ಆಗಿ ಹೋಗಿರುವ ಮಹಾನ್ ವ್ಯಕ್ತಿಗಳನ್ನು ನೆನಪಿಸಿಕೊಳ್ಳುವುದು ಹೇಗೆ? ಕಾಲದ ಯಾವುದೋ ಹೊಡೆತಕ್ಕೆ ಸಿಲುಕಿ ಯಾವುದೇ ವ್ಯಕ್ತಿಯ ವಿಚಾರಗಳು ಪ್ರಸ್ತುತವಾಗಿದ್ದರೂ ಜನಮಾನಸದಿಂದ ಮರೆಯಾಗಿದ್ದರೆ ಅದನ್ನು ಜನರ ಬಳಿಗೆ ಕೊಂಡೊಯ್ಯುವುದು ಹೇಗೆ? ಹಾಗೆಯೇ ಅವರ ವಿಚಾರಗಳನ್ನು ಜನರ ಬಳಿಗೆ ತರುವಾಗ ಇರುವ ಆಯ್ಕೆಗಳು ಯಾವುವು? ಅಂಥವರನ್ನು ಜನರು ನೆನಪಿಸಿಕೊಳ್ಳುವಂತೆ ಮಾಡುವುದು ಕೇವಲ ಪ್ರತಿಮೆ ಪ್ರತಿಷ್ಠಾಪಿಸುವುದರಿಂದ ಮಾತ್ರ ಸಾಧ್ಯವೆ?ಎಂಬಂಥ ಪ್ರಶ್ನೆಗಳನ್ನು ಈಗ ಕೇಳಿಕೊಳ್ಳಲೇಬೇಕಿದೆ. ಕೆಲವರಿಗೆ ತಮ್ಮ ಯಾವ್ಯಾವುದೋ ಖಯಾಲಿ/ಖಾಯಿಶ್ಗಳಿಂದ ಯಾರದೋ ಪ್ರತಿಮೆಯನ್ನು ಎಲ್ಲೋ ಒಂದು ಕಡೆ ಹಾಕಿ ಪ್ರತಿಷ್ಠೆ ಬೆಳಸಿಕೊಳ್ಳುವಾಸೆ. ಇನ್ನೂ ಕೆಲವರಿಗೆ ಪ್ರತಿಮೆಗಳ ಮರೆಯಲ್ಲೇ ಬೆಳೆ ಬೆಳೆದುಕೊಳ್ಳುವಾಸೆ. ಮತ್ತೂ ಕೆಲವರಿಗೆ ಆ ಪ್ರತಿಮೆಗಳೇ ತಮ್ಮೆಲ್ಲಾ ಕುಕೃತ್ಯಗಳನ್ನು ಸಮರ್ಥಿಸಿಕೊಳ್ಳಲು ಇರುವ ಗುರಾಣಿ. ಬೆರಳ ತುದಿಯಲ್ಲಿ ಜಗತ್ತನ್ನಾಡಿಸುವ ಕಾಲದಲ್ಲಿ ಬದುಕುತ್ತಿರುವ ನಾವೆಲ್ಲಾ ಇನ್ನೂ ಪ್ರತಿಮೆಗಳ ಪರ್ಯಾಯಕ್ಕೆ ಅಂಟಿಕೊಂಡಿರುವುದೇಕೆ? ಪ್ರತಿಮೆಗಳ ವಿಚಾರದಲ್ಲಿ ಇದುವರೆಗೆ ಜಗತ್ತಿನಲ್ಲಿ ಆಗಿರುವ ಅವಾಂತರ, ಗಲಭೆ, ವಾದ-ವಿವಾದಗಳೆಷ್ಟು? ಭಾರತದಂತಹ ಬಹುಸಂಸ್ಕೃತಿಯ ನಾಡಲ್ಲಿ ಪ್ರತಿಮೆಗಳು ತಂದಿಡುವ ಸಂಕಷ್ಟ-ಸಂದಿಗ್ಧಗಳೆಷ್ಟು? ಈಗ ನಡೆಯುತ್ತಿರುವುದೇನು? ಎಲ್ಲರಿಗೂ ತಮ್ಮ ತಮ್ಮ ಕೆಲಸ ಸಾಧನೆಗಷ್ಟೇ ಪ್ರತಿಮೆಗಳು ಬೇಕಾಗಿವೆ. ಆದ್ದರಿಂದಲೇ ಇವತ್ತು ಪ್ರತಿಮೆ ಸ್ಥಾಪನೆ ವಿಷಯಗಳು ಹೆಚ್ಚು ವಿವಾದಕ್ಕೀಡಾಗುತ್ತಿವೆ.
ತಿರುವಳ್ಳುವರ್ ಮತ್ತು ಸರ್ವಜ್ಞ ಎಂಬ ಮಹಾನ್ ಮಾನವತಾವಾದಿಗಳು ಈಗ ಬೇಡದ ಕಾರಣಗಳಿಗಾಗಿ ಅನೇಕ ಜನರಿಗೆ ಆಹಾರವಾಗುತ್ತಿದ್ದಾರೆ. ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಲು ಬಿಜೆಪಿ ಸರಕಾರ ತೋರುತ್ತಿರುವ ಕಾಳಜಿ(?) ಪ್ರಶ್ನಾತೀತವೇನಲ್ಲ. ಇದೇ ಗದ್ದಲಕ್ಕೆ ಕಾರಣವಾಗಿದೆ ಎಂಬುದನ್ನು ಮೇಲ್ನೋಟಕ್ಕೆ ಯಾರಾದರೂ ಊಹಿಸಬಹುದು. ತಮಿಳು ಗುಂಪುಗಳನ್ನು ವೋಟ್ ಬ್ಯಾಂಕ್ನಂತೆ ಉಪಯೋಗಿಸಿಕೊಳ್ಳುತ್ತಿದ್ದ ಮಂದಿ ತಮ್ಮ ವೋಟ್ ಬ್ಯಾಂಕ್ ಎಲ್ಲಿ ಕೈ ತಪ್ಪುತ್ತದೋ ಎಂಬ ಕಾರಣದಿಂದ ವಿವಾದಕ್ಕೆ ತೆರೆ ಮರೆಯಿಂದ ತುಪ್ಪ ಸುರಿಯುತ್ತಿರಬಹುದು. ಹಾಗೆಯೇ ಪ್ರತಿಮೆ ಬೇಡ ಎಂದು ವಾದಿಸುತ್ತಿರುವ ಕೆಲವರಿಗೆ ತಾವು ಮಿಂಚಲು ಸೂಕ್ತ ವಿಷಯಗಳೇ ಇಲ್ಲವಾಗಬಹುದೆಂಬ ಭಯವೂ ಇರಬಹುದು.
ಎರಡು ರಾಜ್ಯಗಳಿರಲಿ, ಎರಡು ದೇಶಗಳ ನಡುವೆ ಕೂಡ ಎಂಥ ಸಮಸ್ಯೆಗಳಿದ್ದರೂ ಸಾಂಸ್ಕೃತಿಕ ವಿನಿಮಯ ಎಲ್ಲ ದೃಷ್ಟಿಯಿಂದಲೂ ನಡೆಯುತ್ತಲೇ ಇರಬೇಕು. ಇದು ಬೆಳೆಯುತ್ತಿರುವ ನಾಗರಿಕ ಸಮಾಜವೊಂದರ ಆರೋಗ್ಯಕರ ಬೆಳವಣಿಗೆಗೆ ಅತ್ಯಗತ್ಯ. ಸಂಸ್ಕೃತಿಯ ಹರಿವಿಗೆ ಯಾವುದೇ ಕಾರಣ ನೀಡಿ ತಡೆಯೊಡ್ಡಿದರೂ ಅದು ಹೋಗುತ್ತಲೂ ಬರುತ್ತಲೂ ಕೊಯ್ಯುವ ಗರಗಸದಂತೆ ನಷ್ಟವುಂಟುಮಾಡುತ್ತದೆ. ಅದೊಂದು ಮುಂದಿನ ಪೀಳಿಗೆಗೆ ನಾವು ಮಾಡುವ ದ್ರೋಹವೇ ಸರಿ. ಇಲ್ಲದಿದ್ದರೆ ಭಾರತ ಮತ್ತು ಪಾಕ್ ನಡುವಿನ ಬಸ್ ಪ್ರಯಾಣ ಪುನಾರಂಭ ಮಾಡಿದ್ದನ್ನು ನಾವೆಲ್ಲ ಏಕೆ ಅಷ್ಟೊಂದು ಸಂಭ್ರಮದಿಂದ ಸ್ವಾಗತಿಸಿದ್ದೆವು? ಭಾರತದ ಸಿನಿಮಾ, ಪಾಕ್ನ ಸಂಗೀತ ಎರಡು ದೇಶಗಳ ನಡುವಿನ ಎಲ್ಲ ಕಾರಣಗಳನ್ನೂ ಮೀರಿ ಭಾರತೀಯರು ಮತ್ತು ಪಾಕಿಸ್ತಾನಿಗಳನ್ನು ಅನೇಕ ಸ್ತರಗಳಲ್ಲಿ ಒಟ್ಟಾಗಿಟ್ಟಿಲ್ಲವೇ? ತಮಿಳುನಾಡು ಮತ್ತು ಕರ್ನಾಟಕದ ನಡುವಿನ ಕೆಲ ವಿವಾದಗಳನ್ನು ದೇಶಗಳ ನಡುವಿನ ಸಮಸ್ಯೆಗಳಿಗೆ ಹೋಲಿಸಲಾದೀತೆ? ಎರಡು ದೇಶಗಳ ನಡುವೆ ಇರುವಂಥ ವಾತಾವರಣ ನಮ್ಮ ಎರಡೂ ರಾಜ್ಯಗಳ ನಡುವೆ ಇದೆಯೇ? ಹಾಗೆಂದು ಭ್ರಮಿಸಿದರೆ ಅದಕ್ಕಿಂತ ಹಾಸ್ಯಾಸ್ಪದವಾದದ್ದು ಇದೆಯೆ? ಎರಡೂ ರಾಜ್ಯಗಳ ನಡುವಿನ ಸೌಹಾರ್ದವನ್ನು ಕದಡುವಂತೆ ವಿಷಯವನ್ನು ದೊಡ್ಡದು ಮಾಡುತ್ತ, ಪ್ರತಿಮೆಗಳ ಅನಾವರಣವನ್ನು ವಿರೋಧಿಸುತ್ತಿರುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಆದ್ದರಿಂದಲೇ ವಿಶಾಲ ದೃಷ್ಟಿಯಲ್ಲಿ ನೋಡಿದಾಗ ಪ್ರತಿಮೆಗಳ ಸಂಸ್ಕೃತಿಯೇ ಸರಿಯಲ್ಲವೆನಿಸಿದರೂ ಸೌಹಾರ್ದಕ್ಕೆ ವೇದಿಕೆಯಾಗಬಹುದೆಂಬ ಕಾರಣಕ್ಕೆ ಒಪ್ಪಬೇಕಾಗುತ್ತದೆ.
ಇನ್ನು ಒಂದೇ ದೇಶದ ಒಂದೇ ಭಾಷಾ ಮೂಲದಿಂದ ಬಂದಿರುವ ತಮಿಳುನಾಡು ಮತ್ತು ಕರ್ನಾಟಕ ಭಾರತದ ಇತರ ಯಾವುದೇ ಎರಡು ರಾಜ್ಯಗಳಿಗೆ ಹೋಲಿಸಿ, ಯಾವುದೇ ದೃಷ್ಟಿಯಿಂದ ನೋಡಿದರೂ ಅವಿಭಾಜ್ಯವಾದ ಗಟ್ಟಿ ಸಂಬಂಧವನ್ನೇ ಹೊಂದಿವೆ. ಆದ್ದರಿಂದ ಎರಡೂ ರಾಜ್ಯಗಳು ಒಂದೇ ಮರದ ರೆಂಬೆಗಳು. ಇದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಪ್ರತಿಮೆ ಸ್ಥಾಪನೆಯಾದ ಮಾತ್ರಕ್ಕೆ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಅರ್ಥವಲ್ಲ. ನಾವು ಪರಸ್ಪರ ಹತ್ತಿರ ಬರಲು ಒಂದು ವೇದಿಕೆಯಾಗಿ ಇದನ್ನು ಬಳಸಿಕೊಳ್ಳಬಹುದು. ಪ್ರತಿಮೆ ಸ್ಥಾಪಿಸುವುದಿಕ್ಕಿಂತ ಎಷ್ಟೋ ಪಟ್ಟು ಮಿಗಿಲಾಗಿ ಈ ಮಹಾನ್ ವ್ಯಕ್ತಿಗಳನ್ನು, ಅವರ ವಿಚಾರಧಾರೆಯನ್ನು ಜನರಿಗೆ ಮುಟ್ಟಿಸುವ ಮಾರ್ಗಗಳಿವೆ ಎಂಬುದೂ ನಿಜ. ಹಾಗಂತ ಪ್ರತಿಮೆ ಅನಾವರಣ ವಿರೋಧಿಸುತ್ತಿರುವವರ ವಾದಗಳಲ್ಲಿ ಕೂಡ ಯಾವುದೇ ದೂರದೃಷ್ಟಿ ಮತ್ತು ಬಲವಾದ ಕಾರಣಗಳಿಲ್ಲದಿರುವುದರಿಂದ ಸರಕಾರದ ನಿಲುವನ್ನು ನಾವು ಬೆಂಬಲಿಸಬೇಕಷ್ಟೆ. ಸರಕಾರ ಈ ಹೊತ್ತನ್ನೇ ಯಾಕೆ ಆಯ್ಕೆ ಮಾಡಿಕೊಂಡಿದೆ ಎಂಬುದಂತೂ ಯಾವಾಗಲೂ ಪ್ರಶ್ನಾರ್ಥಕವಾಗಿಯೇ ಉಳಿಯುತ್ತದೆ. ಹಾಗೆಯೇ ಪ್ರತಿಮೆ ಅನಾವರಣ ಮಾಡುವುದರಿಂದ ಕನ್ನಡದ ನೆಲ-ಜಲಕ್ಕೆ ಆಗುವ ಹಾನಿಯ ಬಲವಾದ ಕಾರಣಗಳನ್ನು ಎತ್ತಿ ಹೇಳದೆ, ರಾಜಕೀಯಕ್ಕೆ ಸಂಬಂಧಿಸಿದ ನೀತಿಸಂಹಿತೆ ಕಾರಣವನ್ನು ಮುಂದು ಮಾಡಿ ಹೋರಾಡುತ್ತಿರುವವರಿಗೆ ನಾಡಿನ ಬಗ್ಗೆ ಯಾವ ಕಾಳಜಿ ಇದೆ ಎಂದು ಪ್ರಶ್ನಿಸಲೇಬೇಕಾಗುತ್ತದೆ. ಹಾಗಾದರೆ ಈ ಸಂಘಟನೆಗಳು ನೀತಿಸಂಹಿತೆ ಕಾಪಾಡಲು ಹೋರಾಡುತ್ತಿವೆಯೇ? ಇದು ಅವುಗಳಿಗಿರುವ ವಿಶಾಲ ದೃಷ್ಟಿಯ ಕೊರತೆಯನ್ನು ತೋರಿಸುತ್ತದೆ ಅಥವಾ ಅವು ಸದ್ಯದ ದೃಷ್ಟಿ ಇಟ್ಟುಕೊಂಡು ಕೆಲಸ ಮಾಡುತ್ತಿವೆ ಎನ್ನಬೇಕಾಗುತ್ತದೆ.
ರಾಜಕಾರಣಿಗಳು ಏನೇ ಮಾಡಿದರೂ ಅದರಿಂದ ಪ್ರತಿಫಲ ಪಡೆಯಲು ಯಾವಾಗಲೂ ಪೈಪೋಟಿ ನಡೆಸುತ್ತಿರುತ್ತಾರೆ. ಆದ್ದರಿಂದಲೇ ಪ್ರತಿಫಲವಿಲ್ಲದೆ ಅವರು ಏನನ್ನೂ ಮಾಡುವುದಿಲ್ಲ. ಅದನ್ನು ಮೀರಿದ ಕಾಳಜಿ ಯಾವ ರಾಜಕಾರಣಿಯಲ್ಲೂ ಇರುವುದಿಲ್ಲ. ನಾಳೆ ಇದೇ ಸರ್ವಜ್ಞನ ಪ್ರತಿಮೆಯನ್ನು ಉತ್ತರಪ್ರದೇಶದಲ್ಲಿಯೋ, ಗುಜರಾತಿನಲ್ಲಿಯೋ ಸ್ಥಾಪನೆ ಮಾಡಲು ಮತ್ತು ಆ ರಾಜ್ಯಗಳ ಮಹಾನ್ ಚೇತನಗಳ ಪ್ರತಿಮೆಯನ್ನು ಕರ್ನಾಟಕದಲ್ಲಿ ಸ್ಥಾಪನೆ ಮಾಡಲು ಆಯಾ ರಾಜ್ಯಗಳ ಇಬ್ಬರು ಮುಖ್ಯಮಂತ್ರಿಗಳ ನಡುವೆ ಒಂದು ಫೋನ್ ಕಾಲ್ನಲ್ಲಿ ಕೆಲಸ ಮುಗಿದುಹೋಗಬಹುದು. ಅದರಿಂದ ಅವರಿಗೆ ಆಗುವ ಪ್ರಯೋಜನವೇನು? ಮೊನ್ನೆ ವಿದ್ವಾಂಸರೊಬ್ಬರು, ದೇಶದ ಯಾವುದೋ ವಿಶ್ವವಿದ್ಯಾಲಯದಲ್ಲಿರುವ ಅಧ್ಯಯನ ಪೀಠದಲ್ಲಿ ಕನ್ನಡದ ಉಪನ್ಯಾಸಕರು, ನಿರ್ದೇಶಕರಿಲ್ಲ ಎಂದು ನೋವಿನಿಂದ ಬರೆದಿದ್ದರು. ಇದನ್ನು ತುಂಬಲು ಸರಕಾರವೆಂಬ ದೈತ್ಯ ಸಂಸ್ಥೆಗೆ ಎಷ್ಟು ವೇಳೆ ಬೇಕು? ಗಡಿನಾಡಲ್ಲಿ ಇವತ್ತಿಗೂ ಕನ್ನಡ ಶಾಲೆಗಳಿಗೆ ಸರಿಯಾದ ಸಮಯದಲ್ಲಿ ಪುಸ್ತಕಗಳು ಸರಬರಾಜಾಗುವುದಿಲ್ಲ. ಆದರೆ ಅದ್ಯಾವುದೂ ನಾವಂದುಕೊಂಡಷ್ಟು ಸುಲಭದಲ್ಲಿ ಆಗುವುದಿಲ್ಲ. ಏಕೆಂದರೆ ಅದರಿಂದ ರಾಜಕಾರಣಿಗಳಿಗೆ ದೊಡ್ಡಮಟ್ಟದ ಲಾಭ ಇಲ್ಲ. ಕೇವಲ ಪ್ರತಿಮೆಯೊಂದರಿಂದಲೇ ಎಲ್ಲವನ್ನೂ ಸಾಧಿಸಿಬಿಡುವುದು ಸಾಧ್ಯವಿದ್ದಿದ್ದರೆ ಸಾಲುಮರಗಳ ಬದಲು ರಸ್ತೆಯುದ್ದಕ್ಕೂ ಪ್ರತಿಮೆಗಳನ್ನು ನಿಲ್ಲಿಸಲು ಮುಂದಾಗುವ ಜನರಿದ್ದಾರೆ. ಹಾಗಾಗಿಯೇ ಮುಖ್ಯಮಂತ್ರಿಯೊಬ್ಬರು ಯಾವುದೇ ನಾಚಿಕೆ ಇಲ್ಲದೆ ತಮ್ಮದೇ ಪ್ರತಿಮೆಗಳನ್ನು ಸ್ಥಾಪಿಸಿಕೊಂಡರೆ ಅದನ್ನು ಅವರಿಗೆ ಮುಖಕ್ಕೆ ಹೊಡೆದಂತೆ ಯಾವುದೇ ರಾಜಕಾರಣಿಯೂ ಹೇಳಲಾರ. ಏಕೆಂದರೆ ಆ ಮುಖ್ಯಮಂತ್ರಿಯ ಜಾತಿ ವೋಟುಗಳು ಕೈಬಿಡಬಹುದು ಎಂಬ ಭಯ ಮತ್ತು ತಾವೂ ಇದೇ ರೀತಿ ಮಾಡುವ ಅವಕಾಶವನ್ನು ಮುಕ್ತವಾಗಿರಿಸಿಕೊಳ್ಳಲಿಕ್ಕೆ ಹೇಸದವರು. ಇನ್ನೊಂದು ತಮಾಷೆ ಎಂದರೆ ಕೇವಲ ಏಳೆಂಟು ವರ್ಷಗಳ ಹಿಂದೆ ಕುಟುಂಬ ರಾಜಕಾರಣವನ್ನು ವಿರೋಧಿಸಿದ ಪಕ್ಷಗಳೆಲ್ಲವೂ ಇವತ್ತು ಕುಟುಂಬ ರಾಜಕಾರಣ ಮಾಡುತ್ತಿಲ್ಲವೇ? ಹಾಗೆಯೇ ಇದೂ ಕೂಡ.
ಇದೆಲ್ಲ ಏನೇ ಇರಲಿ, ನಾಳೆ ತಿರುವಳ್ಳುವರ್ ಮತ್ತು ಸರ್ವಜ್ಞನ ಬಗ್ಗೆ ಒಂದು ಸಾಲಿನ ಮಾಹಿತಿ ಕೂಡ ಇರದವನೊಬ್ಬ ಒಂದು ಕಲ್ಲನ್ನೋ, ಸಗಣಿಯನ್ನೋ, ಚಪ್ಪಲಿಯನ್ನೋ ಕೊನೆಗೆ ಒಂದು ಹಿಡಿ ಮಣ್ಣನ್ನೋ ಪ್ರತಿಮೆಯೆಡೆಗೆ ತೂರಿದರೂ ಸಾಕು, ಕೊನೆಗೆ ಅದೇ ದೊಡ್ಡ ಗಲಾಟೆಯಾಗಿ ಸಂಕಷ್ಟಗಳನ್ನು ತಂದೊಡ್ಡಬಹುದು. ಅತ್ಯಂತ ಸೂಕ್ಷ್ಮ ಅನ್ನಬಹುದಾದ, ಬಗೆಹರಿಸಿಕೊಳ್ಳಲಾಗದ ಯಾವುದೇ ಸಮಸ್ಯೆಗಳು ನಮ್ಮ ರಾಜ್ಯಗಳ ನಡುವೆ ಇಲ್ಲದಿರಬಹುದು. ಆದರೆ ದುರುದ್ದೇಶದಿಂದ ಅಮಾಯಕರನ್ನು ಮತ್ತು ಕಿಡಿಗೇಡಿಗಳನ್ನು ಎತ್ತಿ ಕಟ್ಟುವವರಿಗೆ ಬೇರೆ ಯಾವುದೂ ಮುಖ್ಯವಾಗುವುದಿಲ್ಲ. ಉರಿಯುವ ಮನೆಯಲ್ಲಿ ಗಳ ಹಿರಿಯುವುದಷ್ಟೇ ಅವರ ಕೆಲಸ. ಆದ್ದರಿಂದ ಯಾವ ಉದ್ದೇಶದಿಂದ ಪ್ರತಿಮೆಗಳನ್ನು ಅನಾವರಣ ಮಾಡಲಾಗುತ್ತಿದೆಯೋ ಅದರ ಉದ್ದೇಶವೇ ಬುಡಮೇಲಾಗುವ ಅಪಾಯವೂ ಇದೆ. ಎಲ್ಲ ಮಹಾನ್ ವ್ಯಕ್ತಿಗಳನ್ನೂ ಜಾತಿ, ಧರ್ಮ ಅಥವಾ ಪ್ರಾಂತ್ಯಕ್ಕೆ ಸೀಮಿತಗೊಳಿಸಿಕೊಂಡು ನೋಡುವಂತಾದರೆ ಸಣ್ಣ-ಪುಟ್ಟ ಗಲಾಟೆಗಳಾದರೂ ಅದನ್ನು ಕೆಲವೇ ಜನ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಬಲ್ಲರು. ಹಾಗಂತ ನಾಳೆ ಏನೋ ಆಗಿಬಿಡಬಹುದೆಂದು ಕೆಲವು ಉಪಕ್ರಮಗಳನ್ನು ತೆಗೆದುಕೊಳ್ಳದೇ ಇರುವುದೂ ತಪ್ಪು. ಇದರಿಂದ ತೋಳ ಬರಬಹುದೆಂಬ ಭಯಕ್ಕೆ ಕುರಿಸಾಕಣೆಯೇ ಬೇಡ ಅಂದಂತೆ ಆಗುತ್ತದೆ. ಈ ಪ್ರತಿಮೆಗಳ ಬದಲು ಈ ಇಬ್ಬರು ಮಹಾನ್ ವ್ಯಕ್ತಿಗಳು ಸಾಹಿತ್ಯದ ಮೂಲಕ ಹೇಳಿದ್ದು ಮತ್ತು ಸಾಧಿಸಿದ್ದನ್ನು ಪುಸ್ತಕ ರೂಪದಲ್ಲಿ ಆಯಾ ರಾಜ್ಯಗಳ ಭಾಷೆಯಲ್ಲಿ ತಂದು ಅಥವಾ ಈಗಾಗಲೇ ತಂದಿರುವುದನ್ನು ಮತ್ತೊಮ್ಮೆ ಮುದ್ರಿಸಿ ಹಂಚುವುದು ಇನ್ನಷ್ಟು ಅರ್ಥಪೂರ್ಣ ಕೆಲಸಗಳಿಗೆ ನಾಂದಿ ಹಾಡುತ್ತಿತ್ತೇನೋ ಅನಿಸುತ್ತದೆ.
೮ ಆಗಸ್ಟ್ ೨೦೦೯ರ ವಿಜಯಕರ್ನಾಟಕದ ಒಪೆಡ್ ಪುಟದಲ್ಲಿ ಪ್ರಕಟವಾಗಿದೆ.
No comments:
Post a Comment