ಹೆಜ್ಜೆ ಗೆಜ್ಜೆ :
ಈ ಬ್ಲಾಗ್ ನಲ್ಲಿರುವ ವಿಷಯ ಮತ್ತು ಚಿತ್ರಗಳ ಬಳಕೆಗೆ ಅನುಮತಿ ಕಡ್ಡಾಯ.
ಮತ್ತೊಂದು ಕ್ಷಣ ನನ್ನ ಬಗ್ಗೆ ಬದುಕು-ಬರಹ

Saturday, 25 May 2019

ತೆಳ್ಳಗಾಗುತ್ತಿರುವ ಕೆನೆಪದರ ಆರೋಗ್ಯಕ್ಕೆ ಹಾನಿಕರ!


ಜಾತಿವಾರು ಸೌಲಭ್ಯಗಳ ವಿಷಯ ಬಂದಾಗ ಸಣ್ಣ ಸಣ್ಣ ಜಾತಿಗಳಿಗೆ ಸೌಲಭ್ಯ ಕೊಡಿಸುವುದಾಗಿ ಕೆಲ ಪ್ರಬಲ ಜಾತಿಗಳ ನಾಯಕರು ಸ್ವಯಂವಕ್ತಾರಿಕೆ ವಹಿಸುವ ವಿಷಯ ಈಗೀಗ ಹೆಚ್ಚು  ಕೇಳಿಬರುತ್ತಿದೆ.

ತಮ್ಮ ಜಾತಿಯ ನೇತೃತ್ವದಲ್ಲಿ ಇತರ ಜಾತಿಗಳಿಗೆ ಸೌಲಭ್ಯ ಕಲ್ಪಿಸಲು ಶ್ರಮಿಸುವುದಾಗಿ ಹೇಳುವ  ದೊಡ್ಡಣ್ಣನ ರೀತಿಯ ವಕ್ತಾರಿಕೆಯನ್ನು ಅವರು ಬಹುಕಾಲದಿಂದಲೇ ವಹಿಸುತ್ತಾ ಬಂದಿದ್ದಾರೆ. ಇಂಥ ವಕ್ತಾರಿಕೆ ವಹಿಸಲು ಅವರಿಗೆ ಯಾರು ಅಧಿಕಾರ ಕೊಟ್ಟಿದ್ದಾರೋ ಗೊತ್ತಿಲ್ಲ. ಆದರೆ  ಒಳಮೀಸಲು ವಿಷಯದ ಮಾತು ಬಂದಾಗಲೆಲ್ಲಾ ನಾಯಕರ ವರಸೆ ಮತ್ತು ವರಾತಗಳು ಬೇರೆಯೇ ಇರುತ್ತವೆ. ತನಗೆ ಲಾಭವಿಲ್ಲದೆ ಇತರ ಜಾತಿಗಳ ವಕ್ತಾರಿಕೆಯನ್ನು ಯಾರು ಯಾಕಾದರೂ  ವಹಿಸುತ್ತಾರೆ? ಇಂಥ ಪ್ರಶ್ನೆಗಳನ್ನು ಈಗ ಸಂಬಂಧಿಸಿದ ಕೆಲ ಸಣ್ಣ ಸಣ್ಣ ಜಾತಿ ಜನ ಕೇಳಿಕೊಳ್ಳಲೇಬೇಕಿದೆ. ಏಕೆಂದರೆ ಜಾತಿ ಜನಗಣತಿ ಮತ್ತು ಒಳಮೀಸಲಿಗೆ ಒತ್ತಡಗಳು ಹೆಚ್ಚುತ್ತಿರುವಾಗ ತಾವು  ಬಹುಕಾಲದಿಂದ ಅನುಭವಿಸುತ್ತಾ ಬಂದಿರುವ ಪಾಲಿಗೆಲ್ಲಿ ಚ್ಯುತಿ ಬಂದುಬಿಡುತ್ತದೋ ಎಂಬ ಆತಂಕ ಕೆಲವರನ್ನು ಕಾಡತೊಡಗಿದೆ. ಹಾಗಾಗಿ ಈಗ ಹೆಚ್ಚಾಗಿ ಜಾಗೃತರಾಗಿರುವ ಅವರು, ಇತರ ಎಲ್ಲ ಸಣ್ಣ ಜಾತಿಗಳಿಗೂ ತನ್ನದೇ ಜಾತಿ ನಾಯಕತ್ವ ನೀಡುವುದಾಗಿ ಮತ್ತೆ ಮತ್ತೆ ಹೇಳುತ್ತಾ ದಾರಿ ತಪ್ಪಿಸುತ್ತಿರುತ್ತಾರೆ.

ನಮ್ಮದು ಜಾತ್ಯತೀತ ಸಂವಿಧಾನವಿರಬಹುದು ಆದರೆ ಪ್ರಜಾಪ್ರಭುತ್ವದಲ್ಲಿ ಎಲ್ಲವೂ ಜಾತಿ ಮತ್ತು ಸಂಖ್ಯೆಯ ಆಧಾರದಿಂದಲೇ ನಡೆಯುತ್ತಿರುವಾಗ ತಾವು ನಿರ್ದಿಷ್ಟ ವರ್ಗದಲ್ಲಿ ಬಹುಸಂಖ್ಯಾತರು ಎಂಬ ಒಂದೇ ಕಾರಣಕ್ಕೆ ಸ್ವಯಂ ನೇತೃತ್ವದ ಹಕ್ಕು ಕೆಲವರಿಗೆ ಹೇಗೋ ದಕ್ಕಿಬಿಡುತ್ತದೆ. ಎಲ್ಲ ರಂಗಗಳಲ್ಲೂ ಪ್ರಬಲರಾಗಿರುವ  ಒಂದು ನಿರ್ದಿಷ್ಟ ಜಾತಿಯ ಗುಂಪು ಇತರ ಎಲ್ಲ ಶೋಷಿತ ಮತ್ತು ಸಣ್ಣ, ಸಣ್ಣ ಜಾತಿಗಳ ಹೆಸರಲ್ಲಿ ನಡೆಸುತ್ತಿರುವ ಅಂಧಾದುಂದಿ ದರ್ಬಾರನ್ನು ಈಗೀಗ ಇತರ ಎಲ್ಲರೂ ಗೊತ್ತು ಮಾಡಿಕೊಳ್ಳುತ್ತಿರುವುದು ಕೆಲವು ಸ್ವಯಂಘೋಷಿತ ನಾಯಕರ ನಿದ್ದೆಗೆಡಿಸಿದೆ. ಹಾಗಾಗಿ ಒಳಮೀಸಲು  ಜಾರಿಯಾದರೆ ಒಗ್ಗಟ್ಟು ಒಡೆದುಹೋಗುತ್ತದೆ ಎಂಬುದೂ ಸೇರಿದಂತೆ ಒಳಮೀಸಲು ವಿರುದ್ಧ ಸ್ವಯಂಘೋಷಣೆಗಳನ್ನು ಮೊಳಗಿಸುತ್ತಿದ್ದಾರೆ.

ಒಳಮೀಸಲು ಜಾರಿಯಾದರೆ ಒಗ್ಗಟ್ಟು ಹೇಗೆ ಒಡೆದುಹೋಗುತ್ತದೆ? ಇದೇ ಹೊತ್ತಿನ ಪ್ರಶ್ನೆ. ಕೆಲವರು ತಮ್ಮ ರಾಜಕೀಯ ಮತ್ತು ಇತರ ಸಂಘಟನಾತ್ಮಕ ಶಕ್ತಿಗೆ ಧಕ್ಕೆ ಬರುತ್ತದೆ ಎಂಬ ಕಾರಣದಿಂದ ನೇತೃತ್ವದ ನಾಟಕ ಆಡುತ್ತಿದ್ದಾರೆ. ಇವರ ನೇತೃತ್ವದ ರಾಜಕೀಯದಲ್ಲಿ ಇತರ ಸಣ್ಣ ಸಣ್ಣ  ಜಾತಿಗಳು ಈವರೆಗೆ ಪಡೆದಿರುವ ಪಾಲನ್ನು ಬಹಿರಂಗಗೊಳಿಸಿದರೆ ಇವರ ನಿಲುವು ಬೆತ್ತಲಾಗುತ್ತದೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಯಾವ್ಯಾವ ಜಾತಿಯವರು ಇತರ ಸಣ್ಣ ಜಾತಿಗಳ ಸವಲತ್ತುಗಳನ್ನು ಹೊಡೆದುಕೊಂಡಿದ್ದಾರೆ ಎಂಬುದನ್ನು ಆದಷ್ಟು ಬೇಗ ಬಹಿರಂಗಗೊಳಿಸುವ ಕಾಲ ಬರಲೆಂದು ಧ್ವನಿಯಿಲ್ಲದ ಎಲ್ಲ ಜಾತಿಗಳು ಪ್ರಾರ್ಥಿಸುತ್ತಿವೆ. ಹಾಗೆ ನೋಡಿದರೆ ಯಾವುದೋ ಕಾಲದಲ್ಲಿ ಮಾಡಿದ ಜಾತಿ ಜನಗಣತಿ ಮತ್ತು ಈಗ ನಡೆಯುತ್ತಿರುವ ನಿಧಾನಗತಿಯ ಜಾತಿ ಜನಗಣತಿ ಚರ್ಚೆ ನಿಧಾನವಾದಷ್ಟೂ ಈಗಾಗಲೇ ಪ್ರಬಲರಾಗಿರುವವರ ಪ್ರಾಬಲ್ಯ ಹೆಚ್ಚುತ್ತಲೇ ಹೋಗುತ್ತದೆ. ಇಂಥ ಹೊತ್ತಿನಲ್ಲಿ ನೇತೃತ್ವ ವಹಿಸುವ ಮಾತನ್ನಾಡುವವರು ಯಾರನ್ನು ಮರುಳು ಮಾಡುತ್ತಿದ್ದಾರೆ?

ಸಣ್ಣವರೆಲ್ಲಾ ಜಾಣರಲ್ಲ!: ಮತಗಳ ದೃಷ್ಟಿಯಿಂದ ಎಲ್ಲೂ ನಿರ್ಣಾಯಕರಲ್ಲದ ಅನೇಕ ಸಣ್ಣ ಸಣ್ಣ ಜಾತಿಗಳ ಜನ ಇನ್ನೂ ಯಾವುದೇ ಸೌಲಭ್ಯದ ರುಚಿ ನೋಡದೆ ಒಳ ಮೀಸಲು, ಅದಕ್ಕೆ ಬೇಕಾಗುವ ಜಾತಿ ಆಧರಿತ ಜನಗಣತಿ ಎಂಬ ದೂರದ ಬೆಟ್ಟವನ್ನು ನಂಬಿಕೊಂಡು ತಾಳ್ಮೆಯಿಂದ ಇದ್ದಾರೆ. ಸಧ್ಯದಲ್ಲಿ ಅದು ಆಗದೇ ಹೋದರೆ ಆಯಾ ಜಾತಿ ಜನಗಳು ಇನ್ನೊಂದು ರೀತಿಯಲ್ಲಿ ಸಂಘಟಿತರಾಗುವ ದಿನಗಳು ದೂರವಿಲ್ಲ. ಸಣ್ಣ, ಸಣ್ಣ ಜಾತಿಗಳು ಎಂದೂ ಒಂದಾಗುವುದಿಲ್ಲ ಎಂಬ ಭ್ರಮೆಯೇ ಕೆಲವು ಸ್ವಯಂಘೋಷಿತ ವಕ್ತಾರರನ್ನು ಹೀಗೆ ಆಡಿಸುತ್ತಿದೆ. ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಮುಂತಾಗಿ ಮಾತನಾಡುವ  ನಾಯಕರು ಯಾಕೆ ಒಳ ಮೀಸಲು ವಿರುದ್ಧವಿದ್ದಾರೆ? ಸೌಲಭ್ಯ ಜಾತಿವಾರು ವಿಂಗಡಣೆಯಾದರೆ ಇವರು ಕಳೆದುಕೊಳ್ಳುವ ಗಂಟೇನು? ಸಂವಿಧಾನಾತ್ಮಕವಾಗಿ ಸಿಗಲೇಬೇಕಾದ ಸೌಲಭ್ಯಗಳನ್ನು ಪಡೆಯಲು, ಸಣ್ಣ ಜಾತಿಗಳಿಗಿಂತ ನಾಯಕರ ಜಾತಿ ಪ್ರಬಲ ಎನ್ನುವ ಒಂದೇ ಕಾರಣಕ್ಕೆ ದೊಣ್ಣೆನಾಯಕರ ಅಪ್ಪಣೆಯಂತೆ ಏಕೆ ತಲೆ ಆಡಿಸಬೇಕು? ನಾಯಕರು ನಿಜವಾಗಿಯೂ ಪ್ರಜಾಪ್ರಭುತ್ವವಾದಿಗಳಾಗಿದ್ದರೆ ತಮ್ಮ ನಾಯಕತ್ವಕ್ಕೆ ಹೆಗಲುಕೊಟ್ಟಿರುವ ಮತ್ತು ಇವರಿಗೆ ವರ್ಗಗಳ ನಾಯಕರೆಂಬ ಅಭಿದಾನ ನೀಡಿರುವ ಸಣ್ಣ ಸಣ್ಣ ಜಾತಿಗಳ ಪರವಾಗಿ ಧ್ವನಿ ಎತ್ತಿರುವ ಉದಾಹರಣೆ ಇದ್ದರೆ ಬಹಿರಂಗವಾಗಿ ಉಲ್ಲೇಖಿಸಿ ಸಣ್ಣ ಸಣ್ಣ ಜಾತಿಗಳಿಗೆ ಇವರ ನಾಯಕತ್ವದ ಬಗ್ಗೆ ಇರುವ ಅಜ್ಞಾನವನ್ನು ತೊಡೆದು ಹಾಕಬೇಕು. ಆಶ್ಚರ್ಯವೆಂದರೆ ಒಳಮೀಸಲು ವಿಷಯ ಚರ್ಚೆಗೆ ಬಂದಾಗಲೆಲ್ಲಾ ಮೊದಲು ಪ್ರತಿಕ್ರಿಯಿಸುವ ಜನ ಇವರೇ ಆಗಿರುತ್ತಾರೆ

ಕೆಲವು ರಾಜಕೀಯ ನಾಯಕರು ಇಷ್ಟು ದಿನ ಇತರ ಎಲ್ಲ ಸಣ್ಣ ಜಾತಿಗಳ ಹೆಸರಲ್ಲಿ ವಕ್ತಾರಿಕೆ ವಹಿಸಿ ಸ್ವಜನ ಪಕ್ಷಪಾತ ಮೆರೆದಿರುವುದರ ಫಲವೇ ಈಗ ಒಳಮೀಸಲು, ಜಾತಿ ಆಧರಿತ ಜನಗಣತಿ ವಿಚಾರ ಭುಗಿಲೇಳಲು ಕಾರಣ ಎಂಬುದನ್ನು ನಾಯಕರು ಬೇಗ ಅರ್ಥ ಮಾಡಿಕೊಂಡರೆ ಒಳ್ಳೆಯದು. ಮೀಸಲಿಗೆ ಸಂಬಂಧಿಸಿದ ಆಯೋಗದ ವರದಿಯೊಂದು ತಮ್ಮ ಜಾತಿಯ ಹಿತಾಸಕ್ತಿಗೆ ಪೂರಕವಾಗಿಲ್ಲ ಎಂಬ ಒಂದೇ ಕಾರಣಕ್ಕೆ ಇನ್ನೊಂದು ಪ್ರಬಲ ಜಾತಿ ವರದಿಯನ್ನೇ ನಿಷ್ಕ್ರಿಯಗೊಳಿಸಿದ ಇತಿಹಾಸ ನಮ್ಮೆಲ್ಲರ ಕಣ್ಣ ಮುಂದಿದೆ. ಹಾಗಾದರೆ ಇನ್ನೆಷ್ಟು ದಿನ ಜಾತಿ ಹೆಸರಲ್ಲೇ ಶೋಷಣೆಗೆ ಒಳಗಾಗುತ್ತಿರುವ ಸಣ್ಣ ಸಣ್ಣ ಜಾತಿಗಳು ಸುಮ್ಮನಿರಬೇಕು? ಅಂಥ ಸಂವಿಧಾನಾತ್ಮಕ ಪಾಲು ತಮಗೆ ಸಿಗಲೇಬೇಕೆಂದು ಬಲವಾಗಿ ಅವರು ಹೋರಾಟ ಮಾಡಲು ಮುಂದಾದರೆ ನಾಯಕರೇಕೆ ಒಗ್ಗಟ್ಟಿನ ಉಪದೇಶ ಮಾಡಬೇಕು? ಸಣ್ಣ ಜಾತಿಗಳ ಅನೇಕ ಸೌಲಭ್ಯಗಳನ್ನು ಕಬಳಿಸುತ್ತಿರುವ ತಮ್ಮ ಜಾತಿಯ ಹಿತವನ್ನು ಬಲಿಕೊಟ್ಟು, ಸಣ್ಣ ಜಾತಿಗಳಿಗೆ ಇವರು ಹೇಗೆ ಸಾಮಾಜಿಕ ನ್ಯಾಯ ಕೊಡಿಸಬಲ್ಲರು? ಪ್ರಬಲ ಜಾತಿಗಳ ಪೋಷಣೆಗಾಗಿಯೇ ಇರುವ ನೂರಾರು ಜಾತಿಗಳ ವರ್ಗದ ಸಂಕೋಲೆಯಿಂದ ಸಣ್ಣ-ಪುಟ್ಟ ಜಾತಿಗಳು ಹೊರಬರಲು ಇರುವ ಒಂದೇ ಉಪಾಯ ಎಂದರೆ  ಜಾತಿ ಆಧರಿತ ಜನಗಣತಿ ಮತ್ತು ಒಳ ಮೀಸಲು. ಇದು ಮೀಸಲು ಸೌಲಭ್ಯ ಪಡೆಯುತ್ತಿರುವ ಎಲ್ಲ ಜಾತಿ, ಬುಡಕಟ್ಟು, ವರ್ಗಗಳಿಗೂ ಅನ್ವಯಿಸುತ್ತದೆ. ಹಾಗಾಗಿ ಕೆಲ ಪಟ್ಟಭದ್ರರ ಮಾತಿಗೆ ಯಾರೂ ಮರುಳಾಗಬೇಕಿಲ್ಲ, ಬದಲಾಗಿ ಜಾತಿ ಆಧರಿತ ಜನಗಣತಿ, ಒಳಮೀಸಲಿನ ತ್ವರಿತ ಅಗತ್ಯವನ್ನು ಸಂಬಂಸಿದವರಿಗೆ ಮನವರಿಕೆ ಮಾಡಿಕೊಡಲು, ಎಲ್ಲ ಶೋಷಿತ ಸಮುದಾಯಗಳು ಸಾಂಪ್ರದಾಯಿಕ ಸ್ವಯಂಘೋಷಿತ ನಾಯಕರ ಪರಿಯಿಂದ ತುರ್ತಾಗಿ  ಅಚೆ ಬರಬೇಕಾದ ಅನಿವಾರ್ಯತೆ ಇದೆ
ಯೋಜನೆ-ನಿಗಮ-ಮಂಡಳಿ: ಒಂದು ವರ್ಗದ ಹೆಸರಲ್ಲಿ ಒಂದು ಯೋಜನೆ ಘೋಷಿಸಿಬಿಟ್ಟರೆ ಇಡೀ ವರ್ಗದ ಪ್ರೀತಿ ಗಳಿಸಬಹುದೆಂಬ ಭ್ರಮೆಯಲ್ಲಿಯೇ ಈಗಿನ ರಾಜಕೀಯ ಪಕ್ಷಗಳು ಮತ್ತು ನಾಯಕರು ಇದ್ದಾರೆ. ಜತೆಗೆ ಇಂಥ ಭ್ರಮೆಗಳನ್ನು ಮೊದಲಿನಿಂದಲೂ ತಮ್ಮ ಅನುಕೂಲಕ್ಕೆ ತಕ್ಕಂತೆ ಪರಿವರ್ತಿಸಿಕೊಳ್ಳುತ್ತಾ ಇರುವ ನಾಯಕರೂ ಹೆಚ್ಚಾಗಿದ್ದಾರೆ. ಯಾರಿಗೂ ಸಾಮಾಜಿಕ ನ್ಯಾಯದ ನಿಜವಾದ ಅನುಷ್ಠಾನ ಬೇಕಾಗಿಲ್ಲ. ಮೂಲಕ ಶೋಷಿತರ ಪರವಾಗಿ ಮಾತನಾಡಿ ಕೆಲವೇ ಪ್ರಬಲ ಜಾತಿಗಳ ಕೆಂಗಣ್ಣಿಗೆ ಗುರಿಯಾಗುವುದು ಬೇಕಿಲ್ಲ. ಆದ್ದರಿಂದ ತಾವು ಘೋಷಿಸಿದ ಸವಲತ್ತು ವರ್ಗದ ಎಲ್ಲರಿಗೂ ತಲುಪಿದೆಯೇ, ತಲುಪುತ್ತದೆಯೇ ಎಂದು ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಇನ್ನು ಒಳ ಮೀಸಲು ವಿಷಯವಾಗಿ ದೇವೇಗೌಡರು ಗುಡುಗಿ ಸುಮ್ಮನಾಗಿದ್ದು ಏಕೆ? ಕಳೆದ ಚುನಾವಣೆಗಳಲ್ಲೇ ಅವರು ಒಳಮೀಸಲು ಬಗ್ಗೆ ಒಂದು ನಿರ್ದಿಷ್ಟ ಧೋರಣೆಯನ್ನು ಏಕೆ ತಾಳಲಿಲ್ಲಯಾವುದೋ ಜಾತಿಯ ಯಾರೋ ಅನಾಮಧೇಯರನ್ನು ತಮಗೆ ಬೇಕಾದವರು ಎಂಬ ಒಂದೇ ಕಾರಣಕ್ಕೆ ಎಮ್ಮೆಲ್ಸಿಯಾಗಿಯೋ ಅಥವಾ ಯಾವುದೋ ನಿಗಮ ಮಂಡಳಿಯೊಂದರ ಅಧ್ಯಕ್ಷರನ್ನಾಗಿಯೋ ನೇಮಕ ಮಾಡಿದರೆ ಇಡೀ ಜಾತಿ/ವರ್ಗಕ್ಕೆ ನ್ಯಾಯ ದೊರಕಿಸಿದಂತೆ ಎಂಬುದು ಇನ್ನೊಂದು ಭ್ರಮೆ. ಹೀಗೆ ನೇಮಕಗೊಳ್ಳುವ ಅನೇಕ ನಾಯಕರು, ಅವರು ನೇಮಕಗೊಂಡ ನಂತರವೇ ತಮ್ಮವರೆಂದು ಇಡೀ ಸಮುದಾಯಕ್ಕೆ ಗೊತ್ತಾಗುತ್ತದೆ. ಸಂಖ್ಯೆಯ ಕಾರಣಕ್ಕೆ ಪ್ರಬಲ ಜಾತಿಗಳ ಜನ ಎಲ್ಲ ಕಡೆಯೂ ಇರುವಾಗ ಎಲ್ಲಿಯೂ ಸಲ್ಲದ ಹುದ್ದೆಗಳಿಗೆ ಸಣ್ಣ ಜಾತಿಗಳ ಕೆಲವರನ್ನು ನೇಮಿಸಲಾಗುತ್ತದೆ. ಯಾವುದೋ ಕೆಲಸಕ್ಕೆ ಬಾರದ ನಿಗಮ -ಮಂಡಳಿಯ ಅಧ್ಯಕ್ಷಗಿರಿ ಪಡೆದ ವರ್ಗದ ನಾಯಕ, ಇಡೀ ರಾಜ್ಯದಲ್ಲಿ ಹರಡಿಕೊಂಡಿರುವ ತನ್ನ ಜಾತಿ ಜನರ ಪ್ರತಿನಿಯಾಗುವುದು ಯಾವ ರೀತಿಯ ಪ್ರಜಾಪ್ರಭುತ್ವ? ಇನ್ನು ರಾಜಕೀಯ ಪಕ್ಷಗಳು ಚುನಾವಣೆಗೆ ಟಿಕೇಟು ಹಂಚುವುದೇ ಒಂದು ಪ್ರಹಸನ. ಹೆಸರಿಗೆ ಮಾತ್ರ ವರ್ಗದವರಿಗೆ ಟಿಕೇಟು ಎಂಬಂತೆ ಬಿಂಬಿಸಲಾಗುತ್ತದೆ. (ಪರಿಶಿಷ್ಟ ಜಾತಿ/ವರ್ಗದವರಿಗೆ  ಪ್ರತ್ಯೇಕ ಸ್ಥಾನಗಳ ಮೀಸಲು ಇರುವುದರಿಂದ ಇದು ಅನ್ವಯಿಸುವುದಿಲ್ಲ.) ಕೊನೆಗೆ ಟಿಕೆಟ್ ಸಿಗುವುದು ಮಾತ್ರ ಕ್ಷೇತ್ರದ ಮಟ್ಟಿಗೆ ಹೆಚ್ಚಿಗೆ ಇರುವ ಎಂದಿನ ಪ್ರಬಲ ಜಾತಿಗೆ ಮಾತ್ರ. ಅನೇಕ ಬಾರಿ ನಿರ್ದಿಷ್ಟ ಜಾತಿಯ ಒಟ್ಟು ಜನಸಂಖ್ಯೆ ಇತರೆ ಎಲ್ಲ ಸಣ್ಣ ಸಣ್ಣ ಜಾತಿಗಳ ಒಟ್ಟು ಜನಸಂಖ್ಯೆಯ ಕಾಲು ಭಾಗದಷ್ಟೂ ಇರುವುದಿಲ್ಲ. ಹೇಗಿದ ಸಾಮಾಜಿಕ ನ್ಯಾಯ? ಹೀಗಾಗುವುದು ಬೇಡ, ನಮ್ಮ ಸಂವಿಧಾನಾತ್ಮಕ ಪಾಲನ್ನು ನಮಗೆ ಕೊಡಿ ಎಂದು ಜನ ಕೇಳಿದರೆ ಇವರಿಗೆ ಅದು ವರ್ಗವನ್ನು ಒಡೆಯುವ ಹುನ್ನಾರದಂತೆ ತೋರುತ್ತದೆ
ಒಳಮೀಸಲು ಬಗ್ಗೆ ಕೂದಲಲ್ಲಿ ಬೆಣ್ಣೆ ತೆಗೆದಂತೆ ನಾಜೂಕಿನಿಂದ ಮಾತಾಡುವ ಇವರಿಗೆ ಒಳಮೀಸಲಿನಿಂದ ಒಳೇಟು ಬೀಳುತ್ತದೆ. ಹಾಗಾಗಿಯೇ ಬೆಕ್ಕಿನ ಸನ್ಯಾಸ ಬೋಧಿಸುತ್ತಾ ತಮ್ಮ ಆಷಾಢಭೂತಿತನವನ್ನು ಅನಾವರಣಗೊಳಿಸುತ್ತಿರುತ್ತಾರೆ. ಪ್ರಬಲ ಜಾತಿಗಳು, ಪ್ರಬಲ ಮಠ ಮತ್ತು ಪ್ರಬಲ ನಾಯಕತ್ವದಿಂದ ಮುನ್ನಡೆಯುತ್ತಿರುವಾಗ ಸಣ್ಣ ಸಣ್ಣ ಜಾತಿಗಳು ದಿಕ್ಕು-ದೆಸೆಯಿಲ್ಲದೆ ಇನ್ನೆಷ್ಟು ದಿನ ನಲುಗಬೇಕು? ಹಾಗಾಗಿ ನಿಜ ಅರ್ಥದಲ್ಲಿ ಎಲ್ಲವೂ ಬಹುಜನರಿಂದ ಬಹುಜನರಿಗಾಗಿ ಎಂಬುದು ನಿಜವಾಗಬೇಕಿದ್ದರೆ ಸಣ್ಣ, ಸಣ್ಣ ಜಾತಿಗಳು ಇನ್ನೊಬ್ಬರನ್ನು ನೆಚ್ಚಿಕೊಳ್ಳದೆ ಬೇಗ ಎದ್ದು ನಿಲ್ಲಬೇಕು.
ನ್ಯಾಯಬಾಹಿರ ಶಿಫಾರಸು: ಈಗ ಹಿಂದುಳಿದ ಆಯೋಗ ಒಂದು ಹೊಸ ಶಿಫಾರಸು ಮಾಡಿ ಮತ್ತೆ ಬಹುಸಂಖ್ಯಾತ ಹಿಂದುಳಿದ ವರ್ಗದ ಬಡವರನ್ನು ಅವಕಾಶವಂಚಿತರನ್ನಾಗಿ ಮಾಡಲು ಹೊರಟಿದೆ. ಅದರ ಶಿಫಾರಸಿನ ಪ್ರಕಾರ ಹಿಂದುಳಿದ ವರ್ಗದವರ ಈಗಿನ ಕೆನೆ ಪದರದವರ ಆದಾಯ ಮಿತಿಯನ್ನು ಹೆಚ್ಚಿಸಬೇಕು. ಅಂದರೆ ಹಿಂದುಳಿದಿರುವ ವರ್ಗದ ಮೀಸಲು ಮಿತಿಯಲ್ಲಿ ಇನ್ನಷ್ಟು ಜನ ಆದಾಯವಿರುವವರು ಬರುತ್ತಾರೆ ಎಂದಾಯ್ತು. ಹಾಗಾದಾಗ ಕೃಷಿ ಕಾರ್ಮಿಕನ ಮಗನೊಬ್ಬ ಕಾಲೇಜು ಉಪನ್ಯಾಸಕ ಸೇರಿದಂತೆ ಎಲ್ಲ ಕ್ಲಾಸ್ ಒನ್ ಸಂಬಳದಾರನ ಮಗನ ಜತೆ ರ್ಸ್ಪಸಬೇಕು. ಇದರ ಮೇಲೆ ಒಳ ಮೀಸಲು ಬಂದರೂ ಬರಲಿ, ಬಡವರ ಹೆಸರಲ್ಲಿಯೇ ಎಲ್ಲ ಬಡವರ ಅವಕಾಶಗಳನ್ನೂ ಇನ್ನಷ್ಟು ದಿನ ಆರಾಮವಾಗಿ ಹೊಡೆದುಕೊಳ್ಳಬಹುದೆಂಬ ಹುನ್ನಾರ  ಇದರ ಹಿಂದಿದೆ. ಆದ್ದರಿಂದ ಮೀಸಲು ನೀತಿಗೆ  ವಿರುದ್ಧವಾದ ಶಿಫಾರಸನ್ನು ಬಹುಸಂಖ್ಯಾತ ಹಿಂದುಳಿದ ಬಡವರು ಸರ್ವಥಾ ಒಪ್ಪಬಾರದು. ಸರಕಾರ ಶಿಫಾರಸಿನ ಬಗ್ಗೆ ಶೀಘ ತೀರ್ಮಾನಕ್ಕೆ ಬರುವುದಾಗಿ ಸಮಾಜಕಲ್ಯಾಣ ಸಚಿವರು ಹೇಳಿರುವುದನ್ನು ನೋಡಿದರೆ ಸರಕಾರದ ತರಾತುರಿಯ ಧಾವಂತದ ಹಿಂದೆ ಯಾರಿದ್ದಾರೆ ಎಂದು ಸುಲಭವಾಗಿ ಊಹಿಸಬಹುದು. ಇಂಥದೇ ಪರಿಸ್ಥಿತಿಗಳನ್ನು ಶತಮಾನಗಳಿಂದ ಅನುಭವಿಸುತ್ತಿರುವ ಹಿಂದುಳಿದವರು, ದಲಿತರು ಮತ್ತು ಅಲ್ಪಸಂಖ್ಯಾತರು ಜಾತಿ ಅಧರಿತ ಜನಗಣತಿ ಮತ್ತು ಮೀಸಲುಗಳ ಅಗತ್ಯವನ್ನು ಆದಷ್ಟೂ ಬೇಗ ಮನಗಾಣಬೇಕಿದೆ. ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಇಂಥ ಅವೈಜ್ಞಾನಿಕ ಶಿಫಾರಸಿನ ಬಗ್ಗೆ ಕೆಲವರು ಧ್ವನಿ ಎತ್ತಿರುವುದು ಮತ್ತು ಅವರನ್ನು ಬೆಂಬಲಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ಬಡವರ ಪಾಲಿಗೆ ಆನೆ ಬಲ ತಂದಿದೆ.

(ಐದಾರು ವರ್ಷಗಳ ಹಿಂದೆ ಬರೆದದ್ದು)