ಹೆಜ್ಜೆ ಗೆಜ್ಜೆ :
ಈ ಬ್ಲಾಗ್ ನಲ್ಲಿರುವ ವಿಷಯ ಮತ್ತು ಚಿತ್ರಗಳ ಬಳಕೆಗೆ ಅನುಮತಿ ಕಡ್ಡಾಯ.
ಮತ್ತೊಂದು ಕ್ಷಣ ನನ್ನ ಬಗ್ಗೆ ಬದುಕು-ಬರಹ

Wednesday, 26 March 2014

ಸಿಂಗಾರಿತ್ಲು ಎರಡನೇ ಆವೃತ್ತಿ ಶೀಘ್ರ

ಆತ್ಮೀಯರೇ,

ನಾಳೆ ಮಾರ್ಚ್ ೨೭ ವಿಶ್ವ ರಂಗಭೂಮಿ ದಿನ. ೧೦ ವ‍‍ರ್ಷಗಳ ಹಿಂದೆ ನಾನು ಬರೆದ ನಾಟಕ ಸಿಂಗಾರಿತ್ಲು ೨೦೦೬ರಲ್ಲಿ ಪ್ರಕಟವಾಗಿತ್ತು. ಈ ನಾಟಕದ ಹಸ್ತಪ್ರತಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಸಹಾಯಧನ ಮತ್ತು ಪ್ರಕಟಿತ ಕೃತಿಗೆ ಬಿಎಂಟಿಸಿ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ಅರಳು ಪ್ರಶಸ್ತಿಯ ಮೊಟ್ಟಮೊದಲ ಆವೃತ್ತಿಯ ಬಹುಮಾನ ಬಂದಿತ್ತು. ಬಿಎಂಟಿಸಿಯ ಕನ್ನಡ ಸಂಘದ ಗೆಳೆಯರಾದ ಬಾಲಕೃಷ್ಣ ಅವರು ಇದನ್ನು ರಂಗಕ್ಕೂ ತಂದಿದ್ದರು.
ಮೊದಲ ಆವೃತ್ತಿಗೆ ಹಿರಿಯ ಜಾನಪದ ವಿದ್ವಾಂಸ ದಿ. ಮುದೇನೂರು ಸಂಗಣ್ಣ ಬೆನ್ನುಡಿಯನ್ನೂ, ಹೆಸರಾಂತ ಕಥೆಗಾರ ಮೊಗಳ್ಳಿ ಗಣೇಶ್‌ ಮುನ್ನುಡಿಯನ್ನೂ ಬರೆದಿದ್ದರು. ಮುಖಪುಟಕ್ಕೆ ಗೆಳಯ ಸೃಜನ್‌ ಚಿತ್ರ ಒದಗಿಸಿದ್ದರು.
ಮೊದಲ ಆವೃತ್ತಿಯನ್ನು ಗೆಳೆಯ ದೇವು ಪತ್ತಾರನ ಸಹಕಾರದಿಂದ ನಾರಾಯಣ ಮಾಳ್ಕೋಡ್‌ ತಮ್ಮ ಸುಮುಖ ಪ್ರಕಾಶನದಿಂದ ಪ್ರಕಟಿಸಿದ್ದರು. ಪ್ರತಿಗಳು ಮುಗಿದು ವರ್ಷಗಳೇ ಕಳೆದಿರುವ ಹಿನ್ನೆಲೆಯಲ್ಲಿ ಗೆಳೆಯ ಸಬ್ಬನಹಳ್ಳಿ ರಾಜು ತಮ್ಮ ಅಂಕ ಪ್ರಕಾಶನದ ವತಿಯಂದ ಎರಡನೇ ಆವೃತ್ತಿ ತರುತ್ತಿದ್ದಾರೆ.
ಎರಡನೇ ಆವೃತ್ತಿಗೆ ಮುನ್ನುಡಿಯನ್ನು ಗೆಳೆಯ ಆನಂದ್‌ ಋಗ್ವೇದಿ ಬರೆದಿದ್ದಾನೆ. ಬೆನ್ನುಡಿಯನ್ನು ಹೆಸರಾಂತ ನಿರ್ದೇಶಕ ಇಕ್ಬಾಲ್‌ ಅಹಮದ್‌ ಬರೆದಿದ್ದಾರೆ. ಉಳಿದಂತೆ ಹಿರಿಯರಾದ ದಿ. ಚಿ. ಶ್ರೀವಾಸರಾಜು ಮೇಷ್ಟ್ರು, ಗಿರಡ್ಡಿ ಗೋವಿಂದರಾಜ್‌, ಚಿಂತಾಮಣಿ ಕೋಡ್ಲಕೆರೆ ಗೆಳೆಯರಾದ ಮಂಜುನಾಥ್‌, ಸುರೇಶ್‌ ಅಂಗಡಿ, ಇಸ್ಮಾಯಿಲ್‌ ಜಬೀರ್‌ ಅವರ  ಅನಿಸಿಕೆಗಳು ಈ ಸಂಚಿಕೆಯಲ್ಲಿವೆ. ಈ ಆವೃತ್ತಿಗೆ ಗೆಳೆಯ, ಕಲಾವಿದ ನಾಗಲಿಂಗಪ್ಪ ಮುಖಪುಟ ರೂಪಿಸಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.

ಧನ್ಯವಾದಗಳೊಂದಿಗೆ

ಕರಿಸ್ವಾಮಿ. ಕೆ

Monday, 24 March 2014

ಇ ರಾಘವನ್ ಅವರ ಎರಡನೇ ಪುಣ್ಯ ತಿಥಿ

ಆತ್ಮೀಯರೇ,
ವಿಜಯಕರ್ನಾಟಕ ದಿನಪತ್ರಿಕೆಯ ಹಿಂದಿನ ಸಂಪಾದಕರಾಗಿದ್ದ . ರಾಘವನ್ ಅವರು ತೀರಿಕೊಂಡು ಇಂದಿಗೆ ಎರಡು ವರ್ಷಗಳು ತುಂಬಿದವು. ಅವರ ಜತೆಗಿನ ನೆನಪುಗಳನ್ನು ನಮ್ಮ ಅನೇಕ ಸಹೋದ್ಯೋಗಿಗಳು ಹಂಚಿಕೊಂಡಿರುವ ಪುಸ್ತಕವೊಂದು ಸಿದ್ಧವಾಗುತ್ತಿದೆ. ಚುನಾವಣೆಯ ಕಾವು ಇಲ್ಲದಿದ್ದರೆ ಪುಸ್ತಕ ಇಂದೇ ಬಿಡುಗಡೆಯಾಗಬೇಕಿತ್ತು. ಚುನಾವಣೆಯ ಈ ಭರಾಟೆ ಮುಗಿದ ನಂತರ ಮುಂದಿನ ತಿಂಗಳು ಪುಸ್ತಕವನ್ನು ಬಿಡುಗಡೆ ಮಾಡಬೇಕು ಎಂದುಕೊಂಡಿದ್ದೇವೆ.
ನನ್ನ ಗೆಳೆಯ ಜೇಪಿ ಮತ್ತು ನಾನು ಸಂಪಾದಿಸಿರುವ ಈ ಪುಸ್ತಕಕ್ಕೆ ಗೆಳೆಯ, ಕಲಾವಿದ ಬಡಿಗೇರ್‌ ಮುಖಪುಟ ರಚಿಸಿದ್ದಾರೆ. ನಿಮ್ಮ ಅನಿಸಿಕೆ ತಿಳಿಸಿ.

ಧನ್ಯವಾದಗಳು
ಕರಿಸ್ವಾಮಿ. ಕೆ


Sunday, 27 October 2013

ನೆನಪು: ಅಮ್ಮ ತೀರಿಕೊಂಡು ಒಂದು ವರ್ಷ
ನನ್ನಮ್ಮ ತೀರಿಕೊಂಡು ಒಂದು ವರ್ಷ ಕಳೆದುಹೋಯಿತು(9/10/2012). ಅಮ್ಮನ ಒಂದು ವರ್ಷದ ನೆನೆಪಿಗೆ ಕಳೆದ ಅಕ್ಟೋಬರ್ 10ನೇ ತಾರೀಖು ಗುರುವಾರ ರಾತ್ರಿ, ತುಮಕೂರು ಜಿಲ್ಲೆ, ಶಿರಾ ತಾಲ್ಲೂಕಿನ ನನ್ನ ಊರು ಜವನ್ನಹಳ್ಳಿಯಲ್ಲಿ ಸುಮಾರು 35 ಜನರ ತಂಡ ಅಹೋರಾತ್ರಿ ಭಜನೆ ಕಾರ್ಯಕ್ರಮ ನಡೆಸಿಕೊಟ್ಟಿತು. ಸುಮಾರು 10 ವರ್ಷಗಳ ನಂತರ ರಾತ್ರಿಯೆಲ್ಲ ಭಜನೆ ಸಂಭ್ರಮದಲ್ಲಿ ಮುಳುಗಿದ್ದೆ. ಅದು ಕೊಟ್ಟ ಖುಷಿಯನ್ನು ಶಬ್ಧಗಳಲ್ಲಿ ಹಿಡಿದಿಡುವುದು ಕಷ್ಟ. ಇದೆಲ್ಲ ದುಡ್ಡಿನಿಂದ ಆಗುವ ಕೆಲಸವಲ್ಲ. ನನ್ನಮ್ಮ, ನನ್ನಪ್ಪ-ಅಕ್ಕಂದಿರ ಕಾರಣದಿಂದ ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ತತ್ತ್ವ ಪದಕಾರರು ನಮ್ಮ ಮನೆಯಲ್ಲಿ ಜಮಾಯಿಸಿದ್ದರು. ಗುಂಪು, ಪಂಥ, ಜಾತಿ ಬೇಧಗಳಿಗೆ ಅಲ್ಲಿ ಆಸ್ಪದವೇ ಇರುವುದಿಲ್ಲ.
ನಮ್ಮ ಮನೆಯ ಭಜನೆ ಕಾರ್ಯಕ್ರಮಕ್ಕೆ ಸುಮಾರು 25-30 ವರ್ಷಗಳ ಇತಿಹಾಸವಿದೆ. ನಮಗೆಲ್ಲ ಸಾಹಿತ್ಯ-ಸಂಗೀತ ಅಂತ ಅಭಿರುಚಿ ಹುಟ್ಟಿದ್ದರೆ ಅದಕ್ಕೆ ನಮ್ಮ ಮನೆಯಲ್ಲಿ ಕಾಲಕಾಲಕ್ಕೆ ನಡೆಯುತ್ತಿದ್ದ ಭಜನೆಯೂ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳೇ ಕಾರಣ. ಇವತ್ತಿಗೂ ಮುಖ ತೊಳೆದು ವಿಭೂತಿ ಧರಿಸಿದ ನಂತರ ದೇವರ ಮನೆಯಲ್ಲಿದ್ದ ಏಕತಾರಿಯನ್ನು ಮೀಟಿ ನಾದ ಹೊರಡಿಸಿದ ನಂತರವೇ ತಿಂಡಿ – ಊಟದ ತಟ್ಟೆಯ ಮುಂದೆ ಅಪ್ಪ, ನನ್ನ ಅಕ್ಕಂದಿರು ಕುಳಿತುಕೊಳ್ಳುತ್ತಾರೆ. ನನ್ನಮ್ಮನಂತೂ, ರಾಗಿಯನ್ನು ಇರುವೆ ಗೂಡಿಗೆ ಹಾಕಿದ ನಂತರ ಸೂರ್ಯನಿಗೆ ನಮಸ್ಕಾರ ಹಾಕಿ ಏಕತಾರಿ ಮುಂದೆ ಕೂತು ನಾದ ಹೊರಡಿಸಿ ಧ್ಯಾನ ಮಾಡಿದ ಮೇಲೆ ನಾಯಿಗೆ ಅನ್ನ ಹಾಕಿಯೇ ಊಟ ಮಾಡುತ್ತಿದ್ದರು. ಇದಕ್ಕೆಲ್ಲ ನಾನೊಬ್ಬನೇ ಅಪವಾದ.
ನನ್ನ ಮೂವರು ಅಕ್ಕಂದಿರು, ತಂಗಿ ಭಜನೆಯ ಕಾರ್ಯಕ್ರಮದಲ್ಲಿ ಅಪ್ಪನೊಟ್ಟಿಗೆ ಕೂತುಕೊಂಡರೆ ನಾದಲೋಕದಲ್ಲಿ ಮನೆ ಮುಳುಗಿ ಹೋಗುತ್ತಿತ್ತು. ಸುಖ-ಕಷ್ಟ ಬೇಸರದ ಘಳಿಗೆಗಳಲ್ಲಿ ನನ್ನಪ್ಪ ಏಕತಾರಿ ಹಿಡಿದು ಕೂರುತ್ತಿದ್ದರು. ನನ್ನ ಒಬ್ಬ ಭಾವ ಕೂಡ ಭಜನೆ ಭಲ್ಲವರಾಗಿದ್ದುದು ಇನ್ನೊಂದು ಮೆರೆಗು ನೀಡುತ್ತಿತ್ತು. ಇವತ್ತಿಗೂ ಭಜನೆಯಲ್ಲಿ ಕುಳಿತುಕೊಳ್ಳುವ ನನ್ನ ಅಕ್ಕಂದಿರು ತತ್ತ್ವಪದಗಳ ಹಾಡಿನಲ್ಲಿ ವಿಜೃಂಭಿಸುತ್ತಾರೆ.
ವರ್ಷಕ್ಕೊಂದು ಬಾರಿ ಎಂಥ ಕಷ್ಟವೇ ಇರಲಿ ಭಜನೆ ಮಾತ್ರ ನಿಲ್ಲುತ್ತಿರಲಿಲ್ಲ. ನಿರ್ದಿಷ್ಟ ವೇಳೆಗೆ ಭಜನೆ ನಡೆಯುತ್ತಿರಲ್ಲವಾದರೂ, ಭಜನೆ ನಡೆದು ವರ್ಷವಾಯಿತೆಂದು ಸಾಮಾನ್ಯವಾಗಿ  ನನ್ನಮ್ಮನೇ ಅಪ್ಪನಿಗೆ ಭಜನೆ ಕಾರ್ಯಕ್ರಮ ಏರ್ಪಡಿಸುವಂತೆಗೆ ಒತ್ತಾಯಿಸುತ್ತಿದ್ದರು. ನನ್ನಮ್ಮ ಸತ್ತ ದಿನವೂ ರಾತ್ರಿಯೆಲ್ಲ ಭಜನೆ ನಡೆಯಿತು. ಅಮ್ಮ ಸಾಯುವುದಕ್ಕೆ ಮುಂಚೆ ಒಂದೂವರೆ ತಿಂಗಳಿನಿಂದ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಇದ್ದರು. ಅಮ್ಮನ ಹಾರೈಕೆಯಲ್ಲಿ ನಾನು ಹೈರಾಣಾಗಿದ್ದರಿಂದ ಅವತ್ತು ಭಜನೆಯನ್ನು ಮಿಸ್ ಮಾಡಿಕೊಂಡಿದ್ದೆ. ಬೆಂಗಳೂರು, ಬಾಗಲಕೋಟ, ಗಂಗಾವತಿಗಳಲ್ಲಿ ನನ್ನ ವೃತ್ತಿ ಜೀವನ ಸುಮಾರು 12 ವರ್ಷ ಮುಗಿದು ಹೋಗಿದ್ದರಿಂದ ಇಷ್ಟೊಂದು ಅಸ್ಥೆಯಿಂದ ಇತ್ತೀಚೆಗೆ ಭಜನೆಯನ್ನು ಆಸ್ವಾದಿಸಲು ಸಾಧ್ಯವಾಗಿರಲಿಲ್ಲ.
ಅಂತೂ ಅವತ್ತು ನನ್ನ ಅನೇಕ ಗುರು/ ಗೆಳೆಯರನ್ನು ಅವತ್ತು ನೆನೆದೆ. ಅದರಲ್ಲೂ ಮುಖ್ಯವಾಗಿ ಎಸ್. ಆರ್. ರಾಮಕೃಷ್ಣ, ಆಲೂರು ದೊಡ್ಡಲಿಂಗಪ್ಪ, ಪಿ. ಮಂಜುನಾಥ್, ಉಗಮ ಶ್ರೀನಿವಾಸ್, ಸತೀಶ್ ತಿಪಟೂರು, ಹಳ್ಳಿ ಸುರೇಶ್, ಶಿವಪ್ಪ, ನಾಗತಿಹಳ್ಳಿ ರಮೇಶ್ ಮತ್ತು ದಿ. ಎನ್. ಕೆ ಹನುಮಂತಯ್ಯ ನೆನಪಾದರು. ಇವರೆಲ್ಲ ಭಜನೆಗೆ ಬಂದಿದ್ದರೆ ಇದನ್ನೆಲ್ಲ ಹೇಗೆ ಆಸ್ವಾಧಿಸುತ್ತಿದ್ದರೋ ಗೊತ್ತಿಲ್ಲ. ಸುಮಾರು 13 ವರ್ಷಗಳ ಹಿಂದೆ ಶ್ರೀರಂಗಪಟ್ಟಣದ ಬಳಿಯ ಬಾಬೂರಾಯನ ಕೊಪ್ಪಲಲ್ಲಿ ತೀರಿಕೊಂಡಿದ್ದ ಅಪರಿಚಿತ ವ್ಯಕ್ತಿಯೊಬ್ಬರ ಭಜನೆ ತಂಡದಲ್ಲಿ ಸೇರಿಕೊಂಡು ಹನುಮಂತಯ್ಯ ಮತ್ತು ಆಲೂರು ದೊಡ್ಡ ಇಡೀ ಜನಸಂದಣಿಯನ್ನು ಹುಚ್ಚೆಬ್ಬಿಸಿದ್ದ ಘಟನೆ ಈಗಲೂ ಕಣ್ಣಿಗೆ ಕಟ್ಟಿದಂತಿದೆ.
ಇದೆಲ್ಲ ಏನೇ ಇರಲಿ, ಮೊನ್ನೆಯ ಭಜನೆ ಕಾರ್ಯಕ್ರಮದಲ್ಲಿ ಹಾಡಿದ ತತ್ತ್ವ ಪದಗಳು, ವಚನಗಳು, ವಿವಿಧ ಪಂಥ-ಗುಂಪಿನ ವಿವಿಧ ಆನುಭಾವಿ ಪದಗಳ ಜುಗಲ್ಬಂಧಿ ಮರೆಯಲಾರದ ನೆನೆಪಾಗಿ ಉಳಿಯಿತು. ಪ್ರತಿವರ್ಷ ಇಷ್ಟೇ ಸಂಖ್ಯೆಯ ತತ್ತ್ವಪದಕಾರರನ್ನು ಕರೆಸಿ ಹಾಡಿಸಲು ಪ್ರಯತ್ನಿಸಬೇಕೆಂದು ಅಕ್ಕ-ಅಪ್ಪನನ್ನು ಆಗ್ರಹಿಸಿದ್ದೇನೆ. ಬೆಂಗಳೂರಿನಲ್ಲಿ ಇಂತಹದೊಂದು ಇಡೀ ರಾತ್ರಿ ಕಾರ್ಯಕ್ರಮ ಆಯೋಜಿಸಿದರೆ ಹೇಗೆಂದು ಯೋಚಿಸುತ್ತಿದ್ದೇನೆ. ಅದೆಲ್ಲ ಯಾವಾಗ ಸಾಧ್ಯವಾಗುವುದೋ ನೋಡಬೇಕು. ಇಷ್ಟಕ್ಕೆಲ್ಲ ಕಾರಣವಾದ, ಅಗಾಧ ಶಕ್ತಿ ಮತ್ತು ಅನೇಕ ವಿಷಯಗಳಲ್ಲಿ ವಿಜ್ಞಾನಿಯಂತೆ ಯೋಚಿಸುತ್ತಿದ್ದ ಅನಕ್ಷರಸ್ಥೆ ನನ್ನಮ್ಮನ ಕುರಿತು ಬರೆಯಬೇಕೆಂಬ ತುಡಿತ ಹೆಚ್ಚುತ್ತಿದೆ.


Sunday, 12 May 2013

ನನ್ನನ್ನು ಕ್ಷಮಿಸಿಬಿಡು ಅಮ್ಮಾ
ಇವತ್ತು ವಿಶ್ವ ಅಮ್ಮಂದಿರ ದಿನ. ಅಮ್ಮನಿಲ್ಲದ ಎಷ್ಟೋ ಮಂದಿಗೆ ತಮ್ಮ ಅಮ್ಮಂದಿರು ನೆನಪಾಗಿವಂತೆ ನನಗೂ ನನ್ನಮ್ಮ ನೆನಪಾದರು. ಅಮ್ಮನ ದಿನ, ಅಪ್ಪನ ದಿನ ಇಂಥ ಯಾವುದೇ ದಿನಗಳ ಬಗ್ಗೆ ಅನಕ್ಷರಸ್ಥೆಯಾಗಿದ್ದ ನನ್ನಮ್ಮನಿಗೆ ಗೊತ್ತಿರುವುದು ಸಾಧ್ಯವಿರಲಿಲ್ಲ.
ಅಮ್ಮನಿಲ್ಲದ ಮೊದಲ ‘ಅಮ್ಮನ ದಿನ’ವಾದ್ದರಿಂದಲೇ ಇದು ನನ್ನನ್ನು ಇಷ್ಟೊಂದು ತೀವ್ರವಾಗಿ ಕಾಡುತ್ತಿರುಬಹುದು ಎಂದುಕೊಂಡಿದ್ದೇನೆ. ಏಕೆಂದರೆ ಅಮ್ಮನ ದಿನದ ಮಹತ್ವ ನನಗೆ ಈ ಮೊದಲು ಅಷ್ಟಾಗಿ ಗೊತ್ತಾಗಿರಲಿಲ್ಲ. ನನ್ನಮ್ಮ ಬದುಕಿದ್ದಾಗ ಬಂದ ‘ಅಮ್ಮನ ದಿನ’ಗಳಲ್ಲಿ ಪತ್ರಿಕೆಗಳಲ್ಲಿ ಯಾವುದಾದರೂ ಲೇಖನ ಬಂದರೆ ಕಣ್ಣಾಡಿಸುತ್ತಿದ್ದೆ. ಅಮ್ಮ ನೆನಪಾಗುತ್ತಿದ್ದರು. ವಿಷ್ ಮಾಡುವ ಪದ್ಧತಿ ಖಂಡಿತಾ ಇರಲಿಲ್ಲ. ಹಾಗಾಗಿ ನಾನು ನನ್ನಮ್ಮನಿಗೆ ಎಂದೂ ವಿಷ್ ಮಾಡಲಿಲ್ಲ.
ಬಡತನದ ಕಾರಣದಿಂದ ಅನುಭವಿಸಿದ ಅವಮಾನ, ಸಂಕಟಗಳು ನಮ್ಮನ್ನು ಅಷ್ಟಾಗಿ ತಟ್ಟದಂತೆ ಕಾಪಾಡಿದ್ದ ಅಮ್ಮನ ತಾಕತ್ತು ದೊಡ್ಡದು. ದೊಡ್ಡ ಮನಸ್ಸಿನ ಅಮ್ಮ ಸದಾ ಚಟುವಟಿಕೆಯಿಂದ ಇದ್ದರು. ಸುಮಾರು ನಲವತ್ತು ವರುಷಗಳಿಂದ ಅಸ್ತಮಾ ಎಂಬ ಭಯಂಕರ ಕಾಯಿಲೆ ವಿರುದ್ಧ ಸೆಣಸಾಡುತ್ತಲೇ ಕಳೆದ ಅಕ್ಟೋಬರಿನಲ್ಲಿ ತೀರಿಕೊಂಡರು.
ಸಾಯುವ ಮುನ್ನ ಸುಮಾರು ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದರು. ಮನೆಯಲ್ಲಿ ಸಾಯುತ್ತೇನೆ, ಊರಿಗೆ ಕರೆದುಕೊಂಡು ಹೋಗು ಎಂದು ಗೋಗರೆದರೂ, ವೈದ್ಯರ ಸಲಹೆಯಂತೆ, ಆಸ್ಪತ್ರೆಯ ಆರೈಕೆಯಲ್ಲಿ ಬದುಕಬಹುದೆಂಬ ನನ್ನ ಆಸೆಯಿಂದ ಹೆಣವಾಗಿ ಊರು ಸೇರಿದರು. ಕೊನೆಯ ಆಸೆ ಈಡೇರಿಸದ ‘ನನ್ನನ್ನು ಕ್ಷಮಿಸಿಬಿಡು ಅಮ್ಮಾ’ ಎಂದು ಕೇಳಿಕೊಳ್ಳುವುದಷ್ಟೇ ಉಳಿದಿರುವ ಮಾರ್ಗ.


Sunday, 24 March 2013

ಈ. ರಾಘವನ್ ಅವರ ಮೊದಲ ಪುಣ್ಯ ತಿಥಿ


ಆತ್ಮೀಯರೇ,
ವಿಜಯಕರ್ನಾಟಕ ದಿನಪತ್ರಿಕೆಯ ಈ  ಹಿಂದಿನ ಸಂಪಾದಕರಾಗಿದ್ದ ಈ. ರಾಘವನ್ ಅವರು ತೀರಿಕೊಂಡು ಇಂದಿಗೆ ಒಂದು ವರ್ಷ.  ಅನೇಕ ಒಳ್ಳೆಯ ನೆನಪುಗಳನ್ನು ನಮ್ಮೊಂದಿಗೆ ಬಿಟ್ಟು ಹೋಗಿರುವ ಅವರನ್ನು ತುಂಬು ಪ್ರೀತಿಯಿಂದ ನೆನೆಯಬೇಕಾದ ದಿನವಿದು. ರಾಘವನ್ ಅವರಂಥ ವ್ಯಕ್ತಿಗಳು ಯಾವಾಗಲೂ ಮನದಲ್ಲೇ ಇರುತ್ತಾರೆ. ಅವರ ನೆನಪನ್ನು ಸಾರ್ವಜನಿಕವಾಗಿ ಮತ್ತೊಮ್ಮೆ ಹಂಚಿಕೊಳ್ಳಲು ಇದೊಂದು ನೆಪ  ಅಷ್ಟೆ.

Monday, 18 July 2011

ಮಕ್ಕಳಿಗೆ ಜಾತಿ, ಧರ್ಮಗಳ ಹಂಗು, ಹೊರೆ ಬೇಡ

 ಕಳೆದ ವಾರ ನಮ್ಮ ಹಿರಿಯ ಅಂಕಣಕಾರರಲ್ಲೊಬ್ಬರಾದ ಚಂದ್ರಶೇಖರ ಪಾಟೀಲರು, ಅವರ ಬುಧವಾರದ ಅಂಕಣದಲ್ಲಿ, ಕರ್ನಾಟಕವನ್ನು ಗುಜರಾತ್ ಆಗಿಯೂ, ಬಾಬಾ ಬುಡನ್ ಗಿರಿಯನ್ನು ಅಯೋಧ್ಯೆಯನ್ನಾಗಿಯೂ ಮಾಡುವ ಬಿಜೆಪಿ ಕನವರಿಕೆಯ ಮಾತುಗಳನ್ನು ಪ್ರಸ್ತಾಪಿಸಿ ಕುಟುಕಿದ್ದರು. ಅದರ ಪ್ರತಿಫಲವೆಂಬಂತೆ  ಕೋಲಾರದಲ್ಲಿ ಗುಡುಗಿರುವ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಭಗವದ್ಗೀತೆ ಮಾತು ತೆಗೆದು, ಅದರ ಅಭಿಯಾನವನ್ನು ವಿರೋಸುವವರು ದೇಶ ಬಿಟ್ಟು ತೊಲಗಬೇಕೆಂದು ಹೇಳಿ ತಮ್ಮ ‘ಸೌಮ್ಯ’ ಮುಖವಾಡವನ್ನು ಕಳಚಿದ್ದಾರೆ. ಈ ಹಿಂದ ಪತ್ರಕರ್ತರನ್ನು ಸಮುದ್ರಕ್ಕೆ ಎಸೆಯಬೇಕೆಂದು ಗಂಡೂರಾವ್ ಅವರು ನೀಡಿದ್ದ ಹೇಳಿಕೆ ಏಕೋ ನೆನಪಾಯಿತು. ಇದು ಪ್ರಶ್ನಿಸುವವರನ್ನು ಸಹಿಸದ ಮನಸ್ಥಿತಿಯ ಸಂಕೇತ. ಇದನ್ನೇ ನಾವು ಇನ್ನೊಂದು ಅರ್ಥದಲ್ಲಿ ‘ಯಜಮಾನಿಕೆಯ ಹಮ್ಮು’ ಎಂದು ಕರೆಯಬಹುದು.

 ಸಚಿವರ ಹೇಳಿಕೆ ಹಿಂದೆ ಇನ್ನೊಂದು ಹುನ್ನಾರವೂ ಇರಬಹುದು, ಅದೆಂದರೆ ತಮ್ಮದೇ ಹೇಳಿಕೆಯಿಂದ ಉಂಟಾಗಿದ್ದ  ಇಂಗ್ಲಿಷ್- ಕನ್ನಡ ಕುರಿತ ಚರ್ಚೆಯ ದಿಕ್ಕನ್ನು ಬದಲಿಸಲು ಭಗವದ್ಗೀತೆಯನ್ನು ಬಳಸಿಕೊಂಡಿರಬಹುದು ಆಥವಾ ಟೀಕೆಗಳ ಸುರಿಮಳೆಯಲ್ಲಿ ನೆನೆಯುತ್ತಿರುವ ಸರಕಾರದ ವಿರುದ್ಧದ ಸಿಟ್ಟಿನ ವಿಷಯಾಂತರವೂ ಇರಬಹುದು. ಈ ಭಗವದ್ಗೀತೆ ಕುರಿತ ಕಾಗೇರಿಯವರ ಹೇಳಿಕೆಯನ್ನು ಬಿಜೆಪಿ ಅರ್ಧಯಕ್ಷರಾದ ಈಶ್ವರಪ್ಪ  ಅವರು ಶುಕ್ರವಾರ ಹುಬ್ಬಳ್ಳಿಯಲ್ಲಿ ಅನುಮೋದಿಸುವದರೊಂದಿಗೆ ಸಚಿವರ ನಿಲುವು ಮತ್ತು ಪಕ್ಷದ ನಿಲುವುಗಳು ಒಂದೇ ಎಂಬುದು ಸಾಬೀತಾಗಿದೆ. ಆದರೆ ವಾಸ್ತವವಾಗಿ ಸಚಿವರು ಹೇಳಿದ್ದು ಮೂಲತಃ ಪಕ್ಷದ ನಿಲುವೇ ಆಗಿತ್ತು ಎಂಬುದಕ್ಕೆ ಒತ್ತು ಕೊಡುತ್ತಾ, ಈ ಹೇಳಿಕೆಯನ್ನು ಪಕ್ಷ ಕೊಟ್ಟಿದ್ದರೆ ಅದನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕಿರಲಿಲ್ಲ. ಏಕೆಂದರೆ ಸಚಿವರು ಕೇವಲ ಪಕ್ಷವನ್ನು ಪ್ರತಿನಿಸುವುದಿಲ್ಲ. ಅವರು ಸಂವಿಧಾನದ ಚೌಕಟ್ಟಿನಲ್ಲಿ ಪಕ್ಷಕ್ಕಿಂತ ಖಂಡಿತ ದೊಡ್ಡವರು. ಅವರು ಪ್ರತಿನಿಸುತ್ತಿರುವುದು ಬಿಜೆಪಿ ಕಾರ್ಯಕರ್ತರನ್ನಲ್ಲ, ಬದಲಿಗೆ ಕರ್ನಾಟಕದ ಪ್ರತಿಯೊಬ್ಬ ಪ್ರಜೆಯನ್ನು. ಇದರ ಗಂಭೀರ ಅರಿವು ಶಿಕ್ಷಣ ಸಚಿವರಾದ ಕಾಗೇರಿಯವರಿಗೆ ಇರಬೇಕಿತ್ತು. ಆದ್ದರಿಂದಲೇ ಅನೇಕ ಪ್ರಾಜ್ಞರು ಅವರ ಮೇಲೆ ಮತ್ತೊಮ್ಮೆ ಮುಗಿಬಿದ್ದಿದ್ದಾರೆ.

 ಕೋಲಾರದಲ್ಲಿ ಪ್ರಗತಿಪರ ಸಂಘಟನೆಗಳು ಈ ಹಿಂದೆ ಇದೇ ಭಗವದ್ಗೀತೆ ಹೇರುವುದರ ವಿರುದ್ಧ ಪ್ರತಿಭಟನೆ ನಡೆಸಿದ್ದವು. ಅದೇ ನೆಲದಲ್ಲಿ ಶಿಕ್ಷಣ ಸಚಿವರು ಅವರೆಲ್ಲರಿಗೂ ಉತ್ತರ ಕೊಟ್ಟಿದ್ದಾರೆ.  ಸಚಿವರಾಗಿ ಅವರು ನೀಡಿರುವ ಹೇಳಿಕೆಯ ತರತಮವನ್ನು  ಒಂದು ಉದಾಹರಣೆ ಮೂಲಕ ನೋಡಬಹುದು. ಹೇಗೆಂದರೆ, ಆಯೋಧ್ಯ ವಿಷಯದಲ್ಲಿ ಬಿಜೆಪಿ ಪಕ್ಷವಾಗಿ ಗುಟುರು ಹಾಕಿದಂತೆ ಅಕಾರಕ್ಕೆ ಬಂದಾಗ ಮಾತನಾಡಲಿಲ್ಲ. ಏಕೆಂದರೆ ಅದು ಮೈತ್ರಿಕೂಟ ಧರ್ಮಕ್ಕೆ ವಿರುದ್ಧವಾದದ್ದೆಂಬ ನಿಲುವನ್ನು ಅಂದು ಆ ಪಕ್ಷದ ಪ್ರಮುಖ ನಾಯರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್. ಕೆ ಆಡ್ವಾಣಿಯವರಿಂದ ಹೇಳಿಸಿ ಎಲ್ಲರ ಬಾಯಿ ಮುಚ್ಚಿಸಲಾಗಿತ್ತು. ಇಲ್ಲಿ ಅದಕ್ಕೆ ತದ್ವಿರುದ್ದ. ಕಾರಣ ಇಲ್ಲಿ ಪಕ್ಷವೊಂದೇ ಅಕಾರ ನಡೆಸುತ್ತಿದೆ. ಬಿಜೆಪಿ ಏಕೈಕ ಅಕಾರರೂಢ ಪಕ್ಷವಾಗಿ ಹೊರ ಹೊಮ್ಮಲು  ಈ ಮೂರು ವರ್ಷಗಳಲ್ಲಿ ಆಡಿದ ಎಲ್ಲ ಆಟಗಳನ್ನೂ ಜನ ಬಲ್ಲರು. ಹಾಗೆಂದು ಅದು ಅಸಂವಿಧಾನಿಕವಾಗಿ ತೆಗೆದುಕೊಳ್ಳುವ ನಿರ್ಧಾರಗಳನ್ನು ನಾವೆಲ್ಲ ಬೆಂಬಲಿಸಬೇಕಿಲ್ಲ.

ಕಾಗೇರಿಯವರು ತಮ್ಮ ಪರಿವಾರದವರಿಗೆ ಈ ಕಟ್ಟಪ್ಪಣೆ ವಿಸಿ ದಕ್ಕಿಸಿಕೊಳ್ಳಬಹುದೇನೋ ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದು, ಸಚಿವರಾಗಿ ಅವರ ನಡೆ ಮತ್ತು ನುಡಿ, ಈ ವಿಷಯವಾಗಿ ಸಂಫೂರ್ಣವಾಗಿ ಅಸಂವಿಧಾನಿಕ. ಇದನ್ನೇ ಎಲ್ಲರೂ ಕಟು ಶಬ್ಧಗಳಲ್ಲಿ ಖಂಡಿಸುತ್ತಿರುವುದು. ಮಕ್ಕಳೆಲ್ಲ ಹೊರಲಾರದ ಪಠ್ಯಪುಸ್ತಕಗಳು ಮತ್ತು ಮನೆಗೆಲಸಗಳ ನಡುವೆ ನಲುಗುತ್ತಿದ್ದರೆ ಅವರಿಗೆ ಭಗವದ್ಗೀತೆ ಆಭಿಯಾವೆಂಬ ಇನ್ನೊಂದು ಹೊರೆ ಏಕೆ?. ಇಷ್ಟಾಗಿಯೂ ಮಕ್ಕಳೆಲ್ಲಾ ಒಂದೇ ಧರ್ಮದವರು/ಜಾತಿಯವರು ಶಾಲೆಗೆ ಬರುತ್ತಾರೆಯೇ? ಸಾಧ್ಯವಾದರೆ ಮಕ್ಕಳಗೆ ಎಲ್ಲ ಧರ್ಮಗಳ ಸಾರವನ್ನು ಹೇಳಬೇಕು ಇದರಲ್ಲಿ ವ್ಯತ್ಯಾಸವಿರಬಾರದು. ಯಾವುದೇ ಧರ್ಮದ ವಿಚಾರಗಳನ್ನು ಜಾತಿ/ಧರ್ಮದ ಹಂಗಿಲ್ಲದ ಮಕ್ಕಳ ಮೇಲೆ ಹೇರುವುದು ಸರಿಯೇ? ಹಾಗೆಯೇ ಮಕ್ಕಳನ್ನು ಬರಿ ಶಿಕ್ಷಣದ ಕಡೆಗಷ್ಟೇ ಗಮನ ಹರಿಸಲು ಸಾಧ್ಯವಾಗುವಂತೆ ಅವರ ಪಾಡಿಗೆ ಅವರನ್ನು ಬಿಡುವುದು ಒಳ್ಳೆಯದು.

ಯಾವುದೂ  ಒಂದು ಧರ್ಮ ಆಥವಾ ಆ ಧರ್ಮದ ಗ್ರಂಥ ಶ್ರೇಷ್ಠವೆಂದು ಹೇಳುವುದು ಅದರಲ್ಲೂ ಮಕ್ಕಳ ಮಟ್ಟದಲ್ಲಿ ಅದನ್ನು ಪರಿಚಯಿಸುವುದು ಸರ್ವಾತಾ ಮಾನ್ಯವಲ್ಲ. ಇಲ್ಲದಿದ್ದರೆ ಈ ಹಿಂದೆ, ವಾಜಪೇಯಿ ಸರಕಾರ ಪೋಕ್ರಾನ್ ಅಣು ಪರೀಕ್ಷೆ ನಡೆಸಿದಾಗ ಲಂಕೆಶ್ ಅವರು ಹೇಳಿದ ‘ಎಲ್ಲ ಬಿಟ್ಟು ಮಗ ಭಂಗಿ ನೆಟ್ಟ’ ಎಂಬಂತಾಗುತ್ತದೆ. ಇಷ್ಟಾಗಿಯೂ ಒಳ್ಳೆಯ ಮಂತ್ರಿಗಳಲ್ಲಿ ಒಬ್ಬರೆಂದು ಹೆಸರು ಪಡೆದಿರುವ ಕಾಗೇರಿಯವರು ಸುಪ್ರೀಂ ಕೋರ್ಟ್ನಲ್ಲಿರುವ ಕನ್ನಡ ಮತ್ತು ಇಂಗ್ಲಿಷ್ ಭಾಷಾ ಮಾಧ್ಯಮಗಳ ವಿಷಯವಾಗಿ ಹೆಚ್ಚು ಗಮನ ಹರಿಸಿ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡ್ಯೊಯ್ಯವಂತಾದರೆ ಎಲ್ಲ ಕನ್ನಡಿಗರಿಗೆ ಸಂತಸವಾಗುತ್ತದೆ.