ಹೆಜ್ಜೆ ಗೆಜ್ಜೆ :
ಈ ಬ್ಲಾಗ್ ನಲ್ಲಿರುವ ವಿಷಯ ಮತ್ತು ಚಿತ್ರಗಳ ಬಳಕೆಗೆ ಅನುಮತಿ ಕಡ್ಡಾಯ.
ಮತ್ತೊಂದು ಕ್ಷಣ ನನ್ನ ಬಗ್ಗೆ ಬದುಕು-ಬರಹ

Tuesday 20 July 2010

ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂ ಘಟಿಕೋತ್ಸವ:೧೯೯೯

೧೯೯೯ನೇ ಸಾಲಿನ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ ಪಡೆದು ಬೀಗಿದ ಕ್ಷಣ: ಕನ್ನಡ ಪತ್ರಿಕೋದ್ಯಮದ ಹೆಮ್ಮೆಯ ಸಂಪಾದಕ ವೈ.ಎನ್.ಕೆ ಮತ್ತು ಇಂಗ್ಲಿಷ್ ಪತ್ರಿಕೋದ್ಯಮದ ಇನ್ನೊಬ್ಬ ದಿಗ್ಗಜ ಎಂ.ಜೆ. ಅಕ್ಬರ್ ಅವರೊಂದಿಗೆ.

Monday 19 July 2010

ಕ್ರೈಸ್ಟ್ ಕಾಲೇಜ್ ಕವಿದಿನ: ನಾವೆಲ್ಲ ಕವಿಗಳಾದ ದಿನ


ಕವಿ ಕ್ಷಣ: ಕ್ರೈಸ್ಟ್ ಕಾಲೇಜ್ ಎಂದರೆ ರಾಜು ಮೇಷ್ಟ್ರು, ಬೇಂದ್ರೆ (ಜನ್ಮದಿನ  ಜ.೩೧) ಕವಿ ದಿನ. ಅದು ನಮ್ಮನ್ನೆಲ್ಲಾ ಕವಿಗಳು ಅಂತ ಪ್ರತಿ ವರ್ಷ ಘೋಷಿಸುತ್ತಿದ್ದ ದಿನ. ಹಿರಿಯ ಕವಿಗಳಿಂದ ಕವಿಗಳೆಂಬ ಆಭಿದಾನ ಪಡೆದು ನಾವು ಬೀಗಿದ ಕ್ಷಣಗಳು ಮರೆಯಲಾರದಂಥವು. ಸತತ ಮೂರು ವರ್ಷ ಕ್ರೈಸ್ಟ್ ಕಾಲೇಜ್ನ ಕಾವ್ಯ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಕ್ಷಣಗಳನ್ನು ಹಂಚಿಕೊಳ್ಳೋಣ ಎನಿಸಿತು.









ಮೊದಲ ವರ್ಷ: ಚನ್ನವೀರ ಕಣವಿ ಅವರೊಂದಿಗೆ. 






















ಎರಡನೇ ವರ್ಷ: ರಾಮಚಂದ್ರ ಶರ್ಮ ಅವರೊಂದಿಗೆ.

Wednesday 14 July 2010

'ಕಮ್ಯುನಿಸ್ಟ್ ಕಲ್ಪನೆಗೆ ಮೈಗಳ್ಳತನ ಮೂಲ' (ಡಾ. ಭೈರಪ್ಪ ಅವರ ೧೧ ವರ್ಷಗಳ ಹಿಂದಿನ ಸಂದರ್ಶನ)

‘ವಿಜಯ ಕರ್ನಾಟಕ’ ದಿನಪತ್ರಿಕೆ ಬಿಡುಗಡೆ ಮಾಡಿದ (೫ ಅಕ್ಟೋಬರ್ ೧೯೯೯) ಖ್ಯಾತ ಕನ್ನಡ ಸಾಹಿತಿ, ಚಿಂತಕ, ಎಸ್.ಎಲ್. ಭೈರಪ್ಪನವರು ಪತ್ರಿಕೆಯ ಬಳಗದೊಂದಿಗೆ ಅನೇಕ ವಿಷಯಗಳನ್ನು ಕುರಿತ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಆ ಅವಿಸ್ಮರಣೀಯ ಅನುಭವಕ್ಕೆ ನೀಡಿದ ಅಭಿವ್ಯಕ್ತಿ ಈ ಲೇಖನ. ಈ ಲೇಖನ ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪುಟ ೧, ಸಂಚಿಕೆ ೨ರಲ್ಲಿ ಪ್ರಕಟಗೊಂಡಿದೆ. ಈ ಸಂದರ್ಶನಕ್ಕೆ ಈಗ ೧೧ ವರ್ಷ. ಆನಂತರ ಈ ಸಂದರ್ಶನ ಆರ್.ಜಿ.ಹಳ್ಳಿ ನಾಗರಾಜ್ ಸಂಪಾದಕತ್ವದ ಅನ್ವೇಷಣೆಯಲ್ಲೂ ಪ್ರಕಟಗೊಂಡಿದೆ.

ಮಠ ಸಂಸ್ಕೃತಿ ಒಳ್ಳೆಯ ಬೆಳವಣಿಗೆ ಅಲ್ಲ. ಮಠಗಳಿಲ್ಲದಿದ್ದರೆ ಮುಂದುವರಿಯಲು ಸಾಧ್ಯವಿಲ್ಲ ಎಂಬ ಮನೋಭಾವ ಎಲ್ಲ ಸಣ್ಣ-ಪುಟ್ಟ ಜಾತಿಗಳಲ್ಲಿ ಬೆಳೆದುಬಿಟ್ಟಿದೆ. ಇದರಿಂದ ಒಗ್ಗಟ್ಟು ಸಾಧ್ಯವಾಗುತ್ತದೆ ಎಂಬುದೂ ಇದಕ್ಕೆ ಕಾರಣ.

ಮಠಗಳಲ್ಲಿ ಅನೇಕ ಒಳ್ಳೆಯ ಬೆಳವಣಿಗೆಗಳಾಗುತ್ತಿವೆ. ಎಲ್ಲ ಮಠಗಳಲ್ಲೂ ಮಕ್ಕಳಿಗೆ ಸಂಸ್ಕೃತ, ವೇದಾಧ್ಯಯನ ಮಾಡಿಸುತ್ತಿದ್ದಾರೆ. ಇದು ಪ್ರತಿಯೊಂದು ಜಾತಿಗಳಲ್ಲಿಯೂ ಪುರೋಹಿತರನ್ನು ಸೃಷ್ಟಿಸುತ್ತದೆ. ಹಾಗೆಯೇ ಹಿಂದುಳಿದ ವರ್ಗಗಳ ಮಠಗಳಲ್ಲಿ ಸ್ವಾಮೀಜಿಗಳು ಬ್ರಾಹ್ಮಣರಂತೆಯೇ ಬದುಕು ನಡೆಸುತ್ತಿದ್ದಾರೆ. ಈ ಜಾತಿಗಳು ಮಠಗಳನ್ನು ಕಟ್ಟಿಕೊಳ್ಳುವ ಮೂಲಕ ಮುಖ್ಯವಾಹಿನಿಗೆ ಬಂದಿವೆ. ಇದರಿಂದ ಜಾತಿಗಳ ನಡುವಿನ ಸಾಂಸ್ಕೃತಿಕ ವ್ಯತ್ಯಾಸಗಳು ಕಡಿಮೆಯಾಗುತ್ತವೆ. ಒಂದು ಕಾಲದಲ್ಲಿ ತಮಗೆ ವೇದ-ಉಪನಿಷತ್ತುಗಳನ್ನು ಅಭ್ಯಾಸ ಮಾಡಲು ಬಿಡುತ್ತಿಲ್ಲ ಎಂದು ದೂರುತ್ತಿದ್ದ ಕೆಳವರ್ಗಗಳಿಗೆ ಇವತ್ತು ಅಂಥ ಅವಕಾಶ ಒದಗಿ ಬಂದಿರುವುದು ಕ್ರಾಂತಿಯಲ್ಲವೆ?

ಇದು, ಜಾತಿಗೊಂದರಂತೆ ಮಠಗಳು ಹುಟ್ಟುತ್ತಿರುವುದಕ್ಕೆ ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪನವರ ಪ್ರತಿಕ್ರಿಯೆ.

ವೇದ-ಉಪನಿಷತ್ತುಗಳನ್ನು ಅಭ್ಯಾಸ ಮಾಡುವುದರಿಂದ ಎಲ್ಲ ಬ್ರಾಹ್ಮಣೀಕರಣವಾಗುತ್ತಿದೆ ಎಂದು ಇವತ್ತು ಅದೇ ಜನಾಂಗಗಳ ಕೆಲವರು ಹೇಳುತ್ತಿರುವುದಕ್ಕೆ ಅರ್ಥವಿಲ್ಲ. ಪ್ರತಿ ಜಾತಿಗೂ ತನ್ನದೇ ಆದ ಸಂಸ್ಕೃತಿ, ಐಡೆಂಟಿಟಿಯ ಪ್ರಶ್ನೆ ಬರುವುದಿಲ್ಲ. ಹಾಗಾದರೆ ಎಲ್ಲರ ನಿಜವಾದ ಸಂಸ್ಕೃತಿ ಯಾವುದೆಂಬ ಪ್ರಶ್ನೆ ಬರುತ್ತದೆ. ಅದು ಉಳಿಯಬೇಕೆಂದರೆ ನೀವು ಜಾತೀಯತೆಯನ್ನು ಬೆಂಬಲಿಸಬೇಕಾಗುತ್ತದೆ. ಶಂಕರಾಚಾರ್ಯರು ಹೇಳಿದ್ದು ಇದನ್ನೆ. ಆಧುನಿಕತೆ ಕೂಡಾ ಇದೇ ಕೆಲಸವನ್ನು ಮಾಡುತ್ತಿದೆ. ಗಂಡು, ಹೆಣ್ಣು, ಜಾತಿ, ಧರ್ಮದ ಪ್ರಶ್ನೆಗಳು ಕಡಿಮೆಯಾಗುತ್ತಿವೆ. ಸಾಂಸ್ಕೃತಿಕ ವ್ಯತ್ಯಾಸ ಇಲ್ಲವಾಗುತ್ತಿದೆ. ಒಟ್ಟಿನಲ್ಲಿ ಮಠಗಳು ಸಾಮಾನ್ಯ ಸಂಸ್ಕೃತಿಯ ಹುಟ್ಟಿಗೆ ಕಾರಣವಾಗುತ್ತಿವೆ. ಆದ್ದರಿಂದ ಸಾಂಸ್ಕೃತಿಕವಾಗಿ ನಾವು ಇಂದು ಒಡೆಯಲು ಸಾಧ್ಯವಿಲ್ಲ. ರಾಜಕೀಯ ಕಾರಣಗಳು ಮಾತ್ರ ನಮ್ಮನ್ನು ಒಡೆಯುತ್ತಿವೆ. ತಾವು ಜಾತಿ-ಧರ್ಮದ ವಿರೋಧಿಯಾಗಿದ್ದರೂ ಪರಂಪರೆಯಲ್ಲಿ ನಂಬಿಕೆ ಇಟ್ಟವರು ಎಂದು ಭೈರಪ್ಪ ಹೇಳಿದರು.

ಕನಿಷ್ಠ ಪದವಿಪೂರ್ವ ಮಟ್ಟದವರೆಗೆ ಪ್ರಾದೇಶಿಕ ಭಾಷೆಗಳು ಶಿಕ್ಷಣ ಮಾಧ್ಯಮವಾಗಬೇಕು ಎಂಬುದು ಭೈರಪ್ಪನವರ ಅಭಿಮತ. ಅನೇಕ ಘಟಕಗಳು ವ್ಯಕ್ತಿತ್ವವನ್ನು ರೂಪಿಸುವುದರಿಂದ ವ್ಯವಸ್ಥೆಯನ್ನು ರೂಪಿಸುವ ಸ್ಥಾನದಲ್ಲಿರುವ ಎಲ್ಲರಿಗೂ ಸಾಮಾಜಿಕ ಅರಿವುಗಳೂ, ಬದ್ಧತೆಗಳೂ ಇರಬೇಕು. ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣ ಕ್ರಮ ಬದಲಾಗಬೇಕು. ನಮ್ಮ ಭಾಷೆಯನ್ನು ಆ ಮೂಲಕ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಮಾತೃ ಭಾಷಾ ಶಿಕ್ಷಣ ಅತ್ಯಗತ್ಯ. ಆದರೆ ಶಿಕ್ಷಣ ನೀತಿಯನ್ನು ರೂಪಿಸುವ ರಾಜಕಾರಣಿಗಳಿಗೆ ಸಾಂಸ್ಕೃತಿಕ ಕಾರಣಗಳ ಮಹತ್ವ ತಿಳಿಯುವುದೇ ಇಲ್ಲ. ಆದ್ದರಿಂದ ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಹಳ್ಳಿಗಳಲ್ಲೂ ಕಾನ್ವೆಂಟ್ ತೆಗೆಯುವುದನ್ನು ಅಭಿವೃದ್ಧಿ ಎಂದುಕೊಂಡಿದ್ದಾರೆ.

ನಮ್ಮ ಪೋಷಕರೂ ಇಂಗ್ಲಿಷ್ನಲ್ಲಿ ಓದಿದ ತಕ್ಷಣ ಎಲ್ಲವೂ ಸಿಕ್ಕಿಬಿಡುತ್ತದೆಂಬ ಭ್ರಮೆಯಿಂದ ಹೊರಬರಬೇಕು. ಉದಾಹರಣೆಗೆ ಕಂಪ್ಯೂಟರ್ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನದಿಂದ ಇಂಗ್ಲಿಷ್ನಲ್ಲಿ ಮಾಡಬಹುದಾದ ಎಲ್ಲವನ್ನೂ ಕನ್ನಡದಲ್ಲೇ ಮಾಡಲು ಸಾಧ್ಯವಿರುವಾಗ ಇಂಗ್ಲಿಷ್ನ ಹಂಗೇಕೆ?

ಚಳವಳಿಗಳು ಎಲ್ಲ ಕಾಲಕ್ಕೂ ಪ್ರಸ್ತುತ. ಅಲ್ಲಿನ ಅನಾರೋಗ್ಯಕರ ಬೆಳವಣಿಗೆಗಳೆಂದರೆ ಅನಗತ್ಯ ಬದ್ಧತೆ. ಚಳವಳಿಗಳಿಗೆ ಸಿದ್ಧಾಂತವಿರಬೇಕು. ಆದರೆ ಅದು ಚಳವಳಿಯ ಮಿತಿಯೂ ಆಗಬಾರದು. ಪ್ರಗತಿಶೀಲರೂ, ಬಂಡಾಯದವರು ಬೈಗುಳದ ಮಾರ್ಗ ಹಿಡಿದಿದ್ದು ಸಮಾಜವನ್ನು ಒಡೆಯುವ ಕ್ರಿಯೆ. ಅನೇಕ ಚಳವಳಿಗಳ ವಿಫಲತೆಗೆ ದ್ವೇಷ, ಅನಗತ್ಯ ಆಕ್ರೋಶಗಳು ಕಾರಣ. ಹಾಗೆಯೇ ಒಂದು ಪತ್ರಿಕೆ ಕೂಡಾ. ಪತ್ರಿಕೆಗೆ ಸಾಮಾಜಿಕ ಜವಾಬ್ದಾರಿ ಇರಬೇಕು. ಪತ್ರಕರ್ತನಿಗೆ ಸ್ವಾತಂತ್ರ್ಯ ಇರಬೇಕು ಇದರಿಂದ ಹೊಸದು ಹುಟ್ಟಲು ಸಾಧ್ಯವಾಗುತ್ತದೆ. ಆದರೆ ಒಂದು ಸಿದ್ಧಾಂತಕ್ಕೆ ಬದ್ಧವಾಗತೊಡಗಿದಂತೆ ಕೆಲವೇ ಕೆಲವು ಜನರ ಕೈಗೆ ಸಿಕ್ಕು ಸಾಮಾನ್ಯ ಜನರಿಂದ ದೂರವಾಗತೊಡಗುತ್ತವೆ. ಹಾಗೆಯೇ ಸಾಯುತ್ತವೆ. ಪತ್ರಕರ್ತನ ಸುತ್ತಾ ಹೆಣೆದಿರುವ ‘ತಂತು’ ಕಾದಂಬರಿಯನ್ನು ಬರೆಯುವಾಗ ನಾವು ಭೇಟಿ ಮಾಡಿದ ಅನೇಕ ಪತ್ರಕರ್ತರು, ಪತ್ರಿಕಾಲಯಗಳ ಬಗ್ಗೆ ಭೈರಪ್ಪನವರು ಮಾತನಾಡಿದರು.

ಭಾರತದ ಕಮ್ಯೂನಿಸ್ಟ್ ಕಲ್ಪನೆ ಮೈಗಳ್ಳತನದಿಂದ ಬಂದದ್ದು. ಬಾಂಗ್ಲಾದಿಂದ ವಲಸೆ ಬಂದ ಸೋಮಾರಿಗಳಿಗೆ ಆಪ್ತವೆನಿಸಿದ್ದು ಕಮ್ಯುನಿಸ್ಟ್ ಸಿದ್ಧಾಂತ. ಪಶ್ಚಿಮ ಬಂಗಾಳವನ್ನು ಜ್ಯೋತಿಬಸು ೨೫ ವರ್ಷ ಆಳುವುದು ಮುಖ್ಯವಾಗುವುದಿಲ್ಲ. ಬದಲಾಗಿ ತನ್ನ ಅವಯಲ್ಲಿ ಮಾಡಿದ ಕೆಲಸಗಳು, ತಂದ ಸುಧಾರಣೆಗಳು ರಾಷ್ಟ್ರ ಕಟ್ಟುವಲ್ಲಿ ಮುಖ್ಯವಾಗುತ್ತವೆ. ಬದಲಾವಣೆಗಳಿಗೆ ಒಡ್ಡಿಕೊಳ್ಳದೆ ಒಂದು ಸಿದ್ಧಾಂತದ ಅಡಿಯಲ್ಲಿ ಅಭಿವೃದ್ಧಿಯನ್ನು ನಿರ್ಲಕ್ಷಿಸಿದರೆ ಸಂಪನ್ಮೂಲಗಳು ಬೇರೆ ಕಡೆ ಹರಿಯತೊಡಗುತ್ತವೆ. ಈ ದೃಷ್ಟಿಯಲ್ಲಿ ಕೇರಳ ಕೂಡಾ ಭಿನ್ನವಾಗುವುದಿಲ್ಲ.

ಉದಾರೀಕರಣ ವ್ಯಾಪಾರಕ್ಕೆ ಸಂಬಂಸಿದ್ದು. ಅದು ನಮ್ಮ ಸಂಸ್ಕೃತಿಗೆ ನೇರವಾಗಿ ಸಂಬಂಸಿದ್ದಲ್ಲ. ಆದರೆ ಅದರಿಂದ ನಮ್ಮ ಸಂಸ್ಕೃತಿಯ ಮೇಲಾಗುವ ಪರಿಣಾಮಗಳ ಬಗ್ಗೆ ತಕ್ಷಣ ಹೇಳಲು ಸಾಧ್ಯವಿಲ್ಲವಾದರೂ ಅಂಥ ವೈರುಧ್ಯಗಳ ನಡುವೆ ಬದುಕಬೇಕಾದ ಅನಿವಾರ್ಯ ಇದ್ದೇ ಇದೆ. ಸಂಸ್ಕೃತಿಗೆ ಸಂಬಂಸಿದ ಎಲ್ಲ ಬದಲಾವಣೆಗಳೂ ನಮ್ಮ ಪರಂಪರೆಗನುಗುಣವಾಗಿಯೇ ಆಗಬೇಕು. ಪಾಶ್ಚಾತ್ಯರೂ ಸೇರಿದಂತೆ ಎಲ್ಲರ ಕಡೆಯಿಂದ ಬರುವ ಬದಲಾವಣೆಗಳು, ತಕ್ಷಣಕ್ಕೆ ಹಿತವೆನಿಸಿದರೂ ನಾವು ಅದರಿಂದಲೇ ರೂಪಿತವಾಗುತ್ತೇವೆ ಎನ್ನುವುದು ಸುಳ್ಳು.

ನಮ್ಮ ಸಂಸ್ಕೃತಿ ಪರಂಪರೆಯನ್ನು ಬಿಟ್ಟು ಯೋಚಿಸುವುದೆಂದರೆ ನೀರಿನಿಂದ ಹೊರ ತೆಗೆದ ಮೀನಿನಂತೆ. ಉತ್ತಮವಾದದ್ದನ್ನು ಕೇಳುವುದು, ಪಡೆಯುವುದೇ ಬೇರೆ. ನಮ್ಮ ಸಂಸ್ಕೃತಿಯೇ ಬೇರೆ. ಉದಾರೀಕರಣಕ್ಕೆ ತೆರೆದುಕೊಂಡ ಜಪಾನ್ನಂಥ ದೇಶಕ್ಕೆ ತನ್ನದೇ ಆದ ದೇಶೀಯ ನೀತಿಯೊಂದನ್ನು ಅನುಸರಿಸಲು ಸಾಧ್ಯವಾದುದರಿಂದ ಅದು ಜಗತ್ತಿನ ಪ್ರಬಲ ರಾಷ್ಟ್ರಗಳ ಪೈಕಿ ಒಂದಾಯಿತು.

ಸ್ವದೇಶಿ ಎನ್ನುವ ವಿಚಾರ ತುಂಬಾ ದೊಡ್ಡದು. ಪ್ರತ್ಯೇಕ ಕ್ಷೇತ್ರಗಳನ್ನು ಕುರಿತು ಹೇಳಬೇಕಾಗುತ್ತದೆ. ೧೯೪೭ರ ನಂತರ ನೆಹರೂಗೆ ರಷ್ಯಾದ ಸಮಾಜವಾದ ಪ್ರಭಾವ ಬೀರಿತು. ಆಗ ಹಣ ಸಂಪಾದನೆ ಮಾಡುವುದೇ ಒಂದು ಪಾಪ ಎಂಬ ಸಿದ್ಧಾಂತವನ್ನು ಪ್ರತಿಪಾದನೆ ಮಾಡಲಾಯಿತು. ಈ ಥರದ ಫಿಲಾಸಫಿ ಆಗಿನ ಯುವ ತಲೆಮಾರುಗಳಲ್ಲಿ ಸ್ವ ಉದ್ಯೋಗದ ಪರಿಕಲ್ಪನೆಯನ್ನೇ ಹಾಳುಮಾಡಿತು. ಇದರಿಂದ ಎಲ್ಲ ವಿದ್ಯಾವಂತರೂ ಕೆಲಸ ಇಲ್ಲ ಅನ್ನೋಕೆ ಪ್ರಾರಂಭಿಸಿದರು. ಸ್ವಂತ ಉದ್ಯೋಗ ಮಾಡುತ್ತೇನೆ ಎನ್ನುವ ಒಂದು ಹುಡುಗನ ಪಾತ್ರವನ್ನು ಕತೆಯಲ್ಲಿ ಸೃಷ್ಟಿ ಮಾಡಿದರೆ, ವಿದೇಶಿ ವ್ಯಾಮೋಹಿ ಅಂತ ವಿಮರ್ಶಕರೇ ಗೇಲಿ ಮಾಡುತ್ತಿದ್ದರು. ಆದರೆ ಅದೇ ಥರದ ಕತೆ ಇವತ್ತು ಪ್ರಗತಿಪರವಾಗುತ್ತದೆ. ಪ್ರಸ್ತುತವಾಗುತ್ತದೆ.

ಮುಕ್ತ ಮಾರುಕಟ್ಟೆ, ಜಾಗತೀಕರಣಗಳು ಹೊಸ ಸಾಧ್ಯತೆಗಳನ್ನು ಹುಟ್ಟು ಹಾಕಿರುವಂತೆ ಅನೇಕ ರೀತಿಯ ಎರಡೂ ಥರದ ಬದಲಾವಣೆಗಳಿಗೆ ಕಾರಣವಾಗಿದೆ. ಸ್ವದೇಶಿ ವಾದವನ್ನು ಕುರಿತು ರಾಜಕಾರಣಿಗಳು, ಬುದ್ಧಿಜೀವಿಗಳು ಪರಸ್ಪರ ವಿರುದ್ಧ ದಿಕ್ಕಿನಿಂದ ಮಾತನಾಡುತ್ತಿದ್ದಾರೆ ಅನ್ನಿಸುವುದನ್ನೂ ಕೂಡಾ ಮೇಲೆ ವಿವರಿಸಿರುವ ಹಿನ್ನಲೆಯಲ್ಲಿ ನೋಡಬೇಕಾಗಿದೆ. ಆದ್ದರಿಂದಲೇ ತಕ್ಷಣಕ್ಕೆ ತೀರ್ಮಾನಕ್ಕೆ ಬರಲು ಅನೇಕ ಮಿತಿಗಳಿವೆ. ಹಾಗೆಯೇ ಗಾಂಯವರ ಸ್ವದೇಶಿವಾದ, ಅಹಿಂಸಾವಾದ ಕೂಡಾ. ಬ್ರಿಟಿಷರಲ್ಲಿ ಸಾಕಷ್ಟು ಸಮಾಜವಾದದ ಅರಿವು ಇದ್ದದ್ದರಿಂದ ಗಾಂಯವರ ಅಹಿಂಸಾವಾದ ಕೆಲಸ ಮಾಡಿತು. ಹಿಟ್ಲರನೇನಾದರೂ ನಮ್ಮನ್ನಾಳುತ್ತಿದ್ದರೆ ಗಾಂಜಿಯವರನ್ನು ಕೊಲ್ಲಿಸುತ್ತಿದ್ದ. ಆದ್ದರಿಂದ ಎಲ್ಲ ವಾದಗಳೂ ಎಲ್ಲ ಕಾಲಕ್ಕೂ ಪ್ರಸ್ತುತವಲ್ಲ. ಒಟ್ಟಿನಲ್ಲಿ ಎಲ್ಲ ವೈರುಧ್ಯಗಳ ನಡುವೆ ನಮ್ಮನ್ನು ರೂಪಿಸುವ ದಿಟ್ಟ ನಾಯಕರ ಕೊರತೆ ಇದೆ. ಎಲ್ಲರ ಕ್ಷೇಮಕ್ಕಾಗಿ ಎಲ್ಲವನ್ನೂ ಸ್ವೀಕರಿಸಬೇಕು. ಇದು ನಿಜವಾದ ಸ್ವದೇಶಿವಾದ ಎಂದರು ಭೈರಪ್ಪ.

Tuesday 6 July 2010

ಅಮ್ಮನಿಗೆ ಜೋಗುಳ

ಮೊದಲ ಬಾರಿಗೆ ಅಮ್ಮನನ್ನೇ ಕುರಿತ ಹಾಡುಗಳ ಸಿ.ಡಿ ಬಂದಿದೆ. ನಮ್ಮನ್ನೆಲ್ಲಾ ಜೋಗುಳ ಹಾಡಿ ಬೆಳಸಿರುವ ಅಮ್ಮಂದಿರಿಗೇ ಜೋಗುಳಗಳ ಮಾಲೆಯನ್ನು ಸಂಗೀತ ನಿರ್ದೇಶಕ ಎಸ್.ಆರ್. ರಾಮಕೃಷ್ಣ ಮತ್ತು ಗೆಳೆಯರು ಕಟ್ಟಿಕೊಟ್ಟಿದ್ದಾರೆ.  ಜಾನಪದ ಶೈಲಿಯಲ್ಲಿ ತುಂಬಾ ದೇಶಿ ಅನ್ನುವಂತೆ ರಾಗ ಸಂಯೋಜಿಸಿರುವುದೇ ಈ ಹಾಡುಗಳ ಹೆಗ್ಗಳಿಕೆ.

ವಚನಗಳಂತೆ ತುಂಬಾ ಪ್ರಖರವಾಗಿ ತಟ್ಟುವ ಅಮ್ಮನ ಚಿತ್ರಗಳು ಇಲ್ಲಿ ಝಗಮಗಿಸುತ್ತವೆ. ಅಮ್ಮನನ್ನು ಹೀಗೂ ನೆನೆಯಬಹುದೆಂದು ತೋರಿಸಿಕೊಟ್ಟಿರುವ ಈ ಅಪರೂಪದ ರೂಪಾಂತರದ ಹಾಡುಗಳಿಗೆ ಕಿವಿಯಾದರಷ್ಟೇ ಅವುಗಳ ಸೊಗಸನ್ನು ಅರಿಯಬಹುದು.

ಮೊಗಳ್ಳಿ ಗಣೇಶ್, ನಟರಾಜ್ ಬೂದಾಳ್, ನಾಗತಿಹಳ್ಳಿ ರಮೇಶ್ ಮುಂತಾದವರ ಪದ್ಯಗಳನ್ನು ಹೊಸ ರೀತಿಯಲ್ಲಿ ಕಟ್ಟಿಕೊಡಲಾಗಿದೆ. ನಾಗತಿಹಳ್ಳಿ ಅವರ ಅಮ್ಮ, ನೀಲಗಿರಿ ಪದದ ಕೆಂಪಕ್ಕನ ಹಾಡೂ ಇಲ್ಲಿ ಸೇರಿರುವುದು ವಿಶೇಷ. ಜನ್ನಿಯವರ ಕಂಚಿನ ಕಂಠ, ಮಂಗಳಾ, ಸುಪ್ರಿಯಾ ಆಚಾರ್ಯ, ಮುಖೇಶ್, ನಾಗಚಂದ್ರಿಕಾ, ರತ್ನ ಸಕಲೇಶಪುರ ಮುಂತಾದವರ ಬೇರೆ, ಬೇರೆ ಸ್ವರ ತಂತುಗಳು ತೀವ್ರವಾಗಿ ತಟ್ಟುತ್ತವೆ.

ಎಲ್ಲರೆಲ್ಲರ ಅಮ್ಮನೂ ನಮ್ಮಮ್ಮನೇ ಆಗುವ ಈ ಅಮ್ಮಂದಿರ ಮುಚ್ಚಟೆಯಿಂದ ವಂಚಿತರಾಗಬೇಡಿ.  ವ್ಯಾಪಾರಿ ದೃಷ್ಟಿ ಬಿಟ್ಟು ಪ್ರಯೋಗಾತ್ಮಕವಾಗಿ ಇದನ್ನು ಮಾಡಲಾಗಿದೆ. ಹಾಗಾಗಿ ಅನೇಕ ಪ್ರತಿಭಾವಂತರ ಸಂಗಮದಿಂದ ತುಂಬಾ ವೈವಿಧ್ಯತೆ ದಕ್ಕಿದೆ. ಈ ಮೂಲಕ ಕನ್ನಡ ಕೇಳುಗ ಜಗತ್ತಿಗೆ ಹೊಸ ಸಾಧ್ಯತೆಯನ್ನು ರಾಮ್ (೯೮೪೫೭೨೧೨೦೨) ತೋರಿಸಿಕೊಟ್ಟಿದ್ದಾರೆ.

 ೨೧ ಜೂನ್ ೨೦೦೯ರ  ವಿಜಯಕರ್ನಾಟಕದ  ಸಾಪ್ತಾಹಿಕ  ಪುರವಣಿಯಲ್ಲಿ ಪ್ರಕಟವಾಗಿದೆ. 

Monday 5 July 2010

ಪ್ರತಿಮೆಗಳ ಮೋಹ ಮತ್ತು ವಿರೋಧಿಸುವವರ ಧಾವಂತ

ಆಗಿ ಹೋಗಿರುವ ಮಹಾನ್ ವ್ಯಕ್ತಿಗಳನ್ನು ನೆನಪಿಸಿಕೊಳ್ಳುವುದು ಹೇಗೆ? ಕಾಲದ ಯಾವುದೋ ಹೊಡೆತಕ್ಕೆ ಸಿಲುಕಿ ಯಾವುದೇ ವ್ಯಕ್ತಿಯ ವಿಚಾರಗಳು ಪ್ರಸ್ತುತವಾಗಿದ್ದರೂ ಜನಮಾನಸದಿಂದ ಮರೆಯಾಗಿದ್ದರೆ ಅದನ್ನು ಜನರ ಬಳಿಗೆ ಕೊಂಡೊಯ್ಯುವುದು ಹೇಗೆ? ಹಾಗೆಯೇ  ಅವರ ವಿಚಾರಗಳನ್ನು ಜನರ ಬಳಿಗೆ ತರುವಾಗ ಇರುವ ಆಯ್ಕೆಗಳು ಯಾವುವು? ಅಂಥವರನ್ನು ಜನರು ನೆನಪಿಸಿಕೊಳ್ಳುವಂತೆ ಮಾಡುವುದು ಕೇವಲ ಪ್ರತಿಮೆ ಪ್ರತಿಷ್ಠಾಪಿಸುವುದರಿಂದ ಮಾತ್ರ ಸಾಧ್ಯವೆ?ಎಂಬಂಥ ಪ್ರಶ್ನೆಗಳನ್ನು ಈಗ ಕೇಳಿಕೊಳ್ಳಲೇಬೇಕಿದೆ.  ಕೆಲವರಿಗೆ ತಮ್ಮ ಯಾವ್ಯಾವುದೋ ಖಯಾಲಿ/ಖಾಯಿಶ್ಗಳಿಂದ ಯಾರದೋ ಪ್ರತಿಮೆಯನ್ನು ಎಲ್ಲೋ ಒಂದು ಕಡೆ ಹಾಕಿ ಪ್ರತಿಷ್ಠೆ ಬೆಳಸಿಕೊಳ್ಳುವಾಸೆ. ಇನ್ನೂ ಕೆಲವರಿಗೆ ಪ್ರತಿಮೆಗಳ ಮರೆಯಲ್ಲೇ ಬೆಳೆ ಬೆಳೆದುಕೊಳ್ಳುವಾಸೆ. ಮತ್ತೂ ಕೆಲವರಿಗೆ ಆ ಪ್ರತಿಮೆಗಳೇ ತಮ್ಮೆಲ್ಲಾ ಕುಕೃತ್ಯಗಳನ್ನು ಸಮರ್ಥಿಸಿಕೊಳ್ಳಲು ಇರುವ ಗುರಾಣಿ. ಬೆರಳ ತುದಿಯಲ್ಲಿ ಜಗತ್ತನ್ನಾಡಿಸುವ ಕಾಲದಲ್ಲಿ ಬದುಕುತ್ತಿರುವ ನಾವೆಲ್ಲಾ  ಇನ್ನೂ ಪ್ರತಿಮೆಗಳ ಪರ್ಯಾಯಕ್ಕೆ ಅಂಟಿಕೊಂಡಿರುವುದೇಕೆ? ಪ್ರತಿಮೆಗಳ ವಿಚಾರದಲ್ಲಿ ಇದುವರೆಗೆ ಜಗತ್ತಿನಲ್ಲಿ ಆಗಿರುವ ಅವಾಂತರ, ಗಲಭೆ, ವಾದ-ವಿವಾದಗಳೆಷ್ಟು? ಭಾರತದಂತಹ ಬಹುಸಂಸ್ಕೃತಿಯ ನಾಡಲ್ಲಿ ಪ್ರತಿಮೆಗಳು ತಂದಿಡುವ ಸಂಕಷ್ಟ-ಸಂದಿಗ್ಧಗಳೆಷ್ಟು? ಈಗ ನಡೆಯುತ್ತಿರುವುದೇನು? ಎಲ್ಲರಿಗೂ ತಮ್ಮ ತಮ್ಮ ಕೆಲಸ ಸಾಧನೆಗಷ್ಟೇ ಪ್ರತಿಮೆಗಳು ಬೇಕಾಗಿವೆ. ಆದ್ದರಿಂದಲೇ ಇವತ್ತು ಪ್ರತಿಮೆ ಸ್ಥಾಪನೆ ವಿಷಯಗಳು ಹೆಚ್ಚು ವಿವಾದಕ್ಕೀಡಾಗುತ್ತಿವೆ. 

ತಿರುವಳ್ಳುವರ್ ಮತ್ತು ಸರ್ವಜ್ಞ ಎಂಬ ಮಹಾನ್ ಮಾನವತಾವಾದಿಗಳು ಈಗ ಬೇಡದ ಕಾರಣಗಳಿಗಾಗಿ ಅನೇಕ ಜನರಿಗೆ ಆಹಾರವಾಗುತ್ತಿದ್ದಾರೆ. ತಿರುವಳ್ಳುವರ್  ಪ್ರತಿಮೆ ಸ್ಥಾಪಿಸಲು ಬಿಜೆಪಿ ಸರಕಾರ ತೋರುತ್ತಿರುವ ಕಾಳಜಿ(?) ಪ್ರಶ್ನಾತೀತವೇನಲ್ಲ. ಇದೇ ಗದ್ದಲಕ್ಕೆ ಕಾರಣವಾಗಿದೆ ಎಂಬುದನ್ನು ಮೇಲ್ನೋಟಕ್ಕೆ ಯಾರಾದರೂ ಊಹಿಸಬಹುದು. ತಮಿಳು ಗುಂಪುಗಳನ್ನು ವೋಟ್ ಬ್ಯಾಂಕ್ನಂತೆ ಉಪಯೋಗಿಸಿಕೊಳ್ಳುತ್ತಿದ್ದ ಮಂದಿ ತಮ್ಮ ವೋಟ್ ಬ್ಯಾಂಕ್ ಎಲ್ಲಿ ಕೈ ತಪ್ಪುತ್ತದೋ ಎಂಬ ಕಾರಣದಿಂದ ವಿವಾದಕ್ಕೆ ತೆರೆ ಮರೆಯಿಂದ ತುಪ್ಪ ಸುರಿಯುತ್ತಿರಬಹುದು. ಹಾಗೆಯೇ ಪ್ರತಿಮೆ ಬೇಡ ಎಂದು ವಾದಿಸುತ್ತಿರುವ ಕೆಲವರಿಗೆ ತಾವು ಮಿಂಚಲು ಸೂಕ್ತ ವಿಷಯಗಳೇ ಇಲ್ಲವಾಗಬಹುದೆಂಬ ಭಯವೂ ಇರಬಹುದು.

ಎರಡು ರಾಜ್ಯಗಳಿರಲಿ, ಎರಡು ದೇಶಗಳ ನಡುವೆ ಕೂಡ ಎಂಥ ಸಮಸ್ಯೆಗಳಿದ್ದರೂ ಸಾಂಸ್ಕೃತಿಕ ವಿನಿಮಯ ಎಲ್ಲ ದೃಷ್ಟಿಯಿಂದಲೂ ನಡೆಯುತ್ತಲೇ ಇರಬೇಕು. ಇದು ಬೆಳೆಯುತ್ತಿರುವ ನಾಗರಿಕ ಸಮಾಜವೊಂದರ ಆರೋಗ್ಯಕರ ಬೆಳವಣಿಗೆಗೆ ಅತ್ಯಗತ್ಯ. ಸಂಸ್ಕೃತಿಯ ಹರಿವಿಗೆ ಯಾವುದೇ ಕಾರಣ ನೀಡಿ ತಡೆಯೊಡ್ಡಿದರೂ ಅದು ಹೋಗುತ್ತಲೂ ಬರುತ್ತಲೂ ಕೊಯ್ಯುವ ಗರಗಸದಂತೆ ನಷ್ಟವುಂಟುಮಾಡುತ್ತದೆ. ಅದೊಂದು ಮುಂದಿನ ಪೀಳಿಗೆಗೆ ನಾವು ಮಾಡುವ ದ್ರೋಹವೇ ಸರಿ. ಇಲ್ಲದಿದ್ದರೆ ಭಾರತ ಮತ್ತು ಪಾಕ್ ನಡುವಿನ ಬಸ್ ಪ್ರಯಾಣ ಪುನಾರಂಭ ಮಾಡಿದ್ದನ್ನು ನಾವೆಲ್ಲ ಏಕೆ ಅಷ್ಟೊಂದು ಸಂಭ್ರಮದಿಂದ ಸ್ವಾಗತಿಸಿದ್ದೆವು? ಭಾರತದ ಸಿನಿಮಾ, ಪಾಕ್ನ ಸಂಗೀತ ಎರಡು ದೇಶಗಳ ನಡುವಿನ ಎಲ್ಲ ಕಾರಣಗಳನ್ನೂ ಮೀರಿ ಭಾರತೀಯರು ಮತ್ತು ಪಾಕಿಸ್ತಾನಿಗಳನ್ನು ಅನೇಕ ಸ್ತರಗಳಲ್ಲಿ ಒಟ್ಟಾಗಿಟ್ಟಿಲ್ಲವೇ? ತಮಿಳುನಾಡು ಮತ್ತು ಕರ್ನಾಟಕದ ನಡುವಿನ ಕೆಲ ವಿವಾದಗಳನ್ನು ದೇಶಗಳ ನಡುವಿನ ಸಮಸ್ಯೆಗಳಿಗೆ ಹೋಲಿಸಲಾದೀತೆ? ಎರಡು ದೇಶಗಳ ನಡುವೆ ಇರುವಂಥ ವಾತಾವರಣ ನಮ್ಮ ಎರಡೂ ರಾಜ್ಯಗಳ ನಡುವೆ ಇದೆಯೇ? ಹಾಗೆಂದು ಭ್ರಮಿಸಿದರೆ ಅದಕ್ಕಿಂತ ಹಾಸ್ಯಾಸ್ಪದವಾದದ್ದು ಇದೆಯೆ? ಎರಡೂ ರಾಜ್ಯಗಳ ನಡುವಿನ ಸೌಹಾರ್ದವನ್ನು ಕದಡುವಂತೆ ವಿಷಯವನ್ನು ದೊಡ್ಡದು ಮಾಡುತ್ತ, ಪ್ರತಿಮೆಗಳ ಅನಾವರಣವನ್ನು ವಿರೋಧಿಸುತ್ತಿರುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಆದ್ದರಿಂದಲೇ ವಿಶಾಲ ದೃಷ್ಟಿಯಲ್ಲಿ ನೋಡಿದಾಗ ಪ್ರತಿಮೆಗಳ ಸಂಸ್ಕೃತಿಯೇ ಸರಿಯಲ್ಲವೆನಿಸಿದರೂ ಸೌಹಾರ್ದಕ್ಕೆ ವೇದಿಕೆಯಾಗಬಹುದೆಂಬ ಕಾರಣಕ್ಕೆ ಒಪ್ಪಬೇಕಾಗುತ್ತದೆ.

ಇನ್ನು ಒಂದೇ ದೇಶದ ಒಂದೇ ಭಾಷಾ ಮೂಲದಿಂದ ಬಂದಿರುವ ತಮಿಳುನಾಡು ಮತ್ತು ಕರ್ನಾಟಕ ಭಾರತದ ಇತರ ಯಾವುದೇ ಎರಡು ರಾಜ್ಯಗಳಿಗೆ ಹೋಲಿಸಿ, ಯಾವುದೇ ದೃಷ್ಟಿಯಿಂದ ನೋಡಿದರೂ  ಅವಿಭಾಜ್ಯವಾದ ಗಟ್ಟಿ ಸಂಬಂಧವನ್ನೇ ಹೊಂದಿವೆ. ಆದ್ದರಿಂದ ಎರಡೂ ರಾಜ್ಯಗಳು ಒಂದೇ ಮರದ ರೆಂಬೆಗಳು. ಇದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಪ್ರತಿಮೆ ಸ್ಥಾಪನೆಯಾದ ಮಾತ್ರಕ್ಕೆ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಅರ್ಥವಲ್ಲ. ನಾವು ಪರಸ್ಪರ ಹತ್ತಿರ ಬರಲು ಒಂದು ವೇದಿಕೆಯಾಗಿ ಇದನ್ನು ಬಳಸಿಕೊಳ್ಳಬಹುದು. ಪ್ರತಿಮೆ ಸ್ಥಾಪಿಸುವುದಿಕ್ಕಿಂತ ಎಷ್ಟೋ ಪಟ್ಟು ಮಿಗಿಲಾಗಿ ಈ ಮಹಾನ್ ವ್ಯಕ್ತಿಗಳನ್ನು, ಅವರ ವಿಚಾರಧಾರೆಯನ್ನು ಜನರಿಗೆ ಮುಟ್ಟಿಸುವ ಮಾರ್ಗಗಳಿವೆ ಎಂಬುದೂ ನಿಜ. ಹಾಗಂತ ಪ್ರತಿಮೆ ಅನಾವರಣ ವಿರೋಧಿಸುತ್ತಿರುವವರ ವಾದಗಳಲ್ಲಿ ಕೂಡ ಯಾವುದೇ ದೂರದೃಷ್ಟಿ ಮತ್ತು ಬಲವಾದ ಕಾರಣಗಳಿಲ್ಲದಿರುವುದರಿಂದ ಸರಕಾರದ ನಿಲುವನ್ನು ನಾವು ಬೆಂಬಲಿಸಬೇಕಷ್ಟೆ. ಸರಕಾರ ಈ ಹೊತ್ತನ್ನೇ ಯಾಕೆ ಆಯ್ಕೆ ಮಾಡಿಕೊಂಡಿದೆ ಎಂಬುದಂತೂ ಯಾವಾಗಲೂ ಪ್ರಶ್ನಾರ್ಥಕವಾಗಿಯೇ ಉಳಿಯುತ್ತದೆ. ಹಾಗೆಯೇ ಪ್ರತಿಮೆ ಅನಾವರಣ ಮಾಡುವುದರಿಂದ ಕನ್ನಡದ ನೆಲ-ಜಲಕ್ಕೆ ಆಗುವ ಹಾನಿಯ ಬಲವಾದ ಕಾರಣಗಳನ್ನು ಎತ್ತಿ ಹೇಳದೆ, ರಾಜಕೀಯಕ್ಕೆ ಸಂಬಂಧಿಸಿದ ನೀತಿಸಂಹಿತೆ ಕಾರಣವನ್ನು ಮುಂದು ಮಾಡಿ ಹೋರಾಡುತ್ತಿರುವವರಿಗೆ ನಾಡಿನ ಬಗ್ಗೆ ಯಾವ ಕಾಳಜಿ ಇದೆ ಎಂದು ಪ್ರಶ್ನಿಸಲೇಬೇಕಾಗುತ್ತದೆ. ಹಾಗಾದರೆ ಈ ಸಂಘಟನೆಗಳು ನೀತಿಸಂಹಿತೆ ಕಾಪಾಡಲು ಹೋರಾಡುತ್ತಿವೆಯೇ? ಇದು ಅವುಗಳಿಗಿರುವ ವಿಶಾಲ ದೃಷ್ಟಿಯ ಕೊರತೆಯನ್ನು ತೋರಿಸುತ್ತದೆ ಅಥವಾ ಅವು ಸದ್ಯದ ದೃಷ್ಟಿ ಇಟ್ಟುಕೊಂಡು ಕೆಲಸ ಮಾಡುತ್ತಿವೆ ಎನ್ನಬೇಕಾಗುತ್ತದೆ.

ರಾಜಕಾರಣಿಗಳು ಏನೇ ಮಾಡಿದರೂ ಅದರಿಂದ ಪ್ರತಿಫಲ ಪಡೆಯಲು ಯಾವಾಗಲೂ  ಪೈಪೋಟಿ ನಡೆಸುತ್ತಿರುತ್ತಾರೆ. ಆದ್ದರಿಂದಲೇ ಪ್ರತಿಫಲವಿಲ್ಲದೆ ಅವರು ಏನನ್ನೂ ಮಾಡುವುದಿಲ್ಲ. ಅದನ್ನು ಮೀರಿದ ಕಾಳಜಿ ಯಾವ ರಾಜಕಾರಣಿಯಲ್ಲೂ ಇರುವುದಿಲ್ಲ. ನಾಳೆ ಇದೇ ಸರ್ವಜ್ಞನ ಪ್ರತಿಮೆಯನ್ನು ಉತ್ತರಪ್ರದೇಶದಲ್ಲಿಯೋ, ಗುಜರಾತಿನಲ್ಲಿಯೋ ಸ್ಥಾಪನೆ ಮಾಡಲು ಮತ್ತು ಆ ರಾಜ್ಯಗಳ ಮಹಾನ್ ಚೇತನಗಳ ಪ್ರತಿಮೆಯನ್ನು ಕರ್ನಾಟಕದಲ್ಲಿ ಸ್ಥಾಪನೆ ಮಾಡಲು ಆಯಾ ರಾಜ್ಯಗಳ ಇಬ್ಬರು ಮುಖ್ಯಮಂತ್ರಿಗಳ ನಡುವೆ ಒಂದು ಫೋನ್ ಕಾಲ್ನಲ್ಲಿ ಕೆಲಸ ಮುಗಿದುಹೋಗಬಹುದು. ಅದರಿಂದ ಅವರಿಗೆ ಆಗುವ ಪ್ರಯೋಜನವೇನು? ಮೊನ್ನೆ ವಿದ್ವಾಂಸರೊಬ್ಬರು, ದೇಶದ ಯಾವುದೋ ವಿಶ್ವವಿದ್ಯಾಲಯದಲ್ಲಿರುವ ಅಧ್ಯಯನ ಪೀಠದಲ್ಲಿ ಕನ್ನಡದ ಉಪನ್ಯಾಸಕರು, ನಿರ್ದೇಶಕರಿಲ್ಲ ಎಂದು ನೋವಿನಿಂದ ಬರೆದಿದ್ದರು. ಇದನ್ನು ತುಂಬಲು ಸರಕಾರವೆಂಬ ದೈತ್ಯ ಸಂಸ್ಥೆಗೆ ಎಷ್ಟು ವೇಳೆ ಬೇಕು? ಗಡಿನಾಡಲ್ಲಿ ಇವತ್ತಿಗೂ ಕನ್ನಡ ಶಾಲೆಗಳಿಗೆ ಸರಿಯಾದ ಸಮಯದಲ್ಲಿ ಪುಸ್ತಕಗಳು ಸರಬರಾಜಾಗುವುದಿಲ್ಲ. ಆದರೆ ಅದ್ಯಾವುದೂ ನಾವಂದುಕೊಂಡಷ್ಟು ಸುಲಭದಲ್ಲಿ ಆಗುವುದಿಲ್ಲ. ಏಕೆಂದರೆ ಅದರಿಂದ ರಾಜಕಾರಣಿಗಳಿಗೆ ದೊಡ್ಡಮಟ್ಟದ ಲಾಭ ಇಲ್ಲ.  ಕೇವಲ ಪ್ರತಿಮೆಯೊಂದರಿಂದಲೇ ಎಲ್ಲವನ್ನೂ ಸಾಧಿಸಿಬಿಡುವುದು ಸಾಧ್ಯವಿದ್ದಿದ್ದರೆ ಸಾಲುಮರಗಳ ಬದಲು ರಸ್ತೆಯುದ್ದಕ್ಕೂ ಪ್ರತಿಮೆಗಳನ್ನು ನಿಲ್ಲಿಸಲು ಮುಂದಾಗುವ ಜನರಿದ್ದಾರೆ. ಹಾಗಾಗಿಯೇ ಮುಖ್ಯಮಂತ್ರಿಯೊಬ್ಬರು ಯಾವುದೇ ನಾಚಿಕೆ ಇಲ್ಲದೆ ತಮ್ಮದೇ ಪ್ರತಿಮೆಗಳನ್ನು ಸ್ಥಾಪಿಸಿಕೊಂಡರೆ ಅದನ್ನು ಅವರಿಗೆ ಮುಖಕ್ಕೆ ಹೊಡೆದಂತೆ ಯಾವುದೇ ರಾಜಕಾರಣಿಯೂ ಹೇಳಲಾರ. ಏಕೆಂದರೆ ಆ ಮುಖ್ಯಮಂತ್ರಿಯ ಜಾತಿ ವೋಟುಗಳು ಕೈಬಿಡಬಹುದು ಎಂಬ ಭಯ ಮತ್ತು ತಾವೂ ಇದೇ ರೀತಿ ಮಾಡುವ ಅವಕಾಶವನ್ನು ಮುಕ್ತವಾಗಿರಿಸಿಕೊಳ್ಳಲಿಕ್ಕೆ ಹೇಸದವರು. ಇನ್ನೊಂದು ತಮಾಷೆ ಎಂದರೆ ಕೇವಲ ಏಳೆಂಟು ವರ್ಷಗಳ ಹಿಂದೆ ಕುಟುಂಬ ರಾಜಕಾರಣವನ್ನು ವಿರೋಧಿಸಿದ ಪಕ್ಷಗಳೆಲ್ಲವೂ ಇವತ್ತು ಕುಟುಂಬ ರಾಜಕಾರಣ ಮಾಡುತ್ತಿಲ್ಲವೇ? ಹಾಗೆಯೇ ಇದೂ ಕೂಡ.

ಇದೆಲ್ಲ ಏನೇ ಇರಲಿ, ನಾಳೆ ತಿರುವಳ್ಳುವರ್ ಮತ್ತು ಸರ್ವಜ್ಞನ ಬಗ್ಗೆ ಒಂದು ಸಾಲಿನ ಮಾಹಿತಿ ಕೂಡ ಇರದವನೊಬ್ಬ ಒಂದು ಕಲ್ಲನ್ನೋ, ಸಗಣಿಯನ್ನೋ, ಚಪ್ಪಲಿಯನ್ನೋ ಕೊನೆಗೆ ಒಂದು ಹಿಡಿ ಮಣ್ಣನ್ನೋ ಪ್ರತಿಮೆಯೆಡೆಗೆ ತೂರಿದರೂ  ಸಾಕು, ಕೊನೆಗೆ ಅದೇ ದೊಡ್ಡ ಗಲಾಟೆಯಾಗಿ ಸಂಕಷ್ಟಗಳನ್ನು ತಂದೊಡ್ಡಬಹುದು. ಅತ್ಯಂತ ಸೂಕ್ಷ್ಮ ಅನ್ನಬಹುದಾದ, ಬಗೆಹರಿಸಿಕೊಳ್ಳಲಾಗದ ಯಾವುದೇ ಸಮಸ್ಯೆಗಳು ನಮ್ಮ ರಾಜ್ಯಗಳ ನಡುವೆ ಇಲ್ಲದಿರಬಹುದು. ಆದರೆ ದುರುದ್ದೇಶದಿಂದ ಅಮಾಯಕರನ್ನು ಮತ್ತು ಕಿಡಿಗೇಡಿಗಳನ್ನು ಎತ್ತಿ ಕಟ್ಟುವವರಿಗೆ ಬೇರೆ ಯಾವುದೂ ಮುಖ್ಯವಾಗುವುದಿಲ್ಲ. ಉರಿಯುವ ಮನೆಯಲ್ಲಿ ಗಳ ಹಿರಿಯುವುದಷ್ಟೇ ಅವರ ಕೆಲಸ. ಆದ್ದರಿಂದ ಯಾವ ಉದ್ದೇಶದಿಂದ ಪ್ರತಿಮೆಗಳನ್ನು ಅನಾವರಣ ಮಾಡಲಾಗುತ್ತಿದೆಯೋ ಅದರ ಉದ್ದೇಶವೇ ಬುಡಮೇಲಾಗುವ ಅಪಾಯವೂ ಇದೆ.  ಎಲ್ಲ ಮಹಾನ್ ವ್ಯಕ್ತಿಗಳನ್ನೂ ಜಾತಿ, ಧರ್ಮ ಅಥವಾ ಪ್ರಾಂತ್ಯಕ್ಕೆ ಸೀಮಿತಗೊಳಿಸಿಕೊಂಡು ನೋಡುವಂತಾದರೆ ಸಣ್ಣ-ಪುಟ್ಟ ಗಲಾಟೆಗಳಾದರೂ ಅದನ್ನು ಕೆಲವೇ ಜನ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಬಲ್ಲರು. ಹಾಗಂತ ನಾಳೆ ಏನೋ ಆಗಿಬಿಡಬಹುದೆಂದು ಕೆಲವು ಉಪಕ್ರಮಗಳನ್ನು ತೆಗೆದುಕೊಳ್ಳದೇ ಇರುವುದೂ ತಪ್ಪು. ಇದರಿಂದ ತೋಳ ಬರಬಹುದೆಂಬ ಭಯಕ್ಕೆ ಕುರಿಸಾಕಣೆಯೇ ಬೇಡ ಅಂದಂತೆ ಆಗುತ್ತದೆ.  ಈ ಪ್ರತಿಮೆಗಳ ಬದಲು ಈ ಇಬ್ಬರು ಮಹಾನ್ ವ್ಯಕ್ತಿಗಳು ಸಾಹಿತ್ಯದ ಮೂಲಕ ಹೇಳಿದ್ದು ಮತ್ತು ಸಾಧಿಸಿದ್ದನ್ನು ಪುಸ್ತಕ ರೂಪದಲ್ಲಿ ಆಯಾ ರಾಜ್ಯಗಳ ಭಾಷೆಯಲ್ಲಿ ತಂದು ಅಥವಾ ಈಗಾಗಲೇ ತಂದಿರುವುದನ್ನು ಮತ್ತೊಮ್ಮೆ ಮುದ್ರಿಸಿ ಹಂಚುವುದು ಇನ್ನಷ್ಟು ಅರ್ಥಪೂರ್ಣ ಕೆಲಸಗಳಿಗೆ ನಾಂದಿ ಹಾಡುತ್ತಿತ್ತೇನೋ ಅನಿಸುತ್ತದೆ. 


೮ ಆಗಸ್ಟ್  ೨೦೦೯ರ  ವಿಜಯಕರ್ನಾಟಕದ ಒಪೆಡ್ ಪುಟದಲ್ಲಿ ಪ್ರಕಟವಾಗಿದೆ.

ವಿಮರ್ಶೆ ಗುಂಪುಗಾರಿಕೆಯಾಗಬಾರದು: ಚದುರಂಗ (೧೫ ವರ್ಷದ ಹಿಂದಿನ ಸಂದರ್ಶನ)


ಚದುರಂಗ(ಸುಬ್ರಮಣ್ಯ ರಾಜೆ ಅರಸ್)ರು ಒಬ್ಬ ವಿಶಿಷ್ಟ  ಗದ್ಯ ಶೈಲಿಯ ಲೇಖಕ. ಇವರು ತಮ್ಮದೇ ಶೈಲಿಯಿಂದ ಓದುಗರನ್ನು ಬೆರಗುಗೊಳಿಸುತ್ತಾರೆ. ಇವರು ಸುಮಾರು ಅರ್ಧ ಶತಮಾನದಿಂದ ಬರೆಯುತ್ತಿದ್ದು ಬೆರಳೆಣಿಕೆಯಷ್ಟು ಕೃತಿಗಳನ್ನು ಮಾತ್ರ ಪ್ರಕಟಿಸಿದ್ದರೂ ಓದುಗರ ಹೃದಯದಲ್ಲಿ ಸ್ಥಾನ ಪಡೆದಿರುವುದು ಸರ್ವವಿತ.  ಇವರು ತಮ್ಮ ಎಂಬತ್ತರ ಹರೆಯದಲ್ಲೂ ಉತ್ಸಾಹದಿಂದ ತಿಪಟೂರಿನ ಕಲ್ಪತರು ವಿದ್ಯಾಸಂಸ್ಥೆಯ ಕಾಲೇಜುಗಳ ಪ್ರತಿಭಾಶ್ರೀ -೯೫ರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಸಂದರ್ಶನ.

*ನೀವು ಶಿಕ್ಷಣ ಪಡೆಯುವಾಗ ಸಾಮಾಜಿಕ ಪರಿಸ್ಥಿತಿ ಹೇಗಿತ್ತು? ಮತ್ತು ನಿಮಗೆ ಸಾಹಿತ್ಯದ ಒಲವು ಹೇಗುಂಟಾಯಿತು? 
- ಮೈಸೂರಿನಲ್ಲಿ ರಾಜರ  ಆಡಳಿತವಿದ್ದಾಗ ನಾನಿನ್ನೂ  ಬಾಲಕ. ನಾನು ಮೈಸೂರಿನ ಹತ್ತಿರದ ಕಲ್ಲಹಳ್ಳಿಯವನು. ತಂದೆ ಕೃಷಿಕ, ಅಣ್ಣ ಲಾಯರ್,  ದೇವರಾಜ ಅರಸರ ಹತ್ತಿರದ ಸಂಬಂ. ಶಿಕ್ಷಣ ಕೂಲಿ ಮಠದಿಂದ ಆರಂಭ. ನಂತರ ಮೈಸೂರಿನ ರಾಯಲ್ ಸ್ಕೂಲಿಗೆ ಸೇರಿದೆ. ಆನಂತರ ಆ ಶಾಲೆಯ ವ್ಯವಸ್ಥೆ ಇಷ್ಟಪಡದೆ ಪಬ್ಲಿಕ್ ಸ್ಕೂಲಿಗೆ ಸೇರಿದೆ. ಮುಂದೆ ಪೂನಾದಲ್ಲಿ ‘ಲಾ’ ಅಭ್ಯಾಸ. ಅನಂತರ ಬರಹ ಪ್ರಾರಂಭ. ಪ್ರೇಮ ವಿವಾಹದ ಕಾರಣದಿಂದ ಮನೆಯಲ್ಲಿ ಆಗ ಆದ ಘರ್ಷಣೆಯಿಂದ ಸಾಹಿತ್ಯದ ಕಡೆಗೆ ಒಲವು, ಆವತ್ತು ಸಾಹಿತಿಗಳನ್ನು ಗೌರವಿಸುತ್ತಿದ್ದರು. ಸಾಮರಸ್ಯವಿತ್ತು. ಇಂದು ವಿಮರ್ಶೆ ಹೆಚ್ಚಾಗಿದೆ. ಇದು ಒಳ್ಳೆಯದು, ಒಳ್ಳೆ ವಿಮರ್ಶೆ ಬರಬೇಕು. ಆದರೆ ಗುಂಪುಗಾರಿಕೆಯಾಗಬಾರದು. ನಾನು ಮಾಸ್ತಿಯವರ ಕಥೆಗಳಿಂದ ರೂಪುಗೊಂಡವನು. ಅನಂತರ ಲೋಹಿಯಾ ಮತ್ತು ಕಮ್ಯುನಿಸ್ಟ್ ಸಿದ್ಧಾಂತಗಳಿಂದ ಬರೆಯಲು ಆರಂಭಿಸಿದೆ.

* ವೈಶಾಖದ ಕಾದಂಬರಿಯ ಪ್ರೇರಣೆ ಏನು? -ನನ್ನ ಹಳ್ಳಿಯ ಬದುಕಿನ ಗಾಢವಾದ ಸಂಬಂಧ. * ಈ ಕೃತಿಯ ಬಗೆಗಿನ ಪ್ರತಿಕ್ರಿಯೆ ಹೇಗೆ?
-ನಿರೀಕ್ಷೆ ಮೀರಿದ್ದು, ಕುವೆಂಪು ರುದ್ರಾವಸ್ತುವೆಂದರು. ರಾಜೀವ್ ತಾರಾನಾಥ್ ತುಂಬಿದ ಬುಟ್ಟಿ ಎಂದರು. ಈ ಕೃತಿಗೆ - ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿರುವುದಲ್ಲದೆ, ಈ ಕೃತಿ ತಮಿಳಿಗೂ ತರ್ಜುಮೆಯಾಗಿ ಆ ಕೃತಿಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ.

ಬಂಡಾಯ ಸಾಹಿತ್ಯದ ಪ್ರಕಾರ ನಿರಂತರ ಸಾಹಿತ್ಯ ಪ್ರಾಕಾರವೆನ್ನುವುದಕ್ಕೆ ನೀವು ಕೊಡುವ ಕಾರಣಗಳೇನು? 
-ಬಂಡಾಯ ನಿರಂತರ. ನವೋದಯದ ಪ್ರಕೃತಿಗೆ ಚಿತ್ರಣ ಜಾಸ್ತಿಯಾದಾಗ ವಿಚಾರಕ್ಕೆ ಮತ್ತು ಬದುಕಿಗೆ ಒತ್ತು ಕೊಟ್ಟು ಪ್ರಗತಿಶೀಲ ಪ್ರಾರಂಭವಾಯಿತು. ಪ್ರಗತಿಶೀಲದಲ್ಲಿ ಭಾಷೆಗೆ ಪ್ರಾಮುಖ್ಯವಿಲ್ಲದೆ ಸೊರಗಿತು. ಆಗ ನವ್ಯ ಸಾಹಿತ್ಯ ಹುಟ್ಟಿತು. -ನವ್ಯ ಸಾಹಿತ್ಯದಲ್ಲಿ ಭಾಷೆಯ ಪ್ರಾಮುಖ್ಯತೆ ಹೆಚ್ಚಾಗಿದ್ದು, ದೋಷವೆನಿಸಿತು. ಆಗ ಮತ್ತೆ ಬಂಡಾಯ ಮತ್ತು ದಲಿತ ಸಾಹಿತ್ಯ...,

* ತಮ್ಮ ‘ಸರ್ವಮಂಗಳ’ ಕಾದಂಬರಿಯನ್ನು ತಾವೇ ನಿರ್ದೇಶಿಸಿ ಚಲನಚಿತ್ರವಾಗಿಸಿದ ಅನುಭವವೇನು?
-ಬೇರೆ ನಿರ್ದೇಶಕರು ಕೆಡಿಸುವುದು ಬೇಡ ಎಂದು ನಾನೇ ಕೆಡಿಸಿದೆ (ನಗು) * ಇವತ್ತಿನ ಸಾಮಾಜಿಕ ಮತ್ತು ರಾಷ್ಟ್ರೀಯ ಸಮಸ್ಯೆಗಳಿಗೆ ಸಾಹಿತ್ಯ ಸಮರ್ಥವಾಗಿ ಸ್ಪಂಸಿದೆಯೇ? -ಭಾರತ ವಿಶಾಲವಾದ ದೇಶ. ಭಾಷೆಗಳು ಹಲವು ಅಲ್ಲಲ್ಲಿ ಸ್ಪಂದನವಾಗಿದೆ. ನನಗೆ ತಿಳಿದಿರುವ ಹಾಗೆ ನಮ್ಮಲ್ಲಿಯೂ ಸಾಕಷ್ಟು ಸ್ಪಂದನ ಆಗಿದೆ.

*ಇಂದಿನ ರಾಜಕೀಯ ವಿದ್ಯಮಾನಗಳ ಬಗ್ಗೆ ತಮ್ಮ ಅಭಿಪ್ರಾಯ? 
 -ಶೇಷನ್ ಗುರುತಿನ ಚೀಟಿ ಹಂಚುವ ಕಾರ್ಯಕ್ರಮ ಹಾಕಿಕೊಂಡಿರುವುದು ರಾಜಕೀಯಕ್ಕೆ ಉತ್ತಮ ತಿರುವು ಕೊಡಬಹುದು.  *ತಾವು ಗದ್ಯವನ್ನು ಆರಿಸಿಕೊಂಡಿದ್ದಕ್ಕೆ ಕಾರಣ? -ನಾನು ಕವಿಯಲ್ಲ ಅದಕ್ಕೆ. *ಇತ್ತೀಚೆಗೆ ಒಂದು ಕವನ ಸಂಕಲನ ಬಂದಿದೆಯಲ್ಲ? -ಅದು ಒಂದು ಬದಲಾವಣೆ ಅಷ್ಟೆ.  *ಜೀವನದ ಹಾಗೂ ಲೇಖಕರ ಬಗ್ಗೆ ನಿಮ್ಮ ಸಂದೇಶ ಏನು? -ಯಾವುದಕ್ಕೂ ಬದ್ಧರಾಗಬಾರದು, ಅನಿಸಿದ್ದನ್ನು ಬರೆಯಬೇಕು, ಪ್ರಾಮಾಣಿಕವಾಗಿ ಬದುಕಲು ಪ್ರಯತ್ನಿಸಬೇಕು.  * ತಾವು ಈಗ ಏನನ್ನಾದರೂ ಬರೆಯುತ್ತಿರುವಿರಾ? -ಹೌದು ಹೆಜ್ಜಾಲ ಎನ್ನುವ ಕಾದಂಬರಿ ಬರೆಯುತ್ತಿದ್ದೇನೆ *ಇದರ ತಿರುಳೇನು? -ನನ್ನ ಸಮಗ್ರ ಜೀವನಾನುಭವ.

*ಕೊನೆಯದಾಗಿ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕಾವ್ಯಕಮ್ಮಟಕ್ಕೆ ಸಂಬಂಸಿದಂತೆ ಯುವಕವಿಗಳ ಕವನ ಸಂಕಲನ ‘ಹದಿಹೆಜ್ಜೆ’ ಕೃತಿಯ ಮುನ್ನುಡಿಯಲ್ಲಿ ಜಿ.ಎಚ್. ನಾಯಕ್ರವರು ಪ್ರಸ್ತಾಪಿಸಿರುವ ‘ಕನ್ನಡ ಕಾವ್ಯ ಮತ್ತು ಹೊರಳು ದಾರಿಯಲ್ಲಿದೆ’ ಎಂಬ ಹೇಳಿಕೆ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?
- ನಾನು ಆ ಕಮ್ಮಟಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದೇನೆಂದು ನಿಮಗೆ ಗೊತ್ತು. ಆದರೆ ಆ ಕೃತಿಯನ್ನು ನಾನು ಓದಿಲ್ಲ. ಕಾವ್ಯ ಯಾವಾಗಲೂ ಹೊರಳಲೇಬೇಕು. ಆದರೆ ಅದು ಹೇಗೆ ಹೊರಳುತ್ತದೆ ಎಂಬುದನ್ನು ವಿಮರ್ಶಕರಾದ ಜಿ.ಎಚ್. ನಾಯಕರೆ ಹೇಳಬೇಕು.


ಹೆಸರಾಂತ ಕಾದಂಬರಿಕಾರ ದಿವಂಗತ  ಚದುರಂಗ ( ಸುಬ್ರಮಣ್ಯ ರಾಜೆ ಅರಸ್)ರ  ಈ ಸಂದರ್ಶನ  ತುಮಕೂರಿನ ಪ್ರಜಾಪ್ರಗತಿ ದಿನಪತ್ರಿಕೆಯಲ್ಲಿ ದಿನಾಂಕ ೧೩ ಮಾರ್ಚ್ ೧೯೯೫ ಸೋಮವಾರ ಪ್ರಕಟಗೊಂಡಿದೆ.

ದಲಿತ ಲೋಕದ ನಾನಾ ಮುಖ ತೋರುವ ನಾಟಕ: ಮಣೆಗಾರ


ದಲಿತ ಆತ್ಮಕತೆಗಳ ಸಾಲಿನಲ್ಲಿ ಮರಾಠಿ ಆತ್ಮಕತೆಗಳಿಗೆ ಪ್ರತ್ಯೇಕ ಪಾಲಿದೆ. ಕನ್ನಡದ ಮಟ್ಟಿಗೆ ಕವಿ ಡಾ. ಸಿದ್ದಲಿಂಗಯ್ಯನವರ ಊರು-ಕೇರಿ ಹೊರತುಪಡಿಸಿ ಹೆಚ್ಚು ಸುದ್ದಿಯಾದದ್ದು ದಲಿತರಲ್ಲಿ ಎಡಗೈ ಗುಂಪಿಗೆ ಸೇರಿದ ರಾಮಯ್ಯನವರ ಆತ್ಮಕತೆ ‘ಮಣೆಗಾರ’. ಇದು ಊರುಕೇರಿಗಿಂತ ಬೇರೆಯದೇ ಧಾಟಿ ಮತ್ತು ಸಂಕಟಗಳನ್ನು ಒಳಗೊಂಡಿದೆ.

ಹಸಿವು- ಅನ್ನ, ಜಾತಿ-ಅವಮಾನಗಳ ಸುರುಳಿಯೊಳಗೆ ಸಿಕ್ಕಿರುವ ಒಂದಿಡೀ ಜಾತಿಯ ಪ್ರತಿನಿ ರಾಮಯ್ಯ ಮತ್ತು ಅವರ ಕುಟುಂಬ  ಪಟ್ಟ ಪಾಡುಗಳನ್ನು ಒಂಚೂರು ಆಡಂಬರ, ಅಬ್ಬರ, ಮೆಲೋ ಡ್ರಾಮಾಗಳಿಲ್ಲದೆ ಕೃತಿಯಂತೆಯೇ ಸಹಜವಾಗಿ ರಂಗದ ಮೇಲೆ ತರಲಾಗಿದೆ. ಅದು ಎಷ್ಟೊಂದು ಸಹಜ ಅಂದರೆ ಕಣ್ಣು ತನ್ನಷ್ಟಕ್ಕೆ ತಾನೆ ಒದ್ದೆಯಾಗುತ್ತದೆ. ಕೆಲವು ಕಡೆ ಲಘುಹಾಸ್ಯದ ಧಾಟಿಯಲ್ಲಿ ಕ್ರೂರ ಸತ್ಯಗಳನ್ನು ಅಭಿನಯಿಸುವಾಗ ಶಿಳ್ಳೆಗಳ ಅಬ್ಬರವೂ ಸಹಜವಾಗಿಯೇ ಬಂದುಬಿಡುತ್ತದೆ.

ಕೊಡುವ ಸ್ಥಾನದಲ್ಲಿರುವವನಿಗೆ ಪಡೆಯುವವನ ಕರುಳ ಸಂಕಟಗಳು ಅರ್ಥವಾಗುವುದಿಲ್ಲ. ದಲಿತರೂ ಸೇರಿದಂತೆ ಎಲ್ಲರನ್ನೂ ಇನ್ನೂ ಕಾಪಾಡುತ್ತಿರುವ, ಮುಂದೆಯೂ ಕಾಪಾಡಬಲ್ಲದೆಂಬ ಆತ್ಮ ವಿಶ್ವಾಸ ಹುಟ್ಟಿಸುವ ‘ಸ್ವಾಭಿಮಾನ’ ಎಂಬ ಅದ್ಭುತವನ್ನು ಮತ್ತೆ ಮತ್ತೆ ಒತ್ತಿ ಹೇಳುವ ರಾಮಯ್ಯನವರ ನೌಕರಿಯ ಮೊದಲ ಮತ್ತು ನಂತರದ ಹೋರಾಟಗಳು ಮನ ಕಲಕುತ್ತವೆ. ಸಮುದ್ರದ ನೆಂಟಸ್ತನ, ಉಪ್ಪಿಗೆ ಬರ ಎಂಬಂತೆ, ಊರಲ್ಲಿ ಎಲ್ಲರೂ ಪರಸ್ಪರ ಅಕ್ಕ, ಮಾಮ, ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಪ್ಪ, ದೊಡ್ಡಮ್ಮ ಎಂದು ಕರೆದುಕೊಂಡರೂ, ಜಾತಿ ಶ್ರೇಣಿಗಳು ದಲಿತರನ್ನು ಹೇಗೆ ಶೋಷಿಸುತ್ತವೆ ಎಂಬ ಸಮಾಜದ ಕ್ರೂರ ಮುಖಗಳನ್ನು ಕಟ್ಟಿಕೊಟ್ಟಿರುವ ರೀತಿಯನ್ನು ರಂಗದ ಮೇಲೆ ನೋಡಿಯೇ ಕಣ್ತುಂಬಿಕೊಳ್ಳಬೇಕು. ಕೋಣ ಕಡಿಯುವ ಮಾರಿಹಬ್ಬ, ಸರಗು(ದೇವರಿಗಿಟ್ಟ ನೈವೇಧ್ಯವನ್ನು ಕೋಣನ ರಕ್ತ ಬೆರೆಸಿ) ಚೆಲ್ಲುವುದು ಸೇರಿ ಅನೇಕ ದೃಶ್ಯಗಳು ಹಟ್ಟಿಯನ್ನು, ಹಳ್ಳಿಯನ್ನು ಒಟ್ಟೊಟ್ಟಿಗೆ ರಂಗದ ಮೇಲೆ ನಿಲ್ಲಿಸುತ್ತವೆ.

ಬೇಡಿತಿನ್ನುವ ಮಾದಿಗರನ್ನು ಅನ್ನಕ್ಕಾಗಿ ಕಾಡಿ ತಿನ್ನುವ ದಕ್ಕಲರ ಚಿತ್ರಣವಂತೂ ಹಸಿವಿನ ಅಗಾಧ ಸಂಕಟದೊಂದಿಗೆ ಮನಕ್ಕೆ ನಾಟಿಬಿಡುತ್ತದೆ. ದಲಿತರ ಹುಡುಗನೊಬ್ಬ ಕುರುಬನ ಕೊಳಲಿಗೆ ಆಸೆ ಪಡುವುದು, ಅದನ್ನು ಕುರುಬನ ಅನುಪಸ್ಥಿತಿಯಲ್ಲಿ ಬಾಯಿಗಿಟ್ಟು ನಲಿವಾಗ ಕಾಣುವ ಕನಸನ್ನು ಎಷ್ಟು ಅಭೂತಪೂರ್ವವಾಗಿ ಸೃಷ್ಟಿಸಲಾಗಿದೆ ಎಂದರೆ ಕಾರಂತರ ‘ಗೋಗುಲ ನಿರ್ಗಮನ’ ನಾಟಕದ ಕ್ಲಾಸಿಕ್ ದೃಶ್ಯಗಳ ನೆನಪನ್ನು ತರುತ್ತದೆ. ದೃಶ್ಯದಿಂದ ದೃಶ್ಯಕ್ಕೆ ಚಲನಚಿತ್ರದಷ್ಟೇ ವೇಗವಾಗಿ ತನ್ನ ಎಲ್ಲ ಪರಿಣಾಮಗಳೊಂದಿಗೆ ಕತೆ ಬೆಳೆಯುತ್ತದೆ, ಸಾಗುತ್ತದೆ. ಎಲ್ಲೂ ಅಶ್ಲೀಲವೆನ್ನಿಸದ ಬೈಯ್ಗುಳಗಳು, ಶಾಲೆಯಲ್ಲಿ ಗುರುಗಳು ಮಾಡುವ ಜಾತಿ ತಾರತಮ್ಯದಿಂದ ಆತ್ಮಹತ್ಯೆಗೆ ಶರಣಾಗುವ ರಾಮಯ್ಯ ಅವರ ಸಹೋದರನ ಸಾವಂತೂ ಮನ ಕಲಕುತ್ತದೆ.  ಇದೆಲ್ಲಕ್ಕೂ ಜಾತಿಯೊಂದನ್ನೇ ಕಾರಣ ಮಾಡದೆ ಒಟ್ಟು ಸಮಾಜ ಇದರ ಹೊಣೆ ಎಂಬಂತೆ ಚಿತ್ರಿಸಿರುವಲ್ಲಿ ನಿರ್ದೇಶಕ ಶಿವಶಂಕರನ ಜಾಣ್ಮೆ ಎದ್ದು ಕಾಣುತ್ತದೆ.


ದಲಿತರ ನಂಬುಗೆ, ಸೇವೆ, ಅವರನ್ನು ಇತರರು ನಡೆಸಿಕೊಳ್ಳುವ ರೀತಿಗಳನ್ನು ಸಣ್ಣ,ಸಣ್ಣ ದೃಶ್ಯಗಳಲ್ಲಿ ಎಲ್ಲಿಯೂ ಬೋರು ಹೊಡೆಯದಂತೆ ಪೋಣಿಸಲಾಗಿದೆ.  ಆ ದೃಷ್ಟಿಯಿಂದ ಇದು ಒಟ್ಟು ಸಮಾಜ ನೋಡಬೇಕಾದ ನಾಟಕ. ನಾಟಕದ ಓಘ, ಸಹಜತೆಗಳಿಂದ ಬಿಚ್ಚಿಕೊಳ್ಳುವ ದಲಿತ ಲೋಕದ ಬೇರೆ ಬೇರೆ ಮುಖಗಳನ್ನು ತುಂಬಾ ಚಲನಶೀಲ ರೀತಿಯಲ್ಲಿ ಹೇಳಲಾಗಿದೆ. ಅದಕ್ಕಾಗಿ ಕೆಲವು ಸೆಲ್ಯುಲಾಯಿಡ್ ತಂತ್ರಗಳನ್ನೂ ಬಳಸಿಕೊಳ್ಳಲಾಗಿದೆ. ಮೊದಲ ಪ್ರದರ್ಶನವಾದ್ದರಿಂದ ಸಣ್ಣಪುಟ್ಟ-ದೋಷಗಳನ್ನು ಮರೆತುಬಿಡಬೇಕೆಂದರೂ ತಪ್ಪುಗಳೇ ಇಲ್ಲವೆನ್ನುವಷ್ಟು ಚೆನ್ನಾಗಿ ನಾಟಕ ಬಂದಿದೆ. ತುಂಬಾ ಕಡೆ ನಾಟಕದ ‘ಘಮ’ ರಂಗಾಯಣ, ನೀನಾಸಂ ತಂಡಗಳ ನಾಟಕಗಳನ್ನು ನೆನಪಿಸುತ್ತದೆ. ಮುದ ಕೊಡುವ ಸಂಗೀತ, ಬೆಳಕು, ವಸ್ತ್ರವಿನ್ಯಾಸ ಯಾವುದನ್ನೂ ಬೆರಳು ಮಡುಚುವಂತಿಲ್ಲ. ಪಾತ್ರಧಾರಿಗಳೆಲ್ಲರೂ ನೀರಿನ ಹರಿವಿನಂತೆ ಸಹಜ.

ನಾಟಕಕ್ಕೆ ಮೊದಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಾಟಕಕಾರ ಚಂದ್ರಶೇಖರ ಕಂಬಾರರು, ನಾಟಕಕ್ಕೆ ಮುಖ್ಯ ಸರಕು ಸಂಘರ್ಷ, ಆತ್ಮಕತೆಯೊಂದರಲ್ಲಿ ಬರುವ ಸಂಘರ್ಷಗಳನ್ನು  ಸಾದೃಶ್ಯಗೊಳಿಸುವುದು ಸುಲಭದ ಕೆಲಸವಲ್ಲ. ಕತೆ, ಕಾದಂಬರಿ, ಪದ್ಯಗಳ ಕಥನವನ್ನು ರಂಗಕ್ಕೆ ತರುವಾಗ ಇರುವ ಸವಾಲು ಅದು. ಹಾಗಾಗಿ ಈ ಸವಾಲನ್ನು ಶಿವಶಂಕರ್ ಹೇಗೆ ಗೆದ್ದಿದ್ದಾರೆ ಎಂಬ ಕುತೂಹಲದಿಂದ ತಾನು ನಾಟಕ ನೋಡಲು ಬಂದಿರುವುದಾಗಿ ಹೇಳಿದರು. ಇದನ್ನು ಕವಿ ಕೆ.ಬಿ. ಸಿದ್ದಯ್ಯ ಅವರೂ ಅನುಮೋದಿಸಿ ಮಾತನಾಡಿದರು. ಇದಕ್ಕೆ ಉತ್ತರ ನೀಡುವವರಂತೆ ಮಾತನಾಡಿದ ಅಧ್ಯಕ್ಷತೆ ವಹಿಸಿದ್ದ  ಹಿರಿಯ ವಿಮರ್ಶಕ ಕೆ. ಮರುಳಸಿದ್ದಪ್ಪ ಅವರು, ನಾಟಕಪರಂಪರೆಗಿಂತ ಕಥನ ಪರಂಪರೆಯಲ್ಲೇ ಕನ್ನಡರಂಗಭೂಮಿಗೆ ಹೆಚ್ಚು ಇತಿಹಾಸವಿದೆ. ನಾಟಕಗಳನ್ನು ರಂಗದ ಮೇಲೆ ತರುವುದು ಹೊಸ ಪರಂಪರೆ, ಮೊದಲಿನಿಂದಲೂ ಕತೆ, ಪುರಾಣ ಮತ್ತು ಮಹಾಕಾವ್ಯಗಳನ್ನೇ ನಾಟಕಗಳನ್ನಾಗಿ ರಂಗದ ಮೇಲೆ ತಂದು ಜನರಿಗೆ ಮುಟ್ಟಿಸಲಾಗಿದೆ. ಹಾಗಾಗಿ ‘ಮಣೆಗಾರ’ ನಾಟಕವಾಗುವ ಎಲ್ಲ ಅರ್ಹತೆಯನ್ನೂ ಪಡೆದಿದೆ ಎಂದರಲ್ಲದೆ ಇದನ್ನು ಸಮರ್ಥವಾಗಿ ರಂಗಕ್ಕೆ ತರುವ ಶಕ್ತಿ ಹಾಲ್ಕುರಿಕೆ ಶಿವಶಂಕರ್ಗೆ ಇದೆ ಎಂದರು. ಇದೆಲ್ಲ ನಡೆದದ್ದು  ಗುರುವಾರ(೧ನೇ ಜುಲೈ ೨೦೧೦) ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ.

೪ ಜುಲೈ ೨೦೧೦ರ  ವಿಜಯಕರ್ನಾಟಕದ ಸಾಪ್ತಾಹಿಕ ಸಂಚಿಕೆಯಲ್ಲಿ ಪ್ರಕಟವಾಗಿದೆ. 

Saturday 3 July 2010

ನೀವು ಕಂಡಿರದ, ಮುಂದೆ ಕಾಣಲಾಗದ ಸಂಡೂರಿನ ಚಿತ್ರಗಳು



ಲಲಿತ ಪ್ರಬಂಧ: ನೆರಳುಗಳು

 ‘ಅವನ ನೆರಳು ಕಂಡರೆ ನನಗಾಗುವುದಿಲ್ಲ’ ಎನುತ್ತಾ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುವ ಅನೇಕರನ್ನು ನಾವು  ನಿತ್ಯ ನೋಡುತ್ತೇವೆ. ನೆರಳು ಕಂಡರಾಗದ ಜನಕ್ಕೆ ಸಂಬಂಸಿದ ವ್ಯಕ್ತಿಯೇ ಕಂಡುಬಿಟ್ಟರೆ! ವ್ಯಕ್ತಿಯಿದ್ದರೆ ತಾನೆ ನೆರಳು ಕಾಣುವುದು? ಇಲ್ಲಿ ನೆರಳಿನ ಉಪಮೆ ಉಪಯೋಗಿಸಿರುವುದರ ಹಿಂದಿನ ಉದ್ದೇಶ ಆ ‘ನೆರಳಿನ’ ವ್ಯಕ್ತಿಯನ್ನು ಇವರು ದ್ವೇಷಿಸುತ್ತಾರೆ. 

ಆದರೆ  ನಾವು ಹೋದಲ್ಲಿಗೆಲ್ಲಾ ನಾಯಿ ಬಾಲದಂತೆ ಬರುವ ತಮ್ಮ ನೆರಳು ಕಂಡರೆ ಎಷ್ಟು ಜನರಿಗಾಗುವುದಿಲ್ಲ, ಎಷ್ಟು ಜನ ರೋಮಾಂಚಿತರಾಗುತ್ತಾರೆ ಎಂಬುದನ್ನು ಲೆಕ್ಕ ಹಾಕುವವರ್ಯಾರು? ನೆರಳನ್ನು ವ್ಯಕ್ತಿಯೊಬ್ಬನ ವ್ಯಕ್ತಿತ್ವ ಅಳೆಯಲು ಅನೇಕ ಬಾರಿ ಅನೇಕ ವಿಧದಲ್ಲಿ ಉಪಯೋಗಿಸುವ ನಾವು, ಇಂತಹವರು, ಇಂಥವರ ವ್ಯಕ್ತಿತ್ವದ ನೆರಳಿನಿಂದ ಹೊರಬರಬೇಕೆಂದೊ, ಸೋಲಿನ ಕಹಿ ನೆರಳಿನಿಂದ ಇವರು ಬೇಗ ಹೊರಬರಲಿ ಎಂದು ಆಶಿಸುವಾಗಲೋ ನಮಗೆ ಗೊತ್ತಿಲ್ಲದಂತೆ ನೆರಳ ಬಗ್ಗೆ ಮಾತನಾಡುತ್ತಲೇ ಇರುತ್ತೇವೆ. ನೆರಳನ್ನು ಸಾಮಾನ್ಯವಾಗಿ ಸಿಹಿ, ಕಹಿ ಪ್ರಸಂಗಗಳಿಗೂ ಹೋಲಿಸುತ್ತೇವೆ. ನೆರಳಿಗೆ ಕಹಿ ಇದೆಯೆಂದಾದರೆ ಸಿಹಿಯೂ ಇರಬೇಕಲ್ಲವೇ? ‘ಅವರ ವ್ಯಕ್ತಿತ್ವದ ನೆರಳಿನಿಂದ ಹೊರಬರುವುದು, ಅವರ ಸಹವಾಸ ಮಾಡಿದ ಯಾರಿಗಾದರೂ ಕಷ್ಟ" ಅಂಥ, ದೊಡ್ಡವರ ವ್ಯಕ್ತಿತ್ವದ ವ್ಯಾಪ್ತಿ ಸೂಚಿಸುವಲ್ಲಿ ಅವರ ಬಗ್ಗೆ ಗೌರವವಿರುತ್ತದೆ. ನೆರಳಲ್ಲಿ ಏನೂ ಬೆಳೆಯುವುದಿಲ್ಲ ಎನ್ನುವಾಗ ನೆರಳಿನ, ಸರ್ವನಾಶದ ಗುಣ ನಮಗೆ ಗೊತ್ತಾಗುತ್ತದೆ.

ಚಿಕ್ಕಂದಿನಲ್ಲಿ ಸೂರ್ಯನೆದುರು ಕುಳಿತು, ಹಿಂದೆ ಬಿದ್ದ ನೆರಳನ್ನು ನೋಡುತ್ತಾ ಪುಳಕಗೊಂಡಿದ್ದು, ಮಧ್ಯಾಹ್ನದ ಊಟಕ್ಕೆ ಶಾಲೆಯ ಗಂಟೆ ಬಾರಿಸಲು ಶಾಲೆಯ ಪಕ್ಕದ ಹುಣಸೇ ಮರದ ನೆರಳು ನೋಡುತ್ತಿದ್ದುದು, ಅಪ್ಪ ನೆರಳನ್ನು ನೋಡಿ ತಿಂಡಿಯ ಹೊತ್ತು. ಊಟದ ಹೊತ್ತು, ಸಂಜೆಯಾಗುತ್ತಾ ಬಂತು. ಅಂಥ ಕಾಲವನ್ನು ಅಳೆಯುತ್ತಿದ್ದುದು ಈಗ ಕಂಡು, ಕೇಳಿದಂತಿದೆ. ಹಾಗೆಯೇ ವೇಳೆಯನ್ನು ಅಳೆಯುತ್ತಾ ಎಳೆಯ, ಯುವಕ, ಮುದುಕ ಸೂರ್ಯ ಅಂಥ ಆ ದಿನದ ಸೂರ್ಯನ ಆಯುಷ್ಯ ಅಳೆಯುತ್ತಿದ್ದುದು ಅರ್ಥವಾಗದೇ ನಿಂತ ನಮ್ಮ ಪುಟ್ಟ ಕಣ್ಣುಗಳಿಗೆ ಸೂರ್ಯ, ಭೂಮಿಯನ್ನೇ ಸುತ್ತುತ್ತಿದ್ದಾನೆ ಎನ್ನುವಂತೆ ಕಂಡಿದ್ದು ಎಂಥ ವಿಸ್ಮಯ!  ತಮ್ಮ ಸುತ್ತಾಮುತ್ತಾ ಯಾರೂ ಇಲ್ಲದ ವೇಳೆಯಲ್ಲಿ  ತಮ್ಮ ನೆರಳಿನೊಡನೆ ಆಟವಾಡುತ್ತಾ ಮೈಮರೆಯುವ ಮಕ್ಕಳಾಟವನ್ನು ಕಂಡವರಿಗೆ ಮಾತ್ರ ಹೇಳಲು ಸಾಧ್ಯ ತಮ್ಮ ನೆರಳನ್ನು ನೋಡಿಕೊಂಡು ಮೈಮರೆಯುವ ಹದಿಹರೆಯದವರಿಗೆನೂ ಕೊರತೆಯಿಲ್ಲ. ಕನ್ನಡಿ ಮುಂದೆಯೇ ಬಹುಪಾಲು ಸಮಯ ಕಳೆಯುವ ಹುಡುಗಿಯರು (ಹುಡುಗರೂ ಇದಕ್ಕೆ ಹೊರತಲ್ಲ) ನೆರಳಿನ ರೋಮಾಂಚನದಲ್ಲಿ ಕಾಲಕಳೆಯುವುದು ಅಪರೂಪವೆಂದೇ ಹೇಳಬೇಕು. 

ನಮ್ಮ ಜನಪದರಂತೂ ನೆರಳಿನ ಉಪಮೆ ಬಳಸಿ ಪದ್ಯವನ್ನೇ ಕಟ್ಟಿ ಹಾಡಿದ್ದಾರೆ. 
‘ಆಲಕ್ಕೆ ಹೂವಿಲ್ಲ 
ಸಾಲಕ್ಕೆ ಕೊನೆಯಿಲ್ಲ 
ಜಾಲಿಯ ನೆರಳು ನೆರಳಲ್ಲ  ||ಪ|| 
ಹೆಣ್ಣಿಗೆ ತವರು ಸ್ಥಿರವಲ್ಲ’  
ಇಲ್ಲಿ, ನೆರಳಿನ  ಬಗೆಗೆ ನಮ್ಮ ಪೂರ್ವಿಕರಿಗಿದ್ದ ಸೂಕ್ಷ್ಮ ಮನೋಭಾವ ವ್ಯಕ್ತವಾಗುತ್ತದೆ. ಜಾಲಿಯ ನೆರಳು ಕನಿಷ್ಟದ್ದಾದರೆ, ತಂಪಾದ ನೆರಳಿಗೆ ಹೊಂಗೇ ಮರ ಬಿಟ್ಟು ಸಾಟಿ ಯಾವುದು? ವಸಂತ ಕಾಲದ ಹೊಂಗೇ ಮರದ ನೆರಳ ಆಹ್ಲಾದತೆಯನ್ನು ವರ್ಣಿಸಲು ಕವಿಗಳೇ ಬೇಕು. ಮರ ಕಡಿಯುವವನೊಬ್ಬ ಬಿಸಿಲಿನ ಬೇಗೆಗೆ ಹೆದರಿ ತಾನು ಮುಂದೆ ಕಡಿಯಲಿದ್ದ ಮರದ ನೆರಳಿನಲ್ಲಿ ವಿಶ್ರಮಿಸಿಕೊಂಡು ನಂತರ ಅದೇ ಮರವನ್ನು ಕಡಿದ ಜಾನಪದ ಕಥೆಯೊಂದನ್ನು ಕೇಳುವ ಯಾರಿಗಾದರೂ ಮನುಷ್ಯನ ಸ್ವಾರ್ಥದ ಪರಿಚಯವಾಗುತ್ತದೆ. ಸುಖಕ್ಕೆ ಆಶ್ರಯಕ್ಕೆ ಮರದ, ವ್ಯಕ್ತಿಯ ನೆರಳು ಮನುಷ್ಯನಿಗೆ ಬೇಕು. ಆದರೆ ಒಂದು ಚಿಕ್ಕ ಗಿಡಕ್ಕೆ ದೊಡ್ಡ ಮರದ ನೆರಳು, ಅದರ ಭವಿಷ್ಯದ ದೀಪವನ್ನೇ ಆರಿಸಿಬಿಡಬಹುದು.

ವಯಸ್ಕ ರಸಿಕರಿಗೆ, ಪ್ರಾಯದ ಹುಡುಗ, ಹುಡುಗಿಯರಿಗೆ  ತಾವು ರೋಮಾಂಚನಗೊಳ್ಳಲು ತಾವು ಇಷ್ಟಪಟ್ಟವರ ನೆರಳು ಸೋಕಿದರೇ ಸಾಕು. ಹಾಗೆಯೇ ಬದುಕಿನ ಸಂದರ್ಭದಲ್ಲಿ ಸಂಸ್ಕೃತಿ, ಅನುಭವಗಳ ದೃಷ್ಟಿಯಲ್ಲಿ ಹಿರಿಯ ತಲೆಮಾರಿನ ನೆರಳು, ಕಿರಿಯ ತಲೆಮಾರುಗಳ ಮೇಲೆ ಇರಬೇಕು, ಇರುತ್ತದೆ. ಪ್ರಾಯದಲ್ಲಿ ಹೆಂಡತಿಗೆ ಗಂಡನ ನೆರಳು, ವೃದ್ದಾಪ್ಯದಲ್ಲಿ ಗಂಡನಿಗೆ ಹೆಂಡತಿಯ ಆಶ್ರಯದ ನೆರಳೂ ಅವಶ್ಯಕ ಎಂಬ ಹಿರಿಯರ ಮಾತಿನ ಔಚಿತ್ಯ ರಕ್ಷಣೆ ಮತ್ತು ಆಸರೆ. ಜಗತ್ತಿನಲ್ಲಿ ಯಾವ ವಸ್ತುವಿಗೆ ನೆರಳಿಲ್ಲ? ಬೆಳಕಿದ್ದರೆ ಎಲ್ಲ ವಸ್ತುಗಳಿಗೂ ನೆರಳಿದೆ. ಎರಡು ಕೈಗಳು ಸೇರಿದರೆ ಚಪ್ಪಾಳೆ ಹೇಗೋ ಹಾಗೆ ಬೆಳಕು ಮತ್ತು ವಸ್ತು ನೆರಳ ಸೃಷ್ಟಿಗೆ ಅತ್ಯವಶ್ಯಕ.

ನಾವು ಇಷ್ಟಪಡುವ ವ್ಯಕ್ತಿಗಳು ನಮ್ಮ ಆಳಕ್ಕೆ ಹೇಗೋ ಇಳಿದು ತುಂಬಿಕೊಳ್ಳುವಂತೆ, ಪಾತ್ರೆಯಲ್ಲಿ ಹಾಕಿದ ನೀರು ಪಾತ್ರೆಯ ಆಕಾರ ಪಡೆಯುವಂತೆ, ಬೆಳಕು ಮತ್ತು ವಸ್ತುವನ್ನಾಧರಿಸಿ ನೆರಳನ್ನು ಮೂಡಿಸಬಹುದಲ್ಲವೇ? ಆದರೆ ನೆರಳಿನ ಉದ್ದ, ತುಂಡ ಮುಂತಾದ ಏರಿಳಿತಗಳಿಗೆ ಬೆಳಕಿನ ಕೋನ ಮತ್ತು ದಿಕ್ಕುಗಳು ಮುಖ್ಯ. ಆದರೆ ನೆರಳಿನ ಹಂಗಿನಿಂದ ದೇವತೆಗಳ ದೇಹ ದೂರವಂತೆ. ಹಾಗಾಗಿ ಅವರಿಗೆ ನೆರಳಿರುವುದಿಲ್ಲವಂತೆ ! ಹಾಗಾದರೆ ತಮ್ಮ ದೇಹದ ಆಕಾರ  ಬದಲಿಸಿಕೊಳ್ಳಲು ದೆವ್ವಗಳಿಗೆ, ರಾಕ್ಷಸರಿಗೆ ಸಾಧ್ಯ ಎಂಬ ಪುರಾಣದ ಕಥೆಗಳ ಹಿನ್ನಲೆಯಲ್ಲಿ, ಅವುಗಳಿಗೆ ನೆರಳಿದ್ದರೆ ಯಾವ ತರಹದ ನೆರಳಿರಬಹುದು? ‘ಶನಿದೇವಾ ನಿನ್ನ ಕರಿನೆರಳು ನಮ್ಮ ಮೇಲೆ ಬೀಳದಿರಲಿ’ ಅಂಥ ಶನಿಮಹಾತ್ಮನನ್ನು ಪ್ರಾರ್ಥಿಸುವಲ್ಲಿ ಜನ ಯಾವ ರೀತಿಯ ನೆರಳು ಬೇಡ ಎನ್ನುತ್ತಾರೆ? ಯಾವ ರೀತಿಯ ನೆರಳಿಗೆ ಮೊರೆಯಿಡುತ್ತಾರೆ? ಹಾಗಾದರೆ ಕಹಿ (ಸೋಲು) ಸಿಹಿ (ತಂಪು) ನೆರಳುಗಳಂತೆ ಕರಿನೆರಳು ಕೆಟ್ಟ ದೃಷ್ಟಿಯನ್ನು ಸೂಚಿಸುವುದಾದರೆ ಒಳ್ಳೆಯದನ್ನುಂಟು ಮಾಡುವ ನೆರಳನ್ನು ಯಾವ  ಬಣ್ಣದಿಂದ ಕರೆಯಬೇಕೆನ್ನುವುದು ಪ್ರಶ್ನೆ.

ಸೂರ್ಯ, ಚಂದ್ರರ ಗ್ರಹಣಕ್ಕೆ ಕಾರಣವಾಗುವ ಭೂಮಿ, ಸೂರ್ಯ, ಚಂದ್ರರ ಪರಸ್ಪರ ನೆರಳುಗಳು,  ಕಪ್ಪೆಯ ಮೇಲೆ ಹಾವಿನ ನೆರಳು, ಹಾವಿನ ಮೆಲೆ ಹದ್ದಿನ ನೆರಳು, ಶಿಷ್ಯನ ಮೇಲೆ ಗುರುವಿನ ನೆರಳು ಮುಂತಾದವುಗಳ ಪರಿಕಲ್ಪನೆ ಮತ್ತು ವಾಸ್ತವಗಳು ನೆರಳನ್ನು ಉಪಮೆಗಳಾಗಿ ಉಪಯೋಗಿಸಿಕೊಳ್ಳುವ ಮೂಲಕ ಅದರ ವ್ಯಾಪ್ತಿಯನ್ನು ಹೆಚ್ಚಿಸಿವೆ. ಮಳೆಗಾಲದಲ್ಲಿ ಮೂಡುವ ಕಾಮನ ಬಿಲ್ಲೂ ಕೂಡಾ ನೆರಳು ಬೆಳಕಿನ ಆಟದಿಂದಲೇ ಸೃಷ್ಠಿಯಾಗುವ ಒಂದು ಅದುತ ವಿಸ್ಮಯ ಹಾಗೆಯೇ ಸೂರ್ಯನ ಬಿಳಿ ಬೆಳಕು ಪಟ್ಟಕದ ಮೂಲಕ ಹಾಯ್ದು ಹೋದಾಗ ಬೆಳಕು ಏಳು ಬಣ್ಣಗಳಾಗಿ ಒಡೆಯುತ್ತದೆ. ಬೆಳಕು ವಸ್ತುವಿನ ಮೂಲಕ ತೂರಿದಾಗ ಉಂಟಾಗುವ ಈ ಕ್ರಿಯೆಗಳೂ ಕೂಡಾ ಒಂದು ತರಹದ ನೆರಳನ್ನು ಸೃಷ್ಟಿಸುವ ವಿಧಾನಗಳಾಗಿವೆ. ಬೆಳಕು ವಸ್ತುವಿನ ಮೂಲಕ ತೂರಿ ಹೋಗದೆ ಇದ್ದಾಗ ಉಂಟಾಗುವ ನೆರಳು ಒಂದು ಅರ್ಥದಲ್ಲಿ ಏನನ್ನೂ ಬಿಚ್ಚಿಡುವುದಿಲ್ಲ. ಹಾಗೆಯೇ ಏನನ್ನೂ ಮುಚ್ಚಿಡುವುದಿಲ್ಲ. ಬೆಳಕಿಗೆ ಒಗ್ಗಿಕೊಂಡ ಎಲ್ಲಾ ಭಾಗ ಕಾಣುತ್ತದೆ. ಬೆಳಕಿನ ಕೋನ, ದಿಕ್ಕು ಹಾಗೂ ವಸ್ತುವಿನಿಂದ ಬೆಳಕಿನ ಮೂಲಕ್ಕಿರುವ ಅಂತರವನ್ನು ಆಧರಿಸಿ ವಸ್ತುವಿ ನೆರಳನ್ನೇ ಹತ್ತಾರು ವಿಧವಾಗಿ ಮೂಡಿಸಬಹುದು. ಹೀಗೆ ವಸ್ತುವೊಂದರ ಹೊರ ಆಕಾರವನ್ನು ಭೂಮಿಯ ಮೇಲೆ  ಆ ವಸ್ತುಗಳ ನೆರಳಿನ ಸಹಾಯದಿಂದ ಬಿಡಿಸುವ ಕಲೆ ಬಹುಶಃ ಈಗಿನ ಚಿತ್ರ ಕಲೆಗೆ ಕಾರಣವಾಗಿರಲೂಬಹುದಲ್ಲವೇ? 

ನಮ್ಮ ಆಧುನಿಕ ಜಗತ್ತಿನಲ್ಲಿ ಮಸೂರಗಳ ಸಹಾಯದಿಂದ, ನೆರಳು ಬೆಳಕಿನ ಸಂಯೋಜನೆಯ ಹೊಸ ಕಲಾ ಜಗತ್ತೇ ಸೃಷ್ಠಿಯಾಗಿದೆ. ಈ ದೃಷ್ಠಿಯಿಮದ ಇಂದಿನ ಸಿನಿಮಾ ಕಲ್ಪನೆ ಕೂಡಾ ನೆರಳು ಬೆಳಕಿನ ಆಟದ ಒಂದು ಮಜಲು ಮಾತ್ರ. ಇಷ್ಟಲ್ಲದೆ ಬೆಳಕಿನಲ್ಲಿ ತಮ್ಮ ಕೈಕಾಲು ಹಾಗೂ ದೇಹದ ವಿವಿಧ ಭಾಗಗಳ ಚಲನೆಯಿಂದ ವಿವಿಧ ಆಕಾರ, ಪ್ರಾಣಿ, ಪಕ್ಷಿಗಳ ಆಕಾರ ಹಾಗೂ ಅವುಗಳ ನಡವಳಿಕೆ, ಚಟುವಟಿಕೆಯನ್ನು ಗೋಡೆ, ಪರದೆಗಳ ಮೇಲೆ ಮೂಡಿಸುತ್ತಾರೆ. ಹೀಗೆಯೇ ಹೊಸ ಕಲೆಯೊಂದನ್ನು ಸೃಷ್ಠಿಸಿರುವ ಆಧುನಿಕ ಭೂಪರು ನೆರಳನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಮನುಷ್ಯನ ಅತಿ ಸೂಕ್ಷ್ಮ ಅಂಗಗಳಲ್ಲಿ ಒಂದಾದ ಕಣ್ಣಿನ ರಚನೆ ಹಾಗೂ ಕ್ರಿಯೆ ನೆರಳು-ಬೆಳಕನ್ನು  ಆಧರಿಸಿದೆ  ಎಂದರೆ ಅನೇಕರಿಗೆ ಆಶ್ಚರ್ಯವಾಗಬಹುದು. 

ಪುರಾಣದ ಕಥೆಗಳಲ್ಲೊಂದಾದ ಮಹಾಭಾರತದಲ್ಲಿ, ನೆರಳು, ಕಥೆಯ ದಿಕ್ಕನ್ನೇ ಬದಲಿಸುವ ಮಹತ್ವ ಪಡೆದುಕೊಂಡಿದೆ. ಚಕ್ರವ್ಯೂಹದಲ್ಲಿ ಮೋಸಕ್ಕೆ ಬಲಿಯಾದ ಅಭಿಮನ್ಯು, ಅವನನ್ನು ಕೊಂದ ಜಯದ್ರಥನನ್ನು ‘ನಾಳೆಯ ಸೂರ್ಯ ಮುಳುಗುವುದರೊಳಗಾಗಿ ಹತ್ಯೆ ಮಾಡುತ್ತೇನೆ" ಎಂದು ಪ್ರತಿe ಮಾಡುವ ಅರ್ಜುನನ ಶಪಥ ಈಡೇರದ ಸ್ಥಿತಿ ಬಂದಾಗ, ಕೃಷ್ಣ ತನ್ನ ಸುದರ್ಶನ ಚಕ್ರವನ್ನು ಸೂರ್ಯನಿಗೆ ಅಡ್ಡವಿಡಿದು ಚಕ್ರದ ನೆರಳಿನಿಂದ ಇಡೀ ಜಗತ್ತನ್ನು ಕತ್ತಲಲ್ಲಿ ಮುಗಿಸಿದ ನಂತರ ಅರ್ಜುನ ಮೋಸದ ಜಯದ್ರಥನನ್ನು ಮೋಸದಿಂದಲೇ ಹತ್ಯೆ ಮಾಡಿದನೆಂಬ ಕಥೆಯನ್ನು ಯಾರು ಕೇಳಿಲ್ಲ? ಗೌರಿ ತನ್ನ  ತವರಿಗೆ ಹೋಗಬೇಕಾಗಿ ಬಂದಾಗ ತನ್ನ ನೆರಳಿಗೆ ಜೀವ ತುಂಬಿ ಇಟ್ಟು ಹೋದದ್ದರಿಂದ ಅದು ಶಿವನೊಡನೆ ಸಮಾಗಮಿಸಿ ಷಣ್ಮುಖನ ಹುಟ್ಟಿಗೆ ಕಾರಣವಾಯಿತು ಎಂನಲ್ಲಿ ನೆರಳನ್ನು ಪೌರಾಣಿಕವಾಗಿ ಬಳಸಿಕೊಂಡಿರುವುದರ ಹಿಂದಿನ ಮರ್ಮವನ್ನು ಅರಿತವರಿಗಷ್ಟೇ ನೆರಳ ಮಹತ್ವ ತಿಳಿಯುತ್ತದೆ. 

ನೀರಿನ ಮೇಲೆ ಬೀಳುವ ನೆರಳು ಅಲೆಗಳಿಗನುಗುಣವಾಗಿ ನಡುಗುವಂತೆ, ಛಿದ್ರವಾದಂತೆ ತೋರುತ್ತದೆ. ಭೂಮಿ, ಬಂಡೆಯ ಮೇಲೆ ಬೀಳುವ ನೆರಳು, ಗಾಳಿಗೆ ಮರ ಅಲುಗಾಡಿದಂತೆ ತನ್ನ ನೃತ್ಯವನ್ನು ಪ್ರಾರಂಭಿಸುತ್ತದೆ. ಹೀಗೆ ನಡುಗುವ ನೆರಳು ನೀರಮೇಲೆ ಬಿದ್ದರೆ ಸ್ಪಷ್ಟವಾಗಿ ನೋಡುವುದಕ್ಕೆ ಸಾಧ್ಯವಾಗುವುದೇ ಇಲ್ಲ. ವಸ್ತುವೊಂದರ ನೆರಳು ನೀರ ಮೇಲೆ ಬೀಳುವ ವೇಳೆಯಲ್ಲಿ ನೀರು ಶುದ್ಧವಾಗಿದ್ದರೆ ಕೆಲವು ಸಂದರ್ಭಗಳಲ್ಲಿ ಆ ವಸ್ತುವಿನ ಬಿಂಬವೂ ಮೂಡುತ್ತದೆ. ನೆರಳಿಗೂ, ಬಿಂಬಕ್ಕೂ ಸಂಬಂಧವಿಲ್ಲವಾದರೂ, ಕೆಲವು ವ್ಯತ್ಯಾಸಗಳಂತೂ ಇವೆ. ಬೆಳಕಿಗೆ ನಿಂತ ಕ್ಷಣ ನೆರಳು ಕಾಣುವಂತೆ ಕನ್ನಡಿ ಮುಂದೆ ನಿಂತ ಕ್ಷಣ ಬಿಂಬ ಕಾಣುತ್ತದೆ. ನೆರಳು ವಸ್ತುವಿನಿಂದ ಉದ್ದವಾಗಬಲ್ಲದು, ಇಲ್ಲ ಕುಬ್ಜವಾಗಬಲ್ಲದು. (ಸೂರ್ಯನ ಚಲನೆಯನ್ನನುಸರಿಸಿ) ಆದರೆ ಬಿಂಬದ ಗಾತ್ರ, ಉದ್ದ, ತುಂಡ ಅಳತೆಗಳು ಕನ್ನಡಿಯ ಮಸೂರವನ್ನು ಅವಲಂಬಿಸಿರುತ್ತವೆ. ಕನ್ನಡಿಯ ಮುಂದೆ ನಿಂತು ನಾವು ಚಲಿಸಿದರೂ ಬಿಂಬ ಉದ್ದ, ತುಂಡ ಆಗುತ್ತದಾದರೂ ಅದು ಗೌಣ. ಬಹುಶಃ ನೆರಳಿಗೆ ಸವತಿಯಿದ್ದರೆ ಅದು ಬಿಂಬ ಮಾತ್ರ. ಕನ್ನಡಿ ಬಂದದ್ದರಿಂದ ಜನ ತಮ್ಮ ನೆರಳನ್ನು ಸೂಕ್ಷ್ಮವಾಗಿ ನೋಡುವುದನ್ನು ಬಿಟ್ಟಿರಬೇಕು.

ಕನ್ನಡಿಯಿಲ್ಲದಿದ್ದ ಕಾಲದಲ್ಲಿ ಜನ  ತಮ್ಮ ಮುಖವನ್ನು ಹೇಗೆ ನೋಡಿಕೊಳ್ಳುತ್ತಿದ್ದರು? ಎನ್ನುವುದು ಪ್ರಶ್ನೆಯಾದರೂ ಅವರು ನೆರಳು ನೋಡಿ ತಮ್ಮ ಸೌಂದರ್ಯವನ್ನು ಅಳೆದುಕೊಳ್ಳುತ್ತಿದ್ದರು ಎನ್ನುವುದು ಸತ್ಯಕ್ಕೆ ಹತ್ತಿರವಾದದ್ದು ಎನ್ನಬಹುದಾದರೂ ನೆರಳೇ ಸೌಂಧರ್ಯದ ಮಾನದಂಡವಾಗಿತ್ತು ಎಂಬುದು ತಪ್ಪಾಗುತ್ತದೆ. ಮನುಷ್ಯ ನೆರಳನ್ನು ನೋಡುವುದನ್ನು ಬಿಟ್ಟಿದ್ದರೆ ಅದು ಕನ್ನಡಿ  ಬಂದಂದಿನಿಂದ ಮಾತ್ರ ಎಂದು ಧಾರಾಳವಾಗಿ ಹೇಳಬಹುದೇನೋ. ನೆರಳನ್ನೇ ನಂಬಿಕೊಂಡಿದ್ದ ಕಾಲದಲ್ಲಿ ಕನ್ನಡಿ ಬಂದು, ಅದನ್ನು ಮುದುಕನೊಬ್ಬ  ಬಚ್ಚಿಟ್ಟುಕೊಂಡು ನೋಡಿಕೊಳ್ಳುತ್ತಿದ್ದುದನ್ನು ಕಂಡ ಅಜ್ಜಿ, ಅಜ್ಜನಿಲ್ಲದಾಗ ಕನ್ನಡಿಯಲ್ಲಿ ಬಗ್ಗಿ ನೋಡಿ ತನ್ನ ಯಜಮಾನ ಬೇರೊಬ್ಬಳನ್ನು ಇಟ್ಟುಕೊಂಡಿದ್ದಾನೆ ಅಂತ ರಂಪ ಮಾಡಿದ ಜಾನಪದ ಕಥೆಯನ್ನು ಯಾರು ಕೇಳಿಲ್ಲ?

ಪ್ರಾಯದ ಹುಡುಗ, ಹುಡುಗಿಯರು ಕನ್ನಡಿ ಮುಂದೆ ಸವೆಸುವ ಕಾಲದ ಒಂದಂಶವನ್ನಾದರೂ ನೆರಳನ್ನು ನೋಡುತ್ತಾ ಸವೆಸುತ್ತಾರೆಯೆ? ನೆರಳಿಗೆ  ಬಂದಿರುವ ಕುತ್ತನ್ನು ನೋಡಿ! ಅದಕ್ಕಾಗಿಯಾದರೂ ನೆರಳಿಗೆ ಈಗ  ತನ್ನನ್ನು ನೋಡಿಕೊಳ್ಳುವ ನಿಮ್ಮ ನೆರಳಿನಾಸರೆ  ಬೇಕಾಗಿದೆಯಲ್ಲವೇ?

೨೮ ಮೇ ೨೦೦೦ದ  ವಿಜಯಕರ್ನಾಟಕದ ಸಾಪ್ತಾಹಿಕ ಸಂಚಿಕೆಯಲ್ಲಿ ಪ್ರಕಟವಾಗಿದೆ.