ಹೆಜ್ಜೆ ಗೆಜ್ಜೆ :
ಈ ಬ್ಲಾಗ್ ನಲ್ಲಿರುವ ವಿಷಯ ಮತ್ತು ಚಿತ್ರಗಳ ಬಳಕೆಗೆ ಅನುಮತಿ ಕಡ್ಡಾಯ.
ಮತ್ತೊಂದು ಕ್ಷಣ ನನ್ನ ಬಗ್ಗೆ ಬದುಕು-ಬರಹ

Monday, 25 October 2010

ಗಾಂಧಿಕ್ಲಾಸ್: ಜವಾರಿ ಭಾಷೆ, ರೋಚಕ ಶೈಲಿ ಅದರಾಚೆ ಮತ್ತೇನೋ..!


ಅವ್ಯಾಹತ ಕೊಲೆಗಳು, ಒಂದು ತುತ್ತಿಗೂ  ಪರದಾಡುವ ಬಡವರಿಂದ ತುಂಬಿರುವ ಹಳ್ಳಿಗಳು, ಪ್ರಜಾಪ್ರಭುತ್ವವನ್ನು ಕೈಕಾಲು ಕಟ್ಟಿಹಾಕಿ ಕಾಲಬುಡದ ಸೇವಕನಂತೆ ನಡೆಸಿಕೊಳ್ಳುವ ಜಮೀನ್ದಾರಿ ಧಣಿಗಳು, ಮತ್ತವರ  ದಾರ್ಷ್ಟ್ಯದ  ರುದ್ರ ನರ್ತನ,  ಕಣ್ಣೆದುರಿಗೇ ನಡೆದ ಭೀಕರ, ಬೀಭತ್ಸ  ಪ್ರಪಂಚದ ಕ್ರೌರ್ಯದ ಕೃತ್ಯಗಳು, ಥ್ರಿಲ್ಲರ್ ಮಾದರಿ ನಿರೂಪಣೆ, ಬಹುತೇಕ ಪುಟಗಳ ತುಂಬೆಲ್ಲಾ ರಕ್ತದೋಕುಳಿ, ಒಟ್ಟಿನಲ್ಲಿ  ಈ ಭೂಮಿಯಲ್ಲಿ ಇಂಥ ಊರುಗಳೂ ಇವೆಯೇ ಎಂಬಷ್ಟರ ಮಟ್ಟಿಗಿನ ಊಳಿಗಮಾನ್ಯ ವ್ಯವಸ್ಥೆಯ ಚಿತ್ರಣ. ಇದೇ ಕುಂ.ವಿ ಅವರ ನೂರಾರು ಚಿತ್ರಗಳನ್ನು  ತೆರದಿಡುವ ಆತ್ಮ ಕತೆ  ಗಾಂಧಿ ಕ್ಲಾಸ್.

ಇದನ್ನು ಕಾಂದಂಬರಿ ಎಂದು  ಹೆಸರಾಂತ ವಿಮರ್ಶಕ ಸಿ.ಎನ್. ರಾಮಚಂದ್ರನ್ ಹೇಳಿದ್ದಾರೆ. ಅವರು ಹಾಗೆ ಯಾಕೆ ಹೇಳಿದರೋ ಗೊತ್ತಿಲ್ಲ. ಆದರೆ ಈ ಕಥಾನಕದ ಉದ್ದಕ್ಕೂ ಬರುವ ಫಿಕ್ಷನ್ ಮಾದರಿಯ ರೋಚಕ  ಘಟನಾವಳಿಗಳನ್ನು ಗಮನದಲ್ಲಿಟ್ಟುಕೊಂಡು ಅವರು ಹಾಗೆ ಹೇಳಿರಬಹುದೇನೋ. ಒಟ್ಟಾರೆ ಆತ್ಮಚರಿತ್ರೆಯನ್ನು ಯಾಕೆ  ಕಾದಂಬರಿಗೆ ಹೋಲಿಸಿದರೆಂಬುದಕ್ಕೆ ಉಳಿದ ಕಾರಣಗಳನ್ನು ಅವರೇ ಹೇಳಬೇಕು. ಅದನ್ನು ಹೋಲಿಸುವುದೇ ಸರಿಯಲ್ಲವೇನೋ ಅನಿಸುತ್ತದೆ. ಏಕೆಂದರೆ ಅತ್ಮಕಥೆಯಲ್ಲಿ ಫಿಕ್ಷನ್‌ಗೆ ಜಾಗವೆಲ್ಲಿದೆ ?

ಕುಂ.ವಿ ಅವರ ಬಾಲ್ಯವಂತೂ  ಅನೇಕ ಹಳ್ಳಿ ಮಕ್ಕಳ ಹಿನ್ನೆಲೆಗಿಂತ ಭಿನ್ನವಾಗೇನೂ ಇಲ್ಲ. ಆದ್ದರಿಂದಲೇ ಅದು ತುಂಬಾ ಆಪ್ತವಾಗುತ್ತದೆ. ಅರೆರೆ  ಇದು ನಮ್ಮದೇ ಕಥೆಯಲ್ಲವೇ  ಅನಿಸುತ್ತದೆ. ಕುಂ.ವಿ  ಅವರು ಕೆಲಸ ಮಾಡಿದ ವಾಗಿಲಿ, ಗೂಳ್ಯಂಗಳೇ ಈ ಕಥಾನಕದ ಬಹುಭಾಗವನ್ನು ಆವರಿಸಿವೆ. ಅವರು ಕೊನೆಗೆ ಕೆಲಸ ಮಾಡಿ ಹೀರೇಹಾಳು ಅಷ್ಟಾಗಿ ಬಂದಿಲ್ಲ. ಹಾಗೆಂದು ಇದು ಕೊರತೆ ಅಂತ ಅಲ್ಲ. ಕುಂ.ವಿ ಅವರ ಕೊಟ್ಟೂರು ಎಲ್ಲ ಅರ್ಥಗಳಲ್ಲೂ ಸಹಜವಾಗಿಯೇ  ಕಥಾನಕದ ಅವಿಭಾಜ್ಯ ಅಂಗವಾಗಿ ವಿಜೃಂಭಿಸಿದೆ.  ಅಲ್ಲಲ್ಲಿ ಬರುವ ಕನ್ನಡ ಸಾಂಸ್ಕೃತಿಕ ಲೋಕದ ಜನರೊಂದಿಗೆ ಬೆಸೆದುಕೊಂಡಿರುವ ಘಟನೆಗಳು ತುಂಬಾ ಮುಕ್ತವಾಗಿ ಬಂದಿವೆ. ಹಾಗೆಯೇ ತಮ್ಮ ಹುಂಬತನ, ಮುಗ್ಧತೆಯನ್ನು ಮುಚ್ಚುಮರೆಯಿಲ್ಲದೆ  ಕುಂ.ವಿ ದಾಖಲಿಸುತ್ತಾರೆ.

ಇಷ್ಟು ದೊಡ್ಡ ಲೇಖಕನ ಜೀವನದಲ್ಲಿ ಸಾಂಸ್ಕೃತಿಕವಾಗಿ ಇಷ್ಟೇ ಘಟನೆಗಳೇ ಇರುವುದು ಎಂಬಷ್ಟರ ಮಟ್ಟಿಗೆ ಸಾಹಿತ್ಯಿಕ ವಿಚಾರಗಳು ಬಂದು ಹೋಗುತ್ತವೆ. ಇದು ಅನಗತ್ಯವಾಗಿ ಏಕೆ ಮೈಮೇಲೆ ಎಳೆದುಕೊಳ್ಳುವುದು ಎಂಬ ಎಚ್ಚರವೋ ಅಥವಾ ಘಟನೆಗಳನ್ನು ಮರೆಯುವ ಉದಾತ್ತತೆಯೋ ಅಥವಾ ಅವು ದಾಖಲೆಗೆ ಅರ್ಹವಲ್ಲವೆಂಬ ತೀರ್ಮಾನವೋ ಅಥವಾ ಅವರೇ ಕೆಲವು ಕಡೆ ದಾಖಲಿಸಿದಂತೆ ಅವರು ತಮ್ಮ ವೃತ್ತಿಯ ಬಹು ಭಾಗವನ್ನು ಹೊರಗಡೆ ಕಳೆದಿದ್ದರಿಂದಲೋ ಇರಬಹುದು.

ಆದರೆ ಅವರ ಸಿನಿಮಾ ಯಾನ ಮಜವಾಗಿಯೂ, ಯಾತನಾದಾಯಕವಾಗಿಯೂ ಇದೆ. ಸಿನಿಮಾಲೋಕದ ವಿವರಗಳನ್ನು ಹೇಳುವಾಗ ಅನೇಕ ಸೂಕ್ಷ್ಮ ವಿಷಯಗಳು ಬಂದು ಹೋಗುತ್ತವೆ. ಸಿನಿಮಾ ಎಂಬ ಮಾಯಾಮೃಗದ ಬೆನ್ನು ಹತ್ತಿದ್ದರಿಂದ ಅವರು ಕಲಿತ ಪಾಠಗಳು, ಚಿತ್ರರಂಗದ ಬಗ್ಗೆ ಇರುವ ಅನೇಕ ಭ್ರಮೆಗಳನ್ನು  ವಾಸ್ತವದ ನೆಲೆಯಲ್ಲಿ ದಾಖಲಿಸಿ ಒಂದು ವರ್ಗದ ಓದುಗರ ಕಣ್ಣನ್ನು ಖಂಡಿತ ತೆರೆಯುವಂತೆ ಮಾಡುತ್ತಾರೆ.

ಇನ್ನು ವಾಗಿಲಿ, ಗೋಳ್ಯಂ ಭಾಗದಲ್ಲಿ ಕುಂವಿ ಅವರು ಕುಖ್ಯಾತ ರೌಡಿಗಳು, ಧಣಿಗಳೂ ಮತ್ತು ಸಣ್ಣ-ಪುಟ್ಟದ್ದಕ್ಕೆಲ್ಲಾ ಕೊಚ್ಚುವ ಪುಡಿ ಹುಂಬರೊಂದಿಗೆ  ಮುಖಾಮುಖಿಯಾಗುವ ಘಟನೆಗಳಂತೂ  ಯಾವುದೇ ಸಿನಿಮಾ ದೃಶ್ಯಗಳಿಗಿಂತ ಕಮ್ಮಿಯಿಲ್ಲ. ಇದಕ್ಕೆ ಇಲ್ಲಿ ಬಹುತೇಕ ಘಟನೆಗಳಲ್ಲಿ ಅವರ ಸ್ವಾನುಭವಿ ಅಥವಾ ಪ್ರೇಕ್ಷಕ ಆಗಿರುವುದೇ ಕಾರಣವಿರಬಹುದು. ಕುಂ.ವಿ ಅವರ ಬರವಣಿಗೆ ಶಕ್ತಿ ಎಂಥದೆಂಬುದನ್ನು ಇದನ್ನು ಓದಿಯೇ ಅನುಭವಿಸಬೇಕು. ದೃಶ್ಯ ಮಾಧ್ಯಮಕ್ಕೆ ಏನೇನೂ ಕಡಿಮೆ ಇಲ್ಲದಂತೆ ನಿರೂಪಿಸುವ ಘಟನೆಗಳಂತೂ ಮೈ ನವಿರೇಳಿಸುತ್ತವೆ. ಕೆಲವು ಕೆಲವು ಕಡೆ ಅವರ ಬರವಣಿಗೆಯ ರೋಚಕ ಮಾದರಿ ಹೇಗಿದೆ  ಎಂದರೆ ಅದೇದನಾದರೂ ದೃಶ್ಯ ಮಾಧ್ಯಮದಲ್ಲಿ ಬಂದರೆ , ಅವು ವಾಚ್ಯವಾಗಿ ಆ ಕಲ್ಪನಾ ದೃಶ್ಯದ ಸೊಗಸೇ ಕಳೆದು ಹೋಗುತ್ತದೇನೋ ಅನಿಸುವಷ್ಟು ತಾಜಾ ಅಗಿವೆ. ಇದು ಕುಂ.ವಿ ಅವರು ಬರೆವ ತಾಖತ್ತು ಮತ್ತು ಬರವಣಿಗೆಗಿರುವ ಅಸಾಧಾರಣ ಸಾಧ್ಯತೆಗಳನ್ನು ತೆರದಿಡುತ್ತದೆ. ಈ ರೀತಿ  ಸಹಜವಾಗಿ, ಚೊಕ್ಕವಾಗಿ, ಚಿಕ್ಕದಾಗಿ ಬರೆಯುವುದನ್ನು ಕುಂ.ವಿ ಅವರನ್ನು ನೋಡಿಯೇ ನಮ್ಮಂಥ ಹೊಸ ಪೀಳಿಗೆ ಕಲಿಯಬೇಕೆನೋ ಎನ್ನುವಂತೆ ಕಥಾನಕ ಹರಿಯುತ್ತದೆ.

  ಆದರೂ ಅಷ್ಟೊಂದು ಬರೆದಿರುವ ಕುಂವಿ  ಅವರಂಥ ದೈತ್ಯ ಪ್ರತಿಭೆ ಈ ಆತ್ಮಕಥೆಯ ಮೊದಲ ನೂರು ಪುಟಗಳಲ್ಲಿ ಬೋರು ಹೋಡೆಸುತ್ತಾರೆ ಎಂಬುದನ್ನು ಅನಿವಾರ್ಯವಾಗಿ ಹೇಳಲೇಬೇಕಿದೆ. ಏಕೆಂದರೆ ಹೆಚ್ಚೂ ಕಡಿಮೆ ಪ್ರತಿ ಪ್ಯಾರಾ ಕೊನೆಯಾಗುವುದು ಎರಡೆರಡು ನೆಗೆಟಿವ್ ಪದಗಳನ್ನು ಸೇರಿಸಿ ಮಾಡುವ ಸಕಾರಾತ್ಮಕ ವಾಕ್ಯವನ್ನು ಕಟ್ಟುವುದರಿಂದ ಹಾಗಾಗುತ್ತದೆ. ಉದಾಹರಣೆಗೆ: ಅವರು  ಇದೆ  ಎಂದು ಬರೆಯಬೇಕಾದ ಕಡೆ  ಇಲ್ಲದಿಲ್ಲ ಎಂದೇ ಬಳಸುತ್ತಾರೆ. ಸಿಟ್ಟು ಬಂತು ಎಂಬುದನ್ನು ಸಿಟ್ಟು ಬರದೆ ಇರಲಿಲ್ಲ, ಹಲ್ಲು ಮಸೆದೆ ಎಂಬುದನ್ನು ಹಲ್ಲು ಮಸೆಯದೆ ಇರಲಿಲ್ಲ ಎಂದೇ ಬರೆಯುತ್ತಾರೆ. ಇದು ಕಥಾನಕದ ಉದ್ದಕ್ಕೂ ಬಂದೇ ಬರುತ್ತಾದಾದರೂ  ಮೊದಲ ಸುಮಾರು ನೂರು ಪುಟದಲ್ಲಂತೂ ಬಹುತೇಕ ಪ್ಯಾರಾಗಳು ಕೊನೆಯಾಗುವುದು ಈ ರೀತಿಯ ಪದಗಳಿಂದಲೇ. ಇದು ಬೇಜಾರು ತರಿಸುತ್ತದೆ.   ಎಂದಿನಂತೆ ಇಂಥ ಬೃಹತ್ ಕಥಾನಕವನ್ನು ಬರೆಯುವಾಗ ಎದುರಾಗುವ ಅನೇಕ ಘಟನೆಗಳ ಅನುಕ್ರಮಣಿ ಸಾಧ್ಯವಾಗದ ಸವಾಲು ಇಲ್ಲೂ ಎದ್ದು ಕಾಣುತ್ತದೆ. ಇದನ್ನು ಲೇಖಕರು ಮೊದಲೇ ಸ್ಪಷ್ಟಪಡಿಸಿರುವರಾದರೂ ಹತ್ತಾರು ಕೊಲೆಗಳು, ದೌರ್ಜನ್ಯಗಳು, ಘರ್ಷಣೆಗಳನ್ನು ಓದುವಾಗ ಗೊಂದಲವಾಗುತ್ತದೆ. ಆ ಘಟನೆಗಳನ್ನು ಮತ್ತೆ ಮತ್ತೆ  ಓದಿ ಸ್ಪಷ್ಟಪಡಿಸಿಕೊಳ್ಳಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸುತ್ತದೆ. ಇದೇನೂ ದೊಡ್ಡ ಕೊರತೆಯಲ್ಲದಿದ್ದರೂ  ಸರಾಗ ಓದಿಗೆ ಅಡ್ಡ ಬಂದರೂ ಅವುಗಳ ರೋಚಕತೆಯಿಂದ ಎಲ್ಲವನ್ನೂ ಆಸ್ವಾದಿಸುವಂತೆ ಮಾಡುತ್ತವೆ.

ತಮ್ಮ ಆತ್ಮಕತೆ ತೊಂಭತ್ತೈದು ಪರ್ಸೆಂಟ್ ನಿಜವೆಂದು ಕುಂ.ವಿಯವರೇ ಘೋಷಿಸಿರುವುದರಿಂದ ಆ ಕಾಲದ ಕರಾಳ ಘಟನೆಗಳನ್ನು ಅನುಮಾನಿಸುವ ಪ್ರಶ್ನೆ ಬರುವುದಿಲ್ಲವಾದರೂ ಸಾಮಾನ್ಯವಾಗಿ ಆತ್ಮಕತೆಯಲ್ಲಿ ಬರಬಹುದಾದ ನವರಸಗಳ ಕೊರೆತೆ ಇದೆ ಎಂದೇ ಹೇಳಬೇಕು. ಒಂದು ಅಪೂರ್ಣ ಪ್ರೇಮ ಸರಣಿ, ಅಷ್ಟೊಂದು ದೌರ್ಜನ್ಯ ಪೀಪಾಸು ಧಣಿಗಳು ಇದ್ದರೂ ಒಬ್ಬನೇ ಒಬ್ಬ ಕಚ್ಚೆ ಹರುಕ ಧಣಿ ಸಿಗುವುದಿಲ್ಲ. ಇದು ನಿಜವಿದ್ದರೂ ಇರಬಹುದು. ಅಥವಾ ಲೇಖಕರೇ ಅವನ್ನು ಕಡೆಗಣಿಸಿರಬಹುದು.

ಕಥಾನಕ ಹೆಚ್ಚು ರೋಚಕತೆ ಕಡೆಗೆ  ಪ್ರಜ್ಞಾಪೂರ್ವಕವಾಗಿಯೇ ಹರಿದಂತಿದೆ ಎಂದು ಮೊದಲ ಓದಿಗೇ ಅನಿಸಿಬಿಡುತ್ತದೆ. ನಮ್ಮ ಟಿವಿಗಳ  ‘ಕ್ರೈಂ’ಗಳಿಂದ ಕುಂ.ವಿ ಅವರು ಪ್ರಭಾವಿತರಾದರೇನೋ ಎಂಬ ಅನುಮಾನ ಬರುವಂತೆ ಹರಿಯುವ ಇದು ಅರ್ಧ ಆತ್ಮ ಕಥೆ, ಉಳಿದರ್ಧ ರಾಯಲಸೀಮೆಯ ಕ್ರೌರ್ಯವನ್ನೇ ಆಯುಧ ಮಾಡಿಕೊಂಡಿದ್ದ ಧಣಿಗಳ ಜವಾರಿ ಕತೆ. ಚಪ್ಪರಿಸಿಕೊಂಡು ಓದಬೇಕಾದ ಅಕ್ಷರ ಲೋಕ ಮತ್ತು ಅವು ಸೃಷ್ಟಿಸುವ ದೃಶ್ಯ ಲೋಕದ ಕಲ್ಪನೆಗಳು ವಿಜೃಂಭಿಸುತ್ತದೆ. ಅಷ್ಟರಮಟ್ಟಿಗೆ ಒಂದು ಅಪರೂಪದ ಯಶಸ್ವಿ ಕೃತಿಯೊಂದರ ದರ್ಶನ ಓದುಗನಿಗೆ ಖಂಡಿತಾ ಆಗುತ್ತದೆ. ಆ ಕಾರಣಕ್ಕೆ ಇದು ಓದಲೇಬೇಕಾದ ಆತ್ಮ ಕತಾನಕ.  ಇಷ್ಟಾಗಿಯೂ  ಗಾಂಧಿಕ್ಲಾಸ್ ಒಂದು ಅಪೂರ್ಣ ಆತ್ಮಕತೆ ಅನಿಸುವುದು ಯಾಕೋ ಗೊತ್ತಿಲ್ಲ.  ಒಂದೆರಡು ಘಟನೆ ಬಿಟ್ಟರೆ ಅವರ ಸಹೋದರ/ಸಹೋದರಿಯರ ನೆನಪುಗಳು ನೆಪಮಾತ್ರಕ್ಕೆ ಬಂದು ಹೋದಂತಿವೆ.