Wednesday, 23 June 2010
ಊರಿಗೆಲ್ಲಾ ‘ರಾಜು’ ಮೇಷ್ಟ್ರು
‘ವಿಜಯ ಕರ್ನಾಟಕ’ದ ‘ವಿಜಯೀ ಕರ್ನಾಟಕ ನಮ್ಮ ಕನಸು’ ಅಭಿಯಾನಕ್ಕೆ ರಾಜು ಮೇಷ್ಟ್ರ ಕನ್ನಡದ ಕನಸುಗಳ ಕುರಿತು ಬರೆಯಬೇಕೆಂಬ ಸಂಭ್ರದಲ್ಲಿರುವಾಗ ಅವರ ಸಾವಿನ ವಾರ್ತೆ ಗರ ಬಡಿದಂತೆ ಎರಗಿದೆ. ಕನ್ನಡದ ಬಗೆಗಿನ ಅವರ ಕನಸುಗಳ ಬಗ್ಗೆ ಚಿತ್ತಾರ ಬರೆಯಬೇಕಾದ ಜಾಗದಲ್ಲಿ ಚರಮಗೀತೆ ಬರೆಯುವಂತಾಗಿರುವುದು ಪರಿಸ್ಥಿತಿಯ ವ್ಯಂಗ್ಯವೇ ಸರಿ.
ನಮ್ಮಂತಹ ಎಳೆಯರೆಲ್ಲಾ ಏನೇನೋ ಗೀಚಿಕೊಂಡು ಅದೇ ಮಹಾನ್ ಬರವಣಿಗೆಯೆಂದು ಭ್ರಮಿಸಿದ್ದ ಕಾಲದಲ್ಲಿ ಕಾವ್ಯ/ಲೇಖನಗಳ ಕುರಿತು ಒಂದು ಆತ್ಮವಿಶ್ವಾಸ ಕಟ್ಟಿಕೊಡಲು ವೇದಿಕೆಯಾದದ್ದು ರಾಜು ಮೇಷ್ಟ್ರು ಕಟ್ಟಿದ ಕ್ರೈಸ್ಟ್ ಕಾಲೇಜಿನ ‘ಕನ್ನಡ ಸಂಘ’. ರಾಜ್ಯದ ಮೂಲೆಮೂಲೆಗಳಿಂದ ಹೊಸ ತಲೆಮಾರಿನ ಲೇಖಕರು ಮುಖ್ಯವಾಹಿನಿಗೆ ಬರಲು ಕನ್ನಡ ಸಂಘ ಪ್ರತಿ ವರ್ಷ ನಡೆಸುತ್ತಿದ್ದ ಬೇಂದ್ರೆ ಕಾವ್ಯ ಸ್ಪರ್ಧೆ ಮತ್ತು ಅ.ನ.ಕೃ ಲೇಖನ ಸ್ಪರ್ಧೆಗಳು ಕಾರಣ. ಇತ್ತೀಚಿನ ಮೂರು ತಲೆಮಾರುಗಳ ಲೇಖರನ್ನು ಕನ್ನಡ ಸಾಹಿತ್ಯಕ್ಕೆ ರೂಪಿಸಿಕೊಟ್ಟ ಅವರ ಕೊಡುಗೆ ಲೆಕ್ಕಕ್ಕೆ ಸಿಗುವುದಿಲ್ಲ. ಈ ತಲೆಮಾರುಗಳ ಬಹುತೇಕ ಲೇಖಕರು ತಮ್ಮ ಮೊದಲ ಲೇಖನ ಮತ್ತು ಕಾವ್ಯದ ಸಂಭ್ರಮಗಳನ್ನು ಅನುಭವಿಸಿದ್ದು ಕೈಸ್ಟ್ ಕಾಲೇಜಿನ ‘ಕನ್ನಡ ಸಂಘ’ದ ಅಂಗಳದಲ್ಲಿ. ಅವರೆಲ್ಲರಿಗೂ ರಾಜು ದ್ರೋಣಾಚಾರ್ಯರಂತಿದ್ದರು.
ಸಜ್ಜನಿಕೆಗೆ ಅತ್ಯುತ್ತಮ ಮಾದರಿಯಂತಿದ್ದ ಮೇಷ್ಟ್ರು, ಟಿ.ಎಸ್. ವೆಂಕಣ್ಣಯ್ಯ, ಎ.ಆರ್. ಕೃಷ್ಣಶಾಸ್ತ್ರಿ, ಕುವೆಂಪು, ರಾಜರತ್ನಂ, ತೀನಂ.ಶ್ರೀ, ಡಿ.ಎಲ್.ಎನ್, ಶಿವರುದ್ರಪ್ಪ, ಅನಂತಮೂರ್ತಿಯಂತಹವರ ಗುರು ಪರಂಪರೆಯ ಮುಖ್ಯ ಕೊಂಡಿಗಳಲ್ಲಿ ಒಬ್ಬರಾಗಿದ್ದರು. ಕೃತಕತೆ, ಕೃತ್ರಿಮತೆಗಳೇ ಗೊತ್ತಿಲ್ಲದ ಸರಳ ಸಜ್ಜನ ಮೇಷ್ಟ್ರು ಜತೆ ಮಾತಾಡುವುದು, ಓಡಾಡುವುದೇ ಒಂದು ಬೆಚ್ಚಗಿನ ಅನುಭವ. ಎಲ್ಲ ವಯೋಮಾನದವರೊಂದಿಗೂ ಮುಕ್ತವಾಗಿ ಬೆರೆಯುತ್ತಿದ್ದ ಅವರು, ಯಾವುದನ್ನೇ ಆಗಲಿ ತುಂಬಾ ಗಂಭಿರವಾಗಿ ಕೇಳಿಸಿಕೊಳ್ಳುತ್ತಿದ್ದರು. ಕನ್ನಡ ಮತ್ತು ಕನ್ನಡ ಸಾಹಿತ್ಯದ ಮುಂದಿನ ‘ವಕ್ತಾರರು ನೀವೇ’ ಎಂದು ಹೊಸಬರನ್ನು ಹುರಿದುಂಬಿಸುತ್ತಿದ್ದರು. ಲೇಖಕನ ಸಾಮಾಜಿಕ ಹೊಣೆಗಾರಿಕೆ ಕುರಿತು ಹೆಚ್ಚು ಗಂಭೀರವಾಗಿ ಮಾತನಾಡಿದ್ದಿದೆ.
ತಮ್ಮ ಮನೆಗೆ ಬರುವ ಅತಿಥಿಗಳನ್ನು ತಾವೇ ಮುಂದೆ ನಿಂತು ಸತ್ಕರಿಸುತ್ತಿದ್ದ ಮೇಷ್ಟ್ರಿಗೆ ಹಮ್ಮು ಬಿಮ್ಮೇ ಗೊತ್ತಿರಲಿಲ್ಲ. ಪ್ರತಿ ಕ್ಷಣವನ್ನೂ ತುಂಬಾ ಪ್ರಾಮಾಣಿಕವಾಗಿ ಅನುಭವಿಸುತ್ತಿದ್ದ ಅವರದು ಹಾಲು ಕುಡಿದ ಮಗುವಿನಂಥ ಸದಾ ಹಸನ್ಮುಖದ ನಿರ್ಲಿಪ್ತತೆ. ಅವರ ಜತೆ ಎಷ್ಟು ಹೊತ್ತು ಮಾತಾಡಿದರೂ ಒಮ್ಮೆಯೂ ತಮ್ಮ ಬಗ್ಗೆ ಒಂದೂ ಮಾತನ್ನು ಅಡದಿರುವಷ್ಟು ಸಂಕೋಚ ಸ್ವಭಾವದವರು. ಕನ್ನಡಿಗರಿಂದ, ಕನ್ನಡಕ್ಕಾಗಿ ಸ್ಥಾಪಿಸಲಾದ ಅನೇಕ ವಿದ್ಯಾಸಂಸ್ಥೆಗಳಲ್ಲಿ ಕನ್ನಡವೇ ಕಾಣೆಯಾಗುತ್ತಿದ್ದ ಕಾಲದಲ್ಲಿ ಓಯಸಿಸ್ನಂತೆ ‘ಕನ್ನಡ ಸಂಘ’ ಹುಟ್ಟಿಕೊಂಡಿತು. ಅದು ರಾಜು ಮೇಷ್ಟ್ರು ಮತ್ತು ಕ್ರೈಸ್ಟ್ ಕಾಲೇಜಿನಂಥ ಸಂಸ್ಥೆ ಪರಸ್ಪರರ ಬಗ್ಗೆ ಇಟ್ಟುಕೊಂಡ ನಂಬಿಕೆಯಿಂದ ಸಾಧ್ಯವಾದದ್ದು. ಹುಲ್ಲುಕಡ್ಡಿಯ ಪವಾಡದಂತೆ ಕೆಲಸ ಮಾಡಿದ ಸಂಘ ರಾಜ್ಯಕ್ಕೇ ಮಾದರಿಯಾಯಿತು.
ಅವರ ಒಟ್ಟು ಮೂವತ್ತು ವರ್ಷಗಳ ಸೇವಾವಯ ಕಾಲದಲ್ಲಿ ಒಟ್ಟು ೧೬೫ ಕೃತಿಗಳು ಸಂಘದಿಂದ ಬೆಳಕು ಕಂಡಿವೆ. ಕ.ವೆಂ. ರಾಜಗೋಪಾಲ ಅವರ ‘ನದಿಯ ಮೇಲಿನ ಗಾಳಿ’ ಕವನ ಸಂಕಲನ ಮೊದಲ ಕೃತಿ. ಸಂಘದಿಂದ ಪ್ರಕಟಿಸಿದ ರಾಮಚಂದ್ರ ಶರ್ಮರ ‘ಸಪ್ತಪದಿ’, ಸು.ರಂ. ಎಕ್ಕುಂಡಿಯವರ ‘ಬಕುಳದ ಹೂಗಳು’ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿವೆ. ಸುಮಾರು ೫೦ ಕೃತಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಸಂದಿರುವುದು ಕನ್ನಡ ಸಂಘದಿಂದ ಹೊರಬಂದಿರುವ ಕೃತಿಗಳ ಮೌಲ್ಯಕ್ಕೆ ಸಾಕ್ಷಿ. ಇದೇ ಸೂರ್ತಿಯಲ್ಲಿ ಅನೇಕ ಕಾಲೇಜುಗಳಲ್ಲಿ ಕನ್ನಡ ಸಂಘಗಳು ಹುಟ್ಟಿಕೊಂಡವು. ಅವುಗಳಲ್ಲಿ ಬಹುತೇಕ ಸಂಘಗಳು ಇಂದಿಗೂ ತಣ್ಣಗೆ ಕನ್ನಡದ ಕೆಲಸ ಮಾಡುತ್ತಿರುವುದಕ್ಕೆ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘ ಮತ್ತು ಮೇಷ್ಟ್ರು ಹಾಕಿಕೊಟ್ಟ ಮೇಲ್ಪಂಕ್ತಿ ಕಾರಣ.
ಕಾಲೇಜಿನಲ್ಲಿ ತಮ್ಮ ಜವಾಬ್ದಾರಿಯಲ್ಲೇ ಮುಂದುವರಿಯುವಂತೆ ಸಂಸ್ಥೆ ಕೇಳಿಕೊಂಡರೂ, ಮುಂದಿನ ಕನ್ನಡ ಸಂಘದ ಜವಾಬ್ದಾರಿ ಹೊರುವವರ ಮೇಲೆ ತಮ್ಮ ಯಾವ ನಿರ್ಧಾರಗಳನ್ನೂ ಹೇರದೆ ಅಲ್ಲಿಂದ ನಿರ್ಗಮಿಸಿದ್ದು ಅವರು ನಂಬಿದ ಮೌಲ್ಯಗಳಿಗೆ ಉದಾಹರಣೆಯಂತಿತ್ತು. ಈ ಸಂಬಂಧ ಅವರ ಸಂದರ್ಶನವನ್ನಾರಿಸಿದ ದೀರ್ಘ ಲೇಖನವನ್ನು ವಿಜಯ ಕರ್ನಾಟಕ ಆಗ ಪ್ರಕಟಿಸಿತ್ತು. ಕೇವಲ ೫೦೦ ರೂಪಾಯಿಗಳಿಂದ ಕ್ರೈಸ್ಟ್ ಕಾಲೆಜಿನ ಕನ್ನಡ ಸಂಘ ಆರಂಭವಾಯಿತು. ಪ್ರಾರಂಭದ ದಿನಗಳಲ್ಲಿ ಜೋಳಿಗೆಯಲ್ಲಿ ಕನ್ನಡ ಪುಸ್ತಕಗಳನ್ನು ಹೊತ್ತುಕೊಂಡು ಹೋಗಿ ಮಾರಾಟ ಮಾಡಿ ಸಂಘವನ್ನು ಕಟ್ಟಿದರು. ಬೆಂಗಳೂರಿನಂಥ ನಗರಗಳಲ್ಲಿ ಕನ್ನಡದ ದ್ವೀಪಗಳು ಮಾತ್ರ ಇವೆ ಎನ್ನತ್ತಿದ್ದ ಅವರು ಸಕಾಲದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಆಫ್ರಿಕಾದ ಭಾಷೆಗಳು ಅದಂತೆ ಕನ್ನಡ ಪಳೆಯುಳಿಕೆ ಆಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದರು.
ತಮ್ಮ ವೇದಿಕೆ ಮೂಲಕ ಅನೇಕ ಲೇಖಕರನ್ನು ರೂಪಿಸಿದ ಮೇಷ್ಟ್ರು, ಸ್ವತಃ ಲೇಖಕರು. ಭಾರತದಲ್ಲಿ ಮೊದಲ ಬಾರಿಗೆ ಮೂಕ ನಾಟಕ ಬರೆದವರು. ಇವರ ಐದು ಮೂಕ ನಾಟಕಗಳು ಇಂಗ್ಲಿಷ್, ಜರ್ಮನ್, ಹಿಂದಿ ಸೇರಿದಂತೆ ಎಲ್ಲ ದ್ರಾವಿಡ ಭಾಷೆಗಳಿಗೂ ಅನುವಾದಗೊಂಡಿವೆ. ಅವರು ನಾಟಕಗಳನ್ನೂ ಬರೆದಿದ್ದಾರೆ. ರಾಜು ಮೇಷ್ಟ್ರ ಅಭಿನಂದನಾ ಗ್ರಂಥ ‘ಅಂತರ್ಜಲ’ ಕೇವಲ ಆರು ತಿಂಗಳ ಹಿಂದೆ ಪ್ರಕಟವಾಗಿತ್ತು. ಅವರ ಬಗೆಗೆ ಬರೆದ ನೂರಾರು ಹಿರಿಯರು, ಗೆಳೆಯರು ಮತ್ತು ಶಿಷ್ಯರು ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಅವರ ಕ್ರಿಯಾಶೀಲತೆಯನ್ನು ಮುಕ್ತವಾಗಿ ಶ್ಲ್ಯಾಘಿಸಿದ್ದರು. ಇದೇ ಜನವರಿ ೩೧ಕ್ಕೆ ಬೇಂದ್ರೆ ಹುಟ್ಟು ಹಬ್ಬ. ಕ್ರೈಸ್ಟ್ ಕಾಲೇಜಿನ ಕನ್ನಡ ಗೆಳೆಯರ ಬಳಗವೆಲ್ಲಾ ಒಂದೆಡೆ ಸೇರುವ ದಿನ. ಜನವರಿ, ಫೆಬ್ರವರಿ ನಡುವಿನ ಮಾಗಿಯ ಚಳಿಯಲ್ಲಿ ೩೦ ವರ್ಷಗಳಿಂದ ನಡೆದು ಬಂದ ಸಂಪ್ರದಾಯ ಇದು. ಅವರು ಕ್ರೈಸ್ಟ್ ಕಾಲೆಜಿನಿಂದ ನಿವೃತ್ತರಾದ ಮೇಲೆ ಸಂಚಯ ಬಳಗ ಆಚರಿಸುತ್ತಿದ್ದ ಬೇಂದ್ರೆ ಹುಟ್ಟು ಹಬ್ಬದಲ್ಲಿ ತಪ್ಪದೇ ಸಿಗುತ್ತಿದ್ದರು. ಈ ಬಾರಿ ಅವರಿಲ್ಲದ ಬೇಂದ್ರೆ ಹುಟ್ಟು ಹಬ್ಬವನ್ನು ಹೇಗೆ ಕಲ್ಪಿಸಿಕೊಳ್ಳಲಿ?
೨೯ ಡಿಸೆಂಬರ್ ೨೦೦೭ರ ಶನಿವಾರದ ವಿಜಯಕರ್ನಾಟಕ ಸಂಚಿಕೆಯಲ್ಲಿ ಪ್ರಕಟವಾಗಿದೆ.
Subscribe to:
Post Comments (Atom)
No comments:
Post a Comment