‘ಅವನ ನೆರಳು ಕಂಡರೆ ನನಗಾಗುವುದಿಲ್ಲ’ ಎನುತ್ತಾ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುವ ಅನೇಕರನ್ನು ನಾವು ನಿತ್ಯ ನೋಡುತ್ತೇವೆ. ನೆರಳು ಕಂಡರಾಗದ ಜನಕ್ಕೆ ಸಂಬಂಸಿದ ವ್ಯಕ್ತಿಯೇ ಕಂಡುಬಿಟ್ಟರೆ! ವ್ಯಕ್ತಿಯಿದ್ದರೆ ತಾನೆ ನೆರಳು ಕಾಣುವುದು? ಇಲ್ಲಿ ನೆರಳಿನ ಉಪಮೆ ಉಪಯೋಗಿಸಿರುವುದರ ಹಿಂದಿನ ಉದ್ದೇಶ ಆ ‘ನೆರಳಿನ’ ವ್ಯಕ್ತಿಯನ್ನು ಇವರು ದ್ವೇಷಿಸುತ್ತಾರೆ.
ಆದರೆ ನಾವು ಹೋದಲ್ಲಿಗೆಲ್ಲಾ ನಾಯಿ ಬಾಲದಂತೆ ಬರುವ ತಮ್ಮ ನೆರಳು ಕಂಡರೆ ಎಷ್ಟು ಜನರಿಗಾಗುವುದಿಲ್ಲ, ಎಷ್ಟು ಜನ ರೋಮಾಂಚಿತರಾಗುತ್ತಾರೆ ಎಂಬುದನ್ನು ಲೆಕ್ಕ ಹಾಕುವವರ್ಯಾರು? ನೆರಳನ್ನು ವ್ಯಕ್ತಿಯೊಬ್ಬನ ವ್ಯಕ್ತಿತ್ವ ಅಳೆಯಲು ಅನೇಕ ಬಾರಿ ಅನೇಕ ವಿಧದಲ್ಲಿ ಉಪಯೋಗಿಸುವ ನಾವು, ಇಂತಹವರು, ಇಂಥವರ ವ್ಯಕ್ತಿತ್ವದ ನೆರಳಿನಿಂದ ಹೊರಬರಬೇಕೆಂದೊ, ಸೋಲಿನ ಕಹಿ ನೆರಳಿನಿಂದ ಇವರು ಬೇಗ ಹೊರಬರಲಿ ಎಂದು ಆಶಿಸುವಾಗಲೋ ನಮಗೆ ಗೊತ್ತಿಲ್ಲದಂತೆ ನೆರಳ ಬಗ್ಗೆ ಮಾತನಾಡುತ್ತಲೇ ಇರುತ್ತೇವೆ. ನೆರಳನ್ನು ಸಾಮಾನ್ಯವಾಗಿ ಸಿಹಿ, ಕಹಿ ಪ್ರಸಂಗಗಳಿಗೂ ಹೋಲಿಸುತ್ತೇವೆ. ನೆರಳಿಗೆ ಕಹಿ ಇದೆಯೆಂದಾದರೆ ಸಿಹಿಯೂ ಇರಬೇಕಲ್ಲವೇ? ‘ಅವರ ವ್ಯಕ್ತಿತ್ವದ ನೆರಳಿನಿಂದ ಹೊರಬರುವುದು, ಅವರ ಸಹವಾಸ ಮಾಡಿದ ಯಾರಿಗಾದರೂ ಕಷ್ಟ" ಅಂಥ, ದೊಡ್ಡವರ ವ್ಯಕ್ತಿತ್ವದ ವ್ಯಾಪ್ತಿ ಸೂಚಿಸುವಲ್ಲಿ ಅವರ ಬಗ್ಗೆ ಗೌರವವಿರುತ್ತದೆ. ನೆರಳಲ್ಲಿ ಏನೂ ಬೆಳೆಯುವುದಿಲ್ಲ ಎನ್ನುವಾಗ ನೆರಳಿನ, ಸರ್ವನಾಶದ ಗುಣ ನಮಗೆ ಗೊತ್ತಾಗುತ್ತದೆ.
ಚಿಕ್ಕಂದಿನಲ್ಲಿ ಸೂರ್ಯನೆದುರು ಕುಳಿತು, ಹಿಂದೆ ಬಿದ್ದ ನೆರಳನ್ನು ನೋಡುತ್ತಾ ಪುಳಕಗೊಂಡಿದ್ದು, ಮಧ್ಯಾಹ್ನದ ಊಟಕ್ಕೆ ಶಾಲೆಯ ಗಂಟೆ ಬಾರಿಸಲು ಶಾಲೆಯ ಪಕ್ಕದ ಹುಣಸೇ ಮರದ ನೆರಳು ನೋಡುತ್ತಿದ್ದುದು, ಅಪ್ಪ ನೆರಳನ್ನು ನೋಡಿ ತಿಂಡಿಯ ಹೊತ್ತು. ಊಟದ ಹೊತ್ತು, ಸಂಜೆಯಾಗುತ್ತಾ ಬಂತು. ಅಂಥ ಕಾಲವನ್ನು ಅಳೆಯುತ್ತಿದ್ದುದು ಈಗ ಕಂಡು, ಕೇಳಿದಂತಿದೆ. ಹಾಗೆಯೇ ವೇಳೆಯನ್ನು ಅಳೆಯುತ್ತಾ ಎಳೆಯ, ಯುವಕ, ಮುದುಕ ಸೂರ್ಯ ಅಂಥ ಆ ದಿನದ ಸೂರ್ಯನ ಆಯುಷ್ಯ ಅಳೆಯುತ್ತಿದ್ದುದು ಅರ್ಥವಾಗದೇ ನಿಂತ ನಮ್ಮ ಪುಟ್ಟ ಕಣ್ಣುಗಳಿಗೆ ಸೂರ್ಯ, ಭೂಮಿಯನ್ನೇ ಸುತ್ತುತ್ತಿದ್ದಾನೆ ಎನ್ನುವಂತೆ ಕಂಡಿದ್ದು ಎಂಥ ವಿಸ್ಮಯ! ತಮ್ಮ ಸುತ್ತಾಮುತ್ತಾ ಯಾರೂ ಇಲ್ಲದ ವೇಳೆಯಲ್ಲಿ ತಮ್ಮ ನೆರಳಿನೊಡನೆ ಆಟವಾಡುತ್ತಾ ಮೈಮರೆಯುವ ಮಕ್ಕಳಾಟವನ್ನು ಕಂಡವರಿಗೆ ಮಾತ್ರ ಹೇಳಲು ಸಾಧ್ಯ ತಮ್ಮ ನೆರಳನ್ನು ನೋಡಿಕೊಂಡು ಮೈಮರೆಯುವ ಹದಿಹರೆಯದವರಿಗೆನೂ ಕೊರತೆಯಿಲ್ಲ. ಕನ್ನಡಿ ಮುಂದೆಯೇ ಬಹುಪಾಲು ಸಮಯ ಕಳೆಯುವ ಹುಡುಗಿಯರು (ಹುಡುಗರೂ ಇದಕ್ಕೆ ಹೊರತಲ್ಲ) ನೆರಳಿನ ರೋಮಾಂಚನದಲ್ಲಿ ಕಾಲಕಳೆಯುವುದು ಅಪರೂಪವೆಂದೇ ಹೇಳಬೇಕು.
ನಮ್ಮ ಜನಪದರಂತೂ ನೆರಳಿನ ಉಪಮೆ ಬಳಸಿ ಪದ್ಯವನ್ನೇ ಕಟ್ಟಿ ಹಾಡಿದ್ದಾರೆ.
‘ಆಲಕ್ಕೆ ಹೂವಿಲ್ಲ
ಸಾಲಕ್ಕೆ ಕೊನೆಯಿಲ್ಲ
ಜಾಲಿಯ ನೆರಳು ನೆರಳಲ್ಲ ||ಪ||
ಹೆಣ್ಣಿಗೆ ತವರು ಸ್ಥಿರವಲ್ಲ’
ಇಲ್ಲಿ, ನೆರಳಿನ ಬಗೆಗೆ ನಮ್ಮ ಪೂರ್ವಿಕರಿಗಿದ್ದ ಸೂಕ್ಷ್ಮ ಮನೋಭಾವ ವ್ಯಕ್ತವಾಗುತ್ತದೆ. ಜಾಲಿಯ ನೆರಳು ಕನಿಷ್ಟದ್ದಾದರೆ, ತಂಪಾದ ನೆರಳಿಗೆ ಹೊಂಗೇ ಮರ ಬಿಟ್ಟು ಸಾಟಿ ಯಾವುದು? ವಸಂತ ಕಾಲದ ಹೊಂಗೇ ಮರದ ನೆರಳ ಆಹ್ಲಾದತೆಯನ್ನು ವರ್ಣಿಸಲು ಕವಿಗಳೇ ಬೇಕು. ಮರ ಕಡಿಯುವವನೊಬ್ಬ ಬಿಸಿಲಿನ ಬೇಗೆಗೆ ಹೆದರಿ ತಾನು ಮುಂದೆ ಕಡಿಯಲಿದ್ದ ಮರದ ನೆರಳಿನಲ್ಲಿ ವಿಶ್ರಮಿಸಿಕೊಂಡು ನಂತರ ಅದೇ ಮರವನ್ನು ಕಡಿದ ಜಾನಪದ ಕಥೆಯೊಂದನ್ನು ಕೇಳುವ ಯಾರಿಗಾದರೂ ಮನುಷ್ಯನ ಸ್ವಾರ್ಥದ ಪರಿಚಯವಾಗುತ್ತದೆ. ಸುಖಕ್ಕೆ ಆಶ್ರಯಕ್ಕೆ ಮರದ, ವ್ಯಕ್ತಿಯ ನೆರಳು ಮನುಷ್ಯನಿಗೆ ಬೇಕು. ಆದರೆ ಒಂದು ಚಿಕ್ಕ ಗಿಡಕ್ಕೆ ದೊಡ್ಡ ಮರದ ನೆರಳು, ಅದರ ಭವಿಷ್ಯದ ದೀಪವನ್ನೇ ಆರಿಸಿಬಿಡಬಹುದು.
ವಯಸ್ಕ ರಸಿಕರಿಗೆ, ಪ್ರಾಯದ ಹುಡುಗ, ಹುಡುಗಿಯರಿಗೆ ತಾವು ರೋಮಾಂಚನಗೊಳ್ಳಲು ತಾವು ಇಷ್ಟಪಟ್ಟವರ ನೆರಳು ಸೋಕಿದರೇ ಸಾಕು. ಹಾಗೆಯೇ ಬದುಕಿನ ಸಂದರ್ಭದಲ್ಲಿ ಸಂಸ್ಕೃತಿ, ಅನುಭವಗಳ ದೃಷ್ಟಿಯಲ್ಲಿ ಹಿರಿಯ ತಲೆಮಾರಿನ ನೆರಳು, ಕಿರಿಯ ತಲೆಮಾರುಗಳ ಮೇಲೆ ಇರಬೇಕು, ಇರುತ್ತದೆ. ಪ್ರಾಯದಲ್ಲಿ ಹೆಂಡತಿಗೆ ಗಂಡನ ನೆರಳು, ವೃದ್ದಾಪ್ಯದಲ್ಲಿ ಗಂಡನಿಗೆ ಹೆಂಡತಿಯ ಆಶ್ರಯದ ನೆರಳೂ ಅವಶ್ಯಕ ಎಂಬ ಹಿರಿಯರ ಮಾತಿನ ಔಚಿತ್ಯ ರಕ್ಷಣೆ ಮತ್ತು ಆಸರೆ. ಜಗತ್ತಿನಲ್ಲಿ ಯಾವ ವಸ್ತುವಿಗೆ ನೆರಳಿಲ್ಲ? ಬೆಳಕಿದ್ದರೆ ಎಲ್ಲ ವಸ್ತುಗಳಿಗೂ ನೆರಳಿದೆ. ಎರಡು ಕೈಗಳು ಸೇರಿದರೆ ಚಪ್ಪಾಳೆ ಹೇಗೋ ಹಾಗೆ ಬೆಳಕು ಮತ್ತು ವಸ್ತು ನೆರಳ ಸೃಷ್ಟಿಗೆ ಅತ್ಯವಶ್ಯಕ.
ನಾವು ಇಷ್ಟಪಡುವ ವ್ಯಕ್ತಿಗಳು ನಮ್ಮ ಆಳಕ್ಕೆ ಹೇಗೋ ಇಳಿದು ತುಂಬಿಕೊಳ್ಳುವಂತೆ, ಪಾತ್ರೆಯಲ್ಲಿ ಹಾಕಿದ ನೀರು ಪಾತ್ರೆಯ ಆಕಾರ ಪಡೆಯುವಂತೆ, ಬೆಳಕು ಮತ್ತು ವಸ್ತುವನ್ನಾಧರಿಸಿ ನೆರಳನ್ನು ಮೂಡಿಸಬಹುದಲ್ಲವೇ? ಆದರೆ ನೆರಳಿನ ಉದ್ದ, ತುಂಡ ಮುಂತಾದ ಏರಿಳಿತಗಳಿಗೆ ಬೆಳಕಿನ ಕೋನ ಮತ್ತು ದಿಕ್ಕುಗಳು ಮುಖ್ಯ. ಆದರೆ ನೆರಳಿನ ಹಂಗಿನಿಂದ ದೇವತೆಗಳ ದೇಹ ದೂರವಂತೆ. ಹಾಗಾಗಿ ಅವರಿಗೆ ನೆರಳಿರುವುದಿಲ್ಲವಂತೆ ! ಹಾಗಾದರೆ ತಮ್ಮ ದೇಹದ ಆಕಾರ ಬದಲಿಸಿಕೊಳ್ಳಲು ದೆವ್ವಗಳಿಗೆ, ರಾಕ್ಷಸರಿಗೆ ಸಾಧ್ಯ ಎಂಬ ಪುರಾಣದ ಕಥೆಗಳ ಹಿನ್ನಲೆಯಲ್ಲಿ, ಅವುಗಳಿಗೆ ನೆರಳಿದ್ದರೆ ಯಾವ ತರಹದ ನೆರಳಿರಬಹುದು? ‘ಶನಿದೇವಾ ನಿನ್ನ ಕರಿನೆರಳು ನಮ್ಮ ಮೇಲೆ ಬೀಳದಿರಲಿ’ ಅಂಥ ಶನಿಮಹಾತ್ಮನನ್ನು ಪ್ರಾರ್ಥಿಸುವಲ್ಲಿ ಜನ ಯಾವ ರೀತಿಯ ನೆರಳು ಬೇಡ ಎನ್ನುತ್ತಾರೆ? ಯಾವ ರೀತಿಯ ನೆರಳಿಗೆ ಮೊರೆಯಿಡುತ್ತಾರೆ? ಹಾಗಾದರೆ ಕಹಿ (ಸೋಲು) ಸಿಹಿ (ತಂಪು) ನೆರಳುಗಳಂತೆ ಕರಿನೆರಳು ಕೆಟ್ಟ ದೃಷ್ಟಿಯನ್ನು ಸೂಚಿಸುವುದಾದರೆ ಒಳ್ಳೆಯದನ್ನುಂಟು ಮಾಡುವ ನೆರಳನ್ನು ಯಾವ ಬಣ್ಣದಿಂದ ಕರೆಯಬೇಕೆನ್ನುವುದು ಪ್ರಶ್ನೆ.
ಸೂರ್ಯ, ಚಂದ್ರರ ಗ್ರಹಣಕ್ಕೆ ಕಾರಣವಾಗುವ ಭೂಮಿ, ಸೂರ್ಯ, ಚಂದ್ರರ ಪರಸ್ಪರ ನೆರಳುಗಳು, ಕಪ್ಪೆಯ ಮೇಲೆ ಹಾವಿನ ನೆರಳು, ಹಾವಿನ ಮೆಲೆ ಹದ್ದಿನ ನೆರಳು, ಶಿಷ್ಯನ ಮೇಲೆ ಗುರುವಿನ ನೆರಳು ಮುಂತಾದವುಗಳ ಪರಿಕಲ್ಪನೆ ಮತ್ತು ವಾಸ್ತವಗಳು ನೆರಳನ್ನು ಉಪಮೆಗಳಾಗಿ ಉಪಯೋಗಿಸಿಕೊಳ್ಳುವ ಮೂಲಕ ಅದರ ವ್ಯಾಪ್ತಿಯನ್ನು ಹೆಚ್ಚಿಸಿವೆ. ಮಳೆಗಾಲದಲ್ಲಿ ಮೂಡುವ ಕಾಮನ ಬಿಲ್ಲೂ ಕೂಡಾ ನೆರಳು ಬೆಳಕಿನ ಆಟದಿಂದಲೇ ಸೃಷ್ಠಿಯಾಗುವ ಒಂದು ಅದುತ ವಿಸ್ಮಯ ಹಾಗೆಯೇ ಸೂರ್ಯನ ಬಿಳಿ ಬೆಳಕು ಪಟ್ಟಕದ ಮೂಲಕ ಹಾಯ್ದು ಹೋದಾಗ ಬೆಳಕು ಏಳು ಬಣ್ಣಗಳಾಗಿ ಒಡೆಯುತ್ತದೆ. ಬೆಳಕು ವಸ್ತುವಿನ ಮೂಲಕ ತೂರಿದಾಗ ಉಂಟಾಗುವ ಈ ಕ್ರಿಯೆಗಳೂ ಕೂಡಾ ಒಂದು ತರಹದ ನೆರಳನ್ನು ಸೃಷ್ಟಿಸುವ ವಿಧಾನಗಳಾಗಿವೆ. ಬೆಳಕು ವಸ್ತುವಿನ ಮೂಲಕ ತೂರಿ ಹೋಗದೆ ಇದ್ದಾಗ ಉಂಟಾಗುವ ನೆರಳು ಒಂದು ಅರ್ಥದಲ್ಲಿ ಏನನ್ನೂ ಬಿಚ್ಚಿಡುವುದಿಲ್ಲ. ಹಾಗೆಯೇ ಏನನ್ನೂ ಮುಚ್ಚಿಡುವುದಿಲ್ಲ. ಬೆಳಕಿಗೆ ಒಗ್ಗಿಕೊಂಡ ಎಲ್ಲಾ ಭಾಗ ಕಾಣುತ್ತದೆ. ಬೆಳಕಿನ ಕೋನ, ದಿಕ್ಕು ಹಾಗೂ ವಸ್ತುವಿನಿಂದ ಬೆಳಕಿನ ಮೂಲಕ್ಕಿರುವ ಅಂತರವನ್ನು ಆಧರಿಸಿ ವಸ್ತುವಿ ನೆರಳನ್ನೇ ಹತ್ತಾರು ವಿಧವಾಗಿ ಮೂಡಿಸಬಹುದು. ಹೀಗೆ ವಸ್ತುವೊಂದರ ಹೊರ ಆಕಾರವನ್ನು ಭೂಮಿಯ ಮೇಲೆ ಆ ವಸ್ತುಗಳ ನೆರಳಿನ ಸಹಾಯದಿಂದ ಬಿಡಿಸುವ ಕಲೆ ಬಹುಶಃ ಈಗಿನ ಚಿತ್ರ ಕಲೆಗೆ ಕಾರಣವಾಗಿರಲೂಬಹುದಲ್ಲವೇ?
ನಮ್ಮ ಆಧುನಿಕ ಜಗತ್ತಿನಲ್ಲಿ ಮಸೂರಗಳ ಸಹಾಯದಿಂದ, ನೆರಳು ಬೆಳಕಿನ ಸಂಯೋಜನೆಯ ಹೊಸ ಕಲಾ ಜಗತ್ತೇ ಸೃಷ್ಠಿಯಾಗಿದೆ. ಈ ದೃಷ್ಠಿಯಿಮದ ಇಂದಿನ ಸಿನಿಮಾ ಕಲ್ಪನೆ ಕೂಡಾ ನೆರಳು ಬೆಳಕಿನ ಆಟದ ಒಂದು ಮಜಲು ಮಾತ್ರ. ಇಷ್ಟಲ್ಲದೆ ಬೆಳಕಿನಲ್ಲಿ ತಮ್ಮ ಕೈಕಾಲು ಹಾಗೂ ದೇಹದ ವಿವಿಧ ಭಾಗಗಳ ಚಲನೆಯಿಂದ ವಿವಿಧ ಆಕಾರ, ಪ್ರಾಣಿ, ಪಕ್ಷಿಗಳ ಆಕಾರ ಹಾಗೂ ಅವುಗಳ ನಡವಳಿಕೆ, ಚಟುವಟಿಕೆಯನ್ನು ಗೋಡೆ, ಪರದೆಗಳ ಮೇಲೆ ಮೂಡಿಸುತ್ತಾರೆ. ಹೀಗೆಯೇ ಹೊಸ ಕಲೆಯೊಂದನ್ನು ಸೃಷ್ಠಿಸಿರುವ ಆಧುನಿಕ ಭೂಪರು ನೆರಳನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಮನುಷ್ಯನ ಅತಿ ಸೂಕ್ಷ್ಮ ಅಂಗಗಳಲ್ಲಿ ಒಂದಾದ ಕಣ್ಣಿನ ರಚನೆ ಹಾಗೂ ಕ್ರಿಯೆ ನೆರಳು-ಬೆಳಕನ್ನು ಆಧರಿಸಿದೆ ಎಂದರೆ ಅನೇಕರಿಗೆ ಆಶ್ಚರ್ಯವಾಗಬಹುದು.
ಪುರಾಣದ ಕಥೆಗಳಲ್ಲೊಂದಾದ ಮಹಾಭಾರತದಲ್ಲಿ, ನೆರಳು, ಕಥೆಯ ದಿಕ್ಕನ್ನೇ ಬದಲಿಸುವ ಮಹತ್ವ ಪಡೆದುಕೊಂಡಿದೆ. ಚಕ್ರವ್ಯೂಹದಲ್ಲಿ ಮೋಸಕ್ಕೆ ಬಲಿಯಾದ ಅಭಿಮನ್ಯು, ಅವನನ್ನು ಕೊಂದ ಜಯದ್ರಥನನ್ನು ‘ನಾಳೆಯ ಸೂರ್ಯ ಮುಳುಗುವುದರೊಳಗಾಗಿ ಹತ್ಯೆ ಮಾಡುತ್ತೇನೆ" ಎಂದು ಪ್ರತಿe ಮಾಡುವ ಅರ್ಜುನನ ಶಪಥ ಈಡೇರದ ಸ್ಥಿತಿ ಬಂದಾಗ, ಕೃಷ್ಣ ತನ್ನ ಸುದರ್ಶನ ಚಕ್ರವನ್ನು ಸೂರ್ಯನಿಗೆ ಅಡ್ಡವಿಡಿದು ಚಕ್ರದ ನೆರಳಿನಿಂದ ಇಡೀ ಜಗತ್ತನ್ನು ಕತ್ತಲಲ್ಲಿ ಮುಗಿಸಿದ ನಂತರ ಅರ್ಜುನ ಮೋಸದ ಜಯದ್ರಥನನ್ನು ಮೋಸದಿಂದಲೇ ಹತ್ಯೆ ಮಾಡಿದನೆಂಬ ಕಥೆಯನ್ನು ಯಾರು ಕೇಳಿಲ್ಲ? ಗೌರಿ ತನ್ನ ತವರಿಗೆ ಹೋಗಬೇಕಾಗಿ ಬಂದಾಗ ತನ್ನ ನೆರಳಿಗೆ ಜೀವ ತುಂಬಿ ಇಟ್ಟು ಹೋದದ್ದರಿಂದ ಅದು ಶಿವನೊಡನೆ ಸಮಾಗಮಿಸಿ ಷಣ್ಮುಖನ ಹುಟ್ಟಿಗೆ ಕಾರಣವಾಯಿತು ಎಂನಲ್ಲಿ ನೆರಳನ್ನು ಪೌರಾಣಿಕವಾಗಿ ಬಳಸಿಕೊಂಡಿರುವುದರ ಹಿಂದಿನ ಮರ್ಮವನ್ನು ಅರಿತವರಿಗಷ್ಟೇ ನೆರಳ ಮಹತ್ವ ತಿಳಿಯುತ್ತದೆ.
ನೀರಿನ ಮೇಲೆ ಬೀಳುವ ನೆರಳು ಅಲೆಗಳಿಗನುಗುಣವಾಗಿ ನಡುಗುವಂತೆ, ಛಿದ್ರವಾದಂತೆ ತೋರುತ್ತದೆ. ಭೂಮಿ, ಬಂಡೆಯ ಮೇಲೆ ಬೀಳುವ ನೆರಳು, ಗಾಳಿಗೆ ಮರ ಅಲುಗಾಡಿದಂತೆ ತನ್ನ ನೃತ್ಯವನ್ನು ಪ್ರಾರಂಭಿಸುತ್ತದೆ. ಹೀಗೆ ನಡುಗುವ ನೆರಳು ನೀರಮೇಲೆ ಬಿದ್ದರೆ ಸ್ಪಷ್ಟವಾಗಿ ನೋಡುವುದಕ್ಕೆ ಸಾಧ್ಯವಾಗುವುದೇ ಇಲ್ಲ. ವಸ್ತುವೊಂದರ ನೆರಳು ನೀರ ಮೇಲೆ ಬೀಳುವ ವೇಳೆಯಲ್ಲಿ ನೀರು ಶುದ್ಧವಾಗಿದ್ದರೆ ಕೆಲವು ಸಂದರ್ಭಗಳಲ್ಲಿ ಆ ವಸ್ತುವಿನ ಬಿಂಬವೂ ಮೂಡುತ್ತದೆ. ನೆರಳಿಗೂ, ಬಿಂಬಕ್ಕೂ ಸಂಬಂಧವಿಲ್ಲವಾದರೂ, ಕೆಲವು ವ್ಯತ್ಯಾಸಗಳಂತೂ ಇವೆ. ಬೆಳಕಿಗೆ ನಿಂತ ಕ್ಷಣ ನೆರಳು ಕಾಣುವಂತೆ ಕನ್ನಡಿ ಮುಂದೆ ನಿಂತ ಕ್ಷಣ ಬಿಂಬ ಕಾಣುತ್ತದೆ. ನೆರಳು ವಸ್ತುವಿನಿಂದ ಉದ್ದವಾಗಬಲ್ಲದು, ಇಲ್ಲ ಕುಬ್ಜವಾಗಬಲ್ಲದು. (ಸೂರ್ಯನ ಚಲನೆಯನ್ನನುಸರಿಸಿ) ಆದರೆ ಬಿಂಬದ ಗಾತ್ರ, ಉದ್ದ, ತುಂಡ ಅಳತೆಗಳು ಕನ್ನಡಿಯ ಮಸೂರವನ್ನು ಅವಲಂಬಿಸಿರುತ್ತವೆ. ಕನ್ನಡಿಯ ಮುಂದೆ ನಿಂತು ನಾವು ಚಲಿಸಿದರೂ ಬಿಂಬ ಉದ್ದ, ತುಂಡ ಆಗುತ್ತದಾದರೂ ಅದು ಗೌಣ. ಬಹುಶಃ ನೆರಳಿಗೆ ಸವತಿಯಿದ್ದರೆ ಅದು ಬಿಂಬ ಮಾತ್ರ. ಕನ್ನಡಿ ಬಂದದ್ದರಿಂದ ಜನ ತಮ್ಮ ನೆರಳನ್ನು ಸೂಕ್ಷ್ಮವಾಗಿ ನೋಡುವುದನ್ನು ಬಿಟ್ಟಿರಬೇಕು.
ಕನ್ನಡಿಯಿಲ್ಲದಿದ್ದ ಕಾಲದಲ್ಲಿ ಜನ ತಮ್ಮ ಮುಖವನ್ನು ಹೇಗೆ ನೋಡಿಕೊಳ್ಳುತ್ತಿದ್ದರು? ಎನ್ನುವುದು ಪ್ರಶ್ನೆಯಾದರೂ ಅವರು ನೆರಳು ನೋಡಿ ತಮ್ಮ ಸೌಂದರ್ಯವನ್ನು ಅಳೆದುಕೊಳ್ಳುತ್ತಿದ್ದರು ಎನ್ನುವುದು ಸತ್ಯಕ್ಕೆ ಹತ್ತಿರವಾದದ್ದು ಎನ್ನಬಹುದಾದರೂ ನೆರಳೇ ಸೌಂಧರ್ಯದ ಮಾನದಂಡವಾಗಿತ್ತು ಎಂಬುದು ತಪ್ಪಾಗುತ್ತದೆ. ಮನುಷ್ಯ ನೆರಳನ್ನು ನೋಡುವುದನ್ನು ಬಿಟ್ಟಿದ್ದರೆ ಅದು ಕನ್ನಡಿ ಬಂದಂದಿನಿಂದ ಮಾತ್ರ ಎಂದು ಧಾರಾಳವಾಗಿ ಹೇಳಬಹುದೇನೋ. ನೆರಳನ್ನೇ ನಂಬಿಕೊಂಡಿದ್ದ ಕಾಲದಲ್ಲಿ ಕನ್ನಡಿ ಬಂದು, ಅದನ್ನು ಮುದುಕನೊಬ್ಬ ಬಚ್ಚಿಟ್ಟುಕೊಂಡು ನೋಡಿಕೊಳ್ಳುತ್ತಿದ್ದುದನ್ನು ಕಂಡ ಅಜ್ಜಿ, ಅಜ್ಜನಿಲ್ಲದಾಗ ಕನ್ನಡಿಯಲ್ಲಿ ಬಗ್ಗಿ ನೋಡಿ ತನ್ನ ಯಜಮಾನ ಬೇರೊಬ್ಬಳನ್ನು ಇಟ್ಟುಕೊಂಡಿದ್ದಾನೆ ಅಂತ ರಂಪ ಮಾಡಿದ ಜಾನಪದ ಕಥೆಯನ್ನು ಯಾರು ಕೇಳಿಲ್ಲ?
ಪ್ರಾಯದ ಹುಡುಗ, ಹುಡುಗಿಯರು ಕನ್ನಡಿ ಮುಂದೆ ಸವೆಸುವ ಕಾಲದ ಒಂದಂಶವನ್ನಾದರೂ ನೆರಳನ್ನು ನೋಡುತ್ತಾ ಸವೆಸುತ್ತಾರೆಯೆ? ನೆರಳಿಗೆ ಬಂದಿರುವ ಕುತ್ತನ್ನು ನೋಡಿ! ಅದಕ್ಕಾಗಿಯಾದರೂ ನೆರಳಿಗೆ ಈಗ ತನ್ನನ್ನು ನೋಡಿಕೊಳ್ಳುವ ನಿಮ್ಮ ನೆರಳಿನಾಸರೆ ಬೇಕಾಗಿದೆಯಲ್ಲವೇ?
೨೮ ಮೇ ೨೦೦೦ದ ವಿಜಯಕರ್ನಾಟಕದ ಸಾಪ್ತಾಹಿಕ ಸಂಚಿಕೆಯಲ್ಲಿ ಪ್ರಕಟವಾಗಿದೆ.
೨೮ ಮೇ ೨೦೦೦ದ ವಿಜಯಕರ್ನಾಟಕದ ಸಾಪ್ತಾಹಿಕ ಸಂಚಿಕೆಯಲ್ಲಿ ಪ್ರಕಟವಾಗಿದೆ.
No comments:
Post a Comment