ಹೆಜ್ಜೆ ಗೆಜ್ಜೆ :
ಈ ಬ್ಲಾಗ್ ನಲ್ಲಿರುವ ವಿಷಯ ಮತ್ತು ಚಿತ್ರಗಳ ಬಳಕೆಗೆ ಅನುಮತಿ ಕಡ್ಡಾಯ.
ಮತ್ತೊಂದು ಕ್ಷಣ ನನ್ನ ಬಗ್ಗೆ ಬದುಕು-ಬರಹ

Wednesday 30 June 2010

ಭಾರತಕ್ಕೊಂದು ಪಾರುಗಾಣಿಕೆ ನೀತಿ ಬೇಕೆ?

ಜಗತ್ತಿನ ಮುಂದುವರಿಯುತ್ತಿರುವ ದೇಶಗಳ ಅರ್ಥಕೋಶಕ್ಕೆ ಜಾಗತೀಕರಣದ ತೀರಾ ಇತ್ತೀಚಿನ ಕೊಡುಗೆ ಪಾರುಗಾಣಿಕೆ (ಬೇಲ್ಔಟ್) ಎಂಬ ಪದ. ಬೇಲ್ಔಟ್ಗೆ ಕನ್ನಡದಲ್ಲಿ ಇತ್ತೀಚಿಗೆ ನಾವೇ ಕಂಡುಕೊಂಡಿರುವ ಪದ ಪಾರುಗಾಣಿಕೆ. ಕಂಪನಿ ಅಥವಾ ವ್ಯವಸ್ಥೆಯೊಂದು ಸಂಕಷ್ಟಕ್ಕೆ ಸಿಲುಕಿದಾಗ ಅದನ್ನು ಆ ಸ್ಥಿತಿಯಿಂದ ಮೇಲೆತ್ತಲು ಅಥವಾ ಪಾರುಮಾಡಲು ಸರಕಾರಗಳು ಕೊಡುವ ಕಾಣಿಕೆಯೇ ಈ ಪಾರುಗಾಣಿಕೆ. ವ್ಯವಸ್ಥೆಯೊಂದರ ಅಭಿವೃದ್ಧಿಗೆ ಸರಕಾರ ಘೋಷಿಸುತ್ತಿದ್ದ ಪ್ರೋತ್ಸಾಹಕರ ನೀತಿಗಳನ್ನು, ಇಂಥ ಉದ್ಯಮಕ್ಕೆ ಸರಕಾರ ಉತ್ತೇಜಕ ಕ್ರಮಗಳನ್ನು ಕೈಗೊಂಡಿದೆ ಎಂದು  ಈವರೆವಿಗೂ  ಹೇಳಲಾಗುತ್ತಿತ್ತು. ಈ ಎಲ್ಲ ಉತ್ತೇಜಕ ಕ್ರಮಗಳು ಯಾವುದೇ ಒಂದು ನಿರ್ದಿಷ್ಟ ಕಂಪನಿಗೆ ಲಾಭ ತಂದುಕೊಡುತ್ತಿರಲಿಲ್ಲ. ಬದಲಾಗಿ ಆಯಾ ಕ್ಷೇತ್ರದ ಎಲ್ಲ ರೀತಿಯ ಬೃಹತ್ ಮತ್ತು ಸಣ್ಣ ಉದ್ಯಮಗಳಿಗೆ ನೆರವಾಗುತ್ತಿದ್ದವು.

ಅಮೆರಿಕ, ಬ್ರಿಟನ್, ಚೀನಾ, ರಷ್ಯಾ,ಫ್ರಾನ್ಸ್ ಮತ್ತು ಜಪಾನ್ ಮುಂತಾದ  ಮುಂದುವರಿದ ರಾಷ್ಟ್ರಗಳು ಕಂಪನಿ ಹಾಗೂ ನಿರ್ದಿಷ್ಟ ಉದ್ಯಮದ ಕಂಪನಿಗಳ ಸಮೂಹಕ್ಕೆ ಈ ಪಾರುಗಾಣಿಕೆ ಪ್ಯಾಕೇಜ್ ನೀಡುವ ಪರಿಪಾಠವನ್ನು ಬಹಳ ಹಿಂದಿನಿಂದಲೇ ಇಟ್ಟುಕೊಂಡಿವೆ. ಪ್ರಸ್ತುತ ಆರ್ಥಿಕ ಕುಸಿತದಲ್ಲಿ ಅಮೆರಿಕ ಮಾಡುತ್ತಿರುವುದೂ ಇದನ್ನೆ. ಸತ್ಯಂಗೆ ಪಾರುಗಾಣಿಕೆ ಇಲ್ಲ ಎಂದು ಸರಕಾರ ಎರಡೆರಡು ಬಾರಿ ಹೇಳಿದೆಯಾದರೂ ಅದನ್ನು ಪೂರ್ಣ ನಂಬುವಂತಿಲ್ಲ. ಸತ್ಯಂ ಹಗರಣ ಕೇವಲ ಸಂಕೇತ ಮಾತ್ರ. ಮುಂದೆ ಇಂತಹ ಪರಿಸ್ಥಿತಿಗಳು ಬೇಕಾದಷ್ಟು ಬರಬಹುದು.

ಭಾರತಕ್ಕಿಂತ ಹತ್ತಾರು ಪಟ್ಟು ಹೆಚ್ಚು ಸದೃಢ ಹಣಕಾಸು ವ್ಯವಸ್ಥೆ ಹೊಂದಿರುವ ಅಮೆರಿಕದಂಥ ದೇಶದಲ್ಲೇ ಈಗ ಪಾರುಗಾಣಿಕೆ (ಬೇಲ್ಔಟ್) ಬಗ್ಗೆ ಅಪಸ್ವರಗಳು ಏಳುತ್ತಿವೆ. ಬಂಡವಾಳಶಾಹಿಗಳ ವಕ್ತಾರರು ಎಂಬ ಆಪಾದನೆ ಹೊತ್ತುಕೊಂಡಿರುವ ಅಮೆರಿಕದ ಹೆಸರಾಂತ ಆರ್ಥಶಾಸ್ತ್ರಜ್ಞ ಪಾಲ್ಕ್ರುಗ್ಮನ್ ಮತ್ತು ಪತ್ರಕರ್ತ ಥಾಮಸ್ ಫ್ರೀಡ್ಮನ್ ಅಂಥವರೂ ಕೂಡಾ ಈಗ ಪಾರುಗಾಣಿಕೆ ನೀತಿಯನ್ನು ಪ್ರಶ್ನಿಸುತ್ತಿದ್ದಾರೆ. ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಪಾರುಗಾಣಿಕೆ ವ್ಯಾಖ್ಯಾನಕ್ಕೆ ಬೇರೆಯದೇ ಅರ್ಥವ್ಯಾಪ್ತಿಯ ಅನಿವಾರ್ಯತೆ ಇದೆ ಎನ್ನುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಭಾರತದಂಥ  ಮುಂದುವರಿಯುತ್ತಿರುವ ದೇಶ ಪಾರುಗಾಣಿಕೆ ಬಗ್ಗೆ ಯೋಚಿಸುವುದು ಎಷ್ಟು ಸರಿ? 

ಬಹುಸಂಖ್ಯಾತರ ಸುಖಗಳನ್ನು ಕಿತ್ತುಕೊಂಡು ಉದ್ಯಮಿಗಳಿಗೆ ರತ್ನಗಂಬಳಿ ಹಾಸಿ ಸ್ವಾಗತಿಸಿ, ತಣಿಸಲೆಂದೇ ಇರುವ ಕಂಪನಿಗಳ ಸಿಇಒಗಳಂತಿರುವ ರಾಜಕಾರಣಿ/ಅಕಾರಿ/ಅಕಾರೇತರ ವರ್ಗ ಆಧುನಿಕ ಭಾರತದಲ್ಲಿ ಅನೇಕ ಮಂದಿ ಸಿಗುತ್ತಾರೆ. ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಸುತ್ತಿದ್ದ ಕೆಲವೇ ಮಾಹಿತಿ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾಗಿದ್ದ ಸತ್ಯಂನ ಮೀಸೆ ಮಣ್ಣಾಗುವುದರೊಂದಿಗೆ ಭಾರತದಲ್ಲಿ ಬಹು ಚರ್ಚೆಯಾಗುತ್ತಿರುವುದು ಈ ಪಾರುಗಾಣಿಕೆ ಕುರಿತದ್ದೇ. ಸತ್ಯಂನಂಥ ಕಂಪನಿಗಳು ಮಾಡಿಕೊಂಡ ಅವಾಂತರದಿಂದ  ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗಿರುವ ಘಾಸಿ ಈ ಪಾರುಗಾಣಿಕೆಯಿಂದ ಖಂಡಿತಾ ಸರಿಹೋಗುವುದಿಲ್ಲ. ಇದು ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಸಿಕ್ಕೀತೇ? ಎಂಬಂತೆ.

ಐಟಿ ಜಗತ್ತು ಸಮಗ್ರ ಜನಜೀವನವನ್ನು ಅಸ್ತವ್ಯಸ್ತ ಮಾಡುವಷ್ಟು ಪ್ರಭಾವವನ್ನು ಭಾರತದಲ್ಲಿ ಇನ್ನೂ ಹರಡಿಲ್ಲ. ಹಾಗಾಗಿ ಅದು ಎಲ್ಲರ ಅಳಿವು -ಉಳಿವೇನಲ್ಲ. ಇಲ್ಲಿನ ಜನರ ನೀರು, ಭೂಮಿ ಕಬಳಿಸಿ ಅವರನ್ನು ಅತಂತ್ರರನ್ನಾಗಿಸಿ ವಿದೇಶಿ ವಿನಿಮಯದ ಕಾರಣಕ್ಕೆ ರೂಪಾಯಿಗೆ ಒಂದಷ್ಟು ಬೆಲೆ ತಂದುಕೊಟ್ಟಿರುವುದೇ ದೇಶಕ್ಕೆ ಆಗಿರುವ ಲಾಭ. ಇದೇ ಮಂದಿ ರೂಪಾಯಿ ದುರ್ಬಲಗೊಂಡರೆ ಕುಣಿದು ಕುಪ್ಪಳಿಸುತ್ತಾರೆ. ಮಾರುಕಟ್ಟೆಯಲ್ಲಿ ಡಾಲರ್ ಎದುರಿಗೆ ರೂಪಾಯಿಗೆ ಸ್ವಲ್ಪ ಕಿಮ್ಮತ್ತು ಬಂದರೂ ತಮ್ಮ ಲಾಭಾಂಶಕ್ಕೆ ಹೊಡೆತ ಅಂತ ನೆಲಮುಗಿಲು ಒಂದಾಗುವಂತೆ ಬಡಬಡಿಸುತ್ತಾರೆ.  ಹತ್ತಾರು ವರ್ಷಗಳಿಂದ ಇಲ್ಲಿ ಒಪ್ಪೊತ್ತಿಗೆ ಅನ್ನವಿಲ್ಲದೆ, ಕೆಲಸಕ್ಕೆ ಸರಿಯಾದ ಕೂಲಿಯಿಲ್ಲದೆ, ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಈ ದರಿದ್ರ ಸರಕಾರಗಳಿಗೆ ಅನ್ನದಾತನನ್ನು ಪಾರು ಮಾಡುವ ಯಾವ ಪಾರುಗಾಣಿಕೆ ಉಪಾಯಗಳೂ ಹೊಳೆದಿಲ್ಲ. ಕಳೆದ ಒಂದು ದಶಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸಾವಿರಾರು ರೈತರ ಕಲ್ಯಾಣಕ್ಕೆ ಒಂದು ಸಮಗ್ರ ಪ್ಯಾಕೇಜ್ ನೀಡಲು ಸರಕಾರಗಳಿಗೆ ಸಾಧ್ಯವಾಗಿಲ್ಲ. ಸೂರಿಲ್ಲದೆ, ನೀರಿಲ್ಲದೆ, ಬಿಸಿಲಲ್ಲಿ ಒಣಗಿ, ಮಳೆಯಲ್ಲಿ ನೆನೆದು ಬದುಕುತ್ತಿರುವವರ ಮಕ್ಕಳು ಶಾಲೆಗೆ ಹೋಗಲು ಮೈಲುಗಟ್ಟಲೆ ಕೆಟ್ಟ ರಸ್ತೆಯಲ್ಲಿ ನಡೆಯಬೇಕು. ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು ಇದೇ ರಸ್ತೆಯಲ್ಲಿ ಹೊತ್ತೊಯ್ಯಬೇಕು. ಆದರೆ ತಮ್ಮ ಹವಾನಿಯಂತ್ರಿತ ಕಾರುಗಳು ಓಡಾಡಲು ರಸ್ತೆಯ ಒಂದು ತಿರುವಿನಲ್ಲಿ ಒಂದು ಬಿರುಕು ಬಿಟ್ಟಿದ್ದರೂ ಸರಕಾರ ಸರಿಯಾದ ಮೂಲಭೂತ ಸೌಕರ್ಯ ಒದಗಿಸುತ್ತಿಲ್ಲ ಎಂದು ಕೂಗಾಡಿ ಬೇರೆ ರಾಜ್ಯ/ದೇಶಕ್ಕೆ  ಹೋಗುತ್ತೇವೆಂದು ಬೆದರಿಕೆಯೊಡ್ಡುತ್ತಲೇ ವ್ಯವಹರಿಸುವ ಐಟಿ-ಬಿಟಿ ಮಂದಿಯನ್ನು ಪಾರು ಮಾಡುವುದು ಹೇಗೆಂಬ ಚರ್ಚೆಗಳು ಸತ್ಯಂ ಪತನದ ಕಾರಣದಿಂದ ಮುಗಿಲು ಮುಟ್ಟಿವೆ. ಸತ್ಯಂ ಹುಳುಕು ಹೊರಬಿದ್ದು ತಿಂಗಳೂ ಕಳೆದಿಲ್ಲ ಆಗಲೇ ಅವರನ್ನು ಮೇಲೆತ್ತಲು ಜನರ ತೆರಿಗೆ ಹಣವನ್ನು ಸುರಿಯಬೇಕೆಂದು ಕೆಲ ರಾಜಕಾರಣಿ-ಅಕಾರಿ ದಲ್ಲಾಳಿಗಳು ತುದಿಗಾಲಲ್ಲಿ ನಿಂತಿದ್ದಾರೆ.

ಪೂರ್ಣಪ್ರಮಾಣದ ದಿನಗೂಲಿಯೂ ಸಿಗದೆ ದೇಶದ ಶೇಕಡಾ ೭೦ರಷ್ಟು ಮಂದಿ ಒದ್ದಾಡುತ್ತಿರುವಾಗ, ಲಕ್ಷಗಳಲ್ಲಿ ಸಂಬಳ ಎಣಿಸಿಕೊಂಡು ಐಷಾರಾಮಿ ಜೀವನ ನಡೆಸಿದ ಕೆಲವೇ ಸಾವಿರ ಮಂದಿ ಬಗ್ಗೆ ಇಷ್ಟೊಂದು ತೀವ್ರವಾಗಿ ಸ್ಪಂದಿಸುತ್ತಿರುವವರಿಗೆ ದೇಶದ ಬೆನ್ನೆಲುಬಾದ ಲಕ್ಷ, ಲಕ್ಷ ಜನರ ಗೋಳು ಮಾತ್ರ ‘ದಿನಾ ಸಾಯುವವರಿಗೆ ಅಳುವವರ್ಯಾರು?’ ಎನ್ನುವಂತಹದ್ದು. ಅಷ್ಟಾಗಿಯೂ, ಅವನು ಕೊಟ್ಟ ಹಣದಿಂದಲೇ ಈ ಐಷಾರಾಮಿಗಳನ್ನು ಉಳಿಸಬೇಕಿರುವ ವಿಪರ್ಯಾಸ ನೋಡಿ. ‘ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಯಾವಾಗಲೂ ಮೇಲು’ ಹೇಗೆಂದು ಈಗ ಅನೇಕರಿಗೆ ಗೊತ್ತಾಗುತ್ತಿರಬಹುದು.  ಯಾವತ್ತೂ ಕೊಡುತ್ತಿದ್ದ ರೈತ ಕೇಳಲಾರಂಭಿಸಿ ಎಷ್ಟೋ ದಿನಗಳಾಗಿದ್ದರೂ ಅವನತ್ತ ಬೆನ್ನು ತಿರುಗಿಸಿರುವ ಮಂದಿ ಇವತ್ತು ಜಗತ್ತೇ ಮುಳುಗಿ ಹೋಗಿದೆ ಎಂಬಂತೆ ಹುಯಿಲೆಬ್ಬಿಸುತ್ತಿದ್ದಾರೆ. ಸತ್ಯಂಗೆ ಎರಡು ಸಾವಿರ ಕೋಟಿ ರೂಗಳ ಪಾರುಗಾಣಿಕೆ  ನೀಡಬೇಕೆಂಬ ಚರ್ಚೆ ಕಳೆದ ಕೆಲ ವಾರಗಳಿಂದ ನಡೆಯುತ್ತಲೇ ಇದೆ. ಸತ್ಯಂನ ಕುರಿತ ಖ್ಯಾತಿ/ಕುಖ್ಯಾತಿಗೆ ಹೊಣೆ ಯಾರು? ಅದರ ನೆರವಿಗೆ ಸರಕಾರ ಬರಬೇಕೆ? ಬೇಡವೇ ಎಂಬ ಬಗ್ಗೆ ಸಹಜವಾಗಿಯೇ ಆಂಧ್ರದ ಮಾಜಿ ಮತ್ತು ಹಾಲಿ ಮುಖ್ಯಮಂತ್ರಿಗಳಿಬ್ಬರ ನಡುವೆ  ಜಟಾಪಟಿ ಜಗಜ್ಜಾಹೀರಾಗಿದೆ. ಇದೇ ವಿಷಯವಾಗಿ ಕೇಂದ್ರದ ಇಬ್ಬರು ಪ್ರಭಾವಿ ಸಚಿವರಾಗಿರುವ ಪ್ರಣಬ್ ಮುಖರ್ಜಿ ಮತ್ತು ಚಿದಂಬರಂ ಪಾರುಗಾಣಿಕೆ ಪ್ರಸ್ತಾವವನ್ನು ವಿರೋಸಿದ್ದಾರೆಂಬ ಸುದ್ದಿ ಬಂದಿದೆ. ಅವರ ಈ ವಿರೋಧದ ಹಿಂದೆ ಮೇಲೆ  ಚರ್ಚಿಸಿರುವ ಅನೇಕ ಸೂಕ್ಷ್ಮಗಳೇ ಇರಬೇಕು. ಇಂಥ ವಿಷಯಗಳ ಬಗ್ಗೆ ಎಂದಿನ ತಮ್ಮ ನಿಧಾನ ತಂತ್ರ ಅನುಸರಿಸುತ್ತಿರುವ ಎಡಪಂಥೀಯರಿಗಂತೂ ಈ ವಿಷಯ ಅಗ್ನಿಪರೀಕ್ಷೆಯೇ ಸರಿ.  ಜನರ ನೀರು, ಭೂಮಿಯನ್ನು ಕಬಳಿಸಿ ಸರಕಾರದ ಮೇಲೆ ಪ್ರಭಾವ ಬೀರಿ ಎಲ್ಲ ಸಂಪನ್ಮೂಲಗಳನ್ನು ತಮ್ಮೆಡೆಗೆ ಬಹಳ ಘನತೆಯಿಂದಲೇ ತಿರುಗಿಸಿಕೊಳ್ಳುವ ಚಾಣಾಕ್ಷ ಐಟಿ-ಬಿಟಿ ಉದ್ಯಮಿಗಳು, ತಾವು ಪಡೆದಿರುವುದಕ್ಕೆ ಪ್ರತಿಯಾಗಿ ಕೊಟ್ಟಿರುವುದು ಏನೂ  ಇಲ್ಲ. ಜನಸಾಮಾನ್ಯರು ಪಟ್ಟಣದಲ್ಲಿ ಜೀವಿಸಲು ಸಾಧ್ಯವಾಗದಷ್ಟು ದುಬಾರಿಗೊಳಿಸಿದ್ದು ಇವರು ಕೊಟ್ಟಿರುವ ಬೃಹತ್ ಕೊಡುಗೆ. ನೂರು ಜನರ ಅನ್ನ, ಭೂಮಿ ಕಿತ್ತುಕೊಂಡು ೧೦ ಜನಕ್ಕೆ ಕೆಲಸ ಕೊಟ್ಟು ಅತಿಯಾದ ಸಂಬಳ ಕೊಟ್ಟರೆ ದೇಶ ಉದ್ಧಾರವಾಗುತ್ತದೆ ಎಂಬ ಭ್ರಮೆ ಹುಟ್ಟಿಸಿ ಸಮಾಜದಲ್ಲಿ ಬೃಹತ್ ಕಂದಕಕ್ಕೆ  ಕಾರಣವಾಗಿರುವ ಅನೇಕರು, ಎಲ್ಲ ಹೋರಾಟಗಳನ್ನು ಹತ್ತಿಕ್ಕಿ ತಮಗೆ ಭೂಮಿ, ನೀರು ಕೊಡುವ ಮುಖ್ಯಮಂತ್ರಿಗಳನ್ನು  ನಂಬರ್ ಒನ್ ಮುಖ್ಯಮಂತ್ರಿ ಎಂದೋ ಇಲ್ಲ ಈತ ಪ್ರಧಾನಿ ಆಗಬೇಕು ಎಂತಲೋ ವಂದಿಮಾಗದರಂತೆ ವದರುವ ಇವರಿಗೆ ಅದೇ ಸಾಮಾನ್ಯನ ತೆರಿಗೆ ಹಣವನ್ನೇ ಏಕೆ ಕೊಡಬೇಕು?

ಇವತ್ತಿಗೂ ತಂತ್ರಜ್ಞಾನವೂ ಸೇರಿದಂತೆ ಇತರೆ ಯಾವುದೇ ಉದ್ಯಮವೂ ಭಾರತದ ಎಲ್ಲರನ್ನೂ ಪ್ರತಿನಿಸುವ ಅವರ ಏಳಿಗೆಗಾಗಿ ಇರುವ ಏಕೈಕ ಪಾರಂಪರಿಕ ರಂಗ ಅಥವ ಸಂಕೇತವೇನಲ್ಲ. ಕಂಪನಿಯೊಂದು ಮಾಡಿಕೊಂಡ ಯಡವಟ್ಟಿಗೆ ಬೇರೆಯವರ ಮೂಗನ್ನೇಕೆ ಕೊಯ್ಯಬೇಕು? ಹಾಗೆಂದು ಸಾವಿರಾರು ಉದ್ಯೋಗಿಗಳ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಬಗ್ಗೆ  ಅನುಕಂಪ ಖಂಡಿತಾ ಇರಬೇಕು. ಅದರೆ ಅವರ್ಯಾರೂ ಬೀದಿಗೆ ಬೀಳುವಂತಹ ಪರಿಸ್ಥಿತಿ ಬಂದಿಲ್ಲವಲ್ಲ. ಅವರೆಲ್ಲ ವೃತ್ತಿ ಪ್ರತಿಭಾವಂತರು. ಬೇಕಾದಷ್ಟು ಅವಕಾಶಗಳೂ ಇವೆ. ಅಲ್ಲಿವರೆಗೆ ಉಪವಾಸ ಬೀಳುವ ಸ್ಥಿತಿಯಂತೂ ಅವರ್ಯಾರಿಗೂ ಇಲ್ಲ.  ಅಣೆಕಟ್ಟೆ ಕಟ್ಟಲು ನೂರಾರು ಹಳ್ಳಿಗಳ ಲಕ್ಷಾಂತರ ಜನರಿಗೆ, ಒಂದಿಷ್ಟು ಪರಿಹಾರ ಕೊಟ್ಟು ಪುನರ್ವಸತಿ ಎಂಬ ಹಂದಿಗೂಡುಗಳಂಥ ಜಾಗಕ್ಕೆ ನೂಕುವ ಈ ಅಕಾರಿ-ರಾಜಕಾರಣಿಗಳಿಗೆ ಇದೆಲ್ಲ ಅರ್ಥವಾಗುವುದಿಲ್ಲವೆ? ತಲೆತಲಾಂತರದಿಂದ ಬಂದ ಎಲ್ಲವನ್ನೂ ಕಳೆದುಕೊಂಡು ದಿನದಿನಕ್ಕೂ ಕಿಮ್ಮತ್ತು ಕಡಿಮೆಯಾಗುವ ದುಡ್ಡು ತೆಗೆದುಕೊಂಡು  ಈಗಾಗಲೇ ಊರು ತೊರೆದವರ ಸಂಕಷ್ಟಗಳಿಗೆ ಈ ಮಂದಿ ಸ್ಪಂದಿಸಿದ್ದಾರೆಯೇ?. ಇಷ್ಟೆಲ್ಲದರ ಹೊರತಾಗಿಯೂ ತಾನು ಲಾಭ ಗಳಿಸುವಾಗ ಮೂರು ತಿಂಗಳಿಗೊಮ್ಮೆ, ಅವು ದೇಶದ ಜಿಡಿಪಿ ಅಂಕಿ -ಅಂಶಗಳೇನೋ ಎಂಬಂತೆ ವರದಿಗಳನ್ನು ಮಾಧ್ಯಮಕ್ಕೆ ತಲುಪಿಸುವ ಐಟಿ-ಬಿಟಿ ಮಂದಿ, ಅದರ ಶೇಕಡಾ ಒಂದರಷ್ಟನ್ನಾದರೂ ಅಭಿವೃದ್ಧಿ ಕೆಲಸಗಳಿಗೆ ನೀಡಿದ್ದಾರೆಯೇ? ಹತ್ತಾರು ವರ್ಷಗಳ ತೆರಿಗೆ ರಿಯಾಯಿತಿ ಪಡೆದು ಹಣ ಮಾಡುವಾಗ ಯಾರನ್ನೂ ದರಕರಿಸದ ಇವರನ್ನು ಜನರ ಹಣದಿಂದ ಏಕೆ ಉಳಿಸಬೇಕು? ಸತ್ಯಂಗೆ ಪಾರುಗಾಣಿಕೆ ನೀಡುವುದೇ ನಿಜವೇ ಆದರೆ ಅದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತೆಯಷ್ಟೇ ಅಲ್ಲದೆ ಜನವಿರೋ ಹಾಗೂ ಜನತಂತ್ರವಿರೋ ಕೂಡಾ. ಪ್ರಪಂಚದಲ್ಲಿ ಆಗಿರುವ ಆರ್ಥಿಕ ಹಿಂಜರಿತದ ಪರಿಣಾಮದಿಂದ ಈಗ ಐಟಿ ಸೇರಿದಂತೆ ಎಲ್ಲ ಉದ್ಯಮಗಳೂ ಸಂಕಷ್ಟದಲ್ಲಿವೆ. ಹಾಗಾಗಿ ಯಾವುದೋ ಒಂದು ವಲಯದ ಒಂದು ಕಂಪನಿಗೆ ಪಾರುಗಾಣಿಕೆ ನೀಡುವ ಬದಲು ಇಡೀ ಉದ್ಯಮ ವಲಯಕ್ಕೆ ಅನುಕೂಲವಾಗುವಂಥ ಸಮಗ್ರ ಸುಧಾರಣಾ ಕ್ರಮ ಕೈಗೊಂಡರೆ ಒಳ್ಳೆಯ ಫಲ ದೊರೆಯಬಹುದು.

ಜಗತ್ತಿನ ಮುಂದುವರಿಯುತ್ತಿರುವ ದೇಶಗಳ ರಾಜಕೀಯ ವ್ಯವಸ್ಥೆ, ಮುಂದುವರಿದ ರಾಷ್ಟ್ರಗಳ ರಾಜಕೀಯ ವ್ಯವಸ್ಥೆಗಿಂತ ಪೂರ್ಣ ಭಿನ್ನ. ಅದರಲ್ಲೂ ಭಾರತದಂಥ ದೇಶದಲ್ಲಿ ಬಹುಸಂಸ್ಕೃತಿಯ ಬೃಹತ್ ಪ್ರಜಾಪ್ರಭುತ್ವವಿದ್ದರೂ ಜಾತಿ, ಧರ್ಮದ ಆಧಾರದ ಮೇಲೇ ಇನ್ನೂ ಪ್ರಭಾವ ಉಳಿದುಕೊಂಡಿರುವ ಸ್ವಜನಪಕ್ಷಪಾತ, ಭ್ರಷ್ಟ  ವ್ಯವಸ್ಥೆ ತುಂಬಿ ತುಳುಕುತ್ತಿದೆ. ಪರಿಸ್ಥಿತಿ ಹೀಗಿರುವಾಗ ಇಲ್ಲಿ ತಮಗೆ ಬೇಕಾದವರಿಗೆ ಬೇಕಾದಂತೆ ಮುಂದಿನ ದಿನಗಳಲ್ಲಿ ಪಾರುಗಾಣಿಕೆ ಹಂಚುವುದಿಲ್ಲ ಎಂಬ ಯಾವ ಖಾತರಿಯೂ ಇಲ್ಲ. ಹಾಗಾಗಿಯೇ ಪಾರುಗಾಣಿಕೆ ಭಾರತದ ಮಟ್ಟಿಗೆ ನಿಜವಾಗಿಯೂ ಸೋಂಕು.

೧೮ ಫೆಬ್ರವರಿ ೨೦೦೯ರ ವಿಜಯಕರ್ನಾಟಕ ಸಂಚಿಕೆಯಲ್ಲಿ ಪ್ರಕಟವಾಗಿದೆ. 

No comments:

Post a Comment