ಹೆಜ್ಜೆ ಗೆಜ್ಜೆ :
ಈ ಬ್ಲಾಗ್ ನಲ್ಲಿರುವ ವಿಷಯ ಮತ್ತು ಚಿತ್ರಗಳ ಬಳಕೆಗೆ ಅನುಮತಿ ಕಡ್ಡಾಯ.
ಮತ್ತೊಂದು ಕ್ಷಣ ನನ್ನ ಬಗ್ಗೆ ಬದುಕು-ಬರಹ

Saturday 28 August 2010

ತುಂಗಭದ್ರಾ: ಈ ರೀತಿ ಫೋಟೋ ಎಂದಾದರೂ ಕಂಡಿದ್ದೀರಾ !?

 ಇದು ೨೦೦೫ರ ಆಗಸ್ಟ್ ೧೫ರಂದು ತೆಗೆದ ಹೊಸಪೇಟೆ ಬಳಿಯ ತುಂಗಭದ್ರಾ ಅಣೆಕಟ್ಟೆ ಚಿತ್ರ. ಈ ಚಿತ್ರ ತೆಗೆದ ಹಿನ್ನೆಲೆಯನ್ನು ಹೇಳಲೇಬೇಕು. ಸ್ಥಳೀಯವಾಗಿ ನಾವು ಲಾಂಚ್ ಮಾಡಲು ಉದ್ದೇಶಿಸಿದ್ದ ವಿಜಯ ಕರ್ನಾಟಕ ಪತ್ರಿಕೆಯ ‘ತುಂಗಭದ್ರಾ ವಿಜಯ’ದ ಮೊದಲ ಸಂಚಿಕೆಗೆ ಲೀಡ್ ಫೋಟೋ ಬೇಕಿತ್ತು. ವಾಡಿಕೆಯಂತೆ ತುಂಗಭದ್ರೆ ತುಂಬಿದರೆ ಆಗಸ್ಟ್ ೧೫ಕ್ಕೆ ಎಲ್ಲ ೩೩ ಕ್ರಸ್ಟ್  ಗೇಟುಗಳನ್ನೂ ತೆರೆದು ನದಿಗೆ ನೀರು ಬಿಡುತ್ತಾರೆ. ಅಂದು ಜನವೋ ಜನ, ಸಂಭ್ರಮ ಮುಗಿಲು ಮುಟ್ಟುತ್ತದೆ. ೩೩ ಕ್ರಸ್ಟ್  ಗೇಟ್‌ಗಳಿಂದ ಹೊರಬರುತ್ತಿರುವ ಚಿತ್ರ ತೆಗೆದು ಹಾಕುವುದು ಸಂಪ್ರದಾಯ. ನಮ್ಮ ಕಚೇರಿಯಲ್ಲಿದ್ದ ಏಳು ಮೆಗಾ ಪಿಕ್ಸೆಲ್‌ನ ಡಿಜಿಟಲ್ ಕ್ಯಾಮರಾ ಉಪಯೋಗಿಸಿ ವಿಕ್ಷಣಾ ಗೋಪುರದಿಂದ ಈ ಕೆಳಗಿನ ಚಿತ್ರ ತೆಗೆಯಲು ಯತ್ನಿಸಿದೆ. ಟ್ರೈಪಾಡ್ ಇಲ್ಲದೆ ಅ ಭಯಂಕರ ಗಾಳಿ, ಮಂಜು ಮುಸುಕಿದ ವಾತಾವರಣದಲ್ಲಿ ಈ ಫೋಟೋವನ್ನು ಪನೋರಮಾ ಟೆಕ್ನೋಲಜಿ ಉಪಯೋಗಿಸಿ ತೆಗೆಯಲಾಗಿದೆ.
ಪನೋರಮಾ: ಒಂದು ದೃಶ್ಯವನ್ನು ವಿಭಾಗ ಮಾಡಿಕೊಂಡು ಏಳೆಂಟು ಶಾಟ್‌ಗಳಲ್ಲಿ ಸೆರೆ ಹಿಡಿದು ಅದನ್ನು ಕಂಪ್ಯೂಟರ್‌ನಲ್ಲಿ ಕ್ಯಾಮರಾ ಕಂಪನಿ ಕೊಡುವ ಸಾಫ್ಟ್‌ವೇರ್ ಉಪಯೋಗಿಸಿ ಜೋಡಿಸುವುದು. ಪ್ರತಿ ಶಾಟ್ ತೆಗೆಯುವಾಗಲೂ ಅಲ್ಪ, ಸ್ವಲ್ಪ ಅಡ್ಡಡ್ಡವಾಗಿಯೋ, ಉದ್ದುದ್ದವಾಗಿಯೋ, ವ್ಯತ್ಯಾಸವಾದರೆ ಕ್ಯಾಮರ ಅದನ್ನು ಪ್ರತ್ಯೇಕ ಫೋಟೋ ಎಂದು ತಿಳಿದುಕೊಳ್ಳುತ್ತದೆ.  ಆದ್ದರಿಂದ ಮತ್ತೆ ಪ್ರಯತ್ನಿಸಬೇಕು. ಇದು ಈ ರೀತಿಯ ಫೋಟೋ ತೆಗೆಯುವಾಗ ಇರುವ ಚಾಲೆಂಜ್. ಅದೂ ಮೋಡದ ವಾತಾವರಣವಿರುವಾಗ ಸಿಗುವ ಕಡಿಮೆ ಬೆಳಕಲ್ಲಿ ಟ್ರೈಪಾಡ್ ಇಲ್ಲದೆಯೇ ಫೋಟೋಗ್ರಫಿಯ ಬಗ್ಗೆ ಆಳವಾದ ಜ್ಞಾನವಿಲ್ಲದೆ ತೆಗೆಯುವುದು ಇನ್ನೂ ಕಷ್ಟ. ಕೇವಲ ಪ್ರಯೋಗಾತ್ಮಕವಾಗಿ ಪ್ರಯತ್ನಿಸಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದ್ದೇನೆ ಅಂದುಕೊಂಡಿದ್ದೇನೆ. ಉಳಿದಂತೆ ತುಂಬಿ ತುಳುಕುತ್ತಿರುವ ತುಂಗಭದ್ರೆಯ ಕಲರವವನ್ನು ನನ್ನದೇ ಆಂಗಲ್‌ಗಳಲ್ಲಿ ಚಿತ್ರಿಸಿರುವುದನ್ನು ಇಲ್ಲಿ ಕೊಟ್ಟಿದ್ದೇನೆ ಕಣ್ತುಂಬಿಕೊಳ್ಳಿ.

Wednesday 11 August 2010

ವಂಚಿಸಿಬಿಟ್ಟೆಯಲ್ಲ ಗಾರುಡಿ


ಸುಚಿತ್ರ ಫಿಲ್ಮ್ ಸೊಸೈಟಿಯ ಆವರಣದಲ್ಲಿ ತಲೆ ಎತ್ತಿರುವ ಹೊಸ ಆಧುನಿಕ ಜೋಪಡಿಯಲ್ಲಿ ಕಿತ್ತಾನೆ ರಂಗಪ್ಪ ನಾಗರಾಜ (ಕಿರಂ) ತಮ್ಮ ‘ಲಾಸ್ಟ್ ಲೆಕ್ಚರ್’ ಮುಗಿಸಿ ಕೆಳಗಿಳಿಯಲು ಮೆಟ್ಟಿಲುಗಳ ಕಡೆಗೆ ಬರುತ್ತಿದ್ದರು. ಬಂದವರೆ ತಮ್ಮ ಚಪ್ಪಲಿಗಳಿಗಾಗಿ ಹುಡುಕಾಡಿದರು. ಚಪ್ಪಲಿಗಳು ಕೆಳಗಿರಬಹುದೆಂದುಕೊಂಡರೋ ಏನೋ? ಆಸರೆಗಿದ್ದ ಕಂಬಿ ಹಿಡಿದುಕೊಂಡು ಇಳಿಯುತ್ತಿದ್ದರು. ನಮಸ್ಕಾರ ಎಂದವನಿಗೆ ಪ್ರತಿ ನಮಸ್ಕಾರ ಹಾಕಿ ಮುಗುಳ್ನಕ್ಕರು. ಕಾರ್ಯಕ್ರಮಗಳು ಮುಗಿವ ಹಂತ ತಲುಪಿದ ಕೂಡಲೇ ಹೋಗಬೇಕೆಂದುಕೊಂಡವನು ಪರಿಚಿತರು ಸಿಗುತ್ತಾರೆ ಎಂಬ ಆಸೆಯಿಂದ ನಿಂತಿದ್ದೆ. ಹಾಗಾಗಿ ಕಿರಂ ಅವರ ಕೊನೆಯ ದರ್ಶನವಾಯಿತು.

ಉಪನ್ಯಾಸದಲ್ಲಿ ಅವರು ಮಾತನಾಡಿದ ರೀತಿ ಮತ್ತು ಗತ್ತನ್ನು ಕೇಳಿಸಿಕೊಂಡವರಿಗೆ ಅವರು ಸುಸ್ತಾಗಿರಬಹುದು ಎಂದು ಊಹಿಸಲೂ ಸಾಧ್ಯವಿರಲಿಲ್ಲ. ಉಪನ್ಯಾಸ ಮುಗಿದಾಗ , ‘ಸಂಚಯ’ದ ಪ್ರಹ್ಲಾದ್ ಮಾತನಾಡುತ್ತಾ, ‘ಕಿರಂ ಅವರಿಗೆ ಹುಷಾರಿರಲಿಲ್ಲ. ಅವರು ಕಾರ್ಯಕ್ರಮಕ್ಕೆ ಬಂದಾಗ ಅವರಲ್ಲಿ ಲವಲವಿಕೆ ಇರಲಿಲ್ಲ. ತುಂಬಾ ತೊಂದರೆಯಾದರೆ ಕಾರ್ಯಕ್ರಮ ರದ್ದು ಮಾಡೋಣ ಎಂದೆವು ಆದರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಇಷ್ಟೊಂದು ಚೆನ್ನಾಗಿ ಮಾತನಾಡಿದರು’ ಎಂದು ಕಿರಂ ಅವರಿಗೆ ಧನ್ಯವಾದ ಅರ್ಪಿಸಿದರು.  ಇದು ಅವರ ‘ಲಾಸ್ಟ್ ಲೆಕ್ಚರ್’ ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲದಷ್ಟು ಲವಲವಿಕೆಯಿಂದ ಅವರು ದಶಕಗಳಿಂದ ಚರ್ಚೆಯಾಗುತ್ತಿರುವ  ಬೇಂದ್ರೆಯವರ  ಜೋಗಿ ಪದ್ಯವನ್ನು ಕುರಿತು ಮಾತನಾಡಿದರು. ನಡುನಡುವೆ ಅವರ ಬೇರೆ ಪದ್ಯಗಳನ್ನೂ ಉದ್ಧರಿಸಿದರು. ಬೇಂದ್ರೆ ಈ ರೀತಿ ಬರೆಯಲು ಸಾಧ್ಯವಿಲ್ಲ ಎಂದು ಕಾವ್ಯದ ವಿಷಯವಾಗಿ ತಾವು ಒಪ್ಪದ ಕೆ.ಎಸ್. ನರಸಿಂಹಸ್ವಾಮಿ ಅವರ ನಾನು ನನ್ನ ಶಾರದೆ, ಪಗಡೆಯಾಡಬಾರದೆ ಎಂಬ ಪದ್ಯವೊಂದರ ಸಾಲುಗಳನ್ನು ಉಲ್ಲೇಖಿಸಿದರು. ಜೋಗಿ ಪದ್ಯದಲ್ಲಿರುವ ಪ್ರೇಮ -ಕಾಮದ ಸೆಳೆತಗಳ ಕುರಿತು ಈಗ ಹೆಚ್ಚು ಚರ್ಚಿಸುವುದಿಲ್ಲ ಎಂದ ಅವರು, ಮತ್ತೆ ಹೊಸ ರೂಪಕಗಳೊಂದಿಗೆ ಜೋಗಿಯನ್ನು ನಮ್ಮೆದುರಿಗೆ ತೆರೆದಿಟ್ಟರು. ಕಾವ್ಯಕ್ಕಿರುವ ಕಷ್ಟ ಮಾಯಿಸುವ  ಗುಣದ ಬಗ್ಗೆಯೂ ಮಾತನಾಡಿ, ಬೇಂದ್ರೆ ಪದ್ಯಗಳ ಬಗ್ಗೆ ಮಾತನಾಡಿ ಗುಣಮುಖನಾದೆ ಎಂದೂ ಚಟಾಕಿ ಹಾರಿಸಿದರು. ಇಂಥದೇ ಪದ್ಯದ ಬಗ್ಗೆ ಮಾತನಾಡಬೇಕೆಂದು ಯಾರಾದರೂ ಸೂಚಿಸಿದರೆ ಮುಂದಿನ ಉಪನ್ಯಾಸದಲ್ಲಿ ಮಾತನಾಡುವುದಾಗಿ ತಿಳಿಸಿ ಉಪನ್ಯಾಸ ಮುಗಿಸಿದ್ದರು.

ಅವರ ಮಾತುಗಳ ಗುಂಗಿನಲ್ಲೇ ಮನೆಗೆ ಬಂದು, ಒಂಬತ್ತೂವರೆ ಹೊತ್ತಿಗೆ ಎಂದೂ ಮಲಗದ ನಾನು, ಅಂದು ದಿಂಬಿನ  ಕೆಳಗೆ ಮೊಬೈಲ್ ಇಟ್ಟುಕೊಂಡು ಮಲಗಿದ್ದುದರಿಂದ, ಕಿರಂ ಅವರ ಜತೆಗೆ ಅವರ ಕೊನೆ ಕ್ಷಣಗಳಲ್ಲಿ ಇರಬೇಕಾದ ಸಂದರ್ಭದಿಂದ ವಂಚಿತನಾದೆ. ಬೆಳಗ್ಗೆ ಪತ್ರಿಕೆ ಬರುವುದಕ್ಕೆ ಹತ್ತು ನಿಮಿಷದ ಮುಂಚೆ  ಅವರ ಉಪನ್ಯಾಸದ ಕುರಿತು ನಮ್ಮ ಮನೆಯವರೊಂದಿಗೆ ಮಾತನಾಡಿದ್ದೆ. ಇದು ಅವರು ಹತ್ತಿಸಿದ್ದ ಗುಂಗು. ಪತ್ರಿಕೆ ನೋಡಿದರೆ ಕಿರಂ ಇನ್ನಿಲ್ಲ ಎಂಬ ಸುದ್ದಿ. ಚಡಪಡಿಸಿ ಮೊಬೈಲ್ ತೆಗೆದು ನೋಡಿದರೆ ಹತ್ತಾರು ಮಿಸ್ಡ್ ಕಾಲ್‌ಗಳು, ನಾಲ್ಕೈದು ಮೆಸೇಜ್‌ಗಳು ಇದ್ದವು. ಇದೆಲ್ಲಾ ಕಣ್ಣುಮುಚ್ಚಿ ತೆರೆಯುವುದರೊಳಗೆ ನಡೆದಂತಾಯಿತು.

ಸಾಹಿತ್ಯದ ವಿಷಯವಾಗಿ ಶ್ರೇಷ್ಠರಾಗಿಯೂ ಶ್ರೇಷ್ಠತೆಯ ವ್ಯಸನವಿಲ್ಲದ ಕಿರಂ, ಎಲ್ಲರಿಗಿಂತ ಭಿನ್ನ ಎಂದರೆ ಖಂಡಿತವಾಗಿ ಕ್ಲೀಷೆಯಲ್ಲ. ವೈಯಕ್ತಿಕವಾಗಿ ಯಾರನ್ನೂ ದೂರದ, ಎಲ್ಲರನ್ನೂ ತಾತ್ವಿಕವಾಗಿಯೇ ಎದುರಿಸುತ್ತಿದ್ದ ಕಿರಂ ಅವರಿಗೆ ಹಮ್ಮು -ಬಿಮ್ಮು ಗೊತ್ತಿರಲಿಲ್ಲ ಎಂದೇ ಹೇಳಬೇಕು. ಅವರ ಪ್ರತಿಕ್ರಿಯೆಗಳು ತುಂಬಾ ಉದಾತ್ತವಾಗಿರುತ್ತಿದ್ದವು. ಹಾಗಾಗಿ ಕ್ಷುಲ್ಲಕ ಪ್ರತಿಕ್ರಿಯೆಗಳು ಮತ್ತು ಕೊಂಕು - ಈರ್ಷೈಗಳಿಗೆ ಅವಕಾಶವಿರಲಿಲ್ಲ. ಕಿರಂ ಅವರ ಭೇಟಿ, ಸಂಪರ್ಕ ಎಲ್ಲರಿಗೂ ಸಾಧ್ಯವಿದ್ದುದರಿಂದಲೇ ಅವರು ಸಾಹಿತ್ಯದ ಅದರಲ್ಲೂ ಕಾವ್ಯದ ಸಾವಿರಾರು ವಿದ್ಯಾರ್ಥಿಳಿಗೆ ದ್ರೋಣಾಚಾರ್ಯರಾಗಿದ್ದರು. ಇತ್ತೀಚೆಗಂತೂ ಸಾಹಿತ್ಯದ ಜಿಜ್ಞಾಸೆಗಳು ಬಂದಾಗಲೆಲ್ಲಾ ಕಿರಂ ಇದ್ದಾರಲ್ಲ ಕೇಳಿದರಾಯಿತು ಎಂಬ ಮಾತುಗಳು ಹೆಚ್ಚಾಗಿದ್ದವು. ಅಷ್ಟರಮಟ್ಟಿಗೆ ಕಿರಂ ಹೇಳಿದರೆ ಅಕೃತ ಎಂಬ ಸನ್ನಿವೇಶ ಸೃಷ್ಟಿಯಾಗಿತ್ತು. ಕಿರಂ ಇದ್ದಾರಲ್ಲ ಎಂಬ ಧೈರ್ಯವೇ ನಮಗೆಲ್ಲ ಸಾಕಾಗಿತ್ತು. ಏಕ ಕಾಲಕ್ಕೆ ಗೆಳೆಯ, ಮೇಷ್ಟ್ರು, ಅಜ್ಜ ಎಲ್ಲ ಆಗಬಹುದಾದ ಸಾಧ್ಯತೆ ಕಿರಂ ಅವರಿಗಿತ್ತು.

ನಮ್ಮಂಥವರ ಸಾಂಗತ್ಯದಲ್ಲಿದ್ದಾಗ ಸಾಮಾನ್ಯವಾಗಿ ಸಾಹಿತ್ಯೇತರ ವಿಷಯಗಳಿಗೆ ಸ್ಥಾನವಿರುತ್ತಿರಲಿಲ್ಲ ಎನ್ನುವುದು ನನ್ನ ಅನುಭವ ಮತ್ತು ತಿಳಿವಳಿಕೆ. ಎಲ್ಲ ಹೊಸಬರನ್ನೂ ಅತ್ಯಂತ ಶ್ರದ್ಧೆಯಿಂದ ಓದಿ ಪ್ರತಿಕ್ರಿಯಿಸುತ್ತಿದ್ದ ಕಿರಂ ಅವರಿಗೆ ಕಿಂದರ ಜೋಗಿ, ಗಾರುಡಿ, ಆಧುನಿಕ ಸೂಫಿ ಸಂತ ಮುಂತಾದ ಅನ್ವರ್ಥಗಳಿದ್ದವು. ಕೆಲವರಂತೂ ಅವರನ್ನು ಅವ್ವಾ ಎಂದೇ ಕರೆಯುತ್ತಿದ್ದರು. ಇವೆಲ್ಲಕ್ಕೂ ಅವರು ಅರ್ಹರಾಗಿದ್ದರು.  ಸಮಕಾಲೀನತೆ ಕಿರಂ ವಿಶೇಷತೆ. ಅವರು ಯಾವಾಗಲೂ ಎಲ್ಲ ವಿಷಯಗಳ ಬಗೆಗೂ ಪ್ರಸ್ತುತವೇ ಆಗಿದ್ದರು. ಕಿರಂ ಅವರ ಮುಂದೆ ಏನೋ ಗೊತ್ತಿದೆ ಎಂದು ತೋರಿಸಿಕೊಳ್ಳುವ ಸಾಹಸಕ್ಕೆ ಯಾರೂ ಕೈ ಹಾಕುತ್ತಿರಲಿಲ್ಲ. ಕಂಪ್ಯೂಟರ್‌ನಿಂದ ಹಿಡಿದು ಐಪಾಡ್‌ವರೆಗೆ, ಥಿಯರಿ ಆಫ್ ರಿಲೇಟಿವಿಟಿಯಿಂದ ಹಿಡಿದು ಕೃಷ್ಣ ಕುಳಿಗಳ (ಬ್ಲ್ಯಾಕ್ ಹೋಲ್ಸ್) ಗಳವರೆಗೆ ಕಿರಂ ಮಾತಾಡಬಲ್ಲವರಾಗಿದ್ದರು. ಅವರಲ್ಲಿ ಒಂದು ಬಿಂದುವನ್ನೂ ಅಹಂಕಾರದ ರೂಪದಲ್ಲಿ ಕಾಣಲು ಸಾಧ್ಯವಿರಲಿಲ್ಲ. ಎಲ್ಲವನ್ನೂ ಹೊಸ ಹೊಳಹಿನಿಂದ ಹೇಳುವ ಶಕ್ತಿ ಅವರಿಗಿತ್ತು. ಇತರರು, ಅರೆರೆ ಇದು ತಮಗೆ ಹೊಳೆಯಲೇ ಇಲ್ಲವಲ್ಲ ಎಂಬಂತೆ ಎಲ್ಲರನ್ನೂ ಚಕಿತಗೊಳಿಸುತ್ತಿದ್ದರು. ಒಟ್ಟೂ ಸಾಹಿತ್ಯದ ಅನನ್ಯತೆಯನ್ನು ಕಿರಂ ಅನನ್ಯತೆಯಿಂದಲೇ ವ್ಯಾಖ್ಯಾನಿಸುತ್ತಿದ್ದರು. ಹಾಗಾಗಿ ಕಿರಂ ದನಿಗೆ ಪ್ರತಿ ಬಾರಿಯೂ ಹೊಸತನ ಮತ್ತು ಸಮಕಾಲೀನತೆ ಇದ್ದವು. ಕಾವ್ಯಕ್ಕೆ ಕಾಲವಿಲ್ಲ. ಕಾವ್ಯ ಎಲ್ಲ ಅರ್ಥಗಳನ್ನೂ ಒಳಗೊಂಡ ವಿಶ್ವಕೋಶದಂತೆ ಎನ್ನುವುದು ಕಿರಂ ಅವರ ಪ್ರಬಲ ಪ್ರತಿಪಾದನೆಯಾಗಿತ್ತು.

ಕಿರಂ ಅವರು ಕೈಲಾಸಂ ಮತ್ತು ಸ್ವಾಮಿ ವೆಂಕಟಾದ್ರಿ ಅಯ್ಯರ್ (ಸಂಸ) ಅವರಂಥ ಘನ ವ್ಯಕ್ತಿತ್ವಗಳ ಕೊಂಡಿ. ಸಂಸ ಅವರಂತೆ ಕಿರಂ ಅವರಿಗೆ ಯಾವುದೇ ಫೋಬಿಯಾಗಳು  ಇರಲಿಲ್ಲವಾದರೂ  ಶಿಸ್ತು, ಅಚ್ಚುಕಟ್ಟುಗಳ ಕೊರತೆ, ಅಸ್ತವ್ಯಸ್ತತೆ ಇದ್ದೇ ಇದ್ದವು.ಆದರೆ ಇಂಥವೇ ಗುಣಗಳು ಕಿರಂ ಅವರು ಎಲ್ಲರೊಂದಿಗೆ ಬೆರೆಯಲು ಸಾಧ್ಯವಾಗಿಸಿದವು ಎನ್ನುವವರಿದ್ದಾರೆ. ಅವರ ಅನೇಕ ಪ್ರತಿಕ್ರಿಯೆಗಳು ಏಕ ಕಾಲದಲ್ಲಿ ಸಾಹಿತ್ಯ, ಸಂಸ್ಕೃತಿ, ರಾಜಕೀಯ ಮತ್ತು ಸಮಾಜದ ಎಲ್ಲ ಆಯಾಮಗಳನ್ನೂ  ಪ್ರತಿನಿಸುವ ಅದ್ವೈತದಂತೆ  ಇದ್ದವು. ಇವೆಲ್ಲ ಕಿರಂ ನಮ್ಮನ್ನೆಲ್ಲಾ ಆವರಿಸಿದ್ದ ಪರಿಯಿಂದ ಆದ ಬೆಳವಣಿಗೆಗಳು. ಇತ್ತೀಚೆಗೆ ಅವರು ಕಿರಿಯರನ್ನು ಕಟುವಾಗಿ ವಿಮರ್ಶಿಸುತ್ತಿಲ್ಲ ಎಂಬ ದೂರುಗಳೂ ಇದ್ದವು. ಅದು ಮಾಗಿದ ಜೀವದ ಇನ್ನೊಂದು ಆಯಾಮವಿರಬಹುದು. ಒಬ್ಬ ಹೊಸಬನ ಸಾಹಿತ್ಯದಲ್ಲಿ ಅವನು ಬೆಳೆಯಬಹುದಾದ ಒಂದು ಪ್ರಬಲ ಎಳೆ ಇದ್ದರೂ ಕಿರಂ ಅವನ ಪರ ನಿಲ್ಲುತ್ತಿದ್ದರು. ಹಾಗಂತ ಇದನ್ನು ರಿಯಾಯಿತಿ ಎಂದು ಯಾರೂ ಭಾವಿಸಬೇಕಿರಲಿಲ್ಲ. ಅವರು ಪ್ರಬಲವಾಗಿ ವಕ್ತಾರಿಕೆ ವಹಿಸಿದ ಯಾರೂ ಕಳಪೆ ಬರಹಗಾರರಲ್ಲ.

ಅವರ ಸರಳತೆ ಮತ್ತು ಮಗುತನಗಳಿಗೆ ಸಾಕ್ಷಿಯಾಗಿದ್ದ ಎರಡು ಘಟನೆಗಳನ್ನು ಉಲ್ಲೇಖಿಸಬಹುದು ಎಂದುಕೊಂಡಿದ್ದೇನೆ. ಒಮ್ಮೆ ಹಿರಿಯ ಬರಹಗಾರರೊಬ್ಬರ ಅಭಿನಂದನಾ ಸಮಾರಂಭದಲ್ಲಿ ನಡೆದ ಕವಿಗೋಷ್ಠಿ ಅಧ್ಯಕ್ಷತೆಯನ್ನು ಕಿರಂ ವಹಿಸಿದ್ದರು. ಸಭೆಯಲ್ಲಿ ಕವಿತೆ ವಾಚಿಸಿದವರಲ್ಲಿ ಬಹುತೇಕರು ಅಭಿನಂದಿತರ ಸಮಕಾಲೀನರೇ ಆಗಿದ್ದರು. ಎಲ್ಲರದೂ ಬಹುಪರಾಕ್ ಕವನಗಳೆ. ಸಮಾರಂಭ ಮುಗಿದ ಮೇಲೆ ಕಿರಂ ರಸ್ತೆ ಕಡೆಗೆ ನಡೆದು ಬರುತ್ತಿದ್ದರು. ಹೆಗಲಲ್ಲಿ ಬ್ಯಾಗಿತ್ತು. ಮನೆಗ ಸಾರ್ ಎಂದೆ. ಹೌದು ಆಟೋದಲ್ಲಿ ಹೋಗುತ್ತೇನೆ ಎಂದರು. ಮನೆಗೆ ಬಿಡುತ್ತೇನೆ ಎಂದು ನನ್ನ ಗಾಡಿಯಲ್ಲಿ ಕುಳ್ಳಿರಿಸಿಕೊಂಡು ಹೊರಟೆ. ದಾರಿಯಲ್ಲಿ ಕವಿಗೋಷ್ಠಿ ಹೇಗಿತ್ತು ಸಾರ್ ಎಂದೆ. ಮಾರ್ಮಿಕವಾಗಿ ನಗುತ್ತಾ ‘ಅಭಿನಂದನಾ ಸಮಾರಂಭ ಅಲ್ವೆ ’ ಎಂದರು.


ಇನ್ನೊಂದು ದಿನ ಸಂಜೆ ಅವರ ಮನೆಗೆ ನಾನು, ನಾಗತಿಹಳ್ಳಿ ರಮೇಶ್ ಮತ್ತು ರಾಮಲಿಂಗಪ್ಪ ಟಿ. ಬೇಗೂರು ಹೋದೆವು. ಮನೆಯಲ್ಲಿ ಅವರು ಮತ್ತು ಅವರ ಕೊನೆ ಮಗಳು ಚಂದನ ಮಾತ್ರ ಇದ್ದರು. ಒಂದೆರಡು ಗಂಟೆ ಹರಟೆ ಹೊಡೆದೆವು.ಆಗ ಸುಮಾರು ಒಂಬತ್ತೂವರೆ ಆಗಿತ್ತು. ರಾತ್ರಿ ಒಮ್ಮೆ ಮನೆಗೆ ಬಂದ ಮೇಲೆ ಹೊರ ಹೋಗುತ್ತಿರಲಿಲ್ಲವೆಂದು ಕಾಣುತ್ತದೆ. ನಾವು ಹೊರಡಲು ಅನುವಾಗಿ ಸಾರ್ ಬರುತ್ತೀರಾ ಅಂದೆವು.  ಮೊದಲೇ ಹೇಳಬಾರದೇನ್ರಯ್ಯಾ ಎಂದು ಗೊಣಗಿ, ತಮ್ಮ ಮಗಳನ್ನು ಕರೆದು, ಮಗೂ ನೀನು ಊಟ ಮಾಡಿ ಮಲಗಿಕೋ ನಾವು ಇಲ್ಲೇ ಇವರ ಕಾರಲ್ಲಿ ಕೂತು ಮಾತನಾಡುತ್ತೇವೆ ಎಂದು ಹೇಳಿದರು.  ಕಾರಲ್ಲಿ ಇದ್ದ ಮಾಲನ್ನು ನೋಡಿ ಛೇ ಇದೇನ್ರಯ್ಯಾ ಇರಿ ಬರ್‍ತೀನಿ ಅಂತ ಅಂಗಡಿ ಕಡೆ ಹೋದರು. ಜೇಬಲ್ಲಿ ದುಡ್ಡು ತಂದಿರಲಿಲ್ಲ. ಮತ್ತೆ ಮನೆಗೆ ಹೋಗಿ ದುಡ್ಡು ತರುವುದಾಗಿ ಹಠ ಹಿಡಿದರು. ನಾವು ಎಷ್ಟು ಹೇಳಿದರೂ ಕೇಳಲಿಲ್ಲ. ನಾವು ಮನೆಗೆ ಹೋಗುವುದು ಬೇಡ ಎಂದರೂ ಕೇಳದೆ ನಮಗೂ ಕೊಡಲು ಬಿಡದೆ ದುಡ್ಡು ತಂದು ತಮ್ಮ ಇಷ್ಟದ ಬ್ರ್ಯಾಂಡ್ ತಂದೇಬಿಟ್ಟರು. ಸರಿ, ಕಾರಲ್ಲೇ ಸಮಾರಾಧನೆ ಶುರುವಾಯಿತು. ‘ಏ ರಾಮಲಿಂಗಪ್ಪ ಕಾರ್ ಓಡುಸ್ರಿ, ಯಾವನಾರ ಪೋಲೀಸ್ನೋನು ಗಲಾಟೆ ಮಾಡಿದ್ರೆ ಅಕ್ಕ-ಪಕ್ಕದೋರ್‍ಗೆ ತೊಂದ್ರೆ ಆಗುತ್ತೆ’ ಎಂದರು.

ಈ ನಡುವೆಯೇ ಆಗ ನಮ್ಮ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಬರುತ್ತಿದ್ದ ಮತಾಂತರ ಕುರಿತ ಚರ್ಚೆಗೆ  ಅಂದು ಪ್ರತಿಕ್ರಿಯಿಸಿದ್ದ ಜೆಡಿಎಸ್ ವಕ್ತಾರ ವೈಎಸ್‌ವಿ ದತ್ತ ಅವರ ಜತೆ ಲೇಖನದ ಬಗ್ಗೆ ದೀರ್ಘವಾಗಿ ಜಂಗಮವಾಣಿಯಲ್ಲಿ ಮಾತಾಡಿದರು. ಗಲ್ಲಿಗಲ್ಲಿಗಳಲ್ಲಿ ರಾಮಲಿಂಗಪ್ಪ ಕಾರನ್ನು ನಿಧಾನಕ್ಕೆ ಓಡಿಸುತ್ತಿದ್ದರೆ, ಇತ್ತ ಗುರುಗಳು ಗಟ ಗಟ ಕುಡಿದು ಮಗುವಿನಂತೆ ಒಂದು ಅಬೋದ ನಗೆ ನಕ್ಕರು. ಆಗ ತಾನೆ ಹಾಲು ಕುಡಿದು ನಕ್ಕ ಮಗುವಿನಂಥ ತೃಪ್ತಿ ಅವರ ಕಣ್ಣುಗಳಲ್ಲಿತ್ತು. ಇನ್ನೂ ಆಗಿಲ್ಲವೆ ಎಂದು ನಮ್ಮತ್ತ ನೋಡಿದರು. ನಾವು ವೈನು, ಬೀರನ್ನು ಕುಡಿಯಲು ಒದ್ದಾಡುತ್ತಿದ್ದನ್ನು ನೋಡಿ ಬೇಗ ಮುಗುಸ್ರಯ್ಯಾ ಎಂದು ಅವಸರಿಸಿದರು.

ಇಂತ ಗುರುಗಳು ಈಗ ಕೇವಲ ನೆನಪು ಮಾತ್ರ. ಮರೆತೇನೆಂದರೆ ಮರೆಯಲಿ ಹ್ಯಾಂಗ !?