ಹೆಜ್ಜೆ ಗೆಜ್ಜೆ :
ಈ ಬ್ಲಾಗ್ ನಲ್ಲಿರುವ ವಿಷಯ ಮತ್ತು ಚಿತ್ರಗಳ ಬಳಕೆಗೆ ಅನುಮತಿ ಕಡ್ಡಾಯ.
ಮತ್ತೊಂದು ಕ್ಷಣ ನನ್ನ ಬಗ್ಗೆ ಬದುಕು-ಬರಹ

Tuesday 6 July 2010

ಅಮ್ಮನಿಗೆ ಜೋಗುಳ

ಮೊದಲ ಬಾರಿಗೆ ಅಮ್ಮನನ್ನೇ ಕುರಿತ ಹಾಡುಗಳ ಸಿ.ಡಿ ಬಂದಿದೆ. ನಮ್ಮನ್ನೆಲ್ಲಾ ಜೋಗುಳ ಹಾಡಿ ಬೆಳಸಿರುವ ಅಮ್ಮಂದಿರಿಗೇ ಜೋಗುಳಗಳ ಮಾಲೆಯನ್ನು ಸಂಗೀತ ನಿರ್ದೇಶಕ ಎಸ್.ಆರ್. ರಾಮಕೃಷ್ಣ ಮತ್ತು ಗೆಳೆಯರು ಕಟ್ಟಿಕೊಟ್ಟಿದ್ದಾರೆ.  ಜಾನಪದ ಶೈಲಿಯಲ್ಲಿ ತುಂಬಾ ದೇಶಿ ಅನ್ನುವಂತೆ ರಾಗ ಸಂಯೋಜಿಸಿರುವುದೇ ಈ ಹಾಡುಗಳ ಹೆಗ್ಗಳಿಕೆ.

ವಚನಗಳಂತೆ ತುಂಬಾ ಪ್ರಖರವಾಗಿ ತಟ್ಟುವ ಅಮ್ಮನ ಚಿತ್ರಗಳು ಇಲ್ಲಿ ಝಗಮಗಿಸುತ್ತವೆ. ಅಮ್ಮನನ್ನು ಹೀಗೂ ನೆನೆಯಬಹುದೆಂದು ತೋರಿಸಿಕೊಟ್ಟಿರುವ ಈ ಅಪರೂಪದ ರೂಪಾಂತರದ ಹಾಡುಗಳಿಗೆ ಕಿವಿಯಾದರಷ್ಟೇ ಅವುಗಳ ಸೊಗಸನ್ನು ಅರಿಯಬಹುದು.

ಮೊಗಳ್ಳಿ ಗಣೇಶ್, ನಟರಾಜ್ ಬೂದಾಳ್, ನಾಗತಿಹಳ್ಳಿ ರಮೇಶ್ ಮುಂತಾದವರ ಪದ್ಯಗಳನ್ನು ಹೊಸ ರೀತಿಯಲ್ಲಿ ಕಟ್ಟಿಕೊಡಲಾಗಿದೆ. ನಾಗತಿಹಳ್ಳಿ ಅವರ ಅಮ್ಮ, ನೀಲಗಿರಿ ಪದದ ಕೆಂಪಕ್ಕನ ಹಾಡೂ ಇಲ್ಲಿ ಸೇರಿರುವುದು ವಿಶೇಷ. ಜನ್ನಿಯವರ ಕಂಚಿನ ಕಂಠ, ಮಂಗಳಾ, ಸುಪ್ರಿಯಾ ಆಚಾರ್ಯ, ಮುಖೇಶ್, ನಾಗಚಂದ್ರಿಕಾ, ರತ್ನ ಸಕಲೇಶಪುರ ಮುಂತಾದವರ ಬೇರೆ, ಬೇರೆ ಸ್ವರ ತಂತುಗಳು ತೀವ್ರವಾಗಿ ತಟ್ಟುತ್ತವೆ.

ಎಲ್ಲರೆಲ್ಲರ ಅಮ್ಮನೂ ನಮ್ಮಮ್ಮನೇ ಆಗುವ ಈ ಅಮ್ಮಂದಿರ ಮುಚ್ಚಟೆಯಿಂದ ವಂಚಿತರಾಗಬೇಡಿ.  ವ್ಯಾಪಾರಿ ದೃಷ್ಟಿ ಬಿಟ್ಟು ಪ್ರಯೋಗಾತ್ಮಕವಾಗಿ ಇದನ್ನು ಮಾಡಲಾಗಿದೆ. ಹಾಗಾಗಿ ಅನೇಕ ಪ್ರತಿಭಾವಂತರ ಸಂಗಮದಿಂದ ತುಂಬಾ ವೈವಿಧ್ಯತೆ ದಕ್ಕಿದೆ. ಈ ಮೂಲಕ ಕನ್ನಡ ಕೇಳುಗ ಜಗತ್ತಿಗೆ ಹೊಸ ಸಾಧ್ಯತೆಯನ್ನು ರಾಮ್ (೯೮೪೫೭೨೧೨೦೨) ತೋರಿಸಿಕೊಟ್ಟಿದ್ದಾರೆ.

 ೨೧ ಜೂನ್ ೨೦೦೯ರ  ವಿಜಯಕರ್ನಾಟಕದ  ಸಾಪ್ತಾಹಿಕ  ಪುರವಣಿಯಲ್ಲಿ ಪ್ರಕಟವಾಗಿದೆ. 

No comments:

Post a Comment