ಹೆಜ್ಜೆ ಗೆಜ್ಜೆ :
ಈ ಬ್ಲಾಗ್ ನಲ್ಲಿರುವ ವಿಷಯ ಮತ್ತು ಚಿತ್ರಗಳ ಬಳಕೆಗೆ ಅನುಮತಿ ಕಡ್ಡಾಯ.
ಮತ್ತೊಂದು ಕ್ಷಣ ನನ್ನ ಬಗ್ಗೆ ಬದುಕು-ಬರಹ

Wednesday 30 June 2010

ಲಂಕೆಗೊಂದು ಲಂಘನ


ಶ್ರೀಲಂಕಾ, ಭಾರತ ಮಾತೆ ಸುರಿಸಿದ ಒಂದು ಕಣ್ಣೀರ ಹನಿ. ಇದು ಯಾರಿಗೆ ಹೊಳೆದ ಅದ್ಭುತವೋ ಗೊತ್ತಿಲ್ಲ. ಶ್ರೀಲಂಕಾದ ಭೂಪಟವನ್ನು ನೋಡಿದರೆ ಹಾಗನಿಸುತ್ತದೆ. ಭಾರತ ಮಾತೆ ಸಂತೋಷಕ್ಕೊ, ದುಃಖಕ್ಕೋ ಸುರಿಸಿದ ಕಣ್ಣೀರಿನಿಂದ ಶ್ರೀಲಂಕಾ ಉದಿಸಿದೆ ಎಂಬ ಒಂದು ಅಂಶವೇ ಲಂಕಾದ ಬಗೆಗೆ ಭಾರತೀಯರಿಗೆ ಎಂಥದೋ ಒಂದು ಸಂಬಂಧ ಏರ್ಪಡಿಸುತ್ತದೆ. ಜಗತ್ತಿಗೆ ಮೊದಲ ಮಹಿಳಾ ಪ್ರಧಾನಿಯನ್ನು ಕೊಟ್ಟ ದೇಶದ ಭೂಪಟಕ್ಕೆ ಈ ಕಲ್ಪನೆ ಕೊಟ್ಟ ಮಹಾತ್ಮನಿಗೆ ಒಂದು ನಮಸ್ಕಾರ.

ಅಂತರಿಕ ಸಮಸ್ಯೆ ಜತೆಗೆ ಪ್ರವಾಸೋದ್ಯಮವನ್ನೇ ಹೆಚ್ಚಾಗಿ ನಂಬಿಕೊಂಡಿರುವ ದೇಶವೊಂದರ ಸ್ಥಿತಿ ಹಣಕಾಸು ಹಿಂಜರಿತದ ಸಮಯದಲ್ಲಿ ಹೇಗಾಗಬಹುದು ಎಂಬುದಕ್ಕೆ ಶ್ರೀಲಂಕಾ ಈಗ ಅತ್ಯುತ್ತಮ ಉದಾಹರಣೆಯಂತಿದೆ. ಹಣಕಾಸು ಹಿಂಜರಿತದ ತೀವ್ರ ಪರಿಣಾಮಗಳು ಲಂಕಾದ ತುಂಬ ಕಾಣುತ್ತವೆ. ಬಣ ಬಣ ಎನ್ನುವ ಹೋಟೆಲ್, ರೆಸಾರ್ಟ್ಗಳು, ಬೀಚ್ಗಳು ಪ್ರವಾಸಿಗರ ಕೊರತೆಯಿಂದ ನಲುಗುತ್ತಿವೆ. ಹಾಗಾಗಿ ಯಾವುದೆ ಹೋಟೆಲ್, ರೆಸಾರ್ಟ್ಗೆ ಹೋದರೂ ಅಲ್ಲಿನ ಊಟೋಪಚಾರ ಅಷ್ಟಕ್ಕಷ್ಟೆ. ಅಷ್ಟೇಕೆ ನಾವು ಉಳಿದುಕೊಂಡಿದ್ದ ಕೊಲಂಬೊದಲ್ಲಿರುವ ಭಾರತದ  ಹೆಸರಾಂತ ಪಂಚತಾರಾ ಹೋಟೆಲ್ನಲ್ಲೂ ಊಟ,ತಿಂಡಿ ಎಲ್ಲವೂ ಸಪ್ಪೆ,ಸಪ್ಪೆ. ಹೆಚ್ಚೇನೂ ಆಯ್ಕೆಗೆ ಅವಕಾಶವಿರದಂಥ ಸರಳ ಊಟ. ಪಂಚತಾರಾ ಹೋಟೆಲ್ ಊಟ ಅಂದರೆ ಇಷ್ಟೇನಾ ಎನ್ನುವಷ್ಟು.

ಸೈನಿಕರ ಗಸ್ತು: ಪ್ರವಾಸಿಗಳ ಕುಸಿತಕ್ಕೆ ಲಂಕೆಯಲ್ಲಿ ನಡೆಯುತ್ತಿರುವ ಆಂತರಿಕ ಸಂಘರ್ಷ ವ್ಯಾಪಕ ಪರಿಣಾಮ ಬೀರಿದೆ ಎನಿಸುತ್ತದೆ. ಹೆಜ್ಜೆ ಹೆಜ್ಜೆಗೂ ತಪಾಸಣೆ ಅದೂ ಕೂಗಳತೆ ದೂರದಲ್ಲೇ ಎರಡೆರಡು ಬಾರಿ. ಪ್ರತಿ ಬಾರಿಯೂ ವಾಹನದಿಂದ ಕೆಳಗಿಳಿದು ಎಲ್ಲ ವರದಿ ಒಪ್ಪಿಸಿದ ನಂತರವೇ ಮುಂದಕ್ಕೆ ಹೋಗಬೇಕು. ನಾಗರಿಕರ ನಡುವೆಯೇ ಆಧುನಿಕ ಬಂದೂಕುಗಳನ್ನು ಹಿಡಿದ ಯುವ ಸೈನಿಕರು ಎಲ್ಲೆಂದರಲ್ಲಿ  ಕಣ್ಣಿಗೆ ಬೀಳುತ್ತಾರೆ. ಈ ಪರಿಯ ಭದ್ರತೆ ಬಗ್ಗೆ ಟಿವಿಗಳಲ್ಲಿ ನೋಡಿ, ಪತ್ರಿಕೆಗಳಿಲ್ಲಿ ಓದಿದ್ದ ನಮಗೆ ಬಿಗಿ ಭದ್ರತೆ ಎಂದರೇನು ಅಂದು ಗೊತ್ತಾದದ್ದು ಲಂಕಾದ ರಾಜಧಾನಿ ಕೊಲಂಬೊದಲ್ಲಿ.

ಲಂಕೆಯ ಸೈನಿಕರನ್ನು ನೋಡಿದರೆ ಅಯ್ಯೋ ಪಾಪ ಅನಿಸುತ್ತದೆ. ಅಲ್ಲಿ ಸೈನ್ಯಕ್ಕೆ ಸೇರಲು ಕನಿಷ್ಠ ವಯೋಮಿತಿ ೧೫ ವರ್ಷ. ಸೇನೆಗೆ ಸೇರುವುದು ಕಡ್ಡಾಯವಲ್ಲದಿದ್ದರೂ ಕಾಲೇಜಿನಲ್ಲಿ ಕಲಿಯಬೇಕಾದ ವಯಸ್ಸಿನಲ್ಲಿ ಗನ್ ಹಿಡಿದು ದೇಶಸೇವೆ ಮಾಡುತ್ತಿದ್ದ, ಗಂಭಿರ ಹಸನ್ಮುಖಿಗಳಂತೆ ಕಾಣುತ್ತಿದ್ದ ಅವರನ್ನು ನೋಡಿದರೆ ನಾವೆಲ್ಲ ಎಷ್ಟು ಪುಣ್ಯವಂತರು ಅನಿಸುತ್ತಿತ್ತು. ನಾವು ಕಂಡ ಬಹುತೇಕ ಸೈನಿಕರ ವಯಸ್ಸು ೨೫ ವರ್ಷ ದಾಟಿರಲಿಲ್ಲ. ಕೆಲವರಂತೂ ಗಂಟೆಗಟ್ಟಲೆ ಒಂದೇ ಕಡೆ ನಿಲ್ಲಬೇಕಾಗಿದೆ. ಅವರ ಹೆಗಲ ಮೇಲೆ ದೊಡ್ಡ ಬಂದೂಕು. ಅದರ ತೂಕ ಎಷ್ಟೋ? ಹೆದ್ದಾರಿಗಳಲ್ಲಿ ಮರಳು ತುಂಬಿದ ಚೀಲಗಳ ಕೋಟೆ ಕಟ್ಟಿಕೊಂಡು ನಡುವೆ ಗನ್ ಹಿಡಿದು ಸೆಟೆದುಕೊಂಡಿದ್ದರೂ ಸ್ಥಿತಪ್ರಜ್ಞರಂತಿದ್ದ ಆ ಯುವ ಸಯನಿಕರು ಹುಟ್ಟುಸಿದ ಭಾವನೆಗಳು ನೂರಾರು. ಬಂದೂಕು ಹಿಡಿದು ಶಿಫ್ಟ್ಗಳಲ್ಲಿ ಹಗಲಿರುಳೆನ್ನದೆ ಜನರ ರಕ್ಷಣೆಗೆ ನಿಲ್ಲುವ ಜಗತ್ತಿನ ಎಲ್ಲ ಸೈನಿಕರಿಗೂ ನಾವೆಷ್ಟು ಕೃತಜ್ಞರಾಗಿದ್ದರೂ ಸಾಲದೆಂಬ ಭಾವ ಮೂಡಿತು.

ಬಿಗಿ ಭದ್ರತೆ: ಪೋರ್ಚುಗೀಸರು, ಅರಬರು ಮತ್ತು ಇಂಗ್ಲಿಷರ ಆಡಳಿತಕ್ಕೆ ಒಳಗಾಗಿದ್ದ  ಶ್ರೀಲಂಕಾ ಸ್ವತಂತ್ರಗೊಂಡಿದ್ದು ೧೯೪೮ನೇ ಇಸವಿ ಫೆಬ್ರವರಿ ೪ರಂದು. ನಮ್ಮ ತಂಡ ಕೊಲಂಬೊದಲ್ಲಿದ್ದ ದಿನ (ಜನವರಿ.೨೦) ಕ್ಕೆ ಸ್ವಾತಂತ್ರ್ಯ ದಿನಾಚರಣೆಗೆ ಕೇವಲ ೧೪ ದಿನ ಉಳಿದಿತ್ತು. ಅದಕ್ಕಾಗಿ ತಾಜ್ ಸಮುದ್ರ ಹೋಟೆಲ್ನ ಪಕ್ಕದಲ್ಲಿ ಬೀಚ್ಗೆ ಎದುರಾಗಿ ಭರ್ಜರಿ ಸಭಾಂಗಣದ ನಿರ್ಮಾಣವೂ ನಡೆಯುತ್ತಿತ್ತು. ಇಪ್ಪತ್ತರ ಬೆಳಗ್ಗೆ ನಾವು ತಾಜ್ ಹೋಟೆಲ್ನ ಮುಂದಿರುವ ಕಣ್ಣುಕುಕ್ಕುವಂತಿದ್ದ ಸುಮಾರು ೨ ಕಿಲೋಮೀಟರ್ ಉದ್ದದ ಕಡಲ ದಂಡೆಯ ರಸ್ತೆಯಲ್ಲಿ ವಾಕ್ ಮಾಡುತ್ತಿದ್ದಾಗ ಹೆಜ್ಜೆ ಹೆಜ್ಜೆಗೂ ನಮ್ಮನ್ನು ಗಮನಿಸುತ್ತಿದ್ದ ಸೈನಿಕರು ನಮ್ಮೆಡೆಯೇ ದೃಷ್ಟಿ ನೆಟ್ಟಿದ್ದರು. ಕೆಲವರು ನಾಗರಿಕರ ವೇಷದಲ್ಲಿದ್ದರು. ಸೈನಿಕರ ಫೋಟೊ ತೆಗೆಯುವುದು ಬೇಡ ಎಂಬ ಸೂಚನೆ  ಕೊಡಲಾಗಿತ್ತು. ಬಿಗಿ ಭದ್ರತೆ ಕಾರಣದಿಂದ ನಮ್ಮ ಬೆಂಗಳೂರಿನ ಸಣ್ಣ ಪಾರ್ಕೊಂದರಲ್ಲಿ ವಾಕ್ ಮಾಡುವಷ್ಟು ಜನರೂ ಅಲ್ಲಿರಲಿಲ್ಲ.  ವಾಕ್ ಮುಗಿಸಿ ಮರಳುವಾಗ ನಾವು ರಸ್ತೆಯ ಇನ್ನೊಂದು ಬದಿಯಲ್ಲಿದ್ದ ಪ್ರತಿಮೆಯೊಂದರ ಫೋಟೊ ತೆಗೆದುಕೊಂಡು ಅದೇ ಬದಿಯಿಂದ ಹೊಟೇಲ್ ಕಡೆ ನಮ್ಮದೇ ಲೋಕದಲ್ಲಿ ವಿಹರಿಸುತ್ತಾ ಬರುತ್ತಿದ್ದೆವು. ಇದ್ದಕ್ಕಿದ್ದಂತೆ ನಾಲ್ಕೈದು ಪೊಲೀಸರು ಮತ್ತು ಸೈನಿಕರಿದ್ದ  ತಂಡ ನಮ್ಮನ್ನು ಸುತ್ತುವರಿಯಿತು. ಪ್ರಶ್ನೆಗಳ ಮಳೆ ಸುರಿಸಿತು. ನಾವು ಪಂಚತಾರಾ ಹೋಟೆಲ್ನ ಅತಿಥಿಗಳು, ಮಾಧ್ಯಮದವರು ಎಂದೆವು. ಪಾಕಿಸ್ತಾನದವರಾ ಎಂದ ಒಬ್ಬ. ಭಾರತೀಯರು ಎಂದೆವು. ಇನ್ನೊಬ್ಬ ತಮಿಳಾ ಎಂದ. ನಾವು ಬೆಂಗಳೂರಿನವರು ಎಂದೆವು. ನಗುಮೊಗದಿಂದ ನಮ್ಮನ್ನು ರಸ್ತೆಯ ಇನ್ನೊಂದು ಬದಿಯಿಂದ ಹೋಟೆಲ್ಗೆ ಹೋಗುವಂತೆ ಸೂಚಿಸಿ ದಾರಿ ಬಿಡಲಾಯಿತು. ಆ ಕಡೆ ಅಧ್ಯಕ್ಷರದೂ, ಪ್ರಧಾನಿಯದೋ ನಿವಾಸ ಇದೆ ಎಂದು ಯಾರೋ ಗೊಣಗಿದರು. ಅಂದು ರಾತ್ರಿ ಊಟವಾದ ನಂತರ ಒಂದು ರೌಂಡ್ ಬೀಚ್ನಲ್ಲಿ ಸುತ್ತೋಣ ಎನಿಸಿ ಹೋಟೆಲ್ ಕಾಂಪೌಂಡ್ನ ಬಳಿ ಬಂದೆವು. ಹೋಟೆಲ್ನ ಎರಡೂ ಬದಿ ನಿಂತು ಕಾವಲು ಕಾಯುತ್ತಿದ್ದ ಸೈನಿಕರು ನಮ್ಮನ್ನು ಹೊರಬಿಡಲು ಸುತಾರಾಂ ಒಪ್ಪಲಿಲ್ಲ. ಅದಕ್ಕಾಗಿ ದೇಶದ ಉತ್ತರ ಭಾಗವಾದ ಜಾಫ್ನಾದಲ್ಲಿ ಎಲ್ಟಿಟಿಇ ಗೆರಿಲ್ಲಾಗಳೊಂದಿಗೆ ನಡೆಯುತ್ತಿದ್ದ ನಿರ್ಣಾಯಕ ಸಮರದ ಪರಿಣಾಮ ಭದ್ರತೆ ತುಸು ಅತಿ ಎನಿಸುವಷ್ಟಿತ್ತು.

ಸಹಜ ಸುಂದರಿ ಕೊಲಂಬೊ: ಬಹುಪಾಲು ವೃತ್ತಗಳಲ್ಲಿ ಬುದ್ಧನ ಮುಗುಳ್ನಗೆಯ ಮೂರ್ತಿ, ಯಾವುದೋ ಒಂದು ವೃತ್ತದಲ್ಲಿ ಗಣಪತಿ, ಮತ್ತೊಂದು ಸರ್ಕಲ್ನಲ್ಲಿ ವೀಣಾಪಾಣಿ ಸ್ನಿಗ್ಧ ಸೌಂದರ್ಯದ ಸರಸ್ವತಿ ವಿಗ್ರಹ. ಮುಗಿಲನ್ನು ಚುಂಬಿಸುವಂತಿದ್ದ ಎತ್ತರದ ಗೋಪುರ ಹೊಂದಿದ್ದ ನಮ್ಮ ಶ್ರೀರಂಗಪಟ್ಟಣ, ಹಂಪಿ ದೇವಸ್ಥಾನಗಳನ್ನು ನೆನಪಿಸುತ್ತಿದ್ದ ಗೋಪುರಗಳ ದೇವಸ್ಥಾನಗಳು. ಅಷ್ಟೇನೂ ಜನಸಂದಣಿಯಿಲ್ಲದ ಕಿರಿದಾದ ರಸ್ತೆಗಳ ಕಾರಣಕ್ಕೆ ಟ್ರಾಫಿಕ್ಕು. ಮಂಗಳೂರಿನಂಥ ಹವೆ. ಹೆಜ್ಜೆ ಹೆಜ್ಜೆಗೂ ಕಾಣುವ ಟರ್ಫ್ ಕ್ಲಬ್ಗಳ ಅಕೌಂಟೆಂಟ್ ಕಚೇರಿಗಳು, ಹೆಚ್ಚೂ ಕಡಿಮೆ ಅಷ್ಟೇ ಸಂಖ್ಯೆಯ ಪೀಪಲ್ಸ್ ಬ್ಯಾಂಕ್ನ ಶಾಖಾ ಕಚೇರಿಗಳು. ಪೀಪಲ್ಸ್ ಬ್ಯಾಂಕ್ ಶ್ರೀಲಂಕಾದ ಮುಖ್ಯ ಸಂಕೇತಗಳಲ್ಲಿ ಒಂದು. ಕೊಲಂಬೊದಲ್ಲಿ ಶಾಪಿಂಗ್ ಎಂದರೆ ತಟ್ಟನೆ ಎಲ್ಲರೂ ಹೇಳುವ ಹೆಸರು ಹೌಸ್ ಆಫ್ ಫ್ಯಾಷನ್. ಬೆಂಗಳೂರಿನ ಒಂದು ಸಣ್ಣ ಮಾಲ್ನಂತಿರುವ ಹೌಸ್ ಆಫ್ ಫ್ಯಾಷನ್ ತುಂಬ ಪ್ರಸಿದ್ಧ. ಐದು ಅಂತಸ್ತಿನ ಈ ಪುಟ್ಟ ಕಟ್ಟಡದಲ್ಲಿ ಕಿರಾಣಿ ಹೊರತುಪಡಿಸಿ ಉಳಿದೆಲ್ಲಾ ವಸ್ತುಗಳು ಅದರಲ್ಲೂ ಬಟ್ಟೆಗಳು ಹೆಚ್ಚು ಸಿಗುತ್ತವೆ. ಹೆಂಗಸರು, ಮಕ್ಕಳೂ ಸೇರಿದಂತೆ ಎಲ್ಲ ವರ್ಗದವರಿಗೂ ಪ್ರತ್ಯೇಕ ವಿಭಾಗದ ಮಳಿಗೆಗಳಿವೆ. ಇದು ಕೊಲಂಬೊದ ವೈಶಿಷ್ಟ್ಯ.

ಬೀಚ್ಗಳ ತವರು ಬೆಂಟೋಟಾ: ಲಂಕಾ ಪ್ರಕೃತಿ ಸೌಂದರ್ಯದ ಖನಿ. ಹಿಂದೂ ಮಹಾಸಾಗರದಿಂದ ಸುತ್ತುವರಿದಿರುವ ಈ ಪುಟ್ಟ ದ್ವೀಪ ಒಂಬತ್ತು ಪ್ರಾಂತ್ಯಗಳುಳ್ಳ ೨೫ ಜಿಲ್ಲೆಗಳನ್ನು ಹೊಂದಿದೆ. ಕರ್ನಾಟಕದ ಮೂರನೇ ಒಂದು ಭಾಗದಷ್ಟಿರುವ ಲಂಕಾದಲ್ಲಿ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸಿಗಿರಿಯಾ, ಕ್ಯಾಂಡಿ, ಅನುರಾಧಾಪುರ, ಪೋಲನ್ನರುವಾ, ದಂಬುಲ್ಲಾ, ಕಟರಗಾಮಾ, ಶ್ರೀಪಾದ ಎಂಬ ಏಳು ಸ್ಥಳಗಳಿವೆ. ನಮ್ಮ ಪ್ರವಾಸ ಕಾಲದಲ್ಲಿ ಯಾವುದೇ ವಿಶ್ವಪರಂಪರೆಯ ತಾಣಕ್ಕೆ ಭೇಟಿ ನೀಡಲಿಲ್ಲವಾದರೂ ಬೆಂಟೋಟಾ ಎಂಬ ಸುಂದರ ದ್ವೀಪಗಳ ಗುಚ್ಚದಲ್ಲಿ ವಿಹರಿಸಿದೆವು. ಬೆಂಟೋಟಾ ಕೊಲಂಬೊ ಮತ್ತು ದಕ್ಷಿಣಕ್ಕಿರುವ ಗಾಲೇ ಪಟ್ಟಣಗಳನ್ನು ಸೇರಿಸುವ ಸಮುದ್ರದ ದಂಡೆಯಲ್ಲೇ ಹಾದು ಹೋಗುವ ಹೆದ್ದಾರಿಯಲ್ಲಿದೆ. ಸುಮಾರು ೬೫ ಕಿಲೋಮೀಟರ್ನ ಈ ಅಂತರದಲ್ಲಿ ಹೆಚ್ಚು ಕಡಿಮೆ ಇಕ್ಕೆಲಗಳಲ್ಲಿ ಮನೆಗಳ ನಡುವೆಯೇ ರಸ್ತೆ ಹಾದುಹೋಗುತ್ತದೆ. ಹಾಗಾಗಿ ಸಮುದ್ರದ ದರ್ಶನವಾಗುವುದು ಅಲ್ಲಲ್ಲಿ ಮಾತ್ರ. ಎಕರೆಗಳ ಲೆಕ್ಕದಲ್ಲಿರುವ ನೂರಾರು ದ್ವೀಪಗಳನ್ನು ಸುತ್ತುವರಿದಿರುವ ಹಿನ್ನೀರಿನಲ್ಲಿ ವಿದ್ಯುಚ್ಚಾಲಿತ ದೋಣಿಗಳಲ್ಲಿ ಸಂಚರಿಸುವುದೇ ರೋಚಕ ಅನುಭವ. ಕಡಲ ಹಿನ್ನೀರಿನಲ್ಲಿ ಕಣ್ಣಿಗೆ ಕಾಣುವ ಮೊಸಳೆಗಳ ಹಿಂಡು, ದಡಕ್ಕೆ ಹೊಂದಿಕೊಂಡಿರುವ ತುಂಬಾ ವ್ಯವಸ್ಥಿತವಾಗಿ ಒಪ್ಪವಾಗಿರುವ ರೆಸಾರ್ಟ್ಗಳು, ಹೋಟೆಲ್ಗಳು, ಒಂದೊಂದೇ ಸಂಸಾರಗಳಿರುವ ಕೆಲ ದ್ವೀಪಗಳಿವೆ. ಅಲ್ಲಿರುವ ಹೇರಳ ಮಸಾಲೆಯ ಚೆಕ್ಕೆ ಮರಗಳಿಂದ ಚೆಕ್ಕೆ, ಎಣ್ಣೆ ಬೇರ್ಪಡಿಸಿ ಮಾರುವ ಅಂಥ ಒಂದು ಮನೆಗೆ ನಾವು ಭೇಟಿ ನೀಡಿದ್ದೆವು.
ವ್ಯತ್ಯಾಸವಿಲ್ಲ: ಕೃಷಿಯಂತೆ ಮೀನುಗಾರಿಕೆಯನ್ನು ನಂಬಿಕೊಂಡಿರುವ ದೊಡ್ಡ ಸಂಖ್ಯೆಯ ಜನ ಲಂಕೆಯಲ್ಲಿದ್ದಾರೆ. ಪ್ರವಾಸೋದ್ಯಮ ಮತ್ತು ರಫ್ತು ಕುಸಿದರೆ ನೇರ ಪರಿಣಾಮ, ಹೋಟೆಲ್, ಮೀನುಗಾರಿಕೆ ಮೇಲಾಗುತ್ತದೆ. ಅದನ್ನೇ ನಾವು ಲಂಕೆಯಲ್ಲಿ ಹೆಚ್ಚು ಕಂಡೆವು. ಚಹಾ ಲಂಕೆಯಲ್ಲಿ ಬಹು ಸ್ವಾದಗಳಲ್ಲಿ ಸಿಗುತ್ತದೆ. ಟೀ ಪ್ರಿಯರಿಗಂತೂ ಅದು ಆಡಂಬೋಲವೇ ಸರಿ. ಗುಣಮಟ್ಟ ಮತ್ತು ಸ್ವಾದಗಳನ್ನು ಆಧರಿಸಿ ಹತ್ತಾರು ಬಗೆಯ ಸಂಸ್ಕರಿಸಿ ಮಾಡಿದ ಚಹಾ ಎಲೆಗಳ ಡಬ್ಬಗಳ ಪ್ಯಾಕ್ ಸಿಗುತ್ತದೆ. ಸ್ಥಳೀಯ ಪರಂಪರೆ ಸಾರುವ ಮರದ ಕೆತ್ತನೆಗಳು ಹೇರಳವಾಗಿ ಸಿಗುತ್ತವೆ. ಆನೆ, ಬೌದ್ಧ ಹಾಗೂ ಹಿಂದೂ ದೇವರುಗಳ ಸುಂದರ ಮುಖವಾಡಗಳು ಸಿಗುತ್ತವೆ. ಭಾರತದ ಒಂದು ರೂಪಾಯಿಗೆ ಸಧ್ಯಕ್ಕೆ ಶ್ರೀಲಂಕಾದ ಎರಡು ರೂಪಾಯಿ ಇಪ್ಪತ್ತು ಪೈಸೆ ಸಿಗುತ್ತದೆ. ಆ ಲೆಕ್ಕದಲ್ಲಿ ಬೆಲೆಗಳಲ್ಲಿ ಭಾರತ-ಲಂಕಾಕ್ಕೂ ಹೆಚ್ಚು ವ್ಯತ್ಯಾಸಗಳಿಲ್ಲ. ಸಮದ್ರ ದಂಡೆ ಭರ್ತಿ ತೆಂಗಿನಿಂದ ತುಂಬಿದೆ. ಇದರ ಹೊರತು ಟೀ ತೋಟಗಳು, ಮಳೆಕಾಡುಗಳು, ಅಮೂಲ್ಯ ಮರಗಳು ಮತ್ತು ಕಾಡುಪ್ರಾಣಿಗಳಿಂದ ತುಂಬಿರುವ ಶ್ರೀಲಂಕಾ ನಮ್ಮ ಮಲೆನಾಡಿನಂತೆ ಸ್ಪಚ್ಚಂದ ಹಸಿರಿನಿಂದ ಕಂಗೊಳಿಸುತ್ತದೆ. ದೇಶದ ಶೇಕಡ ೨೫ರಷ್ಟು ಭಾಗ ಕಾಡುಪ್ರಾಣಿಗಳದೇ ಸಾಮ್ರಾಜ್ಯ ಭಾರತ ಹಾಗೂ ಶ್ರೀಲಂಕಾಗಳ ನಡುವೆ ರಾಮಾಯಣ ಸೇರಿ ಅನೇಕ ಪೌರಾಣಿಕ ಮತ್ತು ಭೌಗೋಳಿಕ ಸಂಬಂಧಗಳ ಗುಚ್ಚವೇ ಇದೆ. ಈ ಎಲ್ಲ ಕಾರಣಗಳಿಂದಲೋ ಏನೋ ಶ್ರೀಲಂಕಾ ಅನ್ಯ ದೇಶ ಎಂದು ಅನಿಸುವುದೇ ಇಲ್ಲ. ನಮ್ಮ ಮತ್ತು ಅವರ ಆಹಾರ, ಉಡುಗೆ - ತೊಡುಗೆಗಳಲ್ಲಿ ಅಷ್ಟು ವ್ಯತ್ಯಾಸವಿಲ್ಲ. ಜನ ಕೂಡ ಮೃದು ಸ್ವಭಾವದವರು ಎನಿಸುತ್ತದೆ. ವಿಜ್ಞಾನ- ತಂತ್ರಜ್ಞಾನಗಳ ವಿಷಯಗಳು ಅಲ್ಲಿನ್ನೂ ವ್ಯಾಪಕವಾಗಿಲ್ಲ. ಹಾಗಾಗಿ ಕೊಲಂಬೋ ನೋಡಿದರೆ ಹತ್ತು ವರ್ಷಗಳ ಹಿಂದಿನ ಬೆಂಗಳೂರು ನೋಡಿದಂತೆ ಅನಿಸುತ್ತದೆ. ಹಾಗಾಗಿಯೇ ಪ್ರವಾಸಿಗರಿಗೆ ಅದರಲ್ಲೂ ನವ ದಂಪತಿಗಳಿಗೆ ಲಂಕಾ ಸ್ವರ್ಗದಂತಿದೆ.

ತೆಂಗು ಮತ್ತು ಲಂಕನ್ನರು: ಲಂಕಾದ ಮುಖ್ಯ ಬೆಳೆ ಚಹಾ, ತೆಂಗು, ಭತ್ತ ಮತ್ತು ರಬ್ಬರ್ . ಲಂಕನ್ನರು ತೆಂಗಿಗೆ ತುಂಬಾ ಮಹತ್ವ ಕೊಡುತ್ತಾರೆ. ಆ ಮಹತ್ವ ಹೇಳುವ ಒಂದು ಕಥೆಯನ್ನು ಶ್ರೀಲಂಕಾದಲ್ಲಿ ನಮ್ಮ ಪತ್ರಕರ್ತರ ತಂಡವನ್ನು ಸುತ್ತಿಸಿದ ಹೆಸರಾಂತ ಪ್ರವಾಸಿ ಸಂಸೆ ಎಯ್ಟ್ಕೆನ್ ಸ್ಪೆನ್ಸ್ನ  ಮುಖ್ಯಅಕಾರಿ ಪ್ರಶಾಂತ್ ದಿಸೆನಾಯಕೆ ಹೇಳಿದರು. ಒಮ್ಮೆ ಅನೇಕ ದೇಶಗಳ ಮುಖ್ಯಸ್ಥರ ಸಭೆ ನಡೆಯುತ್ತಿತ್ತು. ಆ ಸಭೆಯಲ್ಲಿದ್ದ ಅನೇಕ ನಾಯಕರು ತಮ್ಮ ತಮ್ಮ ದೇಶಗಳ ವಿಜ್ಞಾನಿಗಳ ಕೌಶಲ ಮತ್ತು ಪ್ರತಿಭೆಯನ್ನು ಹೊಗಳುತ್ತಿದ್ದರು. ಅಮೆರಿಕದ ಅಧ್ಯಕ್ಷರು ತಮ್ಮ ದೇಶದ ವಿಜ್ಞಾನಿಗಳು ಸೂಪರ್ ಕಂಪ್ಯೂಟರ್ ಕಂಡುಹಿಡಿದು ಅದನ್ನು ಅನೇಕ ಶಾರೀರಕ ಸಮಸ್ಯೆಗಳಿಗೆ ಚಿಕಿತ್ಸೆ ಕೊಡಲು ಬಳಸುತ್ತಿರುವ ಬಗ್ಗೆ ಹೇಳಿದರು. ಫ್ರಾನ್ಸ್ನವರೂ ಕೂಡ ತಮ್ಮ ವಿಜ್ಞಾನಿಗಳು ರೋಬೋಟ್ಗಳಿಂದಲೇ ನಿತ್ಯದ ಅನೇಕ ಕೆಲಸ ನಿರ್ವಹಿಸುವ ವ್ಯವಸ್ಥೆ ರೂಪಿಸಿರುವುದಾಗಿ ಹೇಳಿಕೊಂಡರು. ಭಾರತದ ಪ್ರಧಾನಿಗಳು ತಮ್ಮ ದೇಶದ ವಿಜ್ಞಾನಿಗಳು ಕಾಲಿಲ್ಲದೆ ಹುಟ್ಟಿದ್ದ ಮಗುವಿಗೆ ಯಶಸ್ವಿಯಾಗಿ ಕಾಲು ಜೋಡಿಸಿದ್ದು ಆ ಮಗು ಮುಂದೆ ಒಲಂಪಿಕ್ಸ್ನ ಓಟದ ಸ್ಪರ್ಧೆಯಲ್ಲಿ  ಭಾಗವಹಿಸಲು ತಯಾರಿ ನಡೆಸುವಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದಾರೆ ಎಂದರು. ತಮ್ಮ ಸರದಿ ಬಂದಾಗ ಲಂಕಾದ ಅಧ್ಯಕ್ಷರು ಹೇಳಿದ್ದು: ನಮ್ಮ ದೇಶದಲ್ಲೂ ಒಂದು ಹೆಣ್ಣು ಮಗು ಹುಟ್ಟಿತ್ತು ಅದಕ್ಕೆ ಮೆದುಳು ಇರಲಿಲ್ಲ. ಆ ಮೆದುಳಿನ ಜಾಗಕ್ಕೆ ತೆಂಗಿನಕಾಯಿಯನ್ನು ಕೂಡಿಸುವಲ್ಲಿ ನಮ್ಮ ವಿಜ್ಞಾನಿಗಳು ಯಶಸ್ವಿಯಾದರು, ಮುಂದೆ ಆ ಮಗು ಶ್ರೀಲಂಕಾದ ಅಧ್ಯಕ್ಷೆಯಾಯಿತು.


೧ಫೆಬ್ರವರಿ ೨೦೦೯ರ ವಿಜಯಕರ್ನಾಟಕ ಸಂಚಿಕೆಯಲ್ಲಿ ಪ್ರಕಟವಾಗಿದೆ.

No comments:

Post a Comment