ಹೆಜ್ಜೆ ಗೆಜ್ಜೆ :
ಈ ಬ್ಲಾಗ್ ನಲ್ಲಿರುವ ವಿಷಯ ಮತ್ತು ಚಿತ್ರಗಳ ಬಳಕೆಗೆ ಅನುಮತಿ ಕಡ್ಡಾಯ.
ಮತ್ತೊಂದು ಕ್ಷಣ ನನ್ನ ಬಗ್ಗೆ ಬದುಕು-ಬರಹ

Sunday 27 October 2013

ನೆನಪು: ಅಮ್ಮ ತೀರಿಕೊಂಡು ಒಂದು ವರ್ಷ




ನನ್ನಮ್ಮ ತೀರಿಕೊಂಡು ಒಂದು ವರ್ಷ ಕಳೆದುಹೋಯಿತು(9/10/2012). ಅಮ್ಮನ ಒಂದು ವರ್ಷದ ನೆನೆಪಿಗೆ ಕಳೆದ ಅಕ್ಟೋಬರ್ 10ನೇ ತಾರೀಖು ಗುರುವಾರ ರಾತ್ರಿ, ತುಮಕೂರು ಜಿಲ್ಲೆ, ಶಿರಾ ತಾಲ್ಲೂಕಿನ ನನ್ನ ಊರು ಜವನ್ನಹಳ್ಳಿಯಲ್ಲಿ ಸುಮಾರು 35 ಜನರ ತಂಡ ಅಹೋರಾತ್ರಿ ಭಜನೆ ಕಾರ್ಯಕ್ರಮ ನಡೆಸಿಕೊಟ್ಟಿತು. ಸುಮಾರು 10 ವರ್ಷಗಳ ನಂತರ ರಾತ್ರಿಯೆಲ್ಲ ಭಜನೆ ಸಂಭ್ರಮದಲ್ಲಿ ಮುಳುಗಿದ್ದೆ. ಅದು ಕೊಟ್ಟ ಖುಷಿಯನ್ನು ಶಬ್ಧಗಳಲ್ಲಿ ಹಿಡಿದಿಡುವುದು ಕಷ್ಟ. ಇದೆಲ್ಲ ದುಡ್ಡಿನಿಂದ ಆಗುವ ಕೆಲಸವಲ್ಲ. ನನ್ನಮ್ಮ, ನನ್ನಪ್ಪ-ಅಕ್ಕಂದಿರ ಕಾರಣದಿಂದ ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ತತ್ತ್ವ ಪದಕಾರರು ನಮ್ಮ ಮನೆಯಲ್ಲಿ ಜಮಾಯಿಸಿದ್ದರು. ಗುಂಪು, ಪಂಥ, ಜಾತಿ ಬೇಧಗಳಿಗೆ ಅಲ್ಲಿ ಆಸ್ಪದವೇ ಇರುವುದಿಲ್ಲ.
ನಮ್ಮ ಮನೆಯ ಭಜನೆ ಕಾರ್ಯಕ್ರಮಕ್ಕೆ ಸುಮಾರು 25-30 ವರ್ಷಗಳ ಇತಿಹಾಸವಿದೆ. ನಮಗೆಲ್ಲ ಸಾಹಿತ್ಯ-ಸಂಗೀತ ಅಂತ ಅಭಿರುಚಿ ಹುಟ್ಟಿದ್ದರೆ ಅದಕ್ಕೆ ನಮ್ಮ ಮನೆಯಲ್ಲಿ ಕಾಲಕಾಲಕ್ಕೆ ನಡೆಯುತ್ತಿದ್ದ ಭಜನೆಯೂ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳೇ ಕಾರಣ. ಇವತ್ತಿಗೂ ಮುಖ ತೊಳೆದು ವಿಭೂತಿ ಧರಿಸಿದ ನಂತರ ದೇವರ ಮನೆಯಲ್ಲಿದ್ದ ಏಕತಾರಿಯನ್ನು ಮೀಟಿ ನಾದ ಹೊರಡಿಸಿದ ನಂತರವೇ ತಿಂಡಿ – ಊಟದ ತಟ್ಟೆಯ ಮುಂದೆ ಅಪ್ಪ, ನನ್ನ ಅಕ್ಕಂದಿರು ಕುಳಿತುಕೊಳ್ಳುತ್ತಾರೆ. ನನ್ನಮ್ಮನಂತೂ, ರಾಗಿಯನ್ನು ಇರುವೆ ಗೂಡಿಗೆ ಹಾಕಿದ ನಂತರ ಸೂರ್ಯನಿಗೆ ನಮಸ್ಕಾರ ಹಾಕಿ ಏಕತಾರಿ ಮುಂದೆ ಕೂತು ನಾದ ಹೊರಡಿಸಿ ಧ್ಯಾನ ಮಾಡಿದ ಮೇಲೆ ನಾಯಿಗೆ ಅನ್ನ ಹಾಕಿಯೇ ಊಟ ಮಾಡುತ್ತಿದ್ದರು. ಇದಕ್ಕೆಲ್ಲ ನಾನೊಬ್ಬನೇ ಅಪವಾದ.
ನನ್ನ ಮೂವರು ಅಕ್ಕಂದಿರು, ತಂಗಿ ಭಜನೆಯ ಕಾರ್ಯಕ್ರಮದಲ್ಲಿ ಅಪ್ಪನೊಟ್ಟಿಗೆ ಕೂತುಕೊಂಡರೆ ನಾದಲೋಕದಲ್ಲಿ ಮನೆ ಮುಳುಗಿ ಹೋಗುತ್ತಿತ್ತು. ಸುಖ-ಕಷ್ಟ ಬೇಸರದ ಘಳಿಗೆಗಳಲ್ಲಿ ನನ್ನಪ್ಪ ಏಕತಾರಿ ಹಿಡಿದು ಕೂರುತ್ತಿದ್ದರು. ನನ್ನ ಒಬ್ಬ ಭಾವ ಕೂಡ ಭಜನೆ ಭಲ್ಲವರಾಗಿದ್ದುದು ಇನ್ನೊಂದು ಮೆರೆಗು ನೀಡುತ್ತಿತ್ತು. ಇವತ್ತಿಗೂ ಭಜನೆಯಲ್ಲಿ ಕುಳಿತುಕೊಳ್ಳುವ ನನ್ನ ಅಕ್ಕಂದಿರು ತತ್ತ್ವಪದಗಳ ಹಾಡಿನಲ್ಲಿ ವಿಜೃಂಭಿಸುತ್ತಾರೆ.
ವರ್ಷಕ್ಕೊಂದು ಬಾರಿ ಎಂಥ ಕಷ್ಟವೇ ಇರಲಿ ಭಜನೆ ಮಾತ್ರ ನಿಲ್ಲುತ್ತಿರಲಿಲ್ಲ. ನಿರ್ದಿಷ್ಟ ವೇಳೆಗೆ ಭಜನೆ ನಡೆಯುತ್ತಿರಲ್ಲವಾದರೂ, ಭಜನೆ ನಡೆದು ವರ್ಷವಾಯಿತೆಂದು ಸಾಮಾನ್ಯವಾಗಿ  ನನ್ನಮ್ಮನೇ ಅಪ್ಪನಿಗೆ ಭಜನೆ ಕಾರ್ಯಕ್ರಮ ಏರ್ಪಡಿಸುವಂತೆಗೆ ಒತ್ತಾಯಿಸುತ್ತಿದ್ದರು. ನನ್ನಮ್ಮ ಸತ್ತ ದಿನವೂ ರಾತ್ರಿಯೆಲ್ಲ ಭಜನೆ ನಡೆಯಿತು. ಅಮ್ಮ ಸಾಯುವುದಕ್ಕೆ ಮುಂಚೆ ಒಂದೂವರೆ ತಿಂಗಳಿನಿಂದ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಇದ್ದರು. ಅಮ್ಮನ ಹಾರೈಕೆಯಲ್ಲಿ ನಾನು ಹೈರಾಣಾಗಿದ್ದರಿಂದ ಅವತ್ತು ಭಜನೆಯನ್ನು ಮಿಸ್ ಮಾಡಿಕೊಂಡಿದ್ದೆ. ಬೆಂಗಳೂರು, ಬಾಗಲಕೋಟ, ಗಂಗಾವತಿಗಳಲ್ಲಿ ನನ್ನ ವೃತ್ತಿ ಜೀವನ ಸುಮಾರು 12 ವರ್ಷ ಮುಗಿದು ಹೋಗಿದ್ದರಿಂದ ಇಷ್ಟೊಂದು ಅಸ್ಥೆಯಿಂದ ಇತ್ತೀಚೆಗೆ ಭಜನೆಯನ್ನು ಆಸ್ವಾದಿಸಲು ಸಾಧ್ಯವಾಗಿರಲಿಲ್ಲ.
ಅಂತೂ ಅವತ್ತು ನನ್ನ ಅನೇಕ ಗುರು/ ಗೆಳೆಯರನ್ನು ಅವತ್ತು ನೆನೆದೆ. ಅದರಲ್ಲೂ ಮುಖ್ಯವಾಗಿ ಎಸ್. ಆರ್. ರಾಮಕೃಷ್ಣ, ಆಲೂರು ದೊಡ್ಡಲಿಂಗಪ್ಪ, ಪಿ. ಮಂಜುನಾಥ್, ಉಗಮ ಶ್ರೀನಿವಾಸ್, ಸತೀಶ್ ತಿಪಟೂರು, ಹಳ್ಳಿ ಸುರೇಶ್, ಶಿವಪ್ಪ, ನಾಗತಿಹಳ್ಳಿ ರಮೇಶ್ ಮತ್ತು ದಿ. ಎನ್. ಕೆ ಹನುಮಂತಯ್ಯ ನೆನಪಾದರು. ಇವರೆಲ್ಲ ಭಜನೆಗೆ ಬಂದಿದ್ದರೆ ಇದನ್ನೆಲ್ಲ ಹೇಗೆ ಆಸ್ವಾಧಿಸುತ್ತಿದ್ದರೋ ಗೊತ್ತಿಲ್ಲ. ಸುಮಾರು 13 ವರ್ಷಗಳ ಹಿಂದೆ ಶ್ರೀರಂಗಪಟ್ಟಣದ ಬಳಿಯ ಬಾಬೂರಾಯನ ಕೊಪ್ಪಲಲ್ಲಿ ತೀರಿಕೊಂಡಿದ್ದ ಅಪರಿಚಿತ ವ್ಯಕ್ತಿಯೊಬ್ಬರ ಭಜನೆ ತಂಡದಲ್ಲಿ ಸೇರಿಕೊಂಡು ಹನುಮಂತಯ್ಯ ಮತ್ತು ಆಲೂರು ದೊಡ್ಡ ಇಡೀ ಜನಸಂದಣಿಯನ್ನು ಹುಚ್ಚೆಬ್ಬಿಸಿದ್ದ ಘಟನೆ ಈಗಲೂ ಕಣ್ಣಿಗೆ ಕಟ್ಟಿದಂತಿದೆ.
ಇದೆಲ್ಲ ಏನೇ ಇರಲಿ, ಮೊನ್ನೆಯ ಭಜನೆ ಕಾರ್ಯಕ್ರಮದಲ್ಲಿ ಹಾಡಿದ ತತ್ತ್ವ ಪದಗಳು, ವಚನಗಳು, ವಿವಿಧ ಪಂಥ-ಗುಂಪಿನ ವಿವಿಧ ಆನುಭಾವಿ ಪದಗಳ ಜುಗಲ್ಬಂಧಿ ಮರೆಯಲಾರದ ನೆನೆಪಾಗಿ ಉಳಿಯಿತು. ಪ್ರತಿವರ್ಷ ಇಷ್ಟೇ ಸಂಖ್ಯೆಯ ತತ್ತ್ವಪದಕಾರರನ್ನು ಕರೆಸಿ ಹಾಡಿಸಲು ಪ್ರಯತ್ನಿಸಬೇಕೆಂದು ಅಕ್ಕ-ಅಪ್ಪನನ್ನು ಆಗ್ರಹಿಸಿದ್ದೇನೆ. ಬೆಂಗಳೂರಿನಲ್ಲಿ ಇಂತಹದೊಂದು ಇಡೀ ರಾತ್ರಿ ಕಾರ್ಯಕ್ರಮ ಆಯೋಜಿಸಿದರೆ ಹೇಗೆಂದು ಯೋಚಿಸುತ್ತಿದ್ದೇನೆ. ಅದೆಲ್ಲ ಯಾವಾಗ ಸಾಧ್ಯವಾಗುವುದೋ ನೋಡಬೇಕು. ಇಷ್ಟಕ್ಕೆಲ್ಲ ಕಾರಣವಾದ, ಅಗಾಧ ಶಕ್ತಿ ಮತ್ತು ಅನೇಕ ವಿಷಯಗಳಲ್ಲಿ ವಿಜ್ಞಾನಿಯಂತೆ ಯೋಚಿಸುತ್ತಿದ್ದ ಅನಕ್ಷರಸ್ಥೆ ನನ್ನಮ್ಮನ ಕುರಿತು ಬರೆಯಬೇಕೆಂಬ ತುಡಿತ ಹೆಚ್ಚುತ್ತಿದೆ.


Sunday 12 May 2013

ನನ್ನನ್ನು ಕ್ಷಮಿಸಿಬಿಡು ಅಮ್ಮಾ




ಇವತ್ತು ವಿಶ್ವ ಅಮ್ಮಂದಿರ ದಿನ. ಅಮ್ಮನಿಲ್ಲದ ಎಷ್ಟೋ ಮಂದಿಗೆ ತಮ್ಮ ಅಮ್ಮಂದಿರು ನೆನಪಾಗಿವಂತೆ ನನಗೂ ನನ್ನಮ್ಮ ನೆನಪಾದರು. ಅಮ್ಮನ ದಿನ, ಅಪ್ಪನ ದಿನ ಇಂಥ ಯಾವುದೇ ದಿನಗಳ ಬಗ್ಗೆ ಅನಕ್ಷರಸ್ಥೆಯಾಗಿದ್ದ ನನ್ನಮ್ಮನಿಗೆ ಗೊತ್ತಿರುವುದು ಸಾಧ್ಯವಿರಲಿಲ್ಲ.
ಅಮ್ಮನಿಲ್ಲದ ಮೊದಲ ‘ಅಮ್ಮನ ದಿನ’ವಾದ್ದರಿಂದಲೇ ಇದು ನನ್ನನ್ನು ಇಷ್ಟೊಂದು ತೀವ್ರವಾಗಿ ಕಾಡುತ್ತಿರುಬಹುದು ಎಂದುಕೊಂಡಿದ್ದೇನೆ. ಏಕೆಂದರೆ ಅಮ್ಮನ ದಿನದ ಮಹತ್ವ ನನಗೆ ಈ ಮೊದಲು ಅಷ್ಟಾಗಿ ಗೊತ್ತಾಗಿರಲಿಲ್ಲ. ನನ್ನಮ್ಮ ಬದುಕಿದ್ದಾಗ ಬಂದ ‘ಅಮ್ಮನ ದಿನ’ಗಳಲ್ಲಿ ಪತ್ರಿಕೆಗಳಲ್ಲಿ ಯಾವುದಾದರೂ ಲೇಖನ ಬಂದರೆ ಕಣ್ಣಾಡಿಸುತ್ತಿದ್ದೆ. ಅಮ್ಮ ನೆನಪಾಗುತ್ತಿದ್ದರು. ವಿಷ್ ಮಾಡುವ ಪದ್ಧತಿ ಖಂಡಿತಾ ಇರಲಿಲ್ಲ. ಹಾಗಾಗಿ ನಾನು ನನ್ನಮ್ಮನಿಗೆ ಎಂದೂ ವಿಷ್ ಮಾಡಲಿಲ್ಲ.
ಬಡತನದ ಕಾರಣದಿಂದ ಅನುಭವಿಸಿದ ಅವಮಾನ, ಸಂಕಟಗಳು ನಮ್ಮನ್ನು ಅಷ್ಟಾಗಿ ತಟ್ಟದಂತೆ ಕಾಪಾಡಿದ್ದ ಅಮ್ಮನ ತಾಕತ್ತು ದೊಡ್ಡದು. ದೊಡ್ಡ ಮನಸ್ಸಿನ ಅಮ್ಮ ಸದಾ ಚಟುವಟಿಕೆಯಿಂದ ಇದ್ದರು. ಸುಮಾರು ನಲವತ್ತು ವರುಷಗಳಿಂದ ಅಸ್ತಮಾ ಎಂಬ ಭಯಂಕರ ಕಾಯಿಲೆ ವಿರುದ್ಧ ಸೆಣಸಾಡುತ್ತಲೇ ಕಳೆದ ಅಕ್ಟೋಬರಿನಲ್ಲಿ ತೀರಿಕೊಂಡರು.
ಸಾಯುವ ಮುನ್ನ ಸುಮಾರು ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದರು. ಮನೆಯಲ್ಲಿ ಸಾಯುತ್ತೇನೆ, ಊರಿಗೆ ಕರೆದುಕೊಂಡು ಹೋಗು ಎಂದು ಗೋಗರೆದರೂ, ವೈದ್ಯರ ಸಲಹೆಯಂತೆ, ಆಸ್ಪತ್ರೆಯ ಆರೈಕೆಯಲ್ಲಿ ಬದುಕಬಹುದೆಂಬ ನನ್ನ ಆಸೆಯಿಂದ ಹೆಣವಾಗಿ ಊರು ಸೇರಿದರು. ಕೊನೆಯ ಆಸೆ ಈಡೇರಿಸದ ‘ನನ್ನನ್ನು ಕ್ಷಮಿಸಿಬಿಡು ಅಮ್ಮಾ’ ಎಂದು ಕೇಳಿಕೊಳ್ಳುವುದಷ್ಟೇ ಉಳಿದಿರುವ ಮಾರ್ಗ.


Sunday 24 March 2013

ಈ. ರಾಘವನ್ ಅವರ ಮೊದಲ ಪುಣ್ಯ ತಿಥಿ


ಆತ್ಮೀಯರೇ,
ವಿಜಯಕರ್ನಾಟಕ ದಿನಪತ್ರಿಕೆಯ ಈ  ಹಿಂದಿನ ಸಂಪಾದಕರಾಗಿದ್ದ ಈ. ರಾಘವನ್ ಅವರು ತೀರಿಕೊಂಡು ಇಂದಿಗೆ ಒಂದು ವರ್ಷ.  ಅನೇಕ ಒಳ್ಳೆಯ ನೆನಪುಗಳನ್ನು ನಮ್ಮೊಂದಿಗೆ ಬಿಟ್ಟು ಹೋಗಿರುವ ಅವರನ್ನು ತುಂಬು ಪ್ರೀತಿಯಿಂದ ನೆನೆಯಬೇಕಾದ ದಿನವಿದು. ರಾಘವನ್ ಅವರಂಥ ವ್ಯಕ್ತಿಗಳು ಯಾವಾಗಲೂ ಮನದಲ್ಲೇ ಇರುತ್ತಾರೆ. ಅವರ ನೆನಪನ್ನು ಸಾರ್ವಜನಿಕವಾಗಿ ಮತ್ತೊಮ್ಮೆ ಹಂಚಿಕೊಳ್ಳಲು ಇದೊಂದು ನೆಪ  ಅಷ್ಟೆ.