ಹೆಜ್ಜೆ ಗೆಜ್ಜೆ :
ಈ ಬ್ಲಾಗ್ ನಲ್ಲಿರುವ ವಿಷಯ ಮತ್ತು ಚಿತ್ರಗಳ ಬಳಕೆಗೆ ಅನುಮತಿ ಕಡ್ಡಾಯ.
ಮತ್ತೊಂದು ಕ್ಷಣ ನನ್ನ ಬಗ್ಗೆ ಬದುಕು-ಬರಹ

Wednesday 14 July 2010

'ಕಮ್ಯುನಿಸ್ಟ್ ಕಲ್ಪನೆಗೆ ಮೈಗಳ್ಳತನ ಮೂಲ' (ಡಾ. ಭೈರಪ್ಪ ಅವರ ೧೧ ವರ್ಷಗಳ ಹಿಂದಿನ ಸಂದರ್ಶನ)

‘ವಿಜಯ ಕರ್ನಾಟಕ’ ದಿನಪತ್ರಿಕೆ ಬಿಡುಗಡೆ ಮಾಡಿದ (೫ ಅಕ್ಟೋಬರ್ ೧೯೯೯) ಖ್ಯಾತ ಕನ್ನಡ ಸಾಹಿತಿ, ಚಿಂತಕ, ಎಸ್.ಎಲ್. ಭೈರಪ್ಪನವರು ಪತ್ರಿಕೆಯ ಬಳಗದೊಂದಿಗೆ ಅನೇಕ ವಿಷಯಗಳನ್ನು ಕುರಿತ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಆ ಅವಿಸ್ಮರಣೀಯ ಅನುಭವಕ್ಕೆ ನೀಡಿದ ಅಭಿವ್ಯಕ್ತಿ ಈ ಲೇಖನ. ಈ ಲೇಖನ ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪುಟ ೧, ಸಂಚಿಕೆ ೨ರಲ್ಲಿ ಪ್ರಕಟಗೊಂಡಿದೆ. ಈ ಸಂದರ್ಶನಕ್ಕೆ ಈಗ ೧೧ ವರ್ಷ. ಆನಂತರ ಈ ಸಂದರ್ಶನ ಆರ್.ಜಿ.ಹಳ್ಳಿ ನಾಗರಾಜ್ ಸಂಪಾದಕತ್ವದ ಅನ್ವೇಷಣೆಯಲ್ಲೂ ಪ್ರಕಟಗೊಂಡಿದೆ.

ಮಠ ಸಂಸ್ಕೃತಿ ಒಳ್ಳೆಯ ಬೆಳವಣಿಗೆ ಅಲ್ಲ. ಮಠಗಳಿಲ್ಲದಿದ್ದರೆ ಮುಂದುವರಿಯಲು ಸಾಧ್ಯವಿಲ್ಲ ಎಂಬ ಮನೋಭಾವ ಎಲ್ಲ ಸಣ್ಣ-ಪುಟ್ಟ ಜಾತಿಗಳಲ್ಲಿ ಬೆಳೆದುಬಿಟ್ಟಿದೆ. ಇದರಿಂದ ಒಗ್ಗಟ್ಟು ಸಾಧ್ಯವಾಗುತ್ತದೆ ಎಂಬುದೂ ಇದಕ್ಕೆ ಕಾರಣ.

ಮಠಗಳಲ್ಲಿ ಅನೇಕ ಒಳ್ಳೆಯ ಬೆಳವಣಿಗೆಗಳಾಗುತ್ತಿವೆ. ಎಲ್ಲ ಮಠಗಳಲ್ಲೂ ಮಕ್ಕಳಿಗೆ ಸಂಸ್ಕೃತ, ವೇದಾಧ್ಯಯನ ಮಾಡಿಸುತ್ತಿದ್ದಾರೆ. ಇದು ಪ್ರತಿಯೊಂದು ಜಾತಿಗಳಲ್ಲಿಯೂ ಪುರೋಹಿತರನ್ನು ಸೃಷ್ಟಿಸುತ್ತದೆ. ಹಾಗೆಯೇ ಹಿಂದುಳಿದ ವರ್ಗಗಳ ಮಠಗಳಲ್ಲಿ ಸ್ವಾಮೀಜಿಗಳು ಬ್ರಾಹ್ಮಣರಂತೆಯೇ ಬದುಕು ನಡೆಸುತ್ತಿದ್ದಾರೆ. ಈ ಜಾತಿಗಳು ಮಠಗಳನ್ನು ಕಟ್ಟಿಕೊಳ್ಳುವ ಮೂಲಕ ಮುಖ್ಯವಾಹಿನಿಗೆ ಬಂದಿವೆ. ಇದರಿಂದ ಜಾತಿಗಳ ನಡುವಿನ ಸಾಂಸ್ಕೃತಿಕ ವ್ಯತ್ಯಾಸಗಳು ಕಡಿಮೆಯಾಗುತ್ತವೆ. ಒಂದು ಕಾಲದಲ್ಲಿ ತಮಗೆ ವೇದ-ಉಪನಿಷತ್ತುಗಳನ್ನು ಅಭ್ಯಾಸ ಮಾಡಲು ಬಿಡುತ್ತಿಲ್ಲ ಎಂದು ದೂರುತ್ತಿದ್ದ ಕೆಳವರ್ಗಗಳಿಗೆ ಇವತ್ತು ಅಂಥ ಅವಕಾಶ ಒದಗಿ ಬಂದಿರುವುದು ಕ್ರಾಂತಿಯಲ್ಲವೆ?

ಇದು, ಜಾತಿಗೊಂದರಂತೆ ಮಠಗಳು ಹುಟ್ಟುತ್ತಿರುವುದಕ್ಕೆ ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪನವರ ಪ್ರತಿಕ್ರಿಯೆ.

ವೇದ-ಉಪನಿಷತ್ತುಗಳನ್ನು ಅಭ್ಯಾಸ ಮಾಡುವುದರಿಂದ ಎಲ್ಲ ಬ್ರಾಹ್ಮಣೀಕರಣವಾಗುತ್ತಿದೆ ಎಂದು ಇವತ್ತು ಅದೇ ಜನಾಂಗಗಳ ಕೆಲವರು ಹೇಳುತ್ತಿರುವುದಕ್ಕೆ ಅರ್ಥವಿಲ್ಲ. ಪ್ರತಿ ಜಾತಿಗೂ ತನ್ನದೇ ಆದ ಸಂಸ್ಕೃತಿ, ಐಡೆಂಟಿಟಿಯ ಪ್ರಶ್ನೆ ಬರುವುದಿಲ್ಲ. ಹಾಗಾದರೆ ಎಲ್ಲರ ನಿಜವಾದ ಸಂಸ್ಕೃತಿ ಯಾವುದೆಂಬ ಪ್ರಶ್ನೆ ಬರುತ್ತದೆ. ಅದು ಉಳಿಯಬೇಕೆಂದರೆ ನೀವು ಜಾತೀಯತೆಯನ್ನು ಬೆಂಬಲಿಸಬೇಕಾಗುತ್ತದೆ. ಶಂಕರಾಚಾರ್ಯರು ಹೇಳಿದ್ದು ಇದನ್ನೆ. ಆಧುನಿಕತೆ ಕೂಡಾ ಇದೇ ಕೆಲಸವನ್ನು ಮಾಡುತ್ತಿದೆ. ಗಂಡು, ಹೆಣ್ಣು, ಜಾತಿ, ಧರ್ಮದ ಪ್ರಶ್ನೆಗಳು ಕಡಿಮೆಯಾಗುತ್ತಿವೆ. ಸಾಂಸ್ಕೃತಿಕ ವ್ಯತ್ಯಾಸ ಇಲ್ಲವಾಗುತ್ತಿದೆ. ಒಟ್ಟಿನಲ್ಲಿ ಮಠಗಳು ಸಾಮಾನ್ಯ ಸಂಸ್ಕೃತಿಯ ಹುಟ್ಟಿಗೆ ಕಾರಣವಾಗುತ್ತಿವೆ. ಆದ್ದರಿಂದ ಸಾಂಸ್ಕೃತಿಕವಾಗಿ ನಾವು ಇಂದು ಒಡೆಯಲು ಸಾಧ್ಯವಿಲ್ಲ. ರಾಜಕೀಯ ಕಾರಣಗಳು ಮಾತ್ರ ನಮ್ಮನ್ನು ಒಡೆಯುತ್ತಿವೆ. ತಾವು ಜಾತಿ-ಧರ್ಮದ ವಿರೋಧಿಯಾಗಿದ್ದರೂ ಪರಂಪರೆಯಲ್ಲಿ ನಂಬಿಕೆ ಇಟ್ಟವರು ಎಂದು ಭೈರಪ್ಪ ಹೇಳಿದರು.

ಕನಿಷ್ಠ ಪದವಿಪೂರ್ವ ಮಟ್ಟದವರೆಗೆ ಪ್ರಾದೇಶಿಕ ಭಾಷೆಗಳು ಶಿಕ್ಷಣ ಮಾಧ್ಯಮವಾಗಬೇಕು ಎಂಬುದು ಭೈರಪ್ಪನವರ ಅಭಿಮತ. ಅನೇಕ ಘಟಕಗಳು ವ್ಯಕ್ತಿತ್ವವನ್ನು ರೂಪಿಸುವುದರಿಂದ ವ್ಯವಸ್ಥೆಯನ್ನು ರೂಪಿಸುವ ಸ್ಥಾನದಲ್ಲಿರುವ ಎಲ್ಲರಿಗೂ ಸಾಮಾಜಿಕ ಅರಿವುಗಳೂ, ಬದ್ಧತೆಗಳೂ ಇರಬೇಕು. ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣ ಕ್ರಮ ಬದಲಾಗಬೇಕು. ನಮ್ಮ ಭಾಷೆಯನ್ನು ಆ ಮೂಲಕ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಮಾತೃ ಭಾಷಾ ಶಿಕ್ಷಣ ಅತ್ಯಗತ್ಯ. ಆದರೆ ಶಿಕ್ಷಣ ನೀತಿಯನ್ನು ರೂಪಿಸುವ ರಾಜಕಾರಣಿಗಳಿಗೆ ಸಾಂಸ್ಕೃತಿಕ ಕಾರಣಗಳ ಮಹತ್ವ ತಿಳಿಯುವುದೇ ಇಲ್ಲ. ಆದ್ದರಿಂದ ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಹಳ್ಳಿಗಳಲ್ಲೂ ಕಾನ್ವೆಂಟ್ ತೆಗೆಯುವುದನ್ನು ಅಭಿವೃದ್ಧಿ ಎಂದುಕೊಂಡಿದ್ದಾರೆ.

ನಮ್ಮ ಪೋಷಕರೂ ಇಂಗ್ಲಿಷ್ನಲ್ಲಿ ಓದಿದ ತಕ್ಷಣ ಎಲ್ಲವೂ ಸಿಕ್ಕಿಬಿಡುತ್ತದೆಂಬ ಭ್ರಮೆಯಿಂದ ಹೊರಬರಬೇಕು. ಉದಾಹರಣೆಗೆ ಕಂಪ್ಯೂಟರ್ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನದಿಂದ ಇಂಗ್ಲಿಷ್ನಲ್ಲಿ ಮಾಡಬಹುದಾದ ಎಲ್ಲವನ್ನೂ ಕನ್ನಡದಲ್ಲೇ ಮಾಡಲು ಸಾಧ್ಯವಿರುವಾಗ ಇಂಗ್ಲಿಷ್ನ ಹಂಗೇಕೆ?

ಚಳವಳಿಗಳು ಎಲ್ಲ ಕಾಲಕ್ಕೂ ಪ್ರಸ್ತುತ. ಅಲ್ಲಿನ ಅನಾರೋಗ್ಯಕರ ಬೆಳವಣಿಗೆಗಳೆಂದರೆ ಅನಗತ್ಯ ಬದ್ಧತೆ. ಚಳವಳಿಗಳಿಗೆ ಸಿದ್ಧಾಂತವಿರಬೇಕು. ಆದರೆ ಅದು ಚಳವಳಿಯ ಮಿತಿಯೂ ಆಗಬಾರದು. ಪ್ರಗತಿಶೀಲರೂ, ಬಂಡಾಯದವರು ಬೈಗುಳದ ಮಾರ್ಗ ಹಿಡಿದಿದ್ದು ಸಮಾಜವನ್ನು ಒಡೆಯುವ ಕ್ರಿಯೆ. ಅನೇಕ ಚಳವಳಿಗಳ ವಿಫಲತೆಗೆ ದ್ವೇಷ, ಅನಗತ್ಯ ಆಕ್ರೋಶಗಳು ಕಾರಣ. ಹಾಗೆಯೇ ಒಂದು ಪತ್ರಿಕೆ ಕೂಡಾ. ಪತ್ರಿಕೆಗೆ ಸಾಮಾಜಿಕ ಜವಾಬ್ದಾರಿ ಇರಬೇಕು. ಪತ್ರಕರ್ತನಿಗೆ ಸ್ವಾತಂತ್ರ್ಯ ಇರಬೇಕು ಇದರಿಂದ ಹೊಸದು ಹುಟ್ಟಲು ಸಾಧ್ಯವಾಗುತ್ತದೆ. ಆದರೆ ಒಂದು ಸಿದ್ಧಾಂತಕ್ಕೆ ಬದ್ಧವಾಗತೊಡಗಿದಂತೆ ಕೆಲವೇ ಕೆಲವು ಜನರ ಕೈಗೆ ಸಿಕ್ಕು ಸಾಮಾನ್ಯ ಜನರಿಂದ ದೂರವಾಗತೊಡಗುತ್ತವೆ. ಹಾಗೆಯೇ ಸಾಯುತ್ತವೆ. ಪತ್ರಕರ್ತನ ಸುತ್ತಾ ಹೆಣೆದಿರುವ ‘ತಂತು’ ಕಾದಂಬರಿಯನ್ನು ಬರೆಯುವಾಗ ನಾವು ಭೇಟಿ ಮಾಡಿದ ಅನೇಕ ಪತ್ರಕರ್ತರು, ಪತ್ರಿಕಾಲಯಗಳ ಬಗ್ಗೆ ಭೈರಪ್ಪನವರು ಮಾತನಾಡಿದರು.

ಭಾರತದ ಕಮ್ಯೂನಿಸ್ಟ್ ಕಲ್ಪನೆ ಮೈಗಳ್ಳತನದಿಂದ ಬಂದದ್ದು. ಬಾಂಗ್ಲಾದಿಂದ ವಲಸೆ ಬಂದ ಸೋಮಾರಿಗಳಿಗೆ ಆಪ್ತವೆನಿಸಿದ್ದು ಕಮ್ಯುನಿಸ್ಟ್ ಸಿದ್ಧಾಂತ. ಪಶ್ಚಿಮ ಬಂಗಾಳವನ್ನು ಜ್ಯೋತಿಬಸು ೨೫ ವರ್ಷ ಆಳುವುದು ಮುಖ್ಯವಾಗುವುದಿಲ್ಲ. ಬದಲಾಗಿ ತನ್ನ ಅವಯಲ್ಲಿ ಮಾಡಿದ ಕೆಲಸಗಳು, ತಂದ ಸುಧಾರಣೆಗಳು ರಾಷ್ಟ್ರ ಕಟ್ಟುವಲ್ಲಿ ಮುಖ್ಯವಾಗುತ್ತವೆ. ಬದಲಾವಣೆಗಳಿಗೆ ಒಡ್ಡಿಕೊಳ್ಳದೆ ಒಂದು ಸಿದ್ಧಾಂತದ ಅಡಿಯಲ್ಲಿ ಅಭಿವೃದ್ಧಿಯನ್ನು ನಿರ್ಲಕ್ಷಿಸಿದರೆ ಸಂಪನ್ಮೂಲಗಳು ಬೇರೆ ಕಡೆ ಹರಿಯತೊಡಗುತ್ತವೆ. ಈ ದೃಷ್ಟಿಯಲ್ಲಿ ಕೇರಳ ಕೂಡಾ ಭಿನ್ನವಾಗುವುದಿಲ್ಲ.

ಉದಾರೀಕರಣ ವ್ಯಾಪಾರಕ್ಕೆ ಸಂಬಂಸಿದ್ದು. ಅದು ನಮ್ಮ ಸಂಸ್ಕೃತಿಗೆ ನೇರವಾಗಿ ಸಂಬಂಸಿದ್ದಲ್ಲ. ಆದರೆ ಅದರಿಂದ ನಮ್ಮ ಸಂಸ್ಕೃತಿಯ ಮೇಲಾಗುವ ಪರಿಣಾಮಗಳ ಬಗ್ಗೆ ತಕ್ಷಣ ಹೇಳಲು ಸಾಧ್ಯವಿಲ್ಲವಾದರೂ ಅಂಥ ವೈರುಧ್ಯಗಳ ನಡುವೆ ಬದುಕಬೇಕಾದ ಅನಿವಾರ್ಯ ಇದ್ದೇ ಇದೆ. ಸಂಸ್ಕೃತಿಗೆ ಸಂಬಂಸಿದ ಎಲ್ಲ ಬದಲಾವಣೆಗಳೂ ನಮ್ಮ ಪರಂಪರೆಗನುಗುಣವಾಗಿಯೇ ಆಗಬೇಕು. ಪಾಶ್ಚಾತ್ಯರೂ ಸೇರಿದಂತೆ ಎಲ್ಲರ ಕಡೆಯಿಂದ ಬರುವ ಬದಲಾವಣೆಗಳು, ತಕ್ಷಣಕ್ಕೆ ಹಿತವೆನಿಸಿದರೂ ನಾವು ಅದರಿಂದಲೇ ರೂಪಿತವಾಗುತ್ತೇವೆ ಎನ್ನುವುದು ಸುಳ್ಳು.

ನಮ್ಮ ಸಂಸ್ಕೃತಿ ಪರಂಪರೆಯನ್ನು ಬಿಟ್ಟು ಯೋಚಿಸುವುದೆಂದರೆ ನೀರಿನಿಂದ ಹೊರ ತೆಗೆದ ಮೀನಿನಂತೆ. ಉತ್ತಮವಾದದ್ದನ್ನು ಕೇಳುವುದು, ಪಡೆಯುವುದೇ ಬೇರೆ. ನಮ್ಮ ಸಂಸ್ಕೃತಿಯೇ ಬೇರೆ. ಉದಾರೀಕರಣಕ್ಕೆ ತೆರೆದುಕೊಂಡ ಜಪಾನ್ನಂಥ ದೇಶಕ್ಕೆ ತನ್ನದೇ ಆದ ದೇಶೀಯ ನೀತಿಯೊಂದನ್ನು ಅನುಸರಿಸಲು ಸಾಧ್ಯವಾದುದರಿಂದ ಅದು ಜಗತ್ತಿನ ಪ್ರಬಲ ರಾಷ್ಟ್ರಗಳ ಪೈಕಿ ಒಂದಾಯಿತು.

ಸ್ವದೇಶಿ ಎನ್ನುವ ವಿಚಾರ ತುಂಬಾ ದೊಡ್ಡದು. ಪ್ರತ್ಯೇಕ ಕ್ಷೇತ್ರಗಳನ್ನು ಕುರಿತು ಹೇಳಬೇಕಾಗುತ್ತದೆ. ೧೯೪೭ರ ನಂತರ ನೆಹರೂಗೆ ರಷ್ಯಾದ ಸಮಾಜವಾದ ಪ್ರಭಾವ ಬೀರಿತು. ಆಗ ಹಣ ಸಂಪಾದನೆ ಮಾಡುವುದೇ ಒಂದು ಪಾಪ ಎಂಬ ಸಿದ್ಧಾಂತವನ್ನು ಪ್ರತಿಪಾದನೆ ಮಾಡಲಾಯಿತು. ಈ ಥರದ ಫಿಲಾಸಫಿ ಆಗಿನ ಯುವ ತಲೆಮಾರುಗಳಲ್ಲಿ ಸ್ವ ಉದ್ಯೋಗದ ಪರಿಕಲ್ಪನೆಯನ್ನೇ ಹಾಳುಮಾಡಿತು. ಇದರಿಂದ ಎಲ್ಲ ವಿದ್ಯಾವಂತರೂ ಕೆಲಸ ಇಲ್ಲ ಅನ್ನೋಕೆ ಪ್ರಾರಂಭಿಸಿದರು. ಸ್ವಂತ ಉದ್ಯೋಗ ಮಾಡುತ್ತೇನೆ ಎನ್ನುವ ಒಂದು ಹುಡುಗನ ಪಾತ್ರವನ್ನು ಕತೆಯಲ್ಲಿ ಸೃಷ್ಟಿ ಮಾಡಿದರೆ, ವಿದೇಶಿ ವ್ಯಾಮೋಹಿ ಅಂತ ವಿಮರ್ಶಕರೇ ಗೇಲಿ ಮಾಡುತ್ತಿದ್ದರು. ಆದರೆ ಅದೇ ಥರದ ಕತೆ ಇವತ್ತು ಪ್ರಗತಿಪರವಾಗುತ್ತದೆ. ಪ್ರಸ್ತುತವಾಗುತ್ತದೆ.

ಮುಕ್ತ ಮಾರುಕಟ್ಟೆ, ಜಾಗತೀಕರಣಗಳು ಹೊಸ ಸಾಧ್ಯತೆಗಳನ್ನು ಹುಟ್ಟು ಹಾಕಿರುವಂತೆ ಅನೇಕ ರೀತಿಯ ಎರಡೂ ಥರದ ಬದಲಾವಣೆಗಳಿಗೆ ಕಾರಣವಾಗಿದೆ. ಸ್ವದೇಶಿ ವಾದವನ್ನು ಕುರಿತು ರಾಜಕಾರಣಿಗಳು, ಬುದ್ಧಿಜೀವಿಗಳು ಪರಸ್ಪರ ವಿರುದ್ಧ ದಿಕ್ಕಿನಿಂದ ಮಾತನಾಡುತ್ತಿದ್ದಾರೆ ಅನ್ನಿಸುವುದನ್ನೂ ಕೂಡಾ ಮೇಲೆ ವಿವರಿಸಿರುವ ಹಿನ್ನಲೆಯಲ್ಲಿ ನೋಡಬೇಕಾಗಿದೆ. ಆದ್ದರಿಂದಲೇ ತಕ್ಷಣಕ್ಕೆ ತೀರ್ಮಾನಕ್ಕೆ ಬರಲು ಅನೇಕ ಮಿತಿಗಳಿವೆ. ಹಾಗೆಯೇ ಗಾಂಯವರ ಸ್ವದೇಶಿವಾದ, ಅಹಿಂಸಾವಾದ ಕೂಡಾ. ಬ್ರಿಟಿಷರಲ್ಲಿ ಸಾಕಷ್ಟು ಸಮಾಜವಾದದ ಅರಿವು ಇದ್ದದ್ದರಿಂದ ಗಾಂಯವರ ಅಹಿಂಸಾವಾದ ಕೆಲಸ ಮಾಡಿತು. ಹಿಟ್ಲರನೇನಾದರೂ ನಮ್ಮನ್ನಾಳುತ್ತಿದ್ದರೆ ಗಾಂಜಿಯವರನ್ನು ಕೊಲ್ಲಿಸುತ್ತಿದ್ದ. ಆದ್ದರಿಂದ ಎಲ್ಲ ವಾದಗಳೂ ಎಲ್ಲ ಕಾಲಕ್ಕೂ ಪ್ರಸ್ತುತವಲ್ಲ. ಒಟ್ಟಿನಲ್ಲಿ ಎಲ್ಲ ವೈರುಧ್ಯಗಳ ನಡುವೆ ನಮ್ಮನ್ನು ರೂಪಿಸುವ ದಿಟ್ಟ ನಾಯಕರ ಕೊರತೆ ಇದೆ. ಎಲ್ಲರ ಕ್ಷೇಮಕ್ಕಾಗಿ ಎಲ್ಲವನ್ನೂ ಸ್ವೀಕರಿಸಬೇಕು. ಇದು ನಿಜವಾದ ಸ್ವದೇಶಿವಾದ ಎಂದರು ಭೈರಪ್ಪ.

No comments:

Post a Comment