ಹೆಜ್ಜೆ ಗೆಜ್ಜೆ :
ಈ ಬ್ಲಾಗ್ ನಲ್ಲಿರುವ ವಿಷಯ ಮತ್ತು ಚಿತ್ರಗಳ ಬಳಕೆಗೆ ಅನುಮತಿ ಕಡ್ಡಾಯ.
ಮತ್ತೊಂದು ಕ್ಷಣ ನನ್ನ ಬಗ್ಗೆ ಬದುಕು-ಬರಹ

Monday 5 July 2010

ದಲಿತ ಲೋಕದ ನಾನಾ ಮುಖ ತೋರುವ ನಾಟಕ: ಮಣೆಗಾರ


ದಲಿತ ಆತ್ಮಕತೆಗಳ ಸಾಲಿನಲ್ಲಿ ಮರಾಠಿ ಆತ್ಮಕತೆಗಳಿಗೆ ಪ್ರತ್ಯೇಕ ಪಾಲಿದೆ. ಕನ್ನಡದ ಮಟ್ಟಿಗೆ ಕವಿ ಡಾ. ಸಿದ್ದಲಿಂಗಯ್ಯನವರ ಊರು-ಕೇರಿ ಹೊರತುಪಡಿಸಿ ಹೆಚ್ಚು ಸುದ್ದಿಯಾದದ್ದು ದಲಿತರಲ್ಲಿ ಎಡಗೈ ಗುಂಪಿಗೆ ಸೇರಿದ ರಾಮಯ್ಯನವರ ಆತ್ಮಕತೆ ‘ಮಣೆಗಾರ’. ಇದು ಊರುಕೇರಿಗಿಂತ ಬೇರೆಯದೇ ಧಾಟಿ ಮತ್ತು ಸಂಕಟಗಳನ್ನು ಒಳಗೊಂಡಿದೆ.

ಹಸಿವು- ಅನ್ನ, ಜಾತಿ-ಅವಮಾನಗಳ ಸುರುಳಿಯೊಳಗೆ ಸಿಕ್ಕಿರುವ ಒಂದಿಡೀ ಜಾತಿಯ ಪ್ರತಿನಿ ರಾಮಯ್ಯ ಮತ್ತು ಅವರ ಕುಟುಂಬ  ಪಟ್ಟ ಪಾಡುಗಳನ್ನು ಒಂಚೂರು ಆಡಂಬರ, ಅಬ್ಬರ, ಮೆಲೋ ಡ್ರಾಮಾಗಳಿಲ್ಲದೆ ಕೃತಿಯಂತೆಯೇ ಸಹಜವಾಗಿ ರಂಗದ ಮೇಲೆ ತರಲಾಗಿದೆ. ಅದು ಎಷ್ಟೊಂದು ಸಹಜ ಅಂದರೆ ಕಣ್ಣು ತನ್ನಷ್ಟಕ್ಕೆ ತಾನೆ ಒದ್ದೆಯಾಗುತ್ತದೆ. ಕೆಲವು ಕಡೆ ಲಘುಹಾಸ್ಯದ ಧಾಟಿಯಲ್ಲಿ ಕ್ರೂರ ಸತ್ಯಗಳನ್ನು ಅಭಿನಯಿಸುವಾಗ ಶಿಳ್ಳೆಗಳ ಅಬ್ಬರವೂ ಸಹಜವಾಗಿಯೇ ಬಂದುಬಿಡುತ್ತದೆ.

ಕೊಡುವ ಸ್ಥಾನದಲ್ಲಿರುವವನಿಗೆ ಪಡೆಯುವವನ ಕರುಳ ಸಂಕಟಗಳು ಅರ್ಥವಾಗುವುದಿಲ್ಲ. ದಲಿತರೂ ಸೇರಿದಂತೆ ಎಲ್ಲರನ್ನೂ ಇನ್ನೂ ಕಾಪಾಡುತ್ತಿರುವ, ಮುಂದೆಯೂ ಕಾಪಾಡಬಲ್ಲದೆಂಬ ಆತ್ಮ ವಿಶ್ವಾಸ ಹುಟ್ಟಿಸುವ ‘ಸ್ವಾಭಿಮಾನ’ ಎಂಬ ಅದ್ಭುತವನ್ನು ಮತ್ತೆ ಮತ್ತೆ ಒತ್ತಿ ಹೇಳುವ ರಾಮಯ್ಯನವರ ನೌಕರಿಯ ಮೊದಲ ಮತ್ತು ನಂತರದ ಹೋರಾಟಗಳು ಮನ ಕಲಕುತ್ತವೆ. ಸಮುದ್ರದ ನೆಂಟಸ್ತನ, ಉಪ್ಪಿಗೆ ಬರ ಎಂಬಂತೆ, ಊರಲ್ಲಿ ಎಲ್ಲರೂ ಪರಸ್ಪರ ಅಕ್ಕ, ಮಾಮ, ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಪ್ಪ, ದೊಡ್ಡಮ್ಮ ಎಂದು ಕರೆದುಕೊಂಡರೂ, ಜಾತಿ ಶ್ರೇಣಿಗಳು ದಲಿತರನ್ನು ಹೇಗೆ ಶೋಷಿಸುತ್ತವೆ ಎಂಬ ಸಮಾಜದ ಕ್ರೂರ ಮುಖಗಳನ್ನು ಕಟ್ಟಿಕೊಟ್ಟಿರುವ ರೀತಿಯನ್ನು ರಂಗದ ಮೇಲೆ ನೋಡಿಯೇ ಕಣ್ತುಂಬಿಕೊಳ್ಳಬೇಕು. ಕೋಣ ಕಡಿಯುವ ಮಾರಿಹಬ್ಬ, ಸರಗು(ದೇವರಿಗಿಟ್ಟ ನೈವೇಧ್ಯವನ್ನು ಕೋಣನ ರಕ್ತ ಬೆರೆಸಿ) ಚೆಲ್ಲುವುದು ಸೇರಿ ಅನೇಕ ದೃಶ್ಯಗಳು ಹಟ್ಟಿಯನ್ನು, ಹಳ್ಳಿಯನ್ನು ಒಟ್ಟೊಟ್ಟಿಗೆ ರಂಗದ ಮೇಲೆ ನಿಲ್ಲಿಸುತ್ತವೆ.

ಬೇಡಿತಿನ್ನುವ ಮಾದಿಗರನ್ನು ಅನ್ನಕ್ಕಾಗಿ ಕಾಡಿ ತಿನ್ನುವ ದಕ್ಕಲರ ಚಿತ್ರಣವಂತೂ ಹಸಿವಿನ ಅಗಾಧ ಸಂಕಟದೊಂದಿಗೆ ಮನಕ್ಕೆ ನಾಟಿಬಿಡುತ್ತದೆ. ದಲಿತರ ಹುಡುಗನೊಬ್ಬ ಕುರುಬನ ಕೊಳಲಿಗೆ ಆಸೆ ಪಡುವುದು, ಅದನ್ನು ಕುರುಬನ ಅನುಪಸ್ಥಿತಿಯಲ್ಲಿ ಬಾಯಿಗಿಟ್ಟು ನಲಿವಾಗ ಕಾಣುವ ಕನಸನ್ನು ಎಷ್ಟು ಅಭೂತಪೂರ್ವವಾಗಿ ಸೃಷ್ಟಿಸಲಾಗಿದೆ ಎಂದರೆ ಕಾರಂತರ ‘ಗೋಗುಲ ನಿರ್ಗಮನ’ ನಾಟಕದ ಕ್ಲಾಸಿಕ್ ದೃಶ್ಯಗಳ ನೆನಪನ್ನು ತರುತ್ತದೆ. ದೃಶ್ಯದಿಂದ ದೃಶ್ಯಕ್ಕೆ ಚಲನಚಿತ್ರದಷ್ಟೇ ವೇಗವಾಗಿ ತನ್ನ ಎಲ್ಲ ಪರಿಣಾಮಗಳೊಂದಿಗೆ ಕತೆ ಬೆಳೆಯುತ್ತದೆ, ಸಾಗುತ್ತದೆ. ಎಲ್ಲೂ ಅಶ್ಲೀಲವೆನ್ನಿಸದ ಬೈಯ್ಗುಳಗಳು, ಶಾಲೆಯಲ್ಲಿ ಗುರುಗಳು ಮಾಡುವ ಜಾತಿ ತಾರತಮ್ಯದಿಂದ ಆತ್ಮಹತ್ಯೆಗೆ ಶರಣಾಗುವ ರಾಮಯ್ಯ ಅವರ ಸಹೋದರನ ಸಾವಂತೂ ಮನ ಕಲಕುತ್ತದೆ.  ಇದೆಲ್ಲಕ್ಕೂ ಜಾತಿಯೊಂದನ್ನೇ ಕಾರಣ ಮಾಡದೆ ಒಟ್ಟು ಸಮಾಜ ಇದರ ಹೊಣೆ ಎಂಬಂತೆ ಚಿತ್ರಿಸಿರುವಲ್ಲಿ ನಿರ್ದೇಶಕ ಶಿವಶಂಕರನ ಜಾಣ್ಮೆ ಎದ್ದು ಕಾಣುತ್ತದೆ.


ದಲಿತರ ನಂಬುಗೆ, ಸೇವೆ, ಅವರನ್ನು ಇತರರು ನಡೆಸಿಕೊಳ್ಳುವ ರೀತಿಗಳನ್ನು ಸಣ್ಣ,ಸಣ್ಣ ದೃಶ್ಯಗಳಲ್ಲಿ ಎಲ್ಲಿಯೂ ಬೋರು ಹೊಡೆಯದಂತೆ ಪೋಣಿಸಲಾಗಿದೆ.  ಆ ದೃಷ್ಟಿಯಿಂದ ಇದು ಒಟ್ಟು ಸಮಾಜ ನೋಡಬೇಕಾದ ನಾಟಕ. ನಾಟಕದ ಓಘ, ಸಹಜತೆಗಳಿಂದ ಬಿಚ್ಚಿಕೊಳ್ಳುವ ದಲಿತ ಲೋಕದ ಬೇರೆ ಬೇರೆ ಮುಖಗಳನ್ನು ತುಂಬಾ ಚಲನಶೀಲ ರೀತಿಯಲ್ಲಿ ಹೇಳಲಾಗಿದೆ. ಅದಕ್ಕಾಗಿ ಕೆಲವು ಸೆಲ್ಯುಲಾಯಿಡ್ ತಂತ್ರಗಳನ್ನೂ ಬಳಸಿಕೊಳ್ಳಲಾಗಿದೆ. ಮೊದಲ ಪ್ರದರ್ಶನವಾದ್ದರಿಂದ ಸಣ್ಣಪುಟ್ಟ-ದೋಷಗಳನ್ನು ಮರೆತುಬಿಡಬೇಕೆಂದರೂ ತಪ್ಪುಗಳೇ ಇಲ್ಲವೆನ್ನುವಷ್ಟು ಚೆನ್ನಾಗಿ ನಾಟಕ ಬಂದಿದೆ. ತುಂಬಾ ಕಡೆ ನಾಟಕದ ‘ಘಮ’ ರಂಗಾಯಣ, ನೀನಾಸಂ ತಂಡಗಳ ನಾಟಕಗಳನ್ನು ನೆನಪಿಸುತ್ತದೆ. ಮುದ ಕೊಡುವ ಸಂಗೀತ, ಬೆಳಕು, ವಸ್ತ್ರವಿನ್ಯಾಸ ಯಾವುದನ್ನೂ ಬೆರಳು ಮಡುಚುವಂತಿಲ್ಲ. ಪಾತ್ರಧಾರಿಗಳೆಲ್ಲರೂ ನೀರಿನ ಹರಿವಿನಂತೆ ಸಹಜ.

ನಾಟಕಕ್ಕೆ ಮೊದಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಾಟಕಕಾರ ಚಂದ್ರಶೇಖರ ಕಂಬಾರರು, ನಾಟಕಕ್ಕೆ ಮುಖ್ಯ ಸರಕು ಸಂಘರ್ಷ, ಆತ್ಮಕತೆಯೊಂದರಲ್ಲಿ ಬರುವ ಸಂಘರ್ಷಗಳನ್ನು  ಸಾದೃಶ್ಯಗೊಳಿಸುವುದು ಸುಲಭದ ಕೆಲಸವಲ್ಲ. ಕತೆ, ಕಾದಂಬರಿ, ಪದ್ಯಗಳ ಕಥನವನ್ನು ರಂಗಕ್ಕೆ ತರುವಾಗ ಇರುವ ಸವಾಲು ಅದು. ಹಾಗಾಗಿ ಈ ಸವಾಲನ್ನು ಶಿವಶಂಕರ್ ಹೇಗೆ ಗೆದ್ದಿದ್ದಾರೆ ಎಂಬ ಕುತೂಹಲದಿಂದ ತಾನು ನಾಟಕ ನೋಡಲು ಬಂದಿರುವುದಾಗಿ ಹೇಳಿದರು. ಇದನ್ನು ಕವಿ ಕೆ.ಬಿ. ಸಿದ್ದಯ್ಯ ಅವರೂ ಅನುಮೋದಿಸಿ ಮಾತನಾಡಿದರು. ಇದಕ್ಕೆ ಉತ್ತರ ನೀಡುವವರಂತೆ ಮಾತನಾಡಿದ ಅಧ್ಯಕ್ಷತೆ ವಹಿಸಿದ್ದ  ಹಿರಿಯ ವಿಮರ್ಶಕ ಕೆ. ಮರುಳಸಿದ್ದಪ್ಪ ಅವರು, ನಾಟಕಪರಂಪರೆಗಿಂತ ಕಥನ ಪರಂಪರೆಯಲ್ಲೇ ಕನ್ನಡರಂಗಭೂಮಿಗೆ ಹೆಚ್ಚು ಇತಿಹಾಸವಿದೆ. ನಾಟಕಗಳನ್ನು ರಂಗದ ಮೇಲೆ ತರುವುದು ಹೊಸ ಪರಂಪರೆ, ಮೊದಲಿನಿಂದಲೂ ಕತೆ, ಪುರಾಣ ಮತ್ತು ಮಹಾಕಾವ್ಯಗಳನ್ನೇ ನಾಟಕಗಳನ್ನಾಗಿ ರಂಗದ ಮೇಲೆ ತಂದು ಜನರಿಗೆ ಮುಟ್ಟಿಸಲಾಗಿದೆ. ಹಾಗಾಗಿ ‘ಮಣೆಗಾರ’ ನಾಟಕವಾಗುವ ಎಲ್ಲ ಅರ್ಹತೆಯನ್ನೂ ಪಡೆದಿದೆ ಎಂದರಲ್ಲದೆ ಇದನ್ನು ಸಮರ್ಥವಾಗಿ ರಂಗಕ್ಕೆ ತರುವ ಶಕ್ತಿ ಹಾಲ್ಕುರಿಕೆ ಶಿವಶಂಕರ್ಗೆ ಇದೆ ಎಂದರು. ಇದೆಲ್ಲ ನಡೆದದ್ದು  ಗುರುವಾರ(೧ನೇ ಜುಲೈ ೨೦೧೦) ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ.

೪ ಜುಲೈ ೨೦೧೦ರ  ವಿಜಯಕರ್ನಾಟಕದ ಸಾಪ್ತಾಹಿಕ ಸಂಚಿಕೆಯಲ್ಲಿ ಪ್ರಕಟವಾಗಿದೆ. 

2 comments:

  1. ನಾಟಕದ ನೈಜ ಚಿತ್ರಣ ಬರವಣಿಗೆಯಲ್ಲೂ ಎದ್ದು ಕಾಣುತ್ತಿತ್ತು. ಮೊದಲೇ ತಿಳಿದಿದ್ದರೆ, ಜುಲೈ 1 ರಂದು ನಾನೂ ಸಹ ಈ ನಾಟಕವನ್ನು ಕಣ್ಣು-ಮನಸಾರೆ ನೋಡಿ ಪುನೀತನಾಗುತ್ತಿದ್ದೆನೆನೋ.. ಮತ್ತೆ ಈ ನಾಟಕ ಪ್ರದರ್ಶನವಾಗುವುದಿಲ್ಲವೇ? ದಯವಿಟ್ಟು ತಿಳಿಸಿ.

    ReplyDelete
  2. ಮಾನ್ಯರೇ,
    ನಿಮ್ಮ ಬ್ಲಾಗಿನ ಫೋಟೊವೊಂದನ್ನು ಸಂವಾದ.ಕಾಮ್ ನ ಬರಹಕ್ಕಾಗಿ ಬಳಸಿಕೊಂಡಿದ್ದೇವೆ. ( http://samvaada.com/themes/article/276/manegaara ) ಕ್ರೆಡಿಟ್ಸ್ ಸಹ ನೀಡಿದ್ದೇವೆ. ವಿರೋಧವಿದ್ದರೆ ತಿಳಿಸಿ ಕೂಡಲೇ ತೆಗೆದು ಹಾಕುತ್ತೇವೆ.

    ReplyDelete