ಇವತ್ತು ವಿಶ್ವ ಅಮ್ಮಂದಿರ ದಿನ. ಅಮ್ಮನಿಲ್ಲದ ಎಷ್ಟೋ
ಮಂದಿಗೆ ತಮ್ಮ ಅಮ್ಮಂದಿರು ನೆನಪಾಗಿವಂತೆ ನನಗೂ ನನ್ನಮ್ಮ ನೆನಪಾದರು. ಅಮ್ಮನ ದಿನ, ಅಪ್ಪನ ದಿನ ಇಂಥ
ಯಾವುದೇ ದಿನಗಳ ಬಗ್ಗೆ ಅನಕ್ಷರಸ್ಥೆಯಾಗಿದ್ದ ನನ್ನಮ್ಮನಿಗೆ ಗೊತ್ತಿರುವುದು ಸಾಧ್ಯವಿರಲಿಲ್ಲ.
ಅಮ್ಮನಿಲ್ಲದ ಮೊದಲ ‘ಅಮ್ಮನ ದಿನ’ವಾದ್ದರಿಂದಲೇ
ಇದು ನನ್ನನ್ನು ಇಷ್ಟೊಂದು ತೀವ್ರವಾಗಿ ಕಾಡುತ್ತಿರುಬಹುದು ಎಂದುಕೊಂಡಿದ್ದೇನೆ. ಏಕೆಂದರೆ ಅಮ್ಮನ ದಿನದ
ಮಹತ್ವ ನನಗೆ ಈ ಮೊದಲು ಅಷ್ಟಾಗಿ ಗೊತ್ತಾಗಿರಲಿಲ್ಲ. ನನ್ನಮ್ಮ ಬದುಕಿದ್ದಾಗ ಬಂದ ‘ಅಮ್ಮನ ದಿನ’ಗಳಲ್ಲಿ
ಪತ್ರಿಕೆಗಳಲ್ಲಿ ಯಾವುದಾದರೂ ಲೇಖನ ಬಂದರೆ ಕಣ್ಣಾಡಿಸುತ್ತಿದ್ದೆ. ಅಮ್ಮ ನೆನಪಾಗುತ್ತಿದ್ದರು. ವಿಷ್
ಮಾಡುವ ಪದ್ಧತಿ ಖಂಡಿತಾ ಇರಲಿಲ್ಲ. ಹಾಗಾಗಿ ನಾನು ನನ್ನಮ್ಮನಿಗೆ ಎಂದೂ ವಿಷ್ ಮಾಡಲಿಲ್ಲ.
ಬಡತನದ ಕಾರಣದಿಂದ ಅನುಭವಿಸಿದ ಅವಮಾನ, ಸಂಕಟಗಳು
ನಮ್ಮನ್ನು ಅಷ್ಟಾಗಿ ತಟ್ಟದಂತೆ ಕಾಪಾಡಿದ್ದ ಅಮ್ಮನ ತಾಕತ್ತು ದೊಡ್ಡದು. ದೊಡ್ಡ ಮನಸ್ಸಿನ ಅಮ್ಮ ಸದಾ
ಚಟುವಟಿಕೆಯಿಂದ ಇದ್ದರು. ಸುಮಾರು ನಲವತ್ತು ವರುಷಗಳಿಂದ ಅಸ್ತಮಾ ಎಂಬ ಭಯಂಕರ ಕಾಯಿಲೆ ವಿರುದ್ಧ ಸೆಣಸಾಡುತ್ತಲೇ
ಕಳೆದ ಅಕ್ಟೋಬರಿನಲ್ಲಿ ತೀರಿಕೊಂಡರು.
ಸಾಯುವ ಮುನ್ನ ಸುಮಾರು ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದರು.
ಮನೆಯಲ್ಲಿ ಸಾಯುತ್ತೇನೆ, ಊರಿಗೆ ಕರೆದುಕೊಂಡು ಹೋಗು ಎಂದು ಗೋಗರೆದರೂ, ವೈದ್ಯರ ಸಲಹೆಯಂತೆ, ಆಸ್ಪತ್ರೆಯ
ಆರೈಕೆಯಲ್ಲಿ ಬದುಕಬಹುದೆಂಬ ನನ್ನ ಆಸೆಯಿಂದ ಹೆಣವಾಗಿ ಊರು ಸೇರಿದರು. ಕೊನೆಯ ಆಸೆ ಈಡೇರಿಸದ
‘ನನ್ನನ್ನು ಕ್ಷಮಿಸಿಬಿಡು ಅಮ್ಮಾ’ ಎಂದು ಕೇಳಿಕೊಳ್ಳುವುದಷ್ಟೇ ಉಳಿದಿರುವ ಮಾರ್ಗ.