ಹೆಜ್ಜೆ ಗೆಜ್ಜೆ :
ಈ ಬ್ಲಾಗ್ ನಲ್ಲಿರುವ ವಿಷಯ ಮತ್ತು ಚಿತ್ರಗಳ ಬಳಕೆಗೆ ಅನುಮತಿ ಕಡ್ಡಾಯ.
ಮತ್ತೊಂದು ಕ್ಷಣ ನನ್ನ ಬಗ್ಗೆ ಬದುಕು-ಬರಹ

Wednesday 30 June 2010

ಫ್ರೀಡ್ಮನ್ ಮತ್ತು ನಿಲೇಕಣಿ ಜತೆ ಒಂದು ಸಂಜೆ

ಕಳೆದ ಸೋಮವಾರ (೦೯ ಫೆ. ೨೦೦೯) ಸಂಜೆ ಬೆಂಗಳೂರಿನ ತಾಜ್ ರೆಸಿಡೆನ್ಸಿ ಹೋಟೆಲ್ನಲ್ಲಿ ಹೆಸರಾಂತ ಪತ್ರಕರ್ತ ಹಾಗೂ ಜಾಗತಿಕವಾಗಿ ಪ್ರಸಿದ್ಧಿ ಪಡೆದಿರುವ ‘ದಿ ವರ್ಲ್ಡ್ ಈಸ್ ಫ್ಲ್ಯಾಟ್’ ಪುಸ್ತಕದ ಕರ್ತೃ ಥಾಮಸ್ ಲಾರೆನ್ ಫ್ರೀಡ್ಮನ್ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಸುಮಾರು ಮೂರು ನೂರು ಆಹ್ವಾನಿತರ ಸಮ್ಮುಖದಲ್ಲಿ ಜಗತ್ತಿನ ಐಟಿ ಐಕಾನ್ಗಳಲ್ಲಿ ಒಬ್ಬರಾದ ನಂದನ್ ನಿಲೇಕಣಿ ಮತ್ತು ಫ್ರೀಡ್ಮನ್ ಮುಖಾಮುಖಿಯಾಗಿದ್ದರು.

‘ಇಮ್ಯಾಜಿನಿಂಗ್ ಇಂಡಿಯಾ ಇನ್ ಎ ಹಾಟ್, ಫ್ಲ್ಯಾಟ್, ಆಂಡ್ ಕ್ರೌಡೆಡ್ ವರ್ಲ್ಡ್’ ಎಂಬ ವೇದಿಕೆ ಮೇಲೆ  ಇವರನ್ನು ಮುಖಾಮುಖಿ ಮಾಡಿಸಿದ್ದು ಪೆಂಗ್ವಿನ್ ಮತ್ತು ಎನ್ಡಿಟಿವಿ. ಇದು ಪೆಂಗ್ವಿನ್ ಇತ್ತೀಚೆಗೆ ಪ್ರಕಟಿಸಿರುವ ನಿಲೇಕಣಿ ಅವರ  ‘ಇಮ್ಯಾಜಿನಿಂಗ್ ಇಂಡಿಯಾ’  ಫ್ರೀಡ್ಮನ್ ಅವರ ಇತ್ತೀಚಿನ ಕೃತಿ  ‘ಹಾಟ್, ಫ್ಲ್ಯಾಟ್, ಆಂಡ್ ಕ್ರೌಡೆಡ್’ ಪುಸ್ತಕಗಳನ್ನು ಪ್ರಮೋಟ್ ಮಾಡಲು ಏರ್ಪಡಿಸಿದ್ದ  ಕಾರ್ಯಕ್ರಮವಾದರೂ ಅಲ್ಲಿ ಅನೇಕ ಗಂಭೀರ ಸಮಸ್ಯೆಗಳ ಬಗ್ಗೆ ಇಬ್ಬರೂ ಒಂದೂವರೆ ಗಂಟೆ ನಿರರ್ಗಳವಾಗಿ ಅಭಿಪ್ರಾಯ ಹಂಚಿಕೊಂಡರು. ಪ್ರೇಕ್ಷಕರ ಪ್ರಶ್ನೆಗಳಿಗೂ ಉತ್ತರಿಸಿದರು. ಎಂದಿನಂತೆ ಎನ್ಡಿಟಿವಿಯ ದೊಡ್ಡ ಗಂಟಲಿನ ಬರ್ಕಾ ದತ್ ಈ ಇಬ್ಬರು ಐಕಾನ್ಗಳನ್ನೂ ಮತ್ತು ಪ್ರೇಕ್ಷಕರನ್ನು ಯಶಸ್ವಿಯಾಗಿ ನಿರ್ವಹಿಸಿದರು. ಅದೊಂದು ಅಪರೂಪದ ಸಂಜೆ.

ನೂಯಾರ್ಕ್ ಟೈಮ್ಸ್ನಲ್ಲಿ ಪತ್ರಕರ್ತನಾಗಿ ಮಾಡಿದ ಕೆಲಸಕ್ಕೆ ಮೂರು ಬಾರಿ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ಪಡೆದಿರುವ, ಥಾಮಸ್ ಫ್ರೀಡ್ಮನ್ ಮತ್ತು ನಂದನ್ ನಿಲೇಕಣಿ ಅವರು ಜತೆಗಿನ ಸಂವಾದದಲ್ಲಿ ಜಾಗತಿಕ ತಾಪಮಾನ ಏರಿಕೆ, ಹಣಕಾಸು ಹಿಂಜರಿತ, ಜಾಗತೀಕರಣ, ಎನರ್ಜಿ ಟೆಕ್ನಾಲಜಿ, ಪ್ರಜಾಪ್ರಭುತ್ವ, ಕಾನೂನು, ಸ್ಲಮ್ಡಾಗ್ ಮಿಲೆನಿಯರ್, ಭಯೋತ್ಪಾದನೆ ಮತ್ತು ಯುದ್ಧ  ಮುಂತಾದ ಅನೇಕ ವಿಷಯಗಳು ಬಂದವು. ಇಬ್ಬರೂ ಒಟ್ಟಾಗಿ ಒತ್ತಿ ಒತ್ತಿ ಜಪಿಸಿದ ಮಂತ್ರ ‘ಆಶಾವಾದ’. ಇದೊಂದೇ ಆರ್ಥಿಕ ಹಿಂಜರಿತದಿಂದ ಪ್ರಪಂಚವೇ  ತತ್ತರಿಸಿರುವಾಗ ಎಲ್ಲರೂ ಗುರಿಮುಟ್ಟಲು ಇರುವ ಏಕೈಕ ಮಾರ್ಗ ಎಂದು ಹೇಳಿದ್ದು ಆ ಅರ್ಥಪೂರ್ಣ ಮಾತುಕತೆಯ ಒಟ್ಟು  ಸಾರಾಂಶದಂತಿತ್ತು.

ಲಘುಹಾಸ್ಯದ ಧಾಟಿಯಲ್ಲೇ ಬರ್ಕಾ ಮತ್ತು ಪ್ರೇಕ್ಷಕರ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ ಫ್ರೀಡ್ಮನ್ಎಲ್ಲರ ಮನ ಗೆದ್ದರು. ನಮ್ಮೆಲ್ಲಾ ತಂತ್ರಜ್ಞಾನ  ಪರಿಸರದ ಜೀವವೈವಿಧ್ಯ (ಈಕೋ ಸಿಸ್ಟಮ್) ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಬಳಕೆಯಾಗಬೇಕು. ಆರ್ಥಿಕ ಸ್ಥಿರತೆಗೆ ಇಂಧನ ತಂತ್ರಜ್ಞಾನ (ಎನರ್ಜಿ ಟೆಕ್ನೋಲಜಿ) ಹೊಸ ಮಂತ್ರವಾಗಬೇಕು. ಆರ್ಥಿಕ ಪಾರುಗಾಣಿಕೆಯಷ್ಟೇ ಮುಖ್ಯವಾಗಿ ತಕ್ಷಣ ಗಮನಹರಿಸಬೇಕಿರುವುದು ಇಂಧನ ತಂತ್ರಜ್ಞಾನ. ಅದು ಬೆಳೆಯದೇ ಹೋದರೆ ಇನ್ನೊಂದು ಕೈಗಾರಿಕಾ ಕ್ರಾಂತಿ ಸಾಧ್ಯವಿಲ್ಲ. ಅರಬ್ ರಾಷ್ಟ್ರಗಳು ಆಂತರಿಕ ಸ್ವಾತಂತ್ರ್ಯದ ಕೊರತೆ, ಮಹಿಳೆಯರ ಬಲವರ್ಧನೆ ಆಧುನಿಕ ಶಿಕ್ಷಣಗಳ ಬಗ್ಗೆ ತಕ್ಷಣ ಗಮನ ನೀಡಬೇಕು. ಎಲ್ಲರೂ ಸ್ವತಂತ್ರವಾಗಿ ನಡೆದಾಡಲು, ಮಾತನಾಡಲು ಅಲ್ಲಿರುವ ಉಸಿರುಗಟ್ಟುವ ವಾತಾವರಣವನ್ನು ತಿಳಿಗೊಳಿಸದೆ ಜಗತ್ತಿನೊಟ್ಟಿಗೆ ಶಾಂತಿಯುತ ಸಂಬಂಧ ಏರ್ಪಡಿಸಿಕೊಳ್ಳಲು ಸಾಧ್ಯವಿಲ್ಲ.   ತನ್ನ ಸ್ಥಳೀಯ ಶಕ್ತಿಯನ್ನು ಜಾಗತೀಕರಣಗೊಳಿಸುವ ಮೂಲಕ ನಾಯಕತ್ವ ವಹಿಸಿಕೊಳ್ಳುವ ಶಕ್ತಿ ಬೆಂಗಳೂರಿಗಿದೆ. ಅಮೆರಿಕ ಇಂಥದೇ ಅವಕಾಶವನ್ನು ಉಪಯೋಗಿಸಿಕೊಂಡು ಬೆಳೆದಿದೆ. ಇಂತಹ ಅವಕಾಶ ಬಂದರೆ ಬೆಂಗಳೂರು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಅಮೆರಿಕ ಕೂಡ ತಲೆತಲಾಂತರದಿಂದ ನಿರ್ಲಕ್ಷಿಸಿರುವ ಪರಿಸರ, ಇಂಧನ, ವಲಸೆ, ವೃದ್ಧಾಪ್ಯ ಪಿಂಚಣಿ ಮತ್ತು ಆರೋಗ್ಯ ಸಂಬಂ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕಿರುವುದು ತುರ್ತು. ಸ್ಲಮ್ಡಾಗ್ ಮಿಲೆನಿಯರ್ ಚಿತ್ರವನ್ನು ಕೇವಲ ಕಲೆಯಾಗಿ ಮಾತ್ರ ನೋಡಬೇಕು. ಭಾರತದ ಸ್ವಾತಂತ್ರ್ಯ ಆತ್ಮವಿಶ್ವಾಸಗಳನ್ನು ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ ಎಂದರು ಫ್ರೀಡ್ಮನ್.  ತಮ್ಮ ಹೆಸರಾಂತ ಪುಸ್ತಕ ‘ದಿ ವರ್ಲ್ಡ್ ಈಸ್ ಫ್ಲ್ಯಾಟ್’ ಗೆ ಆ ಹೆಸರು ಇಡಲು ನಿಲೇಕಣಿ ಕಾರಣ ಎಂದ ಫ್ರೀಡ್ಮನ್, ನಂದನ್ ಅವರನ್ನು ಸಂದರ್ಶಿದಾಗ ಅವರು ಹೇಳಿದ ‘ದಿ ಪ್ಲೇಯಿಂಗ್ ಫೀಲ್ಡ್  ಈಸ್ ಬೀಯಿಂಗ್ ಲೆವೆಲ್ಡ್’ ಎಂಬ ಉಕ್ತಿಯೇ ಅಂತಿಮವಾಗಿ ‘ದಿ ವರ್ಲ್ಡ್ ಈಸ್ ಫ್ಲ್ಯಾಟ್’ ಎಂಬ ಹೆಸರಿನ ಉಗಮಕ್ಕೆ ಕಾರಣವಾಯಿತು ಎಂದು ವಿವರಿಸಿದರು.

ಪ್ರಶ್ನೆಗಳಿಗೆ ಚುಟುಕಾಗಿ ಮತ್ತು ಲಘು ಧಾಟಿಯಲ್ಲಿ ಉತ್ತರಿಸಲು ನಂದನ್ ಕೂಡಾ ಹಿಂದೆ ಬೀಳಲಿಲ್ಲ. ಸತ್ಯಂನ ಹಗರಣದ ಮೂಲ ‘ರಿಯಲ್ ಎಸ್ಟೇಟ್’ ಎಂಬ ಚಟಾಕಿ ಹಾರಿಸಿದ ನಿಲೇಕಣಿ, ಇಂಥ ಹಗರಣಗಳು  ಭಾರತದ ಐಟಿ ಉದ್ಯಮ ತನ್ನ ಬದ್ಧತೆ ಮತ್ತು ಪಾರದರ್ಶಕತೆಯನ್ನು ಪುನಾ ನಿರೂಪಿಸಬೇಕಾದ ಸ್ಥಿತಿಗೆ ದೂಡಿದೆ. ಹಗರಣ ಭಾರತಕ್ಕೆ ಕಪ್ಪು ಚುಕ್ಕೆಯಾದರೂ ಅದು ವಿಶ್ವಾಸಾರ್ಹತೆಗೆ ದೊಡ್ಡ ಹಾನಿ ಮಾಡಲಾರದು. ಆದರೆ ಇನ್ನು ೩೦ ವರ್ಷಗಳನಂತರ ಭಾರತಕ್ಕೆ ಸಿಗುವ ಮಾನವಶಕ್ತಿ (ಹ್ಯೂಮನ್ ಕ್ಯಾಪಿಟಲ್)ಯ ಲಾಭ ಬೇರೆ ಯಾವುದೇ ದೇಶಕ್ಕೆ ಸಿಗಲು ಸಾಧ್ಯವಿಲ್ಲ. ಆಗ ದೇಶದ ಯುವಜನರೇ ಬಹುಸಂಖ್ಯಾತರಾಗಿರುತ್ತಾರೆ.  ಇದನ್ನೇ  ಡೆಮೋಗ್ರಾಫಿಕ್ ಡಿವಿಡೆಂಡ್ ಎಂದು ಕರೆದರು ನಿಲೇಕಣಿ. ಒಂದು ದೇಶದ ಚರಿತ್ರೆಯಲ್ಲಿ ಒಮ್ಮೆ ಮಾತ್ರ ಬರುವ ಸುವರ್ಣ ಅವಕಾಶ ಇದು. ಭಾರತದಲ್ಲಿ ಹುಟ್ಟುವ ಮಕ್ಕಳ  ಅನುಪಾತ ಕ್ರಮೇಣ ಕಡಿಮೆಯಾಗುತ್ತಿದ್ದು ಹಿರಿಯರ ಸಂಖ್ಯೆಯೂ ಕುಗ್ಗಲಿದೆ ಆಗ ದೇಶದ ಸಮಗ್ರ ಬೆಳವಣಿಗೆ ಭರದಿಂದ ಸಾಗುತ್ತದೆ. ಹಗರಣಗಳಲ್ಲಿ ಭಾರತವೇನೂ ಏಕಸ್ವಾಮ್ಯತೆ ಸಾಸಿಲ್ಲ ಏಕೆಂದರೆ  ಅಮೆರಿಕದಲ್ಲೂ ಹಗರಣಗಳಿವೆ. ಅಮೆರಿಕದಲ್ಲಿ ಇತ್ತೀಚೆಗೆ ನಡೆದ ಒಂದು ಹಗರಣದ ಆರೋಪಿಯನ್ನು ತಿಂಗಳುಗಳೇ ಕಳೆದರೂ ಬಂಸಿಲ್ಲ. ಆದರೆ ಭಾರತದಲ್ಲಿ ಒಂದು ದೊಡ್ಡ ಸಂಸ್ಥೆಯ ಮುಖ್ಯಸ್ಥನನ್ನು ಹಗರಣ ಹೊರಬಿದ್ದ ಮೂರು ದಿನಗಳಲ್ಲಿ ಬಂಸಲಾಯಿತು. ಇದು ಭಾರತ ಹೊಂದಿರುವ ನ್ಯಾಯ ವ್ಯವಸ್ಥೆಯ ಸಂಕೇತ. ಭಾರತದ ಪ್ರಜಾಪ್ರಭುತ್ವ ವಿಶ್ವಕ್ಕೆ ಮಾದರಿ ಎಂದರು.

ಭಾರತದ ಪ್ರತಿ ಮನುಷ್ಯ ಎರಡು ಟನ್ ಕಾರ್ಬನ್ ಅನ್ನು ವಾತಾವರಣಕ್ಕೆ ಸೇರಿಸುತ್ತಿದ್ದರೆ, ಅದೇ ಅಮೆರಿಕದಲ್ಲಿ ಪ್ರತಿಯೊಬ್ಬನೂ ೨೦ ಟನ್ ಸೇರಿಸುತ್ತಿದ್ದಾನೆ. ಆದರೂ ಭಾರತ ಕಾರ್ಬನ್ ನಿಯಂತ್ರಣದ ಜವಾಬ್ದಾರಿಯಿಂದ ಹಿಂದೆ ಸರಿಯಬಾರದು. ಭಾರತ ಅವಕಾಶಗಳ ಬಾಂಬ್ ಮೇಲೆ ಕುಳಿತಿದೆ ಆದರೆ ಅದಕ್ಕೆ ಇಚ್ಛಾಶಕ್ತಿ ಇರುವ ನಾಯಕತ್ವದ ಕೊರತೆ ಮತ್ತು ರಾಜಕೀಯ ಕ್ಷೋಭೆ ದೊಡ್ಡ ತೊಡಕುಗಳಾಗಿವೆ. ಭಾರತ ಇತರ ಆರ್ಥಿಕ ಮೂಲಗಳ ಕಡೆಯೂ ಗಮನಹರಿಸಬೇಕೆಂಬ ಪಾಠವನ್ನು ಈ ಹಿಂಜರಿತದಿಂದ ಕಲಿಯಬೇಕು ಹಾಗೆಯೇ  ಇತರ ಮೂಲಸೌಕರ್ಯಗಳ ಸುಧಾರಣೆಗೆ ತುರ್ತಾಗಿ ಗಮನ ಕೊಡಬೇಕು. ಸ್ಲಮ್ಡಾಗ್ ಮಿಲೆನಿಯರ್ನಲ್ಲಿ ಭಾರತವನ್ನು ಚಿತ್ರಿಸಿರುವ ಕ್ರಮ ಸರಿಯೇ ಎಂಬ ಪ್ರಶ್ನೆಗೆ  ಅದರಿಂದ ನಮ್ಮ ಆತ್ಮವಿಶ್ವಾಸವನ್ನು ಕುಂದಿಸಿಕೊಳ್ಳಬೇಕಾಗಿಲ್ಲ. ಅದನ್ನು ಚಿತ್ರವಾಗಿಯಷ್ಟೇ ನೋಡಬೇಕು ಏಕೆಂದರೆ ಆ ಸಿನಿಮಾ ಇಡೀ ಭಾರತದ ಚಿತ್ರಣ ನೀಡುವುದಿಲ್ಲ. ಆ ಚಿತ್ರದಲ್ಲಿ ಚಿತ್ರಿಸಿರುವುದಕ್ಕಿಂತ ಭಾರತ ಹೆಚ್ಚು  ವೈವಿಧ್ಯಮಯ ಮತ್ತು ಸಂಕೀರ್ಣವಾಗಿಯೂ  ಇದೆ ಎಂದರು ನಿಲೇಕಣಿ.

ಕಾರ್ಯಕ್ರಮದ ನಂತರ, ತಾವು ಕೊಂಡ ಪುಸ್ತಕದಲ್ಲಿ ಅವರಿಬ್ಬರ ಹಸ್ತಾಕ್ಷರ ಪಡೆಯಲು ಪುಸ್ತಕ ಪ್ರೇಮಿಗಳು ಎರಡು ಉದ್ದದ ಸಾಲುಗಳಲ್ಲಿ ನಿಂತಿದ್ದರು. ನನ್ನ ಸರದಿಯಲ್ಲಿ ಫ್ರೀಡ್ಮನ್ ಅವರಿಗೆ ವಿಜಿಟಿಂಗ್ ನೀಡಿ ಪರಿಚಯಿಸಿಕೊಂಡೆ. ಮುಗುಳ್ನಕ್ಕು, ಹಾಯ್ ನೈಸ್ ಮೀಟಿಂಗ್ ಯೂ ಅಂದರು. ದೊಡ್ಡ  ಅಂಕಣಕಾರ,ಲೇಖಕ, ಪತ್ರಕರ್ತನ ಜತೆ ಏನು ಮಾತನಾಡಬೇಕೆಂದು ತಕ್ಷಣಕ್ಕೆ ಹೊಳೆಯಲಿಲ್ಲ. ಪುಸ್ತಕದಲ್ಲಿ ಸುಮ್ಮನೆ ಸಹಿ ಹಾಕಿಕೊಡುತ್ತಾರೆ ಎಂದು ಎಣಿಸಿದ್ದೆ. ಎಲ್ಲರೊಂದಿಗೂ ಮಾತನಾಡುತ್ತಿದ್ದುದಷ್ಟೇ ಅಲ್ಲದೆ ಅವರು ಹೇಳಿದ ವಿಷಯಗಳನ್ನು ಅವರವರ ವಿಜಿಟಿಂಗ್ ಕಾರ್ಡ್ನಲ್ಲಿ ದಾಖಲಿಸಿಕೊಳ್ಳುತ್ತಿದ್ದುದು ಕುತೂಹಲಕಾರಿಯಾಗಿತ್ತು. ಜಾಗವಿಲ್ಲದ ವಿಜಿಟಿಂಗ್ ಕಾರ್ಡ್ಗಳ ಮೂಲೆಮೂಲೆಗಳಲ್ಲೂ ಬರೆದುಕೊಳ್ಳುತ್ತಿದ್ದರು.  ನೂಯಾರ್ಕ್ಟೈಮ್ಸ್ನ ನಿಮ್ಮ ಅಂಕಣವನ್ನು ತಪ್ಪದೆ ಓದುತ್ತೇನೆ ಅಂದೆ. ವೆರಿಮಚ್ ಅಪ್ರಿಷಿಯೇಟೆಡ್ ಅಂದರು. ಸೋ.., ಎಂದು ಮಾತು ಮುಂದುವರಿಸುವಂತೆ ಸೂಚಿಸಿದರು. ಹಣಕಾಸು ಹಿಂಜರಿತದ ಸಮಯದಲ್ಲಿ ಬೇಲೌಟ್(ಪಾರುಗಾಣಿಕೆ) ಬಗ್ಗೆ ನೀವು ತಳೆದಿದ್ದ ನಿಲುವು ನನಗೆ ತುಂಬ ಇಷ್ಟವಾಯಿತು ಎಂದೆ. ಹೇಗೆ ಎಂಬಂತೆ ನೋಡಿದರು. ಉತ್ತಮ ಶಕ್ತಿಯುತ ಸೋಲಾರ್ ಕಾರುಗಳನ್ನು ಸಂಶೋಸಲು ಹಣ ವಿನಿಯೋಗಿಸುವ ಬದಲು ಔಟ್ಡೇಟೆಡ್ ಆಗುತ್ತಿರುವ ಕಾರುಗಳನ್ನು ತಯಾರಿಸುವ ಕಂಪನಿಗಳಿಗೆ ಹಣದ ನೆರವು (ಪಾರುಗಾಣಿಕೆ)ನೀಡುವುದು ಡಿವಿಡಿಗಳು ಔಟ್ಡೇಟೆಡ್ ಆಗುವಾಗ ಕ್ಯಾಸೆಟ್ ತಯಾರಿಕೆಗೆ ಹಣ ಕೊಟ್ಟಂತೆ ಎಂಬ ನಿಮ್ಮ ಅಭಿಪ್ರಾಯದ ಹಿಂದಿನ ಲಾಜಿಕ್ ತುಂಬಾ ಚನ್ನಾಗಿದೆ ಎಂದು ಹೇಳಿದೆ. ಥ್ಯಾಂಕ್ಯು, ಥ್ಯಾಂಕ್ಯು ವೆರಿಮಚ್ ಅಂದು ನನ್ನ ವಿಜಿಟಿಂಗ್ ಕಾರ್ಡ್ ಮೇಲೆ ಏನನ್ನೋ ಗೀಚಿಕೊಂಡರು. ಗಂಭೀರವಾಗಿ ಮಾತನಾಡುತ್ತಲೇ ಆಟೋಗ್ರಾಫ್ ಹಾಕಿಕೊಟ್ಟು ಇನ್ನೊಬ್ಬರನ್ನು ಸ್ವಾಗತಿಸುವಂತೆ ಆ ಕಡೆ ನಗೆ ಬೀರಿದರು.

೨೨ ಫೆಬ್ರವರಿ ೨೦೦೯ರ ವಿಜಯಕರ್ನಾಟಕ ಸಂಚಿಕೆಯಲ್ಲಿ ಪ್ರಕಟವಾಗಿದೆ. 

ಭಾರತಕ್ಕೊಂದು ಪಾರುಗಾಣಿಕೆ ನೀತಿ ಬೇಕೆ?

ಜಗತ್ತಿನ ಮುಂದುವರಿಯುತ್ತಿರುವ ದೇಶಗಳ ಅರ್ಥಕೋಶಕ್ಕೆ ಜಾಗತೀಕರಣದ ತೀರಾ ಇತ್ತೀಚಿನ ಕೊಡುಗೆ ಪಾರುಗಾಣಿಕೆ (ಬೇಲ್ಔಟ್) ಎಂಬ ಪದ. ಬೇಲ್ಔಟ್ಗೆ ಕನ್ನಡದಲ್ಲಿ ಇತ್ತೀಚಿಗೆ ನಾವೇ ಕಂಡುಕೊಂಡಿರುವ ಪದ ಪಾರುಗಾಣಿಕೆ. ಕಂಪನಿ ಅಥವಾ ವ್ಯವಸ್ಥೆಯೊಂದು ಸಂಕಷ್ಟಕ್ಕೆ ಸಿಲುಕಿದಾಗ ಅದನ್ನು ಆ ಸ್ಥಿತಿಯಿಂದ ಮೇಲೆತ್ತಲು ಅಥವಾ ಪಾರುಮಾಡಲು ಸರಕಾರಗಳು ಕೊಡುವ ಕಾಣಿಕೆಯೇ ಈ ಪಾರುಗಾಣಿಕೆ. ವ್ಯವಸ್ಥೆಯೊಂದರ ಅಭಿವೃದ್ಧಿಗೆ ಸರಕಾರ ಘೋಷಿಸುತ್ತಿದ್ದ ಪ್ರೋತ್ಸಾಹಕರ ನೀತಿಗಳನ್ನು, ಇಂಥ ಉದ್ಯಮಕ್ಕೆ ಸರಕಾರ ಉತ್ತೇಜಕ ಕ್ರಮಗಳನ್ನು ಕೈಗೊಂಡಿದೆ ಎಂದು  ಈವರೆವಿಗೂ  ಹೇಳಲಾಗುತ್ತಿತ್ತು. ಈ ಎಲ್ಲ ಉತ್ತೇಜಕ ಕ್ರಮಗಳು ಯಾವುದೇ ಒಂದು ನಿರ್ದಿಷ್ಟ ಕಂಪನಿಗೆ ಲಾಭ ತಂದುಕೊಡುತ್ತಿರಲಿಲ್ಲ. ಬದಲಾಗಿ ಆಯಾ ಕ್ಷೇತ್ರದ ಎಲ್ಲ ರೀತಿಯ ಬೃಹತ್ ಮತ್ತು ಸಣ್ಣ ಉದ್ಯಮಗಳಿಗೆ ನೆರವಾಗುತ್ತಿದ್ದವು.

ಅಮೆರಿಕ, ಬ್ರಿಟನ್, ಚೀನಾ, ರಷ್ಯಾ,ಫ್ರಾನ್ಸ್ ಮತ್ತು ಜಪಾನ್ ಮುಂತಾದ  ಮುಂದುವರಿದ ರಾಷ್ಟ್ರಗಳು ಕಂಪನಿ ಹಾಗೂ ನಿರ್ದಿಷ್ಟ ಉದ್ಯಮದ ಕಂಪನಿಗಳ ಸಮೂಹಕ್ಕೆ ಈ ಪಾರುಗಾಣಿಕೆ ಪ್ಯಾಕೇಜ್ ನೀಡುವ ಪರಿಪಾಠವನ್ನು ಬಹಳ ಹಿಂದಿನಿಂದಲೇ ಇಟ್ಟುಕೊಂಡಿವೆ. ಪ್ರಸ್ತುತ ಆರ್ಥಿಕ ಕುಸಿತದಲ್ಲಿ ಅಮೆರಿಕ ಮಾಡುತ್ತಿರುವುದೂ ಇದನ್ನೆ. ಸತ್ಯಂಗೆ ಪಾರುಗಾಣಿಕೆ ಇಲ್ಲ ಎಂದು ಸರಕಾರ ಎರಡೆರಡು ಬಾರಿ ಹೇಳಿದೆಯಾದರೂ ಅದನ್ನು ಪೂರ್ಣ ನಂಬುವಂತಿಲ್ಲ. ಸತ್ಯಂ ಹಗರಣ ಕೇವಲ ಸಂಕೇತ ಮಾತ್ರ. ಮುಂದೆ ಇಂತಹ ಪರಿಸ್ಥಿತಿಗಳು ಬೇಕಾದಷ್ಟು ಬರಬಹುದು.

ಭಾರತಕ್ಕಿಂತ ಹತ್ತಾರು ಪಟ್ಟು ಹೆಚ್ಚು ಸದೃಢ ಹಣಕಾಸು ವ್ಯವಸ್ಥೆ ಹೊಂದಿರುವ ಅಮೆರಿಕದಂಥ ದೇಶದಲ್ಲೇ ಈಗ ಪಾರುಗಾಣಿಕೆ (ಬೇಲ್ಔಟ್) ಬಗ್ಗೆ ಅಪಸ್ವರಗಳು ಏಳುತ್ತಿವೆ. ಬಂಡವಾಳಶಾಹಿಗಳ ವಕ್ತಾರರು ಎಂಬ ಆಪಾದನೆ ಹೊತ್ತುಕೊಂಡಿರುವ ಅಮೆರಿಕದ ಹೆಸರಾಂತ ಆರ್ಥಶಾಸ್ತ್ರಜ್ಞ ಪಾಲ್ಕ್ರುಗ್ಮನ್ ಮತ್ತು ಪತ್ರಕರ್ತ ಥಾಮಸ್ ಫ್ರೀಡ್ಮನ್ ಅಂಥವರೂ ಕೂಡಾ ಈಗ ಪಾರುಗಾಣಿಕೆ ನೀತಿಯನ್ನು ಪ್ರಶ್ನಿಸುತ್ತಿದ್ದಾರೆ. ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಪಾರುಗಾಣಿಕೆ ವ್ಯಾಖ್ಯಾನಕ್ಕೆ ಬೇರೆಯದೇ ಅರ್ಥವ್ಯಾಪ್ತಿಯ ಅನಿವಾರ್ಯತೆ ಇದೆ ಎನ್ನುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಭಾರತದಂಥ  ಮುಂದುವರಿಯುತ್ತಿರುವ ದೇಶ ಪಾರುಗಾಣಿಕೆ ಬಗ್ಗೆ ಯೋಚಿಸುವುದು ಎಷ್ಟು ಸರಿ? 

ಬಹುಸಂಖ್ಯಾತರ ಸುಖಗಳನ್ನು ಕಿತ್ತುಕೊಂಡು ಉದ್ಯಮಿಗಳಿಗೆ ರತ್ನಗಂಬಳಿ ಹಾಸಿ ಸ್ವಾಗತಿಸಿ, ತಣಿಸಲೆಂದೇ ಇರುವ ಕಂಪನಿಗಳ ಸಿಇಒಗಳಂತಿರುವ ರಾಜಕಾರಣಿ/ಅಕಾರಿ/ಅಕಾರೇತರ ವರ್ಗ ಆಧುನಿಕ ಭಾರತದಲ್ಲಿ ಅನೇಕ ಮಂದಿ ಸಿಗುತ್ತಾರೆ. ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಸುತ್ತಿದ್ದ ಕೆಲವೇ ಮಾಹಿತಿ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾಗಿದ್ದ ಸತ್ಯಂನ ಮೀಸೆ ಮಣ್ಣಾಗುವುದರೊಂದಿಗೆ ಭಾರತದಲ್ಲಿ ಬಹು ಚರ್ಚೆಯಾಗುತ್ತಿರುವುದು ಈ ಪಾರುಗಾಣಿಕೆ ಕುರಿತದ್ದೇ. ಸತ್ಯಂನಂಥ ಕಂಪನಿಗಳು ಮಾಡಿಕೊಂಡ ಅವಾಂತರದಿಂದ  ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗಿರುವ ಘಾಸಿ ಈ ಪಾರುಗಾಣಿಕೆಯಿಂದ ಖಂಡಿತಾ ಸರಿಹೋಗುವುದಿಲ್ಲ. ಇದು ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಸಿಕ್ಕೀತೇ? ಎಂಬಂತೆ.

ಐಟಿ ಜಗತ್ತು ಸಮಗ್ರ ಜನಜೀವನವನ್ನು ಅಸ್ತವ್ಯಸ್ತ ಮಾಡುವಷ್ಟು ಪ್ರಭಾವವನ್ನು ಭಾರತದಲ್ಲಿ ಇನ್ನೂ ಹರಡಿಲ್ಲ. ಹಾಗಾಗಿ ಅದು ಎಲ್ಲರ ಅಳಿವು -ಉಳಿವೇನಲ್ಲ. ಇಲ್ಲಿನ ಜನರ ನೀರು, ಭೂಮಿ ಕಬಳಿಸಿ ಅವರನ್ನು ಅತಂತ್ರರನ್ನಾಗಿಸಿ ವಿದೇಶಿ ವಿನಿಮಯದ ಕಾರಣಕ್ಕೆ ರೂಪಾಯಿಗೆ ಒಂದಷ್ಟು ಬೆಲೆ ತಂದುಕೊಟ್ಟಿರುವುದೇ ದೇಶಕ್ಕೆ ಆಗಿರುವ ಲಾಭ. ಇದೇ ಮಂದಿ ರೂಪಾಯಿ ದುರ್ಬಲಗೊಂಡರೆ ಕುಣಿದು ಕುಪ್ಪಳಿಸುತ್ತಾರೆ. ಮಾರುಕಟ್ಟೆಯಲ್ಲಿ ಡಾಲರ್ ಎದುರಿಗೆ ರೂಪಾಯಿಗೆ ಸ್ವಲ್ಪ ಕಿಮ್ಮತ್ತು ಬಂದರೂ ತಮ್ಮ ಲಾಭಾಂಶಕ್ಕೆ ಹೊಡೆತ ಅಂತ ನೆಲಮುಗಿಲು ಒಂದಾಗುವಂತೆ ಬಡಬಡಿಸುತ್ತಾರೆ.  ಹತ್ತಾರು ವರ್ಷಗಳಿಂದ ಇಲ್ಲಿ ಒಪ್ಪೊತ್ತಿಗೆ ಅನ್ನವಿಲ್ಲದೆ, ಕೆಲಸಕ್ಕೆ ಸರಿಯಾದ ಕೂಲಿಯಿಲ್ಲದೆ, ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಈ ದರಿದ್ರ ಸರಕಾರಗಳಿಗೆ ಅನ್ನದಾತನನ್ನು ಪಾರು ಮಾಡುವ ಯಾವ ಪಾರುಗಾಣಿಕೆ ಉಪಾಯಗಳೂ ಹೊಳೆದಿಲ್ಲ. ಕಳೆದ ಒಂದು ದಶಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸಾವಿರಾರು ರೈತರ ಕಲ್ಯಾಣಕ್ಕೆ ಒಂದು ಸಮಗ್ರ ಪ್ಯಾಕೇಜ್ ನೀಡಲು ಸರಕಾರಗಳಿಗೆ ಸಾಧ್ಯವಾಗಿಲ್ಲ. ಸೂರಿಲ್ಲದೆ, ನೀರಿಲ್ಲದೆ, ಬಿಸಿಲಲ್ಲಿ ಒಣಗಿ, ಮಳೆಯಲ್ಲಿ ನೆನೆದು ಬದುಕುತ್ತಿರುವವರ ಮಕ್ಕಳು ಶಾಲೆಗೆ ಹೋಗಲು ಮೈಲುಗಟ್ಟಲೆ ಕೆಟ್ಟ ರಸ್ತೆಯಲ್ಲಿ ನಡೆಯಬೇಕು. ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು ಇದೇ ರಸ್ತೆಯಲ್ಲಿ ಹೊತ್ತೊಯ್ಯಬೇಕು. ಆದರೆ ತಮ್ಮ ಹವಾನಿಯಂತ್ರಿತ ಕಾರುಗಳು ಓಡಾಡಲು ರಸ್ತೆಯ ಒಂದು ತಿರುವಿನಲ್ಲಿ ಒಂದು ಬಿರುಕು ಬಿಟ್ಟಿದ್ದರೂ ಸರಕಾರ ಸರಿಯಾದ ಮೂಲಭೂತ ಸೌಕರ್ಯ ಒದಗಿಸುತ್ತಿಲ್ಲ ಎಂದು ಕೂಗಾಡಿ ಬೇರೆ ರಾಜ್ಯ/ದೇಶಕ್ಕೆ  ಹೋಗುತ್ತೇವೆಂದು ಬೆದರಿಕೆಯೊಡ್ಡುತ್ತಲೇ ವ್ಯವಹರಿಸುವ ಐಟಿ-ಬಿಟಿ ಮಂದಿಯನ್ನು ಪಾರು ಮಾಡುವುದು ಹೇಗೆಂಬ ಚರ್ಚೆಗಳು ಸತ್ಯಂ ಪತನದ ಕಾರಣದಿಂದ ಮುಗಿಲು ಮುಟ್ಟಿವೆ. ಸತ್ಯಂ ಹುಳುಕು ಹೊರಬಿದ್ದು ತಿಂಗಳೂ ಕಳೆದಿಲ್ಲ ಆಗಲೇ ಅವರನ್ನು ಮೇಲೆತ್ತಲು ಜನರ ತೆರಿಗೆ ಹಣವನ್ನು ಸುರಿಯಬೇಕೆಂದು ಕೆಲ ರಾಜಕಾರಣಿ-ಅಕಾರಿ ದಲ್ಲಾಳಿಗಳು ತುದಿಗಾಲಲ್ಲಿ ನಿಂತಿದ್ದಾರೆ.

ಪೂರ್ಣಪ್ರಮಾಣದ ದಿನಗೂಲಿಯೂ ಸಿಗದೆ ದೇಶದ ಶೇಕಡಾ ೭೦ರಷ್ಟು ಮಂದಿ ಒದ್ದಾಡುತ್ತಿರುವಾಗ, ಲಕ್ಷಗಳಲ್ಲಿ ಸಂಬಳ ಎಣಿಸಿಕೊಂಡು ಐಷಾರಾಮಿ ಜೀವನ ನಡೆಸಿದ ಕೆಲವೇ ಸಾವಿರ ಮಂದಿ ಬಗ್ಗೆ ಇಷ್ಟೊಂದು ತೀವ್ರವಾಗಿ ಸ್ಪಂದಿಸುತ್ತಿರುವವರಿಗೆ ದೇಶದ ಬೆನ್ನೆಲುಬಾದ ಲಕ್ಷ, ಲಕ್ಷ ಜನರ ಗೋಳು ಮಾತ್ರ ‘ದಿನಾ ಸಾಯುವವರಿಗೆ ಅಳುವವರ್ಯಾರು?’ ಎನ್ನುವಂತಹದ್ದು. ಅಷ್ಟಾಗಿಯೂ, ಅವನು ಕೊಟ್ಟ ಹಣದಿಂದಲೇ ಈ ಐಷಾರಾಮಿಗಳನ್ನು ಉಳಿಸಬೇಕಿರುವ ವಿಪರ್ಯಾಸ ನೋಡಿ. ‘ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಯಾವಾಗಲೂ ಮೇಲು’ ಹೇಗೆಂದು ಈಗ ಅನೇಕರಿಗೆ ಗೊತ್ತಾಗುತ್ತಿರಬಹುದು.  ಯಾವತ್ತೂ ಕೊಡುತ್ತಿದ್ದ ರೈತ ಕೇಳಲಾರಂಭಿಸಿ ಎಷ್ಟೋ ದಿನಗಳಾಗಿದ್ದರೂ ಅವನತ್ತ ಬೆನ್ನು ತಿರುಗಿಸಿರುವ ಮಂದಿ ಇವತ್ತು ಜಗತ್ತೇ ಮುಳುಗಿ ಹೋಗಿದೆ ಎಂಬಂತೆ ಹುಯಿಲೆಬ್ಬಿಸುತ್ತಿದ್ದಾರೆ. ಸತ್ಯಂಗೆ ಎರಡು ಸಾವಿರ ಕೋಟಿ ರೂಗಳ ಪಾರುಗಾಣಿಕೆ  ನೀಡಬೇಕೆಂಬ ಚರ್ಚೆ ಕಳೆದ ಕೆಲ ವಾರಗಳಿಂದ ನಡೆಯುತ್ತಲೇ ಇದೆ. ಸತ್ಯಂನ ಕುರಿತ ಖ್ಯಾತಿ/ಕುಖ್ಯಾತಿಗೆ ಹೊಣೆ ಯಾರು? ಅದರ ನೆರವಿಗೆ ಸರಕಾರ ಬರಬೇಕೆ? ಬೇಡವೇ ಎಂಬ ಬಗ್ಗೆ ಸಹಜವಾಗಿಯೇ ಆಂಧ್ರದ ಮಾಜಿ ಮತ್ತು ಹಾಲಿ ಮುಖ್ಯಮಂತ್ರಿಗಳಿಬ್ಬರ ನಡುವೆ  ಜಟಾಪಟಿ ಜಗಜ್ಜಾಹೀರಾಗಿದೆ. ಇದೇ ವಿಷಯವಾಗಿ ಕೇಂದ್ರದ ಇಬ್ಬರು ಪ್ರಭಾವಿ ಸಚಿವರಾಗಿರುವ ಪ್ರಣಬ್ ಮುಖರ್ಜಿ ಮತ್ತು ಚಿದಂಬರಂ ಪಾರುಗಾಣಿಕೆ ಪ್ರಸ್ತಾವವನ್ನು ವಿರೋಸಿದ್ದಾರೆಂಬ ಸುದ್ದಿ ಬಂದಿದೆ. ಅವರ ಈ ವಿರೋಧದ ಹಿಂದೆ ಮೇಲೆ  ಚರ್ಚಿಸಿರುವ ಅನೇಕ ಸೂಕ್ಷ್ಮಗಳೇ ಇರಬೇಕು. ಇಂಥ ವಿಷಯಗಳ ಬಗ್ಗೆ ಎಂದಿನ ತಮ್ಮ ನಿಧಾನ ತಂತ್ರ ಅನುಸರಿಸುತ್ತಿರುವ ಎಡಪಂಥೀಯರಿಗಂತೂ ಈ ವಿಷಯ ಅಗ್ನಿಪರೀಕ್ಷೆಯೇ ಸರಿ.  ಜನರ ನೀರು, ಭೂಮಿಯನ್ನು ಕಬಳಿಸಿ ಸರಕಾರದ ಮೇಲೆ ಪ್ರಭಾವ ಬೀರಿ ಎಲ್ಲ ಸಂಪನ್ಮೂಲಗಳನ್ನು ತಮ್ಮೆಡೆಗೆ ಬಹಳ ಘನತೆಯಿಂದಲೇ ತಿರುಗಿಸಿಕೊಳ್ಳುವ ಚಾಣಾಕ್ಷ ಐಟಿ-ಬಿಟಿ ಉದ್ಯಮಿಗಳು, ತಾವು ಪಡೆದಿರುವುದಕ್ಕೆ ಪ್ರತಿಯಾಗಿ ಕೊಟ್ಟಿರುವುದು ಏನೂ  ಇಲ್ಲ. ಜನಸಾಮಾನ್ಯರು ಪಟ್ಟಣದಲ್ಲಿ ಜೀವಿಸಲು ಸಾಧ್ಯವಾಗದಷ್ಟು ದುಬಾರಿಗೊಳಿಸಿದ್ದು ಇವರು ಕೊಟ್ಟಿರುವ ಬೃಹತ್ ಕೊಡುಗೆ. ನೂರು ಜನರ ಅನ್ನ, ಭೂಮಿ ಕಿತ್ತುಕೊಂಡು ೧೦ ಜನಕ್ಕೆ ಕೆಲಸ ಕೊಟ್ಟು ಅತಿಯಾದ ಸಂಬಳ ಕೊಟ್ಟರೆ ದೇಶ ಉದ್ಧಾರವಾಗುತ್ತದೆ ಎಂಬ ಭ್ರಮೆ ಹುಟ್ಟಿಸಿ ಸಮಾಜದಲ್ಲಿ ಬೃಹತ್ ಕಂದಕಕ್ಕೆ  ಕಾರಣವಾಗಿರುವ ಅನೇಕರು, ಎಲ್ಲ ಹೋರಾಟಗಳನ್ನು ಹತ್ತಿಕ್ಕಿ ತಮಗೆ ಭೂಮಿ, ನೀರು ಕೊಡುವ ಮುಖ್ಯಮಂತ್ರಿಗಳನ್ನು  ನಂಬರ್ ಒನ್ ಮುಖ್ಯಮಂತ್ರಿ ಎಂದೋ ಇಲ್ಲ ಈತ ಪ್ರಧಾನಿ ಆಗಬೇಕು ಎಂತಲೋ ವಂದಿಮಾಗದರಂತೆ ವದರುವ ಇವರಿಗೆ ಅದೇ ಸಾಮಾನ್ಯನ ತೆರಿಗೆ ಹಣವನ್ನೇ ಏಕೆ ಕೊಡಬೇಕು?

ಇವತ್ತಿಗೂ ತಂತ್ರಜ್ಞಾನವೂ ಸೇರಿದಂತೆ ಇತರೆ ಯಾವುದೇ ಉದ್ಯಮವೂ ಭಾರತದ ಎಲ್ಲರನ್ನೂ ಪ್ರತಿನಿಸುವ ಅವರ ಏಳಿಗೆಗಾಗಿ ಇರುವ ಏಕೈಕ ಪಾರಂಪರಿಕ ರಂಗ ಅಥವ ಸಂಕೇತವೇನಲ್ಲ. ಕಂಪನಿಯೊಂದು ಮಾಡಿಕೊಂಡ ಯಡವಟ್ಟಿಗೆ ಬೇರೆಯವರ ಮೂಗನ್ನೇಕೆ ಕೊಯ್ಯಬೇಕು? ಹಾಗೆಂದು ಸಾವಿರಾರು ಉದ್ಯೋಗಿಗಳ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಬಗ್ಗೆ  ಅನುಕಂಪ ಖಂಡಿತಾ ಇರಬೇಕು. ಅದರೆ ಅವರ್ಯಾರೂ ಬೀದಿಗೆ ಬೀಳುವಂತಹ ಪರಿಸ್ಥಿತಿ ಬಂದಿಲ್ಲವಲ್ಲ. ಅವರೆಲ್ಲ ವೃತ್ತಿ ಪ್ರತಿಭಾವಂತರು. ಬೇಕಾದಷ್ಟು ಅವಕಾಶಗಳೂ ಇವೆ. ಅಲ್ಲಿವರೆಗೆ ಉಪವಾಸ ಬೀಳುವ ಸ್ಥಿತಿಯಂತೂ ಅವರ್ಯಾರಿಗೂ ಇಲ್ಲ.  ಅಣೆಕಟ್ಟೆ ಕಟ್ಟಲು ನೂರಾರು ಹಳ್ಳಿಗಳ ಲಕ್ಷಾಂತರ ಜನರಿಗೆ, ಒಂದಿಷ್ಟು ಪರಿಹಾರ ಕೊಟ್ಟು ಪುನರ್ವಸತಿ ಎಂಬ ಹಂದಿಗೂಡುಗಳಂಥ ಜಾಗಕ್ಕೆ ನೂಕುವ ಈ ಅಕಾರಿ-ರಾಜಕಾರಣಿಗಳಿಗೆ ಇದೆಲ್ಲ ಅರ್ಥವಾಗುವುದಿಲ್ಲವೆ? ತಲೆತಲಾಂತರದಿಂದ ಬಂದ ಎಲ್ಲವನ್ನೂ ಕಳೆದುಕೊಂಡು ದಿನದಿನಕ್ಕೂ ಕಿಮ್ಮತ್ತು ಕಡಿಮೆಯಾಗುವ ದುಡ್ಡು ತೆಗೆದುಕೊಂಡು  ಈಗಾಗಲೇ ಊರು ತೊರೆದವರ ಸಂಕಷ್ಟಗಳಿಗೆ ಈ ಮಂದಿ ಸ್ಪಂದಿಸಿದ್ದಾರೆಯೇ?. ಇಷ್ಟೆಲ್ಲದರ ಹೊರತಾಗಿಯೂ ತಾನು ಲಾಭ ಗಳಿಸುವಾಗ ಮೂರು ತಿಂಗಳಿಗೊಮ್ಮೆ, ಅವು ದೇಶದ ಜಿಡಿಪಿ ಅಂಕಿ -ಅಂಶಗಳೇನೋ ಎಂಬಂತೆ ವರದಿಗಳನ್ನು ಮಾಧ್ಯಮಕ್ಕೆ ತಲುಪಿಸುವ ಐಟಿ-ಬಿಟಿ ಮಂದಿ, ಅದರ ಶೇಕಡಾ ಒಂದರಷ್ಟನ್ನಾದರೂ ಅಭಿವೃದ್ಧಿ ಕೆಲಸಗಳಿಗೆ ನೀಡಿದ್ದಾರೆಯೇ? ಹತ್ತಾರು ವರ್ಷಗಳ ತೆರಿಗೆ ರಿಯಾಯಿತಿ ಪಡೆದು ಹಣ ಮಾಡುವಾಗ ಯಾರನ್ನೂ ದರಕರಿಸದ ಇವರನ್ನು ಜನರ ಹಣದಿಂದ ಏಕೆ ಉಳಿಸಬೇಕು? ಸತ್ಯಂಗೆ ಪಾರುಗಾಣಿಕೆ ನೀಡುವುದೇ ನಿಜವೇ ಆದರೆ ಅದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತೆಯಷ್ಟೇ ಅಲ್ಲದೆ ಜನವಿರೋ ಹಾಗೂ ಜನತಂತ್ರವಿರೋ ಕೂಡಾ. ಪ್ರಪಂಚದಲ್ಲಿ ಆಗಿರುವ ಆರ್ಥಿಕ ಹಿಂಜರಿತದ ಪರಿಣಾಮದಿಂದ ಈಗ ಐಟಿ ಸೇರಿದಂತೆ ಎಲ್ಲ ಉದ್ಯಮಗಳೂ ಸಂಕಷ್ಟದಲ್ಲಿವೆ. ಹಾಗಾಗಿ ಯಾವುದೋ ಒಂದು ವಲಯದ ಒಂದು ಕಂಪನಿಗೆ ಪಾರುಗಾಣಿಕೆ ನೀಡುವ ಬದಲು ಇಡೀ ಉದ್ಯಮ ವಲಯಕ್ಕೆ ಅನುಕೂಲವಾಗುವಂಥ ಸಮಗ್ರ ಸುಧಾರಣಾ ಕ್ರಮ ಕೈಗೊಂಡರೆ ಒಳ್ಳೆಯ ಫಲ ದೊರೆಯಬಹುದು.

ಜಗತ್ತಿನ ಮುಂದುವರಿಯುತ್ತಿರುವ ದೇಶಗಳ ರಾಜಕೀಯ ವ್ಯವಸ್ಥೆ, ಮುಂದುವರಿದ ರಾಷ್ಟ್ರಗಳ ರಾಜಕೀಯ ವ್ಯವಸ್ಥೆಗಿಂತ ಪೂರ್ಣ ಭಿನ್ನ. ಅದರಲ್ಲೂ ಭಾರತದಂಥ ದೇಶದಲ್ಲಿ ಬಹುಸಂಸ್ಕೃತಿಯ ಬೃಹತ್ ಪ್ರಜಾಪ್ರಭುತ್ವವಿದ್ದರೂ ಜಾತಿ, ಧರ್ಮದ ಆಧಾರದ ಮೇಲೇ ಇನ್ನೂ ಪ್ರಭಾವ ಉಳಿದುಕೊಂಡಿರುವ ಸ್ವಜನಪಕ್ಷಪಾತ, ಭ್ರಷ್ಟ  ವ್ಯವಸ್ಥೆ ತುಂಬಿ ತುಳುಕುತ್ತಿದೆ. ಪರಿಸ್ಥಿತಿ ಹೀಗಿರುವಾಗ ಇಲ್ಲಿ ತಮಗೆ ಬೇಕಾದವರಿಗೆ ಬೇಕಾದಂತೆ ಮುಂದಿನ ದಿನಗಳಲ್ಲಿ ಪಾರುಗಾಣಿಕೆ ಹಂಚುವುದಿಲ್ಲ ಎಂಬ ಯಾವ ಖಾತರಿಯೂ ಇಲ್ಲ. ಹಾಗಾಗಿಯೇ ಪಾರುಗಾಣಿಕೆ ಭಾರತದ ಮಟ್ಟಿಗೆ ನಿಜವಾಗಿಯೂ ಸೋಂಕು.

೧೮ ಫೆಬ್ರವರಿ ೨೦೦೯ರ ವಿಜಯಕರ್ನಾಟಕ ಸಂಚಿಕೆಯಲ್ಲಿ ಪ್ರಕಟವಾಗಿದೆ. 

ಲಂಕೆಗೊಂದು ಲಂಘನ


ಶ್ರೀಲಂಕಾ, ಭಾರತ ಮಾತೆ ಸುರಿಸಿದ ಒಂದು ಕಣ್ಣೀರ ಹನಿ. ಇದು ಯಾರಿಗೆ ಹೊಳೆದ ಅದ್ಭುತವೋ ಗೊತ್ತಿಲ್ಲ. ಶ್ರೀಲಂಕಾದ ಭೂಪಟವನ್ನು ನೋಡಿದರೆ ಹಾಗನಿಸುತ್ತದೆ. ಭಾರತ ಮಾತೆ ಸಂತೋಷಕ್ಕೊ, ದುಃಖಕ್ಕೋ ಸುರಿಸಿದ ಕಣ್ಣೀರಿನಿಂದ ಶ್ರೀಲಂಕಾ ಉದಿಸಿದೆ ಎಂಬ ಒಂದು ಅಂಶವೇ ಲಂಕಾದ ಬಗೆಗೆ ಭಾರತೀಯರಿಗೆ ಎಂಥದೋ ಒಂದು ಸಂಬಂಧ ಏರ್ಪಡಿಸುತ್ತದೆ. ಜಗತ್ತಿಗೆ ಮೊದಲ ಮಹಿಳಾ ಪ್ರಧಾನಿಯನ್ನು ಕೊಟ್ಟ ದೇಶದ ಭೂಪಟಕ್ಕೆ ಈ ಕಲ್ಪನೆ ಕೊಟ್ಟ ಮಹಾತ್ಮನಿಗೆ ಒಂದು ನಮಸ್ಕಾರ.

ಅಂತರಿಕ ಸಮಸ್ಯೆ ಜತೆಗೆ ಪ್ರವಾಸೋದ್ಯಮವನ್ನೇ ಹೆಚ್ಚಾಗಿ ನಂಬಿಕೊಂಡಿರುವ ದೇಶವೊಂದರ ಸ್ಥಿತಿ ಹಣಕಾಸು ಹಿಂಜರಿತದ ಸಮಯದಲ್ಲಿ ಹೇಗಾಗಬಹುದು ಎಂಬುದಕ್ಕೆ ಶ್ರೀಲಂಕಾ ಈಗ ಅತ್ಯುತ್ತಮ ಉದಾಹರಣೆಯಂತಿದೆ. ಹಣಕಾಸು ಹಿಂಜರಿತದ ತೀವ್ರ ಪರಿಣಾಮಗಳು ಲಂಕಾದ ತುಂಬ ಕಾಣುತ್ತವೆ. ಬಣ ಬಣ ಎನ್ನುವ ಹೋಟೆಲ್, ರೆಸಾರ್ಟ್ಗಳು, ಬೀಚ್ಗಳು ಪ್ರವಾಸಿಗರ ಕೊರತೆಯಿಂದ ನಲುಗುತ್ತಿವೆ. ಹಾಗಾಗಿ ಯಾವುದೆ ಹೋಟೆಲ್, ರೆಸಾರ್ಟ್ಗೆ ಹೋದರೂ ಅಲ್ಲಿನ ಊಟೋಪಚಾರ ಅಷ್ಟಕ್ಕಷ್ಟೆ. ಅಷ್ಟೇಕೆ ನಾವು ಉಳಿದುಕೊಂಡಿದ್ದ ಕೊಲಂಬೊದಲ್ಲಿರುವ ಭಾರತದ  ಹೆಸರಾಂತ ಪಂಚತಾರಾ ಹೋಟೆಲ್ನಲ್ಲೂ ಊಟ,ತಿಂಡಿ ಎಲ್ಲವೂ ಸಪ್ಪೆ,ಸಪ್ಪೆ. ಹೆಚ್ಚೇನೂ ಆಯ್ಕೆಗೆ ಅವಕಾಶವಿರದಂಥ ಸರಳ ಊಟ. ಪಂಚತಾರಾ ಹೋಟೆಲ್ ಊಟ ಅಂದರೆ ಇಷ್ಟೇನಾ ಎನ್ನುವಷ್ಟು.

ಸೈನಿಕರ ಗಸ್ತು: ಪ್ರವಾಸಿಗಳ ಕುಸಿತಕ್ಕೆ ಲಂಕೆಯಲ್ಲಿ ನಡೆಯುತ್ತಿರುವ ಆಂತರಿಕ ಸಂಘರ್ಷ ವ್ಯಾಪಕ ಪರಿಣಾಮ ಬೀರಿದೆ ಎನಿಸುತ್ತದೆ. ಹೆಜ್ಜೆ ಹೆಜ್ಜೆಗೂ ತಪಾಸಣೆ ಅದೂ ಕೂಗಳತೆ ದೂರದಲ್ಲೇ ಎರಡೆರಡು ಬಾರಿ. ಪ್ರತಿ ಬಾರಿಯೂ ವಾಹನದಿಂದ ಕೆಳಗಿಳಿದು ಎಲ್ಲ ವರದಿ ಒಪ್ಪಿಸಿದ ನಂತರವೇ ಮುಂದಕ್ಕೆ ಹೋಗಬೇಕು. ನಾಗರಿಕರ ನಡುವೆಯೇ ಆಧುನಿಕ ಬಂದೂಕುಗಳನ್ನು ಹಿಡಿದ ಯುವ ಸೈನಿಕರು ಎಲ್ಲೆಂದರಲ್ಲಿ  ಕಣ್ಣಿಗೆ ಬೀಳುತ್ತಾರೆ. ಈ ಪರಿಯ ಭದ್ರತೆ ಬಗ್ಗೆ ಟಿವಿಗಳಲ್ಲಿ ನೋಡಿ, ಪತ್ರಿಕೆಗಳಿಲ್ಲಿ ಓದಿದ್ದ ನಮಗೆ ಬಿಗಿ ಭದ್ರತೆ ಎಂದರೇನು ಅಂದು ಗೊತ್ತಾದದ್ದು ಲಂಕಾದ ರಾಜಧಾನಿ ಕೊಲಂಬೊದಲ್ಲಿ.

ಲಂಕೆಯ ಸೈನಿಕರನ್ನು ನೋಡಿದರೆ ಅಯ್ಯೋ ಪಾಪ ಅನಿಸುತ್ತದೆ. ಅಲ್ಲಿ ಸೈನ್ಯಕ್ಕೆ ಸೇರಲು ಕನಿಷ್ಠ ವಯೋಮಿತಿ ೧೫ ವರ್ಷ. ಸೇನೆಗೆ ಸೇರುವುದು ಕಡ್ಡಾಯವಲ್ಲದಿದ್ದರೂ ಕಾಲೇಜಿನಲ್ಲಿ ಕಲಿಯಬೇಕಾದ ವಯಸ್ಸಿನಲ್ಲಿ ಗನ್ ಹಿಡಿದು ದೇಶಸೇವೆ ಮಾಡುತ್ತಿದ್ದ, ಗಂಭಿರ ಹಸನ್ಮುಖಿಗಳಂತೆ ಕಾಣುತ್ತಿದ್ದ ಅವರನ್ನು ನೋಡಿದರೆ ನಾವೆಲ್ಲ ಎಷ್ಟು ಪುಣ್ಯವಂತರು ಅನಿಸುತ್ತಿತ್ತು. ನಾವು ಕಂಡ ಬಹುತೇಕ ಸೈನಿಕರ ವಯಸ್ಸು ೨೫ ವರ್ಷ ದಾಟಿರಲಿಲ್ಲ. ಕೆಲವರಂತೂ ಗಂಟೆಗಟ್ಟಲೆ ಒಂದೇ ಕಡೆ ನಿಲ್ಲಬೇಕಾಗಿದೆ. ಅವರ ಹೆಗಲ ಮೇಲೆ ದೊಡ್ಡ ಬಂದೂಕು. ಅದರ ತೂಕ ಎಷ್ಟೋ? ಹೆದ್ದಾರಿಗಳಲ್ಲಿ ಮರಳು ತುಂಬಿದ ಚೀಲಗಳ ಕೋಟೆ ಕಟ್ಟಿಕೊಂಡು ನಡುವೆ ಗನ್ ಹಿಡಿದು ಸೆಟೆದುಕೊಂಡಿದ್ದರೂ ಸ್ಥಿತಪ್ರಜ್ಞರಂತಿದ್ದ ಆ ಯುವ ಸಯನಿಕರು ಹುಟ್ಟುಸಿದ ಭಾವನೆಗಳು ನೂರಾರು. ಬಂದೂಕು ಹಿಡಿದು ಶಿಫ್ಟ್ಗಳಲ್ಲಿ ಹಗಲಿರುಳೆನ್ನದೆ ಜನರ ರಕ್ಷಣೆಗೆ ನಿಲ್ಲುವ ಜಗತ್ತಿನ ಎಲ್ಲ ಸೈನಿಕರಿಗೂ ನಾವೆಷ್ಟು ಕೃತಜ್ಞರಾಗಿದ್ದರೂ ಸಾಲದೆಂಬ ಭಾವ ಮೂಡಿತು.

ಬಿಗಿ ಭದ್ರತೆ: ಪೋರ್ಚುಗೀಸರು, ಅರಬರು ಮತ್ತು ಇಂಗ್ಲಿಷರ ಆಡಳಿತಕ್ಕೆ ಒಳಗಾಗಿದ್ದ  ಶ್ರೀಲಂಕಾ ಸ್ವತಂತ್ರಗೊಂಡಿದ್ದು ೧೯೪೮ನೇ ಇಸವಿ ಫೆಬ್ರವರಿ ೪ರಂದು. ನಮ್ಮ ತಂಡ ಕೊಲಂಬೊದಲ್ಲಿದ್ದ ದಿನ (ಜನವರಿ.೨೦) ಕ್ಕೆ ಸ್ವಾತಂತ್ರ್ಯ ದಿನಾಚರಣೆಗೆ ಕೇವಲ ೧೪ ದಿನ ಉಳಿದಿತ್ತು. ಅದಕ್ಕಾಗಿ ತಾಜ್ ಸಮುದ್ರ ಹೋಟೆಲ್ನ ಪಕ್ಕದಲ್ಲಿ ಬೀಚ್ಗೆ ಎದುರಾಗಿ ಭರ್ಜರಿ ಸಭಾಂಗಣದ ನಿರ್ಮಾಣವೂ ನಡೆಯುತ್ತಿತ್ತು. ಇಪ್ಪತ್ತರ ಬೆಳಗ್ಗೆ ನಾವು ತಾಜ್ ಹೋಟೆಲ್ನ ಮುಂದಿರುವ ಕಣ್ಣುಕುಕ್ಕುವಂತಿದ್ದ ಸುಮಾರು ೨ ಕಿಲೋಮೀಟರ್ ಉದ್ದದ ಕಡಲ ದಂಡೆಯ ರಸ್ತೆಯಲ್ಲಿ ವಾಕ್ ಮಾಡುತ್ತಿದ್ದಾಗ ಹೆಜ್ಜೆ ಹೆಜ್ಜೆಗೂ ನಮ್ಮನ್ನು ಗಮನಿಸುತ್ತಿದ್ದ ಸೈನಿಕರು ನಮ್ಮೆಡೆಯೇ ದೃಷ್ಟಿ ನೆಟ್ಟಿದ್ದರು. ಕೆಲವರು ನಾಗರಿಕರ ವೇಷದಲ್ಲಿದ್ದರು. ಸೈನಿಕರ ಫೋಟೊ ತೆಗೆಯುವುದು ಬೇಡ ಎಂಬ ಸೂಚನೆ  ಕೊಡಲಾಗಿತ್ತು. ಬಿಗಿ ಭದ್ರತೆ ಕಾರಣದಿಂದ ನಮ್ಮ ಬೆಂಗಳೂರಿನ ಸಣ್ಣ ಪಾರ್ಕೊಂದರಲ್ಲಿ ವಾಕ್ ಮಾಡುವಷ್ಟು ಜನರೂ ಅಲ್ಲಿರಲಿಲ್ಲ.  ವಾಕ್ ಮುಗಿಸಿ ಮರಳುವಾಗ ನಾವು ರಸ್ತೆಯ ಇನ್ನೊಂದು ಬದಿಯಲ್ಲಿದ್ದ ಪ್ರತಿಮೆಯೊಂದರ ಫೋಟೊ ತೆಗೆದುಕೊಂಡು ಅದೇ ಬದಿಯಿಂದ ಹೊಟೇಲ್ ಕಡೆ ನಮ್ಮದೇ ಲೋಕದಲ್ಲಿ ವಿಹರಿಸುತ್ತಾ ಬರುತ್ತಿದ್ದೆವು. ಇದ್ದಕ್ಕಿದ್ದಂತೆ ನಾಲ್ಕೈದು ಪೊಲೀಸರು ಮತ್ತು ಸೈನಿಕರಿದ್ದ  ತಂಡ ನಮ್ಮನ್ನು ಸುತ್ತುವರಿಯಿತು. ಪ್ರಶ್ನೆಗಳ ಮಳೆ ಸುರಿಸಿತು. ನಾವು ಪಂಚತಾರಾ ಹೋಟೆಲ್ನ ಅತಿಥಿಗಳು, ಮಾಧ್ಯಮದವರು ಎಂದೆವು. ಪಾಕಿಸ್ತಾನದವರಾ ಎಂದ ಒಬ್ಬ. ಭಾರತೀಯರು ಎಂದೆವು. ಇನ್ನೊಬ್ಬ ತಮಿಳಾ ಎಂದ. ನಾವು ಬೆಂಗಳೂರಿನವರು ಎಂದೆವು. ನಗುಮೊಗದಿಂದ ನಮ್ಮನ್ನು ರಸ್ತೆಯ ಇನ್ನೊಂದು ಬದಿಯಿಂದ ಹೋಟೆಲ್ಗೆ ಹೋಗುವಂತೆ ಸೂಚಿಸಿ ದಾರಿ ಬಿಡಲಾಯಿತು. ಆ ಕಡೆ ಅಧ್ಯಕ್ಷರದೂ, ಪ್ರಧಾನಿಯದೋ ನಿವಾಸ ಇದೆ ಎಂದು ಯಾರೋ ಗೊಣಗಿದರು. ಅಂದು ರಾತ್ರಿ ಊಟವಾದ ನಂತರ ಒಂದು ರೌಂಡ್ ಬೀಚ್ನಲ್ಲಿ ಸುತ್ತೋಣ ಎನಿಸಿ ಹೋಟೆಲ್ ಕಾಂಪೌಂಡ್ನ ಬಳಿ ಬಂದೆವು. ಹೋಟೆಲ್ನ ಎರಡೂ ಬದಿ ನಿಂತು ಕಾವಲು ಕಾಯುತ್ತಿದ್ದ ಸೈನಿಕರು ನಮ್ಮನ್ನು ಹೊರಬಿಡಲು ಸುತಾರಾಂ ಒಪ್ಪಲಿಲ್ಲ. ಅದಕ್ಕಾಗಿ ದೇಶದ ಉತ್ತರ ಭಾಗವಾದ ಜಾಫ್ನಾದಲ್ಲಿ ಎಲ್ಟಿಟಿಇ ಗೆರಿಲ್ಲಾಗಳೊಂದಿಗೆ ನಡೆಯುತ್ತಿದ್ದ ನಿರ್ಣಾಯಕ ಸಮರದ ಪರಿಣಾಮ ಭದ್ರತೆ ತುಸು ಅತಿ ಎನಿಸುವಷ್ಟಿತ್ತು.

ಸಹಜ ಸುಂದರಿ ಕೊಲಂಬೊ: ಬಹುಪಾಲು ವೃತ್ತಗಳಲ್ಲಿ ಬುದ್ಧನ ಮುಗುಳ್ನಗೆಯ ಮೂರ್ತಿ, ಯಾವುದೋ ಒಂದು ವೃತ್ತದಲ್ಲಿ ಗಣಪತಿ, ಮತ್ತೊಂದು ಸರ್ಕಲ್ನಲ್ಲಿ ವೀಣಾಪಾಣಿ ಸ್ನಿಗ್ಧ ಸೌಂದರ್ಯದ ಸರಸ್ವತಿ ವಿಗ್ರಹ. ಮುಗಿಲನ್ನು ಚುಂಬಿಸುವಂತಿದ್ದ ಎತ್ತರದ ಗೋಪುರ ಹೊಂದಿದ್ದ ನಮ್ಮ ಶ್ರೀರಂಗಪಟ್ಟಣ, ಹಂಪಿ ದೇವಸ್ಥಾನಗಳನ್ನು ನೆನಪಿಸುತ್ತಿದ್ದ ಗೋಪುರಗಳ ದೇವಸ್ಥಾನಗಳು. ಅಷ್ಟೇನೂ ಜನಸಂದಣಿಯಿಲ್ಲದ ಕಿರಿದಾದ ರಸ್ತೆಗಳ ಕಾರಣಕ್ಕೆ ಟ್ರಾಫಿಕ್ಕು. ಮಂಗಳೂರಿನಂಥ ಹವೆ. ಹೆಜ್ಜೆ ಹೆಜ್ಜೆಗೂ ಕಾಣುವ ಟರ್ಫ್ ಕ್ಲಬ್ಗಳ ಅಕೌಂಟೆಂಟ್ ಕಚೇರಿಗಳು, ಹೆಚ್ಚೂ ಕಡಿಮೆ ಅಷ್ಟೇ ಸಂಖ್ಯೆಯ ಪೀಪಲ್ಸ್ ಬ್ಯಾಂಕ್ನ ಶಾಖಾ ಕಚೇರಿಗಳು. ಪೀಪಲ್ಸ್ ಬ್ಯಾಂಕ್ ಶ್ರೀಲಂಕಾದ ಮುಖ್ಯ ಸಂಕೇತಗಳಲ್ಲಿ ಒಂದು. ಕೊಲಂಬೊದಲ್ಲಿ ಶಾಪಿಂಗ್ ಎಂದರೆ ತಟ್ಟನೆ ಎಲ್ಲರೂ ಹೇಳುವ ಹೆಸರು ಹೌಸ್ ಆಫ್ ಫ್ಯಾಷನ್. ಬೆಂಗಳೂರಿನ ಒಂದು ಸಣ್ಣ ಮಾಲ್ನಂತಿರುವ ಹೌಸ್ ಆಫ್ ಫ್ಯಾಷನ್ ತುಂಬ ಪ್ರಸಿದ್ಧ. ಐದು ಅಂತಸ್ತಿನ ಈ ಪುಟ್ಟ ಕಟ್ಟಡದಲ್ಲಿ ಕಿರಾಣಿ ಹೊರತುಪಡಿಸಿ ಉಳಿದೆಲ್ಲಾ ವಸ್ತುಗಳು ಅದರಲ್ಲೂ ಬಟ್ಟೆಗಳು ಹೆಚ್ಚು ಸಿಗುತ್ತವೆ. ಹೆಂಗಸರು, ಮಕ್ಕಳೂ ಸೇರಿದಂತೆ ಎಲ್ಲ ವರ್ಗದವರಿಗೂ ಪ್ರತ್ಯೇಕ ವಿಭಾಗದ ಮಳಿಗೆಗಳಿವೆ. ಇದು ಕೊಲಂಬೊದ ವೈಶಿಷ್ಟ್ಯ.

ಬೀಚ್ಗಳ ತವರು ಬೆಂಟೋಟಾ: ಲಂಕಾ ಪ್ರಕೃತಿ ಸೌಂದರ್ಯದ ಖನಿ. ಹಿಂದೂ ಮಹಾಸಾಗರದಿಂದ ಸುತ್ತುವರಿದಿರುವ ಈ ಪುಟ್ಟ ದ್ವೀಪ ಒಂಬತ್ತು ಪ್ರಾಂತ್ಯಗಳುಳ್ಳ ೨೫ ಜಿಲ್ಲೆಗಳನ್ನು ಹೊಂದಿದೆ. ಕರ್ನಾಟಕದ ಮೂರನೇ ಒಂದು ಭಾಗದಷ್ಟಿರುವ ಲಂಕಾದಲ್ಲಿ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸಿಗಿರಿಯಾ, ಕ್ಯಾಂಡಿ, ಅನುರಾಧಾಪುರ, ಪೋಲನ್ನರುವಾ, ದಂಬುಲ್ಲಾ, ಕಟರಗಾಮಾ, ಶ್ರೀಪಾದ ಎಂಬ ಏಳು ಸ್ಥಳಗಳಿವೆ. ನಮ್ಮ ಪ್ರವಾಸ ಕಾಲದಲ್ಲಿ ಯಾವುದೇ ವಿಶ್ವಪರಂಪರೆಯ ತಾಣಕ್ಕೆ ಭೇಟಿ ನೀಡಲಿಲ್ಲವಾದರೂ ಬೆಂಟೋಟಾ ಎಂಬ ಸುಂದರ ದ್ವೀಪಗಳ ಗುಚ್ಚದಲ್ಲಿ ವಿಹರಿಸಿದೆವು. ಬೆಂಟೋಟಾ ಕೊಲಂಬೊ ಮತ್ತು ದಕ್ಷಿಣಕ್ಕಿರುವ ಗಾಲೇ ಪಟ್ಟಣಗಳನ್ನು ಸೇರಿಸುವ ಸಮುದ್ರದ ದಂಡೆಯಲ್ಲೇ ಹಾದು ಹೋಗುವ ಹೆದ್ದಾರಿಯಲ್ಲಿದೆ. ಸುಮಾರು ೬೫ ಕಿಲೋಮೀಟರ್ನ ಈ ಅಂತರದಲ್ಲಿ ಹೆಚ್ಚು ಕಡಿಮೆ ಇಕ್ಕೆಲಗಳಲ್ಲಿ ಮನೆಗಳ ನಡುವೆಯೇ ರಸ್ತೆ ಹಾದುಹೋಗುತ್ತದೆ. ಹಾಗಾಗಿ ಸಮುದ್ರದ ದರ್ಶನವಾಗುವುದು ಅಲ್ಲಲ್ಲಿ ಮಾತ್ರ. ಎಕರೆಗಳ ಲೆಕ್ಕದಲ್ಲಿರುವ ನೂರಾರು ದ್ವೀಪಗಳನ್ನು ಸುತ್ತುವರಿದಿರುವ ಹಿನ್ನೀರಿನಲ್ಲಿ ವಿದ್ಯುಚ್ಚಾಲಿತ ದೋಣಿಗಳಲ್ಲಿ ಸಂಚರಿಸುವುದೇ ರೋಚಕ ಅನುಭವ. ಕಡಲ ಹಿನ್ನೀರಿನಲ್ಲಿ ಕಣ್ಣಿಗೆ ಕಾಣುವ ಮೊಸಳೆಗಳ ಹಿಂಡು, ದಡಕ್ಕೆ ಹೊಂದಿಕೊಂಡಿರುವ ತುಂಬಾ ವ್ಯವಸ್ಥಿತವಾಗಿ ಒಪ್ಪವಾಗಿರುವ ರೆಸಾರ್ಟ್ಗಳು, ಹೋಟೆಲ್ಗಳು, ಒಂದೊಂದೇ ಸಂಸಾರಗಳಿರುವ ಕೆಲ ದ್ವೀಪಗಳಿವೆ. ಅಲ್ಲಿರುವ ಹೇರಳ ಮಸಾಲೆಯ ಚೆಕ್ಕೆ ಮರಗಳಿಂದ ಚೆಕ್ಕೆ, ಎಣ್ಣೆ ಬೇರ್ಪಡಿಸಿ ಮಾರುವ ಅಂಥ ಒಂದು ಮನೆಗೆ ನಾವು ಭೇಟಿ ನೀಡಿದ್ದೆವು.
ವ್ಯತ್ಯಾಸವಿಲ್ಲ: ಕೃಷಿಯಂತೆ ಮೀನುಗಾರಿಕೆಯನ್ನು ನಂಬಿಕೊಂಡಿರುವ ದೊಡ್ಡ ಸಂಖ್ಯೆಯ ಜನ ಲಂಕೆಯಲ್ಲಿದ್ದಾರೆ. ಪ್ರವಾಸೋದ್ಯಮ ಮತ್ತು ರಫ್ತು ಕುಸಿದರೆ ನೇರ ಪರಿಣಾಮ, ಹೋಟೆಲ್, ಮೀನುಗಾರಿಕೆ ಮೇಲಾಗುತ್ತದೆ. ಅದನ್ನೇ ನಾವು ಲಂಕೆಯಲ್ಲಿ ಹೆಚ್ಚು ಕಂಡೆವು. ಚಹಾ ಲಂಕೆಯಲ್ಲಿ ಬಹು ಸ್ವಾದಗಳಲ್ಲಿ ಸಿಗುತ್ತದೆ. ಟೀ ಪ್ರಿಯರಿಗಂತೂ ಅದು ಆಡಂಬೋಲವೇ ಸರಿ. ಗುಣಮಟ್ಟ ಮತ್ತು ಸ್ವಾದಗಳನ್ನು ಆಧರಿಸಿ ಹತ್ತಾರು ಬಗೆಯ ಸಂಸ್ಕರಿಸಿ ಮಾಡಿದ ಚಹಾ ಎಲೆಗಳ ಡಬ್ಬಗಳ ಪ್ಯಾಕ್ ಸಿಗುತ್ತದೆ. ಸ್ಥಳೀಯ ಪರಂಪರೆ ಸಾರುವ ಮರದ ಕೆತ್ತನೆಗಳು ಹೇರಳವಾಗಿ ಸಿಗುತ್ತವೆ. ಆನೆ, ಬೌದ್ಧ ಹಾಗೂ ಹಿಂದೂ ದೇವರುಗಳ ಸುಂದರ ಮುಖವಾಡಗಳು ಸಿಗುತ್ತವೆ. ಭಾರತದ ಒಂದು ರೂಪಾಯಿಗೆ ಸಧ್ಯಕ್ಕೆ ಶ್ರೀಲಂಕಾದ ಎರಡು ರೂಪಾಯಿ ಇಪ್ಪತ್ತು ಪೈಸೆ ಸಿಗುತ್ತದೆ. ಆ ಲೆಕ್ಕದಲ್ಲಿ ಬೆಲೆಗಳಲ್ಲಿ ಭಾರತ-ಲಂಕಾಕ್ಕೂ ಹೆಚ್ಚು ವ್ಯತ್ಯಾಸಗಳಿಲ್ಲ. ಸಮದ್ರ ದಂಡೆ ಭರ್ತಿ ತೆಂಗಿನಿಂದ ತುಂಬಿದೆ. ಇದರ ಹೊರತು ಟೀ ತೋಟಗಳು, ಮಳೆಕಾಡುಗಳು, ಅಮೂಲ್ಯ ಮರಗಳು ಮತ್ತು ಕಾಡುಪ್ರಾಣಿಗಳಿಂದ ತುಂಬಿರುವ ಶ್ರೀಲಂಕಾ ನಮ್ಮ ಮಲೆನಾಡಿನಂತೆ ಸ್ಪಚ್ಚಂದ ಹಸಿರಿನಿಂದ ಕಂಗೊಳಿಸುತ್ತದೆ. ದೇಶದ ಶೇಕಡ ೨೫ರಷ್ಟು ಭಾಗ ಕಾಡುಪ್ರಾಣಿಗಳದೇ ಸಾಮ್ರಾಜ್ಯ ಭಾರತ ಹಾಗೂ ಶ್ರೀಲಂಕಾಗಳ ನಡುವೆ ರಾಮಾಯಣ ಸೇರಿ ಅನೇಕ ಪೌರಾಣಿಕ ಮತ್ತು ಭೌಗೋಳಿಕ ಸಂಬಂಧಗಳ ಗುಚ್ಚವೇ ಇದೆ. ಈ ಎಲ್ಲ ಕಾರಣಗಳಿಂದಲೋ ಏನೋ ಶ್ರೀಲಂಕಾ ಅನ್ಯ ದೇಶ ಎಂದು ಅನಿಸುವುದೇ ಇಲ್ಲ. ನಮ್ಮ ಮತ್ತು ಅವರ ಆಹಾರ, ಉಡುಗೆ - ತೊಡುಗೆಗಳಲ್ಲಿ ಅಷ್ಟು ವ್ಯತ್ಯಾಸವಿಲ್ಲ. ಜನ ಕೂಡ ಮೃದು ಸ್ವಭಾವದವರು ಎನಿಸುತ್ತದೆ. ವಿಜ್ಞಾನ- ತಂತ್ರಜ್ಞಾನಗಳ ವಿಷಯಗಳು ಅಲ್ಲಿನ್ನೂ ವ್ಯಾಪಕವಾಗಿಲ್ಲ. ಹಾಗಾಗಿ ಕೊಲಂಬೋ ನೋಡಿದರೆ ಹತ್ತು ವರ್ಷಗಳ ಹಿಂದಿನ ಬೆಂಗಳೂರು ನೋಡಿದಂತೆ ಅನಿಸುತ್ತದೆ. ಹಾಗಾಗಿಯೇ ಪ್ರವಾಸಿಗರಿಗೆ ಅದರಲ್ಲೂ ನವ ದಂಪತಿಗಳಿಗೆ ಲಂಕಾ ಸ್ವರ್ಗದಂತಿದೆ.

ತೆಂಗು ಮತ್ತು ಲಂಕನ್ನರು: ಲಂಕಾದ ಮುಖ್ಯ ಬೆಳೆ ಚಹಾ, ತೆಂಗು, ಭತ್ತ ಮತ್ತು ರಬ್ಬರ್ . ಲಂಕನ್ನರು ತೆಂಗಿಗೆ ತುಂಬಾ ಮಹತ್ವ ಕೊಡುತ್ತಾರೆ. ಆ ಮಹತ್ವ ಹೇಳುವ ಒಂದು ಕಥೆಯನ್ನು ಶ್ರೀಲಂಕಾದಲ್ಲಿ ನಮ್ಮ ಪತ್ರಕರ್ತರ ತಂಡವನ್ನು ಸುತ್ತಿಸಿದ ಹೆಸರಾಂತ ಪ್ರವಾಸಿ ಸಂಸೆ ಎಯ್ಟ್ಕೆನ್ ಸ್ಪೆನ್ಸ್ನ  ಮುಖ್ಯಅಕಾರಿ ಪ್ರಶಾಂತ್ ದಿಸೆನಾಯಕೆ ಹೇಳಿದರು. ಒಮ್ಮೆ ಅನೇಕ ದೇಶಗಳ ಮುಖ್ಯಸ್ಥರ ಸಭೆ ನಡೆಯುತ್ತಿತ್ತು. ಆ ಸಭೆಯಲ್ಲಿದ್ದ ಅನೇಕ ನಾಯಕರು ತಮ್ಮ ತಮ್ಮ ದೇಶಗಳ ವಿಜ್ಞಾನಿಗಳ ಕೌಶಲ ಮತ್ತು ಪ್ರತಿಭೆಯನ್ನು ಹೊಗಳುತ್ತಿದ್ದರು. ಅಮೆರಿಕದ ಅಧ್ಯಕ್ಷರು ತಮ್ಮ ದೇಶದ ವಿಜ್ಞಾನಿಗಳು ಸೂಪರ್ ಕಂಪ್ಯೂಟರ್ ಕಂಡುಹಿಡಿದು ಅದನ್ನು ಅನೇಕ ಶಾರೀರಕ ಸಮಸ್ಯೆಗಳಿಗೆ ಚಿಕಿತ್ಸೆ ಕೊಡಲು ಬಳಸುತ್ತಿರುವ ಬಗ್ಗೆ ಹೇಳಿದರು. ಫ್ರಾನ್ಸ್ನವರೂ ಕೂಡ ತಮ್ಮ ವಿಜ್ಞಾನಿಗಳು ರೋಬೋಟ್ಗಳಿಂದಲೇ ನಿತ್ಯದ ಅನೇಕ ಕೆಲಸ ನಿರ್ವಹಿಸುವ ವ್ಯವಸ್ಥೆ ರೂಪಿಸಿರುವುದಾಗಿ ಹೇಳಿಕೊಂಡರು. ಭಾರತದ ಪ್ರಧಾನಿಗಳು ತಮ್ಮ ದೇಶದ ವಿಜ್ಞಾನಿಗಳು ಕಾಲಿಲ್ಲದೆ ಹುಟ್ಟಿದ್ದ ಮಗುವಿಗೆ ಯಶಸ್ವಿಯಾಗಿ ಕಾಲು ಜೋಡಿಸಿದ್ದು ಆ ಮಗು ಮುಂದೆ ಒಲಂಪಿಕ್ಸ್ನ ಓಟದ ಸ್ಪರ್ಧೆಯಲ್ಲಿ  ಭಾಗವಹಿಸಲು ತಯಾರಿ ನಡೆಸುವಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದಾರೆ ಎಂದರು. ತಮ್ಮ ಸರದಿ ಬಂದಾಗ ಲಂಕಾದ ಅಧ್ಯಕ್ಷರು ಹೇಳಿದ್ದು: ನಮ್ಮ ದೇಶದಲ್ಲೂ ಒಂದು ಹೆಣ್ಣು ಮಗು ಹುಟ್ಟಿತ್ತು ಅದಕ್ಕೆ ಮೆದುಳು ಇರಲಿಲ್ಲ. ಆ ಮೆದುಳಿನ ಜಾಗಕ್ಕೆ ತೆಂಗಿನಕಾಯಿಯನ್ನು ಕೂಡಿಸುವಲ್ಲಿ ನಮ್ಮ ವಿಜ್ಞಾನಿಗಳು ಯಶಸ್ವಿಯಾದರು, ಮುಂದೆ ಆ ಮಗು ಶ್ರೀಲಂಕಾದ ಅಧ್ಯಕ್ಷೆಯಾಯಿತು.


೧ಫೆಬ್ರವರಿ ೨೦೦೯ರ ವಿಜಯಕರ್ನಾಟಕ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಹಿಂಜರಿತ: ಈ ಗಾಳಿಗೋಪುರ ಕುಸಿದಿದ್ದು ಏಕೆ? ಹೇಗೆ?

 ಕುಸಿಯುತ್ತಿರುವ ಐಷಾರಾಮಿ ವಸ್ತುಗಳು ಮತ್ತು ತೈಲ ಬೆಲೆ, ಜರ್ರನೆ ಇಳಿಯುತ್ತಿರುವ ಹಣದುಬ್ಬರ, ಅಗತ್ಯವಸ್ತುಗಳ ಬೆಲೆಗಳ ಹಿಂದೆಯೇ ಕೇಳಿಸುತ್ತಿರುವ ಹೂಡಿಕೆಗೆ ಇದು ಸಕಾಲ ಎಂಬ ಬೊಬ್ಬೆ, ಉತ್ಪಾದನೆ, ಬೇಡಿಕೆಗಳ ಕುಸಿತ ಎಂಬ ಹತ್ತಾರು ಗೊಂದಲಮಯ ಸನ್ನಿವೇಸದಲ್ಲಿ ಕೊಳ್ಳುವವರ ಆಡೊಂಬಲವಾಗಿರುವ ಜಾಗತಿಕ ಮಾರುಕಟ್ಟೆ ಈಗ ಜನಸಾಮಾನ್ಯರಲ್ಲಿ ಇದು ಹೇಗೆ, ಏಕೆ ಎಂಬ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.   ಹಣಕಾಸು ಹಿಂಜರಿತ ಎಂದರೇನು ಎನ್ನುತ್ತಿದ್ದ  ಜನಸಾಮಾನ್ಯರೂ ಕೂಡ ಷೇರುಪೇಟೆಯ ಮಹಾಕುಸಿತದ ಚಂಡಮಾರುತದಲ್ಲಿ ಥಂಡಾ ಹೊಡೆದಿದ್ದಾರೆ. ಕೇವಲ ಶೇಕಡ ಮೂರ್ನಾಲ್ಕರಷ್ಟು ಜನ ಹಣ ತೊಡಗಿಸುವ ಷೇರುಪೇಟೆ, ಸುಮಾರು ಶೇಕಡ ೨೫ರಿಂದ ೩೦ರಷ್ಟು ಜನ ಬ್ಯಾಂಕುಗಳಲ್ಲಿ ಹೊಂದಿರುವ ಉಳಿತಾಯ ಖಾತೆ ಬಗ್ಗೆ ನಾವೇಕೆ ತಲೆ ಕೆಡಿಸಿಕೊಳ್ಳಬೇಕು? ಇದ್ಯಾವುದರ ರಗಳೆ ಇಲ್ಲದೆ ದೇಶದ ಶೇ. ೭೫ರಷ್ಟು ಜನ ಬದುಕುತ್ತಿಲ್ಲವೆ? ಎಂಬ ತರ್ಕಕ್ಕೆ ಈಗ ಯಾವ ಅರ್ಥವೂ ಉಳಿದಿಲ್ಲ. ಜಾಗತೀಕರಣವೆಂಬ ಜಾಲ ನಮ್ಮೆಲ್ಲರನ್ನೂ ಬೆಸೆದಿರುವ ಪರಿಣಾಮವಿದು. ಆದ್ದರಿಂದಲೇ ಅಮೆರಿಕದಂತಹ ಆರ್ಥಿಕ ದೈತ್ಯ ದೇಶದ ಷೇರು ಮಾರುಕಟ್ಟೆ ಕುಸಿತದಿಂದ ಪ್ರಪಂಚದ ಹಣಕಾಸು ವ್ಯವಸ್ಥೆ ಮುಗ್ಗರಿಸಿದೆ. ಯಾರಿಗೋ ಶೀತವಾದರೆ ಇನ್ನಾರಿಗೋ ನೆಗಡಿ, ಮತ್ಯಾರಿಗೋ ಜ್ವರವೆಂದರೆ ಇದೇ ಇರಬೇಕು. ಇದು ಆರ್ಥಿಕ ಹಿಂಜರಿತದ ಜಾಗತೀಕರಣ.

ಏಕೆ ಹೀಗಾಯ್ತು?: ಮೊನ್ನೆ, ನಿನ್ನೆಯವರೆಗೂ ಆಕಾಶದೆತ್ತರಕ್ಕೇರಿದ್ದ  ತೈಲ ಬೆಲೆ ಈಗ ಹತ್ತಿರ ಹತ್ತಿರ ಅದರ ಕಾಲು ಭಾಗದಷ್ಟಕ್ಕೆ ಕುಸಿದಿರುವುದೇಕೆ? ಬಳ್ಳಾರಿಯಲ್ಲಿ ಚೆಲ್ಲಾಡುತ್ತಿದ್ದ ಸಾವಿರ, ಐದು ನೂರು ರೂಪಾಯಿಗಳ ಚಲಾವಣೆ  ಇದ್ದಕ್ಕಿದ್ದಂತೆ ಅಡಗಿದ್ದೇಕೆ? ಹಣದುಬ್ಬರದ ಅಬ್ಬರ ಇಳಿಯುತ್ತಿರುವುದೇಕೆ? ಎಂಬ ಯಕ್ಷ ಪ್ರಶ್ನೆಗಳಿಗೆ ಜನಸಾಮಾನ್ಯರಿಗಂತೂ ಸುಲಭಕ್ಕೆ ಉತ್ತರ ಹೊಳೆಯುವುದಿಲ್ಲ.  ಷೇರು ಮಾರುಕಟ್ಟೆ ಮತ್ತು ಬ್ಯಾಂಕಿಂಗ್ ವ್ಯವಹಾರಗಳು ಅಂದಾಜು ಮತ್ತು ನಂಬಿಕೆಗಳಿಂದ ನಡೆಯುವಂಥವು. ಆದ್ದರಿಂದಲೇ ಷೇರು ಮಾರುಕಟ್ಟೆ ಮೇಲೆ ಏರುತ್ತಿದ್ದರೆ ಏರುತ್ತಲೇ ಇರುತ್ತದೆ. ಬೀಳಲು ಆರಂಭಿಸಿದರೆ ತಡೆಯಲು ಸಾಧ್ಯವೇ ಇಲ್ಲ. ಆದ್ದರಿಂದಲೇ ಅದನ್ನು ಅಂದಾಜಿನ ಗಾಳಿಗೋಪುರ ಅಥವಾ ನೀರ ಮೇಲಿನ ಗುಳ್ಳೆ ಎನ್ನಲಾಗುತ್ತದೆ. ಬ್ಯಾಂಕಿಂಗ್ ಅಂತೂ ಇನ್ನೂ ಜಟಿಲ ವ್ಯವಸ್ಥೆ. ನಂಬಿಕೆಗಳು ಸಡಿಲಗೊಳ್ಳುತ್ತಿರುವ ಈ ಕಾಲದಲ್ಲಿ ಬದ್ಧತೆ ಮತ್ತು ನಂಬಿಕೆ ಅತ್ಯಗತ್ಯವಾಗಿ ಬ್ಯಾಂಕಿಂಗ್ ಕ್ಷೇತ್ರಗಳ ಸುಗಮ ವ್ಯವಹಾರಕ್ಕೆ ಬೇಕು. ಯಾವುದೇ ಗ್ರಾಹಕನಿಗೆ ಬ್ಯಾಂಕ್ ವ್ಯವಸ್ಥೆ ಬಗ್ಗೆ ನಂಬಿಕೆ ಬರದಿದ್ದರೆ ತನ್ನ ಹಣವನ್ನು ಬ್ಯಾಂಕಿನಲ್ಲಿ ಏಕೆ ಬಿಡುತ್ತಾನೆ?

ತನ್ನಲ್ಲಿ ತೊಡಗಿಸಿರುವ ಅಷ್ಟೂ ಹಣವನ್ನು  ಎಲ್ಲ ಜನ ಏಕಕಾಲದಲ್ಲಿ ವಾಪಸ್ ಕೇಳಲಾರರು ಎಂಬ ನಂಬಿಕೆಯಿಂದ ಮಾತ್ರ ಬ್ಯಾಂಕ್ ನಿತ್ಯದ ಕೆಲಸ ಆರಂಭಿಸುತ್ತದೆ. ಬ್ಯಾಂಕ್ ತನ್ನ ವ್ಯವಹಾರಗಳಿಂದ ಸಂಗ್ರಹಿಸುವ ಎಲ್ಲ ರೀತಿಯ ಠೇವಣಿಯನ್ನು ತನ್ನಲ್ಲೇ ಇಟ್ಟುಕೊಳ್ಳುವುದಿಲ್ಲ. ಅದನ್ನು ಮರುಹೂಡಿಕೆ, ಗೃಹ ಸಾಲ ಮತ್ತು ಇತರ ಸಾಲಗಳ ರೂಪದಲ್ಲಿ ನಿಯೋಜಿಸಿರುತ್ತದೆ. ತನ್ನ ನಿತ್ಯದ ಸರಾಸರಿ ವ್ಯವಹಾರಕ್ಕೆ ಆಗುವಷ್ಟು ಹಣವನ್ನು ಮಾತ್ರ ಆ ಕ್ಷಣಕ್ಕೆ ಬ್ಯಾಂಕ್ ಹೊಂದಿರುತ್ತದೆ. ಷೇರು ಪೇಟೆ ಕೂಡಾ ಇದೇ ರೀತಿ ಕೆಲಸ ಮಾಡುತ್ತದೆ. ಆರ್ಥಿಕ ಹಿಂಜರಿತ ಅಥವಾ ಷೇರು ಮಾರುಕಟ್ಟೆಯ ಏರಿಳಿತಗಳು, ಬ್ಯಾಂಕಿನ ಬಗೆಗೆ ಹಬ್ಬುವ ಸುಳ್ಳು/ನಿಜದ ಸುದ್ದಿಗಳಿಂದಲೇ ಅಷ್ಟೂ ಗ್ರಾಹಕರು ಒಂದೇ ಬಾರಿಗೆ ಹಣ ವಾಪಸ್ ಪಡೆಯಲು ಧಾವಿಸುತ್ತಾರೆ, ತನ್ನ ನಿತ್ಯದ ಸರಾಸರಿ ವ್ಯವಹಾರಕ್ಕೆ ಆಗುವಷ್ಟು ಹಣ ಮುಗಿದ ಮೇಲೆ ಬ್ಯಾಂಕಿನ ಖಜಾನೆ ಖಾಲಿ. ಉಳಿದ ಗ್ರಾಹಕರಿಗೆ ಕೊಡಲು ಹಣ ಹೊಂದಿಸಬೇಕೆಂದರೆ ತಾನು ತೊಡಗಿಸಿರುವ ಹಣವನ್ನು ಹಿಂಪಡೆಯಲೇಬೇಕು. ಅದಕ್ಕಾಗಿ ದೀರ್ಘಕಾಲೀನವಾಗಿ ತೊಡಗಿಸಿರುವ ಗೃಹ, ವಾಹನ ಮುಂತಾದ ಸಾಲ ಒಂದೇ ಬಾರಿಗೆ ಸಿಗುವುದು ಸಾಧ್ಯವಿಲ್ಲ. ಇಂಥದ್ದರಿಂದಲೇ ಹುಟ್ಟಿಕೊಳ್ಳುವ ಅಂತೆ ಕಂತೆಗಳ ಸುದ್ದಿಗಳಿಗೆ ರೆಕ್ಕೆಪುಕ್ಕಗಳು ಸೇರಿಕೊಂಡು ಉಳಿದ ಇನ್ನಷ್ಟು ಗ್ರಾಹಕರು ಹಣ ಹಿಂಪಡೆಯಲು ಧಾವಿಸಿದರೆ ಯಾವ ಎಟಿಎಂನಲ್ಲಿ ಕಾರ್ಡ್ ಹಾಕಿದರೂ ಹಣ ಇಲ್ಲವಾಗುತ್ತದೆ. ಇಂಥ ಸ್ಥಿತಿಯಲ್ಲೇ ಬ್ಯಾಂಕ್ ತನ್ನನ್ನು ದಿವಾಳಿ ಎಂದು ಘೋಷಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕುತ್ತದೆ. ಷೇರುಪೇಟೆ ಕುಸಿತ ಕೂಡಾ ಹೀಗೆಯೇ. ಒಮ್ಮೆಲೆ ಎಲ್ಲರೂ ಷೇರು ಮಾರಾಟಕ್ಕಿಳಿದರೆ ಕೊಳ್ಳುವವರು ಯಾರು? ಬೇಡಿಕೆ ಇಲ್ಲದ ಷೇರುಗಳ ಬೆಲೆ ದಿಡೀರ್ ಇಳಿಯುತ್ತದೆ. ಒಟ್ಟಾರೆ ಷೇರುಪೇಟೆ ಕುಸಿಯುತ್ತದೆ.

ಇಂಥ ಸಂದರ್ಭಗಳಲ್ಲಿ ಸರಕಾರ ಬ್ಯಾಂಕ್ ನೆರವಿಗೆ ಧಾವಿಸಲೇಬೇಕು. ಅಂದರೆ ಪಾರುಗಾಣಿಕೆ (ಬೇಲ್ಔಟ್) ನೀಡಿದರೆ ಅದರಿಂದ ಬ್ಯಾಂಕ್ ಸ್ವಲ್ಪ ಕಾಲ ಚೇತರಿಸಿಕೊಳ್ಳುವ ಶಕ್ತಿ ಪಡೆಯಬಹುದು. ಇದು ತುರ್ತು ನಿಗಾ ಘಟಕದಲ್ಲಿರುವ ರೋಗಿಗೆ ನೀಡುವ ಆಮ್ಲಜನಕದಂತೆ. ರೋಗಿ ಚೇತರಿಸಿಕೊಂಡರೆ ಪರವಾಗಿಲ್ಲ, ಇಲ್ಲದಿದ್ದರೆ ಪರಿಣಾಮ ಭೀಕರ. ಆದ್ದರಿಂದಲೇ ಕ್ರೆಡಿಟ್ ಕಾರ್ಡ್ನ ಅಂತಾರಾಷ್ಟ್ರೀಯ ಪ್ರಮುಖ ಬ್ಯಾಂಕ್ ಆದ ಸಿಟಿ ಬ್ಯಾಂಕ್ ದೀವಾಳಿಯಾಗಿದೆ. ಈ ಬ್ಯಾಂಕಿಗೆ ಸುಮಾರು ೪ ಸಾವಿರದ ಮೂರು ಕೋಟಿ ಡಾಲರ್ ಪಾರುಗಾಣಿಕೆ (ಬೇಲ್ಔಟ್)ಯನ್ನ ಅಮೆರಿಕ ಸರಕಾರ ನೀಡಿದೆ.

ಅಮೆರಿಕದಲ್ಲಿ ಆದದ್ದೇನು?:  ಹೆಸರಾಂತ ಆರ್ಥಿಕ ತಜ್ಞ, ನೊಬೆಲ್ ವಿಜೇತ ಪಾಲ್ ಕ್ರುಗ್ಮನ್ ಪ್ರಕಾರ, ಬುಷ್ ಸರಕಾರ ತನ್ನ ಎಂಟು ವರ್ಷಗಳ ಆಡಳಿತಾವಯಲ್ಲಿ ಖರ್ಚು ಮಾಡಲು ಪ್ರೋತ್ಸಾಹಿಸಿದ್ದೇ ಈ ಅವಘಡಗಳಿಗೆಲ್ಲಾ ಮೂಲ. ಬುಷ್ ಆಡಳಿತಾವಯಲ್ಲಿ ಜನ ಉಳಿತಾಯ ಎಂಬ ಪದವನ್ನೇ ಮರೆಯುವಂತೆ ನೀತಿಗಳನ್ನು ರೂಪಿಸಿದ ಸರಕಾರದ ದೂರದೃಷ್ಟಿಯ ಕೊರತೆಯಿಂದ ಇಡೀ ಜಗತ್ತಿನ ಆರ್ಥಿಕತೆ ಕುಸಿದಿದೆ.  ಬ್ಯಾಂಕ್ ವಹಿವಾಟಿಗೆ ಸಂಬಂಸಿದಂತೆ, ಜಾಗತಿಕ ಆರ್ಥಿಕ ಕುಸಿತಕ್ಕೆ ಮುಖ್ಯ ಕಾರಣಗಳು ಹೀಗಿವೆ. ಬೇಕಾಬಿಟ್ಟಿ  ಹಂಚಿದ ಗೃಹಸಾಲ (ಹೌಸಿಂಗ್ ಲೋನ್), ಪ್ರಧಾನ ಸಾಲ (ಪ್ರೈಮ್ ಲೋನ್), ಅಪ್ರಧಾನ ಸಾಲ (ಸಬ್ ಪ್ರೈಮ್ ಲೋನ್), ಬೇಟೆಗಾರ ಸಾಲ (ಪ್ರಿಡೇಟರಿ ಲೆಂಡಿಂಗ್) 

ಗೃಹಸಾಲ ಮತ್ತು ಪ್ರಧಾನ ಸಾಲ: ಬ್ಯಾಂಕ್ಗಳು ಮುಖ್ಯ ಕಂಪನಿಗಳ ಆಯಕಟ್ಟಿನ ಸ್ಥಾನದಲ್ಲಿ ಕೆಲಸ ಮಾಡುವ ನೌಕರರನ್ನು ಹಿಡಿದು, ಅವರು ಕಾಲಕಾಲಕ್ಕೆ ಹಣ ಮತ್ತು ಬಡ್ಡಿಯ ಕಂತನ್ನು ಸರಿಯಾಗಿ ಕಟ್ಟುತ್ತಾರೆಂದು ಖಾತರಿಯಾದ ನಂತರ ಕೊಡುವ ಸಾಲ ಇದು. ಬ್ಯಾಂಕ್ ಪ್ರಕಾರ ಇದು ರಿಸ್ಕ್ ಕಡಿಮೆ ಇರುವ ಸಾಲ. ಈ ಸಾಲದ ಮುಖ್ಯ ಲಕ್ಷಣ ಎಂದರೆ ಅದು ಕಡಿಮೆ ಬಡ್ಡಿ ದರ ಹೊಂದಿರುತ್ತದೆ. ಉದಾಹರಣೆಗೆ ಅಪಾರ್ಟ್ಮೆಂಟ್, ಕಾರುಗಳಿಗಾಗಿ ಕೊಡುವ ಸಾಲಗಳು. ಇಲ್ಲಿ  ವಾರ್ಷಿಕ ಶೇ. ಏಳೆಂಟು ರೂ. ಬಡ್ಡಿದರದಲ್ಲಿ ಸಾಲ ಸಿಗುತ್ತದೆ. ಈ ರೂಪದ ಸಾಲಕ್ಕೆ ಬ್ಯಾಂಕ್ಗಳು ತಮ್ಮ ಸಂಗ್ರಹದ ಹೆಚ್ಚು ಹಣವನ್ನು ವಿನಿಯೋಗಿಸುತ್ತದೆ. ಇದು ಆ ಬ್ಯಾಂಕ್ಗಳ ನೀತಿಯೂ ಹೌದು. ಆದ್ದರಿಂದಲೇ ಬ್ಯಾಂಕ್ಗಳು ಇಂಥ ಗಿರಾಕಿಗಳನ್ನು ಹುಡುಕಿಕೊಂಡು ಹೋಗಿ ಸಾಲ ಕೊಡುತ್ತವೆ.

ಅಪ್ರಧಾನ ಸಾಲ: ಇದು ಆರ್ಥಿಕವಾಗಿ ಮಧ್ಯಮ ಮತ್ತು ಕೆಳವರ್ಗದವರಿಗೆ ನೀಡುವ ಸಾಲ. ಇಲ್ಲಿ ಈ ಸಾಲಗಾರರು ಕಾಲಕಾಲಕ್ಕೆ ಹಣ ಕಟ್ಟಲಾರರು ಅಥವಾ ಕಟ್ಟುವ ಸಾಮರ್ಥ್ಯವಿಲ್ಲ ಎಂಬ ಸತ್ಯ ಬ್ಯಾಂಕ್ಗಳಿಗೆ ಗೊತ್ತಿರುತ್ತದೆ. ಆದರೂ ಸಾಲ ಕೊಡುತ್ತವೆ. ಗೃಹಸಾಲ ಮತ್ತು ಪ್ರಧಾನ ಸಾಲ ನೀಡಿ ಹೆಚ್ಚಾಗಿರುವ ಹಣವನ್ನು ಬ್ಯಾಂಕ್ಗಳು ಈ ರೀತಿಯ ಸಾಲದ ರೂಪದಲ್ಲಿ ನೀಡುತ್ತವೆ. ಇಲ್ಲಿ ಬಡ್ಡಿದರ ಹೆಚ್ಚು. ವಾರ್ಷಿಕ ಸುಮಾರು ಶೇ. ೧೫ರಿಂದ ೨೫ರವರೆಗೂ ಬಡ್ಡಿ ವಿಸುತ್ತವೆ. (ಒಮ್ಮೊಮ್ಮೆ ಎಲ್ಲ ರೀತಿಯ ಸಾಲಗಳ ಮೇಲಿನ ಬಡ್ಡಿ ದರಗಳು ಆಯಾ ದೇಶಗಳ ಸರಕಾರ ಮತ್ತು ರಿಸರ್ವ್ ಬ್ಯಾಂಕ್ಗಳ ಸಾಲ ನೀತಿಗೊಳಪಟ್ಟಿರುತ್ತವೆ.) ಆದರೆ ಇವೆಲ್ಲ ಬಹುತೇಕ ಖಾಸಗಿ ಬ್ಯಾಂಕುಗಳಾಗಿರುವುದರಿಂದ ಅವುಗಳ ಮೇಲೆ ಸರಕಾರ ಮತ್ತು ರಿಸರ್ವ್ ಬ್ಯಾಂಕ್ಗೆ ಈ ವಿಷಯದಲ್ಲಿ ಅಷ್ಟು  ಹಿಡಿತವಿರುವುದಿಲ್ಲ. ಕಂತು ಕಟ್ಟುವುದು ತಡವಾದರೆ ವಿಳಂಬ ಶುಲ್ಕ, ಅದೂ ಇದೂ, ಸೇವಾ ಶುಲ್ಕ ಅಂತ ನಾಲ್ಕಾರು ಹೆಸರುಗಳಲ್ಲಿ ಕೀಳುವ ಹಣ ವಾರ್ಷಿಕ ಶೇ. ೩೦ ರಿಂದ ೩೫ರಷ್ಟು ಬಡ್ಡಿ ದರದಷ್ಟಾದರೂ ಆಶ್ಚರ್ಯವಿಲ್ಲ. ಗ್ರಾಹಕರು ಈಗಾಗಲೇ ಬ್ಯಾಂಕ್ಗಳ ಷರತ್ತಿಗೆ ಒಪ್ಪಿ ಸಹಿ ಹಾಕಿರುವ ನಿಯಮಗಳ ಅಡಿಯಲ್ಲಿಯೇ ಇದೆಲ್ಲ ವ್ಯವಹಾರಗಳನ್ನು ಬ್ಯಾಂಕ್ಗಳು ನಾಜೂಕಾಗಿ ಮಾಡುತ್ತವೆ.

ಬೇಟೆಗಾರ ಸಾಲ (ಪ್ರಿಡೇಟರಿ ಲೆಂಡಿಂಗ್):  ಕ್ರೆಡಿಟ್ ಕಾರ್ಡ್ಗಳ ಮೂಲಕ ವಿತರಣೆಯಾಗುವ ತಾತ್ಕಾಲಿಕ ಸಾಲ ಮತ್ತು ಬ್ಯಾಂಕ್ಗಳು ಬೆನ್ನಟ್ಟಿ  ಹೋಗಿ ನೀಡುವ ವೈಯಕ್ತಿಕ ಸಾಲಗಳು ಈ ಗುಂಪಿಗೆ ಸೇರುತ್ತವೆ. ಇಲ್ಲಿ ರಿಸ್ಕ್ ಅತ್ಯಂತ ಹೆಚ್ಚು. ಬ್ಯಾಂಕ್ಗಳ ಪಾಲಿಗೆ ಈ ಸಾಲಗಳು ಕಾಮಧೇನು ಹೇಗೋ ಹಾಗೆ ಮಗ್ಗುಲ ಮುಳ್ಳುಗಳೂ ಹೌದು. ಇಲ್ಲಿ ಗ್ರಾಹಕರು ಪೂರ್ವನಿರ್ಧರಿತ ಕಟ್ಟು ಕಟ್ಟಳೆಗಳ ಉಲ್ಲಂಘನೆ ಆಧರಿಸಿ ವಾರ್ಷಿಕ ಶೇ. ೪೦ರಿಂದ ೫೦ರಷ್ಟು ಬಡ್ಡಿದರಕ್ಕೆ ಸಮನಾಗುವ ಹಣವನ್ನು ಸುಲಿದುಕೊಳ್ಳಲಾಗುತ್ತದೆ. ಅದಕ್ಕೇ ಇದನ್ನು  ಬೇಟೆಗಾರ ಸಾಲ (ಪ್ರಿಡೇಟರಿ ಲೆಂಡಿಂಗ್) ಎಂದು ಕರೆಯುತ್ತಾರೆ. ಹುಲಿಯೊಂದು ಜಿಂಕೆಯನ್ನು ಹಿಡಿಯುವ ಚಿತ್ರ ಕಲ್ಪಿಸಿಕೊಳ್ಳಿ. ಈಗಂತೂ ಜಾಗತಿಕ ಮಟ್ಟದಲ್ಲಿ ಖಾಸಗೀಕರಣ ಮತ್ತು ಉದಾರೀಕರಣಗಳು ಬೃಹತ್ ಮಟ್ಟದ ಅಂತರ್ ಸಂಬಂಧವಿರುವ ಸರಪಳಿಯನ್ನು ಅನೇಕ ವಿಷಯಗಳಲ್ಲಿ ಬಂಸಿರುವಂತೆ ಆರ್ಥಿಕ ವಿಷಯದಲ್ಲಿ ಬಿಗಿ ಬಂಧವಿದೆ. ಎಲ್ಲೋ ಒಂದು ಕಡೆ ಒಂದು ಬೆಸುಗೆ ತುಂಡಾದರೆ ಇಡೀ ವ್ಯವಸ್ಥೆಯೇ ಮುಗ್ಗರಿಸುತ್ತದೆ.

ಮೇಲೆ ಹೇಳಿದ ಯಾವುದೇ ಒಂದು ಕಾರಣದಿಂದಲೋ ಇಲ್ಲವೇ ಸರಕಾರದ/ರಿಸರ್ವ್ ಬ್ಯಾಂಕ್ಗಳ  ನೀತಿಯಿಂದಲೋ ಅಥವಾ ವ್ಯಾಪಾರ ಜಗತ್ತಿನ ಬೇಡಿಕೆ ಮತ್ತು ಪೂರೈಕೆಗಳ ವ್ಯತ್ಯಾಸಗಳಿಂದ ಆರ್ಥಿಕ ವ್ಯವಸ್ಥೆಗೆ ಸಣ್ಣ ಪೆಟ್ಟು ಬಿದ್ದರೂ ಕಷ್ಟ. ಮೊದಲೇ ಸಾಲದ ಗಾಳಕ್ಕೆ ಸಿಕ್ಕಿಹಾಕಿಕೊಂಡಿರುವ ಕ್ರೆಡಿಟ್ ಕಾರ್ಡ್ ಗ್ರಾಹಕರು ಮತ್ತು ಆ ದಿನದ ಹೊಟ್ಟೆ ಬಟ್ಟೆಗೆ ಹೆಣಗಾಡುವ ಆರ್ಥಿಕವಾಗಿ ಮಧ್ಯಮ/ಕೆಳವರ್ಗದಲ್ಲಿರುವವರು ಹಣಕಾಸು ಮುಗ್ಗಟ್ಟಿನಿಂದ ತತ್ತರಿಸುತ್ತಾರೆ.  ಹಣಕಾಸು ಹಿಂಜರಿತದ ಪರಿಣಾಮ ಅವರ ಕೆಲಸ ಹೋಗುತ್ತದೆ. ಇಲ್ಲದಿದ್ದರೆ ಬರುತ್ತಿರುವ ಆದಾಯ ಕುಸಿಯುತ್ತದೆ. ಇದರಿಂದ ಅವರಿಗೆ ಕಾಲಕಾಲಕ್ಕೆ ಬ್ಯಾಂಕ್ಗೆ ಹಣ ಕಟ್ಟಲು ಸಾಧ್ಯವಾಗುವುದಿಲ್ಲ. ಸುಸ್ತಿದಾರರಾಗುತ್ತಾರೆ. ಕೊನೆಗೆ ದಿವಾಳಿಯೆಂದೂ ಘೋಷಿಸಿಕೊಳ್ಳಬಹುದು. ಇದರ ನೇರ ಪರಿಣಾಮ ಬ್ಯಾಂಕಿನ ಮೇಲೆ. ಇದರಲ್ಲಿ ಬ್ಯಾಂಕ್ಗಳಗೆ ಹೆಚ್ಚಾಗಿ ಹೊಡೆತ ಬೀಳುವುದು ಕ್ರೆಡಿಟ್ ಕಾರ್ಡ್ಗಳಿಂದ. ಅತ್ತ ಕುಸಿಯುತ್ತಿರುವ ಷೇರುಪೇಟೆ. ಇತ್ತ ಹೆಚ್ಚುವ ದಿವಾಳಿಗಳಿಂದ ಬ್ಯಾಂಕ್ ದಿವಾಳಿ ಹಂತಕ್ಕೆ ಬರುತ್ತದೆ. ಕೊನೆಗೆ ಗೃಹ ಸಾಲದ ಕಂತಿಗೆ ಕಣ್ಣು ಹಾಯಿಸಿದರೆ ಅಲ್ಲಿಯೂ ವಸೂಲಿ ಕಷ್ಟವಾಗಿ ಸಾಲಗಾರರು ಅಡವಿಟ್ಟಿರುವ ಕಟ್ಟಡ/ಇನ್ನಾವುದೇ ವಸ್ತುಗಳನ್ನು ಹರಾಜಿಗಿಟ್ಟರೂ ಬ್ಯಾಂಕ್ ಕೊಟ್ಟಿರುವಷ್ಟು ಸಾಲದ ಮೊತ್ತ ಸಿಗದಿರುವ ಸಾಧ್ಯತೆಗಳೇ ಹೆಚ್ಚು , ಏಕೆಂದರೆ ಇದು ಬೇಡಿಕೆ ಕುಸಿದಿರುವ ಹಿಂಜರಿತದ ಕಾಲ! ಬ್ಯಾಂಕ್ಗಳಲ್ಲೂ ಹಣವಿಲ್ಲದಾದಾಗ ಬ್ಯಾಂಕ್ಗಳ ಸಾಲದಿಂದಲೇ ಪ್ರತಿ ದಿನದ ವ್ಯವಹಾರ ನಡೆಸುವ ದೊಡ್ಡ ದೊಡ್ಡ ಕಂಪನಿಗಳ ಉತ್ಪಾದನೆ ಕುಸಿಯುತ್ತದೆ. ಉದಾಹರಣೆಗೆ ಈಗ ಜಗತ್ತಿನ ಕಾರು ಉತ್ಪಾದನೆಯ ದೊಡ್ಡ  ಕಂಪನಿಗಳಾದ ಜನರಲ್ ಮೋಟಾರ್ಸ್ , ಫೋರ್ಡ್ ಮುಂತಾದವು ಅನುಭವಿಸುತ್ತಿರುವ ಸಂಕಟ. ಇದರಿಂದ ಇಡೀ ಆಟೊಮೊಬೈಲ್ ಉದ್ಯಮ ಕುಸಿಯತೊಡಗುತ್ತದೆ. ಪರಿಣಾಮ, ಈ ಉದ್ಯಮಕ್ಕೆ ಅಗತ್ಯವಾಗಿ ಬೇಕಾದ ಕಬ್ಬಿಣ, ಉಕ್ಕು ಮತ್ತು ತೈಲೋತ್ಪನ್ನಗಳು ಬೇಡಿಕೆ ಕಳೆದುಕೊಳ್ಳುತ್ತವೆ. ಇದರ ಹಿಂದೆಯೇ ಎಲ್ಲ ರಂಗಗಳಲ್ಲಿ ಕೆಲಸ ಮಾಡುವವರು ಕೆಲಸ ಕಳೆದುಕೊಳ್ಳುತ್ತಾರೆ. ದೇಶದ/ಜಾಗತಿಕ ಆರ್ಥಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಆರ್ಥಿಕ ಹಿಂಜರಿತ ಕಾಲ ಎಂಥ ಗಟ್ಟಿಗನನ್ನೂ ಹೇಡಿಯನ್ನಾಗಿ ಪರಿವರ್ತಿಸುತ್ತದೆ. ಪರಿಸ್ಥಿತಿ ಸರಿಯಿರುವಾಗ ಸಾಲ ಮಾಡಿಯಾದರೂ ಏನನ್ನಾದರೂ ಕೊಳ್ಳಬೇಕೆಂದು ಬಯಸುವ ಗ್ರಾಹಕ, ಕುಸಿತದ ಕಾಲದಲ್ಲಿ ತನ್ನ ಜೇಬಿನಲ್ಲೇ ಹಣವಿದ್ದರೂ ಬಿಚ್ಚುವುದಿಲ್ಲ. ಇದರಿಂದ ನಿತ್ಯದ ಎಲ್ಲ ರೀತಿಯ ವ್ಯಾಪಾರಿ ಭಾವುಕತೆ ಕುಸಿಯುತ್ತದೆ. ಇಂಥದೇ ಪರಿಣಾಮವನ್ನು ಈಗ ಜಗತ್ತು ಎದುರಿಸುತ್ತಿದೆ.

ಎಲ್ಲರ ಹಣ, ಬ್ಯಾಂಕ್ ಮತ್ತು ಷೇರುಗಳಲ್ಲಿ ಒಟ್ಟಿಗೇ ಇದ್ದಾಗ ಅದಕ್ಕೆ ಬಲವಿತ್ತು, ಬೆಲೆ ಇತ್ತು. ಅದು ದೇಶದ ಸದೃಢ ಆರ್ಥಿಕತೆಗೆ ಹಾದಿಯಾಗಿತ್ತು. ಅಭಿವೃದ್ಧಿಗೆ ಸಹಕಾರಿಯಾಗಿತ್ತು. ಈಗ ಎಲ್ಲರೂ ಹಣ ವಾಪಸ್ ಪಡೆಯುತ್ತಿದ್ದಾರೆ. ಕೆಲವರ ಬಳಿ ಹಣವಿದೆ. ಖರ್ಚು ಮಾಡಲು ಭವಿಷ್ಯದ ಭಯ. ದೇಶದ ಆರ್ಥಿಕ ಸ್ಥಿತಿ ಶಕ್ತಿಹೀನವಾಗಿದೆ. ಬೇಡಿಕೆ ಕುಸಿದಿರುವುದರಿಂದ ಉತ್ಪಾದನೆಯೂ ಕುಸಿದಿದೆ. ಈಗಾಗಲೇ ಉತ್ಪಾದನೆ ಆಗಿರುವ ಸರಕನ್ನು ಆದಷ್ಟು ಬೇಗ ಮಾರಿಬಿಡಬೇಕೆಂಬ ಧಾವಂತ ಎಲ್ಲ ಉತ್ಪಾದಕರಿಗೆ. ಇಲ್ಲದಿದ್ದರೆ ಬೆಲೆ ಇನ್ನೂ ಕುಸಿಯುವ ಭಯ. ಆದ್ದರಿಂದಲೇ ಎರಡು ತಿಂಗಳ ಹಿಂದೆ ಗಗನ ಮುಟ್ಟಿದ್ದ ಹಣದುಬ್ಬರ ಈಗ ಜರ್ರಂತ ಜಾರುತ್ತಿದೆ. ಅಗತ್ಯ ವಸ್ತುಗಳ ಬೆಲೆಗಳು ಕುಸಿಯುತ್ತಿವೆ. ಇದು ಕೊಳ್ಳುವವರ ಕಾಲ. ಇದೇ ಸಾಮಾನ್ಯನಿಗೆ ಬೇಕಾಗಿರುವ ಅರ್ಥಶಾಸ್ತ್ರ  ಕೂಡ.

೧೭ ಡಿಸೆಂಬರ್ ೨೦೦೮ರ ವಿಜಯಕರ್ನಾಟಕ ಸಂಚಿಕೆಯಲ್ಲಿ ಪ್ರಕಟವಾಗಿದೆ. 

Saturday 26 June 2010

ಎನ್ಕೆ ಎಂಬ ನಮ್ಮ ಗೆಳೆಯ ಹನುಮಂತಯ್ಯನ ನೆನೆದು


ತೊಂಬತ್ತರ ದಶಕದಲ್ಲಿ ತಿಪಟೂರಿನ ಸಾಂಸ್ಕೃತಿಕ ಲೋಕ ಪ್ರಜ್ವಲಿಸುತ್ತಿತ್ತು. ಅಭಿನಯದ ಸಿದ್ಧಗಂಗಯ್ಯ ಕಂಬಾಳು, ಪ್ರೊಥಿಯೋದ ನಟರಾಜ ಹೊನ್ನವಳ್ಳಿ, ಡೈರಿ ನಾಗರಾಜ್ ಮುಂತಾದ ಹಿರಿಯರ ಸಾಥ್ನಿಂದ, ನೀನಾಸಂ ತಿರುಗಾಟದ ನಾಟಕಗಳು, ನಮ್ಮೆಲ್ಲರ ಸೂರ್ತಿ ಕೇಂದ್ರದಂತಿದ್ದ, ಸುಮಾರು ಇಪ್ಪತ್ತು ವರ್ಷ ಆಸ್ಪತ್ರೆಯಲ್ಲೇ ಮಲಗಿ ಬರೆಯುತ್ತಿದ್ದ ಕವಿ ಷಡಕ್ಷರಿ, ಇವರನ್ನು ನೋಡಲು ಬರುತ್ತಿದ್ದ ಬೆಳಗೆರೆ ಕೃಷ್ಣಶಾಸ್ತ್ರಿಗಳು, ಕಲ್ಪತರು, ಪಲ್ಲಾಗಟ್ಟಿ ಕಾಲೇಜಿನ ಮೇಷ್ಟ್ರುಗಳಾದ ಕೆ.ಆರ್. ಬಸವರಾಜು, ಟಿ.ಕೆ. ಶಿವಣ್ಣ, ಚನ್ನಬಸವಣ್ಣ, ಎಸ್. ತಮ್ಮಾಜಿರಾವ್, ರೇಣುಕಾರ್ಯ, ಟಿ.ಎಸ್. ನಾಗರಾಜಶೆಟ್ಟಿ, ಸಿದ್ದಗಂಗಯ್ಯ ಹೊಲ್ತಾಳ್, ಜಿ.ಎಸ್. ರಮೇಶ್, ಎನ್.ಪಿ. ನಾಗರಾಜು ಮಂತಾದ ಅನೇಕರ ಭಾಗವಹಿಸುವಿಕೆ ಜತೆಗೆ ವಿದ್ವಾನ್ ನಂಜುಂಡಾಚಾರ್ ಅವರ ಸಂಗೀತ ಪಾಠಗಳು, ನಟರಾಜ ನೃತ್ಯಶಾಲೆಯ ನಳಿನಾ ಅವರ ನಾಟ್ಯ, ಸಂಗೀತ ಪ್ರಯೋಗಗಳು, ಗೌಡನಕಟ್ಟೆ ತಿಮ್ಮಯ್ಯ ಮಾರ್ಗದರ್ಶನದ ಅಬ್ಬಿನಹೊಳೆ ಸುರೇಶ್ ನಾಯಕತ್ವದ ಕವಿಬಳಗ, ಷಡಕ್ಷರ ದೇವರ ನೇತೃತ್ವದ ವಿಜ್ಞಾನ, ಪರಿಸರದ ಕುರಿತ ಸಭೆಗಳಿಂದ ಹದಗೊಂಡಿದ್ದ  ತಿಪಟೂರಿನ ಸಾಂಸ್ಕೃತಿಕ  ಕ್ಷಿತಿಜ ನಮಗೋಸ್ಕರವೇ ಸೃಷ್ಟಿಯಾದಂತಿತ್ತು.

ನಮ್ಮ ಕಾಲೇಜಿನ ಹಳೇ ವಿದ್ಯಾರ್ಥಿಗಳಾದ ನಟರಾಜ್ ಹುಳಿಯಾರ್, ಎಸ್. ಗಂಗಾಧರಯ್ಯ, ಕೃಷ್ಣಮೂರ್ತಿ ಬಿಳಿಗೆರೆ ಮುಂತಾದವರ ಒಡನಾಟದಲ್ಲಿ ನನ್ನ ತಲೆಮಾರಿನ ಎನ್.ಕೆ. ಹನುಮಂತಯ್ಯ, ಪಿ. ಮಂಜುನಾಥ, ಉಗಮ ಶ್ರೀನಿವಾಸ, ಆಲೂರು ದೊಡ್ಡನಿಂಗಪ್ಪ, ಸತೀಶ್, ಹಳ್ಳಿ ಸುರೇಶ, ಎನ್.ಎಸ್. ಶೈಲಜಾ, ಎಚ್.ಡಿ ಸುನೀತಾ, ಬಿ.ಎಸ್. ಜಯಪ್ರಕಾಶ್ನಾರಾಯಣ, ಬಿಎಸ್. ವೆಂಕಟೇಶ್ಪ್ರಸಾದ್, ಹಾಲ್ಕುರಿಕೆ ಶಿವಶಂಕರ, ಮಲ್ಲಿಕಾರ್ಜುನ ಮತಿಘಟ್ಟ, ಕಂಪಾರಹಳ್ಳಿ ಶಾಂತಾ, ಎಸ್. ವಿಷ್ಣುಕುಮಾರ್ ಮುಂತಾದವರಿದ್ದ ತಂಡ, ಅವಕಾಶ ಸಿಕ್ಕಿದರೆ ಆಕಾಶಕ್ಕೇ ತೂತು ಹೊಡೆಯುತ್ತೇವೆ ಎಂಬ ಉಮೇದಿನಿಂದ ಬೀಗುತ್ತಿತ್ತು.  

೧೯೯೭-೯೮ರಲ್ಲಿ ನಾನೂ ಮತ್ತು ಹನುಮಂತಯ್ಯ ತುಮಕೂರಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಒಂದು ವರ್ಷ ಒಂದೇ ರೂಮಿನಲ್ಲಿದ್ದುಕೊಂಡು ಕೆಲಸ ಮಾಡಿದೆವು. ಹನುಮಂತಯ್ಯನ ಕೀಳರಿಮೆ, ಆತ್ಮವಿಶ್ವಾಸಗಳ ಆಳ, ಅಗಲಗಳ ಪರಿಚಯ ನನಗಾಗ ಚೆನ್ನಾಗಿ ಆಯಿತು. ಅವನ ಪ್ರತಿ ನಡೆಯೂ ಕಾವ್ಯಾತ್ಮಕವಾಗಿತ್ತು. ರಾತ್ರಿ ೧೧ ಗಂಟೆಗೆ ಮುಗಿಯುತ್ತಿದ್ದ ಪತ್ರಿಕೆ ಕೆಲಸದ ನಂತರ, ಅವನು ಎಂ.ಎ ಓದುವಾಗ ಇದ್ದ ಹಾಸ್ಟೆಲಿನ ಕಿರಿಯ ಸಹಪಾಠಿಗಳ ಕೊಠಡಿಗಳ ಟೆರೇಸಿನ ಮೇಲೆ ಕಂಬಾರರ  ಈವರೆಗಿನ ಹೇಳತೇನ ಕೇಳಾ ಸಂಕಲನ ಮತ್ತು ಕೆ.ಬಿ ಸಿದ್ದಯ್ಯನವರ ಬಕಾಲಗಳನ್ನು ನಾವು ಎತ್ತರದ ಧ್ವನಿಯಲ್ಲಿ ದಿನಗಳ ಲೆಕ್ಕದಲ್ಲಿ ಓದಿದ್ದು ಇನ್ನೂ ನಿನ್ನೆ, ಮೊನ್ನೆ  ನಡೆದಂತಿದೆ. ಜೊತೆಗಿದ್ದವರಿಗೆ ಒಮ್ಮೆಯೂ ಬೋರು ಹೊಡೆಸದ ಸದಾ ನವನವೀನ ವ್ಯಕ್ತಿತ್ವ ಅವನದು. 

ರಾತ್ರಿ ಎಷ್ಟೊತ್ತಿಗಾದರೂ ಮಲಗಲಿ, ಬೆಳಗ್ಗೆ ಐದಕ್ಕೆಲ್ಲಾ ಎದ್ದುಬಿಡುತ್ತಿದ್ದ. ಎದ್ದವನೇ ಮೂಲೆಯಲ್ಲಿದ್ದ  ಖಂಜರ ಅಥವಾ ಢಕ್ಕಿಯನ್ನು ಕೈಗೆತ್ತಿಕೊಂಡನೆಂದರೆ ಕನಿಷ್ಠ ಒಂದು ಗಂಟೆಯವರೆಗೆ ಅವನ ತತ್ವಪದಗಳು, ಭಾವಗೀತೆಗಳಿಗೆ  ಅಡೆತಡೆಯೇ ಇರುತ್ತಿರಲಿಲ್ಲ. ಅವನ ಈ ಜೋಗುಳಗಳನ್ನು ಕೇಳುತ್ತಾ ಮಲಗುವ ಸುಖ ನನ್ನದಾಗಿತ್ತು. ಬೆಳಗಿನ ಅಡುಗೆ ಕೆಲಸ ನನ್ನ ಪಾಳಿಯಾಗಿದ್ದರಿಂದ ಆಗಾಗ ನನ್ನ ಕತ್ತಿನ ಕೆಳಗೆ ಕೈ ಹಾಕುತ್ತಾ ಏ ಮರಿ ಎಳ್ಲಾ, ಎದ್ದಳಲೋ.., ಎನ್ನುತ್ತಾ ತನ್ನ ಹಾಡುಗಳನ್ನು ಮುಂದುವರಿಸುತ್ತಲೇ ಇದ್ದ.  ಇಂಥದೇ ದಿನಗಳನ್ನು ಕಳೆಯುತ್ತಿದ್ದಾಗ ಅವನು ಒಮ್ಮೆಲೇ ಹಂಪಿ ವಿವಿಗೆ ಪಿಎಚ್ಡಿ ಮಾಡುತ್ತೇನೆ ಅಂತ ಹೊರಟಾಗ ನಾನಂತೂ ಸಣ್ಣ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿದ್ದೆ. 

ಅದು ಗಣೇಶ ಚತುರ್ಥಿ ಸಮಯ. ಹೊಸ ಬಟ್ಟೆ, ಚಪ್ಪಲಿ ಕೊಳ್ಳಬೇಕೆಂಬ ಹಂಬಲ ಬಂತು. ತಿಪಟೂರಿನಿಂದ ಗೆಳೆಯ ಸತೀಶ ಹಬ್ಬಕ್ಕೆ ತಿಪಟೂರಿಗೆ ಬರಬೇಕೆಂದು ಫೋನ್ ಮಾಡಿದ. ಆ ಸಂದರ್ಭದಲ್ಲಿ ಸತೀಶನ ಅಕ್ಕ ನಳಿನಾ ಅವರ ನಟರಾಜ ನೃತ್ಯಶಾಲೆಯ ಕಾರ್ಯಕ್ರಮ ಇದ್ದಂತಿತ್ತು. ಸಂಬಳವನ್ನು ಪ್ರಜಾಪ್ರಗತಿ ಪತ್ರಿಕೆಯ ಮ್ಯಾನೇಜರ್ ಚಿಕ್ಕೀರಪ್ಪನಿಂದ ಪಡೆದು(ಕಸಿದು)ಕೊಂಡವರೇ ತುಮಕೂರಿನ ಎಂಜಿ ರೋಡಿಗಿಳಿದೆವು. ನಮ್ಮ ಬಜೆಟ್ಗೆ ಹೊಸ ಬಟ್ಟೆ ನಿಲುಕದ ನಕ್ಷತ್ರವಾಗಿದ್ದವು. ಅಲ್ಲಿಯೇ ಕಂಡ ಹಳೇ ಬಟ್ಟೆ ಅಂಗಡಿಗೆ ನುಗ್ಗಿ ಇಬ್ಬರೂ ಸ್ಲ್ಯಾಗು ಮತ್ತು ಜೀನ್ಸ್ ಪ್ಯಾಂಟುಗಳನ್ನು ಕೊಂಡೆವು. ನಂತರ ಬೂಟು ಕೊಳ್ಳುವ ಉಮೇದು. ಅವೂ ಕೂಡ ಹಳೆಯವೇ. ಹನುಮಂತನಿಗೆ ಸರಿಯಾದ ಜತೆ ಸಿಕ್ಕಿತು. ನನಗೆ ಮಾತ್ರ ಸ್ವಲ್ಪ ದೊಡ್ಡದಾದ ಚಾರ್ಲಿಚಾಪ್ಲಿನ್ ಮಾದರಿಯ ಶೂ ಸಿಕ್ಕಿದವು. ಬೆಲ್ಟ್ಗಳನ್ನೂ ಕೊಂಡೆವು. ತಿಪಟೂರಿಗೆ ಹೋಗಿ ಹಾಕಿಕೊಳ್ಳೋಣ ಎಂದರೆ ಹನುಮಂತಯ್ಯನಿಗೆ  ತಾಳ್ಮೆಯೇ ಇಲ್ಲ. ಅದೇ ರಸ್ತೆಯ ಪಕ್ಕದ ಬಟಾಬಯಲಿನ ಸೈಟ್ನಲ್ಲೇ ಬಟ್ಟೆ ಬದಲಾಯಿಸಿಕೊಂಡೆವು. ಒಬ್ಬರನ್ನು ಇನ್ನೊಬ್ಬರು ಹೊಗಳಿಕೊಂಡೆವು. ನೃತ್ಯಶಾಲೆಯ ಹುಡುಗಿಯರೆಲ್ಲಾ ತಮ್ಮನ್ನೇ ನೋಡುವುದಾಗಿ ನಾವೇ ಬೀಗಿಕೊಂಡೆವು. ಅಸಡಾ-ಬಸಡಾ ಕಾಣುತ್ತಿದ್ದ ನಮ್ಮ ಡ್ರೆಸ್ಗಳನ್ನು ನೋಡಿ ಸತೀಶ ಅವಾಕ್ಕಾದ. ಹನುಮಂತ ಮಾತ್ರ ನಾವು ಹೊಸಾ(?) ಬಟ್ಟೆಗಳನ್ನು ಕೊಂಡುಕೊಂಡ ಪರಿಯನ್ನು ಮಾತ್ರ ಚೆನ್ನಾಗಿ ಚೋಡಿದ. 

ನಾಗತಿಹಳ್ಳಿ ರಮೇಶ್ ನೇತೃತ್ವದಲ್ಲಿ ನಕ್ಕೀರ ಜೋಕೆ ಎಂಬ ಸಿನಿಮಾ ಮಾಡಬೇಕೆಂಬ ಹುಚ್ಚು ಹತ್ತಿಸಿಕೊಂಡು ನಮ್ಮ ಗುಂಪು ಎಲ್ಲೆಲ್ಲೋ ಅಲೆಯುತ್ತಿದ್ದಾಗ, ಒಂದು ದಿನ  ಶ್ರೀರಂಗಪಟ್ಟಣದ ಸಮೀಪದ ಬಾಬೂರಾಯನ ಕೊಪ್ಪಲಲ್ಲಿ ಊಟ ಮಾಡಿ ತಿರುಗಾಡುತ್ತಿದ್ದೆವು. ಒಂದು ಮನೆ ಮುಂದೆ ಜನರ ಗುಂಪು. ಆ ಮನೆ ಯಜಮಾನ ತೀರಿಕೊಂಡಿದ್ದ. ಆತನ ನೆಚ್ಚಿನ ನಾಯಿ ಅವನ ತಲೆ ಬಳಿ ತೀರಾ ಸಪ್ಪಗೆ ಮಲಗಿತ್ತು. ಹೆಣದ ಸುತ್ತ ಕೆಲವರು ಕುಳಿತುಕೊಂಡಿದ್ದವರ ನಡುವೆ ಎತ್ತರದ ದನಿಯಲ್ಲಿ ಇಬ್ಬರು ತತ್ವಪದಗಳನ್ನು ಹಾಡುತ್ತಿದ್ದರು. ಅವರ ಧ್ವನಿ ಕೇಳಿ ಕುತೂಹಲದಿಂದ  ಅಲ್ಲಿಗೆ ಬಂದ ನಾಗತಿಹಳ್ಳಿ ಮತ್ತು ಹೆಸರಾಂತ ಹಾಡುಗಾರ ಜನ್ನಿ (ಮೈಸೂರು ಜನಾರ್ದನ)ಅವರಿಗೆ ಅತ್ಯಾಶ್ಚರ್ಯ. ಅಲ್ಲಿ ಹಾಡುಗಳಿಂದ  ವಿಜೃಂಭಿಸುತ್ತಿದ್ದವರು ಹನುಮಂತ ಮತ್ತು ಆಲೂರು ದೊಡ್ಡನಿಂಗಪ್ಪ. ನಂತರ ಅವರನ್ನು ಜನ್ನಿ ಸೇರಿಕೊಂಡರು. ಮುಂದೆ ಬೆಳಗಿನ ಜಾವದವರೆಗೆ ಜನ್ನಿ, ಹನುಮಂತ ಮತ್ತು ಆಲೂರು ಶವರಾತ್ರಿಯನ್ನು ಶಿವರಾತ್ರಿಯಾಗಿಸಿದರು. ಸತ್ತವರು ಯಾರೋ ಯಾರಿಗೂ ಗೊತ್ತಿರಲಿಲ್ಲ.  

ನಮ್ಮ ಈ ಗುಂಪಿನ ಬಗ್ಗೆ ನಾಡಿನ ಅನೇಕ ಹಿರಿಯರು  ಅನೇಕ ಸಂದರ್ಭಗಳಲ್ಲಿ ತಿಪಟೂರಿನ ಹುಡುಗರೆಂದೇ ನಮ್ಮನ್ನೆಲ್ಲಾ ಗುರ್ತಿಸಿ ಮಾತನಾಡಲು ಸಾಧ್ಯವಾಗಿಸಿದ್ದರಲ್ಲಿ ಹನುಮಂತನ ಪಾಲು ಹೆಚ್ಚಿದೆ. ಸಿಕ್ಕಾಪಟ್ಟೆ ಸಂಕೋಚದ ಅವನ ಪ್ರೇಮದ ಪರಿತಾಪಗಳು, ಬಡತನ, ಅನುಭವಿಸಿದ ಅವಮಾನಗಳು ಅವನಲ್ಲಿ ಹುಟ್ಟಿಸಿದ್ದ ಕಿಚ್ಚು ಎಲ್ಲವನ್ನೂ ನಾವು ಬಲ್ಲೆವು, ಆದ್ದರಿಂದಲೇ ಆರಂಭದ ದಿನಗಳಲ್ಲಿ ಅವನು ಕೀಳರಿಮೆಯಿಂದ  ಒದ್ದಾಡದಂತೆ ಮಾಡಲು ಸಾಧ್ಯವಾದಷ್ಟು ಮಟ್ಟಿಗೆ ನಾವೆಲ್ಲರೂ ಯತ್ನಿಸಿದ್ದೇವೆ. ಹನುಮಂತಯ್ಯ ಅಂಥದ್ದೆಲ್ಲವನ್ನೂ ತನ್ನ ಬರವಣಿಗೆ ಮೂಲಕವೇ ಮೆಟ್ಟಿನಿಂತು ಹೆಸರು ಮಾಡಿದವನು.  ಇಂಥ ವರ್ಣರಂಜಿತ ಹನುಮಂತ ಮಾತ್ರ ಇತ್ತೀಚೆಗೆ ನಮ್ಮೆಲ್ಲರಿಂದ ದೂರವಾಗತೊಡಗಿದ್ದ. ಪೋನಿಗೂ ಸಿಗುತ್ತಿರಲಿಲ್ಲ. 

ತೀರಾ ಇತ್ತೀಚಿಗೆ ಒಂದು ಸಭೆಯಲ್ಲಿ ನಾನು ಅವನನ್ನು ಮಾತನಾಡಿಸಲಿಲ್ಲ ಎಂಬ ಕಾರಣಕ್ಕೆ ಸಭೆಯಿಂದ ಎದ್ದು ಹೋಗಿದ್ದ. ಫೋನ್ ಮಾಡಿ, ನನ್ನ ವರ್ತನೆ ಖಂಡಿಸಿ ಅಬ್ಬರಿಸಿದ. ಜನ ಜಂಗುಳಿಯಲ್ಲಿ ನೀನು ಕಾಣಿಸಲಿಲ್ಲ ಎಂದದ್ದಕ್ಕೆ, ತಾನು ಪ್ರೀತಿಸುವ ಹುಡುಗಿಯನ್ನು ಪ್ರೇಮಿ ಜಾತ್ರೆಯಲ್ಲೂ ಒಮ್ಮೆಲೇ ಕಂಡುಹಿಡಿಯಬಲ್ಲ ಎಂದು ಕಾವ್ಯಾತ್ಮಕವಾಗಿ ಮಾತಾಡಿ ಅತ್ತಿದ್ದ. ಇತ್ತ ನನಗೂ ಮಾತೇ ಹೊರಡದೆ ಕಣ್ಣೀರಾಗಿದ್ದೆ. ಅಂತೆಯೇ ತನಗನಿಸಿದ್ದನ್ನು ನಿಷ್ಠುರವಾಗಿ ಹೇಳುತ್ತಲೂ ಇದ್ದ. ನನ್ನ ನಾಟಕ ಸಿಂಗಾರಿತ್ಲು ಬಂದಾಗ  ನಿನಗೆ ನಾಟಕ ಹೇಗೋ ಒಲಿದುಬಿಟ್ಟಿದೆಯಲ್ಲಾ ಎಂದು ಚುಡಾಯಿಸಿದ್ದ.  

ಹಗಲು ಇರುಳಿನ ಬಲೆಯೊಳಗೆ ಹಕ್ಕಿ ಸಿಲುಕಿದೆ 
ಪಕ್ಕದಲ್ಲೇ ಬೇಟೆಗಾರನ ಒಲೆ ಉರಿಯುತ್ತಿದೆ  

ಈಗ ಹಾಡಲೇಬೇಕು ಈ ಪುಟ್ಟ ಕೊಕ್ಕಿನಲಿ 
ಬೇಟೆಗಾರ ನಿದ್ರಿಸುವಂತೆ  

ಈಗ ಈ ಪುಟ್ಟ ಕೊಕ್ಕನ್ನೇ ಖಡ್ಗವಾಗಿಸಬೇಕು
ಬಲೆ ಹರಿದು ಬಯಲ ಸೇರುವಂತೆ. 

ಎಂದು ಬರೆಯಬಲ್ಲವನಾಗಿದ್ದ, ನಮ್ಮೆಲ್ಲರೊಳಗೂ ಬೃಹತ್ತಾಗಿ ಹಬ್ಬಿರುವ ಹನುಮಂತಯ್ಯ ಇಲ್ಲವಾಗಿದ್ದಾನೆ. ಜಗತ್ತಿನ ಸರ್ವಶಕ್ತನೇ, ನಮಗೆಲ್ಲರಿಗೂ ಅವನ ನೆನಪನ್ನು ಸುದೀರ್ಘವಾಗಿಸಿಕೊಳ್ಳುವ ಶಕ್ತಿ ಕೊಡು ಎಂದು ಬೇಡಬೇಕೆನ್ನುವಂತೆ !

ಈ ಬಾರಿಯಾದರೂ ನಾವೇ ಗೆಲ್ಲೋಣ !

ಕಳೆದ ನಾಲ್ಕೂವರೆ ವರ್ಷಗಳಿಂದ ಸಮಸ್ಯೆಗಳ ಪರಿಹಾರಕ್ಕೆ ನಮ್ಮನ್ನು ಅಲೆಸಿದವರು, ನಮ್ಮ ಎಲ್ಲ ಸಮಸ್ಯೆ ಪರಿಹರಿಸುತ್ತೇವೆಂದು ಈಗ ನಮ್ಮ ಬಳಿಗೇ ಬರುತ್ತಿದ್ದಾರೆ. ಮತ್ತೆ ಚುನಾವಣೆ ಬಂದಿದೆ.

ಕಳೆದ ಚುನಾವಣೆ ವೇಳೆ ನಡುಮಧ್ಯಾಹ್ನ  ನಮ್ಮ ಮನೆಗೆ ಬಂದದ್ದು, ನಾವು ಸೌಜನ್ಯದಿಂದ ಹಾಸಿದ ಗೊತ ಗೊತ ನಾರುವ ಕಂಬಳಿ ಮೇಲೆ ದೇಶಾವರಿ ನಗೆ ಬೀರುತ್ತ ಕುಳಿತದ್ದು, ಕೊಟ್ಟ ಬೆಲ್ಲದ ಪಾನಕವನ್ನು ಅಮೃತವೆಂಬಂತೆ ಕುಡಿದದ್ದು, ಚುನಾವಣೆ ಮುಗಿಯುವವರೆಗೆ ರಾತ್ರೋರಾತ್ರಿ ನಮ್ಮ ಕೇರಿಗೆ ತಮ್ಮ ಪಟಾಲಂನೊಂದಿಗೆ ಬರುತ್ತಿದ್ದುದು, ಅರ್ಧ ಹೊಟ್ಟೆಗೆ ಊಟ ಮಾಡಿ ಮಲಗಿದ್ದ  ಮಗುವಿನ ಕೆನ್ನೆ ಚಿವುಟಿದ್ದು, ವಯಸ್ಸಾದ ಕಣ್ಣು ಕಾಣದ ಅಪ್ಪ/ಅಮ್ಮನ ಕಾಲಿಗೆ ಬಿದ್ದು ಆಶೀರ್ವಾದ ಬೇಡಿದ್ದು, ಎಲ್ಲವನ್ನೂ ಮತ್ತೆ ಪುನರಾವರ್ತಿಸುತ್ತಾ ನಮ್ಮ ಹೆಸರಿಡಿದು ಕರೆಯುತ್ತಾ, ನಾವು ಇನ್ನೈದು ವರ್ಷ ಅದೇ ರೋಮಾಂಚನ, ಭ್ರಾಂತಿಗಳಲ್ಲಿರುವಂತೆ ಮಾಡುವ ಮಾಂತ್ರಿಕರು ನಮ್ಮ ಮುಂದೆ ಮತ್ತೊಮ್ಮೆ ನಡು ಬಗ್ಗಿಸಿ ನಿಲ್ಲಲು ಬರುತ್ತಿದ್ದಾರೆ.

ನಮ್ಮನ್ನು ಹೇಗೆ ಪರವಶ ಮಾಡಿಕೊಳ್ಳಬೇಕೆಂಬುದು ಆ ಗುಮ್ಮನಗುಸುಕರಿಗೆ  ಚೆನ್ನಾಗಿ ಗೊತ್ತು. ಅವರ ನಿರೀಕ್ಷೆಗಳನ್ನು ನಾವು ಎಂದೂ ಹುಸಿ ಮಾಡಿಲ್ಲ. ಹಾಗಾಗಿಯೇ ಅವರಿಗೆ ನಮ್ಮ ಮೇಲೆ ಅಪಾರ ಭರವಸೆ. ನಮ್ಮಷ್ಟು ಭಾವುಕ, ನಿಯತ್ತಿನವರು ಸಿಕ್ಕಿದ್ದರಿಂದಲೇ ಪ್ರತಿ ಬಾರಿಯೂ ಅವರು ಗೆಲ್ಲುತ್ತಲೇ ಇದ್ದಾರೆ. ನಾವು ಸೋಲುತ್ತಲೇ ಇದ್ದೇವೆ. ಈ ಬಾರಿಯಾದರೂ ತಲೆ ತಲಾಂತರದಿಂದ ನಮ್ಮನ್ನು ಯಾಮಾರಿಸುತ್ತ ಬಂದವರ ವಿರುದ್ಧ ಗೆಲ್ಲಬೇಕೆಂಬ ಒಂದು ಯತ್ನ ಮಾಡಬಹುದಲ್ಲವೇ?  ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಜಾತಿ/ಧರ್ಮಗಳನ್ನು ಕ್ಕರಿಸಲು ಇದು ಸಕಾಲ. ಜಾತ್ಯತೀತ/ ಧರ್ಮಾತೀತ ಎಂಬ ಸೋಗುಗಳಲ್ಲಿ ಬರುವ ಇವರ್ಯಾರಿಗೂ ಬದ್ಧತೆ ಇಲ್ಲ. ಚುನಾವಣೆ ಮುಗಿದ ಮೇಲೆ ಅವರು ನಮ್ಮನ್ನೇ ದೂರುತ್ತಾರೆ. ಇದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಸೋಲುವವರು ಮಾತ್ರ ಎಂದಿನಂತೆ ನಾವೇ. ನಿಮ್ಮ ಕೆಲಸವನ್ನು ಪುಗಸಟ್ಟೆ ಮಾಡಿಕೊಡಲು ನನಗೇನೂ ಹುಚ್ಚು ನಾಯಿ ಕಚ್ಚಿಲ್ಲ. ಕೋಟಿ ಕೋಟಿ ಸುರಿದಿದ್ದೇನೆ, ಹಣ ಪಡೆಯದೆ ನೀವ್ಯಾರೂ ವೋಟು ಹಾಕಿಲ್ಲ ಎಂಬ ನಿರ್ಲಜ್ಜ  ಮಾತುಗಳೂ ಕಿವಿಗಪ್ಪಳಿಸುತ್ತವೆ.

ಅವರು ಹಂಚುವ ಹೆಂಡಕ್ಕೆ, ಹಣಕ್ಕೆ ಮಾರು ಹೋದವರು ಕನಿಷ್ಠ ಜನರಿರಬಹುದು. ಆದರೆ ಇದೆಲ್ಲವನ್ನೂ ನಮ್ಮ ಹೆಸರೇಳಿಕೊಂಡು ಹಂಚುವವರೂ, ತಲೆ ಹಿಡುಕರಂತೆ ಚುನಾವಣೆ ವೇಳೆ ಎದ್ದು ಕುಳಿತುಕೊಳ್ಳುವ ಏಜೆಂಟರೂ ನಮ್ಮನ್ನು ವಂಚಿಸಲು ಎರಗುತ್ತಾರೆ. ಎಲ್ಲ ನಡೆಯುವುದೂ ಸಮುದಾಯ ಹಿತದ ಹೆಸರಲ್ಲೇ!. ಸಮುದಾಯದ ಅಭಿವೃದ್ಧಿ ಎಂಬ ವಿಶಾಲ ಕಲ್ಪನೆಯನ್ನು ಜಾತಿ/ಧರ್ಮಕ್ಕೆ ಇಳಿಸಿ ಬಹಳ ಕಾಲವಾಯಿತು. ಸಮುದಾಯ ಎಂದರೆ ಜಾತಿ ಎಂಬ ಅರ್ಥವೂ ಈಗ ಹಳೆಯದು. ಈಗೇನಿದ್ದರೂ ಕುಟುಂಬ ಹಿತ. ಅದೇ ದೇಶದ ಹಿತವೂ ಹೌದು! ಈಗ ಯಾವ ಪಕ್ಷಕ್ಕೂ ಹೆಚ್ಚು ವ್ಯತ್ಯಾಸವಿಲ್ಲ. ಎಲ್ಲ ದಾರಿಗಳೂ ಹೆದ್ದಾರಿ ಸೇರುವಂತೆ ಕೊನೆಗೆ ಎಲ್ಲ ಪಕ್ಷಗಳೂ ಅಕಾರದ ರುಚಿ ಕಂಡ ಮೇಲೆ ಒಂದೇ ಎಂಬುದು ಸಾಬೀತಾಗಿದೆ.

ಈಗ ರಾಜಕೀಯವೆಂದರೆ ನಡೆದಿದ್ದೇ ದಾರಿ. ತತ್ತ್ವ ಸಿದ್ಧಾಂತ ಎಂದರೇನು? ಎಂದು ಕೇಳುವ ಬೇಕಾದಷ್ಟು ನಾಯಕರಿದ್ದಾರೆ. ಅಭಿವೃದ್ಧಿ ಎಂಬ ಪದವನ್ನು ವಾಕರಿಕೆ ಬರುವಷ್ಟು ಬಾರಿ ಉಪಯೋಗಿಸಿ ಸವಕಲಾಗಿಸಿರುವವರು ರಾಜಕಾರಣಿಗಳು. ನೈತಿಕತೆ, ಪ್ರಾಮಾಣಿಕತೆ, ತತ್ತ್ವ, ಸಿದ್ಧಾಂತ  ಅಂದರೆ ಯಾವ ಮ್ಯೂಸಿಯಮ್ಮಿನಲ್ಲಿರುವ ವಸ್ತುಗಳು ಎಂದು ಕೇಳಿದರೆ  ಆಶ್ಚರ್ಯವೇನೂ ಇಲ್ಲ. ಇಷ್ಟಾಗಿಯೂ ಇಂಥ ವಿಷಯಗಳ ಮೇಲೆ ಮಾತನಾಡಿದರೆ ವೋಟು ಸಿಗಬಹುದೆಂಬ ಕಾರಣಕ್ಕೆ ಈಗಲೂ ಮೇಲಿನ ಶಬ್ದಗಳನ್ನು ಪಠಿಸುವವರೂ ಇದ್ದಾರೆ. ಗೆದ್ದ ಮೇಲೆ ಇದ್ಯಾವುದಕ್ಕೂ ಅರ್ಥವೇ ಇಲ್ಲ.

ಬದ್ಧತೆ ಕೊರತೆ ಕಾರಣಕ್ಕೆ ೪ ವರ್ಷಕ್ಕೆ ಮೂವರು ಮುಖ್ಯಮಂತ್ರಿಗಳನ್ನು ಕಾಣುವಂತಾಯಿತು.  ಒಂದು ಕಾಲದಲ್ಲಿ ರಾಷ್ಟ್ರೀಯ ಪಕ್ಷಗಳ ಮುಖ್ಯಸ್ಥರು ತಮ್ಮಿಷ್ಟ  ಬಂದಾಗ ತಮಗೆ ಬೇಕಾದವರನ್ನು ಮುಖ್ಯಮಂತ್ರಿ ಮಾಡಿ ಅನಿಶ್ಚಿತತೆಗೆ ದೂಡಿರುವ ಉದಾಹರಣೆಗಳು, ರಾಜ್ಯವೂ ಸೇರಿ ಬೇಕಾದಷ್ಟು ಕಡೆ ಆಗಿವೆ. ಅನಿಶ್ಚಿತತೆಗೆ ಜನರನ್ನು ದೂರುವ ನೈತಿಕತೆ ಯಾರಿಗೂ ಇಲ್ಲ. ಈ ಬಾರಿ ನಿಮ್ಮ ಕದ ತಟ್ಟುವವರು ಅನಿಶ್ಚಿತತೆಗೆ ಅವಕಾಶ ಕೊಡಬೇಡಿ ಎಂದೂ ಹೇಳಬಹುದು. ಅನಿಶ್ಚಿತತೆ ಪ್ರಗತಿಗೆ ಮಾರಕವೇನೋ ಹೌದು. ಇದನ್ನು ತಪ್ಪಾಗಿ ಅರ್ಥೈಸಿಕೊಂಡು  ರ್ನಿಷ್ಟ ಪಕ್ಷಕ್ಕೆ ಸೇರಿದವನೆಂಬ ಕಾರಣಕ್ಕೆ ಅಯೋಗ್ಯರನ್ನು ಆಯ್ಕೆ ಮಾಡಬಾರದು. ಅನಿಶ್ಚಿತತೆಯ ಕಾರಣವೇ ಪಕ್ಷವೊಂದನ್ನು ಆರಿಸಲು ಮಾನದಂಡ ಖಂಡಿತ ಅಲ್ಲ. ಇಲ್ಲಿ ವಿವೇಚನೆ ಬಳಸಬೇಕು.

ಈಗಿನ ಚುನಾವಣೆ ಯಾವ ವಿಷಯಗಳ ಆಧಾರದ ಮೇಲೆ ನಡೆಯುತ್ತಿದೆ ಗೊತ್ತೇ? ಯಾವ ಪಕ್ಷಗಳಿಗೂ ಮುಖ್ಯ ಅಜೆಂಡಾವೇ ಇಲ್ಲ. ಅದಕ್ಕಾಗಿಯೇ ಅವರೆಲ್ಲಾ ಟಿವಿ, ಉಚಿತ ವಿದ್ಯುತ್, ಅಗ್ಗದ ಅಕ್ಕಿ ಮುಂತಾದ ಜನಪ್ರಿಯ ಯೋಜನೆಗಳ ಮಾರು ಹೋಗಿದ್ದಾರೆ. ತಮಿಳುನಾಡಿನಲ್ಲಿ ಕಳೆದ ಚುನಾವಣೆಯಲ್ಲಿ ಇದೇ ರೀತಿಯ ಅಗ್ಗದ ಪ್ರಚಾರಕ್ಕಿಳಿದು ಯಶಸ್ವಿಯಾದ ಕರುಣಾನಿ ನಮ್ಮವರನ್ನು ಪ್ರೇರೇಪಿಸಿರಬಹುದು. ಆದರೆ ತಮಿಳುನಾಡು ಈಗ ಎದುರಿಸುತ್ತಿರುವ ವಿದ್ಯುತ್ ಕೊರತೆ ಮತ್ತು ನೀಡಿರುವ ಕಳಪೆ ಟಿವಿಗಳ ಬಗ್ಗೆ ಮಾತ್ರ ಯಾರೂ ಮಾತಾಡುತ್ತಿಲ್ಲ. ಕೊನೆಗೆ ನಮ್ಮ ಹಳ್ಳಿಮಕ್ಕಳಿಗೆ ನೀಡಿರುವ ಸೈಕಲ್ಗಳ ಗುಣಮಟ್ಟವನ್ನಾದರೂ ನಾವು ಪರೀಕ್ಷಿಸಿದ್ದೇವೆಯೇ?

ಮುಖ್ಯ ಪಕ್ಷಗಳ ಈಗಿನ ಪ್ರಣಾಳಿಕೆಗಳು ಜನವಿರೋ ಎಂಬುದು ಮೇಲ್ನೋಟಕ್ಕೇ ಗೊತ್ತಾಗುತ್ತದೆ. ಸಂಪನ್ಮೂಲ ಕ್ರೋಡೀಕರಿಸಿ ಅದನ್ನು ಸಮಗ್ರ ಅಭಿವೃದ್ಧಿಗೆ ಬಳಸುವ ಬದಲು ಇಂಥ ಜನಪ್ರಿಯ ಯೋಜನೆ ಘೋಷಿಸಿ ಸಾರ್ವಜನಿಕ ಹಣವನ್ನು ವ್ಯರ್ಥ ಮಾಡಲು ಇವರು ಹೊರಟಿರುವಾಗ ಅವರನ್ನು ಬೆಂಬಲಿಸಿದರೆ ಆಮಿಷಗಳಿಗೆ ನಾವೂ ಬಲಿಯಾಗಿದ್ದೇವೆ ಎಂದೇ ಅರ್ಥ.

ವಿವಾದಗಳಿಲ್ಲದ ಹತ್ತಾರು ಅಭಿವೃದ್ಧಿ ವಿಷಯಗಳು ಇದ್ದರೂ ಅವನ್ನು ತಮ್ಮ ಪ್ರಣಾಳಿಕೆಯಲ್ಲಿ ಯಾವ ಪಕ್ಷಗಳು ಸೇರಿಸಿಲ್ಲ. ಕೃಷ್ಣಾ ಕೊಳ್ಳದ ಎ ಸ್ಕೀಂ ಯೋಜನೆಗಳೇ ಕುಂಟುತ್ತಾ ಸಾಗಿರುವಾಗ ಇತ್ತ, ಹತ್ತಾರು ಸಣ್ಣ ನೀರಾವರಿ ಯೋಜನೆಗಳು ದಶಕದಿಂದಲೂ ತಮ್ಮ  ಅಂದಾಜು ವೆಚ್ಚದ ಅನುಪಾತವನ್ನು ಕೆಲ ಭ್ರಷ್ಟ ಅಕಾರಿಗಳ ಶಾಮೀಲಿನೊಂದಿಗೆ ಉಬ್ಬಿಸಿಕೊಳ್ಳುತ್ತಿರುವಾಗ, ಸತತ ನಾಲ್ಕು ವರ್ಷದಿಂದ ರೈಲ್ವೆ ಬಜೆಟ್ನಲ್ಲಿ ಅನ್ಯಾಯವಾಗುತ್ತಾ ನೂರಾರು ಕಿಲೋಮೀಟರ್  ರೈಲು ಹಳಿಗಳ ಕಾಮಗಾರಿ ನನೆಗುದಿಗೆ ಬಿದ್ದು ಅಭಿವೃದ್ಧಿಯ ರೈಲು ಹಿಂದಕ್ಕೋಡುತ್ತಿರುವಾಗ ಇವರು ಸಂತೃಪ್ತ ಜನರಿಗೆ ಬೇಕಾದ ಟೀವಿ, ಅಸಾಧ್ಯ ಬೇಡಿಕೆಯಾದ ಉಚಿತ ವಿದ್ಯುತ್ ಮತ್ತು ಮುಗ್ಗಲು ಅಕ್ಕಿಯ ಆಮಿಷ ತೋರಿಸುತ್ತಿದ್ದಾರೆ.

ಜಾತ್ಯತೀತತೆ ಹೆಸರಲ್ಲಿ ವಂಚಿಸಿದವರು, ಧಾರ್ಮಿಕ ವಿಷಯವಾಗಿ ನಿಮ್ಮನ್ನು  ಕೆರಳಿಸಲು ನೋಡಿದವರು, ದುರ್ಬಲ ಮತ್ತು ಅಲ್ಪಸಂಖ್ಯಾತ ವರ್ಗಗಳ ಹೆಸರೇಳಿಕೊಂಡು ಅವರು ಇದ್ದಲ್ಲಿಯೇ ಇರುವಂತೆ ನೋಡಿಕೊಂಡಿರುವವರು ಈಗ ಆ ವಿಷಯ ಕುರಿತು ಮಾತನಾಡುತ್ತಲೇ ಇಲ್ಲ. ಇದು ಖಂಡಿತಾ ಅವರ ಅವಜ್ಞೆಯಲ್ಲ, ಬದಲಾಗಿ ನಮ್ಮನ್ನು ಮುಖ್ಯ ಸಮಸ್ಯೆಗಳಿಂದ ದೂರ ತಿರುಗಿಸಲು ಹೂಡಿರುವ ಆಟ. ಇದು ಹಣ, ತೋಳ್ಬಲಗಳ  ಚುನಾವಣೆ. ಮೊಟ್ಟಮೊದಲ ಬಾರಿಗೆ ಬಂಡವಾಳ ಹಾಕಿ ಬಂಡವಾಳ ತೆಗೆಯುವ ಉದ್ದಿಮೆಯಂತೆ ರಾಜಕೀಯವನ್ನು ಪರಿಗಣಿಸಿದವರು ನಮ್ಮ ನಾಯಕರಾಗಲು ಬರುತ್ತಿದ್ದಾರೆ. ಯಾವ ಪಕ್ಷ ಒಳ್ಳೇತನಕ್ಕೆ ಮಣೆ ಹಾಕಿದೆ? ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ಬಳಸಿರುವ ಮಾನದಂಡ ಯಾವುದು? ಅಪ್ಪಟ ಜಾತಿ ಮತ್ತು ಹಣದ ಲೆಕ್ಕಾಚಾರ.

ಇದು ವಿಷಯಗಳಿಲ್ಲದ, ಕೇವಲ ಆಮಿಷಗಳ ಚುನಾವಣೆ. ಅಷ್ಟರಮಟ್ಟಿಗೆ ನಮ್ಮನ್ನು ಅಳೆದು ತೂಗಿರುವ ರಾಜಕೀಯ ಪಕ್ಷಗಳು, ಹಣ ಕೊಟ್ಟುಬಿಟ್ಟರೆ ಏನನ್ನಾದರೂ ಮಾಡಬಹುದು, ನಮ್ಮನ್ನು ಕೊಂಡುಕೊಳ್ಳಬಹುದು ಎಂದು ಲೆಕ್ಕ ಹಾಕಿವೆ. ನಾವು ಯಾವತ್ತಾದರೂ ನಮ್ಮ ಮನೆ ಬಾಗಿಲಿಗೆ ಮತ ಯಾಚಿಸಿ ಬರುವವರ ಮುಂಗೈ ಹಿಡಿದು ಗೆದ್ದು ಬಂದರೆ ಯಾವ ಕೆಲಸ ಮಾಡುತ್ತೀಯ? ಅಥವಾ ಇಂಥ ಕೆಲಸ ಮಾಡಿಕೊಡುವ ಮಾತು ಕೊಡು ಎಂದು ಕೇಳಿದ್ದೇವಾ? ಈಗಂತೂ ಮಾತು ಕೊಟ್ಟು ತಪ್ಪಿಸಿಕೊಳ್ಳುವ ಸಂಪ್ರದಾಯವೇ ಇರುವುದರಿಂದ ಹಾಗೆ ಮಾತು ಕೇಳಿದರೆ ಕೊಡುವವರೂ ಹೆಚ್ಚಾಗಿರಬಹುದೇನೋ! ಹಾಗಾಗಿ ಇದು ಹಿಂದೆಂದೂ ಕಂಡರಿಯದ ಚುನಾವಣೆ ಆಗಲಿದೆ.
ಇವತ್ತು ಈ ಪಕ್ಷ ನಾಳೆ ಇನ್ನೊಂದು ಪಕ್ಷ, ಅಲ್ಲಿ ಟಿಕೆಟ್ ಸಿಗದಿದ್ದರೆ ಮಗದೊಂದು ಪಕ್ಷ. ತನಗೆ ಅನುಕೂಲವಾಗುವ ಕೊನೆ ಕ್ಷಣದವರೆಗೂ  ಎಲ್ಲರೂ ತಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರು! ಪರಿಸ್ಥಿತಿ ಕೈ ಮೀರುತ್ತಿದೆ ಎಂದ ಕೂಡಲೇ ಎಲ್ಲ ಅದಲು -ಬದಲು. ಇಂಥ ಕನಿಷ್ಠ  ನಿಯತ್ತಿಲ್ಲದವರಿಂದ ನಾವು ಯಾವ ನಿಯತ್ತನ್ನು  ನಿರೀಕ್ಷಿಸಬಹುದು? ಅದಕ್ಕಾಗಿಯಾದರೂ ನಾವು ಈ ಬಾರಿ ಹೆಚ್ಚು ಜಾಗರೂಕರಾಗಿ ನಮ್ಮ ಬಹು ಅಮೂಲ್ಯ ಹಕ್ಕನ್ನು ಚಲಾಯಿಸಿ, ಯೋಗ್ಯರನ್ನು  ಆರಿಸಿ ಬದಲಾವಣೆಗೆ ಕಾರಣರಾಗಬೇಕಿದೆ.

೩೦ ಏಪ್ರಿಲ್ ೨೦೦೮ರ ವಿಜಯಕರ್ನಾಟಕ ಸಂಚಿಕೆಯಲ್ಲಿ ಪ್ರಕಟವಾಗಿದೆ.

Friday 25 June 2010

ಜಾತಿಗೊಂದು ಮಠ ಮತ್ತು ಪ್ರಜಾಪ್ರಭುತ್ವ

ಕರ್ನಾಟಕದಲ್ಲೀಗ ಬಹು ಚರ್ಚಿತ ವಿಷಯ ಮಠಗಳ ಕುರಿತದ್ದು. ಒಂದು ಜಾತಿಯ ಹೊಸ ಮಠ, ಇನ್ನೊಂದು ಜಾತಿಯ ಶಾಖಾ ಮಠ, ಯಾವುದೋ ಮಠದ ವಿವಾದ, ಇನ್ನೊಂದು ಮಠದ ಉತ್ತರಾಕಾರಿ ವಿವಾದ, ಮತ್ತೊಂದು ಮಠದ ಹೊಸ ಸ್ವಾಮಿಯ ಪಟ್ಟಾಭಿಷೇಕ ಅಥವಾ ಬಂಡಾಯ ಮಠದ ಕುರಿತ ಚರ್ಚೆ ಇತ್ಯಾದಿ ಸುದ್ದಿಯಾಗುತ್ತಲೇ ಇವೆ.

ಹೊಸ ಮಠಗಳ ಸ್ಥಾಪನೆ ವಿಷಯದಲ್ಲಂತೂ ಕ್ರಾಂತಿಯೇ ಆಗುತ್ತಿರುವುದರಿಂದ ರಾಜ್ಯದ ಸಾಮಾಜಿಕ ಭೂಪಟ ಮತ್ತೆ ಬದಲಾಗುತ್ತಿದೆ. ೮೦ರ ದಶಕದಲ್ಲಿ ಮುಗಿಲು ಮುಟ್ಟಿದ್ದ ಹೊಸ ಮಠ ಕಟ್ಟುವ ಮಂತ್ರ ಹಿಂದುಳಿದವರಲ್ಲಿ ಕೆಲ ಪ್ರಬಲ ಜಾತಿಗಳು ಮಠ ಕಟ್ಟಿಕೊಳ್ಳುವಲ್ಲಿ ಪರ್ಯವಸಾನ ಕಂಡಿತ್ತು. ಈಗ ಹಿಂದುಳಿದ ವರ್ಗಗಳ ಸಣ್ಣಸಣ್ಣ ಜಾತಿಗಳು ಮತ್ತು ದೊಡ್ಡ ಜಾತಿಗಳ ಉಪಜಾತಿಗಳು ಮಠ ಕಟ್ಟಿಕೊಳ್ಳುವ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದೆ. ಬುಡಕಟ್ಟು ಜನಾಂಗವಾದ ಯಾದವರು (ಗೊಲ್ಲರು), ಹಿಂದುಳಿದ ವರ್ಗದಲ್ಲಿ ಪ್ರಬಲರಾದ ಈಡಿಗರು ಮತ್ತು ಲಿಂಗಾಯತ ಒಳಪಂಗಡಗಳಲ್ಲಿ ಪ್ರಬಲವಾಗಿರುವ ಪಂಚಮಸಾಲಿಗಳು ಇತ್ತೀಚೆಗೆ ತಮ್ಮ ಮಠ ಕಟ್ಟಿಕೊಂಡಿದ್ದಾರೆ.

ಹೊಸ ಗುರುಪೀಠದ ಸ್ಥಾಪನೆ ಹಾದಿಯಲ್ಲಿ ಕುಂಬಾರರು, ಲಂಬಾಣಿಗರು, ಹೆಳವರು ಮತ್ತು ಭೋವಿಗಳೂ ಇದ್ದಾರೆ. ಇವರಲ್ಲಿ ಕೆಲವರಿಗೆ ಈಗಾಗಲೇ ಸ್ವಾಮಿಗಳಿದ್ದು, ನಿರ್ದಿಷ್ಟ ಸ್ಥಳದಲ್ಲಿ ಗುರುಪೀಠಕ್ಕಾಗಿ ಚಿಂತನೆ ನಡೆಯುತ್ತಿದೆ. ಇನ್ನು ಈಡಿಗರು ಮತ್ತು ಪಂಚಮಸಾಲಿಗಳ ಗುರುಪೀಠ ಹಾಗೂ ಸ್ವಾಮೀಜಿಗಳ ನೇಮಕ ಸಂಬಂಧ ಆಯಾ ಸಮಾಜದಲ್ಲೇ ಆಗಿರುವ ಗೊಂದಲ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಯತ್ನಗಳು ನಡೆದಿವೆ. ಈ ಹಿಂದೆಯೇ ಓಂಕಾರಾಶ್ರಮದ ಶಿವಪುರಿ ಸ್ವಾಮೀಜಿ ಕಾಲದಲ್ಲಿ ಲಂಬಾಣಿಗರ ಒಂದು ಮಠ ಸ್ಥಾಪನೆಯಾಗಿತ್ತಾದರೂ ಇನ್ನೊಂದು ಪೀಠಕ್ಕಾಗಿ ತಯಾರಿ ನಡೆದಿದೆ. ಇದೇ ರೀತಿ ಅನೇಕ ಜಾತಿಗಳ ಇಬ್ಬಿಬ್ಬರು ಸ್ವಾಮೀಜಿಗಳು ಪಟ್ಟವೇರುತ್ತಿದ್ದು, ಗೊಂದಲಗಳು ಹೆಚ್ಚುತ್ತಿವೆ. ಕೆಲ ಜಾತಿ/ಪಂಗಡಗಳಲ್ಲಂತೂ ಇದೇ ವಿಚಾರಕ್ಕೆ ಒಡಕುಂಟಾಗುತ್ತಿದ್ದು, ಮಠ ಹುಟ್ಟು ಹಾಕಲು ಯತ್ನಿಸುತ್ತಿರುವವರ ಔಚಿತ್ಯಗಳನ್ನು ಪ್ರಶ್ನಿಸುತ್ತದೆ.

ಅನೇಕ ಜಾತಿಗಳಿಗೆ ದಿಢೀರ್ ಆಗಿ ಮಠಗಳನ್ನು ಕಟ್ಟಿಕೊಳ್ಳುವ ಅಗತ್ಯ ಏಕೆ ಬಂತು? ಈ ಬಗ್ಗೆ ಕೆದಕಿದರೆ ಗೊಂದಲಕಾರಿ ಉತ್ತರಗಳೇ ಸಿಗುತ್ತಿವೆ. ಕೆಲವರು ಮಠ ಜಾತಿ ಸಂಘಟನೆಗೆ ಎಂದರೆ, ಇನ್ನೂ ಕೆಲವರು ಸಂಸ್ಕಾರಕ್ಕೆ ಅಂತಾರೆ. ಮತ್ತೂ ಕೆಲವರು ಸಮಾಜದ (ಜಾತಿ)ಸಮಗ್ರ ಪ್ರಗತಿಗೆ ಅಂದರೆ, ಇನ್ನೊಂದು ಜಾತಿಯವರು ಜನರಲ್ಲಿ ಮರೆಯಾಗಿರುವ ಧಾರ್ಮಿಕ ಮತ್ತು ಅಧ್ಯಾತ್ಮಿಕ ಪ್ರಜ್ಞೆಗಳನ್ನು ಪುನರುಜ್ಜೀವನಗೊಳಿಸಲು ಎನ್ನುತ್ತಿದ್ದಾರೆ. ಈ ರೀತಿಯ ಉತ್ತರಗಳು ಕೇವಲ ಬೇರೆ ಬೇರೆ ಜಾತಿಗಳವರಿಗೆ ಸೀಮಿತವಾಗಿಲ್ಲ. ಬದಲಾಗಿ ಒಂದೇ ಜಾತಿಯ ಅನೇಕ ಮುಖಂಡರಲ್ಲಿ ಕೇಳಿಬರುತ್ತಿರುವುದು ಯಾರಲ್ಲೂ ಸ್ಪಷ್ಟತೆ ಇಲ್ಲದಿರುವ ಪರಿಸ್ಥಿತಿಯನ್ನು ಎತ್ತಿ ತೋರಿಸುತ್ತದೆ.

ಇದೆಲ್ಲಾ ಏನೇ ಇದ್ದರೂ ಜಾತಿ ಮಠಗಳ ಹಿಂದೆ ಹೊರಟಿರುವವರ ಕಣ್ಣು ಕುಕ್ಕುತ್ತಿರುವುದು ಹೆಮ್ಮರವಾಗಿರುವ ಕೆಲ ಪ್ರಬಲ ಜಾತಿಗಳ ಮಠಗಳೇ ಎಂದು ಹೇಳದೆ ಅನ್ಯಮಾರ್ಗವಿಲ್ಲ. ಇತ್ತೀಚಿನ ಕೆಲ ದಶಕಗಳಲ್ಲಂತೂ ಸಮಾಜದ ಎಲ್ಲ ಸ್ತರಗಳ ಮೇಲೆ ಮಠಗಳ ಪ್ರಭಾವ ಗಣನೀಯವಾಗಿದೆ. ಶೈಕ್ಷಣಿಕವಾಗಿ ಕೆಲ ಮಠಗಳ ಕಾರ್ಯ, ರಾಜಕೀಯ ಪ್ರಭಾವ, ಜನಾಂಗದ ಮೇಲಿನ ಹಿಡಿತ ಮುಂತಾದವು ಇತರರನ್ನು ಸ್ವಾಭಾವಿಕವಾಗಿಯೇ ಪ್ರೇರೇಪಿಸಿದ್ದರೆ ಆಶ್ಚರ್ಯವಿಲ್ಲ. ಆದರೆ ಕೆಲವು ಕಡೆ ಕೆಲ ಮಠಗಳ ಅಭಿವೃದ್ಧಿಯನ್ನು ಜನಾಂಗದ ಅಭಿವೃದ್ಧಿ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ ಅಥವಾ ಬೇರೆಯವರು ಅದನ್ನು ತಪ್ಪಾಗಿ ಗ್ರಹಿಸಿಕೊಳ್ಳುತ್ತಿರಬಹುದು ಅಥವಾ ಕೆಲವರು ಜಾತಿ ಹೆಸರಲ್ಲಿ ಎಂದಿನಂತೆ ಮುಗ್ಧರನ್ನು ದಾರಿ ತಪ್ಪಿಸುತ್ತಿರಬಹುದು ಅಷ್ಟೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಅಡಿಯಲ್ಲಿ ಸಿಗಲಾರದ ಯಾವ ಸೌಲಭ್ಯವನ್ನೂ ಮಠಗಳು ಯಾವ ಜಾತಿಯ ಬಡವನಿಗೂ ಖಂಡಿತ ಕೊಡಲಾರವು. ಹಾಗಾಗಿದ್ದರೆ ಪ್ರಬಲ ಜಾತಿ ಮಠಗಳ ಎಲ್ಲ ಜನ ಉದ್ಧಾರವಾಗಿರಬೇಕಿತ್ತು. ವ್ಯಕ್ತಿಯ ವೈಯಕ್ತಿಕ ಬದಲಾವಣೆಗೆ ಮಠಗಳ ಕಾಣಿಕೆ ಏನೆಂಬುದು ಚರ್ಚೆಯಾಗಬೇಕಷ್ಟೆ.

ಹಿಂದಿನ ಅನೇಕ ಮಠಗಳ ಉದ್ದೇಶ ಕೇವಲ ಧಾರ್ಮಿಕತೆ ಮಾತ್ರವಾಗಿತ್ತು. ಬಹುತೇಕ ಹಳೇ ಮಠಗಳು ಜಾತಿಗೆ ಸೀಮಿತವಾಗಿ ಹುಟ್ಟಿದವುಗಳಲ್ಲ. ಅವುಗಳಿಗೆ ಬೇರೆಯದೇ ಆದ ತಳಹದಿ ಇತ್ತು. ಇವತ್ತು ಆ ಮಠಗಳಲ್ಲಿ ಮೂಲಸ್ವರೂಪದಲ್ಲಿ ಉಳಿದಿಲ್ಲದಿದ್ದರೆ ಅದಕ್ಕೆ ಸಂಬಂಸಿದವರನ್ನೇ ದೂರಬೇಕು. ಮಠಗಳು ಶೈಕ್ಷಣಿಕ ಕ್ರಾಂತಿ ಮಾಡಿವೆ ಎಂಬುದು ಈಗ ಇತಿಹಾಸ. ಆದರೆ ವರ್ತಮಾನದಲ್ಲಿ ಬಹುತೇಕ ಮಠಗಳು ಬದಲಾಗಿವೆ. ಅವು ಜಾತಿ, ಸ್ಥಳೀಯ ರಾಜಕೀಯ ಮತ್ತು ಸ್ವಯಂ ಅಭಿವೃದ್ಧಿಗೆ ಸೀಮಿತವಾಗಿವೆ. ಇವು ಇತರ ಜಾತಿಗಳು ಮಠದ ಹೆಸರಲ್ಲಿ ಪ್ರತ್ಯೇಕಗೊಳ್ಳಲು ಕಾರಣವಾಗಿವೆ. ಈ ಹಿಂದೆ ಶೈಕ್ಷಣಿಕ ಕ್ರಾಂತಿ ಮಾಡಿದ್ದ ಬಹುತೇಕ ಮಠಗಳಿಗೆ ಕ್ಯಾಪಿಟೇಶನ್ ಲಾಬಿ ಎಂಬ ಕೆಸರು ಮೆತ್ತಿಕೊಂಡಿದೆ. ಭಾರತ ಪರಕೀಯರ ದಬ್ಬಾಳಿಕೆಯಲ್ಲಿ ನಲುಗುತ್ತಿದ್ದ ಕಾಲದಲ್ಲಿ ಧಾರ್ಮಿಕ, ಅಧ್ಯಾತ್ಮಿಕವಾಗಿ ಗುರುತಿಸಿಕೊಂಡಿದ್ದ ಮಠಗಳು, ಎಲ್ಲ ಜಾತಿಗಳಿಗೆ ಬೇರೆ ಬೇರೆ ಕಾರಣಗಳಿಗಾಗಿ ಸಮಾನ ವೇದಿಕೆಗಳಾಗಿದ್ದವು. ಇಂದಿಗೂ ಅಂಥ ಅನೇಕ ಮಠಗಳಿವೆ.

ಹಿಂದೆ ಜಾತಿ ಆಚರಣೆಯಲ್ಲಿತ್ತು. ಇವತ್ತು ಪ್ರಜ್ಞೆಯಲ್ಲೂ ಇದೆ. ಆಚರಣೆಯಲ್ಲಿ ಎಷ್ಟು ಸಮಾಜವಿರೋಯಾಗಿತ್ತೋ ಅಷ್ಟೇ ಸಮಾಜವಿರೋಯಾಗಿ ಇಂದು ಜನರ ಪ್ರಜ್ಞೆಯಲ್ಲಿ ಜಾತಿ ಬಲವಾಗುತ್ತಿದೆ. ಇಂಥ ಪ್ರಜ್ಞೆಯನ್ನೇ ಇಂದಿನ ಜಾತಿ ಮಠಗಳು ಇನ್ನೂ ಗಟ್ಟಿ ಮಾಡಬಹುದೆಂಬ ಭಯವನ್ನು ಎಲ್ಲ ಸಾಮಾಜಿಕ ಚಿಂತಕರು ವ್ಯಕ್ತಪಡಿಸುತ್ತಿದ್ದಾರೆ. ಸಂವಿಧಾನ ನೀಡಿರುವ, ಪ್ರಜಾಪ್ರಭುತ್ವದಂಥ ಪ್ರಬಲ ಅಸ್ತ್ರದ ಮುಂದೆ ಯಾಕೆ ಜಾತಿ ಮಠಗಳನ್ನು ಕಟ್ಟಿಕೊಳ್ಳಬೇಕು? ಇಲ್ಲಿ ಇನ್ನೊಂದು ಸೂಕ್ಷ್ಮವಿದೆ. ಜಾತಿ ಹೆಸರಲ್ಲಿ ಸಂಘಟಿತರಾಗುವುದು ಖಂಡಿತ ತಪ್ಪಲ್ಲ. ಏಕೆಂದರೆ ಅದು ಪ್ರಜಾಪ್ರಭುತ್ವದ ಆಶಯಗಳಿಗನುಗುಣವಾಗಿಯೇ ಹುಟ್ಟುತ್ತದೆ. ಆ ಸಂಘಟನೆಯ ಅಪತಿಯನ್ನು ಪ್ರಜಾಪ್ರಭುತ್ವದ ಕ್ರಮಗಳಿಂದಲೇ ಉರುಳಿಸಬಹುದು. ಆದರೆ ಮಠ? ಅಲ್ಲಿ ಯಾವ ಪ್ರಜಾಪ್ರಭುತ್ವವಿದೆ? ಜಾತಿಯ ಎಲ್ಲ ಜನ ಸೇರಿಯೇ ಮಠಾಶರನ್ನು ಆರಿಸುತ್ತೇವೆ ಎಂದು ಕೆಲವರು ಹೇಳಬಹುದು. ಅದು ನೆಪ ಮಾತ್ರ ಎಂಬ ಆರೋಪಗಳಿವೆ. ಭಿನ್ನಾಭಿಪ್ರಾಯ ಬಂದರೆ ಸಮಾಜವೇ ಒಡೆದು ಇನ್ನೊಂದು ಮಠವಾಗಬಹುದು ಅಷ್ಟೆ. ಹಾಗಾದರೆ ಇದರಿಂದ ಏನು ಸಾಸಿದಂತಾಯಿತು? ಇದಕ್ಕೆ ಉದಾಹರಣೆಯಾಗಿ ಒಂದೆರಡು ಜಾತಿಗಳಲ್ಲಿ ಗುಂಪುಗಳಾಗಿ ಪ್ರತ್ಯೇಕ ಪೀಠಸ್ಥಾಪನೆ ಮತ್ತು ಸ್ವಾಮಿಗಳ ನೇಮಕವಾಗುತ್ತಿದೆ.

ಮಠಗಳಲ್ಲಿ ಪ್ರಜಾಪ್ರಭುತ್ವ ಯಾವಾಗ ಇತ್ತು ಎಂಬ ಕಟುವಾದ ಪ್ರಶ್ನೆ ಕೇಳಲು ಇದು ಸಕಾಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವಿದೆ. ವಂಶ/ಕುಟುಂಬ ರಾಜಕಾರಣವಿದೆ ಎನ್ನುವವರು, ಯಾವ ಮಠ ಬೇರೆ ಜಾತಿಯ ಸ್ವಾಮಿಯನ್ನು ಉತ್ತರಾಕಾರಿ ಮಾಡಿದೆ ಎಂಬುದನ್ನು ಹೇಳಬೇಕು? ರಾಜಕೀಯ, ಜಾತಿ ಲೆಕ್ಕಾಚಾರದಲ್ಲಿ ನಡೆಯುತ್ತಿರಬಹುದು, ಪ್ರಜಾಪ್ರಭುತ್ವದಲ್ಲೂ ಜಾತಿ ಲೆಕ್ಕಾಚಾರ ಹಾಕಿ ಕೆಲವು ಬಾರಿ ನಿರ್ಧಾರಗಳು ಹೊರಹೊಮ್ಮಬಹುದು. ಇದರಿಂದ ಪ್ರಬಲರಿಗೆ ಕೆಲ ಸೌಲಭ್ಯಗಳು ದಕ್ಕಿರಬಹುದು. ಆದರೆ ಅಭಿವೃದ್ಧಿ ವಿಷಯವಾಗಿ ಮಠ ಬೇಕು ಎನ್ನುವವರಿಗೆ ಜಾತಿ ಆಧರಿತ ಮಠಗಳು ಖಂಡಿತ ಉತ್ತರವಲ್ಲ. ಹಾಗಾಗಿ ಈಗಿನ ಕಾಲದ ಮಠಗಳ ಜಾತ್ಯತೀತತೆಯನ್ನು ಪ್ರಶ್ನಿಸಲೇಬೇಕಾಗಿದೆ. ಆದರೆ ಅದಕ್ಕೆ ಧಾರ್ಮಿಕತೆ ಎಂಬ ಸಮರ್ಥನೆ ಇರುವುದರಿಂದ ಯಾರೂ ಪ್ರಶ್ನಿಸುವ ಧೈರ್ಯ ಮಾಡುತ್ತಿಲ್ಲ. ಯಾರು ಬೇಕಾದರು ಏನಾದರೂ ಆಗಿಬಿಡಬಲ್ಲ ಪ್ರಜಾಪ್ರಭುತ್ವವೆಲ್ಲಿ? ಊಳಿಗಮಾನ್ಯ ವ್ಯವಸ್ಥೆ ಇರುವ ಮಠಗಳ ಸ್ವಯಂ ಸಂವಿಧಾನ ಎಲ್ಲಿ? ಯಾರನ್ನು ಬೇಕಾದರೂ ತೆಗೆಯಬಲ್ಲ, ಆರಿಸಬಲ್ಲ ಮತ್ತು ಪ್ರಶ್ನಿಸಬಲ್ಲ ಸಂವಿಧಾನದತ್ತ ಪ್ರಜಾಸತ್ತೆ ಎಲ್ಲಿ? ಈಗ ಮಠ ಕಟ್ಟುವ ಪ್ರಕ್ರಿಯೆಯಲ್ಲಿ ಜನಾಂಗದ ಕೆಲವರಷ್ಟೇ ಇಲ್ಲ, ಅಲ್ಲೂ ರಾಜಕಾರಣಿಗಳು ತಲೆಹಾಕಿದ್ದಾರೆ. ಅವರ ಮರ್ಜಿಯಲ್ಲಿ ಅರಳುವ ಮಠ ಮುಂದೆ ಅವರಿಂದ ದುರುಪಯೋಗವಾಗುವುದಿಲ್ಲ ಎಂಬ ಭರವಸೆಯನ್ನು ಯಾರು ಕೊಡುತ್ತಾರೆ? ಈಗಾಗಲೇ ವೋಟ್ಬ್ಯಾಂಕ್ ಕಾರಣಕ್ಕೆ ಮಠಗಳನ್ನು ಓಲೈಸುವ ಅದೇ ಜಾತಿಯ ರಾಜಕಾರಣಿಗಳ ಗುಂಪು ಹುಟ್ಟಿಕೊಂಡು ಎಷ್ಟೋ ದಿನಗಳಾಗಿವೆ.

  ಜಾತಿ/ಧರ್ಮಗಳನ್ನು ರಾಜಕಾರಣಕ್ಕೆ ಬೆರೆಸಬಾರದೆಂಬ ತತ್ತ್ವಕ್ಕೆ ರಾಜಕಾರಣಿಗಳನ್ನು ಬದ್ಧರಾಗುವಂತೆ ಮಾಡುವವರು ಯಾರು? ಕಳೆದ ಬಾರಿ ಮೊಟ್ಟ ಮೊದಲಿಗೆ ಬಜೆಟ್ನಲ್ಲಿ ಮಠಗಳಿಗೆ ದುಡ್ಡು ಹಂಚಿದ ಯಡಿಯೂರಪ್ಪನವರ ನಿರ್ಧಾರವೇನಾದರೂ ಇಷ್ಟೊಂದು ಜನರಲ್ಲಿ ಅನೇಕ ಭ್ರಮೆ ಹುಟ್ಟಲು ಕಾರಣವಾಯಿತೆ? ಪ್ರಜಾಪ್ರಭುತ್ವ ವಿಧಾನದಿಂದ ಆರಿಸಿಬಂದ ನಾಯಕನೊಬ್ಬ ಪ್ರಜಾಪ್ರಭುತ್ವ/ಉತ್ತರದಾಯಿತ್ವ ಎಂದರೆ ಏನೆಂದು ಕೇಳುವ ಮಠಗಳಿಗೆ ದುಡ್ಡು ಹಂಚಿದ ವ್ಯಂಗ್ಯವೂ ನಡೆದುಹೋಯಿತು.

ನಮಗೆ ಈಗ ಬೇಕಿರುವುದು ಜಾತಿಮಠಗಳಲ್ಲ. ಜಾಗತೀಕರಣ ಎಲ್ಲ ಎಲ್ಲೆಗಳನ್ನು ಛಿದ್ರಗೊಳಿಸಿಕೊಂಡು ನಾಲ್ಕು ದಿಕ್ಕಿನಿಂದ ಬರುತ್ತಿರುವಾಗ ಜಾತಿಗೋಡೆಗಳನ್ನು ಕಟ್ಟುತ್ತಿರುವವರನ್ನು ಏನೆಂದು ಕರೆಯಬೇಕೆಂದು ಗೊತ್ತಾಗುತ್ತಿಲ್ಲ. ಆದರೆ ಇದು ಪ್ರಜಾಪ್ರಭುತ್ವದ ಗೋಡೆಗೆ ಕನ್ನ ಹಾಕುವ ಕೆಲಸ ಮತ್ತು ಸಮಾಜವನ್ನು ವಿಘಟನೆಗೆ ತಳ್ಳುವ ಕೆಲಸ. ಈ ವಿಘಟನೆ ದೇಶದ ಒಕ್ಕೂಟ ವ್ಯವಸ್ಥೆಗೂ ಮಾರಕ. ಇಷ್ಟಕ್ಕೂ ಪ್ರಜಾಪ್ರಭುತ್ವಕ್ಕೂ ಮಠಗಳಿಗೂ ಏನು ಸಂಬಂಧ ಎಂದು ಕೇಳಬಹುದು. ಆದರೆ ಪ್ರಜಾಪ್ರಭುತ್ವದ ಮೂಲಕ ಪಡೆಯಬಹುದಾದ ಕೆಲವು ಸೌಲಭ್ಯಗಳನ್ನು ಮಠದಿಂದ ಪಡೆಯಬಹುದೆಂದು ಕೆಲವರು ವಾದಿಸುತ್ತಿರುವುದರಿಂದಲೇ ಇದನ್ನು ಕೇಳಬೇಕಾಗಿದೆ. ಜಾತ್ಯತೀತರ ಜಗಲಿಯಂತಿದ್ದ ಕೆಲ ಮಠಗಳು ಈಗಿನ ಜಾತಿ ಮಠಗಳಿಂದ ತಮ್ಮ ಅಸ್ತಿತ್ವ ಕಳೆದುಕೊಳ್ಳಲಿವೆ. ಸಹಿಷ್ಣುತೆ ಎಂಬ ಬಹುದೊಡ್ಡ ಮೌಲ್ಯ ಕಳೆದುಹೋಗುತ್ತಿರುವ ಕಾಲದಲ್ಲಿ ನಾವಿದ್ದೇವೆ. ಶೋಷಿತ ಜಾತಿಗಳು ಪ್ರಜಾಪ್ರಭುತ್ವ ತತ್ತ್ವಗಳ ಮೇಲೆ ಸಿದ್ಧಾಂತ ಇಟ್ಟುಕೊಂಡು ಸಂಘಟಿತರಾಗಿ ಹೋರಾಟ ಮಾಡಬಹುದು. ಅದು ಅವುಗಳ ಹಕ್ಕೂ ಕೂಡ.

ಇನ್ನೆಷ್ಟು ದಿನ ಈ ಜಾತಿ ಮುಖವಾಡ ಹಾಕಿಕೊಂಡು ಗುರುತಿಸಿಕೊಳ್ಳಬೇಕು? ಈ ಪ್ರಕ್ರಿಯೆಗಳನ್ನು ನೋಡಿದರೆ ಎಲ್ಲ ಜಾತಿಗಳೂ ಒಂದಾಗಿ ನಿಂತ ೧೨ನೇ ಶತಮಾನದ ಅನುಭವ ಮಂಟಪವೆಂಬ ಅದ್ಭುತ ಘಟಿಸಿದ ೮೦೦ ವರ್ಷಗಳ ನಂತರ ಮತ್ತೆ ೧೦ನೇ ಶತಮಾನಕ್ಕೆ ಹೋಗುವುದು ಯಾವ ರೀತಿಯ ಪರಿವರ್ತನೆ? ಬಸವಣ್ಣನ ಹೆಸರು ಹೇಳಿಕೊಂಡು, ಅವರ ಒಂದೂ ತತ್ತ್ವಗಳನ್ನು ಪಾಲಿಸದ ಕೆಲವರು ಜಾತಿ ಹೆಸರಲ್ಲಿ ಎಲ್ಲರನ್ನೂ ಖೆಡ್ಡಾಕ್ಕೆ ಕೆಡವುತ್ತಿದ್ದಾರೆ. ಇಂಥವರು ಎಲ್ಲ ಜಾತಿಯಲ್ಲೂ ಇದ್ದಾರೆ. ಮಠಗಳನ್ನು ಸಂಪತ್ತನ್ನು ಬಚ್ಚಿಡುವ ಕೇಂದ್ರಗಳಂತೆ ಬಳಸಲಾಗುತ್ತಿದೆ ಎಂಬ ಆರೋಪ ಇತ್ತೀಚಿನ ದಿನಗಳಲ್ಲಿ ಬಲವಾಗಿದೆ. ಏಕೆಂದರೆ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ಮಾಡುವುದು ಆಯಾ ಜನರ ಧಾರ್ಮಿಕ ನಂಬಿಕೆಗಳಿಗೆ ಘಾಸಿ ಮಾಡಿದಂತೆ ಎಂಬ ತಿಳಿವಳಿಕೆಯನ್ನು ದುರುಪಯೋಗಪಡಿಸಿಕೊಳ್ಳುವವರಿದ್ದಾರೆ. ಇದು ಎಲ್ಲ ಧರ್ಮಗಳ, ಧಾರ್ಮಿಕ ಕೇಂದ್ರಗಳ ಮೇಲೂ ಇರುವ ಆರೋಪ. ಮಠ ಕಟ್ಟಿಕೊಳ್ಳುವುದು ಎಲ್ಲ ಪಾಪಗಳನ್ನು ಮರೆಮಾಚಲು ಇರುವ ಏಕೈಕ ಮಾರ್ಗದಂತೆ ಕೆಲವರಿಗೆ ತೋರುತ್ತಿದೆ. ಹಾಗಾಗಿ ಪ್ರಜಾಪ್ರಭುತ್ವ ವಿಫಲ ಅಂತ ಕೆಲವರು ವ್ಯವಸ್ಥಿತವಾಗಿ ಮುಗ್ಧರನ್ನು ನಂಬಿಸಲು ಹೊರಟಿದ್ದಾರಾ? ಹಾಗಾದರೆ ಇದು ಸಂವಿಧಾನ ವಿರೋಯಲ್ಲವೇ? ಮಠಗಳು ಅಂತರ್ಜಾತಿ/ಧರ್ಮಗಳು ವೇದಿಕೆಯಾಗಬೇಕಾದ ಕಾಲದಲ್ಲಿ ಇದೆಂಥಾ ಬೆಳವಣಿಗೆ?

ಜಾತಿ ಹೆಸರಲ್ಲಿ ವಿಘಟಿತರಾದರೆ ಒಟ್ಟು ಸಮಾಜ ದುರ್ಬಲವಾಗುವುದಿಲ್ಲವೇ? ಇದರ ಅರ್ಥ ಯಾವುದೋ ಪ್ರಾಂತ್ಯ/ಧರ್ಮದ ಹೆಸರಲ್ಲಿ ಒಳಗಿನ ಎಲ್ಲ ಶೋಷಣೆಗಳನ್ನು ಅದುಮಿಟ್ಟುಕೊಂಡು ಒಂದಾಗಬೇಕು ಅಂತಲೂ ಅಲ್ಲ. ಹಾಗೆಯೇ ಪ್ರಜಾಪ್ರಭುತ್ವದ ಅಡಿ ಸಿಗುವ ಸೌಲಭ್ಯಗಳನ್ನು ಬೇರೆ ರೀತಿಯಲ್ಲಿ ಪಡೆಯುತ್ತೇವೆ ಎಂಬುದು ದೀರ್ಘಕಾಲ ಸಾಧ್ಯವೂ ಇಲ್ಲ.

ಆರ್ಥಿಕ ಸ್ವಾವಲಂಬನೆ ಜಾಗತಿಕ ಮಟ್ಟದಲ್ಲಿ ಜಾತಿ/ಧರ್ಮಗಳ ನಡುವಿನ ಅಂತರ ತಗ್ಗಿಸುತ್ತಿರುವಾಗ ಸಮೂಹ ಸನ್ನಿ ಎಂಬಂತೆ ಮಠಗಳ ಮಂತ್ರ ಪಠಿಸುವವರನ್ನು ನೋಡಿದರೆ, ಕುವೆಂಪು ಹೇಳಿದ ‘ಗುಡಿ/ಚರ್ಚ್/ಮಸ್ಜೀದುಗಳ ಬಿಟ್ಟು ಹೊರಬನ್ನಿ’ ಎಂಬ ಮಾತು ಎಷ್ಟೊಂದು ಅರ್ಥಪೂರ್ಣವಾಗಿತ್ತಲ್ಲವೇ?

೪ ಮಾರ್ಚ್ ೨೦೦೮ರ ವಿಜಯಕರ್ನಾಟಕ ಸಂಚಿಕೆಯಲ್ಲಿ ಪ್ರಕಟವಾಗಿದೆ. 

Thursday 24 June 2010

ಜಾನಪದ ಜಂಗಮ: ಮುದೇನೂರು ಸಂಗಣ್ಣ


ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲೂಕಿನ ಚಿಗಟೇರಿ (ಈ ಮೊದಲು ಬಳ್ಳಾರಿ ಜಿಲ್ಲೆ)ಯ ಸಂಗಜ್ಜನ ಮನೆಗೆ ಹೋಗುವುದೆಂದರೆ ಬಾಲ್ಯದಲ್ಲಿ ಅಜ್ಜನ ಮನೆಗೆ ಹೋಗುವಾಗ ಆಗುತ್ತಿದ್ದ ರೋಮಾಂಚನ.


ಅಜ್ಜನ ಜತೆಗಿನ ಮಾತಿಗೆ ವಿಷಯಗಳ ಎಲ್ಲೆಯಿಲ್ಲ. ಮೊಮ್ಮಕ್ಕಳಂಥವರ ಜತೆಗೂ ೮೨ರ ಹರೆಯದ ಸಂಗಜ್ಜ, ಉತ್ಪ್ರೇಕ್ಷೆ, ಉಪೇಕ್ಷೆಗಳಿಗೆ ಅವಕಾಶವಿಲ್ಲದಂತೆ ಹೇಳುವುದು, ಕೇಳುವುದು ಗಂಟೆಗಟ್ಟಲೇ ನಡೆಯುತ್ತಲೇ ಇರುತ್ತಿದ್ದ ಕಾಲಕ್ಷೇಪದಂತೆ.


ಜಾನಪದ ಕುರಿತು ಅಜ್ಜನಿಗಿದ್ದಿದ್ದು ಕೇವಲ ಆಸೆಯಲ್ಲ, ಭವಿಷ್ಯದ ಕನ್ನಡ ಪೀಳಿಗೆಗಾಗಿ ಕಂಡ ಕನಸು ಎನ್ನಬಹುದು. ಹಾಗಾಗಿ ಕಣ್ಮರೆಯಾಗುತ್ತಿದ್ದ  ಅಪರೂಪದ ಜಾನಪದ ಕಲೆಗಳು ಯಾವತ್ತೂ ಅಳಿಸಲಾಗದ ದಾಖಲೆಯಾಗಿಸಿದ್ದಾರೆ. ಅದಕ್ಕಾಗಿ ಊರೂರು ಸುತ್ತಿದ ಅವರು, ಅನೇಕ ಕಲಾವಿದರನ್ನು ಮನೆಗೆ ಕರೆಸಿಕೊಂಡು ಅವರ ಎಲ್ಲ ಕಲೆಗಳನ್ನು ಬಹು ಶ್ರದ್ಧೆಯಿಂದ ದಾಖಲಿಸಿದ್ದಾರೆ. ತೊಗಲುಬೊಂಬೆ ಕಲೆಯನ್ನು ಉಳಿಸುವ ಸಲುವಾಗಿ ಕಲಾವಿದರಿಗೆ ಶಿಸ್ತು ಬದ್ದ ತರಭೇತಿಗೆ ವೇದಿಕೆ ಕಲ್ಪಿಸುವುದಕ್ಕಾಗಿ ಪಟ್ಟಿರುವ ಶ್ರಮ ಲೆಕ್ಕಕ್ಕೆ ಸಿಗುವುದಿಲ್ಲ. ಇವರ ಪರಿಶ್ರಮದ ಫಲವಾಗಿ ಅನೇಕ ಜಾನಪದ ತಂಡಗಳು ವಿದೇಶದಲ್ಲೂ ಪ್ರದರ್ಶನದ ಸೌಭಾಗ್ಯ ಕಂಡವು.  ಜಾನಪದದ ಬಹುದೊಡ್ಡ ಅಕಾಡೆಮಿಕೇತರ ವಿದ್ವಾಂಸ ಮುದೇನೂರು ಸಂಗಣ್ಣ. ಬಹುತೇಕ ಜಾನಪದ ಕಲೆಗಳಿಗಾಗಿ ಬಹಳ ಕೆಲಸ ಮಾಡಿದ ದಿವಂಗತ ಎಚ್.ಎಲ್. ನಾಗೇಗೌಡ, ಶಿವರಾಮ ಕಾರಂತ ಮತ್ತು ಜೋಳದರಾಶಿ ದೊಡ್ಡನಗೌಡರಂಥವರ ಪರಂಪರೆಯ ಕೊಂಡಿ ಅವರು. ಪ್ರತಿಷ್ಟಿತರು ತಮ್ಮ ಮನೆಗೆ ಬಂದಾಗ ಅವರಿಗಾಗಿ ಗೊಂದಲಿಗರ ಆಟ, ಬೀದಿ ನಾಟಕ, ತೊಗಲುಬೊಂಬೆ, ಕರಡಿ ಕುಣಿಸುವ ಆಟ, ಪ್ರದರ್ಶನ ಏರ್ಪಡಿಸಿ ಅದರ ಮಹತ್ವವನ್ನು ಮನದಟ್ಟು ಮಾಡಿಕೊಡುತ್ತಿದ್ದರು.


ಶಿವರಾಮ ಕಾರಂತ, ಕೆ.ವಿ. ಸುಬ್ಬಣ್ಣ, ಎ.ಕೆ. ರಾಮಾನುಜನ್ ಮುಂತಾದವರ ಅತಿರಥ ಮಹಾರಥರ ದಂಡೇ ಅಜ್ಜನ ಮನೆಯಲ್ಲಿ ದಿನಗಳಗಟ್ಟಲೆ ತಂಗುತ್ತಿದ್ದರು. ಅವರ ಮನೆಯೇ ಜಾನಪದ ಪರಿಕರಗಳ ಸಂಗ್ರಹಾಲಯದಂತೆ ಕಾಣುತ್ತದೆ. ಅವರು ಸಂಗ್ರಹಿಸಿದ ಜಾನಪದ ಕಥೆಗಳನ್ನು ಆಧಾರವಾಗಿಟ್ಟುಕೊಂಡು ನಾಟಕಗಳನ್ನು ಬರೆದು ಲೋಕವಿಖ್ಯಾತರಾದವರು, ಒಂದು ಕಡೆಯೂ ಸೌಜನ್ಯಕ್ಕೂ ಅವರ ಹೆಸರು ಎತ್ತದಿದ್ದಾಗಲೂ ಅಜ್ಜನದು ಅದೇ ನಿರ್ಲಿಪ್ತತೆ. ಜಾನಪದ , ಜನರದು ಅದರ ಬಗ್ಗೆ ಯಾರು, ಏನು ಬೇಕಾದರೂ ಬರೆದುಕೊಳ್ಳಲಿ ಎಂಬ ನಿರ್ವಿಕಾರತೆ. ಇಂಥವರು ತಾನು ಮಾಡಿದ ಕೆಲಸದಿಂದ ಇಂಥದ್ದನ್ನು ತೆಗೆದುಕೊಂಡಿದ್ದಾರೆಂದು ಎಂದೂ ಹೇಳದ ಸೌಜನ್ಯ ಮೂರ್ತಿ. 


ಜಾನಪದದ ಅಕಡೆಮಿಕ್ ಕೆಲಸಗಳನ್ನು ದೊಡ್ಡ ಮಟ್ಟದಲ್ಲಿ ಮಾಡಿರುವ ದೈತ್ಯರ ನಡುವೆ ಅಕಡೆಮಿಕ್ ಜನರಿಗಿಂಥ ಭಿನ್ನವಾಗಿ ಜಾನಪದದ ಮೂಲಭೂತ ಕೆಲಸ ಮಾಡಿದವರು ಸಂಗಣ್ಣಜ್ಜ. ಸಾವಿರಾರು ಜಾನಪದ ಮತ್ತು  ಶಾಸ್ತ್ರೀಯ ಸಂಗೀತದ ಧ್ವನಿ ಮುದ್ರಣಗಳು, ಕೋಲಾಟದ ಪದಗಳು, ಸೋಬಾನೆ ಪದಗಳು, ಬೀದಿ ನಾಟಕ, ಕರಡಿಯಾಟ, ತೊಗಲುಬೊಂಬೆಯಾಟ ಮುಂತಾದ ಸಾವಿರಾರು ಪುಟಗಳಾಗುವಷ್ಟು ದಾಖಲೆ ಅಜ್ಜನ ಬಳಿ ಇದೆ. ಅವರ ಇಂಥ ಅನೇಕ ಪ್ರಯತ್ನಗಳ ಫಲವಾಗಿ ಗೊಂದಲಿಗ ದೇವೇಂದ್ರಪ್ಪನ ಕಲೆ ಸಮಗ್ರವಾಗಿ ಸುಮಾರು ೭೦೦ ಪುಟಗಳಲ್ಲಿ ದಾಖಲಾಗಿದೆ. ಗೊಂಬೀಗೌಡರ ಸುಮಾರು ನಾಟಕಗಳು ಸಂಗ್ರಹಗೊಂಡು ಲಿಖಿತ ರೂಪದಲ್ಲಿ ಪ್ರಕಟಗೊಂಡಿವೆ. ಇನ್ನೂ ಲಿಪೀಕರಣವಾಗಬೇಕಿರುವುದು ಸಾಕಷ್ಟಿದೆ. ಈ ಜಾನಪದ ಭಂಡಾರ ಸರಿಯಾದ ರೀತಿಯಲ್ಲಿ ಜಂಗಮವಾಗಬೇಕು ಎಂಬುದು ಅವರ ಆಶಯ. ಆದರೆ ಅವರ ಈ ಬೃಹತ್ ಕೆಲಸವನ್ನು ಅಕಾಡೆಮಿಗಳಿಗೂ, ವಿಶ್ವವಿದ್ಯಾಲಯಗಳಿಗೋ ಕೊಡುವ ಮನಸ್ಸು ಅಜ್ಜನಗಿದ್ದಂತೆ ಕಾಣುವುದಿಲ್ಲ. ಸರಕಾರಿ ಜನ ಅದನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸಿ, ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸುತ್ತಾರೆನ್ನುವ  ಭರವಸೆ ಅಜ್ಜನಿಗೆ ಇನ್ನೂ ಬಂದಂತಿಲ್ಲ. ಜನಪದ ರಂಗಭೂಮಿಗೆ ಬೃಹತ್ ವೇದಿಕೆಯನ್ನು ಸೃಷ್ಟಿಸುವುದು ಅವರ ಮಹದಾಶೆಗಳಲ್ಲಿ ಒಂದು. ಈ ನಿಟ್ಟಿನಲ್ಲಿ ಅಜ್ಜನನ್ನು ಸಾಂಸ್ಕೃತಿಕ ಪರಿಚಾರಿಕ ಎನ್ನಬಹುದು. ಅಜ್ಜನ ಉಪಚಾರ, ಪ್ರೋತ್ಸಾಹದ ಸ್ಪರ್ಶ ಅನುಭವಿಸದ ಸಾಂಸ್ಕೃತಿಕ ಜಗತ್ತಿನ ಜನ ಬಹಳ ಕಡಿಮೆ. ಯಾವುದೇ ವ್ಯಕ್ತಿಯ ನೆಗೆಟಿವ್ ಅಂಶಗಳನ್ನು ಎಂದೂ ಎತ್ತಿ ಆಡದ, ಮಾನವೀಯ ಮೌಲ್ಯಗಳ ವ್ಯಕ್ತಿ ಎಂಬ ಅಭಿಪ್ರಾಯ ಅವರ ೫೦ ವರ್ಷಗಳ ಒಡನಾಡಿ ಗುರುಮೂರ್ತಿ ಪೆಂಡಕೂರರದು.


ಅವರು ಬರೆದಿದ್ದು ಕಡಿಮೆಯದರೂ ಬರೆಯಲು ಪ್ರೋತ್ಸಾಹಿಸಿ, ಬರೆಯುವವರನ್ನು ಗುರುತಿಸಿದ್ದೇ ಹೆಚ್ಚು. ಇಷ್ಟೆಲ್ಲದರ ನಡುವೆ ಅವರ ಪ್ರಸಿದ್ದ ನಾಟಕಗಳಾದ ಲಕ್ಷಾಪತಿರಾಜನ ಕಥೆ, ಸೂಳೆ ಸಂಕವ್ವೆ, ಕಾವ್ಯ ಆ ಅಜ್ಜ ಈ ಮೊಮ್ಮಗ ನಮ್ಮೆದುರಿಗಿವೆ. ಮರಾಠಿಯಿಂದ ಕನ್ನಡಕ್ಕೆ ತಂದ ಘಾಸೀರಾಮ ಕೊತ್ವಾಲ, ಬೆಂಗಾಲಿಯಿಂದ ಅನೇಕ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಆ ಭಾಷೆಗಳ ಪ್ರಸಿದ್ಧ ಕೃತಿಗಳನ್ನು ಕನ್ನಡಕ್ಕೆ ತರಲು ಬಂಗಾಲಿಯನ್ನು ಕಲಿತಿದ್ದು ಇನ್ನೂ ವಿಶೇಷ. ಈ ವಯಸ್ಸಿನಲ್ಲೂ ಅವರು ಸುಮ್ಮನೆ ಕುಳಿತಿಲ್ಲ. ಬುದ್ಧನ ಕುರಿತು ನಾಟಕ ಬರೆದಿದ್ದು, ಅದಕ್ಕೆ ಅಂತಿಮ ರೂಪು ನೀಡುತ್ತಿದ್ದಾರೆ. ಇಷ್ಟೆಲ್ಲದರ ನಡುವೆ ಅವರನ್ನು ಸರಿಯಾಗಿ ಗುರುತಿಸಿ, ಬಳಸಿಕೊಳ್ಳಲಿಲ್ಲ ಎನ್ನುವ ಅವರ ಅಭಿಮಾನಿಗಳ ದೊಡ್ಡ ಬಳಗವೇ ಇದೆ.

ಸಂಗಣ್ಣಜ್ಜನ ಸಂಗದಲ್ಲಿ:  ನಾನು, ಆನಂದ ಋಗ್ವೇದಿ, ತುರ್ವೀಹಾಳ ಚಂದ್ರು, ಪೀರ್‌ಭಾಷಾ.

Wednesday 23 June 2010

ಊರಿಗೆಲ್ಲಾ ‘ರಾಜು’ ಮೇಷ್ಟ್ರು


‘ವಿಜಯ ಕರ್ನಾಟಕ’ದ  ‘ವಿಜಯೀ ಕರ್ನಾಟಕ ನಮ್ಮ ಕನಸು’ ಅಭಿಯಾನಕ್ಕೆ ರಾಜು ಮೇಷ್ಟ್ರ ಕನ್ನಡದ ಕನಸುಗಳ ಕುರಿತು ಬರೆಯಬೇಕೆಂಬ ಸಂಭ್ರದಲ್ಲಿರುವಾಗ ಅವರ ಸಾವಿನ ವಾರ್ತೆ ಗರ ಬಡಿದಂತೆ ಎರಗಿದೆ. ಕನ್ನಡದ ಬಗೆಗಿನ ಅವರ ಕನಸುಗಳ ಬಗ್ಗೆ ಚಿತ್ತಾರ ಬರೆಯಬೇಕಾದ ಜಾಗದಲ್ಲಿ ಚರಮಗೀತೆ ಬರೆಯುವಂತಾಗಿರುವುದು ಪರಿಸ್ಥಿತಿಯ ವ್ಯಂಗ್ಯವೇ ಸರಿ.


ನಮ್ಮಂತಹ ಎಳೆಯರೆಲ್ಲಾ ಏನೇನೋ ಗೀಚಿಕೊಂಡು ಅದೇ ಮಹಾನ್ ಬರವಣಿಗೆಯೆಂದು ಭ್ರಮಿಸಿದ್ದ ಕಾಲದಲ್ಲಿ ಕಾವ್ಯ/ಲೇಖನಗಳ ಕುರಿತು ಒಂದು ಆತ್ಮವಿಶ್ವಾಸ ಕಟ್ಟಿಕೊಡಲು ವೇದಿಕೆಯಾದದ್ದು ರಾಜು ಮೇಷ್ಟ್ರು ಕಟ್ಟಿದ ಕ್ರೈಸ್ಟ್ ಕಾಲೇಜಿನ  ‘ಕನ್ನಡ ಸಂಘ’. ರಾಜ್ಯದ ಮೂಲೆಮೂಲೆಗಳಿಂದ ಹೊಸ ತಲೆಮಾರಿನ ಲೇಖಕರು ಮುಖ್ಯವಾಹಿನಿಗೆ ಬರಲು ಕನ್ನಡ ಸಂಘ ಪ್ರತಿ ವರ್ಷ ನಡೆಸುತ್ತಿದ್ದ ಬೇಂದ್ರೆ ಕಾವ್ಯ ಸ್ಪರ್ಧೆ ಮತ್ತು ಅ.ನ.ಕೃ ಲೇಖನ ಸ್ಪರ್ಧೆಗಳು ಕಾರಣ. ಇತ್ತೀಚಿನ ಮೂರು ತಲೆಮಾರುಗಳ ಲೇಖರನ್ನು ಕನ್ನಡ ಸಾಹಿತ್ಯಕ್ಕೆ ರೂಪಿಸಿಕೊಟ್ಟ ಅವರ ಕೊಡುಗೆ ಲೆಕ್ಕಕ್ಕೆ ಸಿಗುವುದಿಲ್ಲ. ಈ ತಲೆಮಾರುಗಳ ಬಹುತೇಕ ಲೇಖಕರು ತಮ್ಮ ಮೊದಲ ಲೇಖನ ಮತ್ತು ಕಾವ್ಯದ ಸಂಭ್ರಮಗಳನ್ನು ಅನುಭವಿಸಿದ್ದು ಕೈಸ್ಟ್ ಕಾಲೇಜಿನ ‘ಕನ್ನಡ ಸಂಘ’ದ ಅಂಗಳದಲ್ಲಿ. ಅವರೆಲ್ಲರಿಗೂ ರಾಜು ದ್ರೋಣಾಚಾರ್ಯರಂತಿದ್ದರು.


ಸಜ್ಜನಿಕೆಗೆ  ಅತ್ಯುತ್ತಮ ಮಾದರಿಯಂತಿದ್ದ  ಮೇಷ್ಟ್ರು, ಟಿ.ಎಸ್. ವೆಂಕಣ್ಣಯ್ಯ, ಎ.ಆರ್. ಕೃಷ್ಣಶಾಸ್ತ್ರಿ, ಕುವೆಂಪು, ರಾಜರತ್ನಂ, ತೀನಂ.ಶ್ರೀ, ಡಿ.ಎಲ್.ಎನ್, ಶಿವರುದ್ರಪ್ಪ, ಅನಂತಮೂರ್ತಿಯಂತಹವರ ಗುರು ಪರಂಪರೆಯ ಮುಖ್ಯ ಕೊಂಡಿಗಳಲ್ಲಿ ಒಬ್ಬರಾಗಿದ್ದರು. ಕೃತಕತೆ, ಕೃತ್ರಿಮತೆಗಳೇ ಗೊತ್ತಿಲ್ಲದ ಸರಳ ಸಜ್ಜನ ಮೇಷ್ಟ್ರು ಜತೆ ಮಾತಾಡುವುದು, ಓಡಾಡುವುದೇ ಒಂದು ಬೆಚ್ಚಗಿನ ಅನುಭವ. ಎಲ್ಲ ವಯೋಮಾನದವರೊಂದಿಗೂ ಮುಕ್ತವಾಗಿ ಬೆರೆಯುತ್ತಿದ್ದ ಅವರು, ಯಾವುದನ್ನೇ ಆಗಲಿ ತುಂಬಾ ಗಂಭಿರವಾಗಿ ಕೇಳಿಸಿಕೊಳ್ಳುತ್ತಿದ್ದರು. ಕನ್ನಡ ಮತ್ತು ಕನ್ನಡ ಸಾಹಿತ್ಯದ ಮುಂದಿನ  ‘ವಕ್ತಾರರು ನೀವೇ’ ಎಂದು ಹೊಸಬರನ್ನು ಹುರಿದುಂಬಿಸುತ್ತಿದ್ದರು. ಲೇಖಕನ ಸಾಮಾಜಿಕ ಹೊಣೆಗಾರಿಕೆ ಕುರಿತು ಹೆಚ್ಚು ಗಂಭೀರವಾಗಿ ಮಾತನಾಡಿದ್ದಿದೆ.


ತಮ್ಮ ಮನೆಗೆ ಬರುವ ಅತಿಥಿಗಳನ್ನು ತಾವೇ ಮುಂದೆ ನಿಂತು ಸತ್ಕರಿಸುತ್ತಿದ್ದ ಮೇಷ್ಟ್ರಿಗೆ ಹಮ್ಮು ಬಿಮ್ಮೇ ಗೊತ್ತಿರಲಿಲ್ಲ. ಪ್ರತಿ ಕ್ಷಣವನ್ನೂ ತುಂಬಾ ಪ್ರಾಮಾಣಿಕವಾಗಿ ಅನುಭವಿಸುತ್ತಿದ್ದ ಅವರದು ಹಾಲು ಕುಡಿದ ಮಗುವಿನಂಥ ಸದಾ ಹಸನ್ಮುಖದ ನಿರ್ಲಿಪ್ತತೆ. ಅವರ ಜತೆ ಎಷ್ಟು ಹೊತ್ತು ಮಾತಾಡಿದರೂ ಒಮ್ಮೆಯೂ ತಮ್ಮ ಬಗ್ಗೆ ಒಂದೂ ಮಾತನ್ನು ಅಡದಿರುವಷ್ಟು ಸಂಕೋಚ ಸ್ವಭಾವದವರು. ಕನ್ನಡಿಗರಿಂದ, ಕನ್ನಡಕ್ಕಾಗಿ ಸ್ಥಾಪಿಸಲಾದ ಅನೇಕ ವಿದ್ಯಾಸಂಸ್ಥೆಗಳಲ್ಲಿ ಕನ್ನಡವೇ ಕಾಣೆಯಾಗುತ್ತಿದ್ದ ಕಾಲದಲ್ಲಿ ಓಯಸಿಸ್ನಂತೆ ‘ಕನ್ನಡ ಸಂಘ’ ಹುಟ್ಟಿಕೊಂಡಿತು. ಅದು ರಾಜು ಮೇಷ್ಟ್ರು ಮತ್ತು ಕ್ರೈಸ್ಟ್ ಕಾಲೇಜಿನಂಥ ಸಂಸ್ಥೆ ಪರಸ್ಪರರ ಬಗ್ಗೆ ಇಟ್ಟುಕೊಂಡ ನಂಬಿಕೆಯಿಂದ ಸಾಧ್ಯವಾದದ್ದು. ಹುಲ್ಲುಕಡ್ಡಿಯ ಪವಾಡದಂತೆ ಕೆಲಸ ಮಾಡಿದ ಸಂಘ ರಾಜ್ಯಕ್ಕೇ ಮಾದರಿಯಾಯಿತು.


ಅವರ ಒಟ್ಟು ಮೂವತ್ತು ವರ್ಷಗಳ ಸೇವಾವಯ ಕಾಲದಲ್ಲಿ ಒಟ್ಟು ೧೬೫ ಕೃತಿಗಳು ಸಂಘದಿಂದ ಬೆಳಕು ಕಂಡಿವೆ. ಕ.ವೆಂ. ರಾಜಗೋಪಾಲ ಅವರ ‘ನದಿಯ ಮೇಲಿನ ಗಾಳಿ’ ಕವನ ಸಂಕಲನ ಮೊದಲ ಕೃತಿ. ಸಂಘದಿಂದ ಪ್ರಕಟಿಸಿದ ರಾಮಚಂದ್ರ ಶರ್ಮರ ‘ಸಪ್ತಪದಿ’, ಸು.ರಂ. ಎಕ್ಕುಂಡಿಯವರ ‘ಬಕುಳದ ಹೂಗಳು’ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿವೆ. ಸುಮಾರು ೫೦ ಕೃತಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಸಂದಿರುವುದು ಕನ್ನಡ ಸಂಘದಿಂದ ಹೊರಬಂದಿರುವ ಕೃತಿಗಳ ಮೌಲ್ಯಕ್ಕೆ ಸಾಕ್ಷಿ. ಇದೇ ಸೂರ್ತಿಯಲ್ಲಿ ಅನೇಕ ಕಾಲೇಜುಗಳಲ್ಲಿ ಕನ್ನಡ ಸಂಘಗಳು ಹುಟ್ಟಿಕೊಂಡವು. ಅವುಗಳಲ್ಲಿ ಬಹುತೇಕ  ಸಂಘಗಳು ಇಂದಿಗೂ ತಣ್ಣಗೆ ಕನ್ನಡದ ಕೆಲಸ ಮಾಡುತ್ತಿರುವುದಕ್ಕೆ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘ ಮತ್ತು ಮೇಷ್ಟ್ರು ಹಾಕಿಕೊಟ್ಟ ಮೇಲ್ಪಂಕ್ತಿ ಕಾರಣ.


ಕಾಲೇಜಿನಲ್ಲಿ ತಮ್ಮ ಜವಾಬ್ದಾರಿಯಲ್ಲೇ ಮುಂದುವರಿಯುವಂತೆ ಸಂಸ್ಥೆ ಕೇಳಿಕೊಂಡರೂ, ಮುಂದಿನ ಕನ್ನಡ ಸಂಘದ ಜವಾಬ್ದಾರಿ ಹೊರುವವರ ಮೇಲೆ ತಮ್ಮ ಯಾವ ನಿರ್ಧಾರಗಳನ್ನೂ ಹೇರದೆ ಅಲ್ಲಿಂದ ನಿರ್ಗಮಿಸಿದ್ದು ಅವರು ನಂಬಿದ ಮೌಲ್ಯಗಳಿಗೆ ಉದಾಹರಣೆಯಂತಿತ್ತು. ಈ ಸಂಬಂಧ ಅವರ ಸಂದರ್ಶನವನ್ನಾರಿಸಿದ ದೀರ್ಘ ಲೇಖನವನ್ನು ವಿಜಯ ಕರ್ನಾಟಕ ಆಗ ಪ್ರಕಟಿಸಿತ್ತು.  ಕೇವಲ ೫೦೦ ರೂಪಾಯಿಗಳಿಂದ  ಕ್ರೈಸ್ಟ್ ಕಾಲೆಜಿನ ಕನ್ನಡ ಸಂಘ ಆರಂಭವಾಯಿತು. ಪ್ರಾರಂಭದ ದಿನಗಳಲ್ಲಿ ಜೋಳಿಗೆಯಲ್ಲಿ ಕನ್ನಡ ಪುಸ್ತಕಗಳನ್ನು ಹೊತ್ತುಕೊಂಡು ಹೋಗಿ ಮಾರಾಟ ಮಾಡಿ ಸಂಘವನ್ನು ಕಟ್ಟಿದರು. ಬೆಂಗಳೂರಿನಂಥ ನಗರಗಳಲ್ಲಿ ಕನ್ನಡದ ದ್ವೀಪಗಳು ಮಾತ್ರ ಇವೆ ಎನ್ನತ್ತಿದ್ದ ಅವರು ಸಕಾಲದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಆಫ್ರಿಕಾದ ಭಾಷೆಗಳು ಅದಂತೆ ಕನ್ನಡ ಪಳೆಯುಳಿಕೆ ಆಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದರು.


ತಮ್ಮ ವೇದಿಕೆ ಮೂಲಕ ಅನೇಕ ಲೇಖಕರನ್ನು ರೂಪಿಸಿದ ಮೇಷ್ಟ್ರು, ಸ್ವತಃ ಲೇಖಕರು. ಭಾರತದಲ್ಲಿ ಮೊದಲ ಬಾರಿಗೆ ಮೂಕ ನಾಟಕ ಬರೆದವರು. ಇವರ ಐದು ಮೂಕ ನಾಟಕಗಳು  ಇಂಗ್ಲಿಷ್, ಜರ್ಮನ್, ಹಿಂದಿ ಸೇರಿದಂತೆ ಎಲ್ಲ ದ್ರಾವಿಡ ಭಾಷೆಗಳಿಗೂ ಅನುವಾದಗೊಂಡಿವೆ. ಅವರು ನಾಟಕಗಳನ್ನೂ ಬರೆದಿದ್ದಾರೆ. ರಾಜು ಮೇಷ್ಟ್ರ ಅಭಿನಂದನಾ ಗ್ರಂಥ  ‘ಅಂತರ್ಜಲ’ ಕೇವಲ ಆರು ತಿಂಗಳ ಹಿಂದೆ ಪ್ರಕಟವಾಗಿತ್ತು. ಅವರ ಬಗೆಗೆ ಬರೆದ ನೂರಾರು ಹಿರಿಯರು, ಗೆಳೆಯರು ಮತ್ತು ಶಿಷ್ಯರು ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಅವರ ಕ್ರಿಯಾಶೀಲತೆಯನ್ನು ಮುಕ್ತವಾಗಿ ಶ್ಲ್ಯಾಘಿಸಿದ್ದರು.  ಇದೇ ಜನವರಿ ೩೧ಕ್ಕೆ ಬೇಂದ್ರೆ ಹುಟ್ಟು ಹಬ್ಬ. ಕ್ರೈಸ್ಟ್ ಕಾಲೇಜಿನ ಕನ್ನಡ ಗೆಳೆಯರ ಬಳಗವೆಲ್ಲಾ ಒಂದೆಡೆ ಸೇರುವ ದಿನ. ಜನವರಿ, ಫೆಬ್ರವರಿ ನಡುವಿನ ಮಾಗಿಯ ಚಳಿಯಲ್ಲಿ ೩೦ ವರ್ಷಗಳಿಂದ ನಡೆದು ಬಂದ ಸಂಪ್ರದಾಯ ಇದು. ಅವರು ಕ್ರೈಸ್ಟ್ ಕಾಲೆಜಿನಿಂದ ನಿವೃತ್ತರಾದ ಮೇಲೆ ಸಂಚಯ ಬಳಗ ಆಚರಿಸುತ್ತಿದ್ದ ಬೇಂದ್ರೆ ಹುಟ್ಟು ಹಬ್ಬದಲ್ಲಿ ತಪ್ಪದೇ ಸಿಗುತ್ತಿದ್ದರು. ಈ ಬಾರಿ ಅವರಿಲ್ಲದ ಬೇಂದ್ರೆ ಹುಟ್ಟು ಹಬ್ಬವನ್ನು ಹೇಗೆ ಕಲ್ಪಿಸಿಕೊಳ್ಳಲಿ?

೨೯ ಡಿಸೆಂಬರ್ ೨೦೦೭ರ ಶನಿವಾರದ ವಿಜಯಕರ್ನಾಟಕ ಸಂಚಿಕೆಯಲ್ಲಿ ಪ್ರಕಟವಾಗಿದೆ. 

Tuesday 22 June 2010

ಜಾಣ ಜಾಣೆಯರ ಕನಸಿಗ

 
ಪ್ರಶ್ನಿಸದೆ ಯಾವುದನ್ನೂ ಒಪ್ಪಿಕೊಳ್ಳಬೇಡ ಎಂಬುದಕ್ಕೆ ಅನ್ವರ್ಥದಂತಿದ್ದವರು ಲಂಕೇಶ್. ಸ್ಥಾಪಿತ ನಿಲುವುಗಳ ಭಂಜಕ ಲಂಕೇಶರಿಗೆ ವರ್ತಮಾನ ಬಹುಮುಖ್ಯವಾದ ಮೌಲ್ಯವಾಗಿತ್ತು. ಭೂತ, ಭವಿಷ್ಯಗಳಿಗಿಂತ ವರ್ತಮಾನಕ್ಕೆ ಸಂಬಂಸಿದ ಎಲ್ಲ ಸಂಗತಿಗಳ ಬಗ್ಗೆ ಲಂಕೇಶ್ ದೃಢವಾಗಿ ಮಾತನಾಡಿದ್ದರಿಂದಲೇ ಬಹುಬೇಗ ಒಂದು ಜನಾಂಗದ ಕಣ್ಮಣಿಯಾದರು. 

ಸಮಾನ ಮನಸ್ಕರಾಗಿದ್ದ ಅಡಿಗರು, ಅನಂತಮೂರ್ತಿ, ತೇಜಸ್ವಿ, ಎ.ಕೆ. ರಾಮಾನುಜನ್, ಯಶವಂತ ಚಿತ್ತಾಲ, ಚಂಪಾ, ಕಾರ್ನಾಡ್ ಮುಂತಾದವರಿದ್ದ ಒಂದು ತಲೆಮಾರು ಬಹಳ ಪರಿಣಾಮಕಾರಿಯಾಗಿ ಸಮಾಜದ ಎಲ್ಲ ಸ್ತರಗಳನ್ನೂ ಪ್ರಭಾವಿಸಿತು. ಕುವೆಂಪು ಅವರ ವಿಚಾರ ಕ್ರಾಂತಿಯೆಂಬ ಮಹಾಸಾಗರಕ್ಕೆ ಗಣನೀಯ ಕೊಡುಗೆ ನೀಡಿದ ಈ ತಲೆಮಾರು ಲಂಕೇಶರ ಸಮಕಾಲೀನವಾದದ್ದು ಎಂದು ಗುರುತಿಸಲು ಅಡ್ಡಿಯಿಲ್ಲ. ತಮ್ಮ ವಿಚಾರಗಳನ್ನು ಹೇಳಲು ಸಾಹಿತ್ಯದ ಜತೆಗೆ ಲಂಕೇಶರಿಗೆ ಪತ್ರಿಕೋದ್ಯಮ ಕೂಡ ಪರಿಣಾಮಕಾರಿ ಸಾಧನವಾಯಿತು. ಇದರಿಂದ ಅವರ ವಿಚಾರಗಳು ವ್ಯಾಪಕವಾಗಿ ತಲುಪುವುದು ಸಾಧ್ಯವಾಯಿತು. ಸಾಹಿತ್ಯ, ಪತ್ರಿಕೋದ್ಯಮಗಳನ್ನು ತುಂಬಾ ಪರಿಣಾಮಕಾರಿಯಾಗಿ ಬಳಸಿಕೊಂಡ ಅವರು, ಹೊಸ ರೀತಿಯ ಜಾಗೃತಿಗೆ ಕಾರಣರಾದರು. ಲಂಕೇಶ್ ಸಾಹಿತ್ಯದ ಮೂಲಕ ಸಾಸಿದ್ದು ಬಹಳವಾದರೂ ಪತ್ರಿಕೋದ್ಯಮದ ಮೂಲಕ ಹೇಳಿದ್ದು ಮಾತ್ರ ಆವರೆಗೆ ಹೇಳದ ಸಂಗತಿಗಳಿಂದ ತುಂಬಿತ್ತು.   

ಹೊಸ ರೀತಿಯ ಪತ್ರಿಕೋದ್ಯಮಕ್ಕೆ ಕನ್ನಡ ಜಗತ್ತು ತೆರೆದುಕೊಳ್ಳುವಂತೆ ಮಾಡಿದ ಕೀರ್ತಿ ಅವರದೇ. ಅವರು ಎಲ್ಲ ಬಗೆಯ ಸಾಂಸ್ಕೃತಿಕ, ಸಾಮಾಜಿಕ ಮತ್ತು ಸಾಹಿತ್ಯ ಚಳವಳಿಗಳನ್ನು ಮೊದಲು ಗುರುತಿಸಿ ಪ್ರೋತ್ಸಾಹಿಸಿದರು. ಹಾಗೆಯೇ ಅವುಗಳ ಮೇಲೆ ದಿಢೀರ್ ಮುಗಿಬೀಳುತ್ತಿದ್ದುದೂ ಅವರ ವ್ಯಕ್ತಿತ್ವದಲ್ಲಿಯೇ ಇತ್ತು. ಏನೇ ವೈರುಧ್ಯಗಳಿದ್ದರೂ ಅವರ ಸಾಹಿತ್ಯಿಕ ವೈಚಾರಿಕತೆ ಮತ್ತು ಪತ್ರಿಕೋದ್ಯಮ ಇಡೀ ಕರ್ನಾಟಕವನ್ನು ಎಚ್ಚರದಲ್ಲಿಟ್ಟಿತ್ತು ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಪತ್ರಿಕೆಯನ್ನು ಕೈಯಲ್ಲಿ ಹಿಡಿದು ನಡೆಯುವುದು ಆಗಿನ ಕಾಲಕ್ಕೆ ಯುವಕರಿಗೆ ಪ್ರತಿಷ್ಠೆಯ ವಿಚಾರವಾಗಿತ್ತು. ಪ್ರತಿಭೆಗಳನ್ನು ಗುರುತಿಸುವುದರಲ್ಲಿ ಲಂಕೇಶರಿಗೆ ಅವರೇ ಸಾಟಿ. ಅವರ ಶೋಧಗಳು ಇವತ್ತು ಪ್ರಮುಖ ಬರಹಗಾರರಾಗಿ ರೂಪುಗೊಂಡಿರುವುದು ಲಂಕೇಶರ ಬಹುಮುಖ್ಯ ಕಾಣಿಕೆ ಮತ್ತು ಕನಸು.  ಲಂಕೇಶ್ ಎಲ್ಲದರ ಬಗ್ಗೆಯೂ ಅಕೃತವಾಗಿ ಪ್ರತಿಕ್ರಿಯಿಸುತ್ತಿದ್ದರು. ಅವರನ್ನು ಬಹುವಾಗಿ ರೊಚ್ಚಿಗೆಬ್ಬಿಸುತ್ತಿದ್ದುದು ಮೂಲಭೂತವಾದ. ಎಲ್ಲ ರೀತಿಯ ಮೂಲಭೂತವಾದಕ್ಕು ಅವರು ಮೊದಲು ತಮ್ಮ ವಿರೋಧ ದಾಖಲಿಸುತ್ತಿದ್ದರು. ಮೌಢ್ಯವನ್ನು ಜಾಡ್ಯ ಎನ್ನುತ್ತಿದ್ದರು. ವಿಶ್ವಸುಂದರಿ ಸ್ಪರ್ಧೆ, ಪರಮಾಣು ಪರೀಕ್ಷೆ ವಿಷಯಗಳಲ್ಲಿ ಅವರು ತೆಗೆದುಕೊಂಡ ನಿಲುವುಗಳು ಖಚಿತವಾಗಿದ್ದವು. ನಿತ್ಯದ ಅನೇಕ ಸಂಗತಿಗಳಿಗೆ ತುಂಬಾ ಭಿನ್ನಪ್ರತಿಕ್ರಿಯೆಯಾಗಿ ‘ನೀಲು’ ಎಂಬ ಹೆಸರಿನಲ್ಲಿ ಅವರು ಬರೆದ ಕಾವ್ಯ ಬಹಳ ಜನಪ್ರಿಯವಾಗಿದ್ದ ಟೀಕೆ-ಟಿಪ್ಪಣಿಯಲ್ಲಿ ರಾಮಮಂದಿರ ವಿವಾದದ ಸಂದರ್ಭದಲ್ಲಿ ಬರೆದ ‘ಇಟ್ಟಿಗೆ ಪವಿತ್ರವಲ್ಲ, ಜೀವ ಪವಿತ್ರ’ ಟೈಮ್ಸ್ ಪತ್ರಿಕೆ ಬಗ್ಗೆ ಬರೆದ ‘ಒಳ್ಳೆಯ ಟೈಮ್ಸ್, ಕೆಟ್ಟ ಟೈಮ್ಸ್’ ಮಲೆಯಾಳದ ಹೆಸರಾಂತ ಲೇಖಕ ತಕಳಿ ಶಿವಶಂಕರ ಪಿಳ್ಳೈ ಅವರ ‘ಚೆಮ್ಮೀನ್’ ಕಾದಂಬರಿಗೆ ಪ್ರತಿಕ್ರಿಯಿಸಿದ ಬರಹಗಳು  ಅವರ ವಿಭಿನ್ನ ದೃಷ್ಟಿಕೋನಕ್ಕೆ ಸಾಕ್ಷಿಗಳಂತಿದ್ದವು.

ಮುಟ್ಟಿದ್ದೆಲ್ಲವನ್ನೂ ಚಿನ್ನವಾಗಿಸಿದ ಅವರು ಎಲ್ಲದರಲ್ಲೂ ಹೊಸತನ ಮೆರೆದರು. ಅದು ಸಿನಿಮಾ, ನಾಟಕ, ಕಾದಂಬರಿ, ಕಾವ್ಯ, ವಿಮರ್ಶೆ ಯಾವುದನ್ನೂ ಬಿಡಲಿಲ್ಲ. ಸಿಟ್ಟು ಮತ್ತು ಪ್ರೀತಿಯಲ್ಲಿ ಅವರು ಥೇಟ್ ಬನದ ಕರಡಿಯಂತಿದ್ದರು. ಹೆಸರಿನಂತೆಯೇ ವ್ಯಕ್ತಿತ್ವವೂ ವಿಕ್ಷಿಪ್ತವಾಗಿತ್ತು. ಸ್ಪಷ್ಟತೆಯಿಲ್ಲದ ಯಾವುದನ್ನೂ ಅವರು ಒಪ್ಪಿಕೊಳ್ಳುತ್ತಿರಲಿಲ್ಲ. ಅವರು ಎಷ್ಟೇ ದೊಡ್ಡವನಿದ್ದರೂ ಕೆಣಕದೆ ಬಿಡುತ್ತಿರಲಿಲ್ಲ. ಯಾವುದೋ ದೇಶದ ಲೇಖಕ, ವಿಷಯ, ಚಿಂತನೆ, ರಾಜಕೀಯ ಮುಂತಾದ ಅನೇಕ ಅಗತ್ಯ ವಿಷಯಗಳನ್ನು ಹಕ್ಕಿಯಂತೆ ಹೆಕ್ಕಿ ತಂದು ಕನ್ನಡದ ಜನರಿಗೆ ಉಣಬಡಿಸಿದರು. ಲೇಖನ, ವಿಮರ್ಶೆಗಳಿಂದ ಎಲ್ಲದನ್ನೂ ಹೇಳಿದಂತೆ ಆಗುವುದಿಲ್ಲ ಎಂಬ ಕಾರಣಕ್ಕೆ ಬೋದಿಲೇರ್ನಂಥ ಲೇಖಕನನ್ನು ಕನ್ನಡಕ್ಕೆ ತಂದರು. ಆ ಮೂಲಕ ತೀವ್ರ ತಲ್ಲಣಗಳ ಜಗತ್ತೊಂದು ಕನ್ನಡಕ್ಕೆ ಪರಿಚಯವಾಯಿತು.

ತಮ್ಮ ಅನೇಕ ಸಮಕಾಲೀನ ಲೇಖಕರಿಗೆ ಅವರು ವೇದಿಕೆಗಳನ್ನೂ ಒದಗಿಸಿದರು. ಪತ್ರಿಕೆ ಲಂಕೇಶರಿಗೆ ಎಲ್ಲ ಅರ್ಥಗಳಲ್ಲೂ ಒಂದು ಅಸ್ತ್ರದಂತೆ ಇತ್ತು. ಮದಗಜದಂತೆ ನಡೆದದ್ದೇ ದಾರಿಯಾಗಿ ವಿಜೃಂಭಿಸಿದ ಲಂಕೇಶ್, ಮೂರ್ನಾಲ್ಕು ತಲೆಮಾರುಗಳನ್ನು ಪ್ರಭಾವಿಸಿದರು. ೨೫ ವರ್ಷಗಳ ಕಾಲ ಎಲ್ಲರನ್ನೂ, ಎಲ್ಲವನ್ನೂ ತುದಿಗಾಲಲ್ಲಿ ನಿಲ್ಲಿಸಿದ ಕೀರ್ತಿ ಅವರದು. ಪತ್ರಿಕೋದ್ಯಮ, ರಾಜಕೀಯ, ಸಾಹಿತ್ಯ, ಚಳವಳಿಗಳು ಇವು ಯಾವುವೂ ಲಂಕೇಶ್ ಗುಂಗಿನಿಂದ ಹೊರತಾಗಿರಲಿಲ್ಲ. ಅಲ್ಲೆಲ್ಲ ಲಂಕೇಶರ ಛಾಪು ಇದ್ದೇ ಇತ್ತು. ಒಟ್ಟಾರೆ ಲಂಕೇಶ್ ಎಂಬ ಅಪ್ಪಟ ಪ್ರತಿಭೆ ಬಹುಮುಖವಾದದ್ದು ಎಂದರೆ ಅದು ಮತ್ತೆ ಅವರದೇ ಮಾತಿನ ಕ್ಲೀಷೆ ಅಷ್ಟೆ.                 

 ೩೦ ನವೆಂಬರ್ ೨೦೦೭ರ ಶುಕ್ರವಾರದ ವಿಜಯಕರ್ನಾಟಕ ಸಂಚಿಕೆಯಲ್ಲಿ ಪ್ರಕಟವಾಗಿದೆ.                                                  

Monday 21 June 2010

ಕನ್ನಡದ ತೇಜಸ್ಸು: ಪೂರ್ಣಚಂದ್ರ ತೇಜಸ್ವಿ

ಅದೇ ಮೊದಲ ಬಾರಿಗೆ ಪ್ಯಾಂಟಿನಿಂದ ಮುಚ್ಚಿದ್ದ ಮೊಣಕಾಲು, ಚಪ್ಪಲಿ ಕಂಡ ಕಾಲು, ತಲೆಯ ಹರಳೆಣ್ಣೆ ವಾಸನೆಯೊಂದಿಗೆ ಸೈಕಲ್ ತುಳಿದುಕೊಂಡು ಕಾಲೇಜು ಮೆಟ್ಟಿಲು ಹತ್ತಿದಾಗ, ಪಟ್ಟಣದ ಹುಡುಗರು ಹಳ್ಳಿ ಮುಕ್ಕನನ್ನು ನಿರ್ಲಕ್ಷ್ಯದಲ್ಲಿ ಇರಿಯುವಂತೆ ನೋಡುತ್ತಿದ್ದರೆ, ಓದಿ ಏನೋ ಆಗುವುದು ಹಾಗಿರಲಿ ಪ್ರತಿದಿನ ಇಂಥ ತಿರಸ್ಕಾರಗಳ ನಡುವೆ ಕಲಿಯಬೇಕಲ್ಲ ಎಂಬ ಭಯ ಸುತ್ತವವರಿದಿದ್ದಾಗ, ತಲೆ ಎತ್ತಿ ಕೂರಲಿಕ್ಕೆ ಕನ್ನಡದ ಪೀರಿಯಡ್ ಬರಬೇಕಿತ್ತು.   
ಕನ್ನಡದ ಮೇಷ್ಟ್ರು ತನ್ಮಯತೆಯಿಂದ ಹೇಳುತ್ತಿದ್ದ  ಕರ್ವಾಲೋ ಕಾದಂಬರಿಯ ವಿವರಗಳು ಕೊಡುತ್ತಿದ್ದ ಎಂಥದೋ ಬಲ, ಹುಮ್ಮುಸ್ಸು, ಆತ್ಮವಿಶ್ವಾಸ ಕರ್ವಾಲೋ, ಕನ್ನಡ ಮತ್ತು ತೇಜಸ್ವಿ ಮತ್ತೆ ಮತ್ತೆ ಬೇಕು ಅನಿಸುತ್ತಿತ್ತು. ಇದು ತೇಜಸ್ವಿ ಬರಹದ ತಾಕತ್ತು. ತೇಜಸ್ವಿಯನ್ನು ನೆನಪಿಸಿಕೊಂಡಾಗಲೆಲ್ಲ ಕನ್ನಡದಿಂದಲೇ ಎಲ್ಲರನ್ನೂ ಎದುರಿಸಬಹುದು, ಮಣಿಸಬಹುದು ಎಂಬ ಬಿಗುಮಾನ  ಉಂಟಾಗುತ್ತಿತ್ತು. ಅವರ ಬರವಣಿಗೆಗಳೆಂದರೆ ನಮ್ಮ ಬದುಕಿನ ಕನ್ನಡಿ. ಕನ್ನಡ ಮಾದ್ಯಮ, ಕನ್ನಡತನದ ಬಗೆಗಿನ ಚರ್ಚೆಗಳು, ಮೈಕ್ರೋಸಾಫ್ಟ್  ಒಡೆತನದ ತಂತ್ರeನ ಕನ್ನಡದಂಥ ದೇಶೀಯ ಭಾಷೆಗಳಿಗೆ ಒಡ್ಡಿರುವ ಆತಂಕ. ಕನ್ನಡವನ್ನು ಬೆಳೆಸಬೇಕಾದ ದಾರಿ ಯಾವುದು ಎಂಬಂಥ ಚರ್ಚೆಗಳು ಮುಗಿಲು ಮುಟ್ಟಿರುವ ಈ ಸಂದರ್ಭದಲ್ಲಿ ತೇಜಸ್ವಿ ದಾರಿದೀಪದಂತೆ ಕಾಣುತ್ತಾರೆ. 

ವಿeನವಿರಲಿ, ಕತೆ ಇರಲಿ, ಕಾದಂಬರಿ ಇರಲಿ, ಕೊನೆಗೆ ಪ್ರವಾಸ ಕಥನ ಇರಲಿ ಎಲ್ಲವನ್ನೂ ವಿಶಿಷ್ಟವಾಗಿ, ಸಹಜವಾಗಿ ಬರೆದಿದ್ದು, ತೇಜಸ್ವಿಯವರು, ವಿeನದ ಆನೇಕ ವಿಷಯಗಳ ಬಗ್ಗೆ ದಿನಪತ್ರಿಕೆಗಳಲ್ಲಿ ಕೆಲವೇ ಕೆಲವರು ಬರೆಯುತ್ತಿದ್ದ ಸಂದರ್ಭದಲ್ಲಿ ಅದನ್ನು ಅತ್ಯಂತ ಸರಳವಾಗಿಯೂ ಪರಿಣಾಮಕಾರಿಯಾಗಿಯೂ ಬಿಡಿಸಿಟ್ಟವರು ಅವರು. ನಿಗೂಢತೆ. ರೋಚಕತೆ, ಹಾಸ್ಯ ಮತ್ತು ಜೀವನಾನುಭವದ ಹದವಾದ ಪಾಕ ಅವರ ಬರವಣಿಗೆಗಳು. ‘ಮಿಲೇನಿಯಮ್ ಸೀರೀಸ್’ ಪುಸ್ತಕಗಳನ್ನು ಬದುಕಿಗೆ ಅಗತ್ಯವಾದ ವಿವರಗಳೊಂದಿಗೆ ಕನ್ನಡಕ್ಕೆ ತಂದು ಇಂಗ್ಲಿಷ್ ಪ್ರವಾಹದೆದುರು ಕನ್ನಡತನವನ್ನು ಎದೆಗೇರಿಸಿ ನಿಂತವರು ತೇಜಸ್ವಿ. ಒಂದು ವಿಧದಲ್ಲಿ ಅವರ ಬದುಕೇ ಜಾಗತೀಕರಣ, ಆಂಗ್ಲೀಕರಣ ಮತ್ತು ನಗರೀಕರಣವನ್ನು ಕ್ಕರಿಸುವಂತೆ ಇತ್ತು. ಎಲ್ಲಾ  eನದೊಂದಿಗೆ, ಯುವಕರೇ ಹಳ್ಳಿಗಳಿಗೆ ತೆರಳಿ ಎಂಬ ಗಾಂಯ ಮಾತಿಗೆ ಉದಾಹರಣೆಯಂತಿದ್ದರು.   

ಮೀನು ಹಿಡಿಯುವುದು, ಬೇಟೆ ಆಡುವುದನ್ನೂ ಅತ್ಯಂತ ಕಲಾತ್ಮಕವಾಗಿ ಹೇಳಿ ಮೈಮರೆಸುವ ಶಕ್ತಿ ಅವರಿಗಿತ್ತು. ಸ್ವತಃ ಇದೆಲ್ಲ ಅನುಭವಗಳನ್ನು ಅನುಭವಿಸಿದವರೂ ಚಕಿತಗೊಳ್ಳುವಂತೆ ಬರೆಯುತ್ತಿದ್ದರು. ಯಾವುದೋ ಪಕ್ಷಿಯ ಕೂಗು, ಇನ್ನಾವುದೋ ಪ್ರಾಣಿಯ ಜೀವನಕ್ರಮ, ಕೊನೆಗೆ ತನ್ನ ಸುತ್ತಲಿನ ಜಗತ್ತಿನ ಹಳವಂಡಗಳನ್ನೆಲ್ಲಾ ಮುಂದಕ್ಕೆ ಸುರಿದುಕೊಂಡು ಆಡುತ್ತಿದ್ದ ತುಂಟ ಮಗುವಿನಂತಿದ್ದರು ತೇಜಸ್ವಿ. ವೃಥಾ ಭಾವುಕರಾಗದೆ, ಅವಸರಕ್ಕೆ ಮಾತಾಡದೆ, ವಾಸ್ತವ ಹೇಳಲು ಯಾವ ಅeನವನ್ನು ಬೇಕಾದರೂ ಪ್ರಶ್ನಿಸುತ್ತಿದ್ದ ತೇಜಸ್ವಿ, ನಮ್ಮ ನಡುವೆ ಬದುಕಿನ ಅತ್ಯಂತ ಸಹಜ ಮನುಷ್ಯ ಅನಿಸುತ್ತದೆ.   ಕನ್ನಡದ ಬೆಳವಣಿಗೆ, ಭಾಷೆಯಾಗಿ ನೋಡುವ ಕ್ರಮ, ಶಾಸ್ತ್ರೀಯತೆಗಾಗಿನ ಹೋರಾಟ ಕುರಿತ ತೇಜಸ್ವಿ, ಅವರ ಅನಿಸಿಕೆಗಳು ಅತ್ಯಂತ ಖಚಿತವಾಗಿದ್ದವು. 

ಕನ್ನಡವು ತಂತ್ರeನವನ್ನು ದಕ್ಕಿಸಿಕೊಳ್ಳುವುದು ಅಗತ್ಯವೆಂದು ನಂಬಿದ್ದ ಅವರು, ದೂರದೃಷ್ಟಿಯಿಂದ ಆ ನಿಟ್ಟಿನಲ್ಲಿ ಹೆಜ್ಜೆಯನ್ನೂ ಇಟ್ಟರು. ಕನ್ನಡ ಅನ್ನ ಕೊಡುವ ಭಾಷೆ ಎಂಬ ಭರವಸೆಯನ್ನು ಹುಟ್ಟಿಸುವ ಕೆಲಸ ಅತ್ಯಂತ ಅಗತ್ಯವಾಗಿ ಮತ್ತು ತುರ್ತಾಗಿ ಆಗಬೇಕಿರುವ ಕೆಲಸ ಎಂದು ಹೇಳಿದವರಲ್ಲಿ ತೇಜಸ್ವಿ ಮೊದಲಿಗರು. ಸಮಾಜವಾದದಿಂದ ಸೂರ್ತಿ ಪಡೆದಿದ್ದ ಅವರು ತಮ್ಮ ಜತೆಗಾರರಂತೆ ಅಲ್ಲೇ ನಿಂತವರಲ್ಲ, ನಿರಂತರವಾಗಿ ಹೊಸ ದಿಗಂತಗಳನ್ನು ಆವಿಷ್ಕರಿಸುತ್ತ ಇದ್ದವರು. 

೨೪ ನವೆಂಬರ್ ೨೦೦೭ರ ವಿಜಯಕರ್ನಾಟಕ ಸಂಚಿಕೆಯಲ್ಲಿ ಪ್ರಕಟವಾಗಿದೆ.