ಹೆಜ್ಜೆ ಗೆಜ್ಜೆ :
ಈ ಬ್ಲಾಗ್ ನಲ್ಲಿರುವ ವಿಷಯ ಮತ್ತು ಚಿತ್ರಗಳ ಬಳಕೆಗೆ ಅನುಮತಿ ಕಡ್ಡಾಯ.
ಮತ್ತೊಂದು ಕ್ಷಣ ನನ್ನ ಬಗ್ಗೆ ಬದುಕು-ಬರಹ

Wednesday, 26 March 2014

ಸಿಂಗಾರಿತ್ಲು ಎರಡನೇ ಆವೃತ್ತಿ ಶೀಘ್ರ

ಆತ್ಮೀಯರೇ,

ನಾಳೆ ಮಾರ್ಚ್ ೨೭ ವಿಶ್ವ ರಂಗಭೂಮಿ ದಿನ. ೧೦ ವ‍‍ರ್ಷಗಳ ಹಿಂದೆ ನಾನು ಬರೆದ ನಾಟಕ ಸಿಂಗಾರಿತ್ಲು ೨೦೦೬ರಲ್ಲಿ ಪ್ರಕಟವಾಗಿತ್ತು. ಈ ನಾಟಕದ ಹಸ್ತಪ್ರತಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಸಹಾಯಧನ ಮತ್ತು ಪ್ರಕಟಿತ ಕೃತಿಗೆ ಬಿಎಂಟಿಸಿ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ಅರಳು ಪ್ರಶಸ್ತಿಯ ಮೊಟ್ಟಮೊದಲ ಆವೃತ್ತಿಯ ಬಹುಮಾನ ಬಂದಿತ್ತು. ಬಿಎಂಟಿಸಿಯ ಕನ್ನಡ ಸಂಘದ ಗೆಳೆಯರಾದ ಬಾಲಕೃಷ್ಣ ಅವರು ಇದನ್ನು ರಂಗಕ್ಕೂ ತಂದಿದ್ದರು.
ಮೊದಲ ಆವೃತ್ತಿಗೆ ಹಿರಿಯ ಜಾನಪದ ವಿದ್ವಾಂಸ ದಿ. ಮುದೇನೂರು ಸಂಗಣ್ಣ ಬೆನ್ನುಡಿಯನ್ನೂ, ಹೆಸರಾಂತ ಕಥೆಗಾರ ಮೊಗಳ್ಳಿ ಗಣೇಶ್‌ ಮುನ್ನುಡಿಯನ್ನೂ ಬರೆದಿದ್ದರು. ಮುಖಪುಟಕ್ಕೆ ಗೆಳಯ ಸೃಜನ್‌ ಚಿತ್ರ ಒದಗಿಸಿದ್ದರು.
ಮೊದಲ ಆವೃತ್ತಿಯನ್ನು ಗೆಳೆಯ ದೇವು ಪತ್ತಾರನ ಸಹಕಾರದಿಂದ ನಾರಾಯಣ ಮಾಳ್ಕೋಡ್‌ ತಮ್ಮ ಸುಮುಖ ಪ್ರಕಾಶನದಿಂದ ಪ್ರಕಟಿಸಿದ್ದರು. ಪ್ರತಿಗಳು ಮುಗಿದು ವರ್ಷಗಳೇ ಕಳೆದಿರುವ ಹಿನ್ನೆಲೆಯಲ್ಲಿ ಗೆಳೆಯ ಸಬ್ಬನಹಳ್ಳಿ ರಾಜು ತಮ್ಮ ಅಂಕ ಪ್ರಕಾಶನದ ವತಿಯಂದ ಎರಡನೇ ಆವೃತ್ತಿ ತರುತ್ತಿದ್ದಾರೆ.
ಎರಡನೇ ಆವೃತ್ತಿಗೆ ಮುನ್ನುಡಿಯನ್ನು ಗೆಳೆಯ ಆನಂದ್‌ ಋಗ್ವೇದಿ ಬರೆದಿದ್ದಾನೆ. ಬೆನ್ನುಡಿಯನ್ನು ಹೆಸರಾಂತ ನಿರ್ದೇಶಕ ಇಕ್ಬಾಲ್‌ ಅಹಮದ್‌ ಬರೆದಿದ್ದಾರೆ. ಉಳಿದಂತೆ ಹಿರಿಯರಾದ ದಿ. ಚಿ. ಶ್ರೀವಾಸರಾಜು ಮೇಷ್ಟ್ರು, ಗಿರಡ್ಡಿ ಗೋವಿಂದರಾಜ್‌, ಚಿಂತಾಮಣಿ ಕೋಡ್ಲಕೆರೆ ಗೆಳೆಯರಾದ ಮಂಜುನಾಥ್‌, ಸುರೇಶ್‌ ಅಂಗಡಿ, ಇಸ್ಮಾಯಿಲ್‌ ಜಬೀರ್‌ ಅವರ  ಅನಿಸಿಕೆಗಳು ಈ ಸಂಚಿಕೆಯಲ್ಲಿವೆ. ಈ ಆವೃತ್ತಿಗೆ ಗೆಳೆಯ, ಕಲಾವಿದ ನಾಗಲಿಂಗಪ್ಪ ಮುಖಪುಟ ರೂಪಿಸಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.

ಧನ್ಯವಾದಗಳೊಂದಿಗೆ

ಕರಿಸ್ವಾಮಿ. ಕೆ

Monday, 24 March 2014

ಇ ರಾಘವನ್ ಅವರ ಎರಡನೇ ಪುಣ್ಯ ತಿಥಿ

ಆತ್ಮೀಯರೇ,
ವಿಜಯಕರ್ನಾಟಕ ದಿನಪತ್ರಿಕೆಯ ಹಿಂದಿನ ಸಂಪಾದಕರಾಗಿದ್ದ . ರಾಘವನ್ ಅವರು ತೀರಿಕೊಂಡು ಇಂದಿಗೆ ಎರಡು ವರ್ಷಗಳು ತುಂಬಿದವು. ಅವರ ಜತೆಗಿನ ನೆನಪುಗಳನ್ನು ನಮ್ಮ ಅನೇಕ ಸಹೋದ್ಯೋಗಿಗಳು ಹಂಚಿಕೊಂಡಿರುವ ಪುಸ್ತಕವೊಂದು ಸಿದ್ಧವಾಗುತ್ತಿದೆ. ಚುನಾವಣೆಯ ಕಾವು ಇಲ್ಲದಿದ್ದರೆ ಪುಸ್ತಕ ಇಂದೇ ಬಿಡುಗಡೆಯಾಗಬೇಕಿತ್ತು. ಚುನಾವಣೆಯ ಈ ಭರಾಟೆ ಮುಗಿದ ನಂತರ ಮುಂದಿನ ತಿಂಗಳು ಪುಸ್ತಕವನ್ನು ಬಿಡುಗಡೆ ಮಾಡಬೇಕು ಎಂದುಕೊಂಡಿದ್ದೇವೆ.
ನನ್ನ ಗೆಳೆಯ ಜೇಪಿ ಮತ್ತು ನಾನು ಸಂಪಾದಿಸಿರುವ ಈ ಪುಸ್ತಕಕ್ಕೆ ಗೆಳೆಯ, ಕಲಾವಿದ ಬಡಿಗೇರ್‌ ಮುಖಪುಟ ರಚಿಸಿದ್ದಾರೆ. ನಿಮ್ಮ ಅನಿಸಿಕೆ ತಿಳಿಸಿ.

ಧನ್ಯವಾದಗಳು
ಕರಿಸ್ವಾಮಿ. ಕೆ