ಹೆಜ್ಜೆ ಗೆಜ್ಜೆ :
ಈ ಬ್ಲಾಗ್ ನಲ್ಲಿರುವ ವಿಷಯ ಮತ್ತು ಚಿತ್ರಗಳ ಬಳಕೆಗೆ ಅನುಮತಿ ಕಡ್ಡಾಯ.
ಮತ್ತೊಂದು ಕ್ಷಣ ನನ್ನ ಬಗ್ಗೆ ಬದುಕು-ಬರಹ

Saturday 26 June 2010

ಎನ್ಕೆ ಎಂಬ ನಮ್ಮ ಗೆಳೆಯ ಹನುಮಂತಯ್ಯನ ನೆನೆದು


ತೊಂಬತ್ತರ ದಶಕದಲ್ಲಿ ತಿಪಟೂರಿನ ಸಾಂಸ್ಕೃತಿಕ ಲೋಕ ಪ್ರಜ್ವಲಿಸುತ್ತಿತ್ತು. ಅಭಿನಯದ ಸಿದ್ಧಗಂಗಯ್ಯ ಕಂಬಾಳು, ಪ್ರೊಥಿಯೋದ ನಟರಾಜ ಹೊನ್ನವಳ್ಳಿ, ಡೈರಿ ನಾಗರಾಜ್ ಮುಂತಾದ ಹಿರಿಯರ ಸಾಥ್ನಿಂದ, ನೀನಾಸಂ ತಿರುಗಾಟದ ನಾಟಕಗಳು, ನಮ್ಮೆಲ್ಲರ ಸೂರ್ತಿ ಕೇಂದ್ರದಂತಿದ್ದ, ಸುಮಾರು ಇಪ್ಪತ್ತು ವರ್ಷ ಆಸ್ಪತ್ರೆಯಲ್ಲೇ ಮಲಗಿ ಬರೆಯುತ್ತಿದ್ದ ಕವಿ ಷಡಕ್ಷರಿ, ಇವರನ್ನು ನೋಡಲು ಬರುತ್ತಿದ್ದ ಬೆಳಗೆರೆ ಕೃಷ್ಣಶಾಸ್ತ್ರಿಗಳು, ಕಲ್ಪತರು, ಪಲ್ಲಾಗಟ್ಟಿ ಕಾಲೇಜಿನ ಮೇಷ್ಟ್ರುಗಳಾದ ಕೆ.ಆರ್. ಬಸವರಾಜು, ಟಿ.ಕೆ. ಶಿವಣ್ಣ, ಚನ್ನಬಸವಣ್ಣ, ಎಸ್. ತಮ್ಮಾಜಿರಾವ್, ರೇಣುಕಾರ್ಯ, ಟಿ.ಎಸ್. ನಾಗರಾಜಶೆಟ್ಟಿ, ಸಿದ್ದಗಂಗಯ್ಯ ಹೊಲ್ತಾಳ್, ಜಿ.ಎಸ್. ರಮೇಶ್, ಎನ್.ಪಿ. ನಾಗರಾಜು ಮಂತಾದ ಅನೇಕರ ಭಾಗವಹಿಸುವಿಕೆ ಜತೆಗೆ ವಿದ್ವಾನ್ ನಂಜುಂಡಾಚಾರ್ ಅವರ ಸಂಗೀತ ಪಾಠಗಳು, ನಟರಾಜ ನೃತ್ಯಶಾಲೆಯ ನಳಿನಾ ಅವರ ನಾಟ್ಯ, ಸಂಗೀತ ಪ್ರಯೋಗಗಳು, ಗೌಡನಕಟ್ಟೆ ತಿಮ್ಮಯ್ಯ ಮಾರ್ಗದರ್ಶನದ ಅಬ್ಬಿನಹೊಳೆ ಸುರೇಶ್ ನಾಯಕತ್ವದ ಕವಿಬಳಗ, ಷಡಕ್ಷರ ದೇವರ ನೇತೃತ್ವದ ವಿಜ್ಞಾನ, ಪರಿಸರದ ಕುರಿತ ಸಭೆಗಳಿಂದ ಹದಗೊಂಡಿದ್ದ  ತಿಪಟೂರಿನ ಸಾಂಸ್ಕೃತಿಕ  ಕ್ಷಿತಿಜ ನಮಗೋಸ್ಕರವೇ ಸೃಷ್ಟಿಯಾದಂತಿತ್ತು.

ನಮ್ಮ ಕಾಲೇಜಿನ ಹಳೇ ವಿದ್ಯಾರ್ಥಿಗಳಾದ ನಟರಾಜ್ ಹುಳಿಯಾರ್, ಎಸ್. ಗಂಗಾಧರಯ್ಯ, ಕೃಷ್ಣಮೂರ್ತಿ ಬಿಳಿಗೆರೆ ಮುಂತಾದವರ ಒಡನಾಟದಲ್ಲಿ ನನ್ನ ತಲೆಮಾರಿನ ಎನ್.ಕೆ. ಹನುಮಂತಯ್ಯ, ಪಿ. ಮಂಜುನಾಥ, ಉಗಮ ಶ್ರೀನಿವಾಸ, ಆಲೂರು ದೊಡ್ಡನಿಂಗಪ್ಪ, ಸತೀಶ್, ಹಳ್ಳಿ ಸುರೇಶ, ಎನ್.ಎಸ್. ಶೈಲಜಾ, ಎಚ್.ಡಿ ಸುನೀತಾ, ಬಿ.ಎಸ್. ಜಯಪ್ರಕಾಶ್ನಾರಾಯಣ, ಬಿಎಸ್. ವೆಂಕಟೇಶ್ಪ್ರಸಾದ್, ಹಾಲ್ಕುರಿಕೆ ಶಿವಶಂಕರ, ಮಲ್ಲಿಕಾರ್ಜುನ ಮತಿಘಟ್ಟ, ಕಂಪಾರಹಳ್ಳಿ ಶಾಂತಾ, ಎಸ್. ವಿಷ್ಣುಕುಮಾರ್ ಮುಂತಾದವರಿದ್ದ ತಂಡ, ಅವಕಾಶ ಸಿಕ್ಕಿದರೆ ಆಕಾಶಕ್ಕೇ ತೂತು ಹೊಡೆಯುತ್ತೇವೆ ಎಂಬ ಉಮೇದಿನಿಂದ ಬೀಗುತ್ತಿತ್ತು.  

೧೯೯೭-೯೮ರಲ್ಲಿ ನಾನೂ ಮತ್ತು ಹನುಮಂತಯ್ಯ ತುಮಕೂರಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಒಂದು ವರ್ಷ ಒಂದೇ ರೂಮಿನಲ್ಲಿದ್ದುಕೊಂಡು ಕೆಲಸ ಮಾಡಿದೆವು. ಹನುಮಂತಯ್ಯನ ಕೀಳರಿಮೆ, ಆತ್ಮವಿಶ್ವಾಸಗಳ ಆಳ, ಅಗಲಗಳ ಪರಿಚಯ ನನಗಾಗ ಚೆನ್ನಾಗಿ ಆಯಿತು. ಅವನ ಪ್ರತಿ ನಡೆಯೂ ಕಾವ್ಯಾತ್ಮಕವಾಗಿತ್ತು. ರಾತ್ರಿ ೧೧ ಗಂಟೆಗೆ ಮುಗಿಯುತ್ತಿದ್ದ ಪತ್ರಿಕೆ ಕೆಲಸದ ನಂತರ, ಅವನು ಎಂ.ಎ ಓದುವಾಗ ಇದ್ದ ಹಾಸ್ಟೆಲಿನ ಕಿರಿಯ ಸಹಪಾಠಿಗಳ ಕೊಠಡಿಗಳ ಟೆರೇಸಿನ ಮೇಲೆ ಕಂಬಾರರ  ಈವರೆಗಿನ ಹೇಳತೇನ ಕೇಳಾ ಸಂಕಲನ ಮತ್ತು ಕೆ.ಬಿ ಸಿದ್ದಯ್ಯನವರ ಬಕಾಲಗಳನ್ನು ನಾವು ಎತ್ತರದ ಧ್ವನಿಯಲ್ಲಿ ದಿನಗಳ ಲೆಕ್ಕದಲ್ಲಿ ಓದಿದ್ದು ಇನ್ನೂ ನಿನ್ನೆ, ಮೊನ್ನೆ  ನಡೆದಂತಿದೆ. ಜೊತೆಗಿದ್ದವರಿಗೆ ಒಮ್ಮೆಯೂ ಬೋರು ಹೊಡೆಸದ ಸದಾ ನವನವೀನ ವ್ಯಕ್ತಿತ್ವ ಅವನದು. 

ರಾತ್ರಿ ಎಷ್ಟೊತ್ತಿಗಾದರೂ ಮಲಗಲಿ, ಬೆಳಗ್ಗೆ ಐದಕ್ಕೆಲ್ಲಾ ಎದ್ದುಬಿಡುತ್ತಿದ್ದ. ಎದ್ದವನೇ ಮೂಲೆಯಲ್ಲಿದ್ದ  ಖಂಜರ ಅಥವಾ ಢಕ್ಕಿಯನ್ನು ಕೈಗೆತ್ತಿಕೊಂಡನೆಂದರೆ ಕನಿಷ್ಠ ಒಂದು ಗಂಟೆಯವರೆಗೆ ಅವನ ತತ್ವಪದಗಳು, ಭಾವಗೀತೆಗಳಿಗೆ  ಅಡೆತಡೆಯೇ ಇರುತ್ತಿರಲಿಲ್ಲ. ಅವನ ಈ ಜೋಗುಳಗಳನ್ನು ಕೇಳುತ್ತಾ ಮಲಗುವ ಸುಖ ನನ್ನದಾಗಿತ್ತು. ಬೆಳಗಿನ ಅಡುಗೆ ಕೆಲಸ ನನ್ನ ಪಾಳಿಯಾಗಿದ್ದರಿಂದ ಆಗಾಗ ನನ್ನ ಕತ್ತಿನ ಕೆಳಗೆ ಕೈ ಹಾಕುತ್ತಾ ಏ ಮರಿ ಎಳ್ಲಾ, ಎದ್ದಳಲೋ.., ಎನ್ನುತ್ತಾ ತನ್ನ ಹಾಡುಗಳನ್ನು ಮುಂದುವರಿಸುತ್ತಲೇ ಇದ್ದ.  ಇಂಥದೇ ದಿನಗಳನ್ನು ಕಳೆಯುತ್ತಿದ್ದಾಗ ಅವನು ಒಮ್ಮೆಲೇ ಹಂಪಿ ವಿವಿಗೆ ಪಿಎಚ್ಡಿ ಮಾಡುತ್ತೇನೆ ಅಂತ ಹೊರಟಾಗ ನಾನಂತೂ ಸಣ್ಣ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ್ದೆ. 

ಅದು ಗಣೇಶ ಚತುರ್ಥಿ ಸಮಯ. ಹೊಸ ಬಟ್ಟೆ, ಚಪ್ಪಲಿ ಕೊಳ್ಳಬೇಕೆಂಬ ಹಂಬಲ ಬಂತು. ತಿಪಟೂರಿನಿಂದ ಗೆಳೆಯ ಸತೀಶ ಹಬ್ಬಕ್ಕೆ ತಿಪಟೂರಿಗೆ ಬರಬೇಕೆಂದು ಫೋನ್ ಮಾಡಿದ. ಆ ಸಂದರ್ಭದಲ್ಲಿ ಸತೀಶನ ಅಕ್ಕ ನಳಿನಾ ಅವರ ನಟರಾಜ ನೃತ್ಯಶಾಲೆಯ ಕಾರ್ಯಕ್ರಮ ಇದ್ದಂತಿತ್ತು. ಸಂಬಳವನ್ನು ಪ್ರಜಾಪ್ರಗತಿ ಪತ್ರಿಕೆಯ ಮ್ಯಾನೇಜರ್ ಚಿಕ್ಕೀರಪ್ಪನಿಂದ ಪಡೆದು(ಕಸಿದು)ಕೊಂಡವರೇ ತುಮಕೂರಿನ ಎಂಜಿ ರೋಡಿಗಿಳಿದೆವು. ನಮ್ಮ ಬಜೆಟ್ಗೆ ಹೊಸ ಬಟ್ಟೆ ನಿಲುಕದ ನಕ್ಷತ್ರವಾಗಿದ್ದವು. ಅಲ್ಲಿಯೇ ಕಂಡ ಹಳೇ ಬಟ್ಟೆ ಅಂಗಡಿಗೆ ನುಗ್ಗಿ ಇಬ್ಬರೂ ಸ್ಲ್ಯಾಗು ಮತ್ತು ಜೀನ್ಸ್ ಪ್ಯಾಂಟುಗಳನ್ನು ಕೊಂಡೆವು. ನಂತರ ಬೂಟು ಕೊಳ್ಳುವ ಉಮೇದು. ಅವೂ ಕೂಡ ಹಳೆಯವೇ. ಹನುಮಂತನಿಗೆ ಸರಿಯಾದ ಜತೆ ಸಿಕ್ಕಿತು. ನನಗೆ ಮಾತ್ರ ಸ್ವಲ್ಪ ದೊಡ್ಡದಾದ ಚಾರ್ಲಿಚಾಪ್ಲಿನ್ ಮಾದರಿಯ ಶೂ ಸಿಕ್ಕಿದವು. ಬೆಲ್ಟ್ಗಳನ್ನೂ ಕೊಂಡೆವು. ತಿಪಟೂರಿಗೆ ಹೋಗಿ ಹಾಕಿಕೊಳ್ಳೋಣ ಎಂದರೆ ಹನುಮಂತಯ್ಯನಿಗೆ  ತಾಳ್ಮೆಯೇ ಇಲ್ಲ. ಅದೇ ರಸ್ತೆಯ ಪಕ್ಕದ ಬಟಾಬಯಲಿನ ಸೈಟ್ನಲ್ಲೇ ಬಟ್ಟೆ ಬದಲಾಯಿಸಿಕೊಂಡೆವು. ಒಬ್ಬರನ್ನು ಇನ್ನೊಬ್ಬರು ಹೊಗಳಿಕೊಂಡೆವು. ನೃತ್ಯಶಾಲೆಯ ಹುಡುಗಿಯರೆಲ್ಲಾ ತಮ್ಮನ್ನೇ ನೋಡುವುದಾಗಿ ನಾವೇ ಬೀಗಿಕೊಂಡೆವು. ಅಸಡಾ-ಬಸಡಾ ಕಾಣುತ್ತಿದ್ದ ನಮ್ಮ ಡ್ರೆಸ್ಗಳನ್ನು ನೋಡಿ ಸತೀಶ ಅವಾಕ್ಕಾದ. ಹನುಮಂತ ಮಾತ್ರ ನಾವು ಹೊಸಾ(?) ಬಟ್ಟೆಗಳನ್ನು ಕೊಂಡುಕೊಂಡ ಪರಿಯನ್ನು ಮಾತ್ರ ಚೆನ್ನಾಗಿ ಚೋಡಿದ. 

ನಾಗತಿಹಳ್ಳಿ ರಮೇಶ್ ನೇತೃತ್ವದಲ್ಲಿ ನಕ್ಕೀರ ಜೋಕೆ ಎಂಬ ಸಿನಿಮಾ ಮಾಡಬೇಕೆಂಬ ಹುಚ್ಚು ಹತ್ತಿಸಿಕೊಂಡು ನಮ್ಮ ಗುಂಪು ಎಲ್ಲೆಲ್ಲೋ ಅಲೆಯುತ್ತಿದ್ದಾಗ, ಒಂದು ದಿನ  ಶ್ರೀರಂಗಪಟ್ಟಣದ ಸಮೀಪದ ಬಾಬೂರಾಯನ ಕೊಪ್ಪಲಲ್ಲಿ ಊಟ ಮಾಡಿ ತಿರುಗಾಡುತ್ತಿದ್ದೆವು. ಒಂದು ಮನೆ ಮುಂದೆ ಜನರ ಗುಂಪು. ಆ ಮನೆ ಯಜಮಾನ ತೀರಿಕೊಂಡಿದ್ದ. ಆತನ ನೆಚ್ಚಿನ ನಾಯಿ ಅವನ ತಲೆ ಬಳಿ ತೀರಾ ಸಪ್ಪಗೆ ಮಲಗಿತ್ತು. ಹೆಣದ ಸುತ್ತ ಕೆಲವರು ಕುಳಿತುಕೊಂಡಿದ್ದವರ ನಡುವೆ ಎತ್ತರದ ದನಿಯಲ್ಲಿ ಇಬ್ಬರು ತತ್ವಪದಗಳನ್ನು ಹಾಡುತ್ತಿದ್ದರು. ಅವರ ಧ್ವನಿ ಕೇಳಿ ಕುತೂಹಲದಿಂದ  ಅಲ್ಲಿಗೆ ಬಂದ ನಾಗತಿಹಳ್ಳಿ ಮತ್ತು ಹೆಸರಾಂತ ಹಾಡುಗಾರ ಜನ್ನಿ (ಮೈಸೂರು ಜನಾರ್ದನ)ಅವರಿಗೆ ಅತ್ಯಾಶ್ಚರ್ಯ. ಅಲ್ಲಿ ಹಾಡುಗಳಿಂದ  ವಿಜೃಂಭಿಸುತ್ತಿದ್ದವರು ಹನುಮಂತ ಮತ್ತು ಆಲೂರು ದೊಡ್ಡನಿಂಗಪ್ಪ. ನಂತರ ಅವರನ್ನು ಜನ್ನಿ ಸೇರಿಕೊಂಡರು. ಮುಂದೆ ಬೆಳಗಿನ ಜಾವದವರೆಗೆ ಜನ್ನಿ, ಹನುಮಂತ ಮತ್ತು ಆಲೂರು ಶವರಾತ್ರಿಯನ್ನು ಶಿವರಾತ್ರಿಯಾಗಿಸಿದರು. ಸತ್ತವರು ಯಾರೋ ಯಾರಿಗೂ ಗೊತ್ತಿರಲಿಲ್ಲ.  

ನಮ್ಮ ಈ ಗುಂಪಿನ ಬಗ್ಗೆ ನಾಡಿನ ಅನೇಕ ಹಿರಿಯರು  ಅನೇಕ ಸಂದರ್ಭಗಳಲ್ಲಿ ತಿಪಟೂರಿನ ಹುಡುಗರೆಂದೇ ನಮ್ಮನ್ನೆಲ್ಲಾ ಗುರ್ತಿಸಿ ಮಾತನಾಡಲು ಸಾಧ್ಯವಾಗಿಸಿದ್ದರಲ್ಲಿ ಹನುಮಂತನ ಪಾಲು ಹೆಚ್ಚಿದೆ. ಸಿಕ್ಕಾಪಟ್ಟೆ ಸಂಕೋಚದ ಅವನ ಪ್ರೇಮದ ಪರಿತಾಪಗಳು, ಬಡತನ, ಅನುಭವಿಸಿದ ಅವಮಾನಗಳು ಅವನಲ್ಲಿ ಹುಟ್ಟಿಸಿದ್ದ ಕಿಚ್ಚು ಎಲ್ಲವನ್ನೂ ನಾವು ಬಲ್ಲೆವು, ಆದ್ದರಿಂದಲೇ ಆರಂಭದ ದಿನಗಳಲ್ಲಿ ಅವನು ಕೀಳರಿಮೆಯಿಂದ  ಒದ್ದಾಡದಂತೆ ಮಾಡಲು ಸಾಧ್ಯವಾದಷ್ಟು ಮಟ್ಟಿಗೆ ನಾವೆಲ್ಲರೂ ಯತ್ನಿಸಿದ್ದೇವೆ. ಹನುಮಂತಯ್ಯ ಅಂಥದ್ದೆಲ್ಲವನ್ನೂ ತನ್ನ ಬರವಣಿಗೆ ಮೂಲಕವೇ ಮೆಟ್ಟಿನಿಂತು ಹೆಸರು ಮಾಡಿದವನು.  ಇಂಥ ವರ್ಣರಂಜಿತ ಹನುಮಂತ ಮಾತ್ರ ಇತ್ತೀಚೆಗೆ ನಮ್ಮೆಲ್ಲರಿಂದ ದೂರವಾಗತೊಡಗಿದ್ದ. ಪೋನಿಗೂ ಸಿಗುತ್ತಿರಲಿಲ್ಲ. 

ತೀರಾ ಇತ್ತೀಚಿಗೆ ಒಂದು ಸಭೆಯಲ್ಲಿ ನಾನು ಅವನನ್ನು ಮಾತನಾಡಿಸಲಿಲ್ಲ ಎಂಬ ಕಾರಣಕ್ಕೆ ಸಭೆಯಿಂದ ಎದ್ದು ಹೋಗಿದ್ದ. ಫೋನ್ ಮಾಡಿ, ನನ್ನ ವರ್ತನೆ ಖಂಡಿಸಿ ಅಬ್ಬರಿಸಿದ. ಜನ ಜಂಗುಳಿಯಲ್ಲಿ ನೀನು ಕಾಣಿಸಲಿಲ್ಲ ಎಂದದ್ದಕ್ಕೆ, ತಾನು ಪ್ರೀತಿಸುವ ಹುಡುಗಿಯನ್ನು ಪ್ರೇಮಿ ಜಾತ್ರೆಯಲ್ಲೂ ಒಮ್ಮೆಲೇ ಕಂಡುಹಿಡಿಯಬಲ್ಲ ಎಂದು ಕಾವ್ಯಾತ್ಮಕವಾಗಿ ಮಾತಾಡಿ ಅತ್ತಿದ್ದ. ಇತ್ತ ನನಗೂ ಮಾತೇ ಹೊರಡದೆ ಕಣ್ಣೀರಾಗಿದ್ದೆ. ಅಂತೆಯೇ ತನಗನಿಸಿದ್ದನ್ನು ನಿಷ್ಠುರವಾಗಿ ಹೇಳುತ್ತಲೂ ಇದ್ದ. ನನ್ನ ನಾಟಕ ಸಿಂಗಾರಿತ್ಲು ಬಂದಾಗ  ನಿನಗೆ ನಾಟಕ ಹೇಗೋ ಒಲಿದುಬಿಟ್ಟಿದೆಯಲ್ಲಾ ಎಂದು ಚುಡಾಯಿಸಿದ್ದ.  

ಹಗಲು ಇರುಳಿನ ಬಲೆಯೊಳಗೆ ಹಕ್ಕಿ ಸಿಲುಕಿದೆ 
ಪಕ್ಕದಲ್ಲೇ ಬೇಟೆಗಾರನ ಒಲೆ ಉರಿಯುತ್ತಿದೆ  

ಈಗ ಹಾಡಲೇಬೇಕು ಈ ಪುಟ್ಟ ಕೊಕ್ಕಿನಲಿ 
ಬೇಟೆಗಾರ ನಿದ್ರಿಸುವಂತೆ  

ಈಗ ಈ ಪುಟ್ಟ ಕೊಕ್ಕನ್ನೇ ಖಡ್ಗವಾಗಿಸಬೇಕು
ಬಲೆ ಹರಿದು ಬಯಲ ಸೇರುವಂತೆ. 

ಎಂದು ಬರೆಯಬಲ್ಲವನಾಗಿದ್ದ, ನಮ್ಮೆಲ್ಲರೊಳಗೂ ಬೃಹತ್ತಾಗಿ ಹಬ್ಬಿರುವ ಹನುಮಂತಯ್ಯ ಇಲ್ಲವಾಗಿದ್ದಾನೆ. ಜಗತ್ತಿನ ಸರ್ವಶಕ್ತನೇ, ನಮಗೆಲ್ಲರಿಗೂ ಅವನ ನೆನಪನ್ನು ಸುದೀರ್ಘವಾಗಿಸಿಕೊಳ್ಳುವ ಶಕ್ತಿ ಕೊಡು ಎಂದು ಬೇಡಬೇಕೆನ್ನುವಂತೆ !

3 comments:

  1. ಪ್ರಿಯ ಕರಿಸ್ವಾಮಿ, ನಿತ್ಯವೂ ಕಂಪ್ಯೂಟರುಗಳ ಜೊತೆಯಲ್ಲೇ ಇದ್ದರೂ ಸ್ವಂತ ಬ್ಲಾಗಿಲ್ಲದೇ ಹೇಗೆ ಇಷ್ಟು ದಿನ ಕಳೆದಿರಿ? ಕೆಲಸಕ್ಕೆ ಬಾರದ, ತೀರ ತಲೆಹರಟೆಗಳೇ ಬ್ಲಾಗ್ ಲೋಕದ ತುಂಬ ತುಳುಕಾಡುತ್ತಿರುವಾಗ ನಿಮ್ಮಂಥವರ ಲೇಖನಗಳಾದರೂ ಅವರ ಕಣ್ತೆರಸಲಿ,ಎನ್ಕೆ ಕುರಿತ ಲೇಖನ ಮೊದಲೆಲ್ಲೋ ಓದಿದ್ದು ನೆನಪಾದರೂ ಚೆನ್ನಾಗಿದೆ. have nice blogging

    ReplyDelete
  2. ಸರ್ ಬ್ಲಾಗ್ ಚೆನ್ನಾಗಿದೆ,
    ಹಾಸನಕ್ಕೆ ಬರುವ ಮೊದಲು ನನಗೆಹನುಮಂತಯ್ಯ ಬಗ್ಗೆ ಹೆಚ್ಚೇನೂ ತಿಳಿದಿರಲಿಲ್ಲ. ಹಳ್ಳಿಸುರೇಶ್ ಹಾಸನಕ್ಕೆ ಬಂದ ಮೇಲೆ ಹನುಮಂತಯ್ಯ ಬಗ್ಗೆ ಅವರಿಂದ ಸ್ವಲ್ಪ ತಿಳಿದುಕೊಂಡೆ. ಅವರ ಕಾವ್ಯದ ಬಗ್ಗೆ ಸಾಪ್ತಾಹಿಕ ವಿಜಯದಲ್ಲಿ ಪೂರ್ತಿ ಪುಟ ಪ್ರಕಟವಾದಾಗ ಓದಿ ಪುಳಕಿತಗೊಂಡಿದ್ದೆ. ಅವರ ಇನ್ನಷ್ಟು ಹೊಸ ಕವಿತೆಗಳನ್ನು ಓದಬೇಕೆನ್ನುವಷ್ಟರಲ್ಲಿ ಸಾವಿಗೀಡಾದ ಸುದ್ದಿ ತಿಳಿದು ಆಘಾತವಾಯಿತು. ಆ ಸುದ್ದಿಯನ್ನು ನಂಬಲೂ ಸಾಧ್ಯವಿರಲಿಲ್ಲ. ಈಗ ನಿಮ್ಮ ಬ್ಲಾಗ್ ನಿಂದ ಅವರ ಬಗ್ಗೆ ಇನ್ನಷ್ಟು ತಿಳಿಯಲು ಸಾಧ್ಯವಾಯಿತು. ಧನ್ಯವಾದ.

    -ಶಿವಮೂರ್ತಿ ಜುಪ್ತಿಮಠ

    ReplyDelete
  3. ಒಂದು ಕೀಳಿರುಮೆಯ ಛಾಯೆ ಅತಿಯಾದ ಭಾವುಕತೆಯ ಮಾಯೆ ಒಬ್ಬ ಪ್ರತಿಭಾವಂತ ಕವಿಯನ್ನು ಸೆಳೆದುಕೊಂಡದ್ದೇ ದುರಂತ

    ReplyDelete