೂಪದಲ್ಲಿ ಉಳಿದಿಲ್ಲದಿದ್ದರೆ ಅದಕ್ಕೆ ಸಂಬಂಸಿದವರನ್ನೇ ದೂರಬೇಕು. ಮಠಗಳು ಶೈಕ್ಷಣಿಕ ಕ್ರಾಂತಿ ಮಾಡಿವೆ ಎಂಬುದು ಈಗ ಇತಿಹಾಸ. ಆದರೆ ವರ್ತಮಾನದಲ್ಲಿ ಬಹುತೇಕ ಮಠಗಳು ಬದಲಾಗಿವೆ. ಅವು ಜಾತಿ, ಸ್ಥಳೀಯ ರಾಜಕೀಯ ಮತ್ತು ಸ್ವಯಂ ಅಭಿವೃದ್ಧಿಗೆ ಸೀಮಿತವಾಗಿವೆ. ಇವು ಇತರ ಜಾತಿಗಳು ಮಠದ ಹೆಸರಲ್ಲಿ ಪ್ರತ್ಯೇಕಗೊಳ್ಳಲು ಕಾರಣವಾಗಿವೆ. ಈ ಹಿಂದೆ ಶೈಕ್ಷಣಿಕ ಕ್ರಾಂತಿ ಮಾಡಿದ್ದ ಬಹುತೇಕ ಮಠಗಳಿಗೆ ಕ್ಯಾಪಿಟೇಶನ್ ಲಾಬಿ ಎಂಬ ಕೆಸರು ಮೆತ್ತಿಕೊಂಡಿದೆ. ಭಾರತ ಪರಕೀಯರ ದಬ್ಬಾಳಿಕೆಯಲ್ಲಿ ನಲುಗುತ್ತಿದ್ದ ಕಾಲದಲ್ಲಿ ಧಾರ್ಮಿಕ, ಅಧ್ಯಾತ್ಮಿಕವಾಗಿ ಗುರುತಿಸಿಕೊಂಡಿದ್ದ ಮಠಗಳು, ಎಲ್ಲ ಜಾತಿಗಳಿಗೆ ಬೇರೆ ಬೇರೆ ಕಾರಣಗಳಿಗಾಗಿ ಸಮಾನ ವೇದಿಕೆಗಳಾಗಿದ್ದವು. ಇಂದಿಗೂ ಅಂಥ ಅನೇಕ ಮಠಗಳಿವೆ.

ಹಿಂದೆ ಜಾತಿ ಆಚರಣೆಯಲ್ಲಿತ್ತು. ಇವತ್ತು ಪ್ರಜ್ಞೆಯಲ್ಲೂ ಇದೆ. ಆಚರಣೆಯಲ್ಲಿ ಎಷ್ಟು ಸಮಾಜವಿರೋಯಾಗಿತ್ತೋ ಅಷ್ಟೇ ಸಮಾಜವಿರೋಯಾಗಿ ಇಂದು ಜನರ ಪ್ರಜ್ಞೆಯಲ್ಲಿ ಜಾತಿ ಬಲವಾಗುತ್ತಿದೆ. ಇಂಥ ಪ್ರಜ್ಞೆಯನ್ನೇ ಇಂದಿನ ಜಾತಿ ಮಠಗಳು ಇನ್ನೂ ಗಟ್ಟಿ ಮಾಡಬಹುದೆಂಬ ಭಯವನ್ನು ಎಲ್ಲ ಸಾಮಾಜಿಕ ಚಿಂತಕರು ವ್ಯಕ್ತಪಡಿಸುತ್ತಿದ್ದಾರೆ. ಸಂವಿಧಾನ ನೀಡಿರುವ, ಪ್ರಜಾಪ್ರಭುತ್ವದಂಥ ಪ್ರಬಲ ಅಸ್ತ್ರದ ಮುಂದೆ ಯಾಕೆ ಜಾತಿ ಮಠಗಳನ್ನು ಕಟ್ಟಿಕೊಳ್ಳಬೇಕು? ಇಲ್ಲಿ ಇನ್ನೊಂದು ಸೂಕ್ಷ್ಮವಿದೆ. ಜಾತಿ ಹೆಸರಲ್ಲಿ ಸಂಘಟಿತರಾಗುವುದು ಖಂಡಿತ ತಪ್ಪಲ್ಲ. ಏಕೆಂದರೆ ಅದು ಪ್ರಜಾಪ್ರಭುತ್ವದ ಆಶಯಗಳಿಗನುಗುಣವಾಗಿಯೇ ಹುಟ್ಟುತ್ತದೆ. ಆ ಸಂಘಟನೆಯ ಅಪತಿಯನ್ನು ಪ್ರಜಾಪ್ರಭುತ್ವದ ಕ್ರಮಗಳಿಂದಲೇ ಉರುಳಿಸಬಹುದು. ಆದರೆ ಮಠ? ಅಲ್ಲಿ ಯಾವ ಪ್ರಜಾಪ್ರಭುತ್ವವಿದೆ? ಜಾತಿಯ ಎಲ್ಲ ಜನ ಸೇರಿಯೇ ಮಠಾಶರನ್ನು ಆರಿಸುತ್ತೇವೆ ಎಂದು ಕೆಲವರು ಹೇಳಬಹುದು. ಅದು ನೆಪ ಮಾತ್ರ ಎಂಬ ಆರೋಪಗಳಿವೆ. ಭಿನ್ನಾಭಿಪ್ರಾಯ ಬಂದರೆ ಸಮಾಜವೇ ಒಡೆದು ಇನ್ನೊಂದು ಮಠವಾಗಬಹುದು ಅಷ್ಟೆ. ಹಾಗಾದರೆ ಇದರಿಂದ ಏನು ಸಾಸಿದಂತಾಯಿತು? ಇದಕ್ಕೆ ಉದಾಹರಣೆಯಾಗಿ ಒಂದೆರಡು ಜಾತಿಗಳಲ್ಲಿ ಗುಂಪುಗಳಾಗಿ ಪ್ರತ್ಯೇಕ ಪೀಠಸ್ಥಾಪನೆ ಮತ್ತು ಸ್ವಾಮಿಗಳ ನೇಮಕವಾಗುತ್ತಿದೆ.

ಮಠಗಳಲ್ಲಿ ಪ್ರಜಾಪ್ರಭುತ್ವ ಯಾವಾಗ ಇತ್ತು ಎಂಬ ಕಟುವಾದ ಪ್ರಶ್ನೆ ಕೇಳಲು ಇದು ಸಕಾಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವಿದೆ. ವಂಶ/ಕುಟುಂಬ ರಾಜಕಾರಣವಿದೆ ಎನ್ನುವವರು, ಯಾವ ಮಠ ಬೇರೆ ಜಾತಿಯ ಸ್ವಾಮಿಯನ್ನು ಉತ್ತರಾಕಾರಿ ಮಾಡಿದೆ ಎಂಬುದನ್ನು ಹೇಳಬೇಕು? ರಾಜಕೀಯ, ಜಾತಿ ಲೆಕ್ಕಾಚಾರದಲ್ಲಿ ನಡೆಯುತ್ತಿರಬಹುದು, ಪ್ರಜಾಪ್ರಭುತ್ವದಲ್ಲೂ ಜಾತಿ ಲೆಕ್ಕಾಚಾರ ಹಾಕಿ ಕೆಲವು ಬಾರಿ ನಿರ್ಧಾರಗಳು ಹೊರಹೊಮ್ಮಬಹುದು. ಇದರಿಂದ ಪ್ರಬಲರಿಗೆ ಕೆಲ ಸೌಲಭ್ಯಗಳು ದಕ್ಕಿರಬಹುದು. ಆದರೆ ಅಭಿವೃದ್ಧಿ ವಿಷಯವಾಗಿ ಮಠ ಬೇಕು ಎನ್ನುವವರಿಗೆ ಜಾತಿ ಆಧರಿತ ಮಠಗಳು ಖಂಡಿತ ಉತ್ತರವಲ್ಲ. ಹಾಗಾಗಿ ಈಗಿನ ಕಾಲದ ಮಠಗಳ ಜಾತ್ಯತೀತತೆಯನ್ನು ಪ್ರಶ್ನಿಸಲೇಬೇಕಾಗಿದೆ. ಆದರೆ ಅದಕ್ಕೆ ಧಾರ್ಮಿಕತೆ ಎಂಬ ಸಮರ್ಥನೆ ಇರುವುದರಿಂದ ಯಾರೂ ಪ್ರಶ್ನಿಸುವ ಧೈರ್ಯ ಮಾಡುತ್ತಿಲ್ಲ. ಯಾರು ಬೇಕಾದರು ಏನಾದರೂ ಆಗಿಬಿಡಬಲ್ಲ ಪ್ರಜಾಪ್ರಭುತ್ವವೆಲ್ಲಿ? ಊಳಿಗಮಾನ್ಯ ವ್ಯವಸ್ಥೆ ಇರುವ ಮಠಗಳ ಸ್ವಯಂ ಸಂವಿಧಾನ ಎಲ್ಲಿ? ಯಾರನ್ನು ಬೇಕಾದರೂ ತೆಗೆಯಬಲ್ಲ, ಆರಿಸಬಲ್ಲ ಮತ್ತು ಪ್ರಶ್ನಿಸಬಲ್ಲ ಸಂವಿಧಾನದತ್ತ ಪ್ರಜಾಸತ್ತೆ ಎಲ್ಲಿ? ಈಗ ಮಠ ಕಟ್ಟುವ ಪ್ರಕ್ರಿಯೆಯಲ್ಲಿ ಜನಾಂಗದ ಕೆಲವರಷ್ಟೇ ಇಲ್ಲ, ಅಲ್ಲೂ ರಾಜಕಾರಣಿಗಳು ತಲೆಹಾಕಿದ್ದಾರೆ. ಅವರ ಮರ್ಜಿಯಲ್ಲಿ ಅರಳುವ ಮಠ ಮುಂದೆ ಅವರಿಂದ ದುರುಪಯೋಗವಾಗುವುದಿಲ್ಲ ಎಂಬ ಭರವಸೆಯನ್ನು ಯಾರು ಕೊಡುತ್ತಾರೆ? ಈಗಾಗಲೇ ವೋಟ್ಬ್ಯಾಂಕ್ ಕಾರಣಕ್ಕೆ ಮಠಗಳನ್ನು ಓಲೈಸುವ ಅದೇ ಜಾತಿಯ ರಾಜಕಾರಣಿಗಳ ಗುಂಪು ಹುಟ್ಟಿಕೊಂಡು ಎಷ್ಟೋ ದಿನಗಳಾಗಿವೆ.

  ಜಾತಿ/ಧರ್ಮಗಳನ್ನು ರಾಜಕಾರಣಕ್ಕೆ ಬೆರೆಸಬಾರದೆಂಬ ತತ್ತ್ವಕ್ಕೆ ರಾಜಕಾರಣಿಗಳನ್ನು ಬದ್ಧರಾಗುವಂತೆ ಮಾಡುವವರು ಯಾರು? ಕಳೆದ ಬಾರಿ ಮೊಟ್ಟ ಮೊದಲಿಗೆ ಬಜೆಟ್ನಲ್ಲಿ ಮಠಗಳಿಗೆ ದುಡ್ಡು ಹಂಚಿದ ಯಡಿಯೂರಪ್ಪನವರ ನಿರ್ಧಾರವೇನಾದರೂ ಇಷ್ಟೊಂದು ಜನರಲ್ಲಿ ಅನೇಕ ಭ್ರಮೆ ಹುಟ್ಟಲು ಕಾರಣವಾಯಿತೆ? ಪ್ರಜಾಪ್ರಭುತ್ವ ವಿಧಾನದಿಂದ ಆರಿಸಿಬಂದ ನಾಯಕನೊಬ್ಬ ಪ್ರಜಾಪ್ರಭುತ್ವ/ಉತ್ತರದಾಯಿತ್ವ ಎಂದರೆ ಏನೆಂದು ಕೇಳುವ ಮಠಗಳಿಗೆ ದುಡ್ಡು ಹಂಚಿದ ವ್ಯಂಗ್ಯವೂ ನಡೆದುಹೋಯಿತು.

ನಮಗೆ ಈಗ ಬೇಕಿರುವುದು ಜಾತಿಮಠಗಳಲ್ಲ. ಜಾಗತೀಕರಣ ಎಲ್ಲ ಎಲ್ಲೆಗಳನ್ನು ಛಿದ್ರಗೊಳಿಸಿಕೊಂಡು ನಾಲ್ಕು ದಿಕ್ಕಿನಿಂದ ಬರುತ್ತಿರುವಾಗ ಜಾತಿಗೋಡೆಗಳನ್ನು ಕಟ್ಟುತ್ತಿರುವವರನ್ನು ಏನೆಂದು ಕರೆಯಬೇಕೆಂದು ಗೊತ್ತಾಗುತ್ತಿಲ್ಲ. ಆದರೆ ಇದು ಪ್ರಜಾಪ್ರಭುತ್ವದ ಗೋಡೆಗೆ ಕನ್ನ ಹಾಕುವ ಕೆಲಸ ಮತ್ತು ಸಮಾಜವನ್ನು ವಿಘಟನೆಗೆ ತಳ್ಳುವ ಕೆಲಸ. ಈ ವಿಘಟನೆ ದೇಶದ ಒಕ್ಕೂಟ ವ್ಯವಸ್ಥೆಗೂ ಮಾರಕ. ಇಷ್ಟಕ್ಕೂ ಪ್ರಜಾಪ್ರಭುತ್ವಕ್ಕೂ ಮಠಗಳಿಗೂ ಏನು ಸಂಬಂಧ ಎಂದು ಕೇಳಬಹುದು. ಆದರೆ ಪ್ರಜಾಪ್ರಭುತ್ವದ ಮೂಲಕ ಪಡೆಯಬಹುದಾದ ಕೆಲವು ಸೌಲಭ್ಯಗಳನ್ನು ಮಠದಿಂದ ಪಡೆಯಬಹುದೆಂದು ಕೆಲವರು ವಾದಿಸುತ್ತಿರುವುದರಿಂದಲೇ ಇದನ್ನು ಕೇಳಬೇಕಾಗಿದೆ. ಜಾತ್ಯತೀತರ ಜಗಲಿಯಂತಿದ್ದ ಕೆಲ ಮಠಗಳು ಈಗಿನ ಜಾತಿ ಮಠಗಳಿಂದ ತಮ್ಮ ಅಸ್ತಿತ್ವ ಕಳೆದುಕೊಳ್ಳಲಿವೆ. ಸಹಿಷ್ಣುತೆ ಎಂಬ ಬಹುದೊಡ್ಡ ಮೌಲ್ಯ ಕಳೆದುಹೋಗುತ್ತಿರುವ ಕಾಲದಲ್ಲಿ ನಾವಿದ್ದೇವೆ. ಶೋಷಿತ ಜಾತಿಗಳು ಪ್ರಜಾಪ್ರಭುತ್ವ ತತ್ತ್ವಗಳ ಮೇಲೆ ಸಿದ್ಧಾಂತ ಇಟ್ಟುಕೊಂಡು ಸಂಘಟಿತರಾಗಿ ಹೋರಾಟ ಮಾಡಬಹುದು. ಅದು ಅವುಗಳ ಹಕ್ಕೂ ಕೂಡ.

ಇನ್ನೆಷ್ಟು ದಿನ ಈ ಜಾತಿ ಮುಖವಾಡ ಹಾಕಿಕೊಂಡು ಗುರುತಿಸಿಕೊಳ್ಳಬೇಕು? ಈ ಪ್ರಕ್ರಿಯೆಗಳನ್ನು ನೋಡಿದರೆ ಎಲ್ಲ ಜಾತಿಗಳೂ ಒಂದಾಗಿ ನಿಂತ ೧೨ನೇ ಶತಮಾನದ ಅನುಭವ ಮಂಟಪವೆಂಬ ಅದ್ಭುತ ಘಟಿಸಿದ ೮೦೦ ವರ್ಷಗಳ ನಂತರ ಮತ್ತೆ ೧೦ನೇ ಶತಮಾನಕ್ಕೆ ಹೋಗುವುದು ಯಾವ ರೀತಿಯ ಪರಿವರ್ತನೆ? ಬಸವಣ್ಣನ ಹೆಸರು ಹೇಳಿಕೊಂಡು, ಅವರ ಒಂದೂ ತತ್ತ್ವಗಳನ್ನು ಪಾಲಿಸದ ಕೆಲವರು ಜಾತಿ ಹೆಸರಲ್ಲಿ ಎಲ್ಲರನ್ನೂ ಖೆಡ್ಡಾಕ್ಕೆ ಕೆಡವುತ್ತಿದ್ದಾರೆ. ಇಂಥವರು ಎಲ್ಲ ಜಾತಿಯಲ್ಲೂ ಇದ್ದಾರೆ. ಮಠಗಳನ್ನು ಸಂಪತ್ತನ್ನು ಬಚ್ಚಿಡುವ ಕೇಂದ್ರಗಳಂತೆ ಬಳಸಲಾಗುತ್ತಿದೆ ಎಂಬ ಆರೋಪ ಇತ್ತೀಚಿನ ದಿನಗಳಲ್ಲಿ ಬಲವಾಗಿದೆ. ಏಕೆಂದರೆ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ಮಾಡುವುದು ಆಯಾ ಜನರ ಧಾರ್ಮಿಕ ನಂಬಿಕೆಗಳಿಗೆ ಘಾಸಿ ಮಾಡಿದಂತೆ ಎಂಬ ತಿಳಿವಳಿಕೆಯನ್ನು ದುರುಪಯೋಗಪಡಿಸಿಕೊಳ್ಳುವವರಿದ್ದಾರೆ. ಇದು ಎಲ್ಲ ಧರ್ಮಗಳ, ಧಾರ್ಮಿಕ ಕೇಂದ್ರಗಳ ಮೇಲೂ ಇರುವ ಆರೋಪ. ಮಠ ಕಟ್ಟಿಕೊಳ್ಳುವುದು ಎಲ್ಲ ಪಾಪಗಳನ್ನು ಮರೆಮಾಚಲು ಇರುವ ಏಕೈಕ ಮಾರ್ಗದಂತೆ ಕೆಲವರಿಗೆ ತೋರುತ್ತಿದೆ. ಹಾಗಾಗಿ ಪ್ರಜಾಪ್ರಭುತ್ವ ವಿಫಲ ಅಂತ ಕೆಲವರು ವ್ಯವಸ್ಥಿತವಾಗಿ ಮುಗ್ಧರನ್ನು ನಂಬಿಸಲು ಹೊರಟಿದ್ದಾರಾ? ಹಾಗಾದರೆ ಇದು ಸಂವಿಧಾನ ವಿರೋಯಲ್ಲವೇ? ಮಠಗಳು ಅಂತರ್ಜಾತಿ/ಧರ್ಮಗಳು ವೇದಿಕೆಯಾಗಬೇಕಾದ ಕಾಲದಲ್ಲಿ ಇದೆಂಥಾ ಬೆಳವಣಿಗೆ?

ಜಾತಿ ಹೆಸರಲ್ಲಿ ವಿಘಟಿತರಾದರೆ ಒಟ್ಟು ಸಮಾಜ ದುರ್ಬಲವಾಗುವುದಿಲ್ಲವೇ? ಇದರ ಅರ್ಥ ಯಾವುದೋ ಪ್ರಾಂತ್ಯ/ಧರ್ಮದ ಹೆಸರಲ್ಲಿ ಒಳಗಿನ ಎಲ್ಲ ಶೋಷಣೆಗಳನ್ನು ಅದುಮಿಟ್ಟುಕೊಂಡು ಒಂದಾಗಬೇಕು ಅಂತಲೂ ಅಲ್ಲ. ಹಾಗೆಯೇ ಪ್ರಜಾಪ್ರಭುತ್ವದ ಅಡಿ ಸಿಗುವ ಸೌಲಭ್ಯಗಳನ್ನು ಬೇರೆ ರೀತಿಯಲ್ಲಿ ಪಡೆಯುತ್ತೇವೆ ಎಂಬುದು ದೀರ್ಘಕಾಲ ಸಾಧ್ಯವೂ ಇಲ್ಲ.

ಆರ್ಥಿಕ ಸ್ವಾವಲಂಬನೆ ಜಾಗತಿಕ ಮಟ್ಟದಲ್ಲಿ ಜಾತಿ/ಧರ್ಮಗಳ ನಡುವಿನ ಅಂತರ ತಗ್ಗಿಸುತ್ತಿರುವಾಗ ಸಮೂಹ ಸನ್ನಿ ಎಂಬಂತೆ ಮಠಗಳ ಮಂತ್ರ ಪಠಿಸುವವರನ್ನು ನೋಡಿದರೆ, ಕುವೆಂಪು ಹೇಳಿದ ‘ಗುಡಿ/ಚರ್ಚ್/ಮಸ್ಜೀದುಗಳ ಬಿಟ್ಟು ಹೊರಬನ್ನಿ’ ಎಂಬ ಮಾತು ಎಷ್ಟೊಂದು ಅರ್ಥಪೂರ್ಣವಾಗಿತ್ತಲ್ಲವೇ?

೪ ಮಾರ್ಚ್ ೨೦೦೮ರ ವಿಜಯಕರ್ನಾಟಕ ಸಂಚಿಕೆಯಲ್ಲಿ ಪ್ರಕಟವಾಗಿದೆ. 

1 comment:

  1. sir blog chennagide, articals kooda sakat !

    ReplyDelete