ಹೆಜ್ಜೆ ಗೆಜ್ಜೆ :
ಈ ಬ್ಲಾಗ್ ನಲ್ಲಿರುವ ವಿಷಯ ಮತ್ತು ಚಿತ್ರಗಳ ಬಳಕೆಗೆ ಅನುಮತಿ ಕಡ್ಡಾಯ.
ಮತ್ತೊಂದು ಕ್ಷಣ ನನ್ನ ಬಗ್ಗೆ ಬದುಕು-ಬರಹ

Monday 5 July 2010

ವಿಮರ್ಶೆ ಗುಂಪುಗಾರಿಕೆಯಾಗಬಾರದು: ಚದುರಂಗ (೧೫ ವರ್ಷದ ಹಿಂದಿನ ಸಂದರ್ಶನ)


ಚದುರಂಗ(ಸುಬ್ರಮಣ್ಯ ರಾಜೆ ಅರಸ್)ರು ಒಬ್ಬ ವಿಶಿಷ್ಟ  ಗದ್ಯ ಶೈಲಿಯ ಲೇಖಕ. ಇವರು ತಮ್ಮದೇ ಶೈಲಿಯಿಂದ ಓದುಗರನ್ನು ಬೆರಗುಗೊಳಿಸುತ್ತಾರೆ. ಇವರು ಸುಮಾರು ಅರ್ಧ ಶತಮಾನದಿಂದ ಬರೆಯುತ್ತಿದ್ದು ಬೆರಳೆಣಿಕೆಯಷ್ಟು ಕೃತಿಗಳನ್ನು ಮಾತ್ರ ಪ್ರಕಟಿಸಿದ್ದರೂ ಓದುಗರ ಹೃದಯದಲ್ಲಿ ಸ್ಥಾನ ಪಡೆದಿರುವುದು ಸರ್ವವಿತ.  ಇವರು ತಮ್ಮ ಎಂಬತ್ತರ ಹರೆಯದಲ್ಲೂ ಉತ್ಸಾಹದಿಂದ ತಿಪಟೂರಿನ ಕಲ್ಪತರು ವಿದ್ಯಾಸಂಸ್ಥೆಯ ಕಾಲೇಜುಗಳ ಪ್ರತಿಭಾಶ್ರೀ -೯೫ರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಸಂದರ್ಶನ.

*ನೀವು ಶಿಕ್ಷಣ ಪಡೆಯುವಾಗ ಸಾಮಾಜಿಕ ಪರಿಸ್ಥಿತಿ ಹೇಗಿತ್ತು? ಮತ್ತು ನಿಮಗೆ ಸಾಹಿತ್ಯದ ಒಲವು ಹೇಗುಂಟಾಯಿತು? 
- ಮೈಸೂರಿನಲ್ಲಿ ರಾಜರ  ಆಡಳಿತವಿದ್ದಾಗ ನಾನಿನ್ನೂ  ಬಾಲಕ. ನಾನು ಮೈಸೂರಿನ ಹತ್ತಿರದ ಕಲ್ಲಹಳ್ಳಿಯವನು. ತಂದೆ ಕೃಷಿಕ, ಅಣ್ಣ ಲಾಯರ್,  ದೇವರಾಜ ಅರಸರ ಹತ್ತಿರದ ಸಂಬಂ. ಶಿಕ್ಷಣ ಕೂಲಿ ಮಠದಿಂದ ಆರಂಭ. ನಂತರ ಮೈಸೂರಿನ ರಾಯಲ್ ಸ್ಕೂಲಿಗೆ ಸೇರಿದೆ. ಆನಂತರ ಆ ಶಾಲೆಯ ವ್ಯವಸ್ಥೆ ಇಷ್ಟಪಡದೆ ಪಬ್ಲಿಕ್ ಸ್ಕೂಲಿಗೆ ಸೇರಿದೆ. ಮುಂದೆ ಪೂನಾದಲ್ಲಿ ‘ಲಾ’ ಅಭ್ಯಾಸ. ಅನಂತರ ಬರಹ ಪ್ರಾರಂಭ. ಪ್ರೇಮ ವಿವಾಹದ ಕಾರಣದಿಂದ ಮನೆಯಲ್ಲಿ ಆಗ ಆದ ಘರ್ಷಣೆಯಿಂದ ಸಾಹಿತ್ಯದ ಕಡೆಗೆ ಒಲವು, ಆವತ್ತು ಸಾಹಿತಿಗಳನ್ನು ಗೌರವಿಸುತ್ತಿದ್ದರು. ಸಾಮರಸ್ಯವಿತ್ತು. ಇಂದು ವಿಮರ್ಶೆ ಹೆಚ್ಚಾಗಿದೆ. ಇದು ಒಳ್ಳೆಯದು, ಒಳ್ಳೆ ವಿಮರ್ಶೆ ಬರಬೇಕು. ಆದರೆ ಗುಂಪುಗಾರಿಕೆಯಾಗಬಾರದು. ನಾನು ಮಾಸ್ತಿಯವರ ಕಥೆಗಳಿಂದ ರೂಪುಗೊಂಡವನು. ಅನಂತರ ಲೋಹಿಯಾ ಮತ್ತು ಕಮ್ಯುನಿಸ್ಟ್ ಸಿದ್ಧಾಂತಗಳಿಂದ ಬರೆಯಲು ಆರಂಭಿಸಿದೆ.

* ವೈಶಾಖದ ಕಾದಂಬರಿಯ ಪ್ರೇರಣೆ ಏನು? -ನನ್ನ ಹಳ್ಳಿಯ ಬದುಕಿನ ಗಾಢವಾದ ಸಂಬಂಧ. * ಈ ಕೃತಿಯ ಬಗೆಗಿನ ಪ್ರತಿಕ್ರಿಯೆ ಹೇಗೆ?
-ನಿರೀಕ್ಷೆ ಮೀರಿದ್ದು, ಕುವೆಂಪು ರುದ್ರಾವಸ್ತುವೆಂದರು. ರಾಜೀವ್ ತಾರಾನಾಥ್ ತುಂಬಿದ ಬುಟ್ಟಿ ಎಂದರು. ಈ ಕೃತಿಗೆ - ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿರುವುದಲ್ಲದೆ, ಈ ಕೃತಿ ತಮಿಳಿಗೂ ತರ್ಜುಮೆಯಾಗಿ ಆ ಕೃತಿಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ.

ಬಂಡಾಯ ಸಾಹಿತ್ಯದ ಪ್ರಕಾರ ನಿರಂತರ ಸಾಹಿತ್ಯ ಪ್ರಾಕಾರವೆನ್ನುವುದಕ್ಕೆ ನೀವು ಕೊಡುವ ಕಾರಣಗಳೇನು? 
-ಬಂಡಾಯ ನಿರಂತರ. ನವೋದಯದ ಪ್ರಕೃತಿಗೆ ಚಿತ್ರಣ ಜಾಸ್ತಿಯಾದಾಗ ವಿಚಾರಕ್ಕೆ ಮತ್ತು ಬದುಕಿಗೆ ಒತ್ತು ಕೊಟ್ಟು ಪ್ರಗತಿಶೀಲ ಪ್ರಾರಂಭವಾಯಿತು. ಪ್ರಗತಿಶೀಲದಲ್ಲಿ ಭಾಷೆಗೆ ಪ್ರಾಮುಖ್ಯವಿಲ್ಲದೆ ಸೊರಗಿತು. ಆಗ ನವ್ಯ ಸಾಹಿತ್ಯ ಹುಟ್ಟಿತು. -ನವ್ಯ ಸಾಹಿತ್ಯದಲ್ಲಿ ಭಾಷೆಯ ಪ್ರಾಮುಖ್ಯತೆ ಹೆಚ್ಚಾಗಿದ್ದು, ದೋಷವೆನಿಸಿತು. ಆಗ ಮತ್ತೆ ಬಂಡಾಯ ಮತ್ತು ದಲಿತ ಸಾಹಿತ್ಯ...,

* ತಮ್ಮ ‘ಸರ್ವಮಂಗಳ’ ಕಾದಂಬರಿಯನ್ನು ತಾವೇ ನಿರ್ದೇಶಿಸಿ ಚಲನಚಿತ್ರವಾಗಿಸಿದ ಅನುಭವವೇನು?
-ಬೇರೆ ನಿರ್ದೇಶಕರು ಕೆಡಿಸುವುದು ಬೇಡ ಎಂದು ನಾನೇ ಕೆಡಿಸಿದೆ (ನಗು) * ಇವತ್ತಿನ ಸಾಮಾಜಿಕ ಮತ್ತು ರಾಷ್ಟ್ರೀಯ ಸಮಸ್ಯೆಗಳಿಗೆ ಸಾಹಿತ್ಯ ಸಮರ್ಥವಾಗಿ ಸ್ಪಂಸಿದೆಯೇ? -ಭಾರತ ವಿಶಾಲವಾದ ದೇಶ. ಭಾಷೆಗಳು ಹಲವು ಅಲ್ಲಲ್ಲಿ ಸ್ಪಂದನವಾಗಿದೆ. ನನಗೆ ತಿಳಿದಿರುವ ಹಾಗೆ ನಮ್ಮಲ್ಲಿಯೂ ಸಾಕಷ್ಟು ಸ್ಪಂದನ ಆಗಿದೆ.

*ಇಂದಿನ ರಾಜಕೀಯ ವಿದ್ಯಮಾನಗಳ ಬಗ್ಗೆ ತಮ್ಮ ಅಭಿಪ್ರಾಯ? 
 -ಶೇಷನ್ ಗುರುತಿನ ಚೀಟಿ ಹಂಚುವ ಕಾರ್ಯಕ್ರಮ ಹಾಕಿಕೊಂಡಿರುವುದು ರಾಜಕೀಯಕ್ಕೆ ಉತ್ತಮ ತಿರುವು ಕೊಡಬಹುದು.  *ತಾವು ಗದ್ಯವನ್ನು ಆರಿಸಿಕೊಂಡಿದ್ದಕ್ಕೆ ಕಾರಣ? -ನಾನು ಕವಿಯಲ್ಲ ಅದಕ್ಕೆ. *ಇತ್ತೀಚೆಗೆ ಒಂದು ಕವನ ಸಂಕಲನ ಬಂದಿದೆಯಲ್ಲ? -ಅದು ಒಂದು ಬದಲಾವಣೆ ಅಷ್ಟೆ.  *ಜೀವನದ ಹಾಗೂ ಲೇಖಕರ ಬಗ್ಗೆ ನಿಮ್ಮ ಸಂದೇಶ ಏನು? -ಯಾವುದಕ್ಕೂ ಬದ್ಧರಾಗಬಾರದು, ಅನಿಸಿದ್ದನ್ನು ಬರೆಯಬೇಕು, ಪ್ರಾಮಾಣಿಕವಾಗಿ ಬದುಕಲು ಪ್ರಯತ್ನಿಸಬೇಕು.  * ತಾವು ಈಗ ಏನನ್ನಾದರೂ ಬರೆಯುತ್ತಿರುವಿರಾ? -ಹೌದು ಹೆಜ್ಜಾಲ ಎನ್ನುವ ಕಾದಂಬರಿ ಬರೆಯುತ್ತಿದ್ದೇನೆ *ಇದರ ತಿರುಳೇನು? -ನನ್ನ ಸಮಗ್ರ ಜೀವನಾನುಭವ.

*ಕೊನೆಯದಾಗಿ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕಾವ್ಯಕಮ್ಮಟಕ್ಕೆ ಸಂಬಂಸಿದಂತೆ ಯುವಕವಿಗಳ ಕವನ ಸಂಕಲನ ‘ಹದಿಹೆಜ್ಜೆ’ ಕೃತಿಯ ಮುನ್ನುಡಿಯಲ್ಲಿ ಜಿ.ಎಚ್. ನಾಯಕ್ರವರು ಪ್ರಸ್ತಾಪಿಸಿರುವ ‘ಕನ್ನಡ ಕಾವ್ಯ ಮತ್ತು ಹೊರಳು ದಾರಿಯಲ್ಲಿದೆ’ ಎಂಬ ಹೇಳಿಕೆ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?
- ನಾನು ಆ ಕಮ್ಮಟಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದೇನೆಂದು ನಿಮಗೆ ಗೊತ್ತು. ಆದರೆ ಆ ಕೃತಿಯನ್ನು ನಾನು ಓದಿಲ್ಲ. ಕಾವ್ಯ ಯಾವಾಗಲೂ ಹೊರಳಲೇಬೇಕು. ಆದರೆ ಅದು ಹೇಗೆ ಹೊರಳುತ್ತದೆ ಎಂಬುದನ್ನು ವಿಮರ್ಶಕರಾದ ಜಿ.ಎಚ್. ನಾಯಕರೆ ಹೇಳಬೇಕು.


ಹೆಸರಾಂತ ಕಾದಂಬರಿಕಾರ ದಿವಂಗತ  ಚದುರಂಗ ( ಸುಬ್ರಮಣ್ಯ ರಾಜೆ ಅರಸ್)ರ  ಈ ಸಂದರ್ಶನ  ತುಮಕೂರಿನ ಪ್ರಜಾಪ್ರಗತಿ ದಿನಪತ್ರಿಕೆಯಲ್ಲಿ ದಿನಾಂಕ ೧೩ ಮಾರ್ಚ್ ೧೯೯೫ ಸೋಮವಾರ ಪ್ರಕಟಗೊಂಡಿದೆ.

No comments:

Post a Comment