ಕೊರೋನ ಕಾಲದಲ್ಲಿ ಅಪ್ಪನ ವಿದಾಯ ಮತ್ತು ಕಾಲದ ಜತೆಗಿನ ಗುದ್ದಾಟ
ಮೇ 15, 2020ರ ಶುಕ್ರವಾರ ರಾತ್ರಿ. ಅಪ್ಪ ಆಸ್ಪತ್ರೆಯಿಂದ ಬಿಡುಗಡೆಯಾಗಿ ಎರಡು ದಿನಗಳಾಗಿದ್ದವು. ಊಟ ಮುಗಿಸಿ ನಾನೂ ಮತ್ತು ಅಪ್ಪ ಅದೂ ಇದೂ ಮಾತನಾಡುತ್ತಾ ಕುಳಿತಿದ್ದೆವು.
ಅಪ್ಪ: ಮರುಜನ್ಮ ಅಂತ ಇರುತ್ತಾ?
ನಾನು: ಆ ಬಗ್ಗೆ ಖಚಿತವಾಗಿ ಹೇಳುವವರು ಯಾರು?
ಅಪ್ಪ: ಇಲ್ಲ ಅಂತೀಯಾ?
ನಾನು: ಮುಕ್ತಿ ಬೇಕು ಅಂತ ಎಲ್ಲರೂ ಬೇಡಿಕೊಳ್ಳುವುದು ಪುನರ್ಜನ್ಮ ಬೇಡ ಅಂತ ತಾನೆ?
ಅಪ್ಪ: ಅಂಗೇನು?
ನಾನು: ಪುನರ್ಜನ್ಮದ ನಂಬಿಕೆ ಇರುವುದರಿಂದಲೇ, ಮತ್ತೆ ಮತ್ತೆ ಜನ್ಮವೆತ್ತುವ ಸರಪಳಿಯಿಂದ ಮುಕ್ತಿ ಬೇಕು ಅಂತ ಕೇಳಿಕೊಳ್ಳುತ್ತಾರೆ ಅನಿಸುತ್ತದೆ.
ಅಪ್ಪ: ಹೂಂ.
ಈ ಮಾತುಗಳ ನಡುವೆ ನನಗೆ ಗೊತ್ತಿದ್ದ ಕೆಲ ವಿಷಯಗಳನ್ನು ಹಂಚಿಕೊಂಡೆ. ಮಗುವಿನಂತೆ ಹೂಗುಟ್ಟುತ್ತಿದ್ದರು. ಅಪ್ಪ ಮಾತನಾಡುತ್ತಿದ್ದ ಗಡುಸು, ದೃಢತೆ ಎಂದಿನಂತೆಯೇ ಇದ್ದವು. ಮಾತಿನ ನಡುವೆ, 'ನಾಲಿಗೆ ದಪ್ಪವಾಗಿದೆ' ಅಂತ ಮತ್ತೆ ಮತ್ತೆ ಹೇಳುತ್ತಲೇ ಇದ್ದರು. ಕರಾರುವಾಕ್ಕಾಗಿ ಮಾತ್ರೆ, ಇನ್ಸುಲಿನ್ ತೆಗೆದುಕೊಂಡರು. ನಡುರಾತ್ರಿ ಸುಮಾರು ಹನ್ನೆಡರವರೆಗೂ ಮಾತನಾಡಿ ವಿದಾಯ ಹೇಳಿ ಮಲಗಿಕೊಂಡೆ. ರಾತ್ರಿ ಸುಮಾರು ಎರಡು-ಎರಡೂವರೆ ಗಂಟೆ ಇರಬಹುದು, ಅಪ್ಪ ಟಾಯ್ಲೆಟ್ಗೆ ಹೋಗಲು ಎದ್ದಿದ್ದಾರೆ. ಅವರು ಲೈಟ್ ಹಾಕಿದ್ದನ್ನು ಕಂಡ, ನಿದ್ದೆಗಣ್ಣಿನಲ್ಲಿದ್ದ ನಾನು, `ಸಹಾಯಕ್ಕೆ ಬರಬೇಕಾ?' ಅಂತ ಕೇಳಿದೆನೆಂದೂ, ಅದಕ್ಕೆ ಅಪ್ಪ `ಏನೂ ಬೇಡ' ಅಂತ ಹೇಳಿದರೆಂದೂ ನನ್ನ ಹೆಂಡತಿ ಹೇಳಿದಳು. ನನಗೆ ನೆನಪೇ ಇಲ್ಲ. ಸಕ್ಕರೆ ಕಾಯಿಲೆ ಇರುವವರು ಕನಿಷ್ಠ ಎರಡು ಮೂರು ಬಾರಿ ಟಾಯ್ಲೆಟ್ಗೆ ಹೋಗುವುದು ಮಾಮೂಲಿಯಲ್ಲವೆ?
ಸುಮಾರು ನಾಲ್ಕು ಗಂಟೆಯಾಗಿರಬಹುದು, ನನ್ನ ಹೆಂಡತಿ, `ಲೈಟು ಇನ್ನೂ ಉರೀತಿದೆ, ತಾತ ಟಾಯ್ಲೆಟ್ನಿಂದ ವಾಪಸ್ ಬಂದಿದೆಯಾ ಅಥವಾ ಲೈಟ್ ಆರಿಸಲು ಮರೆತಿದೆಯಾ ನೋಡಿ' ಅಂತ ಏಳಿಸಿದಳು. ಅಪ್ಪ ಮಲಗಿದ್ದ ಪಡಸಾಲೆಯಲ್ಲಿನ ಲೈಟ್ ಹಾಕಿ ನೋಡಿದರೆ ದಿವಾನದ ಮೇಲೆ ಅವರಿಲ್ಲ. ಟಾಯ್ಲೆಟ್ ಬಾಗಿಲು ತೆರೆಯಲು ಯತ್ನಿಸಿದೆ ಬಾಗಿಲು ಸಲೀಸಾಗಿ ಹಿಂದಕ್ಕೆ ಹೋಯಿತು. ಬೋಲ್ಟ್ ಹಾಕಿಲ್ಲ, ಹಾಗಾದರೆ ಒಳಗಿಲ್ಲ ಅಂದುಕೊಂಡೆ. ಪಕ್ಕದಲ್ಲೇ ಇರುವ ತೆರದೇ ಇದ್ದ ಸ್ನಾನದ ಮನೆಯಲ್ಲಿ ನೋಡಿದರೆ ಅಲ್ಲೂ ಇಲ್ಲ. ಅಪ್ಪಾ, ಅಪ್ಪಾ ಅಂತ ಮಕ್ಕಳ ರೂಮಿಗೆ ಹೋಗಿ ನೋಡಿದೆ. ಮಕ್ಕಳು ಮಲಗಿದ್ದಾರೆ. ಬಾಗಿಲು ತೆಗೆದುಕೊಂಡು ಹೊರಗೆ ಹೋಗಿರಬಹುದೇ? ಇಲ್ಲ, ಬಾಗಿಲ ಬೋಲ್ಟ್ ಭದ್ರವಾಗಿದೆ. ನನ್ನ ಗಾಬರಿ ಕಂಡು ಮಗಳು ಎದ್ದು ಬಂದಳು. ಅವಳು ಭಯಗೊಳ್ಳಬಹುದು ಅಂತ ನಾನು ಹೆದರಿ, ಏಕೆ ಎದ್ದು ಬಂದೆ? ಅಂತ ಅವಳನ್ನು ಕೇಳಿದೆ, `ಅಪ್ಪಾ, ಅಪ್ಪಾ ಅನ್ನೋ ನಿಮ್ಮ ಧ್ವನಿ ಒಂಥಾರಾ ಡಿಫರೆಂಟಾಗಿ ಕೇಳಿಸಿತು ಅದಕ್ಕೆ ಎದ್ದು ಬಂದೆ' ಅಂದಳು. ನನ್ನ ಭಯಮಿಶ್ರಿತ ಧ್ವನಿಯನ್ನು ಅವಳು ಗುರುತಿಸಿದ್ದಳು ಅನಿಸುತ್ತದೆ. `ಹೋಗಿ ಮಲಗಿಕೋ' ಅಂತ ಅವಳನ್ನು ಕಳಿಸಿದೆ. ಕೈಕಾಲುಗಳಲ್ಲಿ ನಡುಕ, ಏನು ಮಾಡಬೇಕು, ಎಲ್ಲಿ ಹುಡುಕಬೇಕೋ ಗೊತ್ತಾಗುತ್ತಿಲ್ಲ. ಗಾಬರಿ, ಆತಂಕಗಳ ಸುನಾಮಿ. ಅದೇ ಗೊಂದಲದಲ್ಲಿ ಟಾಯ್ಲೆಟ್ ಅನ್ನು ಮತ್ತೆ ನೋಡಲು ಹೋದೆ. ಬಾಗಿಲನ್ನು ಹಿಂದಕ್ಕೆ ತಳ್ಳುತ್ತಾ ಹೋದಂತೆ ಬಾಗಿಲು ಪೂರ್ತಿ ತೆರೆಯಿತು. ಅಪ್ಪ ಮೂಲೆಯಲ್ಲಿ ಒರಗಿ ಕುಳಿತಿದ್ದಾರೆ. ಟಾಯ್ಲೆಟ್ಗೆ ಕೂತಿದ್ದವರು ಹಾಗೆಯೇ ಪ್ಲಷ್ ಪಕ್ಕದ ಮೂಲೆಯಲ್ಲಿ ಹಿಂದಕ್ಕೊರಗಿದ್ದಾರೆ. ತಮ್ಮ ನಿಕ್ಕರ್ ಅನ್ನು ಮೇಲೆಳೆದುಕೊಳ್ಳಲು ಯತ್ನಿಸಿ ಸ್ವಲ್ಪಮಟ್ಟಿಗೆ ಸಫಲರೂ ಆದಂತೆ ಅವರ ಒಂದು ಕೈ ತೊಡೆಯ ಮೇಲಿತ್ತು. ಇನ್ನೊಂದು ಕೈಯನ್ನು ಹಿಂದಕ್ಕೆ ಊರಿಕೊಳ್ಳಲು ಯತ್ನಿಸಿದಂತೆ ಕಂಡಿತು. ಗಾಬರಿಯಲ್ಲಿಯೇ ಕೆನ್ನೆ ತಟ್ಟಿ ಮಾತನಾಡಿಸಿದೆ. ಮಾತಿಲ್ಲ, ಮೂಗು ಮುಟ್ಟಿದರೆ ಉಸಿರಿಲ್ಲ. ತೊಡೆಯ ಮೇಲಿನ ಕೈ ಹಿಡಿದೆ. ತೀರಾ ತಣ್ಣಗೇನೂ ಇಲ್ಲ ಅನಿಸಿತು. ಅದು ನನ್ನ ಭ್ರಮೆಯೋ ಅಥವಾ ನನ್ನ ದೇಹ ಸ್ಥಿತಿಯಿಂದ ಹಾಗನ್ನಿಸಿತೋ ಗೊತ್ತಿಲ್ಲ. ನನ್ನ ನಡುಗುವ ಕೈಗಳಿಂದ ಜಾರಿದ ಅಪ್ಪನ ಕೈ ಅವರ ಸ್ವಾಧೀನಲ್ಲಿ ಇಲ್ಲವೆಂಬಂತೆ ಪಕ್ಕಕ್ಕೆ ಸರಿಯಿತು. ಕಣ್ಣ ಮುಂದೆ ಕತ್ತಲು ಕವಿದಂತಾಯಿತು. ಆಗ ಅನಿಸಿದ್ದನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಥಂಡಾ ಹೊಡೆದು ಹೋದೆ. ನನ್ನ ಹಿಂದೆ ಹೆಂಡತಿ ಭಯದಲ್ಲಿ ನಡುಗುತ್ತಾ ನಿಂತಿದ್ದಾಳೆ. ಭಯ ಭಯವಾಗುತ್ತಿದೆ ಅಂತ ಬಡಬಡಿಸುತ್ತಿದ್ದಾಳೆ. ಅವಳನ್ನು ಸಮಾಧಾನಿಸುವುದೋ ಅಪ್ಪನನ್ನು ಹೊರಗೆ ತರುವುದೋ, ಜಗತ್ತೇ ತಲೆಯ ಮೇಲೆ ಕುಸಿದು ಬಿದ್ದಂತಾಗಿತ್ತು. ಅಪ್ಪ ಇನ್ನಿಲ್ಲ ಎಂಬ ದುಃಖ, ಕಣ್ಣಲ್ಲಿ ನೀರು ಒಸರುತ್ತಿದೆ. ಜಗತ್ತಿನಲ್ಲಿ ಯಾರಿಗೂ ಬರದ ಕಷ್ಟ ಬಂದಿದೆ ಅನಿಸಿಬಿಟ್ಟಿತು. ಒತ್ತರಿಸುತ್ತಿದ್ದ ದುಃಖದಲ್ಲಿ ಜೋರಾಗಿ ಅತ್ತುಬಿಡಲೂ ಸಮಯ, ಸಂದರ್ಭ ಬಿಡುತ್ತಿಲ್ಲ. ಹೆಂಡತಿ ಮತ್ತೂ ಹೆದರಬಹುದು ಎಂಬ ಭಯ.
ಚಿಕ್ಕ ಟಾಯ್ಲೆಟ್ನೊಳಗಿನಿಂದ ಅಜಾನುಬಾಹು ಅಪ್ಪನನ್ನು ಹೊರತರಲು ಕನಿಷ್ಠ ಇಬ್ಬರು, ಮೂವರಾದರೂ ಬೇಕು. ಒಮ್ಮೆಲೆ ಇಬ್ಬರೂ ಒಳಗೋದರೂ ಕಷ್ಟ. ಅಂಥದ್ದರಲ್ಲಿ ಬಾಗಿಲ ಕಡೆ ಮುಖ ಮಾಡಿರುವ ಅಪ್ಪನನ್ನು ತಿರುಗಿಸಿಕೊಂಡೇ ಈಚೆ ತರಬೇಕು. ಸಮಾನಾಂತರವಾಗಿ ತಿರುಗಿಸಲು ಸಾಧ್ಯವೇ ಇಲ್ಲ. ಲಂಬವಾಗಿಯೇ ಎತ್ತಿ ತಿರುಗಿಸಬೇಕು. ಇಂತಹ ಸಂದರ್ಭದಲ್ಲಿ ನಮ್ಮ ದೇಹ ದುರ್ಬಲವಾಗುತ್ತದೋ, ಮನಸು ದುರ್ಬಲವೋ ಗೊತ್ತಾಗುವುದಿಲ್ಲ. ಅಪ್ಪನ ಎದೆಗೆ ಎದೆ ಕೊಟ್ಟು ಬೆನ್ನಿಗೆ ನನ್ನ ಕೈಗಳನ್ನು ಬಿಗಿದು ಬಾಚಿ ಎತ್ತಲು ಯತ್ನಿಸಿದೆ. ಎಷ್ಟು ಎತ್ತಿದರೂ ಕಾಲು ನೆಲದ ಮೇಲೆಯೇ. ಎಲ್ಲ ಶಕ್ತಿಯನ್ನೂ ಹುರಿಗಟ್ಟಿಕೊಂಡು ಎತ್ತಿ ತಿರುಗಿಸಿಕೊಂಡು ಬಾಗಲ ಕಡೆ ಎಳೆದುಕೊಂಡೆ. ಟಾಯ್ಲೆಟ್ ಎದುರಿಗೆ ಗೋಡೆ. ಕಾಲು ಮಡಚದೆ ಅಥವಾ ಎತ್ತಿ ಹಿಡಿದುಕೊಳ್ಳದೆ ಪಡಸಾಲೆಗೆ ತಿರುಗಿಸಿಕೊಳ್ಳುವುದು ಇನ್ನೊಂದು ಸವಾಲು. ಕಾಲು ಹಿಡಿದುಕೊಳ್ಳುವ ಧೈರ್ಯ ತೋರಿಸಿ ಹೆಂಡತಿ ಸಹಾಯ ಮಾಡಿದಳು. ಅಂತೂ ಇಂತೂ ಪಡಸಾಲೆಗೆ ಎಳೆದು ತಂದು ಮಲಗಿಸಿದ್ದಾಯಿತು. ಏನೂ ಆಗಿರಲಿಕ್ಕಿಲ್ಲ, ಇನ್ನೂ ಬದುಕಿರಬಹುದು ಎನ್ನೋ ಹುಚ್ಚು ಆಸೆ. ಮತ್ತೊಮ್ಮೆ ಚೆಕ್ ಮಾಡಿಕೊಂಡೆ ಖಚಿತವಾಯಿತು, ಅಪ್ಪ ನಮ್ಮೊಂದಿಗಿಲ್ಲ. ಮಕ್ಕಳನ್ನು ಏಳಿಸಿದೆವೂ ಅಥವಾ ಅವರೇ ಎದ್ದು ಬಂದರೋ ನೆನಪಿಲ್ಲ. ಆಗ ವೇಳೆ ಸುಮಾರು ಐದು ಗಂಟೆಯಾಗಿರಬಹುದು. ಮುಂದೇನು? ಕೊರೊನದ ಮೊದಲ ಲಾಕ್ಡೌನ್ ಸಡಿಲಿಸಿ ಎರಡು ಅಥವಾ ಮೂರು ದಿನಗಳಾಗಿರಬಹುದಷ್ಟೆ. ಊರಿಗೆ ಹೇಗೆ ಸಾಗಿಸಬೇಕು ಊರಲ್ಲಿ ಒಬ್ಬರೇ ಇರುವ ವಿಶೇಷಚೇತನರಾದ ಅಕ್ಕನಿಗೆ ಹೇಗೆ ಹೇಳಬೇಕು. ಯಾರಿಗೆಲ್ಲ ಹೇಳಬೇಕು, ಹೇಳಬಾರದು ಎಂಬ ಹತ್ತಾರು ಪ್ರಶ್ನೆಗಳು. ಕಾಲದ ಎದುರಿನ ಹೋರಾಟ ಎಂದರೇನು ಎಂಬುದು ಗೊತ್ತಾಗತೊಡಗಿತು. ಸಾಗಿಸಲು ಸರ್ಕಾರಿ ಆಂಬುಲೆನ್ಸ್ ಸಿಗುವುದಿಲ್ಲ. ಅವೇನಿದ್ದರೂ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಮಾತ್ರ. ಪ್ರೈವೇಟ್ ಆಂಬುಲೆನ್ಸ್ ಹುಡುಕಬೇಕು. ಅಷ್ಟೊತ್ತಿನಲ್ಲಿ ಯಾರನ್ನು ಕೇಳುವುದು? ಯಾರ ಬಳಿ ಪ್ರೈವೇಟ್ ನವರ ಆಂಬುಲೆನ್ಸ್ ನಂಬರ್ ಇರುತ್ತೆ? ಗೂಗಲ್ ಮಾಡಬಹುದಿತ್ತು ಎಂಬುದೂ ಕಲ್ಪನೆಗೂ ಬರಲಿಲ್ಲ.
ಅತ್ತ ಊರಲ್ಲಿ ಸಿದ್ಧತೆ ಆಗಲೇಬೇಕಾದರೆ ಅವರಿಗೆ ಮೊದಲು ತಿಳಿಸಲೇಬೇಕು. ಬೆಂಗೂರಿನಲ್ಲೇ ಇದ್ದ ಒಬ್ಬ ತಂಗಿಯ ಮಗ, ಇನ್ನಿಬ್ಬರು ಅಕ್ಕನ ಮಕ್ಕಳು ಮತ್ತು ಚಿಕ್ಕಪ್ಪನ ಮಗ ಹಾಗೂ ನನ್ನ ಭಾವಮೈದುನನಿಗೆ ವಿಷಯ ತಿಳಿಸಿದೆ. ಅವರೆಲ್ಲ ಆಂಬುಲೆನ್ಸ್ ಗಾಗಿ ಜಾಲಾತೊಡಗಿದರು. ಸಂಪರ್ಕಕ್ಕೆ ಬಂದವರ ಮೊದಲ ಪ್ರಶ್ನೆ ಕೋವಿಡ್ ಪೇಷಂಟಾ? ಇಲ್ಲ, ಅವರಿಗೆ ಹೃದಯಾಘಾತ ಆಗಿ ಆಸ್ಪತ್ರೆಗೆ ಸೇರಿಸಿದ್ದೆವು. ಎರಡು ದಿನದ ಹಿಂದೆ ಡಿಸ್ಚಾರ್ಜ್ ಆಗಿದ್ದರು... ಎನ್ನುತ್ತಿದ್ದಂತೆ ಫೋನ್ ಕಟ್. ನಾಲ್ಕೈದು ಕಡೆ ಇದೇ ಕಥೆ ರಿಪೀಟು. ಯಾರೂ ಸಿಗದಿದ್ದರೆ ತನ್ನ ಕಾರು ತರುವುದಾಗಿ ಚಿಕ್ಕಬಳ್ಳಾಪುರದಿಂದ ತಮ್ಮ ಫೋನು ಮಾಡಿದ. ನೋಡೋಣ ಅಂದುಕೊಳ್ಳುವ ಹೊತ್ತಿಗೆ ನಮ್ಮ ಹುಡುಗರಿಂದ ಫೋನು, ಒಬ್ಬ ಸಿಕ್ಕಿದ್ದಾನೆ ಸಿಕ್ಕಾಪಟ್ಟೆ ದುಡ್ಡು ಕೇಳುತ್ತಿದ್ದಾನೆ. ದುಡ್ಡು ಎಷ್ಟಾದರೂ ಪರವಾಗಿಲ್ಲ ಚೌಕಾಸಿ ಬೇಡ, ಕೇಳಿದಷ್ಟು ಕೊಡೋಣ ಅಂದೆ. ಅವನು ಮತ್ತೆ ಸಂಪರ್ಕಕ್ಕೆ ಸಿಗುತ್ತಿಲ್ಲ. ಬರುವುದಿಲ್ಲ ಅನ್ನುವುದಕ್ಕಾಗಿ ದುಡ್ಡು ಜಾಸ್ತಿ ಕೇಳಿದನಾ? ಗೊತ್ತಿಲ್ಲ. ಹತಾಶೆ, ತಳಮಳ ಹೆಚ್ಚಾಗುತ್ತಿವೆ. ಕೊರೋನಾ ಸಂದರ್ಭವಾದುದರಿಂದ ಯಾವ ಸ್ನೇಹಿತರಿಗೂ ಹೇಳಬಾರದೆಂದು ತೀರ್ಮಾನಿಸಿಬಿಟ್ಟಿದ್ದೆ. ಬರಲಾಗುವುದಲ್ಲವೆಂಬ ಅವರ ಸಂಕಟ ಹಾಗೂ ಬರುತ್ತಾರೆಂಬ ನನ್ನ ನಿರೀಕ್ಷೆ ಹುಸಿಯಾಗುವುದು ನನಗೆ ಬೇಕಿರಲಿಲ್ಲ. ಯಾಕೋ ಗೊತ್ತಿಲ್ಲ, ಇಂತಹ ಸಂಕಟದ ಸಮಯಗಳನ್ನೆಲ್ಲ ಕೌಟುಂಬಿಕವಾಗಿಯೇ ನಿಭಾಯಿಸಿಕೊಳ್ಳಬೇಕು ಅಂತ ನನ್ನ ಮನಸ್ಸು ಮತ್ತೆ ಮತ್ತೆ ಹೇಳುತ್ತಿತ್ತು. ಕಾಲ ಓಡುತ್ತಿದೆ. ನಮ್ಮ ಊರಿನ ಸಮೀಪದಲ್ಲೇ ಇದ್ದ ಅಕ್ಕತಂಗಿಯರಿಗೆ ವಿಷಯ ತಿಳಿಸಿದೆ. ಊರಲ್ಲಿ ಒಬ್ಬರೇ ಇದ್ದ ಅಕ್ಕನಿಗೆ ಫೋನಿನಲ್ಲಿ ವಿಷಯ ತಿಳಿಸದೆ ಸ್ವತಃ ಹೋಗಿ ತಿಳಿಸಲು ಕೋರಿಕೊಂಡೆ.
ಇತ್ತ, ಬೆಳಗಾದರೆ ಅಕ್ಕಪಕ್ಕದವರು ಅನುಮಾನಿಸಿ ನೂರೆಂಟು ಪ್ರಶ್ನೆ ಕೇಳಿದರೆ? ಪೊಲೀಸರು ತಡೆದರೆ ಏನು ಮಾಡಬೇಕು? ಕೋವಿಡ್ ಪರೀಕ್ಷೆ ಮಾಡಬೇಕು ಎಂದರೆ ಏನು ಗತಿ? ಒಂದು ವೇಳೆ ಪಾಸಿಟಿವ್ ಆಗಿಬಿಟ್ಟರೆ, ಅವರ ಜತೆ ಒಂದು ವಾರದಿಂದ ಇದ್ದ ನಮ್ಮೆಲ್ಲರ ಪರಿಸ್ಥಿತಿ ಏನು? ಅತ್ತ ಅಪ್ಪನ ಶರೀರವೂ ಇಲ್ಲ, ಇತ್ತ ನಾವೆಲ್ಲ ಕ್ವಾರಂಟೈನ್ ಆಗಬೇಕು. ಜಗತ್ತಿನಲ್ಲಿ ಯಾರಿಗೂ ಈ ಕಷ್ಟ ಬೇಡ ಅನ್ನೊವಷ್ಟು ಸಂಕಟದಲ್ಲಿ ಬೇಯುತ್ತಿರುವಾಗ ಆಂಬುಲೆನ್ಸ್ ಸಿಕ್ಕಿತು. ಬಾಡಿಗೆ ಆರು ಸಾವಿರ ಅಂದ. ಹದಿನೈದು ಸಾವಿರ ಕೇಳಿದ್ದರೂ ಕೊಡಲು ತಯಾರಿದ್ದವನಿಗೆ ಮಾತೆಲ್ಲಿಂದ ಬರಬೇಕು. ಹುಡುಗರೆಲ್ಲರೂ ಮನೆಗೆ ಬಂದು ಸೇರಿದರು. ಆಂಬುಲೆನ್ಸ್ ಡ್ರೈವರ್ ಸ್ಟ್ರೆಚ್ಚರ್ ಕೊಟ್ಟ. ಅದರಲ್ಲಿ ಹಾಕಿಕೊಂಡು ಮೊದಲ ಮಹಡಿಯ ನಮ್ಮ ಮನೆಯಿಂದ ಕೆಳಗಿಳಿಸತೊಡಗಿದೆವು. ಎಲ್ಲರೂ ಮಾಸ್ಕ್ ಹಾಕಿಕೊಂಡಿದ್ದೆವು. ನಮ್ಮ ಮನೆಯ ಎದುರಿನ ಮಹಡಿ ಮನೆ ಮೇಲೆ ನಿಂತಿದ್ದ ಎಪ್ಪತ್ತೈದು ವರ್ಷದ ತಾತ, ಹುಷಾರಿಲ್ಲವಾ ಅಂತ ಕೇಳಿದರು? ಇಲ್ಲ, ತೀರಿಕೊಂಡಿದ್ದಾರೆ ಅಂತ ಹೇಳುತ್ತಿದ್ದಂತೆ ಅವರು ಏದುಸಿರು ಬಿಡತೊಡಗಿದರು. ಅವರು ರಾತ್ರಿ ಅಪ್ಪನನ್ನು ಮಾತನಾಡಿಸಿದ್ದರು. ಅವರಿಗೆ ನಂಬಿಕೆ ಬಂದಂತಿರಲಿಲ್ಲ. ಅವರಾದರೋ ಒಬ್ಬರೆ ಇರುವ ಏಕಾಂಗಿ. ಸಂಬಂಧಿಗಳೆಲ್ಲ ದೂರದ ದೇಶಗಳಲ್ಲಿದ್ದಾರೆ. ಅವರನ್ನು ಸಮಾಧಾನಿಸುವುದೋ ಬೇಗ ದೇಹವನ್ನು ಸಾಗಿಸುವುದೋ ಎಂಬ ಗಲಿಬಿಲಿಯಾಯಿತು. ನಮ್ಮ ಮನೆ ಓಣಿಯಲ್ಲಿದೆ. ಅಂಬುಲೆನ್ಸ್ ಗೆ ದೇಹವನ್ನು ತೆಗೆದುಕೊಂಡು ಹೋಗಲು ಕನಿಷ್ಠ ೫೦ ಮೀಟರ್ ಹೋಗಬೇಕು. ಅಕ್ಕಪಕ್ಕ ಹತ್ತಾರು ಮನೆಗಳು. ಕರೊನಾ ಸಂದರ್ಭವಾದುದರಿಂದ ಅವರ ಮನಸ್ಥಿತಿ ಅಥವಾ ಕಣ್ಣುಗಳನ್ನು ಎದುರಿಸುವ ಧೈರ್ಯ ನನಗಿರಲಿಲ್ಲ. ಕಾಲವೇ ಚಲಿಸದೆ ನಿಂತುಬಿಡು. ಬೇಗ ಬೆಳಗಾಗಿ ನನ್ನನ್ನು ಸಂಕಷ್ಟಕ್ಕೆ ಸಿಕ್ಕಿಸಬೇಡ ಎಂಬಂಥ ಮನಸ್ಥಿತಿ ನನ್ನದು. ಅಂಬುಲೆನ್ಸ್ ಹತ್ತಿರ ಹೋಗುತ್ತಿದ್ದಂತೆ ಡ್ರೈವರ್ ಬಂದು ದೇಹಕ್ಕೆ ಕೈ ಹಾಕಿದ. ಯಾರು ಹೆತ್ತ ಮಗನೋ, ಜಗತ್ತಿನ ಎಲ್ಲ ಮಾನವೀಯತೆಯನ್ನೂ ನುಂಗಿ ನೀರು ಕುಡಿದವನಂತೆ ಕಂಡ. ಅವನ ಈ ನಡೆಯನ್ನು ನಾನು ನಿರೀಕ್ಷಿಸಿರಲಿಲ್ಲ. ಸಮಯ ಸುಮಾರು ಆರು ಗಂಟೆ. ಇಷ್ಟೆಲ್ಲ ಆದರೂ ನಮ್ಮ ಕೆಳಗಿನ ಮನೆಯವರಿಗೆ ವಿಷಯ ಗೊತ್ತೇ ಇರಲಿಲ್ಲ. ದೇಹವನ್ನು ಕೆಳಗೆ ಇಳಿಸಿದ ಮೇಲೆಯೂ ಅವರದೂ ಅದೇ ಪ್ರಶ್ನೆ ಹುಷಾರಿಲ್ಲವಾ?
ಪೊಲೀಸರು ತಡೆದರೆ ಇರಲಿ ಅಂತ, ಅಪ್ಪನ ದಶಕದ ವೈದ್ಯಕಿಯ ದಾಖಲೆಗಳನ್ನು ಕೂಡಿಟ್ಟುಕೊಂಡೆ. ಸುಮಾರು ಆರು ಗಂಟೆ ಹದಿನೈದು ನಿಮಿಷಕ್ಕೆ ಬೆಂಗಳೂರು ಬಿಟ್ಟೆವು. ದೇಹದ ಜತೆ ಅಕ್ಕನ ಮಗಳು, ನಾನು ಮತ್ತು ನನ್ನ ಕುಟುಂಬ. ಹುಡುಗರಿಗೆ ಬೈಕುಗಳಲ್ಲಿ ಬರಲು ಹೇಳಿದೆ. ದಾಬಸ್ಪೇಟೆ ದಾಟುವವರೆಗೂ ಚಡಪಡಿಕೆ ನಿಲ್ಲಲಿಲ್ಲ. ಮುಂದೆ ನಿರಾಳ ಅನ್ನಿಸಿದರೂ ಉರ್ಡಿಗೆರೆ, ಕೊರಟಗೆರೆ, ಮಧುಗಿರಿಗಳ ಹೊರವಲಯಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಕಾಯುತ್ತಿದ್ದಾರೆ ಎಂಬ ಮಾಹಿತಿಗಳು ಬರತೊಡಗಿದವು. ಗಾಡಿ ಸೀಜ್ ಮಾಡಬಹುದೇ? ದೇಹವನ್ನು ವಶಕ್ಕೆ ತೆಗೆದುಕೊಳ್ಳಬಹುದೆ? ಏನು ಹೇಳಬೇಕು ಅವರಿಗೆ? ಇಷ್ಟಾಗಿಯೂ ಅಪ್ಪನಿಗೆ ಕೋವಿಡ್ ಬಂದಿದ್ದರೆ ನಾನು ಮಾಡುತ್ತಿರುವುದು ತಪ್ಪಲ್ಲವೇ? ನನ್ನ ಮುಂದೆ ಆಯ್ಕೆಗಳು ಕಡಿಮೆ ಇದ್ದವು. ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿದ್ದರಾ? ಗೊತ್ತಿಲ್ಲ, ನಾನು ಕೇಳಿಲ್ಲ, ಅವರು ಹೇಳಿಲ್ಲ. ತುರ್ತು ಸ್ಥಿತಿಯಲ್ಲಿ ಅವರನ್ನು ಅಡ್ಮಿಟ್ ಮಾಡಿದ ಮೇಲೆ ನಾಲ್ಕಾರು ಟೆಸ್ಟ್ ಮಾಡಿದ್ದ ವೈದ್ಯರು ಹೃದಯಕ್ಕೆ ತುಂಬಾ ಹೊಡೆತ ಬಿದ್ದಿದೆ, ವಯಸ್ಸಿನ ಕಾರಣಕ್ಕೆ ಅಪರೇಟ್ ಮಾಡಲು ಸಾಧ್ಯವಾಗುವುದಿಲ್ಲ. ಕಿಡ್ನಿ ಸೋಂಕು ಕೂಡ ಸೇರಿಕೊಂಡು ನಾಲ್ಕಾರು ಸಮಸ್ಯೆಗಳಿವೆ ಎಂದು ಹೇಳಿದ್ದರು. ಮೂರು ದಿನ ಐಸಿಯು ಮತ್ತು ಒಂದು ದಿನ ಜನರಲ್ ವಾರ್ಡಿನಲ್ಲಿ ಇರಿಸಿದ್ದರು. ನಂತರ ವೈದ್ಯರು, ಪರವಾಗಿಲ್ಲ ನಾರ್ಮಲ್ ಇದ್ದಾರೆ ಒಂದು ವಾರದ ನಂತರ ಕರೆದುಕೊಂಡು ಬನ್ನಿ ಎಂದು ಮೆಡಿಸಿನ್ ಬರೆದುಕೊಟ್ಟು ಡಿಸ್ಚಾರ್ಜ್ ಮಾಡಿದ್ದರು. ಆ ಡಿಸ್ಚಾರ್ಜ್ ಸಮ್ಮರಿಯನ್ನೂ ಇಟ್ಟುಕೊಂಡಿದ್ದೆ. ಕೊವಿಡ್ ಸೋಂಕಿನ ಗಂಭೀರತೆ ಗೊತ್ತಿರುವುದೇ ಆಗಿರುವುದರಿಂದ ಪರೀಕ್ಷೆ ಮಾಡಿಯೇ ಇರುತ್ತಾರೆ, ಸೋಂಕು ಇದ್ದರೆ ಡಿಸ್ಚಾರ್ಜ್ ಮಾಡುತ್ತಿರಲಿಲ್ಲ ಎಂಬುದು ನನ್ನ ಭಂಡ ಧೈರ್ಯಕ್ಕೆ ಕಾರಣವಾಗಿತ್ತು.
ಬ್ಯಾರಿಕೇಡ್ ಗಳ ಬಳಿ ಹೆಚ್ಚು ಪೊಲೀಸರು ಬರುವ ಮುನ್ನ ಅಡೆತಡೆಗಳನ್ನು ದಾಟಿಬಿಡಬೇಕೆಂಬುದು ನನ್ನ ಧಾವಂತವಾಗಿತ್ತು. ಬಹುಶಃ ಊರ್ಡಿಗೆರೆ ನಂತರ ಎಲ್ಲೋ ಒಂದು ಕಡೆ ಪೊಲೀಸ್ ಕಾನ್ಸ್ ಟೇಬಲ್ ಒಬ್ಬರು ಕೈ ಹಾಕಿದರು. ಎದೆ ಧಸಕ್ಕೆಂದಿತು. ಡ್ರೈವರ್, `ಬಾಡಿ' ಇದೆ ಎಂದ. ಎಷ್ಟು ಜನ ಇದ್ದಾರೆ ಅಂತ ಮತ್ತೆ ಪೊಲೀಸ್ ಕೇಳಿದರು. ಐದು ಜನ ಅಂದ. ಬ್ಯಾರಿಕೇಡ್ ತೆಗೆದು ದಾರಿ ಮಾಡಿಕೊಟ್ಟರು. ನಿಟ್ಟುಸಿರುಬಿಟ್ಟೆ. ಮುಂದಿನ ಸವಾಲು, ಮಧುಗಿರಿ-ಸಿರಾ ರಸ್ತೆಯಲ್ಲಿ ಬಡವನಹಳ್ಳಿ ಮುಖಾಂತರ ನಮ್ಮ ಊರಿಗೆ ತಲುಪುವುದು. ಈ ನಡುವೆ ಅಪ್ಪನಿಗೆ ಹೀಗಾಗಿದೆ, ಎಲ್ಲ ರೆಕಾರ್ಡ್ ಇದೆ ಅಂತ ನಮ್ಮೂರಿನ ಪಂಚಾಯಿತಿ ಸದಸ್ಯನಿಗೆ ತಿಳಿಸಿದೆ. ಆತ ಆಶಾ ಕಾರ್ಯಕರ್ತೆಗೆ ತಿಳಿಸಿ, ಸಮಸ್ಯೆ ಇಲ್ಲ ಬನ್ನಿ ಅಂದ. ಏಕೆಂದರೆ, ಅಪ್ಪನಿಗೆ ವಾರದ ಹಿಂದೆ ಎದೆ ನೋವು ಕಾಣಿಸಿಕೊಂಡಾಗ, ನನ್ನ ಚಿಕ್ಕಪ್ಪನ ಮಗ ತುರ್ತು ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದು ಆತನಿಗೆ ಗೊತ್ತಿತ್ತು. ಮೊದಲೇ ಯೋಜಿಸಿದ್ದಂತೆ ಎಂಟೂವರೆ ಹೊತ್ತಿಗೆ, ನಮ್ಮ ಜಮೀನಿನನ್ನು ತಲುಪಿದೆವು. ಯಥಾಪ್ರಕಾರ ದೇಹವನ್ನು ಇಳಿಸುವಾಗ ಡ್ರೈವರ್ ಬಂದು ಕೈ ಹಾಕಿದ. ನನ್ನ ಕಣ್ತುಂಬಿಕೊಂಡವು. ಹಣ ಕೊಟ್ಟೆ. ಗಾಡಿ ತೊಳೆಯಲು... ಅಂತ ಬಾಯಿ ಬಿಡುವ ಹೊತ್ತಿಗೆ ಇನ್ನೊಂದಿಷ್ಟು ಕೊಟ್ಟೆ. ಸಂತಸಪಟ್ಟ. ಅವನ್ನು ತಬ್ಬಿಕೊಂಡು ಅಭಿನಂದಿಸಿ ಬೀಳ್ಕೊಟ್ಟೆ.
ಅಪ್ಪ ದೀಕ್ಷೆ ತೆಗೆದುಕೊಂಡಿದ್ದರು. ವಿಧಿ ವಿಧಾನವನ್ನೆಲ್ಲ ಶರಣರೇ ಬಂದು ಮಾಡಬೇಕು. ಅವರಿಗೆ ಬೇಕಾದ ನೆರವು ಒದಗಿಸಬೇಕಷ್ಟೆ. ಆ ವೇಳೆಗಾಗಲೇ ಅವರೆಲ್ಲ ಒಟ್ಟುಗೂಡಿದ್ದರು. ಹೇಳಲೇಬೇಕಾದ ತೀರಾ ಹತ್ತಿರದ ನಾಲ್ಕೈದು ಸಂಬಂಧಿಕರಿಗೆ ಮಾತ್ರ ಹೇಳಿದ್ದೆವು. ಅಂದುಕೊಂಡದ್ದಕ್ಕಿಂತ ಎಲ್ಲ ಸರಾಗವಾಗಿ ನಡೆದು ಸುಮಾರು ಒಂದೂವರೆ ಗಂಟೆಯ ಹೊತ್ತಿಗೆ ಮುಣ್ಣು ಮಾಡಿದೆವು.
ಅನೀರೀಕ್ಷಿತವಾಗಿ ಎದುರಾಗುವ ಸವಾಲುಗಳು ಕಲಿಸುವ ಪಾಠಗಳಿಗೆ ಬಹಳ ಬೆಲೆ ಇರುತ್ತದೆ. ಇದು ನನ್ನ ಖಾಸಗಿ ಗೋಳು. ಈ ಬರಹದಿಂದ ಯಾರಿಗಾದರೂ ಪ್ರಯೋಜನವಿದೆಯೋ ಇಲ್ಲವೋ ಗೊತ್ತಿಲ್ಲ. ಕಳೆದ ಎರಡೂವರೆ ತಿಂಗಳಿನಿಂದ ಒಂದು ವಿಧದ ಮಂಕು ಕವಿದಂತಾಗಿದೆ. ನಾನು ಹೊಸ ಕೆಲಸಕ್ಕೆ ಸೇರಿ ಕೇವಲ ಆರು ತಿಂಗಳಾಗಿದ್ದರೂ ಸಂಪೂರ್ಣ ಸಹಕಾರ ಕೊಟ್ಟ ಕಂಪನಿಯ ಬಾಸ್ ಗಳು, ಸಹೋದ್ಯೋಗಿಗಳು ಸ್ನೇಹಿತರಿಗೆಲ್ಲ ಋಣಿ. ದೀರ್ಘವಾಗಿ ಬರೆದಿದ್ದಕ್ಕೆ ಕ್ಷಮೆ ಇರಲಿ.